ಮಡಿವಾಳ ಮಾಚಿದೇವರ ವಚನದ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

ಮಡಿವಾಳ ಮಾಚಿದೇವ, Madivala Machideva

ವಚನದ ರಚನೆಯ ನುಡಿವ
ಬಯಲುರಂಜಕರೆಲ್ಲ
ಭಕ್ತರಪ್ಪರೆ ಅಯ್ಯಾ
ವಚನ ತನ್ನಂತಿರದು
ತಾನು ವಚನದಂತಿರ
ಅದೆಂತೆಂದಡೆ
ತನುಮನಧನವನೆಲ್ಲ ಹಿಂದಿಟ್ಟುಕೊಂಡು
ಮಾತಿನ ಬಣಬೆಯ ಮುಂದಿಟ್ಟುಕೊಂಡು
ಒಡೆಯನ ಕಂಡು ನಾಯಿ
ಬಾಲವ ಬಡಿದುಕೊಂಬಂತೆ
ಆ ತೆರನಾಯಿತೆಂದ
ಕಲಿದೇವರದೇವಯ್ಯ.

ತನ್ನ ನಿತ್ಯ ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ನಡೆನುಡಿಗಳನ್ನು ಹೊಂದಿರದೆ, ಸದಾಕಾಲ ಶಿವಶರಣಶರಣೆಯರ ವಚನಗಳನ್ನು ಕೇಳುವವರ ಮನ ಮುಟ್ಟುವಂತೆ ಆಡಿದ ಮಾತ್ರಕ್ಕೆ, ಯಾವುದೇ ಒಬ್ಬ ವ್ಯಕ್ತಿಯು ಒಳ್ಳೆಯವನಾಗಲಾರನು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ವಚನದ ರಚನೆ=ಸಹಮಾನವರೊಡನೆ ವ್ಯಕ್ತಿಯು ಹೊಂದಿರಬೇಕಾದ ಒಲವು, ಕರುಣೆ, ಗೆಳೆತನ ಮತ್ತು ಸತ್ಯ, ನೀತಿ, ನ್ಯಾಯದ ಸಂಗತಿಗಳನ್ನು ಒಳಗೊಂಡ ಶಿವಶರಣಶರಣೆಯರ ಸೂಳ್ನುಡಿಗಳು; ಸೂಳ್+ನುಡಿ=ಸೂಳ್ನುಡಿ; ಸೂಳ್=ಸರದಿ/ಸಮಯ; ಸೂಳ್ನುಡಿ ಎಂದರೆ “ವಚನಕಾರರು ತಮ್ಮ ತಮ್ಮ ಸರದಿ ಬಂದಾಗ ಮತ್ತೊಬ್ಬರೊಡನೆ ಆಡಿದ ಅರಿವಿನ ನುಡಿಗಳು”;

ನುಡಿವ=ಹೇಳುವ; ಬಯಲು+ರಂಜಕರು+ಎಲ್ಲ; ಬಯಲು=ಗಿಡಮರಗಳಿಲ್ಲದೆ ಸಮತಟ್ಟಾಗಿರುವ ವಿಸ್ತಾರವಾದ ಜಾಗ; ರಂಜಕರು=ತಮ್ಮ ಚೆಲುವಾದ ಮಯ್ ಮಾಟ ಮತ್ತು ಮಾತಿನ ಕುಶಲತೆಯಿಂದ ಜನರು ಆನಂದಗೊಳ್ಳುವಂತೆ ನಟನೆ ಮಾಡುವವರು;

ಬಯಲುರಂಜಕರು=ಬಣ್ಣಬಣ್ಣದ ಉಡುಗೆ ತೊಡುಗೆಗಳನ್ನು ತೊಟ್ಟು, ಅಂದ ಚಂದದ ಮಾತುಗಳನ್ನಾಡುತ್ತ, ತಮ್ಮ ಮಯ್ ಮಾಟದಿಂದ ಜನರನ್ನು ನಕ್ಕುನಲಿದು ಮುದಗೊಳ್ಳುವಂತೆ ಮಾಡುವ ನಟನಟಿಯರು; ಭಕ್ತರ್+ಅಪ್ಪರೆ; ಭಕ್ತ=ಜೀವನದಲ್ಲಿ ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ತಿಳಿದು ಬಾಳುತ್ತಿರುವವನು; ಅಪ್ಪರೆ=ಆಗುತ್ತಾರೆಯೇ; ಅಯ್ಯಾ=ಗಂಡಸರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ತಮ್ಮ ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳದೆ, ಜನ ಮೆಚ್ಚುವಂತೆ ಶಿವಶರಣಶರಣೆಯರ ವಚನಗಳನ್ನು ಸೊಗಸಾಗಿ ಆಡುವವರು ಒಳ್ಳೆಯ ವ್ಯಕ್ತಿಗಳಲ್ಲ. ಇಂತಹ ವ್ಯಕ್ತಿಗಳು ನೋಡುವವರ ಮತ್ತು ಕೇಳುವವರ ಕಣ್ ಮನವನ್ನು ತಣಿಸುವ ನಟನಟಿಯರಂತೆ ವಚನದ ನುಡಿಗಳನ್ನು ಪುನರ್ ಉಚ್ಚರಿಸುತ್ತಾರೆಯೇ ಹೊರತು, ತಮ್ಮ ನಿಜ ಜೀವನದಲ್ಲಿ ವಂಚಕರಾಗಿರುತ್ತಾರೆ;

ತನ್ನ+ಅಂತೆ+ಇರದು; ಅಂತೆ=ಹಾಗೆ/ಆ ರೀತಿ; ಇರದು=ಇರುವುದಿಲ್ಲ; ತಾನು=ವ್ಯಕ್ತಿ; ವಚನದ+ಅಂತೆ+ಇರ; ಇರ=ಇರನು;

ವಚನ ತನ್ನಂತಿರದು=ಈ ವ್ಯಕ್ತಿಯಲ್ಲಿರುವ ಕೆಟ್ಟ ನಡೆನುಡಿಯ ಸಂಗತಿಗಳು ವಚನದಲ್ಲಿಲ್ಲ; ತಾನು ವಚನದಂತಿರ=ವಚನದಲ್ಲಿ ಹೇಳಿರುವ ಒಳ್ಳೆಯ ನಡೆನುಡಿಯನ್ನು ಈತ ಪಾಲಿಸುತ್ತಿಲ್ಲ;

ವಚನ ತನ್ನಂತಿರದು, ತಾನು ವಚನದಂತಿರ=ನೀತಿವಂತನಂತೆ ನಟಿಸುತ್ತ, ಜನರ ಮುಂದೆ ಸದಾಕಾಲ ವಚನಗಳನ್ನು ನುಡಿಯುತ್ತಿರುವ ವ್ಯಕ್ತಿಯು, ವಚನದಲ್ಲಿ ಹೇಳಿರುವ ಯಾವೊಂದು ಒಳಿತನ ಗುಣವನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವುದಿಲ್ಲ;

ಅದು+ಎಂತು+ಎಂದಡೆ; ಎಂತು=ಯಾವ ರೀತಿ; ಎಂದಡೆ=ಎಂದರೆ; ಅದೆಂತೆಂದೊಡೆ=ಅದು ಯಾವ ರೀತಿ ಎಂದರೆ;

ತನು=ದೇಹ/ಮಯ್; ಮನ=ಮನಸ್ಸು; ಧನ+ಅನ್+ಎಲ್ಲ; ಧನ=ಸಂಪತ್ತು; ಅನ್=ಅನ್ನು; ಹಿಂದೆ+ಇಟ್ಟುಕೊಂಡು;

ತನುಮನಧನವನೆಲ್ಲ ಹಿಂದಿಟ್ಟುಕೊಂಡು=ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುವ ಕೆಟ್ಟ ಒಳಮಿಡಿತಗಳನ್ನು ಮತ್ತು ಸಂಪತ್ತನ್ನು ಇತರರಿಗೆ ತಿಳಿಯದಂತೆ ಮರೆಮಾಚಿಕೊಂಡು; ಅಂದರೆ ತನ್ನಲ್ಲಿರುವ ಕೆಟ್ಟ ನಡೆನುಡಿಗಳು ಹೊರ ಜಗತ್ತಿಗೆ ತಿಳಿಯದಂತೆ ಕಪಟತನದಿಂದ ಎಲ್ಲವನ್ನೂ ಮುಚ್ಚಿಟ್ಟುಕೊಂಡು;

ಬಣಬೆ=ದವಸದಾನ್ಯಗಳ ಹುಲ್ಲಿನ ಮೆದೆ; ಮಾತಿನ ಬಣಬೆ=ಇದು ಒಂದು ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ. ಹುಲ್ಲಿನ ಮೆದೆಯಲ್ಲಿ ಎಣಿಸಲಾಗದಶ್ಟು ಸಂಕೆಯ ಹುಲ್ಲಿನ ಕಡ್ಡಿಗಳು ತುಂಬಿರುವಂತೆ, ವ್ಯಕ್ತಿಯು ಅಳತೆಗೆ ಸಿಗದಶ್ಟು ಮಾತನ್ನು ಯಾವಾಗಲೂ ಆಡುತ್ತಿರುತ್ತಿರುವುದು; ಮುಂದೆ+ಇಟ್ಟುಕೊಂಡು;

ಮಾತಿನ ಬಣಬೆಯ ಮುಂದಿಟ್ಟುಕೊಂಡು=ಸತ್ಯ, ನೀತಿ, ನ್ಯಾಯದ ಸಂಗತಿಗಳನ್ನು ತಿಳಿಸುವ ನೂರಾರು ವಚನಗಳನ್ನು ಜನರ ಮುಂದೆ ನಿರಂತರವಾಗಿ ಆಡುತ್ತ;

ಒಡೆಯ=ದಣಿ/ಯಜಮಾನ; ಬಡಿ=ಅಲ್ಲಾಡಿಸು; ಬಡಿದುಕೊಂಬಂತೆ=ಅಲ್ಲಾಡಿಸುವಂತೆ; ತೆರನ್+ಆಯಿತು+ಎಂದ; ತೆರ=ರೀತಿ;

ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ, ಆ ತೆರನಾಯಿತೆಂದ=ದಣಿಯು ಬರುವುದನ್ನು ಕಂಡ ಕೂಡಲೇ ನಾಯಿಯು ತನ್ನ ಬಾಲವನ್ನು ಅಲ್ಲಾಡಿಸುವಂತಾಯಿತು; ಸದಾಕಾಲ ವಚನಗಳನ್ನು ಜನರ ಮುಂದೆ ಹಾಡುತ್ತ/ಆಡುತ್ತ, ತಾನೊಬ್ಬ ನೀತಿವಂತನೆಂದು ತೋರಿಸಿಕೊಳ್ಳುವ ವ್ಯಕ್ತಿಯು, ಸಿರಿವಂತರ ಇಲ್ಲವೇ ಆಡಳಿತದ ಗದ್ದುಗೆಯಲ್ಲಿರುವವರ ಮುಂದೆ ತಲೆಬಾಗಿ ತನ್ನ ಹಿತವನ್ನು ಕಾಪಾಡಿಕೊಳ್ಳುವ ವ್ಯಕ್ತಿಯಾಗಿರುತ್ತಾನೆಯೇ ಹೊರತು, ನಿಜಕ್ಕೂ ಒಳ್ಳೆಯ ಗುಣವಂತನಾಗಿರುವುದಿಲ್ಲ ಎಂಬುದನ್ನು ಈ ಉಪಮೆಯು ಸೂಚಿಸುತ್ತದೆ;

ಕಲಿದೇವರದೇವ=ಶಿವನಿಗಿದ್ದ ಮತ್ತೊಂದು ಹೆಸರು/ ಮಡಿವಾಳ ಮಾಚಿದೇವರ ವಚನಗಳ ಅಂಕಿತನಾಮ.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: