ನಯಕೇವ್ – ಮಾಟಗಾತಿಯ ಬಾವಿ.
– ಕೆ.ವಿ.ಶಶಿದರ.
ಪಾತಾಳಕ್ಕೆ ಹೋಗಲು ಬೂ ಪ್ರದೇಶದಲ್ಲಿ ಸಾಕಶ್ಟು ಮಾರ‍್ಗಗಳಿವೆ. ಎಸ್ಟೋನಿಯನ್ ದೇಶದ ತುಹಾಲಾದಲ್ಲಿರುವ ಅತಿ ಆಳದ, ವಿರುಲೇಸ್ ಗುಹೆ ಬಹಳ ಪ್ರಸಿದ್ದಿ ಪಡೆದಿದೆ. ಇದನ್ನು ‘ವಿಚ್ ವೆಲ್’ ಅರ‍್ತಾತ್ ಮಾಟಗಾತಿಯ ಬಾವಿ ಅತವಾ ಅವರದೇ ಬಾಶೆಯಲ್ಲಿ ‘ನಯಕೇವ್’ ಎಂದು ಕರೆಯುತ್ತಾರೆ.
ತುಹಾಲಾ ಎಸ್ಟೋನಿಯಾದ ಒಂದು ಹಳ್ಳಿಯಾಗಿದ್ದು, ಇಲ್ಲಿ ಹದಿನೈದು ಬೂಗತ ನದಿಗಳಿವೆ. ಅವುಗಳು ಗುಹೆಗಳಲ್ಲಿನ ರಂದ್ರಗಳ ಮೂಲಕ ಹರಿಯುತ್ತವೆ. ಇದರಿಂದಾಗಿ ಈ ಪ್ರದೇಶದಲ್ಲಿ ಅನೇಕ ಗುಂಡಿಗಳಾಗಿವೆ. ಈ ಗುಂಡಿಗಳು ಕುದುರೆಯಶ್ಟು ದೊಡ್ಡ ಪ್ರಾಣಿಯನ್ನೂ ಸಲೀಸಾಗಿ ನುಂಗಿ ಹಾಕಬಹುದಾದಶ್ಟು ದೊಡ್ಡದಾಗಿವೆ. ನಯಕೇವ್ ಅತವಾ ಮಾಟಗಾತಿಯ ಬಾವಿ, ವರ‍್ಶದ ಹೆಚ್ಚಿನ ಸಮಯ ಸಾಮಾನ್ಯ ಬಾವಿಯಂತೆ ಕಂಡುಬರುತ್ತದೆ. ಇದ್ದಕ್ಕಿದ್ದಂತೆ ಹೆಚ್ಚಿನ ಪ್ರಮಾಣದ ನೀರನ್ನು ಅದು ಹೊರಹಾಕಲು ಪ್ರಾರಂಬಿಸಿದಾಗ, ಬಿಸಿ ನೀರಿನ ಬುಗ್ಗೆಯಂತೆ ಕಾಣುತ್ತದೆ. ಈ ಮಾಟಗಾತಿಯ ಬಾವಿ ಅಶ್ಟೇನು ಆಳವಾಗಿಲ್ಲ. ಇದರ ಆಳ ಕೇವಲ 2.5 ಮೀಟರ್. ಇಶ್ಟು ಆಳದ ಬಾವಿ ಪ್ರತಿ ಕ್ಶಣಕ್ಕೆ ಒಂದು ನೂರು ಲೀಟರ್ ನೀರನ್ನು ಹೊರಹಾಕುತ್ತದೆ. ಈ ನೀರಿನ ಬುಗ್ಗೆ ಕೆಲವೊಮ್ಮೆ 1.5 ಮೀಟರ್, ಅಂದರೆ ಅಂದಾಜು ಐದು ಅಡಿ ಎತ್ತರಕ್ಕೆ ಜಿಗಿಯುವುದನ್ನು ಸ್ತಳೀಯರು ನೆನಪಿಸಿಕೊಳ್ಳುತ್ತಾರೆ.
ಹಿಂದಿನ ಕಾಲದಲ್ಲಿ ಈ ವಿದ್ಯಮಾನವು ಸ್ತಳೀಯರ ಮನಸ್ಸಿನಲ್ಲಿ ಬಯವನ್ನು ಹುಟ್ಟುಹಾಕುತ್ತಿತ್ತು. ಹಾಗಾಗಿ ಅವರುಗಳು ಇದನ್ನು “ಮಾಟಗಾತಿಯ ಬಾವಿ” ಎಂದು ಹೆಸರಿಸಿದ್ದರು. ತುಹಾಲಾದ ಮಾಟಗಾತಿಯರು ಇದರ ಅಡಿಯಲ್ಲಿ, ಸ್ನಾನ ಗ್ರುಹದಂತಹ ಪ್ರದೇಶದಲ್ಲಿ ಅವಿತುಕೊಂಡು, ಪರಸ್ಪರ ತೀವ್ರವಾಗಿ ಒಬ್ಬರ ಪ್ರುಶ್ಟದ ಮೇಲೆ ಅಂಗೈ, ಮೆಟ್ಟು, ಬರ‍್ಚ್ ಮರದ ಕೊಂಬೆ ಮೊದಲಾದವುಗಳಿಂದ ಮತ್ತೊಬ್ಬರು ಹೊಡೆದಾಗ ಅದರ ಮೇಲ್ಮೈ ಮೇಲೆ ಅಡಚಣೆಯಾಗುತ್ತದೆ. ಇದರಿಂದ ನೀರು ಚಿಮ್ಮಿ ಹೊರಬರುತ್ತದೆ ಎಂದು ಅವರುಗಳು ನಂಬಿದ್ದರು. ಅಲ್ಲಿನ ಜನತೆಯ ಬಯ ಇಲ್ಲವಾಗಿದ್ದು, ಬೂಮಿಯ ತಳದಲ್ಲಿ ನದಿ ಹರಿದು ಅಲ್ಲಿನ ಜಾಗ ಬಹು ಮೆದುವಾಗಿತ್ತು. ಮಳೆಯ ಕಾರಣ ಗುಪ್ತಗಾಮಿನಿ ನದಿಯ ನೀರಿನ ಮಟ್ಟ ಹೆಚ್ಚಾದಾಗ, ನೀರು ದುರ‍್ಬಲ ಸ್ತಳದಿಂದ ಹೊರಬರುತ್ತಿತ್ತು. ಆ ಸ್ತಳವೇ ಬಾವಿಯಂತಾಗಿದೆ ಎಂದು ತಿಳಿದಾಗ. ವಸಂತಕಾಲದಲ್ಲಿ ಸುರಿಯುವ ಮಳೆಯಿಂದ ನೀರು ತುಂಬಿ, ಬೂರಂದ್ರಗಳು ಬರ‍್ತಿಯಾಗಿ, ಬೂಗರ‍್ಬದಲ್ಲಿ ಒತ್ತಡ ಸ್ರುಶ್ಟಿಯಾಗುತ್ತದೆ. ಈ ಒತ್ತಡವು ನೀರನ್ನು ಮೇಲಕ್ಕೆ ಚಿಮ್ಮಿಸುತ್ತದೆ. ಇದೇ ಕಾರಂಜಿಯಂತೆ ಕಂಡುಬರುವುದು. ಈ ನೈಸರ‍್ಗಿಕ ವಿದ್ಯಮಾನ ಮಳೆಗಾಲದ ಕೆಲವು ದಿನಗಳು ಮಾತ್ರ ಚಾಲ್ತಿಯಲ್ಲಿರುತ್ತದೆ. ತದನಂತರ ಯತಾಸ್ತಿತಿಗೆ ಮರಳುತ್ತದೆ. ಪ್ರತಿ ವರ‍್ಶದ ಮಳೆಗಾಲದಲ್ಲೂ ಈ ವಿದ್ಯಮಾನ ಮರುಕಳಿಸುವುದಿಲ್ಲ. ನೀರಿನ ಶೇಕರಣೆ ಮತ್ತು ಹರಿವು ಹೆಚ್ಚಾದಲ್ಲಿ ಮಾತ್ರ ಅದು ಕಂಡುಬರುತ್ತದೆ. ಈ ಹಿಂದೆ 2013ರಲ್ಲಿ ಈ ಚಿಮ್ಮುವ ಕಾರಂಜಿಯ ವಿದ್ಯಮಾನ ಸಂಬವಿಸಿತ್ತು.
ಬೂವಿಜ್ನಾನಿಗಳು ಈ ಮಾಟಗಾತಿಯ ಬಾವಿಯಿಂದ ಬರುವ ನೀರಿನ ಪ್ರಮಾಣ, ಅದರಿಂದ ಆಗಬಹುದಾದ ಅನಾಹುತಗಳನ್ನು ಅದ್ಯಯನ ಮಾಡಿದ್ದಾರೆ. ಅದ್ಯಯನದ ಪಲಿತಾಂಶದಂತೆ ನಯಕೇವ್ನಿಂದ ಪ್ರತಿ ಸೆಕೆಂಡಿಗೆ ಒಂದು ಸಾವಿರ ಲೀಟರ‍್ಗಳಿಗೂ ಹೆಚ್ಚು ನೀರು ಹೊರಬಂದಲ್ಲಿ, ಆ ದಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹವಾಗಿ, ಅಲ್ಲಿ ವಾಸಿಸುವವರಿಗೆ ತೊಂದರೆಯಾಗುತ್ತದೆ ಎನ್ನುತ್ತದೆ ಅದ್ಯಯನದ ವರದಿ. ಇಶ್ಟು ಬಾರಿ ಪ್ರಮಾಣದಲ್ಲಿ ನೀರು ಹೊರಬಂದರೂ, ಇದು ಕುಡಿಯಲು ಯೋಗ್ಯವಲ್ಲದ್ದು. ಕಾರಣ ಇದರಲ್ಲಿ ಕೆಸರು ಗಲೀಜು ಸೇರಿ ಕೊಳಕಾಗಿರುತ್ತದೆ ಮತ್ತು ಕಂದು ಬಣ್ಣದಿಂದ ಕೂಡಿರುತ್ತದೆ. ಈ ಮಾಟಗಾತಿಯ ಬಾವಿ ತುಂಬಿ ಹರಿಯುವ ದ್ರುಶ್ಯ ನಿಜಕ್ಕೂ ನಯನಮನೋಹರ. ಇದನ್ನು ನೋಡಿ ಕಣ್ತುಂಬಿಕೊಳ್ಳಲು ಸಾಕಶ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈ ವಿದ್ಯಮಾನಕ್ಕಾಗಿ ಕಾಯುವುದು ಅನಿವಾರ‍್ಯ.
(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, visitestonia.com, amusingplanet.com, estonianworld.com )
ಇಂದು ಹೊನಲುವಿನಲ್ಲಿ ನನ್ನ ಬರಹವನ್ನು ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು ಸರ್