ಹಗುರವಾಗುವ ಕಲ್ಲುಗುಂಡಿನ ನಿಗೂಡತೆ

– .

ಶಿವಪುರ ಮಹಾರಾಶ್ಟ್ರದಲ್ಲಿನ ಒಂದು ಪುಟ್ಟ ಪಟ್ಟಣ. ಇದು ಮಹಾರಾಶ್ಟ್ರದ ರಾಜದಾನಿ ಮುಂಬೈನಿಂದ ಪೂರ‍್ವಕ್ಕೆ 180 ಕಿಲೋಮೀಟರ್ ಹಾಗೂ ಪುಣೆಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿದೆ. ಈ ಪುಟ್ಟ ಪಟ್ಟಣದಲ್ಲಿರುವ ದರ‍್ಗಾ ಹೆಸರುವಾಸಿಯಾಗಿರುವುದು 15ನೇ ಶತಮಾನದಲ್ಲಿ ಇಲ್ಲಿ ವಾಸವಾಗಿದ್ದ ಮುಸ್ಲಿಂ ಸೂಪಿ ಸಂತನ ಅತೀಂದ್ರಿಯ ಹಾಗೂ ನಿಗೂಡವಾಗಿ ಹಗುರವಾಗುವ ತೊಂಬತ್ತು ಕೆ.ಜಿ ತೂಕದ ಕಲ್ಲುಗುಂಡಿನಿಂದ.

ಏನಿದು ಹಗುರವಾಗುವ ತೊಂಬತ್ತು ಕಿಲೋ ಕಲ್ಲು?
ಸಾವಿನ ಅಂಚಿನಲ್ಲಿದ್ದ ಸೂಪಿ ಸಂತ ಕಮರ್ ಆಲಿ ಸುತ್ತಲಿದ್ದವರ ಬಳಿ ಈ ತೊಂಬತ್ತು ಕಿಲೋ ತೂಕದ ಕಲ್ಲಿನ ಕೆಳಬಾಗದಲ್ಲಿ ಹನ್ನೊಂದು ಗಂಡಸರು ತಮ್ಮ ತೋರು ಬೆರಳನ್ನಿಟ್ಟು, ಎಲ್ಲರೂ ಒಟ್ಟಾಗಿ ನನ್ನ ಹೆಸರನ್ನು ಹೇಳುತ್ತಾ, ಕಲ್ಲನ್ನು ಎತ್ತಲು ಪ್ರಯತ್ನಿಸಿದರೆ, ನಾನು ಆ ಕಲ್ಲನ್ನು ಅವರುಗಳ ತಲೆಗಿಂತ ಮೇಲಕ್ಕೆ ಏರುವಂತೆ ಮಾಡುತ್ತೇನೆ. ಇಲ್ಲವಾದಲ್ಲಿ ಆ ಕಲ್ಲನ್ನು ಒಂಟಿಯಾಗಿ ಅತವಾ ಒಟ್ಟಾಗಿ ಎಶ್ಟೇ ಜನರು ಪ್ರಯತ್ನಿಸಿದರೂ ಎರಡು ಅಡಿಗಿಂತ ಹೆಚ್ಚು ಎತ್ತರಕ್ಕೆ ಏರಿಸಲು ಸಾದ್ಯವಾಗುವುದಿಲ್ಲ ಎಂದು ಹೇಳಿದ್ದರಂತೆ. ಇಂದಿಗೂ ಸೂಪಿ ಸಂತನ ಮಾತುಗಳು ವಾಸ್ತವವಾಗಿವೆ ಎನ್ನುತ್ತಾರೆ ಸ್ತಳೀಯರು.

ಯಾರೀ ಕಮರ್ ಆಲಿ?

ಕಮರ್ ಆಲಿ ಮದ್ಯಮ ವರ‍್ಗದ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ್ದರು. ಈ ಕುಟುಂಬದ ಗಂಡಸರು ತಮ್ಮ ದೈಹಿಕ ಸಾಮರ‍್ತ್ಯಕ್ಕೆ ಹೆಸರುವಾಸಿಯಾಗಿದ್ದರು. ಆದರೆ ಕಮರ್ ಆಲಿ ತನ್ನೆಲ್ಲಾ ಸಹೋದರರಂತಲ್ಲದೆ, ಸೌಮ್ಯ ಸ್ವಬಾವ ಮತ್ತು ಆತ್ಮಾವಲೋಕನ ಮಾಡಿಕೊಳ್ಳುವ ವ್ಯಕ್ತಿತ್ವ ರೂಡಿಸಿಕೊಂಡಿದ್ದರು. ಕಮರ್ ಆಲಿ, ಆರು ವರ‍್ಶದವರಿದ್ದಾಗಲೇ ಸೂಪಿ ಪಿರ್ (ಶ್ರೇಶ್ಟ ಶಿಕ್ಶಕರು) ಅವರ ಬಳಿ ಶಿಶ್ಯತ್ವ ಪಡೆದರು. ಕಮರ್ ಆಲಿಯವರು ದಿನದ ಹೆಚ್ಚಿನ ಕಾಲವನ್ನು ದ್ಯಾನದಲ್ಲಿ ಕಳೆಯುತ್ತಿದ್ದರು. ತನ್ನ ಬಳಿ ಬರುವವರನ್ನು ಸಹಾನುಬೂತಿಯಿಂದ ಕಾಣುವ ಮತ್ತು ಪವಾಡದ ರೀತಿಯಲ್ಲಿ ಬಕ್ತರ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ, ಹೆಚ್ಚು ಹೆಚ್ಚು ಬಕ್ತರನ್ನು ಮನೆ ಬಾಗಿಲಿಗೆ ಬರುವಂತೆ ಮಾಡಿತ್ತು. ವಿಪರ‍್ಯಾಸವೆಂದರೆ, ಕಮರ್ ಆಲಿ ಅವರು ಇಪ್ಪತ್ತು ವರುಶ ತುಂಬುವ ಮೊದಲೇ ಸಾವನ್ನಪ್ಪಿದರು. ಸಾವಿನ ಅಂಚಿನಲ್ಲಿದ್ದಾಗ ಆ 90 ಕಿಲೋ ತೂಕದ ಗುಂಡನೆಯ ಕಲ್ಲನ್ನು ತಮ್ಮ ಸಮಾದಿಯ ಬಳಿ ಇಡುವಂತೆ ಕೇಳಿಕೊಂಡಿದ್ದರು. ತನ್ನ ಬಳಿ ನೆರೆದಿದ್ದವರಿಗೆ ಆದ್ಯಾತ್ಮಿಕ ಶಕ್ತಿ, ವಿವೇಚನಾರಹಿತ ರಾಕ್ಶಸ ಶಕ್ತಿಗಿಂತ ಬಹುಪಾಲು ದೊಡ್ಡದು ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ದಯಾಮಯನಾದ ಅಲ್ಲಾಹುವು ನಿಮ್ಮನ್ನು ಪ್ರೀತಿಸುವಂತೆ, ನೀವು ಎಲ್ಲಾ ಜಾತಿ ಮತ್ತು ದರ‍್ಮದವರನ್ನೂ ಪ್ರೀತಿಸಬೇಕು. ಏಕೆಂದರೆ ನಾವೆಲ್ಲರೂ ಒಂದೇ ದೋಣಿಯ ಪ್ರಯಾಣಿಕರು. ಸಹೋದರ ಸಹೋದರಿಯರು. ನೀವು, ನನ್ನ ಹೆಸರನ್ನು ಕರೆದು ಆ ಕಲ್ಲನ್ನು ಎತ್ತುವಾಗ ಇದನ್ನು ಯೋಚಿಸಿ. ನನ್ನ ಆದ್ಯಾತ್ಮಿಕ ಶಕ್ತಿ, ನಿಮ್ಮಲ್ಲಿ ಸಂಚರಿಸಿ ಬಾರವಾದ ಕಲ್ಲುಗುಂಡನ್ನು ಸಲೀಸಾಗಿ, ತಲೆಗಿಂತ ಎತ್ತರಕ್ಕೆ ಎತ್ತಲು ಸಾದ್ಯವಾಗುತ್ತದೆ ಎಂದು ಹೇಳಿದ್ದರಂತೆ.

ಕಮರ್ ಆಲಿ ದರ‍್ವೇಶ್ ದರ‍್ಗಾ ಎಂದೇ ಪ್ರಸಿದ್ದಿಯಾಗಿರುವ ಇದು, ಇಂದಿಗೂ ಆ 90 ಕಿಲೋ ತೂಕದ ಕಲ್ಲುಗುಂಡನ್ನು ಹೊಂದಿದೆ. ಅದು ಸೂಪಿ ಸಂತನ ಹೆಸರು ಹೇಳುತ್ತಿದ್ದಂತೆ ಹಗುರವಾಗುತ್ತದೆ. ಹನ್ನೊಂದು ಮಂದಿ ಗಂಡಸರು ಕಮರ್ ಆಲಿ ದರ‍್ವೇಶ್ ಎಂದು ಕೂಗುತ್ತಾ ಕೈ ಬೆರೆಳುಗಳಲ್ಲಿ ಕಲ್ಲುಗುಂಡನ್ನು ಎತ್ತಲು ಪ್ರಯತ್ನಿಸಿದರೆ, ಅದು ಜೀವಂತ ವಸ್ತುವಿನಂತೆ, ಅವರುಗಳ ತಲೆಗಿಂತಾ ಒಂದು ಅಡಿ ಎತ್ತರಕ್ಕೆ ಗಾಳಿಯಲ್ಲಿ ಹಾರುತ್ತದೆ. ಕಲ್ಲಿನ ಗುಂಡು ಗಾಳಿಯಲ್ಲಿ ಹಾರಿ ತಿರುಗುತ್ತಿದ್ದಂತೆ, ಅದನ್ನು ಎತ್ತಲು ಪ್ರಯತ್ನಿಸಿದ ಮಂದಿ ಹಿಂದೆ ಸರಿದರೆ, ಅದು ನೇರ ಬೂಮಿಗೆ ಅಪ್ಪಳಿಸುತ್ತದೆ. ಈ ದರ‍್ಗಾದ ಜಾಗವು ಅತ್ಯಂತ ಶಕ್ತಿಯುತವಾದ ವಿದ್ಯುತ್ಕಾಂತೀಯ ಪ್ರದೇಶವಾಗಿದೆ ಎಂದು ಬಾವಿಸಿದಲ್ಲಿ, ಹದಿಹರೆಯದ ಸೂಪಿ ಸಂತರಿಗೆ ಬಾರವಾದ ಕಲ್ಲು ಗುಂಡಿಗೆ ಹಗುರತನ ನೀಡಬಹುದು ಎಂಬ ಬೌತಶಾಸ್ತ್ರ, ಅದೂ 15ನೇ ಶತಮಾನದಲ್ಲಿ ತಿಳಿದಿತ್ತೇ? ಇದರ ಸತ್ಯಾಸತ್ಯತೆಯನ್ನು ತಿಳಿಯಲು ನಡೆಸಿದ ಪ್ರಯೋಗದಲ್ಲಿ ಹನ್ನೆರೆಡು ಮಂದಿ ಪುಟ್ ಬಾಲ್ ಪಟುಗಳ ಗುಂಪು ಈ ಕಲ್ಲುಗುಂಡನ್ನು ಸುತ್ತುವರೆದು ಎತ್ತಲು ಪ್ರಯತ್ನಿಸಿದರಂತೆ. ಅದನ್ನು ಅವರು ತಮ್ಮ ತೊಡೆಯ ಮಟ್ಟಕ್ಕೆ ಮಾತ್ರ ಎತ್ತಲು ಸಾದ್ಯವಾಯಿತಂತೆ. ನಂತರ ಆ ಕಲ್ಲುಗುಂಡು ನಿದಾನವಾಗಿ ಕೆಳಕ್ಕುರುಳಿತಂತೆ. ಇಶ್ಟು ತೂಕದ ಕಲ್ಲುಗುಂಡು ಹಗುರವಾಗುವುದರ ಹಿಂದಿನ ಸತ್ಯಾಸತ್ಯತೆ ಇನ್ನೂ ನಿಗೂಡವಾಗಿಯೇ ಉಳಿದಿದೆ. ಇದರ ಬಗ್ಗೆ ಇನ್ನೂ ಸಂಶೋದನೆಗಳು ನಡೆಯುತ್ತಿವೆ. ಕಮರ್ ಆಲಿ ಬ್ರಹ್ಮಚಾರಿ ಹಾಗೂ ಪರಿಶುದ್ದತೆಗೆ ಮತ್ತೊಂದು ಹೆಸರಾಗಿದ್ದ ಕಾರಣ, ಗೌರವ ಸೂಚಕವಾಗಿ ಈ ದರ‍್ಗಾದೊಳಗೆ ಹೆಂಗಸರ ಬರುವಿಕೆಯನ್ನು ತಡೆಹಿಡಿಯಲಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: booksfact.com, religionworld.in, jagran.com, bhaskar.com, telanganatoday.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಇಂದು ನನ್ನ ಬರಹವನ್ನು ಹೊನಲುವಿನಲ್ಲಿ ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು

ಅನಿಸಿಕೆ ಬರೆಯಿರಿ: