ಗೆದ್ದಲುಹುಳು – ಕುತೂಹಲಕಾರಿ ಸಂಗತಿಗಳು

– ಶ್ಯಾಮಲಶ್ರೀ.ಕೆ.ಎಸ್.

ನಮ್ಮ ಸುತ್ತ ಮುತ್ತ ನಮ್ಮಂತೆ ಬದುಕುತ್ತಿರುವ ಎಶ್ಟೋ ಅನ್ಯ ಜೀವಿಗಳಿಗೆ ಬೂಮಿ ಒಂದು ಆಶ್ರಯತಾಣ. ಹಾಗೆಯೇ ಬೂಮಿಯನ್ನು ಆಶ್ರಯಿಸಿ ಬದುಕುತ್ತಿರುವ ವೈವಿದ್ಯಮಯ ಜೀವಿಗಳಲ್ಲಿ ‘ಗೆದ್ದಲು’ ಕೂಡಾ ಒಂದು. ಇದು ಇರುವೆಯಂತೆ ಅತೀ ಸಣ್ಣ ಕ್ರಿಮಿ ಹಾಗೂ ಸಂಗಜೀವಿ. ಆಂಗ್ಲ ಬಾಶೆಯಲ್ಲಿ ‘ಟರ‍್ಮೈಟ್ಸ್ ‘(Termites)ಎಂತಲೂ, ಸಾಮಾನ್ಯವಾಗಿ ವೈಟ್ ಆಂಟ್ಸ್ (white ants) ಅತವಾ ಬಿಳಿ ಇರುವೆಗಳು ಎಂದು ಕರೆಸಿಕೊಳ್ಳುವ ಇವು ಬೂಮಿಯ ಕೆಳ ಬಾಗದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಹಲವಾರು ಮಿಲಿಯನ್ ವರ‍್ಶಗಳಿಂದ ಬೂಮಿಯಲ್ಲಿ ವಾಸಿಸುತ್ತಿರುವ ಗೆದ್ದಲು ಹುಳುಗಳು ಮೂರು ಸಾವಿರ ಬಗೆಯ ಜಾತಿಗಳಲ್ಲಿವೆ ಎಂದು ಕೀಟಶಾಸ್ತ್ರಜ್ನರು ಅಂದಾಜಿಸಿದ್ದಾರೆ.

ಒಣಮರಗಳೆಂದರೆ ಗೆದ್ದಲುಗಳಿಗೆ ತುಂಬಾ ಇಶ್ಟ. ಒಣಗಿದ ಮರ, ದಿಮ್ಮಿ, ಎಲೆ, ಗಿಡ, ಹುಲ್ಲು, ಹಳೆಯ ಪುಸ್ತಕಗಳು ಹೀಗೆ ಸತ್ತ ಸಸ್ಯಜನ್ಯಗಳನ್ನು ತಿಂದು ಜೀವಿಸಬಲ್ಲ ಜೀವಿಗಳಿವು. ಈ ರೀತಿ ಒಣಗಿದ ಮರ, ಮರದ ವಸ್ತುಗಳಿಗೆ ಮಣ್ಣಿನ ಹೊದಿಕೆಯನ್ನು ನಿರ‍್ಮಿಸಿಕೊಂಡು ಗುಂಪು ಗುಂಪಾಗಿ ತಿನ್ನುವುದರಿಂದ ಗೆದ್ದಲು ಹಿಡಿದಿದೆ ಎಂದು ಸಾಮಾನ್ಯವಾಗಿ ಹೇಳುವುದುಂಟು. ಕೆಲವೊಮ್ಮೆ ಮನೆಯ ಒಳಗೂ ದಾಳಿ ಮಾಡಿ ಮನೆಯ ಪೀಟೋಪಕರಣಗಳು, ಕಿಟಕಿ, ಬಾಗಿಲುಗಳಿಗೆ ಗೆದ್ದಲು ಹಿಡಿದು ಹಾಳಾಗಿರುವುದನ್ನು ಗಮನಿಸಿರುತ್ತೇವೆ. ಗೆದ್ದಲು ಹುಳುಗಳು ಅರ‍್ದಂಬರ‍್ದ ಕತ್ತರಿಸಿದ ಮರಗಳ ಬೇರುಗಳಲ್ಲಿ ಬಹುಬೇಗ ಅಂಟಿಕೊಂಡು ಹಾನಿಗೊಳಿಸುತ್ತವೆ. ಬೂಮಿಯನ್ನು ಸರಿಯಾದ ಸಮಯಕ್ಕೆ ಉಳುಮೆ ಮಾಡದೆ, ಹಾಗೆಯೇ ಬಿಡುವುದರಿಂದಲೂ ಕ್ರುಶಿಬೂಮಿಗಳಿಗೆ ಗೆದ್ದಲು ಹಿಡಿಯುವುದು. ಈ ಗೆದ್ದಲುಗಳಿಂದ ರಕ್ಶಿಸಲು ಅನೇಕ ಕ್ರಿಮಿನಾಶಕಗಳ ಸಿಂಪಡಣೆಯ ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಗೆದ್ದಲುಗಳ ವಿಶಯದಲ್ಲಿ, ಕೆಲವು ಕಾರಣಗಳಿಗೆ ಅವು ಮಾರಕವೆಂಬ ನಿಲುವು ಇದ್ದರೂ, ಅವು ಪರಿಸರಕ್ಕೆ ಪೂರಕವೂ ಹೌದು ಎಂಬುದು ಹಲವು ತಜ್ನರ ಅಬಿಪ್ರಾಯ.

ಗೆದ್ದಲು ಹುಳುಗಳನ್ನು ರಾಣಿಹುಳು ಅತವಾ ರಾಜವಂಶ, ಕಾರ‍್ಮಿಕ ಅತವಾ ಕೆಲಸಗಾರ ಹಾಗೂ ಸೈನಿಕ ಎಂಬ ಮೂರು ಮುಕ್ಯ ವಿದಗಳಾಗಿ ವಿಂಗಡಿಸಲಾಗಿದೆ. ರಾಣಿಹುಳು ಸಂತಾನೋತ್ಪತ್ತಿಗೆ, ಕಾರ‍್ಮಿಕ ಹುಳು ಗೂಡು ಕಟ್ಟಲಿಕ್ಕಾಗಿ, ಸೈನಿಕ ಹುಳು ಗೂಡಿನ ಸಂರಕ್ಶಣೆ ಮತ್ತು ಇತರೆ ಎಲ್ಲಾ ಕಾರ‍್ಯಗಳನ್ನು ನಿರ‍್ವಹಿಸುತ್ತವೆ. ಗೆದ್ದಲು ಹುಳುಗಳಿಗೆ ಪ್ರಾಯ ಬಂದಾಗ ರೆಕ್ಕೆಗಳು ಬರುತ್ತವೆ. ಕಾರ‍್ಮಿಕ ಮತ್ತು ಸೈನಿಕ ವರ‍್ಗದ ಹುಳುಗಳ ಜೀವಿತಾವದಿ ಒಂದು ಅತವಾ ಎರಡು ವರ‍್ಶಗಳಾದರೆ, ರಾಣಿಹುಳುಗಳು ಸುಮಾರು ಹತ್ತು ವರ‍್ಶಗಳವರೆಗೆ ಜೀವಿಸುತ್ತವೆ.

ಗೆದ್ದಲು ಹುಳುಗಳು ಬೂಮಿಯ ಆಳಕ್ಕೆ ತಲುಪಿ ಅಲ್ಲಿಂದ ತೇವವಿರುವ ಮಣ್ಣನ್ನು ಹೊತ್ತು ತಂದು ಬ್ರುಹದಾಕಾರದ ಗೆದ್ದಲು ಗೂಡನ್ನು ಕಟ್ಟಿಕೊಳ್ಳುತ್ತವೆ. ಈ ಗೂಡುಗಳನ್ನ್ನೇ ನಾವು ಹುತ್ತವೆನ್ನುತ್ತೇವೆ. ಸುಮಾರು 20 ಅಡಿ ಎತ್ತರದವರೆಗೂ ಗೂಡನ್ನು ನಿರ‍್ಮಿಸುವಂತೆ ಸಾಮರ‍್ತ್ಯ ಈ ಗೆದ್ದಲು ಹುಳಗಳಿಗಿದೆ. ಗೆದ್ದಲು ಗೂಡಲ್ಲಿ ಅಲ್ಲಲ್ಲಿ ಚಿಕ್ಕ ಕೋಣೆಗಳು, ದ್ವಾರಗಳಿರಲಿದ್ದು, ಗೂಡಿನ ಒಳಗೆ ತಂಪಾದ ವಾತಾವರಣವನ್ನು ಹಿಡಿದಿಟ್ಟಿರುತ್ತವೆ. ಈ ತಂಪಾದ ಅನುಬವಕ್ಕಾಗಿಯೇ ಗೆದ್ದಲುಗಳು ಕಟ್ಟಿದ ಗೂಡಿಗೆ ವಿಶಪೂರಿತ ಹಾವುಗಳು ಬಂದು ಆಶ್ರಯ ಪಡೆಯುವುವು. ಹೀಗಾಗಿ ಗೆದ್ದಲುಗಳನ್ನು ಪರೋಪಕಾರಿ ಜೀವಿಗಳೆಂದರೂ ತಪ್ಪಿಲ್ಲ. ಗೆದ್ದಲುಳಿರುವ ಹುತ್ತಗಳಿಗೆ ಹಾವುಗಳು ಎಂದಿಗೂ ಬರುವುದಿಲ್ಲ. ಹಾಗೆ ಬರಲು ಗೆದ್ದಲು ಹುಳುಗಳು ಬಿಡುವುದೂ ಇಲ್ಲ. ಲಕ್ಶಾಂತರ ಹುಳುಗಳು ಒಮ್ಮೆಲೇ ಎರಗಿ ಶತ್ರುಗಳನ್ನು ನಿರ‍್ನಾಮಗೊಳಿಸುವಂತಹ ಸಾಮರ‍್ತ್ಯ ಅವುಗಳಿಗಿದೆ. ಆದ್ದರಿಂದಲೇ ಹಾವು ಹಲ್ಲಿ ಮತ್ತಿತರ ಯಾವುದೇ ಸರೀಸ್ರುಪಗಳಿಗೆ ಪ್ರವೇಶವಿರುವುದಿಲ್ಲ . ಗೆದ್ದಲುಗಳ ಗೂಡು ಅತವಾ ಹುತ್ತಗಳಲ್ಲಿ 15ಡಿಗ್ರಿ ಗಿಂತಲೂ ಹೆಚ್ಚು ಉಶ್ಣಾಂಶವು ಆವರಿಸಿದರೆ, ತಮಗೆ ಅನುಕೂಲವಾದ ತಂಪಿನ ವಾತಾವರಣಕ್ಕೆ ಕುಂಟಿತವಾದರೆ ಅವು ಒಟ್ಟಿಗೆ ಗೂಡನ್ನು ತೊರೆದು ಬೇರೆಡೆಗೆ ವಲಸೆ ಹೋಗುತ್ತವೆ. ಹೀಗೆ ಅವು ತೊರೆದ ಹುತ್ತಗಳಲ್ಲಿ ಹಾವುಗಳು ಬಂದು ಸೇರಿಕೊಳ್ಳುವುವು . ಇಂತಹ ಹುತ್ತಗಳಿದ್ದಲ್ಲಿ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ.

ನಾಗರಪಂಚಮಿ ಹಾಗೂ ಮತ್ತಿತರ ಹಬ್ಬಗಳ ದಿನಗಳಲ್ಲಿ ಹಾಲೆರೆದು ಗೆದ್ದಲುಗೂಡನ್ನು ದೈವಸ್ವರೂಪವೆಂದು ಪೂಜಿಸುವ ಸಂಪ್ರದಾಯ ನಮ್ಮ ನಾಡಿನಲ್ಲಿದೆ. ಗೆದ್ದಲು ಹುಳುಗಳು ಬೂಮಿಯನ್ನು ಪಲವತ್ತಾಗಿಡುವಲ್ಲಿ ಪರೋಕ್ಶವಾಗಿ ಕಾರಣವಾಗಿವೆ . ಆದ್ದರಿಂದ ಗೆದ್ದಲು ಹುಳುಗಳನ್ನು ರೈತನ ಮಿತ್ರ ಎಂತಲೂ ಹೆಸರಿಸಿರುತ್ತಾರೆ. ಈ ರೀತಿಯಾಗಿ ಪರಿಸರಕ್ಕೆ ಪೂರಕವಾಗಿವೆ ಎಂದು ಹೇಳಬಹುದು.

( ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks