ಮುದ್ದಿನ ನಾಯಿ ‘ಸೋನಿ’

– ರಾಹುಲ್ ಆರ್. ಸುವರ‍್ಣ.

ನಾವು ಮಾತನಾಡುವಾಗ ಸಾಮಾನ್ಯವಾಗಿ ‘ನಾಯಿ ನಾಯಿ’ ಎಂದು ಬೈದುಕೊಳ್ಳುತ್ತೇವೆ, ಅದಕ್ಕೆ ನಿಜವಾದ ಕಾರಣ ಏನೆಂದು ಕೇಳಿದರೆ, ಹೇಳಿದವರಿಗೂ ಗೊತ್ತಿರುವುದಿಲ್ಲ, ಕೇಳಿದವರಿಗೂ ಅರಿವಿರುವುದಿಲ್ಲ. ನಮ್ಮ ಜಗಳದ ರಂಪಾಟದೊಳಗೆ ಕಾರಣವಿಲ್ಲದೆ ಆ ಮುಗ್ದ ಪ್ರಾಣಿಯ ಹೆಸರೊಂದನ್ನು ಸೇರಿಸಿಕೊಂಡಿರುತ್ತೇವೆ.

ಪ್ರಾಣಿಗಳನ್ನು ಪ್ರೀತಿಸುವ ಪ್ರತಿಯೊಬ್ಬರು ಮನೆಯಲ್ಲಿ ಸಾಕಲು ಇಚ್ಚಿಸುವ ಪ್ರಾಣಿಯೆಂದರೆ ಅದು ನಾಯಿ. ನಾಯಿ ನಿಯತ್ತಿಗೆ ಗುರುತಿಸಲ್ಪಟ್ಟ ಮೊದಲ ಜೀವಿ ಎಂದರೆ ತಪ್ಪಾಗಲಾರದು. ಸಾಕು ಪ್ರಾಣಿಗಳು ಹಲವಾರಿವೆ, ಆದರೆ ನಾಯಿ ಬಹುತೇಕರಿಗೆ ಹಿಡಿಸುವುದು, ಏಕೆಂದರೆ ಅದು ನಮ್ಮೊಂದಿಗೆ ಹೊಂದಿಕೊಳ್ಳುವ ರೀತಿ, ತೋರಿಸುವ ಪ್ರೀತಿ, ನಿಯತ್ತು, ಮಾಡುವ ಕೀಟಲೆ ಇನ್ಯಾವ ಪ್ರಾಣಿಗಳು ಮಾಡಲಾರವು. ಆದ್ದರಿಂದ ನಾಯಿ ಅತಿ ಹೆಚ್ಚು ಪ್ರೀತಿಯಿಂದ ನಮಗೆ ಹತ್ತಿರವಾಗುತ್ತದೆ.

ನಾನು ಇದುವರೆಗೂ ಸಾಕಶ್ಟು ನಾಯಿಗಳನ್ನು ನೋಡಿದ್ದೇನೆ, ಆದರೆ ನಮ್ಮ ಯಕ್ಶಗಾನ ಕೇಂದ್ರದ ಸೋನಿ ರೀತಿ ಮತ್ತೊಂದು ನಾಯಿಯನ್ನು ಇದುವರೆಗೂ ನಾನು ಕಂಡಿಲ್ಲ. ನಾವು ಮನುಶ್ಯರೇ ಒಬ್ಬರಿದ್ದಂತೆ ಇನ್ನೊಬ್ಬರು ಇರುವುದಿಲ್ಲ, ಇನ್ನು ಅವುಗಳು ಇರುತ್ತವೆಯೇ? ನನ್ನ ಮತ್ತು ಸೋನಿಯ ನಂಟು ಹೆಚ್ಚು ಕಡಿಮೆ ನಾಲ್ಕರಿಂದ ಐದು ವರ‍್ಶ ಮಾತ್ರ. ಆಕೆ ಹುಟ್ಟಿನಿಂದಲೇ ಕೇಂದ್ರದಲ್ಲಿ ಇದ್ದವಳಲ್ಲ, ಗರ‍್ಬದಾರಿಣಿಯಾಗಿ ಮುದ್ದಾದ ಮಕ್ಕಳನ್ನು ಹೆತ್ತು ಅವುಗಳ ಮೂಲಕ ಎಲ್ಲರ ಮನ ಗೆದ್ದು ಒಳ ಸೇರಿದವಳು. ಅವಳ ಮಕ್ಕಳು ಎಶ್ಟು ಮುದ್ದಾಗಿದ್ದರೋ ಆಕೆಯೂ ಅಶ್ಟೇ ಮುಗ್ದತೆಯಿಂದ ಎಲ್ಲರ ಮನಸ್ಸಿನಲ್ಲಿ ಪ್ರೀತಿ ಹುಟ್ಟು ಹಾಕಿದ್ದಳು. ಈಕೆ ಮನುಶ್ಯರನ್ನು ಕಂಡರೆ ಮೊದ ಮೊದಲು ದೂರ ಸರಿಯುತ್ತಿದ್ದಳಾದರೂ, ಕೆಲ ಕಾಲ ಕಳೆದ ಬಳಿಕ ಅವಳ ಕಾಲುಗಳನೆತ್ತಿ ನಮ್ಮ ಕೈಗಳಿಗೆ ಇಡುವಶ್ಟು ಆಪ್ತಳಾದಳು. ಕೆಲವೊಂದು ಸಂದರ‍್ಬಗಳಲ್ಲಿ ಸಾವಿನ ಬಾಯಿಗೆ ಕಾಲಿಟ್ಟು ಹಿಂದೆ ಬಂದಿದ್ದಳು. ಆಯಸ್ಸನ್ನು ಆ ದೇವರು ಇಂತಿಶ್ಟು ಎಂದು ಬರೆದಿರಬೇಕಾದರೆ ಯಾರಿಂದ ತಾನೇ ಅದನ್ನು ಅಳಿಸಲು ಅತವಾ ತಿದ್ದಲು ಸಾದ್ಯ? ಆಕೆ ಈಗ ಸುರಕ್ಶಿತವಾಗಿದ್ದಾಳೆ.

ಅದೇಕೋ ಗೊತ್ತಿಲ್ಲ, ಮೊದಲಿಗೆ ತಿನ್ನಲು ಯಾರೇ ಏನನ್ನೇ ತಂದು ಹಾಕಲಿ, ಅದನ್ನು ಅವರ ಮುಂದೆ ತಿನ್ನುವುದಿರಲಿ, ಅದೇನೆಂದು ತಿರುಗಿಯೂ ನೋಡುತ್ತಿರಲಿಲ್ಲ. ಆದರೆ ಇದೀಗ ಅಲ್ಪ ಸ್ವಲ್ಪ ಬದಲಾಗಿದ್ದಾಳೆ, ಹಸಿವಿದ್ದರೆ ಆಚೀಚೆ ನೋಡಿ ತಿಂದು ಬಿಡುತ್ತಾಳೆ. ಹೊಟ್ಟೆ ತುಂಬಿದ್ದರೆ, ಆ ಬದಿ ತಿರುಗಿಯೂ ನೋಡುವುದಿಲ್ಲ. ಇದುವರೆಗೆ ಕೇಂದ್ರದಲ್ಲಿ ಎಂಟರಿಂದ ಹತ್ತು ಜೀವಗಳಿಗೆ ಜನ್ಮ ಕೊಟ್ಟಿದ್ದಾಳೆ. ಈಕೆಯ ಊಟವೆಲ್ಲ ಅಕ್ಕ ಪಕ್ಕದಲ್ಲಿರುವ ವಸತಿಗ್ರುಹಗಳಲ್ಲಿ, ಕೆಲವೊಮ್ಮೆ ಇಲ್ಲೇ ಹತ್ತಿರದಲ್ಲಿರುವ ಆಯುರ‍್ವೇದಿಕ್ ಮಸಾಜ್ ಸೆಂಟರ್ ನಲ್ಲಿ ಕೆಲಸ ಮಾಡುವ ಅಜ್ಜಿ ಹಾಕುತ್ತಾರೆ. ನಾನು ಪ್ರತಿ ಸಾರಿ ಮನೆಯಿಂದ ಉಡುಪಿಗೆ ಬಂದಾಗ ಕೇಂದ್ರದಲ್ಲಿ ಯಾರಿರುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಇವಳಂತೂ ಎದುರಿನ ಸಿಂಡಿಕೇಟ್ ರಂಗಸ್ತಳದಲ್ಲಿ ಎರಡು ಕಾಲು ಮುಂದೆ, ಎರಡು ಕಾಲು ಹಿಂದೆ ಚಾಚಿ ಹಾಜರಿರುತ್ತಾಳೆ. ನಾವು ಯಾವಾಗ ಎಲ್ಲಿಗೆ ಹೊರಡಲಿ, ನಮ್ಮನ್ನು ಮುಕ್ಯರಸ್ತೆಯವರೆಗೆ ಬಿಟ್ಟು ಬರದಿದ್ದರೆ ಆಕೆಗೆ ಸಮಾದಾನವೇ ಇಲ್ಲ. ನಮಗೆ ಪ್ರತಿದಿನ ಊಟವಾದ ಮೇಲೆ ಸುಮ್ಮನೆ ಕತ್ತಲೆಯ ರಸ್ತೆಯಲ್ಲಿ, ಕಾಲಿಗೆ ಚಪ್ಪಲಿ ಸಿಕ್ಕಿಸಿ ನಡೆಯುವ ಅಬ್ಯಾಸವೊಂದುಂಟು. ಆಗ ನಾವು ಮಾತ್ರ ಹೋಗುವುದಲ್ಲ, ಆಕೆಯೂ ನಮ್ಮೊಂದಿಗೆ ಬರುತ್ತಾಳೆ. ಅದು ಮಾತ್ರವಲ್ಲದೆ ಕೆಲವೊಂದು ದಿನ ಮುಕ್ಯ ರಸ್ತೆ ದಾಟಿ ಹೋಗುವ ಸಂದರ‍್ಬ ಬಂದರೆ, ಆಕೆ ನಮಗಿಂತ ಮೊದಲು ರಸ್ತೆ ದಾಟಿ ಕಾಯುತ್ತಾಳೆ. ಹೊರಗಿನವರು ಈಕೆಯ ಚುರುಕುತನ ನೋಡಿ “ನಿಮ್ಮ ನಾಯಿಯೇ?” ಎಂದು ಕೇಳಿದಾಗ “ಹೌದು, ನಮ್ಮದೇ” ಎಂದು ಹೇಳಲು ಈಗಲೂ ಹೆಮ್ಮೆಯಾಗುತ್ತದೆ.

ಈಗ ಕೇಂದ್ರದಲ್ಲಿ ಅವಳೊಬ್ಬಳೆ ಅಲ್ಲ, ಅವಳೊಂದಿಗೆ ಇನ್ನೊಬ್ಬನು ಸೇರಿಕೊಂಡಿದ್ದಾನೆ. ಅವನದು ಇನ್ನೊಂದು ರೀತಿಯ ಕತೆ. ಇಬ್ಬರು ಒಟ್ಟಿಗೆ ಇಡೀ ಊರು ಸುತ್ತುತ್ತಾರೆ. ಕೇಂದ್ರದೊಳಗೆ ಹೊಸಬರ ಪ್ರವೇಶವಾದರೆ ಅವರ ಬಾಶೆಯಲ್ಲಿ ಪ್ರಶ್ನಿಸುತ್ತಾರೆ. ನೋಡಿದ ಮುಕಗಳಾಗಿದ್ದಾರೆ ಕೂತ ಜಾಗದಲ್ಲೆ ಕಣ್ಣು ಮಿಟುಕಿಸುತ್ತ, ಬಾಲ ಬಗ್ಗಿಸುತ್ತ ಬಂದಿರಾ ಎಂಬ ಬಾವದಿಂದ ನೋಡುತ್ತಾರೆ.

ನನ್ನೊಂದಿಗಿರುವವರನ್ನು ಬಿಟ್ಟರೆ ತುಂಬಾ ಕುಶಿ ಕೊಡುವ ಬೇರೊಂದು ವಿಶಯವೊಂದಿದ್ದರೆ ಅದು ಅವಳೇ. ನಾವು ಅವಳಿಗೆ ಎಶ್ಟೊಂದು ಉಪಕಾರ ಮಾಡಿದ್ದೆವೋ, ಬಿಟ್ಟಿದ್ದೇವೋ ಗೊತ್ತಿಲ್ಲ. ಆದರೆ, ಅಪಕಾರವನ್ನು ಮಾತ್ರ ಇದುವರೆಗೂ ಮಾಡಿಲ್ಲ. ನಿಮ್ಮಲ್ಲೂ ಕೇಳಿ ಕೊಳ್ಳುವುದಿಶ್ಟೆ, ನೀವು ಪ್ರೀತಿಸುವುದನ್ನು ಕಲಿಯಿರಿ, ಆಗ ನಿಮ್ಮನ್ನು ಪ್ರೀತಿಸುವುದನ್ನು ಅವುಗಳಿಗೆ ಹೇಳಿ ಕೊಡುವ ಅವಶ್ಯಕತೆ ಬರುವುದಿಲ್ಲ.

(ಚಿತ್ರ ಸೆಲೆ: pixahive.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: