ಮಡಿವಾಳ ಮಾಚಿದೇವರ ವಚನದ ಓದು – 3ನೆಯ ಕಂತು
– ಸಿ.ಪಿ.ನಾಗರಾಜ.
ಉಡಿಯ ಲಿಂಗವ ಬಿಟ್ಟು
ಗುಡಿಯ ಲಿಂಗಕ್ಕೆ ಶರಣೆಂಬ
ಮತಿಭ್ರಷ್ಟರನೇನೆಂಬೆನಯ್ಯಾ
ಕಲಿದೇವರದೇವಾ
ಉಡಿಯಲ್ಲಿ ಕಟ್ಟಿಕೊಂಡಿರುವ ಲಿಂಗವನ್ನು ಬಿಟ್ಟು, ಗುಡಿಯಲ್ಲಿ ನೆಲೆಗೊಂಡಿರುವ ಲಿಂಗವನ್ನು ಪೂಜಿಸುವ ವ್ಯಕ್ತಿಗಳನ್ನು ‘ತಿಳುವಳಿಕೆ ಇಲ್ಲದವರು’ ಎಂದು ಈ ವಚನದಲ್ಲಿ ಟೀಕಿಸಲಾಗಿದೆ.
ಉಡಿ=ನಡು/ಸೊಂಟ/ಮಡಿಲು; ಲಿಂಗ=ಶಿವನ ಸಂಕೇತವಾದ ವಿಗ್ರಹ;
ಉಡಿಯ ಲಿಂಗ=ವ್ಯಕ್ತಿಯು ತನ್ನ ಕೊರಳಿನಲ್ಲಿ ಕಟ್ಟಿಕೊಳ್ಳುವ ಲಿಂಗ. ದೇವರಾದ ಶಿವನನ್ನು ಪ್ರತಿ ನಿತ್ಯ ಪೂಜಿಸುವಾಗ, ಉಡಿಯಲ್ಲಿರುವ ಲಿಂಗವನ್ನು ತನ್ನ ಅಂಗಯ್ ಮೇಲೆ ಇಟ್ಟುಕೊಂಡು, ವ್ಯಕ್ತಿಯು ತಾನೇ ಪೂಜಿಸುತ್ತಾನೆ. ಈ ಬಗೆಯ ಪೂಜೆಯಲ್ಲಿ ತನ್ನ ಮತ್ತು ಶಿವನ ನಡುವೆ ಪೂಜಾರಿಯ ಅಗತ್ಯವಿರುವುದಿಲ್ಲ; ಇದನ್ನು ‘ಇಶ್ಟ ಲಿಂಗ’ ವೆಂದು ಕರೆಯುತ್ತಾರೆ; ಇಶ್ಟ ಎಂದರೆ ಮೆಚ್ಚುಗೆ/ಒಲವು;
ಗುಡಿ=ದೇಗುಲ/ದೇವಾಲಯ;
ಗುಡಿಯ ಲಿಂಗ=ಗುಡಿಯಲ್ಲಿ ನೆಲೆಗೊಂಡಿರುವ ದೊಡ್ಡ ಆಕಾರದ ಲಿಂಗ; ಇದನ್ನು ‘ಸ್ತಾವರ ಲಿಂಗ’ ವೆಂದು ಕರೆಯುತ್ತಾರೆ: ಸ್ತಾವರ ಎಂದರೆ ಒಂದು ಜಾಗದಲ್ಲಿ ನೆಲೆಗೊಂಡಿರುವುದು;
ಶರಣ್+ಎಂಬ; ಶರಣ್=ತಲೆಬಾಗುವುದು/ಅವಲಂಬಿಸುವುದು/ನಮಸ್ಕರಿಸುವುದು; ಎಂಬ=ಎನ್ನುವ; ಮತಿ+ಭ್ರಷ್ಟ್ರರ್+ಅನ್+ಏನ್+ಎಂಬೆನ್+ಅಯ್ಯಾ;
ಮತಿ=ಅರಿವು/ತಿಳುವಳಿಕೆ; ಭ್ರಷ್ಟ=ಹಾಳು/ನಾಶ
ಮತಿಭ್ರಷ್ಟ್ರರು=ತಿಳುವಳಿಕೆ ಇಲ್ಲದವರು;
“ತಿಳುವಳಿಕೆ ಇಲ್ಲದವರು” ಎಂದರೆ ಜೀವನದಲ್ಲಿ “ಯಾವುದು ಸರಿ-ಯಾವುದು ತಪ್ಪು; ಯಾವುದು ವಾಸ್ತವ-ಯಾವುದು ಕಲ್ಪಿತ; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು” ಎಂಬ ಅರಿವು ಮತ್ತು ಎಚ್ಚರವಿಲ್ಲದವರು;
ಎಂಬೆನ್=ಎನ್ನುವೆನು; ಅಯ್ಯಾ=ಗಂಡಸರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;
ಏನೆಂಬೆನಯ್ಯಾ=ಇಂತಹ ತಿಳಿಗೇಡಿಗಳನ್ನು ಕುರಿತು ಏನೆಂದು ತಾನೇ ಹೇಳಲಿ. ಇಂತಹ ವ್ಯಕ್ತಿಗಳಿಗೆ ದೇವರು ಕೇವಲ ಜಡರೂಪಿಯಾಗಿ ಕಾಣುತ್ತಾನೆಯೇ ಹೊರತು, ಜೀವನದಲ್ಲಿ ಒಳಿತಿನ ನಡೆನುಡಿಗಳತ್ತ ಕರೆದೊಯ್ಯುವ ಚೇತನರೂಪಿಯಾಗಿ ಕಂಡುಬರುವುದಿಲ್ಲ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;
ಕಲಿದೇವರದೇವ=ಶಿವನ ಮತ್ತೊಂದು ಹೆಸರು. ಮಡಿವಾಳ ಮಾಚಿದೇವರ ವಚನಗಳ ಅಂಕಿತನಾಮ.
ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ಗುಡಿಯಲ್ಲಿನ ಸ್ತಾವರಲಿಂಗದ ಪೂಜೆಯನ್ನು ನಿರಾಕರಿಸುತ್ತಾರೆ. ಇಂತಹ ನಿಲುವನ್ನು ತಳೆಯಲು ಅನೇಕ ಕಾರಣಗಳಿವೆ.
ಶಿವಶರಣಶರಣೆಯರು ತಮ್ಮ ಅಂಗಯ್ ಮೇಲೆ ಇಟ್ಟುಕೊಂಡು ಪೂಜಿಸುತ್ತಿದ್ದ ಇಶ್ಟಲಿಂಗವು, ಅವರ ಪಾಲಿಗೆ ಜೀವನದ ಉದ್ದಕ್ಕೂ ಪ್ರತಿಗಳಿಗೆಯಲ್ಲಿಯೂ ಒಳಿತಿನ ನಡೆನುಡಿಗಳ ಕಡೆಗೆ ದಾರಿ ತೋರುವ ಸಾಂಕೇತಿಕ ದೇವರಾಗಿತ್ತು. ನಿಜ ಜೀವನದಲ್ಲಿ ಅವರ ಪಾಲಿನ ದೇವರು ಕಲ್ಲು, ಮಣ್ಣು, ಲೋಹ, ಮರದಿಂದ ಮಾಡಿದ ಜಡರೂಪಿಯಾದ ವಿಗ್ರಹವಾಗಿರಲಿಲ್ಲ. ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವ ನಡೆನುಡಿಗಳನ್ನು ದೇವರೆಂದು ನಂಬಿದ್ದರು.
ವಿಗ್ರಹ ರೂಪದಲ್ಲಿ ದೊಡ್ಡದಾಗಿ ಕಡೆದಿರುವ ಲಿಂಗವನ್ನು ದೇಗುಲದ ಒಳಗುಡಿಯಲ್ಲಿ ನೆಲೆಗೊಳಿಸುತ್ತಿದ್ದಂತೆಯೇ, ವಿಗ್ರಹದ ಹತ್ತಿರಕ್ಕೆ ಹೋಗಿ ಪೂಜಿಸಲು ಪೂಜಾರಿಯು ಮಾತ್ರ ತಕ್ಕವನಾಗುತ್ತಾನೆ. ಇನ್ನುಳಿದವರು ಒಳಗುಡಿಯಿಂದ ಹೊರನಿಲ್ಲಬೇಕಾಗುತ್ತದೆ. ಇಲ್ಲಿಂದಲೇ ಮಾನವ ಸಮುದಾಯದಲ್ಲಿ ಮೇಲು-ಕೀಳಿನ ವಿಂಗಡಣೆಯು ಮೊದಲಾಗುತ್ತದೆ. ಮೇಲು-ಕೀಳಿನ ಜಾತಿಗಳ ಮೆಟ್ಟಿಲುಗಳಿಂದ ಕೂಡಿರುವ ನಮ್ಮ ಸಮಾಜದ ಜಾತಿರಚನೆಯ ಕಟ್ಟುಪಾಡುಗಳನ್ನು ದೇವರಗುಡಿಯಲ್ಲಿ ನಡೆಯುವ ಆಚರಣೆಗಳು ಮುಂದುವರೆಸಿಕೊಂಡು ಬರುತ್ತಿವೆ.
ಮೇಲು ಜಾತಿಯವರಿಗೆ, ಸಿರಿವಂತರಿಗೆ ಹಾಗೂ ರಾಜಕೀಯವಾಗಿ ದೊಡ್ಡ ದೊಡ್ಡ ಗದ್ದುಗೆಯಲ್ಲಿರುವವರಿಗೆ ಮೊದಲ ಮನ್ನಣೆಯನ್ನು ನೀಡುವ ದೇಗುಲದ ಆಚರಣೆಗಳು, ಕೆಳ ಜಾತಿ ಮತ್ತು ದುಡಿಯುವ ಶ್ರಮಜೀವಿಗಳಾದ ಬಡವರನ್ನು ಕಡೆಗಣಿಸಿವೆ. ಈ ರೀತಿ ಮೇಲು-ಕೀಳಿನ ತಾರತಮ್ಯ ಮುಂದುವರೆಸಿಕೊಂಡು ಹೋಗಲು ಕಾರಣವಾಗಿರುವ ಮತ್ತು ನೆರವಾಗುತ್ತಿರುವ ಗುಡಿಯ ಆಚರಣೆಗಳ ನೆಲೆಯಿಂದ ಶಿವಶರಣಶರಣೆಯರು ದೂರಸರಿದಿದ್ದರು.
(ಚಿತ್ರ ಸೆಲೆ: lingayatreligion.com)
ಇತ್ತೀಚಿನ ಅನಿಸಿಕೆಗಳು