ಸಕಲೇಶ ಮಾದರಸನ ವಚನಗಳ ಓದು – 3ನೆಯ ಕಂತು
– ಸಿ.ಪಿ.ನಾಗರಾಜ.
ಎನ್ನ ಮನದಲ್ಲಿ ದಿಟವಿಲ್ಲ
ಪೂಜಿಸಿ ಏವೆನು
ಹೃದಯದಲ್ಲೊಂದು
ವಚನದಲ್ಲೊಂದು
ಎನಗೆ ನೋಡಾ
ಎನ್ನ ಕಾಯ ಭಕ್ತ
ಮನ ಭವಿ
ಸಕಲೇಶ್ವರದೇವಾ.
ವ್ಯಕ್ತಿಯು ತನ್ನ ನಡೆನುಡಿಗಳನ್ನು ತಾನೇ ಒರೆಹಚ್ಚಿ ನೋಡಿಕೊಳ್ಳುತ್ತ, ತನ್ನ ಮನದೊಳಗಿನ ಒಳಮಿಡಿತಗಳಿಗೂ ಬಹಿರಂಗದ ನಡೆನುಡಿಗಳಿಗೂ ಇರುವ ಅಂತರವನ್ನು ಕುರಿತು ಪರಿತಪಿಸುತ್ತಿರುವುದನ್ನು ಈ ವಚನದಲ್ಲಿ ಹೇಳಲಾಗಿದೆ.
ಎನ್ನ=ನನ್ನ; ಮನದಲ್ಲಿ=ಮನಸ್ಸಿನಲ್ಲಿ; ದಿಟ+ಇಲ್ಲ; ದಿಟ=ನಿಜ/ಸತ್ಯ/ವಾಸ್ತವ;
ಎನ್ನ ಮನದಲ್ಲಿ ದಿಟವಿಲ್ಲ=ನನ್ನ ಮನದಲ್ಲಿ ಒಳ್ಳೆಯ ನಡೆನುಡಿಗಳ ಬಗ್ಗೆ ಚಿಂತನೆಯಿಲ್ಲ. ಕೆಟ್ಟ ಕಾಮನೆಗಳೇ ನನ್ನ ಮನದಲ್ಲಿ ತುಂಬಿವೆ;
ಪೂಜಿಸಿ=ಪೂಜೆಯನ್ನು ಮಾಡಿ; ಏವೆನು=ಏನು ಮಾಡಲಿ;
ಎನ್ನ ಮನದಲ್ಲಿ ದಿಟವಿಲ್ಲ; ಪೂಜಿಸಿ ಏವೆನು=ಅಂತರಂಗದ ಮನದಲ್ಲಿ ಕೆಟ್ಟ ಕಾಮನೆಗಳನ್ನು ಹೊಂದಿರುವ ನಾನು, ಬಹಿರಂಗದಲ್ಲಿ ಶಿವನನ್ನು ಪೂಜಿಸುತ್ತಿರುವುದರಿಂದ ಏನು ತಾನೆ ಪ್ರಯೋಜನ. ಅಂದರೆ ಒಳ್ಳೆಯದನ್ನು ಪಡೆಯಲಾರೆನು;
ಹೃದಯ+ಅಲ್ಲಿ+ಒಂದು; ಹೃದಯ=ಎದೆ/ಮನಸ್ಸು; ವಚನ+ಅಲ್ಲಿ+ಒಂದು; ವಚನ=ಮಾತು/ನುಡಿ;
ಹೃದಯದಲ್ಲೊಂದು ವಚನದಲ್ಲೊಂದು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ನನ್ನ ಮನದಲ್ಲಿ ಕೆಟ್ಟ ಒಳಮಿಡಿತಗಳು ತುಡಿಯುತ್ತಿವೆ. ಆದರೆ ಅವೆಲ್ಲವನ್ನು ಮುಚ್ಚಿಟ್ಟುಕೊಂಡು, ಬಹಿರಂಗದ ಸಾಮಾಜಿಕ ವ್ಯವಹಾರಗಳಲ್ಲಿ ಇತರರ ಮುಂದೆ ಸತ್ಯ, ನೀತಿ, ನ್ಯಾಯದ ನುಡಿಗಳನ್ನಾಡುತ್ತಿದ್ದೇನೆ;
ಕಾಯ=ಶರೀರ/ದೇಹ/ಮಯ್; ಭಕ್ತ=ಮೇಲು ಕೀಳಿನ ಜಾತಿ ಕಟ್ಟುಪಾಡುಗಳಿಂದ ಹೊರಬಂದು, ಒಳ್ಳೆಯ ನಡೆನುಡಿಗಳಿಂದ ಬಾಳುವುದೇ ಶಿವಪೂಜೆಯೆಂದು ತಿಳಿದು, ಒಳ್ಳೆಯ ಕಾಯಕದ ಮೂಲಕ ತನಗೆ ಒಳಿತನ್ನು ಬಯಸುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು ;
ಭವಿ=ಮೇಲು ಕೀಳಿನ ಜಾತಿ ವ್ಯವಸ್ತೆಯನ್ನು ಒಪ್ಪಿಕೊಂಡು, ಮಾನವ ಬದುಕಿನ ಆಗುಹೋಗುಗಳಿಗೆ ಕರ್‍ಮ ಸಿದ್ದಾಂತ ಮತ್ತು ಹಿಂದಿನ ಜನ್ಮದ ಪಾಪ ಪುಣ್ಯಗಳೇ ಕಾರಣವೆಂದು ನಂಬಿಕೊಂಡಿರುವ ವ್ಯಕ್ತಿ;
ಎನ್ನ ಕಾಯ ಭಕ್ತ; ಮನ ಭವಿ=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಸಮಾಜದ ಕಣ್ಣಿಗೆ ನಾನು ಬಹಳ ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಯಂತೆ ಕಾಣಿಸಿಕೊಳ್ಳುತ್ತಿದ್ದೇನೆ. ಆದರೆ ನನ್ನ ಮನದೊಳಗೆ ಅತ್ಯಂತ ಕೆಟ್ಟ ಕಾಮನೆಗಳು ತುಂಬಿವೆ;
ಸಕಲೇಶ್ವರದೇವ=ಶಿವನಿಗೆ ಇದ್ದ ಮತ್ತೊಂದು ಹೆಸರು. ಸಕಲೇಶ ಮಾದರಸರ ವಚನಗಳ ಅಂಕಿತನಾಮ;
ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಳಗೊಂದು ಮತ್ತು ಹೊರಗೊಂದು ರೀತಿಯ ಇಬ್ಬಗೆಯ ವ್ಯಕ್ತಿತ್ವ ಬೇರೆ ಬೇರೆ ಪ್ರಮಾಣದಲ್ಲಿ ಇದ್ದೇ ಇರುತ್ತದೆ. ವ್ಯಕ್ತಿಯ ಇಂತಹ ಇಬ್ಬಗೆಯ ವರ್‍ತತನೆಗೆ ಕಾರಣವೇನೆಂಬುದನ್ನು ನಿಸರ್‍ಗದ ಮತ್ತು ಸಮಾಜದ ನೆಲೆಗಳಿಂದ ನೋಡಬೇಕು.
ಜಗತ್ತಿನಲ್ಲಿ ಹುಟ್ಟಿ ಬೆಳೆದು ಬಾಳಿ ಅಳಿಯುತ್ತಿರುವ ಜೀವಿಗಳಲ್ಲಿ ಮಾನವ ಜೀವಿಯನ್ನು ಹೊರತುಪಡಿಸಿ,ಇನ್ನುಳಿದ ಪ್ರಾಣಿ, ಹಕ್ಕಿ, ಕ್ರಿಮಿಕೀಟಗಳೆಲ್ಲವೂ ನಿಸರ್‍ಗದ ನೆಲೆಯಲ್ಲಿ ಬೆತ್ತಲೆಯಾಗಿ ಅಂದರೆ ಮಯ್ ಮೇಲೆ ಯಾವುದೇ ಬಗೆಯ ಬಟ್ಟೆಯನ್ನು ತೊಡದೆ, ಬೆತ್ತಲೆಯಾಗಿಯೇ ನಿಸರ್‍ಗದೊಂದಿಗೆ ಜತೆಗೂಡಿ ಬಾಳಿ ಅಳಿಯುತ್ತವೆ. ಆದರೆ ಮಯ್ ಮೇಲೆ ಬಟ್ಟೆಯನ್ನು ತೊಟ್ಟಿರುವ ಮಾನವ ಜೀವಿಯು ಮಾತ್ರ ನಿಸರ್‍ಗದ ನೆಲೆಯಲ್ಲಿ ಇತ್ತ ಒಂದು ಪ್ರಾಣಿಯಾಗಿ; ಅತ್ತ ತಾನೇ ಕಟ್ಟಿಕೊಂಡಿರುವ ಸಮಾಜದ ನೆಲೆಯಲ್ಲಿ ಒಬ್ಬ ಸಾಮಾಜಿಕ ವ್ಯಕ್ತಿಯಾಗಿ ಬಾಳುತ್ತಿದ್ದಾನೆ. ನಿಸರ್‍ಗ ಸಹಜವಾದ ಹೊಟ್ಟೆಯ ಹಸಿವನ್ನು ಹಿಂಗಿಸಿಕೊಳ್ಳಲು ಮತ್ತು ಕಾಮದ ನಂಟನ್ನು ಪಡೆಯಲು ಅವನ ಮಯ್ ಮನಸ್ಸು ಒಂದು ನೆಲೆಯಲ್ಲಿ ತುಡಿಯುತ್ತಿದ್ದರೆ, ಮತ್ತೊಂದು ಕಡೆ ಜಾತಿ ಮತದ ಕಟ್ಟುಪಾಡು, ಸಂಪ್ರದಾಯದ ಆಚರಣೆ ಮತ್ತು ರಾಜ್ಯಾಡಳಿತದ ಕಾನೂನು ವ್ಯಕ್ತಿಯ ನಡೆನುಡಿಗಳನ್ನು ರೂಪಿಸಿ ಸಮಾಜದ ನೆಲೆಯಲ್ಲಿ ನಿಯಂತ್ರಿಸುತ್ತಿರುತ್ತವೆ.
ಈ ರೀತಿ ನಿಸರ್‍ಗ ಮತ್ತು ಸಮಾಜದ ನಡುವೆ ಜೀವಿಸುತ್ತಿರುವ ಮಾನವ ಜೀವಿಯನ್ನು ಇತರ ಜೀವಿಗಳ ಬದುಕಿನಲ್ಲಿ ಎದುರಾಗದ “ ಒಳಿತು/ಕೆಡುಕು; ಸರಿ/ತಪ್ಪು; ನೀತಿ/ಅನೀತಿ; ನ್ಯಾಯ/ಅನ್ಯಾಯದ ನಡೆನುಡಿಗಳೆಂಬ ಇಬ್ಬಗೆಯ ತಾಕಲಾಟಗಳು” ನಿರಂತರವಾಗಿ ಬದುಕಿನ ಕೊನೆಗಳಿಗೆಯ ತನಕವೂ ಕಾಡುತ್ತಿರುತ್ತವೆ.
ಆದ್ದರಿಂದಲೇ ಹನ್ನೆರಡನೆಯ ಶತಮಾನದ ಶಿವಶರಣ-ಶರಣೆಯರು ಜೀವನದ ಉದ್ದಕ್ಕೂ ತಮ್ಮ ಮಯ್-ಮನವನ್ನು ಹತೋಟಿಯಲ್ಲಿಟ್ಟುಕೊಂಡು, ತಮ್ಮ ನಡೆನುಡಿಯನ್ನು ತಾವೇ ಗಮನಿಸುತ್ತ, ಸಾಮಾಜಿಕವಾಗಿ ಒಳ್ಳೆಯತನದಿಂದ ಬಾಳಬೇಕೆಂಬ ಅರಿವು ಮತ್ತು ಎಚ್ಚರವನ್ನು ಹೊಂದಿದ್ದರು.
( ಚಿತ್ರ ಸೆಲೆ: sugamakannada.com )
ಇತ್ತೀಚಿನ ಅನಿಸಿಕೆಗಳು