ಪಿ.ಸಿ. ಪೊನ್ನಪ್ಪ: ಮಿಂಚಿನ ಓಟಗಾರ
ಕರ‍್ನಾಟಕದ ಕೊಡಗು ಪ್ರದೇಶ ಐತಿಹಾಸಿಕವಾಗಿ ಬಾರತದ ಸೇನೆಗೆ ಬಲ ತುಂಬುವುದರೊಟ್ಟಿಗೆ ಆಟೋಟಗಳಲ್ಲಿ, ಅದರಲ್ಲೂ ಮುಕ್ಯವಾಗಿ ಹಾಕಿ, ಟೆನ್ನಿಸ್ ಹಾಗೂ ಅತ್ಲೆಟಿಕ್ಸ್ ನಲ್ಲಿ ಸಾಕಶ್ಟು ಶ್ರೇಶ್ಟ ಆಟಗಾರರನ್ನು ರಾಜ್ಯಕ್ಕೆ ಹಾಗೂ ದೇಶಕ್ಕೆ ಕೊಡುಗೆಯಾಗಿ ನೀಡುತ್ತಾ ಬಂದಿದೆ. ಈ ಪ್ರತೀತಿ ಇಂದಿಗೂ ಮುಂದುವರೆದಿರುವುದು ಕಂಡಿತ ನಲಿವಿನ ವಿಶಯವೇ! ಕೊಡಗಿನ ಈ ಬವ್ಯ ಪರಂಪರೆಯ ಪ್ರಮುಕ ಆಟಗಾರ ಎಂದೇ ಗುರುತಿಸಿಕೊಂಡು ಅತ್ಯಂತ ಕಡಿಮೆ ಅವದಿಯಲ್ಲಿ ರಾಶ್ಟ್ರ ಮಟ್ಟದಲ್ಲಿ ಹಲವಾರು ದಾಕಲೆ ಮಾಡಿದವರೇ ದೇಶ ಕಂಡ ಮಿಂಚಿನ ಸ್ಪ್ರಿಂಟರ್ ಪಿ.ಸಿ ಪೊನ್ನಪ್ಪ ಅವರು. 1960 ಹಾಗೂ 70 ರ ದಶಕದಲ್ಲಿ ಕಣಕ್ಕಿಳಿದರೆ ಸಾಕು ಪದಕ ಕಟ್ಟಿಟ್ಟ ಬುತ್ತಿ ಎಂಬಂತೆ ಓಡಿ ಬರವಸೆಯ ಬೆಳಕಾಗಿದ್ದ ಈ ಉನ್ನತ ದರ‍್ಜೆಯ ಓಟಗಾರ ನಿಜಕ್ಕೂ ಕರ‍್ನಾಟಕದ ಹೆಮ್ಮೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹುಟ್ಟು- ಎಳವೆಯಲ್ಲೇ ಆಟೋಟಗಳ ಗೀಳು
1947 ರಲ್ಲಿ ಕರ‍್ನಾಟಕದ ಕೊಡಗಿನಲ್ಲಿ ಪೊನ್ನಪ್ಪ ಒಂದು ಕಾಪಿ ಬೆಳೆಗಾರರ ಕುಟುಂಬದಲ್ಲಿ ಹುಟ್ಟಿದರು. ಮನೆಯಲ್ಲಿ ಮೊದಲಿಂದಲೂ ಎಲ್ಲರಿಗೂ ಆಟೋಟಗಳ ಬಗ್ಗೆ ವಿಶೇಶ ಆಸಕ್ತಿ ಇದ್ದುದ್ದರಿಂದ ಬೆಳೆಯುತ್ತಾ ಎಳೆಯ ಪೊನ್ನಪ್ಪರಿಗೂ ಕೂಡ ಆಟೋಟಗಳ ಗೀಳು ಅಂಟಿತು. ಅವರ ಇಬ್ಬರು ಸಹೋದರರು ಕೂಡ ಹಾಕಿ ಆಡುತ್ತಿದ್ದರು. ಕೊಡಗಿನಲ್ಲಿ ಪ್ರಾತಮಿಕ ಶಿಕ್ಶಣ ಪಡೆದ ಬಳಿಕ ಪೊನ್ನಪ್ಪ ಮುಂದಿನ ಕಲಿಕೆಗೆ ಬೆಂಗಳೂರಿನ ಸೆಂಟ್ ಜೋಸೆಪ್ಸ್ ಶಾಲೆಗೆ ಸೇರುತ್ತಾರೆ. ಜೋಸೆಪ್ಸ್ ಶಾಲೆಯ ಶ್ರೇಶ್ಟ ಗುಣಮಟ್ಟದ ಕ್ರೀಡಾ ಸೌಕರ‍್ಯಗಳು ಸಹಜವಾಗಿಯೇ ಪೊನ್ನಪ್ಪರನ್ನು ಇನ್ನೂ ಉತ್ತೇಜಿಸಿ ಆಟೋಟಗಳ ಕಡೆ ವಾಲುವಂತೆ ಮಾಡುತ್ತದೆ. ಶಾಲೆಯಲ್ಲಿ ಹಾಕಿ, ಪುಟ್ಬಾಲ್ ಹಾಗೂ ಅತ್ಲೆಟಿಕ್ಸ್ ನಲ್ಲಿ ತೊಡಗಿಕೊಂಡ ಅವರು ಅಂತರ ಶಾಲಾ ಪೋಟಿಗಳಲ್ಲಿ ನಿರಂತರವಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದು ತಮ್ಮ ಶಾಲೆಗೆ ಕೀರ‍್ತಿ ತರುತ್ತಾರೆ. ಅತ್ಲೆಟಿಕ್ಸ್ ನಲ್ಲಿ ಇವರ ಅಪರೂಪದ ಪ್ರತಿಬೆಯನ್ನು ಗುರುತಿಸಿ ಶಾಲೆಯ ಆಡಳಿತ ವರ‍್ಗ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಿ ಅವರ ಬೆನ್ನಿಗೆ ನಿಲ್ಲುತ್ತದೆ. ಆ ವೇಳೆ ಅವರ ಹೆತ್ತವರು ಓದಿನಿಂದ ತಮ್ಮ ಮಗ ಎಲ್ಲಿ ಸಂಪೂರ‍್ಣವಾಗಿ ವಿಮುಕನಾಗುತ್ತಾನೋ ಎಂದು ಅಂಜಿದರೂ ಪೊನ್ನಪ್ಪ ಓದಿನಲ್ಲೂ ಹಿಂದೆ ಬೀಳದೆ ಹೆತ್ತವರ ನಂಬಿಕೆ ಗಳಿಸುತ್ತಾರೆ. ಒಟ್ಟಿಗೆ ಸಾಕಶ್ಟು ಶ್ರಮ ಪಟ್ಟು ಹದಿಹರೆಯದ ವಯಸ್ಸಿನಲ್ಲೇ ಒಬ್ಬ ಓಟಗಾರನಾಗಿ ಪೊನ್ನಪ್ಪ ಎಲ್ಲಾ ವ್ರುತ್ತಿಪರ ಚಳಕಗಳನ್ನು ಮೈಗೂಡಿಸಿಕೊಂಡು ಮುಂದಿನ ದೊಡ್ಡ ಸವಾಲುಗಳಿಗೆ ತನ್ನಂಬಿಕೆಯಿಂದ ಸಜ್ಜಾಗುತ್ತಾರೆ. ಪೊನ್ನಪ್ಪರನ್ನು ಹತ್ತಿರದಿಂದ ಕಂಡಿದ್ದವರೆಲ್ಲರಿಗೂ ಅವರ ಅಳವಿನ ಬಗ್ಗೆ ಹೆಮ್ಮೆ ಇತ್ತಲ್ಲದೆ ಅವರ ವ್ರುತ್ತಿಪರ ಬದುಕಿನಲ್ಲಿ ಅವರು ಸಾದಿಸಬದುದಾದ ಗೆಲುವುಗಳ ಬಗ್ಗೆ ಸಾಕಶ್ಟು ನಿರೀಕ್ಶೆ ಇರುತ್ತದೆ. ಎಳೆ ಪ್ರಾಯದಲ್ಲೇ ಇಂತಹ ದೊಡ್ಡ ನಿರೀಕ್ಶೆಗಳ ಹೊರೆ ಹೊತ್ತು ಪೊನ್ನಪ್ಪ ಒಬ್ಬ ವ್ರುತ್ತಿಪರ ಅತ್ಲೀಟ್ ಆಗಿ ತಮ್ಮ ಪಯಣ ಮೊದಲು ಮಾಡುತ್ತಾರೆ.
ಪೊನ್ನಪ್ಪರ ವ್ರುತ್ತಿಬದುಕು
ಆರಂಬದಲ್ಲೇ ಬಿ.ಎಸ್.ಎ.ಎ ಪಂದ್ಯಾವಳಿಗಳಲ್ಲಿ ಲಾಂಗ್ ಜಂಪ್ ಮತ್ತು ಓಟದಲ್ಲಿ ಸಾಕಶ್ಟು ಪದಕಗಳನ್ನು ಗೆದ್ದ ಪೊನ್ನಪ್ಪ ಕರ‍್ನಾಟಕವನ್ನು ರಾಶ್ಟ್ರೀಯ ಕಿರಿಯರ ಪೋಟಿಯಲ್ಲಿ ಪ್ರತಿನಿದಿಸಿ ಅಲ್ಲೂ ಸೈ ಎನಿಸಿಕೊಂಡು ಮೊದಲ ಬಾರಿಗೆ ದೇಶದಾದ್ಯಂತ ಹೆಸರುಗಳಿಸುತ್ತಾರೆ. ಅಲ್ಲಿಂದ ಇನ್ನೂ ಬೆವರು ಹರಿಸಿ ಪರಿಪಕ್ವಗೊಂಡು ವಿಶ್ವವಿದ್ಯಾಲಯ ಮತ್ತು ರಾಶ್ಟ್ರೀಯ ಮಟ್ಟದ ಪೋಟಿಗಳಿಗೆ ತೇರ‍್ಗಡೆ ಪಡೆಯುತ್ತಾರೆ. 1965 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರ 200 ಮೀ ಮತ್ತು 400 ಮೀ ಓಟಗಳಲ್ಲಿ ಗೆಲುವು ದಾಕಲಿಸುತ್ತಾರೆ. ಇದರ ಬಳಿಕ 1966 ರ ಪೋಟಿಗಳಲ್ಲಿ 100 ಮೀ, 200 ಮೀ, 400 ಮೀ ಮತ್ತು 4*100 ಮೀ ಓಟಗಳಲ್ಲಿ ವಿಶ್ವವಿದ್ಯಾಲಯದ ಚಾಂಪಿಯನ್ ಆಗುತ್ತಾರೆ. ಇದರ ಬೆನ್ನಲ್ಲೇ ಚಂಡೀಗಡದಲ್ಲಿ ನಡೆದ ರಾಶ್ಟ್ರೀಯ ಅಂತರ ವಿಶ್ವವಿದ್ಯಾಲಯದ ಸ್ಪರ‍್ದೆಯಲ್ಲಿ 400 ಮೀ ಓಟದಲ್ಲಿ ಬಂಗಾರ ಹಾಗೂ 200 ಮೀ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಬೀಗುತ್ತಾರೆ. ಸಾಲು ಸಾಲು ಪದಕಗಳನ್ನು ನಿರಾಯಾಸವಾಗಿ ಮುಡಿಗೇರಿಸಿಕೊಂಡು ಗೆಲುವಿನ ರುಚಿ ಕಂಡಿದ್ದ ಪೊನ್ನಪ್ಪರನ್ನು ಎದುರಿಸಿಬಲ್ಲ ಒಬ್ಬ ಓಟಗಾರನೂ ಆ ವೇಳೆ ರಾಶ್ಟ್ರ ಮಟ್ಟದಲ್ಲಿ ಇಲ್ಲದದ್ದು ಡಾಳಾಗಿ ಕಾಣುತ್ತಿರುತ್ತದೆ. ನಂತರ 1967 ರ ತಮ್ಮ ಚೊಚ್ಚಲ ನ್ಯಾಶನಲ್ ಗೇಮ್ಸ್ ನ 400 ಮೀ ಓಟದಲ್ಲೂ ಬಂಗಾರದ ಪದಕ ಗೆದ್ದು ಸಂಚಲನ ಮೂಡಿಸುತ್ತಾರೆ. ಈ ಓಟದಲ್ಲಿ ಬಾರತದ ಏಶಿಯನ್ ಗೇಮ್ಸ್ ನ ಬೆಳ್ಳಿ ಪದಕ ವಿಜೇತ ಜಗನ್ ಸಿಂಗ್ ರನ್ನು ಹಿಂದಿಕ್ಕಿ ಹತ್ತೊಂಬತ್ತರ ಹೆರೆಯದ ಪೊನ್ನಪ್ಪ ಮೊದಲಿಗರಾಗಿದ್ದರಿಂದ ರಾಶ್ಟ್ರ ಮಟ್ಟದಲ್ಲಿ ಅವರ ಸಾಹಸಗಾತೆ ತೀವ್ರ ಚರ‍್ಚೆಗೆ ಗ್ರಾಸವಾಗುತ್ತದೆ. ಬಳಿಕ 1968 ರ ನ್ಯಾಶನಲ್ ಗೇಮ್ಸ್ ನಲ್ಲೂ ಪೊನ್ನಪ್ಪ ಗೆದ್ದು ತಮ್ಮ ಬಂಗಾರದ ಪದಕವನ್ನು ಉಳಿಸಿಕೊಳ್ಳುತ್ತಾರೆ. ಈ ಪಂದ್ಯಾವಳಿಯಲ್ಲಿ ಅವರು ಕರ‍್ನಾಟಕದ ನಾಯಕನಾಗಿ ಕೂಡ ಬಡ್ತಿ ಪಡೆಯುತ್ತಾರೆ. ಹಾಗೇ 1969 ರಲ್ಲೂ ಪೊನ್ನಪ್ಪರ ಗೆಲುವಿನ ನಾಗಾಲೋಟ ಸತತ ಮೂರು ವರುಶ ಮುಂದುವರೆದು ಹೊಸದೊಂದು ದಾಕಲೆ ಬರೆಯುತ್ತಾರೆ. ಕಾಲೇಜ್ ಶಿಕ್ಶಣದ ನಂತರ ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿಯಲ್ಲಿ (TISCO) ಸೇವೆಗೆ ಸೇರಿದ ಪೊನ್ನಪ್ಪ ಬೆಂಗಳೂರಿಂದ ದೂರದ ಜಮ್ಶೆಡ್ ಪುರದಲ್ಲಿ ನೆಲೆ ಕಂಡುಕೊಳ್ಳುತ್ತಾರೆ. ಅಲ್ಲಿಂದ ಐದು ವರುಶಗಳ ಕಾಲ ರಾಶ್ಟ್ರೀಯ ಮಟ್ಟದಲ್ಲಿ TISCO ಪರ ಆಡಿ ಅವರ ಸಂಸ್ತೆಗೆ ಗೆಲುವುಗಳ ಮೇಲೆ ಗೆಲುವುಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಇದೇ ವೇಳೆ 1970 ರಲ್ಲಿ ಬ್ಯಾಂಗ್ಕಾಕ್ ನಲ್ಲಿ ನಡೆದ ಏಶಿಯನ್ ಗೇಮ್ಸ್ ನಲ್ಲಿ ಬಾರತ ತಂಡದ ಪರ 4*400 ಮೀ ರಿಲೇ ಓಟದಲ್ಲಿ 3.911 ನಿಮಿಶಗಳಲ್ಲಿ ಓಟ ಪೂರ‍್ಣಗೊಳಿಸಿ ಕೂದಲೆಳೆಯಲ್ಲಿ ಬಂಗಾರದ ಪದಕದಿಂದ ವಂಚಿತರಾಗಿ ಬಾರತಕ್ಕೆ ಬೆಳ್ಳಿ ಪದಕ ತೊಡಿಸುತ್ತಾರೆ. ಅದೇ ಹೊತ್ತಿನಲ್ಲಿ ತಮ್ಮ ಯಶಸ್ಸಿನ ಉತ್ತುಂಗ ತಲುಪಿದ್ದ ಪೊನ್ನಪ್ಪ, 21.7 ಸೆಕೆಂಡ್ ಗಳಲ್ಲಿ 200 ಮೀ ಓಟ ಹಾಗೂ 47.4 ಸೆಕೆಂಡ್ ಗಳಲ್ಲಿ 400 ಮೀ ಓಟ ಕ್ರಮಿಸಿ ತಮ್ಮ ಶ್ರೇಶ್ಟ ಸಾದನೆಯಿಂದ ರಾಶ್ಟ್ರ ಮಟ್ಟದಲ್ಲಿ ದಾಕಲೆ ಮಾಡುತ್ತಾರೆ. ಅಜ್ಮೆರ್ ಸಿಂಗ್, ಬಿ.ಎಸ್ ಬರುವಾಹ್ ಸುಚಾ ಸಿಂಗ್ ಮತ್ತು ಒಲಂಪಿಕ್ಸ್ ಓಟಗಾರ ಶ್ರೀರಾಮ್ ಸಿಂಗ್ ರ ತೀವ್ರ ಪೈಪೋಟಿಯ ನಡುವೆಯೂ ರಾಶ್ಟ್ರ ಮಟ್ಟದಲ್ಲಿ ಪ್ರಾಬಲ್ಯ ಮೆರೆದದ್ದು ಪೊನ್ನಪ್ಪರ ಅಳವಿಗೆ ಹಿಡಿದ ಕನ್ನಡಿ. ಹಾಗೇ ರಾಜ್ಯದಲ್ಲಿ ಕೆನ್ನೆತ್ ಪೊವೆಲ್ ಮತ್ತು ಎ.ಪಿ ರಾಮಸ್ವಾಮಿ ಪೊನ್ನಪ್ಪರ ಸಮಕಾಲೀನ ಓಟಗಾರರಾಗಿದ್ದರು. 1973 ರಲ್ಲಿ ಕ್ಯಾತ ಓಟಗಾರ‍್ತಿ ನಿರ‍್ಮಲ ಉತ್ತಯ್ಯರನ್ನು ಮದುವೆಯಾದ ಪೊನ್ನಪ್ಪ ಬಳಿಕ 1975 ರಲ್ಲಿ ಏಕಾಏಕಿ ಅತ್ಲೆಟಿಕ್ಸ್ ನಿಂದ ದೂರ ಸರಿಯುವ ತೀರ‍್ಮಾನ ಕೈಗೊಳ್ಳುತ್ತಾರೆ. 28 ರ ಹರೆಯದಲ್ಲೇ ನಿವ್ರುತ್ತರಾಗಿ ಎಲ್ಲರಿಗೂ ದಿಗ್ಬ್ರಮೆ ಉಂಟುಮಾಡುತ್ತಾರೆ. ತಮ್ಮ ಅಳವಿಗೆ ತಕ್ಕಂತೆ ಆಡಿ ತಾವು ಸಾದಿಸಬೇಕಾದ್ದೆಲ್ಲಾ ಸಾದಿಸಿ ಆಗಿದೆ ಎಂಬುದು ಅವರ ನಿಲುವಾಗಿರುತ್ತದೆ.
ಪೊನ್ನಪ್ಪ ಎಂಬ ಎಲೆಮರೆಯ ಕಾಯಿ
1979 ರಲ್ಲಿ TISCOತೊರೆದು ಬೆಂಗಳೂರಿಗೆ ಕುಟುಂಬದೊಂದಿಗೆ ಮರಳಿದ ಪೊನ್ನಪ್ಪ ತಮ್ಮ ಮಕ್ಕಳಾದ ಆರತಿ ಮತ್ತು ಚೆಂಗಪ್ಪರ ಬೆಳವಣಿಗೆಗೆ ಕ್ರೀಡಾಪಟುವಾಗಿ ನೀರೆರೆಯುತ್ತಾರೆ. ಇದರ ಪಲವಾಗಿ ಅವರ ಮಗಳು ಆರತಿ ಟೆನ್ನಿಸ್ ನಲ್ಲಿ ಯಶಸ್ಸು ಕಂಡರೆ ಮಗ ಚೆಂಗಪ್ಪ ಅತ್ಲೆಟಿಕ್ಸ್ ನಲ್ಲಿ ಹೆಸರು ಗಳಿಸಿದ್ದಾರೆ. ಮನೆಯಲ್ಲಿ ಆಟೋಟಗಳಿಗೆ ಪೂರಕವಾದ ವಾತಾವರಣ ಹುಟ್ಟುಹಾಕುವುದು ಹೆತ್ತವರ ಕರ‍್ತವ್ಯ ಎಂದು ನಂಬಿರುವ ಅವರು ತಮ್ಮ ಬೆಳವಣಿಗೆಗೆ ಕಾರಣವಾದ ಶಾಲೆ ಹಾಗೂ ಕೋಚ್ ಲಿಂಗಪ್ಪರನ್ನು ಇಂದಿಗೂ ಗೌರವದಿಂದ ನೆನೆಯುತ್ತಾರೆ. ಆ ಕಾಲದಲ್ಲಿ ವಿದೇಶಗಳಲ್ಲಿದ್ದ ತರಬೇತಿ ಸೌಕರ‍್ಯ ನಮ್ಮಲ್ಲಿಯೂ ಇದ್ದಿದ್ದರೆ ಪೊನ್ನಪ್ಪ ಒಲಂಪಿಕ್ಸ್ ವರೆಗೂ ಸಾಗುತ್ತಿದ್ದರು ಎಂಬುದು ವಿಮರ‍್ಶಕರ ಅಂಬೋಣವಾಗಿತ್ತು. ಅವರ ಉತ್ತುಂಗವನ್ನು ಕಂಡ ನಿಕಟವರ‍್ತಿಗಳೆಲ್ಲರೂ ಈ ಮಾತನ್ನು ಅಕ್ಶರಶಹ ದಿಟ ಎಂದೇ ಪ್ರತಿಪಾದಿಸುತ್ತಾರೆ. ಆದರೆ ದುರದ್ರುಶ್ಟವಶಾತ್ ಬಾರತ ಆಗಿನ್ನೂ ಅತ್ಲೆಟಿಕ್ಸ್ ನಲ್ಲಿ ಅಂಬೆಗಾಲಿಡುತ್ತಿತ್ತು. ಅದರ ಬಗ್ಗೆ ಯಾವುದೇ ಬೇಸರ ಇಲ್ಲದೆ, ತಮ್ಮ ಕಾಲದ ತರಬೇತಿಗೂ ಈಗಿನ ಆದುನಿಕ ಸೌಲಬ್ಯಗಳಿರುವ ತರಬೇತಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಕಂಡು ಅತ್ಲೆಟಿಕ್ಸ್ ನಲ್ಲಿ ಬಾರತದ ಬವಿಶ್ಯದ ಬಗೆಗೆ ಪೊನ್ನಪ್ಪ ಆಶಾಬಾವನೆ ಹೊಂದಿದ್ದಾರೆ. ಕೆಲ ವರುಶಗಳ ಹಿಂದೆ ಸಂದರ‍್ಶನಕ್ಕಾಗಿ ಮಾತಿಗಿಳಿದಾಗ ಪೊನ್ನಪ್ಪ ಅವರು ಅತ್ಲೆಟಿಕ್ಸ್ ನಲ್ಲಿ ನೀರಜ್ ಚೋಪ್ರಾ ಮತ್ತು ಹೀಮಾ ದಾಸ್ ಬಾರತದ ಬವಿಶ್ಯದ ತಾರೆಯರು ಎಂದು ಗುರುತಿಸಿದ್ದು ಈಗ ದಿಟವಾಗಿದೆ. ಇದು ಪ್ರತಿಬೆ ಗುರುತಿಸುವ ಅವರ ಚಳಕಕ್ಕೆ ಸಾಕ್ಶಿ ಎಂದೇ ಹೇಳಬೇಕು. ತಮ್ಮ ಆಟದ ದಿನಗಳ ಬಗೆಗೆ ಯಾವುದೇ ದೂರು ಹೊರಹಾಕದೆ, ಸಿಕ್ಕ ಅವಕಾಶವನ್ನು ನೇರ‍್ಮೆಯಿಂದ ಬಳಸಿಕೊಂಡು ಆಟಕ್ಕೆ ಚ್ಯುತಿ ಬಾರದಂತೆ ಕರ‍್ನಾಟಕ ಹಾಗೂ ಬಾರತಕ್ಕೆ ಪದಕ ಗೆದ್ದಿರುವ ತ್ರುಪ್ತಿಯನ್ನು ಪೊನ್ನಪ್ಪ ಹೊಂದಿದ್ದಾರೆ. ಇಂತಹ ಮೇರು ಸಾದನೆಗೈದಿರುವ ದಿಗ್ಗಜ ಪೊನ್ನಪ್ಪರನ್ನು ಸದಾ ಗೌರವಿಸುತ್ತಾ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾಡಿನ ಅತ್ಲೆಟಿಕ್ಸ್ ಬವಿಶ್ಯ ಸಾಗಲಿ ಎಂದು ಬಯಸೋಣ.
( ಚಿತ್ರಸೆಲೆ: sporting legends of Bangalore book, ytimg.com)
ಪೊನ್ನಪ್ಪರವರ ಬಗ್ಗೆ ಪೂರ್ಣ ವಿವರ ತಿಳಿದು ಖುಷಿಯಾಯಿತು. ಸೊಗಸಾದ ಮಾಹಿತಿ.