ಮರೆತು ಹೋಗಿರುವ ಕ್ರಿಕೆಟ್ ನ ಅದ್ಯಾಯಗಳು – 3
ರೊಚ್ಚಿಗೆದ್ದು ಗಲಾಟೆ ಎಬ್ಬಿಸಿದ್ದ ಕರ್ನಾಟಕದ ಅಬಿಮಾನಿಗಳು
ಬಾರತದ ದೇಸೀ ಕ್ರಿಕೆಟ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕರ್ನಾಟಕ ಮತ್ತು ಬಾಂಬೆ ದಿಗ್ಗಜರನ್ನೊಳಗೊಂಡ ತಂಡಗಳೊಂದಿಗೆ 1981/82 ರ ಸಾಲಿನ ರಣಜಿ ಟೂರ್ನಿಯ ಸೆಮಿಪೈನಲ್ ಪಂದ್ಯಕ್ಕೆ ಬೆಂಗಳೂರಿನಲ್ಲಿ ಕಣಕ್ಕಿಳಿದಿದ್ದವು. ಮೊದಲು ಬ್ಯಾಟ್ ಮಾಡಿದ ಬಾಂಬೆಯ 271 ರನ್ ಗಳನ್ನು ಬೆನ್ನತ್ತಿ ಹೊರಟ ಕರ್ನಾಟಕ ಒಳ್ಳೆ ಆರಂಬದ ಬಳಿಕ ಕೊಂಚ ಹೊತ್ತಲ್ಲೇ ಎರಡು ವಿಕೆಟ್ ಗಳನ್ನು ಕಳೆದುಕೊಂಡಾಗ ತವರು ತಂಡದ ನಾಯಕ ಗುಂಡಪ್ಪ ವಿಶ್ವನಾತ್ ಬ್ಯಾಟ್ ಮಾಡಲು ಬರುತ್ತಾರೆ. ಒಳ್ಳೆ ಲಯದಲ್ಲಿದ್ದ ಅವರು ನೋಡನೋಡುತ್ತಿದ್ದಂತೆಯೇ ಸರಾಗವಾಗಿ 37 ರನ್ ತಲುಪುತ್ತಾರೆ. ಆಗ ಮೈಗೆ ಸಮೀಪವಿದ್ದ ಒಂದು ಚೆಂಡನ್ನು ಕಟ್ ಮಾಡಲು ಹೋಗಿ ತಪ್ಪುತ್ತಾರೆ. ಆಗ ಬಂಗಾಳದ ಅಂಪೈರ್ ಜಿಬಾನ್ ಅವರು ವಿಶ್ವನಾತ್ ರನ್ನು ಕ್ಯಾಚ್ ಔಟ್ ಎಂದು ಗೋಶಿಸಿದಾಗ ನಾಯಕ ವಿಶಿ ಕ್ಶಣ ಕಾಲ ಅವಾಕ್ಕಾಗುತ್ತಾರೆ. ತಾವು ಔಟ್ ಎಂದು ತಿಳಿದರೆ ಸಾಕು ಅಂಪೈರ್ ತೀರ್ಪು ಕೊಡುವುದಕ್ಕೂ ಮುನ್ನ ಹೊರನಡೆಯುವ ರೂಡಿ ಹೊಂದಿದ್ದ ವಿಶಿರ ಪ್ರತಿಕ್ರಿಯೆಯನ್ನು ಕಂಡ ತವರಿನ ಅಬಿಮಾನಿಗಳು ಅಂಪೈರ್ ನೀಟಿದ್ದು ತಪ್ಪು ತೀರ್ಮಾನ ಎಂಬ ಗುಮಾನಿಯಿಂದ ರೊಚ್ಚಿಗೇಳುತ್ತಾರೆ. ಒಡನೆ ನೂರಾರು ಮಂದಿ ಒಟ್ಟಿಗೆ ಬಿಯರ್ ಬಾಟಲ್ ಗಳೊಂದಿಗೆ ಕಣಕ್ಕಿಳಿದು ಅಂಪೈರ್ ರನ್ನು ತಳಿಸುತ್ತಾರೆ. ಆ ವೇಳೆ ಬಾಂಬೆಯ ನಾಯಕ ಗಾವಸ್ಕರ್ ರನ್ನು ಕೂಡ ಉದ್ದೇಶಿಸಿ, “ನಿಮ್ಮ ಬಾವ ವಿಶಿ ಎಂತವರು ಎಂದು ಒಂದೇ ಕುಟುಂಬದವರಾದ ನಿಮಗೆ ಗೊತ್ತಿಲ್ಲವೇ? ಅವರು ನಾಟ್ ಔಟ್ ಎಂದು ಗೊತ್ತಿದ್ದರೂ ಅವರನ್ನು ವಾಪಸ್ ಕರೆಯದೆ ಕ್ರೀಡಾ ಸ್ಪೂರ್ತಿಗೆ ಚ್ಯುತಿ ತಂದಿದ್ದೀರಿ” ಎಂದು ಕರ್ನಾಟಕದ ಅಬಿಮಾನಿಗಳು ತಮ್ಮ ಅಸಮಾದಾನವನ್ನು ಹೊರಹಾಕುತ್ತಾರೆ. ಕನ್ನಡಿಗರ ಕಣ್ಮಣಿಯಾಗಿದ್ದ ವಿಶ್ವನಾತ್ ರಿಗಾದ ಅನ್ಯಾಯವನ್ನು ಸರಿಪಡಿಸಲೇಬೇಕೆಂದು ಅಂಗಳದಲ್ಲೇ ತಮ್ಮ ಪ್ರತಿಬಟನೆಯನ್ನು ಅಬಿಮಾನಿಗಳು ಮುಂದುವರೆಸುತ್ತಾರೆ. ಈ ದಾಂದಲೆಯನ್ನು ಹತ್ತಿಕ್ಕಲಾಗದೆ ಆ ದಿನದ ಆಟವನ್ನು ಸ್ತಗಿತಗೊಳಿಸಿ ಮಾರನೇ ದಿನ ಹೆಚ್ಚು ಪೊಲೀಸ್ ಬಿಗಿಬದ್ರತೆಯಿಂದ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಆ ದಿನ ಕೆ.ಎಸ್.ಸಿ.ಎ ಅಂಗಳದಲ್ಲಿ ಅಬಿಮಾನಿಗಳಿಗಿಂತ ಪೊಲೀಸ್ ಪಡೆಯೇ ಹೆಚ್ಚಿನ ಪ್ರಮಾಣದಲ್ಲಿ ನೆರೆದಿತ್ತು ಎಂದು ವರದಿಯಾಗಿದೆ. ಅದಲ್ಲದೆ ಎರಡನೇ ಇನ್ನಿಂಗ್ಸ್ ನಲ್ಲಿ ರಗುರಾಮ್ ಬಟ್ ರ ಸ್ಪಿನ್ ಎದುರಿಸಲು ಗಾವಸ್ಕರ್ ಎಡಗೈ ಬ್ಯಾಟಿಂಗ್ ಮಾಡಿದ ವಿಲಕ್ಶಣ ಪ್ರಕರಣಕ್ಕೆ ಕೂಡ ಈ ಪಂದ್ಯ ಸಾಕ್ಶಿಯಾಗಿತ್ತು. ಮೊದಲ ಇನ್ನಿಂಗ್ಸ್ ಮುನ್ನಡೆಯಿಂದ ಕರ್ನಾಟಕ ಪಂದ್ಯ ಗೆದ್ದು ಪೈನಲ್ ಗೆ ಲಗ್ಗೆ ಇಟ್ಟರೂ ದೆಹಲಿ ಎದುರು ಸೋಲುಣ್ಣುತ್ತದೆ. ಇಂದು ಈ ಪ್ರಕರಣವನ್ನು ನೆನೆದಾಗ ಆಟದಲ್ಲಿ ಇಂತಹ ಅವಗಡಗಳು ನಡೆಯಕೂಡದು ಎಂದೆನಿಸಿದರೂ, ಅದರ ಜೊತೆಗೇ ರಣಜಿ ಪಂದ್ಯಗಳಿಗೆ ಆ ಬಗೆಗಿನ ಪ್ರಾಮುಕ್ಯತೆ ಇತ್ತಲ್ಲ ಎಂದು ಕೊಂಚ ಹಿಗ್ಗು ಕೂಡ ಉಂಟಾಗದೇ ಇರದು!
ಕಪಿಲ್ ದೇವ್ ಡ್ರಾಪ್!
ತಮ್ಮ ಹದಿನಾರು ವರ್ಶಗಳ ಸುದೀರ್ಗ ವ್ರುತ್ತಿ ಬದುಕಿನಲ್ಲಿ 131 ಟೆಸ್ಟ್ ಗಳನ್ನಾಡಿರುವ ಬಾರತದ ದಿಗ್ಗಜ ಆಲ್ ರೌಂಡರ್ ಕಪಿಲ್ ದೇವ್ ಎಂದೂ ಗಾಯಾಳುವಾಗಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಳ್ಳದಿದ್ದರೂ ನಾಯಕ ಗಾವಸ್ಕರ್ ರ ಸಿಟ್ಟಿಗೆ ಬಲಿಯಾಗಿ ಅವರು ಒಂದು ಟೆಸ್ಟ್ ನಿಂದ ಹೊರಗುಳಿದಿದ್ದು ಈಗ ಇತಿಹಾಸ. ಇಂಗ್ಲೆಂಡ್ ಎದುರು 1984/85 ರ ಸರಣಿಯ ಎರಡನೇ ದೆಹಲಿ ಟೆಸ್ಟ್ ನಲ್ಲಿ 111 ರನ್ ಗಳ ಹಿನ್ನಡೆ ಅನುಬವಿಸಿದ್ದ ಆತಿತೇಯ ಬಾರತ ಸಂಕಶ್ಟಕ್ಕೆ ಸಿಲುಕಿರುತ್ತದೆ. ಮೊದಲ ಬಾಂಬೆ ಟೆಸ್ಟ್ ಗೆದ್ದು ಸರಣಿಯಲ್ಲಿ ಮುನ್ನಡೆ ಸಾದಿಸಿದ್ದರಿಂದ ತಾಳ್ಮೆಯಿಂದ ಬ್ಯಾಟ್ ಮಾಡಿ ದೆಹಲಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು ಎಂಬುದು ಆಟಗಾರರಿಗೆ ನಾಯಕ ಗಾವಾಸ್ಕಾರ್ ರವರ ಸಂದೇಶವಾಗಿರುತ್ತದೆ. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಗಾವಸ್ಕರ್ ರ 65 ರನ್ ಗಳ ಬಳಿಕ ತಂಡದ ಬ್ಯಾಟಿಂಗ್ ಹಳಿ ತಪ್ಪಿ 235 ರನ್ ಗಳಿಗೆ ಕುಸಿದು ಬಾರತ 8 ವಿಕೆಟ್ ಗಳ ಹೀನಾಯ ಸೋಲು ಕಾಣುತ್ತದೆ. ಈ ಪಂದ್ಯದಲ್ಲಿ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ಗೆಲುವಿಗೆ ಅವಕಾಶವಿಲ್ಲದಿದ್ದರೂ ದೊಡ್ಡ ಹೊಡೆತಗಳಿಗೆ ಮುಂದಾಗಿ, ಒಂದು ಸಿಕ್ಸರ್ ಬಾರಿಸಿ ಮತ್ತೊಂದು ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ 6 ಬಾಲ್ ಗಳಲ್ಲಿ 7 ರನ್ ಗಳಿಸಿ ಔಟ್ ಆದದ್ದು ಗಾವಸ್ಕರ್ ರನ್ನು ಕೆರಳಿಸುತ್ತದೆ. ಅನುಬವಿ ಆಟಗಾರನ ಈ ಬೇಜವಾಬ್ದಾರಿತನದ ಆಟ ಅವರಿಂದ ಸಹಿಸಲಾಗುವುದಿಲ್ಲ. ಹಾಗಾಗಿ ಕಪಿಲ್ ರಿಗೆ ಪಾಟ ಕಲಿಸುವ ಉದ್ದೇಶದಿಂದ ಮೂರನೇ ಕೋಲ್ಕತಾ ಟೆಸ್ಟ್ ಗೆ ನಾಯಕ ಗಾವಸ್ಕರ್ ಅವರನ್ನು ಕೈಬಿಡುತ್ತಾರೆ. ಇದು ಕ್ರಿಕೆಟ್ ವಲಯದಲ್ಲಿ ಸಂಚಲನವನ್ನೇ ಹುಟ್ಟುಹಾಕುತ್ತದೆ. ತಂಡದ ಬೆನ್ನೆಲುಬನ್ನೇ ಕಡೆಗಣಿಸಿದರೆ ಹೇಗೆ ಎಂದು ವಿಮರ್ಶಕರು ಗಾವಸ್ಕರ್ ರನ್ನು ಟೀಕಿಸುತ್ತಾರೆ. ಬಳಿಕ ಕಪಿಲ್ ರಿಗೆ ವಿಶ್ರಾಂತಿ ನೀಡಲಾಗಿದೆ ಎಂದೆಲ್ಲಾ ತಂಡದ ಮ್ಯಾನೇಜರ್ ತೇಪೆ ಹಚ್ಚಲು ಪ್ರಯತ್ನಿಸಿದರೂ ಕಣ್ಣಿಗೆ ರಾಚುವಂತೆ ಮೇಲ್ನೋಟಕ್ಕೇ ದಿಟ ಕಂಡದ್ದರಿಂದ ಅವರೂ ಕಡೆಗೆ ಅಸಲು ವಿಶಯ ಒಪ್ಪಿಕೊಳ್ಳಲೇಬೇಕಾಗುತ್ತದೆ. ಇದು ಕಪಿಲ್ ರಿಗಾದ ಅವಮಾನ, ಗಾವಸ್ಕರ್ ಸ್ವಾರ್ತಿ ಎಂದೆಲ್ಲಾ ಆಗ ಪತ್ರಿಕೆಗಳು ಬಣ್ಣಿಸಿ ಈ ಪ್ರಕರಣಕ್ಕೆ ಹೆಚ್ಚು ತಿರುವು ನೀಡಿದರೂ 1987 ರ ವಿಶ್ವಕಪ್ ಒಳಗೆ ದಿಗ್ಗಜರಿಬ್ಬರೂ ಒಂದು ಮಟ್ಟಿಗೆ ರಾಜಿಯಾಗಿ ಬಾರತದ ಪರ ಆಡಿದ್ದು ನಲಿವಿನ ಸಂಗತಿಯಾಗಿತ್ತು.
ಈಡನ್ ಗಾರ್ಡನ್ಸ್ ನಲ್ಲಿ ಇನ್ನು ಆಡಲೊಲ್ಲೆ ಎಂದಿದ್ದ ಗಾವಸ್ಕರ್
1984/85 ರಲ್ಲಿ 1-1 ರ ಸರಣಿ ಸಮಬಲ ಸಾದಿಸಿದ ಇಂಗ್ಲೆಂಡ್ ಎದುರು ಮೂರನೇ ಟೆಸ್ಟ್ ಗೆ ಕೊಲ್ಕತಾ ಅಣಿಯಾಗಿರುತ್ತದೆ. ಕಪಿಲ್ ರನ್ನು ಕೈಬಿಟ್ಟ ಮುಂದಾಳು ಗಾವಸ್ಕರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು 13 ರನ್ ಗಳಿಗೆ ಔಟ್ ಆಗಿ ಹೊರನಡೆಯುತ್ತಾರೆ. ಆ ಬಳಿಕ ಆಮೆಗತಿಯಲ್ಲಿ ಸಾಗಿದ ಇನ್ನಿಂಗ್ಸ್ ಶಾಸ್ತ್ರಿ ಹಾಗೂ ಅಜರುದ್ದೀನ್ ರ ಶತಕಗಳಿಂದಲೂ ಕಳೆಗಟ್ಟುವುದಿಲ್ಲ. ನಾಲ್ಕನೇ ದಿನದ ಊಟದ ವಿರಾಮದ ನಂತರವೂ ರಕ್ಶಣಾತ್ಮಕವಾಗಿ ಬ್ಯಾಟಿಂಗ್ ಮುಂದುವರೆಸಿದ ಬಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಬಗೆಗೆ ಯಾವುದೇ ಸುಳಿವು ನೀಡುವುದಿಲ್ಲ. ತೀವ್ರತೆಯಿಂದ ಕೂಡಿದ ಒಳ್ಳೆ ಪೈಪೋಟಿಯ ಆಟವನ್ನು ನೋಡಲು ಬಂದಿದ್ದ ಅಬಿಮಾನಿಗಳಿಗೆ ಈ ಸಪ್ಪೆ ಆಟ ಸಹಜವಾಗಿಯೇ ಬೇಸರ ಹಾಗೂ ಸಿಟ್ಟು ತರಿಸುತ್ತದೆ. ಆ ವೇಳೆ ಗಾವಸ್ಕರ್ ಒಮ್ಮೆ ಡ್ರೆಸ್ಸಿಂಗ್ ಕೋಣೆಯಿಂದ ಹೊರಬಂದಾಗ, “ನೋ ಕಪಿಲ್, ನೋ ಟೆಸ್ಟ್; ಗಾವಸ್ಕರ್ ಔಟ್, ಗಾವಸ್ಕರ್ ಔಟ್” ಎಂದು ಈಡನ್ ಗಾರ್ಡನ್ಸ್ ನಲ್ಲಿ ನೆರೆದಿದ್ದ ಕೊಲ್ಕತಾದ ಅಬಿಮಾನಿಗಳು ತಮ್ಮ ಆಕ್ರೋಶವನ್ನು ಒಕ್ಕೊರಲಿನಿಂದ ಹೊರಹಾಕುತ್ತಾರೆ. ಕಡೆಗೆ ಪಂದ್ಯದ ಸತ್ವವನ್ನೆಲ್ಲಾ ಹಿಂಗಿಸಿ 200 ಓವರ್ ಗಳಲ್ಲಿ 437 ರನ್ ತಲುಪಿದ ಬಳಿಕ ಗಾವಸ್ಕರ್ ಡಿಕ್ಲೇರ್ ಮಾಡಿ ಬೌಲಿಂಗ್ ಗೆ ಸಜ್ಜಾಗುತ್ತಾರೆ. ತಂಡದೊಂದಿಗೆ ಗಾವಸ್ಕರ್ ಅಂಗಳದಲ್ಲಿ ಕಾಲಿಡುತ್ತಿದ್ದಂತೆಯೇ ಪಂದ್ಯದ ಪರಿಸ್ತಿತಿಯಿಂದ ರೊಚ್ಚಿಗೆದ್ದಿದ್ದ ಅಬಿಮಾನಿಗಳು ಕಲ್ಲುಗಳು ಮತ್ತು ಹಣ್ಣುಗಳನ್ನು ಅವರತ್ತ ಎಸೆಯುತ್ತಾರೆ. ಕೂಡಲೇ ಪೊಲೀಸ್ ಪರಿಸ್ತಿತಿಯ ಗಂಬೀರತೆಯನ್ನರಿತು ಕಣಕ್ಕಿಳಿದು ವಾತಾವರಣವನ್ನು ತಿಳಿಮಾಡುತ್ತಾರೆ. ಪಂದ್ಯ ಮತ್ತೆ ಮೊದಲಾಗಿ ನಿರೀಕ್ಶೆಯಂತೆ ಡ್ರಾನಲ್ಲಿ ಕೊನೆಗೊಳ್ಳುತ್ತದೆ. ಇದು ಸಾಲದು ಎಂಬಂತೆ ಗಾಯದ ಮೇಲೆ ಬರೆ ಎಳೆದಂತೆ ಇಂಗ್ಲೆಂಡ್ ನಾಯಕ ಡೇವಿಡ್ ಗವರ್ ಪಂದ್ಯದ ಬಳಿಕ ಗಾವಸ್ಕರ್ ರ ತಂತ್ರಗಳನ್ನು ವ್ಯಂಗವಾಗಿ ಕೊಂಡಾಡಿ, ಆತಿತೇಯ ತಂಡವೇ ಪಂದ್ಯ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದು ನಮ್ಮ ತಂಡದ ಬಲಕ್ಕೆ ಹಿಡಿದ ಕನ್ನಡಿ ಎಂದು ಕಿಚಾಯಿಸುತ್ತಾರೆ. ಐದು ದಿನಗಳ ಈ ಎಲ್ಲಾ ಆಗುಹೋಗುಗಳೊಂದಿಗೆ ಕೋಲ್ಕತಾ ಮಂದಿಯ ಕೆಟ್ಟ ವರ್ತನೆ ಹಾಗೂ ತಮಗಾದ ಅವಮಾನದಿಂದ ಬೇಸತ್ತಿದ್ದ ಗಾವಸ್ಕರ್ ಇನ್ನೆಂದೂ ಈ ಊರಿನ ಈಡನ್ ಗಾರ್ಡೆನ್ಸ್ ಅಂಗಳದಲ್ಲಿ ಆಡೆನು ಎಂದು ಶಪತ ಮಾಡುತ್ತಾರೆ! ಈ ಮಾತಿನಂತೆ ನಡೆದುಕೊಂಡ ಅವರು 1987ರ ಪಾಕಿಸ್ತಾನದ ಎದುರಿನ ಟೆಸ್ಟ್ ಸರಣಿಯಲ್ಲಿ ಕೋಲ್ಕತಾದಲ್ಲಿ ನಡೆದ ಎರಡನೇ ಟೆಸ್ಟ್ ನಿಂದ ತಾವಾಗಿಯೇ ಹೊರಗುಳಿದು ತಮ್ಮ ಹಟ ಸಾದಿಸುತ್ತಾರೆ. ಬಾರತದ ನಾಯಕ ತನ್ನ ತವರಿನ ಅಬಿಮಾನಿಗಳೊಡನೆ ಈ ಬಗೆಯ ಸಂಬಂದ ಹೊಂದಿದ್ದು ಅಪರೂಪವೇ! ಇಂದಿಗೂ ಈ ಪ್ರಕರಣ ನಂಬಲಾಸಾದ್ಯ ಎಂದೆನಿಸದೇ ಇರದು. ಆದರೆ ಒಂದು ದಶಕದ ಬಳಿಕ ಸುನೀಲ್ ಗಾವಸ್ಕರ್ ರ ಮಗ ರೋಹನ್ ಗಾವಸ್ಕರ್ ಮುಂಬೈ ತೊರೆದು ಈಡನ್ ಗಾರ್ಡನ್ಸ್ ನ ತವರಾಗಿರುವ ಬಂಗಾಳದ ಪರ ರಣಜಿ ಟೂರ್ನಿ ಆಡಲು ಮೊದಲು ಮಾಡಿದ್ದು ಒಂದು ವಿಲಕ್ಶಣ ಸಂಗತಿ ಎಂದೇ ಹೇಳಬೇಕು!
ವಿಶ್ವಕಪ್ ವಿಜೇತರಿಗೆ ನೆರವಾಗಿದ್ದ ಹಾಡುಗಾರ್ತಿ ಲತಾ ಮಂಗೇಶ್ಕರ್
ಕ್ರಿಕೆಟ್ ಜಗತ್ತೇ ಅಚ್ಚರಿ ಪಡುವಂತೆ ಕಪಿಲ್ ದೇವ್ ರ ಮುಂದಾಳ್ತನದ ಬಾರತ ತಂಡ ಇಂಗ್ಲೆಂಡ್ ನಲ್ಲಿ ಜರುಗಿದ 1983 ವಿಶ್ವಕಪ್ ಅನ್ನು ಗೆದ್ದು ಬೀಗಿದರೂ ಆಗಿನ ದಿನಗಳಲ್ಲಿ ಆಟಗಾರರಿಗೆ ಪಂದ್ಯದ ಶುಲ್ಕದ ಹೊರತಾಗಿ ಹೆಚ್ಚುವರಿ ಹಣ ಅತವಾ ಬೇರೆ ಉಡುಗೊರೆ ನೀಡುವ ಸದ್ರುಡ ಸ್ತಿತಿಯಲ್ಲಿ ಬಿ.ಸಿ.ಸಿ.ಐ ಇರುವುದಿಲ್ಲ. ಆದರೂ ಇಂತಹ ಶ್ರೇಶ್ಟ ಸಾದನೆಗೈದ ಆಟಗಾರರಿಗೆ ವಿಶೇಶವಾಗಿ ಏನಾದರೂ ಮಾಡಲೇಬೇಕೆನ್ನುವ ತುಡಿತ ಕ್ರಿಕೆಟ್ ಆಡಳಿತಗಾರರಲ್ಲಿ ಉಂಟಾಗುತ್ತದೆ. ಆ ವೇಳೆ ಕ್ರಿಕೆಟ್ ಸಂಸ್ತೆಯ ಅದ್ಯಕ್ಶರಾಗಿದ್ದ ರಾಜ್ ಸಿಂಗ್ ದುಂಗರ್ಪುರ್ ಸಹಾಯಕ್ಕಾಗಿ ದಿಗ್ಗಜ ಹಾಡುಗಾರ್ತಿ ಲತಾ ಮಂಗೇಶ್ಕರ್ ರ ಮೊರೆ ಹೋಗುತ್ತಾರೆ. ಮೊದಲೇ ಕ್ರಿಕೆಟ್ ಅಬಿಮಾನಿಯಾಗಿದ್ದ ಲತಾ ಅವರು ಏನೂ ಎದುರುನೋಡದೆ ಆಟಗಾರರಿಗಾಗಿ ಉಚಿತವಾಗಿ ಸಂಗೀತ ಕಾರ್ಯಕ್ರಮ ಮಾಡುವುದಾಗಿ ಬರವಸೆ ನೀಡುತ್ತಾರೆ. ಕೊಟ್ಟ ಮಾತಿನಂತೆ ನಂತರ 1983 ರ ಆಗಸ್ಟ್ 17 ರಂದು ದೆಹಲಿಯಲ್ಲಿ ಸೊಗಸಾಗಿ ನಡೆದ ಲತಾರ ಸಂಗೀತ ಕಾರ್ಯಕ್ರಮ ಸಹಸ್ರಾರು ಜನರಿಂದ ಕೂಡಿ ದೊಡ್ಡ ಯಶಸ್ಸು ಕಾಣುತ್ತದೆ. ಆಗಿನ ಕಾಲಕ್ಕೆ ಬರೋಬ್ಬರಿ 20 ಲಕ್ಶ ರೂಪಾಯಿ ಸಂಗ್ರಹವಾಗುತ್ತದೆ. ಈ ಹಣದಲ್ಲಿ ಆಟಗಾರರಿಗೆ ತಲಾ 1 ಲಕ್ಶ ರೂಪಾಯಿ ದೊರೆತರೆ ಇನ್ನುಳಿದ ಹಣ ಕ್ರಿಕೆಟ್ ಕಾರ್ಯಗಳಿಗಾಗಿ ಬಿ.ಸಿ.ಸಿ.ಐ ನ ತೆಕ್ಕೆ ಸೇರುತ್ತದೆ. ಹೀಗೆ ಆಟಗಾರರ ಶ್ರಮಕ್ಕೆ ಸೂಕ್ತ ಉಡುಗೊರೆ ಲತಾರ ದೊಡ್ಡತನದಿಂದ ಸಿಗುತ್ತದೆ. ಅಂದು ಲತಾ ಮಂಗೇಶ್ಕರ್ ನಮಗಾಗಿ ಸಮಯ ಮೀಸಲಿಟ್ಟು ಶ್ರಮ ವಹಿಸಿ ಮಾಡಿದ ನೆರವನ್ನು ನಾವೆಂದೂ ಮರೆಯಲಾಗದು. ಒಂದು ಬಗೆಯಲ್ಲಿ ದೇಶದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಅವರೂ ಸಹಾಯ ಮಾಡಿದ್ದಾರೆ ಎಂದು ಅಂದಿನ ಕ್ರಿಕೆಟಿಗರೊಟ್ಟಿಗೆ ಕ್ರಿಕೆಟ್ ಸಂಸ್ತೆ ಕೂಡ 2022 ರ ಆರಂಬದಲ್ಲಿ ಲತಾ ಮಂಗೇಶ್ಕರ್ ಕೊನೆಯುಸಿರೆಳೆದಾಗ ಕಂಬನಿ ಮಿಡಿಯಿತು. ಅದ್ವಿತೀಯ ಯಶಸ್ಸು ಕಂಡು ತಮ್ಮ ವ್ರುತ್ತಿ ಬದುಕಿನ ಉತ್ತುಂಗದಲ್ಲಿರುವಾಗ ಏನೂ ಬಯಸದೆ ಇತರರಿಗೆ ನೆರವಾಗಿದ್ದ ಲತಾ ಮಂಗೇಶ್ಕರ್ ರನ್ನು ನಾವೆಶ್ಟು ಹೊಗಳಿದರೂ ಕಡಿಮೆಯೇ!
(ಚಿತ್ರಸೆಲೆ: sportskeeda.com)
ಇತ್ತೀಚಿನ ಅನಿಸಿಕೆಗಳು