‘ಓರಡೋರ್-ಸುರ್-ಗ್ಲೇನ್’: ಕ್ರೌರ‍್ಯ, ದೌರ‍್ಜನ್ಯದ ಕುರುಹು ಈ ಗ್ರಾಮ

– ಕೆ.ವಿ.ಶಶಿದರ.

ಎರಡನೆಯ ಮಹಾಯುದ್ದದ ಸಮಯದಲ್ಲಿ ನಡೆದ ಅನೇಕ ದೌರ‍್ಜನ್ಯಗಳಲ್ಲಿ ಪ್ರಾನ್ಸಿನ ಗ್ರಾಮವೊಂದರಲ್ಲಿ ನಡೆದ ಹತ್ಯಾಕಾಂಡ ಅತ್ಯಂತ ಹೀನಾಯವಾದದ್ದು. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಕ್ಕಿಂತ ಕ್ರೂರವಾದ ಈ ಗಟನೆ ನಾಜಿಗಳ ಕ್ರೌರ‍್ಯಕ್ಕೆ ಹಿಡಿದ ಕನ್ನಡಿ.

642 ಮಂದಿಯ ರುಂಡ ಚೆಂಡಾಡಿದ ದಿನ ಅದು!

1944ರ ಜೂನ್ 10, ವಿವರಿಸಲು ಅಸಹ್ಯವಾಗುವಂತಹ ಬಯಾನಕ ದ್ಯೌರ‍್ಜನ್ಯಕ್ಕೆ ಸಾಕ್ಶಿಯಾದ ದಿನ. ಅಂದು 642 ಜನರ ರುಂಡ ಚಂಡಾಡಿದ ದಿನ. ಇದರಲ್ಲಿ 247 ಮಕ್ಕಳು ಸಹ ಸೇರಿದ್ದು, ನಾಜಿಗಳಲ್ಲಿ ತುಂಬಿ ತುಳುಕುತ್ತಿದ್ದ ಅಸಂಸ್ಕ್ರುತ, ಅಮಾನವೀಯ ಕ್ರೌರ‍್ಯ ವರ‍್ತನೆಗೆ ಸಾಕ್ಶಿ. ಇದಕ್ಕೆ ಪೂರ‍್ಣವಾಗಿ ಬಲಿಯಾದ ಗ್ರಾಮವೇ ಓರಡೋರ್-ಸುರ್-ಗ್ಲೇನ್. ಗ್ರಾಮದ ಹಲವರನ್ನು ಗುಂಡಿಟ್ಟು ಕೊಂದು, ಮತ್ತೆ ಕೆಲವರನ್ನು ಸಜೀವವಾಗಿ ಸುಟ್ಟು ಬಸ್ಮ ಮಾಡಲಾಯಿತು.

ಗ್ರಾಮಕ್ಕೆ ನುಗ್ಗಿದ ನಾಜಿ ಸೈನಿಕರು, ಮಹಿಳೆಯರನ್ನು ಮತ್ತು ಮಕ್ಕಳನ್ನು ಬಲವಂತವಾಗಿ ಚರ‍್ಚುಗಳಿಗೆ ದೂಡಿ ಬೀಗ ಜಡಿದರು. ಗ್ರಾಮದ ಅಶ್ಟೂ ಪುರುಶರನ್ನು, ಮಿಶಿನ್ ಗನ್‍ಗಳಿಂದ ಸುಸಜ್ಜಿತವಾಗಿದ್ದ, ಆರು ದನದ ಕೊಟ್ಟಿಗೆಗಳಿಗೆ ತಳ್ಳಲಾಯಿತು. ಮಿಶಿನ್ ಗನ್‍ಗಳಿಂದ ಪುರುಶರ ಕಾಲುಗಳಿಗೆ ಶೂಟ್ ಮಾಡಿ ಓಡಿ ಹೋಗದಂತೆ ಹೆಳವರನ್ನಾಗಿಸಿ, ನಂತರ ಇಡೀ ಕೊಟ್ಟಿಗೆಯ ಮೇಲೆ ಇಂದನ ಸುರಿದು, ಬೆಂಕಿ ಹಚ್ಚಿ, ಒಳಗಿದ್ದವರನ್ನು ಸಜೀವ ದಹನ ಮಾಡಲಾಯಿತು. ಕೇವಲ ಆರು ಮಂದಿ ಮಾತ್ರ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಅದರಲ್ಲಿ ಒಬ್ಬ ಕುಂಟುತ್ತಾ ರಸ್ತೆಯಲ್ಲಿ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಗುಂಡಿಟ್ಟು ನಿರ‍್ದಯವಾಗಿ ಕೊಲ್ಲಲಾಯಿತು. ಕೊಟ್ಟಿಗೆಗಳಲ್ಲಿ ಸಜೀವ ದಹನವಾಗಿ ಸತ್ತ ಪುರುಶರ ಸಂಕ್ಯೆ 190. ಇದಾದ ಹಲವಾರು ದಿನಗಳ ನಂತರ ಸತ್ತವರ ಶವ ಸಂಸ್ಕಾರಕ್ಕೆ ಅಳಿದುಳಿದವರಿಗೆ ಅನುಮತಿಸಲಾಯಿತು. ಇತಿಹಾಸದಲ್ಲೇ ಕೆಂಪು ಅಕ್ಶರಗಳಲ್ಲಿ ಬರೆದಿಡಬಹುದಾದ ದಿನ ಇದು.

ಸ್ಮಶಾನವಾಗಿ ಬದಲಾದ ಗ್ರಾಮ

ಹೆದರಿ ಚರ‍್ಚುಗಳಲ್ಲಿ ಸೇರಿದ್ದ ಮಹಿಳೆಯರನ್ನು ಮತ್ತು ಮಕ್ಕಳನ್ನು, ಚರ‍್ಚಿನ ಬಾಗಿಲು ಹಾಕಿ, ಬಾಗಿಲಿಗೆ ಪೆಟ್ರೋಲ್ ಸುರಿದ ನಿರ‍್ದಯಿ ನಾಜಿ ಸೈನಿಕರು ಬೆಂಕಿ ಹಚ್ಚಿ ಸಜೀವ ದಹನ ಮಾಡಿದರು. ಬೆಂಕಿಗೆ ಸಿಕ್ಕು ಬೇಯುವ ಮುನ್ನ, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಕರುಳ ಕುಡಿಗಳನ್ನು ಕಾಪಾಡಿಕೊಳ್ಳಲಾಗದ ತಾಯಂದಿರು ಹರಿಸಿದ ಕಣ್ಣೀರು, ಬೆಂಕಿಯ ಜ್ವಾಲೆಯನ್ನು ನಂದಿಸಲು ಸಾಕಾಗಲೇ ಇಲ್ಲ. ಕರುಳಿನ ಕುಡಿಗಳನ್ನು ಎದೆಗವಚಿಕೊಂಡ ತಾಯಂದಿರು ಹಾಗೆಯೇ ಸುಟ್ಟು ಕರಕಲಾಗಿದ್ದು ಈಗ ಇತಿಹಾಸ.

ಇವೆಲ್ಲಾ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ನಾಜಿ ಸೈನಿಕರು ಗ್ರಾಮದ ಬೀದಿ ಬೀದಿಗಳಲ್ಲಿ, ಕಂಡ ಕಂಡಲ್ಲಿ ಬೆಂಕಿ ಹಚ್ಚಿ, ಬೆಂಕಿಯ ಕೆನ್ನಾಲಗೆಗೆ ಸಿಕ್ಕ ವಾಹನಗಳು, ಮನೆ-ಮಟಗಳು ಸುಟ್ಟು ಬಸ್ಮ ಆಗುತ್ತಿರುವುದನ್ನು ನೋಡಿ ಸಂತೋಶಿಸಿದರು. ಕೈಗೆ ಸಿಕ್ಕಿದ್ದೆಲ್ಲವನ್ನು ಬೆಂಕಿಗೆ ತಳ್ಳಿ, ಆಹುತಿ ಮಾಡಿ ವಿಕ್ರುತ ಆನಂದ ಅನುಬವಿಸಿದರು. ಇದಕ್ಕೂ ಮುನ್ನ ಹಳ್ಳಿಯ ಮನೆ ಮನೆಯನ್ನು ಲೂಟಿ ಮಾಡಿ, ಸಿಕ್ಕಿದ್ದನ್ನು ದೋಚಲು ಅವರುಗಳು ಮರೆಯಲಿಲ್ಲ.

ಹತ್ಯಾಕಾಂಡಕ್ಕೆ ಕಾರಣ

ಶಾಂತ ವಾತಾವರಣದಿಂದ ಲವಲವಿಕೆಯಾಗಿದ್ದ ಓರಡೋರ್-ಸುರ್-ಗ್ಲೇನ್ ಗ್ರಾಮ, ನಾಜಿಗಳ ದೌರ‍್ಜನ್ಯಕ್ಕೆ ತುತ್ತಾಗಿ ಕೆಲವೇ ಗಂಟೆಗಳ ಕಾಲದಲ್ಲಿ ನೀರವ ಮೌನಕ್ಕೆ ಶರಣಾಗಿತ್ತು. ಅಲ್ಲಿನ ನಿವಾಸಿಗಳ ಪೈಕಿ 642 ಜನರನ್ನು ಜೀವಂತ ಸುಟ್ಟ ಕಾರಣ ಇಡೀ ಗ್ರಾಮ ಸ್ಮಶಾನವಾಗಿ ಬದಲಾಗಿತ್ತು. ಈ ಗ್ರಾಮದ ಸಮೀಪದಲ್ಲಿರುವ ‘ಟುಲೆ’ ಎಂಬಲ್ಲಿ ನಡೆದ ಪಕ್ಶಪಾತಿ ಚಟುವಟಿಕೆ ಹಾಗೂ ಕಮಾಂಡರ್ ಹೆಲ್ಮೆಟ್ ಕಾಂಪೆಯ ಅಪಹರಣ ಈ ದೌರ‍್ಜನ್ಯಕ್ಕೆ ಮತ್ತು ಅಟ್ಟಹಾಸಕ್ಕೆ ಮೂಲ ಕಾರಣ ಎನ್ನಲಾಗಿದೆ.

ಗ್ರಾಮದ ಪುನರ್‌ ನಿರ‍್ಮಾಣ

ಯುದ್ದದ ನಂತರ ಪ್ರಾನ್ಸಿನ ಅಂದಿನ ಜನರಲ್ ಚಾಲ್ರ್ಸ್ ಡಿ ಗಾಲೆ, ಓರಡೋರ್-ಸುರ್-ಗ್ಲೇನ್ ಗ್ರಾಮವನ್ನು ಪುನರ್ ನಿರ‍್ಮಾಣ ಮಾಡದಿರಲು ನಿರ‍್ದರಿಸಿದ. ಈ ಗ್ರಾಮ ನಾಜಿಗಳ ದೌರ‍್ಜನ್ಯ, ಕ್ರೂರತೆ ಮತ್ತು ಅಮಾನುಶ ಕೆಲಸಕ್ಕೆ ಸಾಕ್ಶಿಯಾಗಿ, ಕುರುಹಾಗಿ ಹಾಗೆಯೇ ಸ್ಮಾರಕವಾಗಿ ಉಳಿಯಬೇಕೆನ್ನುವುದು ಅವನ ಮಹದಾಸೆಯಾಗಿತ್ತು. ಮೂಲ ಗ್ರಾಮವನ್ನು ಶಾಶ್ವತ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವಾಗಿ ಕಾಪಿಡಲು ಆದೇಶಿ, ಅಳಿದುಳಿದ ಗ್ರಾಮಸ್ತರಿಗಾಗಿ ಪಕ್ಕದಲ್ಲೇ, ಹಳೆಯ ಗ್ರಾಮದ ವಾಯುವ್ಯ ದಿಕ್ಕಿನಲ್ಲಿ, ಅದೇ ಹೆಸರಿನಲ್ಲಿ ನವನವೀನ ಗ್ರಾಮವನ್ನು ನಿರ‍್ಮಿಸಿ ಕೊಟ್ಟ. ಹಳೆಯ ಗ್ರಾಮದ ಪಳೆಯುಳಿಕೆಗಳು ಈಗಲೂ ನಾಜಿ ದೌರ‍್ಜನ್ಯದ ಗುರುತಾಗಿ, ಸತ್ತವರ ಸ್ಮಾರಕವಾಗಿ ಉಳಿದಿದೆ. ದೇಶದ ಇತರೆಡೆ ನಾಜಿಗಳು ನಡೆಸಿದ ಆಕ್ರಮಣದ ಕುರುಹಾಗಿಯೂ ಸಹ ಇದನ್ನು ಉಳಿಸಿಕೊಳ್ಳಲಾಗಿದೆ.

ಸೆಂಟರ್ ಡೆ ಲಾ ಮೆಯೊಯಿರ್ ಡಿ ಓರಾಡೋರ್ ವಸ್ತುಸಂಗ್ರಹಾಲಯ

1999ರಲ್ಲಿ ಪ್ರಾನ್ಸಿನ ಅದ್ಯಕ್ಶರಾಗಿದ್ದ ಜಾಕ್ವೆಸ್ ಚಿರಾಕ್, ಹುತಾತ್ಮರ ಗ್ರಾಮದ ಪ್ರವೇಶದ್ವಾರದ ಹತ್ತಿರದಲ್ಲಿ ಸ್ಮಾರಕ ವಸ್ತುಸಂಗ್ರಹಾಲಯ ‘ಸೆಂಟರ್ ಡೆ ಲಾ ಮೆಯೊಯಿರ್ ಡಿ ಓರಾಡೋರ್’ ಸ್ತಾಪಿಸಿ ಲೋಕಾರ‍್ಪಣೆ ಮಾಡಿದರ‍ು. ಈ ವಸ್ತು ಸಂಗ್ರ‍ಹಾಲಯದಲ್ಲಿ ನಾಜಿಗಳ ದುಶ್ಕ್ರುತ್ಯದಿಂದ ಸುಟ್ಟುಹೋದ ಕಟ್ಟಡಗಳಿಂದ ಪಡೆದ ವಸ್ತುಗಳು, ಬೆಂಕಿಯಲ್ಲಿ ಸಜೀವ ದಹನವಾದಾಗ ಸುಟ್ಟು ಕರಕಲಾಗಿ ನಿಂತು ಹೋಗಿದ್ದ ಕೈ ಗಡಿಯಾರ‍ಗಳು, ಬೆಂಕಿಯ ತೀವ್ರ‍ತೆಗೆ ಕರಗಿದ್ದ ಗಾಜು ಹಾಗೂ ಇನ್ನಿತರ‍ ವೈಯುಕ್ತಿಕ ವಸ್ತುಗಳನ್ನು ವಿವಿದೆಡೆಯಿಂದ ಸಂಗ್ರ‍ಹಿಸಿ ಇಲ್ಲಿ ಪ್ರ‍ದರ‍್ಶನಕ್ಕೆ ಇಡಲಾಗಿದೆ. ಇಡೀ ದೇಶದಲ್ಲಿ ನಾಜಿಗಳು ನಡೆಸಿದ ದೌರ‍್ಜನ್ಯಕ್ಕೆ ಸಾಕ್ಶಿಯಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: http://francetvinfo.fr, nationalgeographic.com.au)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: