ಗಜೇಶ ಮಸಣಯ್ಯಗಳ ಪುಣ್ಯ ಸ್ತ್ರೀ ವಚನದ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ವಚನಕಾರ‍್ತಿಯ ಹೆಸರು: ತಿಳಿದುಬಂದಿಲ್ಲ.
ಗಂಡ: ಗಜೇಶ ಮಸಣಯ್ಯ
ವಚನಗಳ ಅಂಕಿತನಾಮ: ಮಸಣಪ್ರಿಯ ಗಜೇಶ್ವರ
ದೊರೆತಿರುವ ವಚನಗಳು: 10

***

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು
ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ
ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ
ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು
ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ
ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು
ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ
ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು
ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ
ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು
ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ
ಇದು ಕಾರಣ
ಪರಂಜ್ಯೋತಿ ಪರಮ ಕರುಣಿ
ಪರಮ ಶಾಂತನೆಂಬ ಲಿಂಗವು
ಕೋಪದ ಮುನಿಸನರಿದಡೆ ಕಾಣಬಹುದು
ಮರೆದಡೆ ಕಾಣಬಾರದು
ಅರಿವಿಂದ ಕಂಡೊದಗಿದ ಸುಖವು
ಮಸಣಪ್ರಿಯ ಗಜೇಶ್ವರಾ.

***

ಒಳ್ಳೆಯ ಅರಿವನ್ನು ಪಡೆದು, ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ಕಾಯಕದ ಮೂಲಕ ತನ್ನ ಜೀವನವನ್ನು ರೂಪಿಸಿಕೊಳ್ಳುವ ವ್ಯಕ್ತಿಯು ಯಾವುದೇ ಬಗೆಯ ವಿರಕ್ತಿಯನ್ನು ಹೊಂದದೆ , ಜಗತ್ತಿನಲ್ಲಿ ಎಲ್ಲದರೊಡನೆ ಮತ್ತು ಎಲ್ಲರೊಡನೆ ಜತೆಗೂಡಿ ಬಾಳಬೇಕೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

‘ವಿರಕ್ತಿ’ ಎಂದರೆ “ಹೆಣ್ಣು ಹೊನ್ನು ಮಣ್ಣುಗಳಿಂದ ದೂರವಿರುವುದು; ದೇಹದಲ್ಲಿ ತುಡಿಯುವ ಪಂಚೇಂದ್ರಿಯಗಳನ್ನು ದಮನ ಮಾಡಿ ಉಪವಾಸ, ಜಾಗರಣೆ, ಜಪತಪಗಳಿಂದ ದೇಹವನ್ನು ದಂಡಿಸುವುದು; ಜಗತ್ತಿನ ಜನಸಮುದಾಯದೊಡನೆ ಜತೆಗೂಡದೆ ಏಕಾಂಗಿಯಾಗಿ ಇರುವುದು.”

ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಇಂತಹ ವಿರಕ್ತಿಯನ್ನು ನಿರಾಕರಿಸಿದ್ದರು. ಏಕೆಂದರೆ ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಒಳ್ಳೆಯ ನಡೆನುಡಿಗಳಿಂದ ಕೂಡಿ ಕ್ರಿಯಾಶೀಲನಾಗಿ ಬಾಳುವಂತಾಗಬೇಕೆ ಹೊರತು ವಿರಕ್ತನಾಗಿ ಲೋಕ ವ್ಯವಹಾರಗಳಿಂದ ದೂರಸರಿಯಬಾರದು ಎಂಬ ನಿಲುವನ್ನು ಹೊಂದಿದ್ದರು.

ಆದ್ದರಿಂದಲೇ ಅವರ ಪಾಲಿನ ದೇವರಾದ ಶಿವನು ಕಲ್ಲು, ಮಣ್ಣು, ಮರ, ಲೋಹದಿಂದ ಮಾಡಿದ ವಿಗ್ರಹ ರೂಪಿಯಾಗಿರಲಿಲ್ಲ. ಜನರು ನಿತ್ಯ ಜೀವನದಲ್ಲಿ ಆಚರಿಸುವ ಒಳ್ಳೆಯ ನಡೆನುಡಿಗಳಲ್ಲಿ ಶಿವನ ಪ್ರತಿರೂಪವನ್ನು ಅವರು ಕಾಣುತ್ತಿದ್ದರು. ಆದ್ದರಿಂದಲೇ ಶಿವಶರಣಶರಣೆಯರು ಹೆಣ್ಣು ಹೊನ್ನು ಮಣ್ಣನ್ನು ನಿರಾಕರಿಸದೆ, ಅವುಗಳೊಡನೆ ಜತೆಗೂಡಿ ಸಾಮರಸ್ಯದಿಂದ ಬಾಳಿದರು.

ಜಗತ್ತಿನಲ್ಲಿ ಮನುಕುಲ ಉಳಿದು ಬೆಳೆದು ಬಾಳುವುದಕ್ಕೆ ಗಂಡು ಮತ್ತು ಹೆಣ್ಣು ಇಬ್ಬರೂ ಇರಲೇ ಬೇಕು; ಪ್ರತಿಯೊಬ್ಬ ಮಾನವ ಜೀವಿಯು ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ ಮತ್ತು ಆರೋಗ್ಯವನ್ನು ಪಡೆಯಬೇಕಾದರೆ , ಎಲ್ಲ ಬಗೆಯ ದವಸ ದಾನ್ಯಗಳನ್ನು ಕೊಡುವ ‘ಮಣ್ಣು’ ಅಂದರೆ ‘ಬೂಮಿ’ ಬೇಕೇ ಬೇಕು ಮತ್ತು ಮನುಕುಲದ ವ್ಯವಹಾರ ನಡೆಯಬೇಕಾದರೆ ಹೊನ್ನು ಅಂದರೆ ಸಂಪತ್ತು ಬೇಕು.

“ಹೆಣ್ಣು ಹೊನ್ನು ಮಣ್ಣನ್ನು ಬೇಡ” ಎನ್ನುವವರಲ್ಲಿ ಬಹುತೇಕ ಮಂದಿ ಹೊರನೋಟಕ್ಕೆ ವಿರಕ್ತರಂತೆ ನಟಿಸುತ್ತ, ತಮ್ಮ ಒಳ ಬದುಕಿನಲ್ಲಿ ಇವೆಲ್ಲಕ್ಕೂ ಹಂಬಲಿಸುತ್ತ, ಜನರನ್ನು ಮರುಳುಮಾಡುವುದರ ಜತೆಗೆ ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತ, ನಿತ್ಯ ಜೀವನದಲ್ಲಿ ಕಪಟಿಗಳಾಗಿ ಬಾಳುತ್ತಿರುತ್ತಾರೆ. ಮಾನವ ಸಹಜವಾದ ನಡೆನುಡಿಗಳಿಂದ ದೂರವಾಗಿ, ಬದುಕಿನ ಉದ್ದಕ್ಕೂ ವಿರಕ್ತಿಯ ಮೊಗವಾಡವನ್ನು ತೊಟ್ಟುಕೊಂಡು ‘ ಹೊರಗೊಂದು-ಒಳಗೊಂದು ’ ಎಂಬ ಇಬ್ಬಗೆಯ ಬದುಕನ್ನು ನಡೆಸುತ್ತಿರುತ್ತಾರೆ. ವಿರಕ್ತಿಯ ಉಡುಗೆ ತೊಡುಗೆಯನ್ನು ತೊಟ್ಟು, ಜಾತಿಮತದ ಒಕ್ಕೂಟಗಳನ್ನು ಮುನ್ನಡೆಸುತ್ತಿರುವ ವ್ಯಕ್ತಿಗಳು ದೊಡ್ಡ ಪ್ರಮಾಣದ ಆಸ್ತಿಪಾಸ್ತಿಗಳ ಜವಾಬ್ದಾರಿಯನ್ನು ಹೊತ್ತುಕೊಂಡು ಆಡಂಬರದ ಜೀವನಕ್ಕೆ ಮನಸೋತಿದ್ದಾರೆ.

ಯಾವೊಬ್ಬ ಮಾನವ ಜೀವಿಯು ಹುಟ್ಟಿನಿಂದ ಸಾವಿನ ಕೊನೆಗಳಿಗೆಯ ತನಕ ಪಂಚೇಂದ್ರಿಯಗಳ ಸಂವೇದನೆಗೆ ಒಳಗಾಗದೆ ಇರಲು ಆಗುವುದಿಲ್ಲ. ಆದ್ದರಿಂದ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಬಾಳುವುದನ್ನು ಕಲಿಯಬೇಕೆ ಹೊರತು, “ಇಂದ್ರಿಯಗಳ ಸಂವೇದನೆಗಳಿಗೆ ನಾನು ಒಳಗಾಗುವುದಿಲ್ಲ” ಎಂಬುದು ಬೂಟಾಟಿಕೆಯ ಮಾತಾಗುತ್ತದೆ. ಇದೆಲ್ಲವನ್ನೂ ಗಮನಿಸಿದ್ದ ಶಿವಶರಣಶರಣೆಯರು “ವ್ಯಕ್ತಿಯ ಒಳ್ಳೆಯ ನಡೆನುಡಿಗಳಿಗೆ ಹೆಣ್ಣು ಮಣ್ಣು ಹೊನ್ನು ಎಂದಿಗೂ ಅಡ್ಡಿಯಾಗುವುದಿಲ್ಲ. ಅವುಗಳೊಡನೆ ಹಿತಮಿತವಾಗಿ ಸಂಯಮದಿಂದ ಬಾಳುವ ಅರಿವು ಮತ್ತು ಎಚ್ಚರವನ್ನು ಹೊಂದಿರಬೇಕು” ಎಂಬ ನಿಲುವನ್ನು ತಳೆದಿದ್ದರು.

ಜಗತ್ತಿನಲ್ಲಿ ಮಾನವ ಸಮುದಾಯವು ಒಲವು ನಲಿವು ನೆಮ್ಮದಿಯಿಂದ ಬಾಳಬೇಕಾದರೆ ಅಗತ್ಯವಾಗಿ ಬೇಕಾಗಿರುವುದು “ಪರಸ್ಪರ ಪ್ರೀತಿ, ಕರುಣೆ ಮತ್ತು ಗೆಳೆತನದಿಂದ ಕೂಡಿದ ನಡೆನುಡಿ” ಎಂಬುದನ್ನು ಶಿವಶರಣಶರಣೆಯರು ಅರಿತು ಆಚರಿಸುತ್ತಿದ್ದರು. ಆದ್ದರಿಂದಲೇ ಅವರ ಲಿಂಗವನ್ನು ಅಂದರೆ ಶಿವನನ್ನು “ಕೋಪತಾಪಗಳಿಲ್ಲದ, ಕರುಣೆಯಿಂದ ಕೂಡಿದ ಶಾಂತರೂಪದ ಜನರ ನಡೆನುಡಿಗಳಲ್ಲಿ ಕಾಣುತ್ತಾರೆ.”

ಹೊನ್ನು=ಚಿನ್ನ/ಸಂಪತ್ತು ; ಬಿಟ್ಟು=ತ್ಯಜಿಸಿ/ತೊರೆದು ; ಲಿಂಗವನು+ಒಲಿಸಬೇಕು+ಎಂಬರು; ಲಿಂಗ=ಶಿವ ; ಒಲಿಸು=ಮೆಚ್ಚಿಸು ;

ಲಿಂಗವನು ಒಲಿಸಿಕೊಳ್ಳುವುದು=ವ್ಯಕ್ತಿಯು ಜೀವನದಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳುವುದರ ಮೂಲಕ ಲಿಂಗದ ಮೆಚ್ಚುಗೆಗೆ ಪಾತ್ರನಾಗುವುದು; ಎಂಬರು=ಎನ್ನುವರು ; ವಿರುದ್ಧ=ಬೇರೆಯಾದುದು/ಅಡ್ಡಿಯಾಗಿರುವುದು ;

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು… ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ=ಲಿಂಗವನ್ನು ಒಲಿಸಿಕೊಳ್ಳಲು ಹೊನ್ನನ್ನು/ಸಂಪತ್ತನ್ನು ಬಿಡಬೇಕೆಂದು ಎನ್ನುತ್ತಾರಲ್ಲ… ಲಿಂಗವನ್ನು ಒಲಿಸಿಕೊಳ್ಳುವಾಗ ಹೊನ್ನು ಹೇಗೆ ತಾನೆ ಅಡ್ಡಬರುತ್ತದೆ ; ಹೆಣ್ಣು=ಹೆಂಗಸು ; ಮಣ್ಣು=ಬೂಮಿ ;

ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು… ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ=ಲಿಂಗವನ್ನು ಒಲಿಸಿಕೊಳ್ಳಲು ಹೆಣ್ಣನ್ಣು ಬಿಡಬೇಕೆಂದು ಎನ್ನುತ್ತಾರಲ್ಲ… ಲಿಂಗವನ್ನು ಒಲಿಸಿಕೊಳ್ಳುವಾಗ ಹೆಣ್ಣು ಹೇಗೆ ತಾನೆ ಅಡ್ಡಬರುತ್ತದೆ ;

ಮಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ= ಲಿಂಗವನ್ನು ಒಲಿಸಿಕೊಳ್ಳಲು ಮಣ್ಣನ್ನು ಬಿಡಬೇಕೆಂದು ಎನ್ನುತ್ತಾರಲ್ಲ… ಲಿಂಗವನ್ನು ಒಲಿಸಿಕೊಳ್ಳುವಾಗ ಮಣ್ಣು ಹೇಗೆ ತಾನೆ ಅಡ್ಡಬರುತ್ತದೆ ;

ಅಂಗ=ದೇಹ ; ಇಂದ್ರಿಯಗಳು=ನೋಡುವ ಕಣ್ಣು, ಕೇಳುವ ಕಿವಿ,ಸವಿಯುವ ನಾಲಗೆ, ಮುಟ್ಟುವ ತೊಗಲು, ವಾಸನೆಯನ್ನು ಗ್ರಹಿಸುವ ಮೂಗು ಎಂಬ ಅಯ್ದು ಬಗೆಯ ಅವಯವಗಳು ;

ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ=ಲಿಂಗವನ್ನು ಒಲಿಸಿಕೊಳ್ಳಲು ದೇಹವನ್ನು ಬಿಡಬೇಕೆಂದು ಎನ್ನುತ್ತಾರಲ್ಲ… ಲಿಂಗವನ್ನು ಒಲಿಸಿಕೊಳ್ಳುವಾಗ ದೇಹ ಹೇಗೆ ತಾನೆ ಅಡ್ಡಬರುತ್ತದೆ ;

ಇಂದ್ರಿಯಂಗಳ ಬಿಟ್ಟು ಲಿಂಗವನೊಲಿಸಬೇಕೆಂಬರು ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ=ಲಿಂಗವನ್ನು ಒಲಿಸಿಕೊಳ್ಳಲು ಪಂಚೇಂದ್ರಿಯಗಳನ್ನು ಬಿಡಬೇಕೆಂದು ಎನ್ನುತ್ತಾರಲ್ಲ… ಲಿಂಗವನ್ನು ಒಲಿಸಿಕೊಳ್ಳುವಾಗ ಇಂದ್ರಿಯಗಳು ಹೇಗೆ ತಾನೆ ಅಡ್ಡಬರುತ್ತವೆ ;

ಜಗ=ಪ್ರಪಂಚ/ಜೀವನದಲ್ಲಿನ ವ್ಯವಹಾರ ;

ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ= ಲಿಂಗವನ್ನು ಒಲಿಸಿಕೊಳ್ಳಲು ಜಗವನ್ನು ಬಿಡಬೇಕೆಂದು ಎನ್ನುತ್ತಾರಲ್ಲ… ಲಿಂಗವನ್ನು ಒಲಿಸಿಕೊಳ್ಳುವಾಗ ಜಗತ್ತು ಹೇಗೆ ತಾನೆ ಅಡ್ಡಬರುತ್ತದೆ ;

ಪರಂಜ್ಯೋತಿ=ಅಪಾರವಾದ ತೇಜಸ್ಸುಳ್ಳವನು ; ಪರಮ=ಅತ್ಯುತ್ತಮ ; ಕರುಣಿ=ದಯೆಯುಳ್ಳವನು ; ಶಾಂತ=ತಳಮಳವಿಲ್ಲದಿರುವುದು; ಶಾಂತನು=ತಳಮಳವಿಲ್ಲದೆ ನೆಮ್ಮದಿಯಿಂದಿರುವವನು ;

ಪರಂಜ್ಯೋತಿ ಪರಮ ಕರುಣಿ ಪರಮ ಶಾಂತನೆಂಬ ಲಿಂಗವು=ಲಿಂಗದ ಚೇತನವು ಕಲ್ಲು/ಮಣ್ಣು/ಲೋಹ/ಮರದ ರೂಪದ ವಿಗ್ರಹದಲ್ಲಿಲ್ಲ. ಮಾನವರ ಪರಸ್ಪರ ಒಲವು, ಕರುಣೆ, ಗೆಳೆತನದಿಂದ ಕೂಡಿದ ಶಾಂತಚಿತ್ತದ ನಡೆನುಡಿಗಳ ರೂಪದಲ್ಲಿ ನೆಲೆಸಿದೆ;

ಕೋಪ=ಸಿಟ್ಟು ; ಮುನಿಸು+ಅನ್+ಅರಿದಡೆ; ಮುನಿಸು=ಇತರರಿಂದ ದೂರವಿರುವುದು ; ಅನ್=ಅನ್ನು ; ಅರಿದಡೆ=ತಿಳಿದರೆ ; ಕಾಣು=ನೋಡು/ಚಿಂತಿಸಿ ತಿಳಿ ; ಮರೆದಡೆ=ಮರೆತುಬಿಟ್ಟರೆ ;

ಕೋಪದ ಮುನಿಸನರಿದಡೆ ಕಾಣಬಹುದು=ವ್ಯಕ್ತಿಯ ಕೋಪತಾಪದ ನಡೆನುಡಿಗಳಿಗೆ ಕಾರಣವಾದ ಸಂಗತಿಗಳನ್ನು ಮತ್ತು ಅದರಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ಅರಿತುಕೊಂಡಾಗ ಜೀವನದಲ್ಲಿನ ಎಲ್ಲ ಬಗೆಯ ಸಂಕಟಕ್ಕೆ ವ್ಯಕ್ತಿಯ ಮನಸ್ಸಿನಲ್ಲಿ ಮೂಡುವ ಒಳಮಿಡಿತಗಳೇ ಕಾರಣ ಎಂಬ ದಿಟದ ಅರಿವಾಗುತ್ತದೆ;

ಮರೆದಡೆ ಕಾಣಬಾರದು=ವ್ಯಕ್ತಿಯು ತನ್ನ ನಡೆನುಡಿಗಳನ್ನು ತಾನೇ ಒರೆಹಚ್ಚಿ ನೋಡಿಕೊಳ್ಳುವುದನ್ನು ಮರೆತರೆ, ಜೀವನದಲ್ಲಿ ಯಾವುದು ಸರಿ-ಯಾವುದು ತಪ್ಪು; ಯಾವುದು ಒಳಿತು-ಯಾವುದು ಕೆಡುಕು ಎಂಬುದನ್ನು ತಿಳಿಯಲು ಆಗುವುದಿಲ್ಲ;

ಅರಿವಿಂದ=ತಿಳುವಳಿಕೆಯಿಂದ ; ಕಂಡು+ಒದಗಿದ; ಒದಗು=ಉಂಟಾಗು/ದೊರಕು ; ಸುಖ=ಒಲವು ನಲಿವು ನೆಮ್ಮದಿಯ ಬದುಕು ;

ಅರಿವಿಂದ ಕಂಡೊದಗಿದ ಸುಖವ=ವ್ಯಕ್ತಿಯು ಒಳ್ಳೆಯ ಅರಿವನ್ನು ಪಡೆದುಕೊಂಡು, ಅದನ್ನು ಜೀವನದಲ್ಲಿ ಆಚರಣೆಗೆ ತಂದಾಗ ಮಾತ್ರ, ಒಲವು ನಲಿವು ನೆಮ್ಮದಿಯ ಬದುಕನ್ನು ಪಡೆಯುತ್ತಾನೆ. ಇಂತಹ ಜೀವನಕ್ಕೆ ಹೆಣ್ಣು ಮಣ್ಣು ಹೊನ್ನು ಪೂರಕವಾಗಿ ಬರುತ್ತವೆಯೇ ಹೊರತು ಅಡ್ಡಿಯಾಗುವುದಿಲ್ಲ ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು;

ಮಸಣಪ್ರಿಯ ಗಜೇಶ್ವರಾ=ಶಿವನ ಮತ್ತೊಂದು ಹೆಸರು/ವಚನಕಾರ‍್ತಿಯ ವಚನಗಳ ಅಂಕಿತನಾಮ ;

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks