ಶೀರ‍್ಶಾಸನದ ಶಿವ ದೇವಾಲಯ

– .

ಯಾವುದೇ ದೇವಾಲಯಕ್ಕೆ ಹೋದಲ್ಲಿ, ಅಲ್ಲಿನ ದೇವರನ್ನು ಪಾದದ ಮೂಲಕ ಹಂತ ಹಂತವಾಗಿ ನೋಡುತ್ತಾ ಮುಕಾರವಿಂದದ ದರ‍್ಶನ ಪಡೆಯಬೇಕೆಂಬುದು ಒಂದು ಪ್ರತೀತಿ. ಆದರೆ ಇಲ್ಲೊಂದು ದೇವಾಲಯವಿದ್ದು, ಇಲ್ಲಿನ ದೇವರು ಶೀರ‍್ಶಾಸನದ ಬಂಗಿಯಲ್ಲಿದೆ. ಹಾಗಾಗಿ ಈ ಶಿವನ ಮೂರ‍್ತಿಯನ್ನು ಮೇಲಿನಿಂದ ಕೆಳಗೆ ನೋಡಬಹುದು. ಶಿವನು ಲಿಂಗರೂಪದಲ್ಲಿರುವ ದೇವಾಲಯಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ನಟರಾಜನ ಬಂಗಿಯಲ್ಲಿರುವ ಶಿವನ ದೇವಾಲಯಗಳೂ ಸಾಕಶ್ಟಿವೆ. ಆದರೆ, ತಲೆಕೆಳಕಾಗಿ ಶೀರ‍್ಶಾಸನದ ಬಂಗಿಯಲ್ಲಿರುವ ಶಿವನ ಮೂರ‍್ತಿಯ ಅಪರೂಪದ ದೇವಾಲಯ ಇರುವುದು ಇಡೀ ವಿಶ್ವದಲ್ಲಿ ಇದೊಂದೆ. ಈ ದೇವಾಲಯವಿರುವುದು ನೆರೆ ರಾಜ್ಯ ಆಂದ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಬೀಮಾವರಂ ತಾಲೂಕಿನ ಯನಮದುರು ಎಂಬ ಪುಟ್ಟ ಹಳ್ಳಿಯಲ್ಲಿ. ಈ ದೇವಾಲಯದಲ್ಲಿ, ಶಿವನ ತಲೆ ಪಾದವಿರಬೇಕಾದ ಜಾಗದಲ್ಲಿ, ಅಂದರೆ ಕೆಳಬಾಗದಲ್ಲಿದ್ದು, ಆತನ ಪಾದಗಳು ತಲೆ ಇರಬೇಕಾದ ಜಾಗದಲ್ಲಿವೆ. ಅಂದರೆ ಮೇಲ್ಬಾಗದಲ್ಲಿ. ಇಲ್ಲಿನ ಈಶ್ವರನನ್ನು ಶಕ್ತೇಶ್ವರ ಎಂದು ಕರೆಯಲಾಗುತ್ತದೆ. ಶಕ್ತೇಶ್ವರನ ಪಕ್ಕದಲ್ಲಿಯೆ ಪಾರ‍್ವತಿದೇವಿಯ ವಿಗ್ರಹವಿದೆ. ಆಕೆಯ ಮಡಿಲಲ್ಲಿ ಪುಟ್ಟ ಕಂದ ಸುಬ್ರಹ್ಮಣ್ಯನನ್ನು ಸಹ ಕಾಣಬಹುದಾಗಿದೆ. ಶಕ್ತಿಯ ಪ್ರತೀಕವಾದ ಪಾರ‍್ವತಿದೇವಿ ಮತ್ತು ಮಹೇಶ್ವರ ಜೊತೆ ಜೊತೆಯಾಗಿ ಇಲ್ಲಿ ನೆಲೆಸಿರುವುದು ವಿಶೇಶ. ಈ ಕಾರಣಕ್ಕಾಗಿ ಈ ದೇವಾಲಯಕ್ಕೆ ಶಕ್ತೇಶ್ವರ ದೇವಾಲಯ ಎಂಬ ಹೆಸರು ಬಂದಿದೆ.

ಇಲ್ಲಿನ ಸ್ತಳೀಯ ಪ್ರತೀತಿಯಂತೆ ಶಿವ-ಪಾರ‍್ವತಿಯರು ಅನೇಕ ಯುಗಯುಗಾಂತರಗಳಿಂದ ಇಲ್ಲಿ ನೆಲೆಯೂರಿದ್ದಾರೆ ಎನ್ನಲಾಗಿದೆ. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಊರಿಗೆ ಯನಮದುರು ಎಂಬ ಹೆಸರು ಬರಲು ಒಂದು ದಂತಕತೆಯನ್ನು ಸ್ತಳೀಯರು ಹೇಳುತ್ತಾರೆ. ಹಿಂದೆ ಶಂಬೂರಾ ಎಂಬ ರಾಕ್ಶಸ ಶಿವನ ಕುರಿತು ತಪಸ್ಸು ಮಾಡುತ್ತಾನೆ. ಶಿವ ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಶನಾದಾಗ, ಶಂಬೂರಾ ಶಿವನಲ್ಲಿ ವಿಚಿತ್ರವಾದ ವರವನ್ನು ಬೇಡುತ್ತಾನೆ. ತನ್ನ ಸಾವೇನಿದ್ದರೂ ಯಮದರ‍್ಮನಿಂದ ಮಾತ್ರ, ಮತ್ತಾರಿಂದಲೂ ತನಗೆ ಸಾವು ಬರಬಾರದು ಎಂಬ ತನ್ನ ಆಶಯವನ್ನು ಪ್ರಸ್ತಾಪಿಸಿ, ವರ ಪಡೆದುಕೊಳ್ಳುತ್ತಾನೆ. ವರ ದಕ್ಕಿದ ನಂತರ, ಶಂಬೂರಾ ಸಾವನ್ನು ಗೆದ್ದವನಂತಾಗಿ, ಕೊಬ್ಬಿ ಹೋಗಿ, ವಿಚಿತ್ರ ನಡವಳಿಕೆಗಳಿಗೆ ದಾಸನಾಗುತ್ತಾನೆ. ರುಶಿಮುನಿಗಳ ತಪಸ್ಸನ್ನು ಬಂಗಗೊಳಿಸುವುದು, ಅವರುಗಳಿಗೆ ವಿನಾಕಾರಣ ಉಪಟಳ ಕೊಡುತ್ತಾ, ವಿಕ್ರುತ ಆನಂದ ಅನುಬವಿಸುತ್ತಿರುತ್ತಾನೆ. ಈತನ ಉಪಟಳ ಸಹಿಸದಾದಾಗ, ರುಶಿಮುನಿಗಳು ಯಮದರ‍್ಮನಲ್ಲಿ ಈ ರಾಕ್ಶಸನನ್ನು ಕೊಂದು, ಉಪಟಳ ತಪ್ಪಿಸುವಂತೆ ಪ್ರಾರ‍್ತಿಸುತ್ತಾರೆ. ರುಶಿಮುನಿಗಳಿಗೆ ಅಬಯಹಸ್ತ ನೀಡಿದ ಯಮದರ‍್ಮನು, ಶಂಬೂರನ ಮೇಲೆ ಯುದ್ದ ಸಾರುತ್ತಾನೆ. ಅವರಿಬ್ಬರ ನಡುವಿನ ಗೋರ ಯುದ್ದದಲ್ಲಿ, ಯಮದರ‍್ಮ ಸೋಲುಣ್ಣುತ್ತಾನೆ. ಸೋಲಿನಿಂದ ಕಂಗೆಟ್ಟ ಯಮದರ‍್ಮ, ಶಂಬೂರನಿಗೆ ವರ ನೀಡಿದ ಶಿವನ ಸಹಾಯಕ್ಕೆ ಮೊರೆಹೋಗುತ್ತಾನೆ. ಈ ಸಮಯದಲ್ಲಿ ಶಿವ ಕೈಲಾಸದಲ್ಲಿ, ಶೀರ‍್ಶಾಸನದ ಬಂಗಿಯಲ್ಲಿ ದ್ಯಾನಾಸಕ್ತನಾಗಿರುತ್ತಾನೆ. ಯಮದರ‍್ಮನ ಮೊರೆ ದ್ಯಾನಾಸಕ್ತ ಶಿವನಿಗೆ ತಲುಪುವುದಿಲ್ಲ. ಎಶ್ಟು ಹೊತ್ತಾದರೂ ಶಿವ ಸಹಾಯಕ್ಕೆ ದಾವಿಸುವುದಿಲ್ಲ. ವಿಶಯದ ತೀವ್ರತೆಯನ್ನು ಅರಿತ ಪಾರ‍್ವತಿದೇವಿ, ತನ್ನ ಶಕ್ತಿಯಿಂದ ದ್ಯಾನದ ಸ್ತಿತಿಯಲ್ಲಿದ್ದ ಶಿವನನ್ನು, ಅದೇ ಸ್ತಿತಿಯಲ್ಲಿ ತನ್ನ ಜೊತೆಗೆ ಬೂಮಿಗೆ ಕರೆತರುತ್ತಾಳೆ. ಶಂಬೂರನ ಸಂಹಾರಕ್ಕಾಗಿ ಯಮದರ‍್ಮನಿಗೆ ವಿಶೇಶ ಅಸ್ತ್ರವೊಂದನ್ನು ಶಕ್ತಿ ದೇವತೆ ಪಾರ‍್ವತಿದೇವಿ ದಯಪಾಲಿಸುತ್ತಾಳೆ. ಯಮದರ‍್ಮ ಆ ಅಸ್ತ್ರದ ಸಹಾಯದಿಂದ ಶಂಬೂರನನ್ನು ಕೊಲ್ಲುತ್ತಾನೆ. ಶೀರ‍್ಶಾಸನದ ದ್ಯಾನಾಸಕ್ತ ಸ್ತಿತಿಯಲ್ಲಿದ್ದ ಶಿವ ಮತ್ತು ಶಕ್ತಿ ದೇವತೆ ಪಾರ‍್ವತಿದೇವಿ ಸಹ ತನ್ನ ಪುತ್ರ ಸುಬ್ರಹ್ಮಣ್ಯನ ಸಂಗಡ ಅಲ್ಲಿಯೇ ನೆಲೆಸುತ್ತಾರೆ. ಯಮದರ‍್ಮನು ಶಂಬೂರನನ್ನು ಸಂಹರಿಸಿದ ಈ ಸ್ತಳ ಯಮನಾಪುರಿ ಎಂದು ಹೆಸರಾಗುತ್ತದೆ. ಕಾಲಾನಂತರದಲ್ಲಿ ಜನರ ಆಡು ಬಾಶೆಯಲ್ಲಿ ಯನಮದುರು ಎಂದು ಬದಲಾಗಿ ಹೆಸರುವಾಸಿವಾಗಿದೆ.

ಈ ದೇವಾಲಯದ ಹೊರಗೆ ಪವಿತ್ರ ಕಲ್ಯಾಣಿ ಇದೆ. ಪಾರ‍್ವತಿದೇವಿ ಯಮನಿಗೆ ಅಸ್ತ್ರವನ್ನು ನೀಡಿದ ಈ ಸ್ತಳದಲ್ಲಿ ಪವಿತ್ರ ಕಲ್ಯಾಣಿ ಉದ್ಬವವಾಗಿದೆ ಎಂದು ಬಕ್ತರು ನಂಬಿದ್ದಾರೆ. ಈ ಕಲ್ಯಾಣಿಯು ದೇವಸ್ತಾನದ ಹೊರಗಿದ್ದು, ದೇವರ ಪೂಜೆಯ ಸಮಯದಲ್ಲಿನ ಅಬಿಶೇಕಕ್ಕೆ ಹಾಗೂ ಪ್ರಸಾದ ತಯಾರಿಕೆಗೆ ಈ ಕಲ್ಯಾಣಿಯ ನೀರನ್ನೇ ಬಳಸಲಾಗುತ್ತದೆ. ಮಹಾಕವಿ ಕಾಳಿದಾಸನು ಸಹ ಈ ದೇವಾಲಯಕ್ಕೆ ಬೇಟಿ ನೀಡಿ, ಶಿವಶಕ್ತಿಯನ್ನು ಆರಾದಿಸಿದ್ದನು ಎಂದು ಹೇಳಲಾಗುತ್ತದೆ. ಶಿತಿಲಗೊಂಡಿದ್ದ ಈ ದೇವಾಲಯವನ್ನು ಕೆಲ ವರ‍್ಶಗಳ ಹಿಂದೆಶ್ಟೇ ಪುನರುಜ್ಜೀವನಗೊಳಿಸಲಾಗಿದೆ. ಈ ದೇವಾಲಯದಲ್ಲಿರುವ ವಿಗ್ರಹಗಳು ನೂರಾರು ವರ‍್ಶಗಳ ಹಿಂದೆ ಕೈಗೊಂಡ ಉತ್ಕನನದ ಸಮಯದಲ್ಲಿ ದೊರಕಿದ್ದು ಎಂದು ಸ್ತಳೀಯ ಹಿರಿಯರು ಹೇಳುತ್ತಾರೆ. ಈ ದೇವಾಲಯದಲ್ಲಿ ಶಿವನನ್ನು ಪೂಜಿಸುವುದರಿಂದ ದೀರ‍್ಗಕಾಲದ ಕಾಯಿಲೆಗಳು ನಿವಾರಣೆಯಾಗುತ್ತವೆ ಎಂದು ಬಕ್ತರು ನಂಬುತ್ತಾರೆ. ಈ ದೇವಾಲಯ, ಬೀಮಾವರಂನಿಂದ ಏಳು ಕಿ.ಮೀ ದೂರದಲ್ಲಿದೆ. ಇಲ್ಲಿಗೆ ತಲುಪಲು ರೈಲು ಮತ್ತು ರಸ್ತೆ ಮಾರ‍್ಗಗಳಿವೆ. ಬೀಮಾವರಂನಿಂದ ಬಸ್ಸಿನ ಮೂಲಕ ಸಹ ಇಲ್ಲಿಗೆ ಬರಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: in.worldorgs.com, pipanews.com, infokhabars.com, pilgrimaide.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: