ಕಾಂತಾರ – ಒಂದು ದಂತಕತೆ

– ನಿತಿನ್ ಗೌಡ.

ಪ್ರಕ್ರುತಿ, ಮನುಶ್ಯ, ನಂಬಿಕೆ, ಆಚರಣೆ ಮತ್ತು ಆಳ್ವಿಕೆಯ ಕಟ್ಟಳೆಗಳು ಹೀಗೆ ಇಂತಹ ವಿಶಯಗಳ ಮೂಲಕ ಒಂದೊಳ್ಳೆ ಕಲೆಯ ಬಲೆಯನ್ನು ಹೆಣೆದು, ನೋಡುಗರು ಆ ಬಲೆಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದಾರೆ, ಕಾಂತಾರ ಚಿತ್ರದ ಮುಂದಾಳು ರಿಶಬ್ ಶೆಟ್ರು. ಇಂತಹ ವಿಶಯಗಳನ್ನು ತೆಗೆದುಕೊಂಡಾಗ; ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅವರವರ ಸ್ತಾನದಲ್ಲಿ ನಿಂತು ನೋಡಿದಾಗ; ಅದು ಬಿಡಿಸಲಾರದ ಕಗ್ಗಂಟಾಗಿ ವಿರೋದಾಬಾಸದಂತೆ(Paradox) ತೋರುತ್ತದೆ. ಆದರೆ ಇದನ್ನು ಚಿತ್ರದಲ್ಲಿ ರಿಶಬ್ ಶೆಟ್ರು ಚೆನ್ನಾಗಿಯೇ ತೂಗಿಸಿಕೊಂಡು ಸಾಗಿದ್ದಾರೆ. ಇದರ ಜೊತೆಗೆ ಸಮಾಜದ ಕೆಲವು ಹುಳುಕುಗಳನ್ನು; ಬಳಲಿದವರನ್ನು ಉಳ್ಳವರು, ಬಲಿತವರು ತಮ್ಮ ರಾಜಕೀಯಕ್ಕೆ ಹರಕೆ ಕುರಿಯಾಗಿ ಬಳಸುವುದು ಹೀಗೆ ಹಲವು ವಿಶಯಗಳನ್ನು ಬಹಳ ನಾಜೂಕಾಗಿ ಕೆಲವೊಂದು ಸೀನ್ ಮೂಲಕ ಹೇಳಿದ್ದಾರೆ ಕೂಡ! ರಿಶಬ್‍‍ ಅವರೊಳಗಿನ ನಿರ‍್ದೇಶಕ ಎಂಬುವವನ ಹಸಿವನ್ನು, ಆತನೊಳಗಿನ ನಟ ಎಂಬುವವನು ನೀಗಿಸಿದ್ದಾನೋ ಅತವಾ ಆತನಲ್ಲಿರುವ ನಟನೆಂಬುವನ ನಟನೆಯ ತುಡಿತವನ್ನು, ಅವನೊಳಗಿನ ನಿರ‍್ದೇಶಕ ಸಾಕಾರಗೊಳಿಸಿದ್ದಾನೋ ನೀವೇ ನೋಡಿ ತೀರ್‍ಮಾನಿಸಿ.

ರಿಶಬ್ ಅವರ ಕನಸಿನ ಕೂಸಿಗೆ, ನೀರಿನಂತೆ ದುಡ್ಡು ಎರೆದವರು, ಹೊಂಬಾಳೆ ಸಂಸ್ತೆಯವರು. ಕರುನಾಡ ಕರಾವಳಿಯ ಒಂದು ಸಂಸ್ಕ್ರುತಿ ಈ ಮೂಲಕ ಡಾಕ್ಯುಮೆಂಟ್ ಆದಂತೆ ಆಗಿದೆ. ಇದಕ್ಕೆ ಅವರಿಗೆ ನನ್ನ ಅಬಿನಂದನೆಗಳು. ರಿಶಬ್ ಅವರೇ ಕತೆ,ಚಿತ್ರಕತೆ,ನಿರ‍್ದೇಶನ ಮಾಡಿದ್ದಾರೆ. ಪ್ರಗತಿ ರಿಶಬ್ ಶೆಟ್ಟಿ ಅವರು ಪಾತ್ರಗಳಿಗೆ ತಕ್ಕುದಾದ ಬಟ್ಟೆಗಳನ್ನು ವಿನ್ಯಾಸಗೊಳಿಸಿದ್ದಾರೆ. ಅರವಿಂದ್ ಕಶ್ಯಪ್ ಅವರು ಚಿತ್ರವನ್ನು ತಮ್ಮ ಕ್ಯಾಮರಾದ ಕಣ್ಣುಗಳಲ್ಲಿ ಚೆನ್ನಾಗಿ ಸೆರೆಹಿಡಿದಿದ್ದಾರೆ ಅಲ್ಲದೆ ಚಿತ್ರದಲ್ಲಿನ ಲೈಟಿಂಗ್ ಕೂಡ ಚೆನ್ನಾಗಿದೆ. ಚಿತ್ರದಲ್ಲಿ ಸಾಕಶ್ಟು ಕಾಡಿನ, ಕತ್ತಲೆಯ ಸೀನ್ ಗಳು ಇವೆಯಾದ್ದರಿಂದ, ಬಣ್ಣಗಳ ಆಯ್ಕೆ ಮತ್ತು ಬೆಳಕಿನ ಆಟ ಚೆನ್ನಾಗಿ ಇರಲೇ ಬೇಕಾಗುತ್ತದೆ. ಚಿತ್ರದಲ್ಲಿ ಕಂಬಳದ ದ್ರುಶ್ಯಗಳಿದ್ದು, ರಿಶಬ್ ನುರಿತ ಪಟುವಿನಂತೆ ಕೋಣಗಳನ್ನು ಓಡಿಸಿದ್ದಾರೆ. ಕಡಿಮೆ ಸಮಯದಲ್ಲಿ ಇದನ್ನು ಕಲಿತು ಇಶ್ಟು ಚೆನ್ನಾಗಿ ಮಾಡಿದ್ದಾರೆ ಎನ್ನುವುದು ಅವರ ಕಸುವು ಮತ್ತು ಪರಿಶ್ರಮಕ್ಕೆ ಹಿಡಿದ ಕನ್ನಡಿಯಾಗಿದೆ. ಕೆಸರಿನಲ್ಲಿ ಸಾಗುವ ಹೊಡೆದಾಟ ಮತ್ತು ಕಂಬಳವನ್ನು ಅದ್ಬುತವಾಗಿ ಸೆರೆ ಹಿಡಿಯಲಾಗಿದೆ. ಹೊಡೆದಾಟದಲ್ಲಿ ಜನರು ಉರುಳಿದಂತೆ ಕ್ಯಾಮರಾ ನೋಟವೂ ಉರುಳುವುದು, ಮೇಲಿಂದ ತೆಗೆದ ಕೆಲವು ಶಾಟ್ ಗಳು ( ರಾತ್ರಿಯಲ್ಲಿ ಪಂಜು ಹಿಡಿದು ಸಾಗುವ ಶಾಟ್), ಕಡಿಮೆ ಬೆಳಕಿನಲ್ಲಿ ತೆಗೆದ ಕೆಲವು ಶಾಟ್, ಅಗಲವಾದ ನೋಟದ( Wide angle) ಶಾಟ್, ಹೀಗೆ ಕೆಲವು ಶಾಟ್‍ಗಳು ಚೆಂದದ ಚಿತ್ತಾರದಂತಿದ್ದು, ಕಾಡು ಮತ್ತು ಹಳ್ಳಿಯ ಸೊಬಗನ್ನು ತೋರಿಸುತ್ತದೆ. ಮಳೆ, ಕತ್ತಲು , ಕಾಡು ಇವುಗಳನ್ನೊಳಗೊಂಡ ಶಾಟ್ ಕಶ್ಟವಾದ ಶಾಟ್ ಗಳಾದರೂ ಇವುಗಳನ್ನು ಚೆನ್ನಾಗಿ ತೆಗೆದಿದ್ದಾರೆ. ಚಿತ್ರವನ್ನು ಚೆನ್ನಾಗಿ ತಿದ್ದಿದ್ದಾರೆ(Editing). ಅಜನೀಶ್ ಲೋಕ್‍‍ನಾತ್ ಅವರ ಹಿನ್ನೆಲೆ ಸಂಗೀತ, ರಿಶಬ್ ಕಟ್ಟಿಕೊಡುವ ಲೋಕದೊಳಗೆ ನೋಡುಗರನ್ನು ನೂಕಲು ಹೇಳಿಮಾಡಿಸಿದಂತಿದೆ. ವಿಜಯ್ ಪ್ರಕಾಶ್ ಮತ್ತು ಅನನ್ಯ ಬಟ್ ಅವರ ದನಿಯಲ್ಲಿ ಮೂಡಿಬಂದಿರುವ ‘ಸಿಂಗಾರ ಸಿರಿಯೇ’ ಒಂದೇ ಹಾಡಿನಲ್ಲಿ ಅಜನೀಶ್ ಅವರು ಹಲವು ಮಾದರಿ ಹಾಡಿನ ದಾಟಿಯನ್ನು ಪ್ರಯೋಗ ಮಾಡಿದಂತೆ ಕಾಣುತ್ತದೆ ಮತ್ತು ಇದರೊಳಗೆ ಕುಂದಾಪುರದ ಜನಪದದ ಒಂದು ಹಾಡನ್ನು ಕೂಡ ಚೆನ್ನಾಗಿ ಹೊಂದಿಸಿದ್ದಾರೆ.

ಬೂತ ಕೋಲ

ಬೂತಾರಾದನೆ (ಬೂತ ಕೋಲ/ನೇಮ) ಕರ‍್ನಾಟಕದ ಕರಾವಳಿಯಲ್ಲಿ ಸಾಗಿಕೊಂಡು ಬಂದಿರುವ ಆಚರಣೆ. ಆಯಾ ಊರನ್ನು, ಅಲ್ಲಿನ ಜನರನ್ನು ಮತ್ತು ಅವರ ಸುತ್ತಣ ಕಾಯುವುದು, ಅವರ ನಡುವೆ ಹುಟ್ಟಿಕೊಳ್ಳುವ ಸಮಸ್ಯೆಗಳನ್ನು ಬಗೆಹರಿಸುವುದು ಹೀಗೆ ಹಲವು ಕೆಲಸಗಳನ್ನು ಬೂತಗಳು(Divine spirits) ಮಾಡುತ್ತವೆ ಎಂಬ ನಂಬಿಕೆಗಳಿವೆ. ಒಂದೊಂದು ಬೂತಗಳು ಒಂದೊಂದು ಉದ್ದೇಶ ಮತ್ತು ವಿಶೇಶತೆಯನ್ನು ಹೊದಿರುತ್ತವೆ. ಇದು ಮೇಲ್ನೋಟಕ್ಕೆ ನಾನು ತಿಳಿದಿಕೊಂಡಿರುವುದು. ಇನ್ನು ಈ ಚಿತ್ರದಲ್ಲಿ ಪಂಜುರ‍್ಲಿ ಮತ್ತು ಗುಳಿಗ ಎಂಬ ಎರಡು ದೈವಗಳನ್ನು ಕಾಣಬಹುದು. ಗುಳಿಗ ದೈವವು ವೀರಾವೇಶ ತುಂಬಿದ ದೈವದಂತೆ ಕಾಣುತ್ತದೆ ಮತ್ತು ರಿಶಬ್ ಅವರ ಪಾತ್ರದ ಕಟ್ಟುವಿಕೆಯೂ ಅದೇ ಮಾದರಿಯಲ್ಲಿ ಇದೆ. ಇದು ಏಕೆ ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು. ಗುಳಿಗ ‘ಶಿವ’ ನ ಗಣಗಳಲ್ಲೊಂದು ಎಂಬ ನಂಬಿಕೆ ಕೆಲವರಲ್ಲಿ ಇದೆ. ಚಿತ್ರದಲ್ಲಿ ರಿಶಬ್ ಪಾತ್ರದ ಹೆಸರೂ ಕೂಡಾ ಶಿವ. ಬೂತ ಕೋಲದ ಕುಣಿತದ ದ್ರುಶ್ಯಗಳನ್ನು ರಾಜ್ ಬಿ ಶೆಟ್ಟಿಯವರು ನಿರ‍್ದೇಶಿಸಿದ್ದಾರೆ.

ಚಿತ್ರದ ನಾಯಕಿಯ ಪಾತ್ರದ ಹೆಸರು ಲೀಲಾ ಮತ್ತು ಶಿವಲೀಲಾರಿಗಾಗಿ ಚಿತ್ರದಲ್ಲಿ ಕೈಲಾಸ ಕೂಡಾ ಇದೆ. ನಾಯಕಿಯು ಕಾಡಿನ ಜನರಲ್ಲೇ ಒಬ್ಬಳಾಗಿದ್ದು, ಓದಿ ಅದೇ ಊರಿಗೆ ಪೇದೆಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಈ ಪಾತ್ರವು ಸರಕಾರದ ಪರ ಕರ‍್ತವ್ಯ ನಿರ‍್ವಹಣೆ ಮಾಡುವುದು ಮತ್ತು ತನ್ನೂರಿನ ಜನರ ಪರ ನಿಲ್ಲುವುದರ ನಡುವಿನ ಸರಿ ತಪ್ಪುಗಳ ತೊಳಲಾಟವನ್ನು ಕಟ್ಟಿಕೊಡುತ್ತದೆ. ನಾಯಕಿಯಾಗಿ ಹೊಸಪರಿಚಯ ಸಪ್ತಮಿ ಗೌಡ, ಚೆನ್ನಾಗಿ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಸನ್ನಿವೇಶಗಳು ಗಂಬೀರಗೊಂಡಂತೆ ಅದನ್ನು ತಿಳಿಮಾಡಲು ಚಿತ್ರದುದ್ದಕ್ಕೂ ನಗೆ ಚಟಾಕಿಗಳು ಇವೆ. ಇದನ್ನು ಸಾಮಾನ್ಯವಾಗಿ ರಿಶಬ್ ಅವರ ಎಲ್ಲಾ ಚಿತ್ರಗಳಲ್ಲೂ ಕಾಣಬಹುದು. ಅಚ್ಯೂತ್ ಕುಮಾರ‍್ ಅವರು ಎಂದಿನಂತೆ ಪಾತ್ರಕ್ಕೆ ಜೀವತುಂಬಿದ್ದಾರೆ. ಈ ಪಾತ್ರದ ಕಟ್ಟುವಿಕೆ ನಿಮಗೆ ಹಲವು ಸುಳಿವು ನೀಡಬಹುದು. ಕಿಶೋರ‍್ ಅವರು ಎಂದಿನಂತೆ ತಮ್ಮ ಸಹಜ ನಟನೆಯಿಂದ ಮನಗೆಲ್ಲುತ್ತಾರೆ ಮತ್ತು ಪಾತ್ರವು ಕರ‍್ತವ್ಯ/ಕಾಡಿನ ಬಗ್ಗೆ ಕಾಳಜಿ ಮತ್ತು ಊರಿನ ಜನರೊಡನೆ ತಿಕ್ಕಾಟ ಇವುಗಳನ್ನು ನಿಬಾಯಿಸುವುದರ ನಡುವಿನ ಹಗ್ಗಜಗ್ಗಾಟದಂತಿದೆ. ಶಿವನ ಸಂಗಡಿಗರು ಚಿತ್ರದುದ್ದಕ್ಕೂ ನಗಿಸುತ್ತಾರೆ. ಶಿವನ ತಾಯಿಯ ಪಾತ್ರವು ಚೆನ್ನಾಗಿ ಮೂಡಿಬಂದಿದೆ.

ಚಿತ್ರದ ಕೊನೆಯಲ್ಲಿ ರಿಶಬ್ ಅವರ ನಟನೆ ಮೈ ನವಿರೇಳಿಸುವಂತಿದೆ. ಕೊನೆಗೆ ಪ್ರಕ್ರುತಿ, ಆಳ್ವಿಕೆ ಮತ್ತು ಮನುಶ್ಯರ ನಡುವಣ ನಿಲ್ಲುವ ಸೇತುವೆಯನ್ನು ಕಟ್ಟುವುದು ಹೇಗೆ? ಎಂಬ ಉತ್ತರವನ್ನು ಕಂಡುಕೊಳ್ಳಲು ನೀವು ಚಿತ್ರ ನೋಡಬೇಕು. ಒಟ್ಟಿನಲ್ಲಿ ಕಾಂತಾರ(ನಿಗೂಡ ಕಾಡು) ಇದೊಂದು ದಂತಕತೆಯೇ ಆಗಿದೆ!. ಚಿತ್ರದ ಹಲವು ಶಾಟ್ ಗಳ ಬಗೆಗೆ ಮಾತಾಡಬೇಕೆಂದೆನಿಸಿದರೂ, ಚಿತ್ರದ ಕತಾಹಂದರ ಬಿಟ್ಟುಕೊಡಬಾರದ ಕಾರಣ ಇದನ್ನು ಇಲ್ಲಿಯೇ ನಿಲ್ಲಿಸುತ್ತೇನೆ. ಅಂದಹಾಗೆ ಚಿತ್ರ ಕೊನೆಗೊಂಡದನ್ನು ನೋಡಿದಾಗ, ಕಾಂತಾರ ಬಾಗ-2 ಬರುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ.

( ಚಿತ್ರಸೆಲೆ ಮತ್ತು ಮಾಹಿತಿ ಸೆಲೆ : hombalefilms.combillava.in )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *