ಸದಾನಂದ್ ವಿಶ್ವನಾತ್ – ಕರ‍್ನಾಟಕ ಕಂಡ ವಿಶಿಶ್ಟ ಕೀಪರ್

– ರಾಮಚಂದ್ರ ಮಹಾರುದ್ರಪ್ಪ.

1980ರ ದಶಕದ ಕ್ರಿಕೆಟ್ ಆಟಗಾರರನ್ನಾಗಲಿ ಅತವಾ ವಿಮರ‍್ಶಕರನ್ನಾಗಲಿ, ಆ ಹೊತ್ತಿನಲ್ಲಿ ಅಸಾದ್ಯ ಪ್ರತಿಬೆ ಇದ್ದರೂ ಅಂತರಾಶ್ಟ್ರೀಯ ಮಟ್ಟದಲ್ಲಿ ಮಿಂಚಿನಂತೆ ಬಂದು ಬಹು ಬೇಗ ಮರೆಯಾದ ಆಟಗಾರ ಯಾರೆಂದು ಕೇಳಿದರೆ ಎಲ್ಲರೂ ಒಕ್ಕೊರಲಿನಿಂದ ಕೊಡುವ ಉತ್ತರ ಒಂದೇ, ಅದು ಕರ‍್ನಾಟಕದ ಬಹು ಗತ್ತಿನ ವಿಕೆಟ್ ಕೀಪರ್‌-ಬ್ಯಾಟ್ಸ್ಮನ್ ಸದಾನಂದ್ ವಿಶ್ವನಾತ್. ಹೌದು, ವಿಕೆಟ್ ನ ಹಿಂದೆ ಗೋಡೆಯಂತೆ ನಿಂತು ಕ್ಯಾಚ್ ಗಳನ್ನು ಹಿಡಿಯುವುದರ ಜೊತೆಗೆ ಬ್ಯಾಟ್ಸ್ಮನ್ ತಿರುಗಿ ನೋಡುವುದರಳೊಗೆ ಚುರುಕಾಗಿ ಬೇಲ್ಸ್ ಎಗರಿಸಿ ಸ್ಟಂಪ್ ಮಾಡುತ್ತಿದ್ದ ವಿಶ್ವನಾತ್, ಬಿರುಸಿನ ಹೊಡೆತಗಳ ಸೊಗಸಾದ ಬ್ಯಾಟ್ಸ್ಮನ್ ಕೂಡ ಆಗಿದ್ದರು.

ಕ್ರಿಕೆಟ್ ನ ಮೊದಲ ದಿನಗಳು

1962 ರ ನವೆಂಬರ್ 29 ರಂದು ವಿಶ್ವನಾತ್ ಬೆಂಗಳೂರಿನಲ್ಲಿ ಹುಟ್ಟಿದರು. ಎಳೆಯ ವಯಸ್ಸಿನಿಂದಲೇ ಕ್ರಿಕೆಟ್ ಗೀಳು ಅಂಟಿಸಿಕೊಂಡಿದ್ದ ಅವರು ಸೇಂಟ್ ಜೋಸೆಪ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಕರ‍್ನಾಟಕದ ಹಲವಾರು ಲೀಗ್ ಗಳಲ್ಲಿ ಆಡತೊಡಗಿದರು. ಸಿಂಡಿಕೇಟ್ ಬ್ಯಾಂಕ್ ತಂಡದಲ್ಲಿ ಎಡೆ ಪಡೆದು ಆ ಬಳಿಕ ಕಿರಿಯರ ಪಂದ್ಯಾವಳಿಗಳಾದ ಸಿ.ಕೆ.ನಾಯ್ಡು ಟ್ರೋಪಿ ಮತ್ತು ಕೂಚ್ ಬೆಹಾರ್ ಟ್ರೋಪಿಗಳಲ್ಲಿಯೂ ಆಡಿ ಬ್ಯಾಟ್ ನಿಂದ ರನ್ ಗಳಿಸುವುದರ ಜೊತೆಗೆ ವಿಕೆಟ್ ನ ಹಿಂದೆಯೂ ಅಚ್ಚುಕಟ್ಟಾಗಿ ಕೀಪಿಂಗ್ ಮಾಡಿ ಗಮನ ಸೆಳೆದರು. 1980/81 ರ ಸಾಲಿನಲ್ಲಿ ಕಿರ‍್ಮಾನಿ ಬಾರತ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದುದರಿಂದ ಕೇವಲ 18 ನೇ ವಯಸ್ಸಿಗೆ ರಣಜಿ ಟೂರ‍್ನಿ ಆಡಲು ವಿಶ್ವನಾತ್ ರಿಗೆ ಕರೆ ಬಂತು.

ರಣಜಿ ಕ್ರಿಕೆಟ್ ಬದುಕು

1980 ರಲ್ಲಿ ಬಿಜಾಪುರದಲ್ಲಿ ಆಂದ್ರ ಎದುರು ಬ್ರಿಜೇಶ್ ಪಟೇಲ್ ರ ಮುಂದಾಳ್ತನದಲ್ಲಿ ಸದಾನಂದ್ ವಿಶ್ವನಾತ್ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಆ ಸಾಲಿನಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಆಟ ಅವರಿಂದ ಬಾರದೇ ಹೋದರೂ ಅವರ ಪ್ರತಿಬೆ ಬಗ್ಗೆ ಮಾತ್ರ ಯಾರೂ ಅನುಮಾನಿಸುವಂತಿರಲಿಲ್ಲ. ನಂತರ 1981 ರಲ್ಲಿ ವಿಶ್ವನಾತ್ ಬಾರತದ ಕಿರಿಯರ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ ಮಾಡಿ ಒಂದು ಅರ‍್ದ ಶತಕ ಗಳಿಸಿದರು. ಅಲ್ಲಿಂದ ಒಂದು ವರ‍್ಶ ಕಾಲ ಅವರಿಗೆ ಒಂದೇ ಒಂದು ರಣಜಿ ಪಂದ್ಯದಲ್ಲಿ ಅವಕಾಶ ದೊರೆತರೂ ಲೀಗ್ ಮಟ್ಟದಲ್ಲಿ ಮಾತ್ರ ಅವರ ಸ್ತಿರ ಪ್ರದರ‍್ಶನ ಮುಂದುವರೆಯುತ್ತಲೇ ಇತ್ತು. 1982/83 ರಲ್ಲಿ ಮರಳಿ ರಾಜ್ಯ ತಂಡದಲ್ಲಿ ಎಡೆ ಪಡೆದ ವಿಶ್ವನಾತ್ ತಮಿಳುನಾಡು ಎದುರು ಜೋಡಿ ಅರ‍್ದ ಶತಕಗಳನ್ನು ಗಳಿಸಿ (55 ಮತ್ತು ಔಟಾಗದೆ 67) ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ ನೆಲೆಕಂಡರು. ಕರ‍್ನಾಟಕ ತನ್ನ ಮೂರನೇ ರಣಜಿ ಟೂರ‍್ನಿ ಗೆದ್ದ ಈ ಸಾಲಿನ ಪೈನಲ್ ನಲ್ಲಿ ಬಾಂಬೆ ಎದುರು ಅವರು ಪೇರಿಸಿದ ಇನ್ನೊಂದು ಅವಳಿ ಅರ‍್ದ ಶತಕಗಳು (92 ಮತ್ತು 77) ನಿರ‍್ಣಾಯಕ ಪಾತ್ರ ವಹಿಸಿದವು. ಆ ಸಾಲಿನಲ್ಲಿ 58 ರ ಸರಾಸರಿಯಲ್ಲಿ 4 ಅರ‍್ದ ಶತಕಗಳೊಂದಿಗೆ 408 ರನ್ ಗಳಿಸಿದ ಅವರು 16 ಕ್ಯಾಚ್ ಹಿಡಿದು 1 ಸ್ಟಂಪ್ ಕೂಡ ಮಾಡಿದರು. ಬಳಿಕ ದುಲೀಪ್ ಟ್ರೋಪಿಯಲ್ಲಿ ದಕ್ಶಿಣ ವಲಯದ ಪರ ಕೇಂದ್ರ ವಲಯದ ಎದುರು ಇನ್ನಿಂಗ್ಸ್ ಒಂದರಲ್ಲಿ 6 ಕ್ಯಾಚ್ ಹಿಡಿದು ದಾಕಲೆ ಮಾಡಿದರು. 1983/84 ರಲ್ಲೂ ವಿಶ್ವನಾತ್ ರ ಚುರುಕಾದ ಕೀಪಿಂಗ್ ಒಟ್ಟಿಗೆ ಬ್ಯಾಟಿಂಗ್ ನಾಗಾಲೋಟವೂ ಮುಂದುವರೆಯಿತು. ವೆಂಕಟರಾಗವನ್, ಟಿ. ಎ ಶೇಕರ್ ಹಾಗೂ ಶಿವರಾಮಕ್ರಿಶ್ಣನ್ ರಂತಹ ಬಲಾಡ್ಯ ಬೌಲರ್ ಗಳ ಬಲವಿದ್ದ ತಮಿಳುನಾಡು ಎದುರು ತಮ್ಮ ವ್ರುತ್ತಿ ಬದುಕಿನ ಮೊದಲ ಶತಕ (102) ಗಳಿಸಿದ ಅವರು ಆನಂತರ ಆಂದ್ರ ಎದುರು (86 ಮತ್ತು 93), ಹಾಗೂ ಕೇರಳ ಎದುರು 83 ರನ್ ಗಳಿಸಿ ತಮ್ಮ ಬ್ಯಾಟಿಂಗ್ ಪ್ರಾಬಲ್ಯ ಮೆರೆದರು. ಈ ರುತುವಿನಲ್ಲಿ 41ರ ಸರಾಸರಿಯಲ್ಲಿ ಬರೋಬ್ಬರಿ 530 ರನ್‌ ಗಳೊಂದಿಗೆ 17 ಕ್ಯಾಚ್ ಹಿಡಿದು 1 ಸ್ಟಂಪ್ ಮಾಡಿ ದೇಸೀ ಕ್ರಿಕೆಟ್ ನಲ್ಲಿ ಸಂಚಲನ ಮೂಡಿಸಿದರು. ಇದರ ಪಲವಾಗಿ ಬಾರತ ಕಿರಿಯರ ತಂಡಕ್ಕೆ ಆಯ್ಕೆಯಾಗಿ ಜಿಂಬಾಬ್ವೆ ಪ್ರವಾಸದಲ್ಲಿ 11 ಕ್ಯಾಚ್ ಗಳು ಮತ್ತು 3 ಸ್ಟಂಪಿಂಗ್ ಮಾಡಿ ತಪ್ಪಿಲ್ಲದ ಕೀಪಿಂಗ್ ಗೆ ಮತ್ತೊಂದು ಹೆಸರು ವಿಶ್ವನಾತ್ ಎಂದು ವಿಮರ‍್ಶಕರು ಕೊಂಡಾಡುವಂತೆ ಮಾಡಿದರು. 1984/85 ರ ದೇಸೀ ಸಾಲಿನಲ್ಲೂ ಸ್ತಿರ ಪ್ರದರ‍್ಶನ ಕಾಪಾಡಿಕೊಂಡ ವಿಶ್ವನಾತ್ ರ ಮೇಲೆ ಕಡೆಗೂ ರಾಶ್ಟ್ರೀಯ ಆಯ್ಕೆಗಾರರ ಕಣ್ಣು ಬೀಳುತ್ತದೆ. ಇಂಗ್ಲೆಂಡ್ ಎದುರು ತವರಿನಲ್ಲಿ ನಡೆಯಲಿದ್ದ ಒಂದು ದಿನದ ಪಂದ್ಯಗಳ ಸರಣಿಗೆ ಅವರು ಬಾರತ ತಂಡಕ್ಕೆ ಆಯ್ಕೆಯಾಗುತ್ತಾರೆ.

ಅಂತರಾಶ್ಟ್ರೀಯ ಕ್ರಿಕೆಟ್ ಬದುಕು

1985 ಜನವರಿಯಲ್ಲಿ ತವರೂರು ಬೆಂಗಳೂರಿನಲ್ಲಿ ಸುನಿಲ್ ಗಾವಸ್ಕರ್ ರ ಮುಂದಾಳ್ತನದಲ್ಲಿ ಇಂಗ್ಲೆಂಡ್ ಎದುರು ವಿಶ್ವನಾತ್ ತಮ್ಮ ಚೊಚ್ಚಲ ಅಂತರಾಶ್ಟ್ರೀಯ ಪಂದ್ಯವಾಡಿ ಔಟಾಗದೆ 6 ರನ್ ಗಳಿಸಿ 2 ಕ್ಯಾಚ್ ಹಿಡಿದರು. ಬಳಿಕ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ 241 ರನ್ ಬೆನ್ನತ್ತಿ ಹೊರಟಿದ್ದ ಬಾರತ 204/7 ಕ್ಕೆ ಕುಸಿದು ಸೋಲಿನ ಸುಳಿಯಲ್ಲಿದ್ದಾಗ ತಮ್ಮ ಎಂದಿನ ಬಿರುಸಿನ ಬ್ಯಾಟಿಂಗ್ ನಿಂದ 25 ಎಸೆತಗಳಲ್ಲಿ 23 ರನ್ ಗಳಿಸಿ ಅವರು ಬಾರತಕ್ಕೆ ಗೆಲುವು ತಂದಿತ್ತು ಎಲ್ಲರಿಂದ ಸೈ ಎನಿಸಿಕೊಂಡರು. ಅದೇ ವರ‍್ಶ ಆಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಅಂಡ್ ಹೆಡ್ಜಸ್ ವರ‍್ಲ್ಡ್ ಕ್ರಿಕೆಟ್ ಸರಣಿಯಲ್ಲಿ ಅವರಿಗೆ ಬ್ಯಾಟ್ ಮಾಡಲು ಒಮ್ಮೆ ಮಾತ್ರ ಅವಕಾಶ ಸಿಕ್ಕರೂ ಬಾರತದ ಗೆಲುವಿನ ಹಿಂದೆ ವಿಶ್ವನಾತ್ ರ ಮೇಲ್ಮಟ್ಟದ ಕೀಪಿಂಗ್ ಮುಕ್ಯ ಪಾತ್ರ ವಹಿಸಿತು. 5 ಪಂದ್ಯಗಳ ಸರಣಿಯಲ್ಲಿ 9 ಕ್ಯಾಚ್ ಮತ್ತು 3 ಸ್ಟಂಪಿಂಗ್ ಗಳ ವಿಶ್ವನಾತ್ ರ ದಾಕಲೆ ಇಂದಿಗೂ ಅಚ್ಚಳಿಯದೆ ಉಳಿದಿದೆ. ಇದೇ ಸರಣಿಯಲ್ಲಿ ಸಿಡ್ನಿಯಲ್ಲಿ ಇಂಗ್ಲೆಂಡ್ ಎದುರು 3 ಕ್ಯಾಚ್ ಮತ್ತು 2 ಸ್ಟಂಪ್ ಮಾಡಿ ಪಂದ್ಯವೊಂದರಲ್ಲಿ ಒಟ್ಟು 5 ಬಲಿ ಪಡೆದ ಪ್ರಪಂಚದ ನಾಲ್ಕನೇ ಕೀಪರ್ ಎಂಬ ಹಿರಿಮೆ ಕೂಡ ಅವರದಾಯಿತು. ಸರಣಿಯ ಪಾಕಿಸ್ತಾನ ಎದುರಿನ ಪೈನಲ್ ನಲ್ಲಿ ನಿರ‍್ಣಾಯಕ ವಿಕೆಟ್ ಆಗಿದ್ದ ಮಿಯಂದಾದ್ ರನ್ನುಅವರು ಕ್ಶಣ ಮಾತ್ರದಲ್ಲಿ ಸ್ಟಂಪ್ ಮಾಡಿದ್ದು ಎಲ್ಲರನ್ನೂ ಬೆಕ್ಕಸ ಬೆರಗಾಗುವಂತೆ ಮಾಡಿತು. ಆಸ್ಟ್ರೇಲಿಯಾದ ಪತ್ರಿಕೆಗೆಳು ವಿಶ್ವನಾತ್ ರ ಕೀಪಿಂಗ್ ಚಳಕಕ್ಕೆ ಮಾರುಹೋಗಿ, “ಇವರು ಮುಂದೊಂದು ದಿನ ಪ್ರಪಂಚದ ಶ್ರೇಶ್ಟ ಕೀಪರ್ ಆಗಲಿದ್ದಾರೆ” ಎಂದು ಬಣ್ಣಿಸಿ ಮೆಚ್ಚುಗೆಯ ಮಾತಾಡಿದರೆ ನಾಯಕ ಗಾವಸ್ಕರ್ ಕೂಡ ನಮ್ಮ ಸರಣಿ ಗೆಲುವಿಗೆ ವಿಶಿ ಅಚ್ಚುಕಟ್ಟಾದ ಕೀಪಿಂಗ್ ನಿಂದ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ಹೊಗಳಿದರು. ಇದರ ಬೆನ್ನಲ್ಲೇ ಬಾರತ ಶಾರ‍್ಜಾದಲ್ಲಿ ನಡೆದ ರೋತ್ಮಾನ್ಸ್ ಕಪ್ ಗೆದ್ದಾಗ ಮತ್ತೊಮ್ಮೆ ವಿಶ್ವನಾತ್ ವಿಕೆಟ್ ನ ಹಿಂದೆ ಮಿಂಚಿದರು. ಹೀಗೆ ಕೇವಲ 22 ವರುಶಗಳ ವಯಸ್ಸಿನಲ್ಲಿ ಈ ಕನ್ನಡಿಗ ಕೀಪರ್ ಸೋಲೇ ಕಾಣದೆ ಯಶಸ್ಸಿನ ತುತ್ತ ತುದಿ ತಲುಪಿದರು. ಅದೇ ವರುಶ ಶ್ರೀಲಂಕಾ ಪ್ರವಾಸದಲ್ಲಿ ಟೆಸ್ಟ್ ಪಾದಾರ‍್ಪಣೆ ಮಾಡಿದ ವಿಶ್ವನಾತ್ ಮೂರನೇ ಕ್ಯಾಂಡಿ ಟೆಸ್ಟ್ ನಲ್ಲಿ 6 ಕ್ಯಾಚ್ ಹಿಡಿದರೂ ಎಲ್ಲಾ ಪಂದ್ಯಗಳಲ್ಲಿ ಬ್ಯಾಟ್ ನಿಂದ ರನ್ ಬರ ಎದುರಿಸಿದರು. ಈ ಪ್ರವಾಸದ ಒಂದು ದಿನದ ಸರಣಿಯಲ್ಲೂ ರನ್ ಗಳಿಸದ ಅವರನ್ನು ಕಡೆಗೆ ಬಾರತ ತಂಡದಿಂದ ಕೈಬಿಡಲಾಯಿತು. ಅದಾದ ಎರಡು ವರುಶಗಳ ಬಳಿಕ 1987 ರಲ್ಲಿ ಮತೊಮ್ಮೆ ಅಂತರಾಶ್ಟ್ರಿಯ ಕ್ರಿಕೆಟ್ ಗೆ ಮರಳಿದ ವಿಶ್ವನಾತ್ ಪಾದರಸದಂತೆ ಕೀಪಿಂಗ್ ಮಾಡಿದರೂ ರನ್ ಗಳಿಸಲಾಗದೆ ವಿಶ್ವಕಪ್ ತಂಡದಲ್ಲಿ ಎಡೆ ಪಡೆಯದೆ 1988 ರಲ್ಲಿ ಶಾಶ್ವತವಾಗಿ ಬಾರತ ತಂಡದಿಂದ ಹೊರಗುಳಿದರು. ಅಲ್ಲಿಗೆ ಅರಳುವ ಮುನ್ನವೇ ಕೇವಲ 3 ಟೆಸ್ಟ್ ಮತ್ತು 22 ಒಂದು ದಿನದ ಪಂದ್ಯಗಳನ್ನಾಡಿದ ಒಂದು ಸೊಗಸಾದ ಪ್ರತಿಬೆ ಬಾಡಿ ಹೋಯಿತು.

ಕರ‍್ನಾಟಕ ತಂಡದೊಂದಿಗೆ ವಿಶ್ವನಾತ್

ರಾಜ್ಯ ತಂಡದ ಪರ 46 ರಣಜಿ ಪಂದ್ಯಗಳನ್ನಾಡಿ ಒಂದು ಶತಕ ಹಾಗೂ 16 ಅರ‍್ದ ಶತಕಗಳೊಂದಿಗೆ 34 ರ ಸರಾಸರಿಯಲ್ಲಿ 2,071 ರನ್ ಗಳಿಸಿ ಒಟ್ಟು 100 ಬಲಿ (77 ಕ್ಯಾಚ್, 23 ಸ್ಟಂಪಿಂಗ್) ಪಡೆದಿರುವ ವಿಶ್ವನಾತ್ ಒಂದು ರಣಜಿ ಹಾಗೂ ಒಂದು ಇರಾನಿ ಕಪ್ ಗೆದ್ದಿದ್ದಾರೆ. ಕರ‍್ನಾಟಕ ತಂಡದ ಅಗತ್ಯಕ್ಕೆ ತಕ್ಕಂತೆ ಓಪನಿಂಗ್ ಇಂದ ಹಿಡಿದು ಕೆಳಗಿನ ಕ್ರಮಾಂಕದಲ್ಲೂ ಬ್ಯಾಟ್ ನಿಂದ ಕೊಡುಗೆ ನೀಡುತ್ತಿದ್ದ ಅವರ ವಿಕೆಟ್ ನ ಹಿಂದಿನ ಕೊಡುಗೆಯನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ವಿಶ್ವನಾತ್ ಓಪನರ್ ಆಗಿ ಬಂದು ಬಿರುಸಿನ ಹೊಡೆತಗಳಿಂದ ಎಶ್ಟೋ ಬಾರಿ ಎದುರಾಳಿ ದ್ರುತಿಗೆಡುವಂತೆ ಮಾಡಿದ್ದುಂಟು. ಅದರಲ್ಲಿ 1983 ರ ರಣಜಿ ಪೈನಲ್ ನಲ್ಲಿ ಬಾಂಬೆ ಎದುರು ಗಳಿಸಿದ ಅವಳಿ ಅರ‍್ದ ಶತಕಗಳು ಅವರ ಅಳವಿಗೆ ಹಾಗೂ ಪಂದ್ಯದ ಮೇಲೆ ಅವರು ಬೀರುತ್ತಿದ್ದ ಪರಿಣಾಮಕ್ಕೆ ಎತ್ತುಗೆ. ಒಟ್ಟು 10 ವರುಶಗಳ ಕಾಲ 74 ಮೊದಲ ದರ‍್ಜೆ ಪಂದ್ಯಗಳನ್ನಾಡಿ 23 ಅರ‍್ದ ಶತಕ ಹಾಗೂ ಒಂದು ಶತಕದೊಂದಿಗೆ 3,158 ಗಳಿಸಿ145 ಕ್ಯಾಚ್ ಮತ್ತು 34 ಸ್ಟಂಪಿಂಗ್ ಗಳ ಸಾದನೆ ಮಾಡಿ ವಿಶ್ವನಾತ್ ಆಟದಿಂದ ದೂರ ಸರಿದರು. ಈಗಲೂ ಕರ‍್ನಾಟಕದ ಕ್ರಿಕೆಟ್ ಇತಿಹಾಸದಲ್ಲಿ ಅವರಿಗೆ ವಿಶಿಶ್ಟ ಸ್ತಾನ ಇದೆ. ಏಕೆಂದರೆ ಕಡಿಮೆ ಹೊತ್ತು ಆಡಿದರೂ ಅವರು ತಮ್ಮ ಗತ್ತಿನಿಂದ ಮೂಡಿಸಿದಂತಹ ಚಾಪು ಅಂತಹುದು.

ಬದುಕಿನಲ್ಲಿ ವಿಶಿ ಕಂಡ ಏರುಪೇರು

ವಿಶ್ವನಾತ್ ಇನ್ನೂ 23ರ ಹರೆಯದವರಾಗಿದ್ದಾಗಲೇ ಒಂದೇ ವರುಶದ ಅವದಿಯಲ್ಲಿ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿಹೋದರು. ಈ ಒಂಟಿತನ ಅವರ ಆಟದ ಮೇಲೆ ಪ್ರಬಾವ ಬೀರಿದ್ದು ಸುಳ್ಳಲ್ಲ. ಒಬ್ಬ ಮೇಲ್ಮಟ್ಟದ ಆಟಗಾರನಿಗೆ ಇರಬೇಕಾದ ಏಕಾಗ್ರತೆ ಅವರಲ್ಲಿ ಮಾಯವಾಗಿ ಕ್ರಮೇಣವಾಗಿ ಅವರ ಆಟ ಕಳೆಗುಂದುತ್ತಾ ಹೋಯಿತು. ಆ ವೇಳೆ ಅವರಿಗೆ ಒಬ್ಬ ಗೆಳೆಯ, ಮಾರ‍್ಗದರ‍್ಶಕ ಇದ್ದು, ಬೆನ್ನಿಗೆ ನಿಂತಿದ್ದರೆ ಅವರ ಪ್ರತಿಬೆ ಪೋಲಾಗದೆ ಕ್ರಿಕೆಟ್ ಲೋಕದಲ್ಲಿ ಅವರು ಬೆಳಗುತ್ತಿದ್ದರೇನೋ ಎಂದೆನಿಸದೆ ಇರದು. ಬಾರತ ತಂಡಕ್ಕೆ ಮರಳುವ ಹಾದಿಯಲ್ಲಿ ಒಮ್ಮೆ ಬೋರ‍್ಡ್ ಅದ್ಯಕ್ಶರ ತಂಡದ ಪರ ಪ್ರವಾಸಿ ಆಸ್ಟ್ರೇಲಿಯಾ ಎದುರು (70 ಮತ್ತು ಔಟಾಗದೆ 40) ರನ್ ಗಳಿಸಿದ್ದರು. ಈ ಇನ್ನಿಂಗ್ಸ್ ವೇಳೆ ಅವರು ಬಾರಿಸಿದ ಒಂದು ಸಿಕ್ಸ್ ಚಿನ್ನಸ್ವಾಮಿ ಅಂಗಳದಿಂದ ಹೊರ ಹೋಗಿತ್ತು. ಆ ಹೊಡೆತವನ್ನು ಕಂಡು ಆಸ್ಟ್ರೇಲಿಯಾದ ದಿಗ್ಗಜ ನಾಯಕ ಆಲನ್ ಬಾರ‍್ಡರ್ ದಿಗ್ಬ್ರಮೆಗೊಂಡಿದ್ದರು. ಹೀಗೆ ಆಡಿದರೂ ವಿಶಿಯವರ ಆಟದಲ್ಲಿ ನಿರಂತರತೆ ಎಂದೂ ಮರಳಲಿಲ್ಲ. 1989/90 ರ ಹೊತ್ತಿಗೆ ಅವರಿಗೆ ಆಟದ ಮೇಲಿನ ಒಲವೂ ಉಳಿಯಲಿಲ್ಲ. 27-28 ರ ವಯಸ್ಸಿಗೆ ಆಟಗಾರರು ಸಹಜವಾಗಿ ಪಕ್ವತೆ ಕಂಡುಕೊಂಡು ತಮ್ಮ ಆಟದ ಉತ್ತುಂಗ ತಲುಪುತ್ತಾರೆ, ಆದರೆ ಬದುಕಲ್ಲಿ ಹಲವಾರು ಕಾರಣಗಳಿಂದ ನೊಂದಿದ್ದ ವಿಶ್ವನಾತ್ ಮಾತ್ರ ಕೇವಲ 28 ನೇ ವಯಸ್ಸಿಗೆ ಬಿಹಾರ್ ಎದುರು ತಮ್ಮ ಕಡೇ ಪಂದ್ಯ ಆಡಿದರು. ಅವರು ಈ ಪಂದ್ಯದಲ್ಲಿ 70 ರನ್ ಗಳಿಸಿದ್ದು ಅವರಲ್ಲಿ ಇನ್ನೂ ಆಡುವ ಅಳವಿತ್ತು ಎಂಬುದಕ್ಕೆ ಸಾಕ್ಶಿ. ಅವರು ಕೆಲಸ ಮಾಡುತ್ತಿದ್ದ ಬ್ಯಾಂಕ್ ಬೆಂಗಳೂರಿನಿಂದ ಬೇರೆಡೆಗೆ ಅವರನ್ನು ವರ‍್ಗ ಮಾಡಿದಾಗ ಆ ಕೆಲಸವನ್ನೇ ಬಿಟ್ಟರು.

ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಿದ ವಿಶಿ

ಕ್ರಿಕೆಟ್ ಅಂಗಳದಿಂದ ಹೊರನಡೆದ ಮೇಲೆ ವಿಶ್ವನಾತ್ ಗಲ್ಪ್ ದೇಶದಲ್ಲಿ ಕೆಲ ಕಾಲ ಕೆಲಸ ಮಾಡಿ ಅಲ್ಲಿಂದ ಹಿಂದಿರುಗಿದ ಮೇಲೆ ಯಾರೊಡನೆಯೂ ಒಡನಾಟ ಇಟ್ಟುಕೊಳ್ಳದೆ ಅಗ್ನಾತವಾಗಿದ್ದರು. ಆದರೂ ಕ್ರಿಕೆಟ್ ನೊಟ್ಟಿಗಿನ ನಂಟು ಅವರನ್ನು ಬಿಡಲಿಲ್ಲ. ಐದು ವರುಶಗಳ ಬಳಿಕ 1995 ರಲ್ಲಿ ಅಂಪೈರ್ ಪರೀಕ್ಶೆಯಲ್ಲಿ ತೇರ‍್ಗಡೆಯಾಗಿ ಮತ್ತೊಮ್ಮೆ ಕ್ರಿಕೆಟ್ ಅಂಗಳಕ್ಕೆ ಪ್ರವೇಶ ಮಾಡಿದರು. ಬಾರತದ ಎಲೈಟ್ ಅಂಪೈರ್ ಪಟ್ಟಿಯಲ್ಲಿ ಎಡೆ ಪಡೆದಿರುವ ವಿಶ್ವನಾತ್ 1997 ರಲ್ಲಿ ಹೆಂಗಸರ ವಿಶ್ವಕಪ್ ನಲ್ಲಿ ಅಂಪೈರ್ ಆಗಿ ಕೆಲಸ ಮಾಡಿದರು. ಬೆಂಗಳೂರಿನ ಏರ‍್ಪೋರ‍್ಟ್ ರಸ್ತೆಯಲ್ಲಿ ತಮ್ಮ ಹೆಸರಿನಲ್ಲಿ ಕ್ರಿಕೆಟ್ ಅಕ್ಯಾಡೆಮಿಯೊಂದನ್ನು ತೆರೆದು ಅವರು ಎಳೆಯರಿಗೆ ಆಟದ ಪಟ್ಟುಗಳನ್ನುಕಲಿಸುತ್ತಿರುವುದು ವಿಶೇಶ. ಈಗ ತಮ್ಮ ಸಮಕಾಲೀನ ಆಟಗಾರರೊಂದಿಗೆ ಬೆರೆತು ಮೊದಲಿದ್ದಂತೆ ಎಲ್ಲರಲ್ಲೊಬ್ಬರಾಗಿ ಬದುಕುತ್ತಿರುವ ಸದಾನಂದ್ ವಿಶ್ವನಾತ್ ರಿಗೆ ಲಾರ‍್ಡ್ಸ್ ಹಾಗೂ ಮೆಲ್ಬರ‍್ನ್ ಕ್ರಿಕೆಟ್ ಗ್ರೌಂಡ್ ಅಂತಹ ಐತಿಹಾಸಿಕ ಅಂಗಳಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡಬೇಕೆನ್ನುವ ಹೆಬ್ಬಯಕೆ ಇದೆ. ಹೇರಳವಾಗಿ ಪ್ರತಿಬೆಯಿದ್ದರೂ ಬದುಕಿನ ಏರುಪೇರುಗಳಿಂದ ಆಟಗಾರನಾಗಿ ಅವರು ನಿರೀಕ್ಶಿತ ಯಶಸ್ಸು ಕಾಣದೆ ಹೋಗಿರಬಹುದು. ಆದರೆ ಅಂಪೈರ್ ಆಗಿ ನಮ್ಮ ವಿಶಿ ಅವರಿಗಿರುವ ಬಯಕೆ ಈಡೇರಲಿ ಎಂದು ನಾವೆಲ್ಲರೂ ಹರಸೋಣ!

(ಚಿತ್ರ ಸೆಲೆ: thehindu.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: