ಜೇಡರ ದಾಸಿಮಯ್ಯ ವಚನಗಳ ಓದು – 4ನೆಯ ಕಂತು
– ಸಿ.ಪಿ.ನಾಗರಾಜ.
ಕರಿಯನಿತ್ತಡೆ ಒಲ್ಲೆ
ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ
ಒಂದರೆಘಳಿಗೆಯಿತ್ತಡೆ
ನಿಮ್ಮನಿತ್ತೆ ಕಾಣಾ ರಾಮನಾಥ.
ಎಲ್ಲ ಬಗೆಯ ಸಿರಿಸಂಪದಗಳಿಗಿಂತಲೂ ವ್ಯಕ್ತಿಯ ಒಳ್ಳೆಯ ನಡೆನುಡಿಗೆ ಪ್ರೇರಣೆಯನ್ನು ನೀಡುವ ಶಿವಶರಣಶರಣೆಯರ ವಚನಗಳು ಮಿಗಿಲಾದುವು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.
“ಒಳ್ಳೆಯ ನಡೆನುಡಿ” ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸಗಳು, ತನಗೆ ಮತ್ತು ತನ್ನ ಕುಟುಂಬಕ್ಕೆ ಒಲವು,ನಲಿವು,ನೆಮ್ಮದಿಯನ್ನು ನೀಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು.
ಕರಿ+ಅನ್+ಇತ್ತಡೆ; ಕರಿ=ಆನೆ ; ಅನ್=ಅನ್ನು ; ಇತ್ತಡೆ=ಕೊಟ್ಟರೆ/ನೀಡಿದರೆ ; ಒಲ್ಲೆ=ಬೇಡ/ಬೇಕಾಗಿಲ್ಲ;
ಕರಿಯನಿತ್ತಡೆ ಒಲ್ಲೆ=ಇತರರು ನನಗೆ ಆನೆಯನ್ನು ಉಡುಗೊರೆಯಾಗಿ ನೀಡಿದರೆ,ಅದು ನನಗೆ ಬೇಕಾಗಿಲ್ಲ; ಇದೊಂದು ರೂಪಕವಾಗಿ ಬಳಕೆಯಾಗಿದೆ. ಆನೆಯು ರಾಜಪದವಿಯ ಸಂಕೇತವಾಗಿದೆ. ರಾಜನ ಪಟ್ಟವೇ ದೊರೆತರೂ, ಅದು ನನಗೆ ಬೇಡ;
ಸಿರಿ+ಅನ್+ಇತ್ತಡೆ; ಸಿರಿ=ಚಿನ್ನ,ಬೆಳ್ಳಿ,ನಗ,ನಾಣ್ಯ,ಮನೆ,ಹೊಲ,ಗದ್ದೆ,ತೋಟಗಳಿಂದ ಕೂಡಿರುವ ಹೆಚ್ಚಿನ ಸಂಪತ್ತು;
ಸಿರಿಯನಿತ್ತಡೆ ಒಲ್ಲೆ=ಇತರರು ನನಗೆ ದೊಡ್ಡ ಪ್ರಮಾಣದ ಸಂಪತ್ತನ್ನು ಉಡುಗೊರೆಯಾಗಿ ನೀಡಿದರೆ, ಅದನ್ನು ನನಗೆ ಬೇಡ;
ಹಿರಿದು+ಅಪ್ಪ; ಹಿರಿದು=ದೊಡ್ಡದು ; ಅಪ್ಪ=ಆಗಿರುವ ; ರಾಜ್ಯ+ಅನ್+ಇತ್ತಡೆ; ರಾಜ್ಯ=ರಾಜನ ಆಳ್ವಿಕೆಗೆ ಒಳಪಟ್ಟ ಪ್ರಾಂತ್ಯ;
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ=ಇತರರು ನನಗೆ ದೊಡ್ಡ ರಾಜ್ಯವನ್ನು ಕೊಟ್ಟರೆ, ಅದು ನನಗೆ ಬೇಡ;
ಶರಣ=ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ಅರಿತು ಬಾಳುತ್ತಿರುವ ವ್ಯಕ್ತಿ ; ಸೂಳ್+ನುಡಿ=ಸೂಳ್ನುಡಿ; ಸೂಳ್ನುಡಿ=ವಚನ; ವಚನಗಳನ್ನು ‘ಸೂಳ್ನುಡಿ’ ಎಂದು ಕರೆಯುತ್ತಾರೆ. ‘ಸೂಳ್’ ಎಂದರೆ “ಸರದಿ/ವ್ಯಕ್ತಿಯ ಪಾಲಿಗೆ ದೊರೆತ ಅವಕಾಶ ”. ‘ನುಡಿ ’ ಎಂದರೆ “ ಮಾತು/ಸೊಲ್ಲು”. ಸರದಿಯ ಪ್ರಕಾರ ಆಡಿದ ಮಾತಿಗೆ ಸೂಳ್ನುಡಿ ಎಂದು ಹೆಸರು. ಶಿವಶರಣಶರಣೆಯರು ಸಾಮಾಜಿಕ ಆಂದೋಲನದ ಸಮಯದಲ್ಲಿ ತಮ್ಮ ವ್ಯಕ್ತಿಗತವಾದ ನಡೆನುಡಿಗಳನ್ನು ತಾವೇ ಒರೆಹಚ್ಚಿ ನೋಡಿಕೊಳ್ಳುವಾಗ ಮತ್ತು ಸಮಾಜದ ಅರೆಕೊರೆಗಳನ್ನು ಒಬ್ಬರು ಮತ್ತೊಬ್ಬರೊಡನೆ ಚರ‍್ಚಿಸುವಾಗ ಆಡಿದ ಸಾಮಾಜಿಕ ಅರಿವು ಮತ್ತು ಎಚ್ಚರದ ನುಡಿಗಳು ವಚನಗಳಾಗಿ ರೂಪುಗೊಂಡಿರಬಹುದು ಎಂಬುದನ್ನು ‘ಸೂಳ್ನುಡಿ’ ಎಂಬ ಪದ ಸೂಚಿಸುತ್ತದೆ;
‘ಸಾಮಾಜಿಕ ಅರಿವು’ ಎಂದರೆ “ಜೀವನದಲ್ಲಿ ವ್ಯಕ್ತಿಯು ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು; ಯಾವುದು ವಾಸ್ತವ-ಯಾವುದು ಕಲ್ಪಿತ; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು” ಎಂಬ ತಿಳುವಳಿಕೆ ಮತ್ತು ತನಗೆ , ತನ್ನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ಬಯಸುವಂತೆಯೇ ಸಹಮಾನವರ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ತಿಳುವಳಿಕೆ;
‘ಸಾಮಾಜಿಕ ಎಚ್ಚರ’ ಎಂದರೆ ಜಾತಿ, ಮತ , ದೇವರ ಹೆಸರಿನಲ್ಲಿ ನಡೆಯುತ್ತಿರುವ ಆಚರಣೆಗಳಿಂದ ಮಾನವರ ಬದುಕಿನಲ್ಲಿ ಉಂಟಾಗುತ್ತಿರುವ ಪರಿಣಾಮಗಳನ್ನು ಸರಿಯಾಗಿ ಗಮನಿಸಿ , ಯಾವ ಬಗೆಯ ಆಚರಣೆಗಳು ಮಾನವ ಸಮುದಾಯದ ಸಂಕಟಗಳಿಗೆ ಕಾರಣವಾಗಿವೆ ಎಂಬುದನ್ನು ಅರಿತುಕೊಂಡು, ಅಂತಹ ಆಚರಣೆಗಳಿಂದ ದೂರವಿರುವುದು;
ಒಂದು+ಅರೆಘಳಿಗೆ+ಇತ್ತಡೆ; ಅರೆಘಳಿಗೆ=ತುಸು ಸಮಯ/ಸ್ವಲ್ಪ ಕಾಲ ; ನಿಮ್ಮನ್+ಇತ್ತೆ; ನಿಮ್ಮನ್=ದೇವರಾದ ಶಿವನನ್ನು; ಇತ್ತೆ=ಕೊಡುತ್ತೇನೆ ; ಕಾಣ್=ನೋಡು ; ಕಾಣಾ=ತಿಳಿದಿರುವೆಯಾ ; ರಾಮನಾಥ=ಶಿವನಿಗೆ ಇದ್ದ ಮತ್ತೊಂದು ಹೆಸರು/ಜೇಡರ ದಾಸಿಮಯ್ಯನ ವಚನಗಳ ಅಂಕಿತನಾಮ ;
ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥ=ಶಿವಶರಣಶರಣೆಯರ ವಚನಗಳಲ್ಲಿನ ಸಂಗತಿಗಳನ್ನು ತುಸು ಸಮಯ ಕೇಳುವಂತಾದರೆ, ನನ್ನ ಮೆಚ್ಚಿನ ದೇವರಾದ ಶಿವನನ್ನೇ ಬಿಟ್ಟುಕೊಡುತ್ತೇನೆ; ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ.
ಹನ್ನೆರಡನೆಯ ಶತಮಾನದ ಶಿವಶರಣಶರಣೆಯ ಪಾಲಿಗೆ “ದೇವರು ಎನ್ನುವ ಕಲ್ಪನೆ ಇಲ್ಲವೇ ನಂಬಿಕೆಯು ಮರ/ಮಣ್ಣು/ಲೋಹ/ಕಲ್ಲಿನ ರೂಪದ್ದಾಗಿರಲಿಲ್ಲ”. ಅವರ ದೇವರು ವ್ಯಕ್ತಿಯಲ್ಲಿ ಒಳ್ಳೆಯ ನಡೆನುಡಿಯನ್ನು ರೂಪಿಸಿಕೊಳ್ಳಲು ನೆರವಾಗುವ ಅರಿವಿನ ರೂಪದಲ್ಲಿತ್ತು. ಆದ್ದರಿಂದಲೇ ದೇವರನ್ನು ಪೂಜಿಸುವ ಎಲ್ಲ ಬಗೆಯ ಆಚರಣೆಗಳಿಗಿಂತಲೂ ಅರಿವನ್ನು ಮೂಡಿಸುವ ವಚನಗಳೇ ಮಿಗಿಲಾದುವು ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು;
( ಚಿತ್ರ ಸೆಲೆ: lingayatreligion.com )
ಸೊಗಸಾದ ವಿಶ್ಲೇಷಣೆ