ಒಕ್ಕಲಿಗ ಮುದ್ದಣ್ಣನ ವಚನದ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಕಸುಬು: ಹೊಲಗದ್ದೆತೋಟದಲ್ಲಿ ಉತ್ತು ಬಿತ್ತು ಬೆಳೆತೆಗೆಯುವ ಒಕ್ಕಲುತನ/ಬೇಸಾಯ
ವಚನಗಳ ಅಂಕಿತನಾಮ: ಕಾಮಭೀಮ ಜೀವಧನದೊಡೆಯ
ದೊರೆತಿರುವ ವಚನಗಳು: 12

***

ಪೈರಿಗೆ ನೀರು ಬೇಕೆಂಬಲ್ಲಿ
ಉಚಿತವನರಿದು ಬಿಡಬೇಕು
ಕ್ರೀಗೆ ಅರಿವು ಬೇಕೆಂಬಲ್ಲಿ
ಉಭಯನರಿದು ಘಟಿಸಬೇಕು
ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ
ಮೀರಿದರುಂಟೆ
ಕ್ರಿಯೆ ಬಿಡಲಿಲ್ಲ ಅರಿವ ಮರೆಯಲಿಲ್ಲ
ಬೆಳೆಯ ಕೊಯಿದ ಮತ್ತೆ ಹೊಲಕ್ಕೆ ಕಾವಲುಂಟೆ
ಫಲವ ಹೊತ್ತ ಪೈರಿನಂತೆ
ಪೈರನೊಳಕೊಂಡ ಫಲದಂತೆ
ಅರಿವು ಆಚರಣೆಯೆಲ್ಲ ನಿಂದು
ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ
ಕಾಮಭೀಮ ಜೀವಧನನೊಡೆಯನೆಂಬುದ ಭಾವಿಸಲಿಲ್ಲ.

***

ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ಅರಿವು ಮತ್ತು ಒಳ್ಳೆಯ ಕ್ರಿಯೆಯು ಒಂದರೊಡನೆ ಮತ್ತೊಂದು ಜತೆಗೂಡಿದಾಗ ವ್ಯಕ್ತಿಗೆ ಯಶಸ್ಸು ದೊರಕುತ್ತದೆ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಪೈರು=ಹೊಲಗದ್ದೆಗಳಲ್ಲಿ ದಾನ್ಯಗಳ ಬೀಜವನ್ನು ಬಿತ್ತಿದಾಗ ಬೆಳೆಯುವ ಸಸ್ಯ; ಬೇಕು+ಎಂಬ+ಅಲ್ಲಿ;

ಅಲ್ಲಿ=ಆ ಸಮಯದಲ್ಲಿ/ಕಾಲದಲ್ಲಿ; ಉಚಿತ+ಅನ್+ಅರಿದು; ಉಚಿತ=ಸರಿಯಾದ ಪ್ರಮಾಣದಲ್ಲಿ; ಅನ್=ಅನ್ನು; ಅರಿದು=ತಿಳಿದು; ಬಿಡಬೇಕು=ಹಾಯಿಸಬೇಕು ; ಕ್ರೀ=ಕ್ರಿಯೆ/ಕೆಲಸ ; ಕ್ರೀಗೆ=ಕ್ರಿಯೆಗೆ ; ಅರಿವು=ತಿಳುವಳಿಕೆ ; ಉಭಯ+ಅನ್+ಅರಿದು; ಉಭಯ=ಎರಡು; ಘಟಿಸು=ಹೊಂದಿಕೊಳ್ಳು/ಸೇರು ;

ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು… ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು=ಹೊಲಗದ್ದೆಗಳಲ್ಲಿ ಬೆಳೆಯುತ್ತಿರುವ ಬಗೆಬಗೆಯ ದವಸ ದಾನ್ಯಗಳ ಸಣ್ಣ ಪಯಿರುಗಳಿಗೆ ನೀರನ್ನು ಹಾಯಿಸುವಾಗ. ಪಯಿರುಗಳಿಗೆ ಹಾನಿಯಾಗದಂತೆ ಅಂದರೆ ಒಂದೇ ಬಾರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹಾಯಿಸಿದರೆ ಪಯಿರುಗಳು ಬುಡಸಮೇತ ಕೊಚ್ಚಿಹೋಗುತ್ತವೆ ಇಲ್ಲವೇ ಅತಿ ಕಡಿಮೆ ಪ್ರಮಾಣದಲ್ಲಿ ನೀರನ್ನು ಹಾಯಿಸಿದರೆ ಪಯಿರುಗಳ ಬೆಳವಣಿಗೆ ಕುಗ್ಗುತ್ತದೆ. ಆದ್ದರಿಂದ ಪಯಿರುಗಳು ಉಳಿದು ಚೆನ್ನಾಗಿ ತೆಂಡೆಯೊಡೆದು ಬೆಳೆಯುವುದಕ್ಕೆ ಅಗತ್ಯವಾದ ರೀತಿಯಲ್ಲಿ ನೀರನ್ನು ಹಾಯಿಸಬೇಕು ಎಂಬ ಅರಿವು ಮತ್ತು ಎಚ್ಚರವನ್ನು ಹೊಂದಿರಬೇಕು;

ಒಕ್ಕಲಿಗನು ಬೇಸಾಯ ಮಾಡುವಾಗ ಸಣ್ಣ ಪಯಿರುಗಳಿಗೆ ನೀರನ್ನು ಉಣಿಸುವ ಕ್ರಿಯೆಯನ್ನು ಒಂದು ರೂಪಕವನ್ನಾಗಿ ಚಿತ್ರಿಸುತ್ತಾ, ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡುವಾಗ ಅದನ್ನು ಹೇಗೆ ಮಾಡಬೇಕು ಎಂಬುದನ್ನು ಮೊದಲು ಚೆನ್ನಾಗಿ ಅರಿತುಕೊಂಡು, ಅನಂತರ ಸನ್ನಿವೇಶಕ್ಕೆ ತಕ್ಕಂತೆ ಕ್ರಿಯೆಯಲ್ಲಿ ತೊಡಗಬೇಕು. ಹೀಗೆ ಅರಿವು ಮತ್ತು ಕ್ರಿಯೆಯು ಒಳ್ಳೆಯ ಉದ್ದೇಶದಿಂದ ಸರಿಯಾದ ರೀತಿಯಲ್ಲಿ ಒಂದಕ್ಕೊಂದು ಪೂರಕವಾಗಿದ್ದಾಗ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂಬುದನ್ನು ಹೇಳಲಾಗಿದೆ;

ಏರಿ=ಹರಿದು ಹೋಗುತ್ತಿರುವ ಹೆಚ್ಚಿನ ಪ್ರಮಾಣದ ನೀರನ್ನು ತಡೆಹಿಡಿದು ಕೆರೆಯನ್ನು ಕಟ್ಟುವಾಗ ನಿರ‍್ಮಿಸುವ ಕಟ್ಟೆ ; ಹಿಡಿ+ಅನ್ನಕ್ಕ; ಹಿಡಿ=ಒಳಗೊಳ್ಳು; ಅನ್ನಕ=ವರೆಗೆ; ಸುಖ+ಅಲ್ಲದೆ; ಸುಖ=ನೆಮ್ಮದಿ/ಒಳ್ಳೆಯದು ; ಅಲ್ಲದೆ=ಹಾಗೆ ಮಾಡದೆ ; ಮೀರಿದರೆ+ಉಂಟೆ; ಮೀರು=ಕಡೆಗಣಿಸು ; ಮೀರಿದರುಂಟೆ=ಕಡೆಗಣಿಸಿದರೆ ಆಗುತ್ತದೆಯೇ;

ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ… ಮೀರಿದರುಂಟೆ=ಕಟ್ಟೆಯ ಕಸುವಿಗೆ ತಕ್ಕಂತೆ ಕೆರೆಯಲ್ಲಿ ನೀರನ್ನು ತುಂಬಿಸಿದರೆ ಸರಿ. ಇಲ್ಲದಿದ್ದರೆ ಏರಿಯು ಹಾಳಾಗುತ್ತದೆ; ಅಂದರೆ ಕೆರೆಯಲ್ಲಿ ಹೆಚ್ಚಾದ ನೀರು ಹರಿದುಹೋಗಲು ಕೋಡಿಯನ್ನು ನಿರ‍್ಮಿಸದೆ, ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕೆರೆಯಲ್ಲಿ ತುಂಬಿಸಿದರೆ, ಕಟ್ಟೆಯು ಬಿರುಕುಬಿಟ್ಟು ಕೆಲವೇ ದಿನಗಳಲ್ಲಿ ಏರಿಯು ಒಡೆದುಹೋಗುತ್ತದೆ. ಆದ್ದರಿಂದ ಕಟ್ಟೆಯು ಹಾಳಾಗದಂತೆ ನೀರನ್ನು ತುಂಬಿಸಬೇಕು ಎಂಬ ಅರಿವು ಮತ್ತು ಎಚ್ಚರವಿರಬೇಕು;

ಕ್ರಿಯೆ ಬಿಡಲಿಲ್ಲ… ಅರಿವ ಮರೆಯಲಿಲ್ಲ=ಕೆರೆಗೆ ಏರಿಯನ್ನು ಕಟ್ಟುವಾಗ ವ್ಯಕ್ತಿಯು ವಹಿಸುವ ಎಚ್ಚರದಂತೆಯೇ ಜೀವನದಲ್ಲಿ ಯಾವುದೇ ದುಡಿಮೆಯನ್ನು ಮಾಡುವಾಗ, ಆ ದುಡಿಮೆಯ ಬಗ್ಗೆ ಮೊದಲು ಒಳ್ಳೆಯ ತಿಳುವಳಿಕೆಯನ್ನು ತನ್ನದಾಗಿಸಿಕೊಳ್ಳಬೇಕು. ಅನಂತರ ಅರಿವನ್ನು ಅಳವಡಿಸಿಕೊಂಡು ಕೆಲಸವನ್ನು ಮಾಡಬೇಕು. ಅಂದರೆ ಅರಿವು ಮತ್ತು ಆಚರಣೆಗಳು ಒಂದರೊಡನೆ ಮತ್ತೊಂದು ಸಮಪ್ರಮಾಣದಲ್ಲಿ ಜತೆಗೂಡಿರಬೇಕು; ಅರಿವಿಲ್ಲದೆ ಮಾಡುವ ಕ್ರಿಯೆಯಿಂದ ಇಲ್ಲವೇ ಕ್ರಿಯೆಯಲ್ಲಿ ತೊಡಗದೆ ಕೇವಲ ಅರಿವನ್ನು ಪಡೆದ ಮಾತ್ರದಿಂದಲೇ ಜೀವನದಲ್ಲಿ ಯಶಸ್ಸು ದೊರೆಯುವುದಿಲ್ಲ;

ಕೊಯ್=ಕತ್ತರಿಸು/ಕೊಯ್ಯು/ಕುಯ್ಯು; ಕಾವಲು=ಕಾಯುವಿಕೆ/ಇತರರು ಕಳವು ಮಾಡದಂತೆ ಮತ್ತು ಹಕ್ಕಿಗಳು ಹಾಗೂ ಇನ್ನಿತರ ಪ್ರಾಣಿಗಳಿಂದ ವಸ್ತುಗಳನ್ನು ಕಾಪಾಡುವುದು;

ಬೆಳೆಯ ಕೊಯಿದ ಮತ್ತೆ ಹೊಲಕ್ಕೆ ಕಾವಲುಂಟೆ=ತೆನೆ ತುಂಬಿ ಹಣ್ಣಾದ ಪಯಿರನ್ನು ಕುಯ್ದು ಒಕ್ಕಣೆ ಮಾಡಿ ಬೆಳೆಯನ್ನು ಪಡೆದ ನಂತರ, ಯಾವ ಬೆಳೆಯೂ ಇಲ್ಲದ ಹೊಲವನ್ನು ಕಾಯಬೇಕಾದ ಅಗತ್ಯವಿಲ್ಲ; ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಹೊಲಗದ್ದೆಯಲ್ಲಿ ಬೆಳೆಯನ್ನು ಒಡ್ಡಿದಾಗ ಬೇಸಾಯಗಾರನು ಎಚ್ಚರದಿಂದ ಇರುವಂತೆಯೇ ಯಾವುದೇ ಒಂದು ಕ್ರಿಯೆಯಲ್ಲಿ ವ್ಯಕ್ತಿಯು ತೊಡಗಿದಾಗ, ಅದು ಮುಗಿದು ಕಯ್ಗೂಡುವ ತನಕ ಎಚ್ಚರಿದಿಂದ ಇರಬೇಕು;

ಫಲ=ಹಣ್ಣಾದ ಬೆಳೆ ; ಹೊರು=ತಳೆ/ಹೊಂದು ; ಪೈರು+ಅಂತೆ;

ಫಲವ ಹೊತ್ತ ಪೈರಿನಂತೆ=ತೆನೆತುಂಬಿ ಬೆಳೆದು ಕುಯ್ಲಿಗೆ ಬಂದಿರುವ ಪಯಿರಿನಂತೆ;

ಪೈರನು+ಒಳಕೊಂಡ; ಫಲ+ಅಂತೆ;

ಪೈರನೊಳಕೊಂಡ ಫಲದಂತೆ=ಪಯಿರಿನ ತುತ್ತತುದಿಯಲ್ಲಿ ಕಂಗೊಳಿಸುತ್ತಿರುವ ಹಣ್ಣಾದ ಬೆಳೆಯಂತೆ;

ಆಚರಣೆ+ಎಲ್ಲ; ಆಚರಣೆ=ಕ್ರಿಯೆ ; ನಿಂದು=ನೆಲೆಗೊಂಡು ; ಲೇಪನ+ಆದ; ಲೇಪನ=ಬಳಿಯುವಿಕೆ/ಹಚ್ಚುವಿಕೆ/ಸೇರುವಿಕೆ ; ಮತ್ತೆ=ಪುನಹ/ನಂತರ/ತರುವಾಯ ;

ಫಲವ ಹೊತ್ತ ಪೈರಿನಂತೆ… ಪೈರನೊಳಕೊಂಡ ಫಲದಂತೆ… ಅರಿವು ಆಚರಣೆಯೆಲ್ಲ ನಿಂದು… ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ=ಬೆಳೆದು ಹಣ್ಣಾದ ಪಯಿರಿನಲ್ಲಿ ತುಂಬಿದ ತೆನೆಯು ಒಂದಾಗಿರುವಂತೆ ಅರಿವು ಮತ್ತು ಆಚರಣೆಗಳು ಒಂದರೊಡನೆ ಮತ್ತೊಂದು ಜತೆಗೂಡಿದ ನಂತರ;

ಕಾಮಭೀಮ ಜೀವಧನ+ಅನ್+ಒಡೆಯನ್+ಎಂಬುದ; ಭಾವಿಸು+ಇಲ್ಲ ; ಕಾಮಭೀಮ ಜೀವಧನದೊಡೆಯ=ಶಿವನಿಗಿದ್ದ ಮತ್ತೊಂದು ಹೆಸರು; ಎಂಬುದ=ಎನ್ನುವುದನ್ನು; ಭಾವಿಸು=ತಿಳಿ/ಆಲೋಚಿಸು;

ಕಾಮಭೀಮ ಜೀವಧನದೊಡೆಯನೆಂಬುದ ಭಾವಿಸಲಿಲ್ಲ= ವ್ಯಕ್ತಿಯ ಬದುಕಿನಲ್ಲಿ ಅರಿವು ಮತ್ತು ಆಚರಣೆಗಳು ಜತೆಗೂಡಿರುವ ಎಡೆಯಲ್ಲಿ ಶಿವನಿದ್ದಾನೆಯೇ ಹೊರತು ಕಲ್ಲು/ಮಣ್ಣು/ಮರ/ಲೋಹದ ವಿಗ್ರಹ ರೂಪದಲ್ಲಿ ಇಲ್ಲವೆಂಬ ನಿಲುವನ್ನು ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಹೊಂದಿದ್ದರು ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ;

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: