ಆಂದ್ರ ಪ್ರದೇಶದ ಬೊರ್‍ರಾ ಗುಹೆಗಳು

– .

ಆಂದ್ರ ಪ್ರದೇಶದ ವಿಶಾಕಪಟ್ಟಣಂ ಬಳಿ ಇರುವ ಬೊರ‍್ರಾ ಗುಹೆ, ಬಾರತದ ಉಪಕಂಡದಲ್ಲಿ ಅತ್ಯಂತ ದೊಡ್ಡ ಗುಹೆಗಳಲ್ಲಿ ಒಂದಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1,400 ಮೀಟರ್ ಎತ್ತರದಲ್ಲಿರುವ ಈ ಗುಹೆಯ ಬಾಯಿ ಸುಮಾರು 100 ಮೀಟರ್ ಅಗಲವಿದ್ದು, ಆಳ ಸುಮಾರು 75 ಮೀಟರುಗಳಿದೆ. ಒಂದು ಚದರ ಕಿಲೋಮೀಟರ‍್ಗೂ ಹೆಚ್ಚು ಪ್ರದೇಶದಲ್ಲಿ ಈ ಗುಹೆ ವ್ಯಾಪಿಸಿರುವುದರಿಂದ, ಬಾರತದಲ್ಲಿ ಇದು ಅತಿ ದೊಡ್ಡ ಗುಹೆ ಎಂದು ಪ್ರಸಿದ್ದಿಗೆ ಬಂದಿದೆ.

ವಿಶಾಕಪಟ್ಟಣ ಜಿಲ್ಲೆಯ, ಅರಕು ಕಣಿವೆಯ, ಅನಂತಗಿರಿ ಬೆಟ್ಟದಲ್ಲಿರುವ ಈ ಬೊರ‍್ರಾ ಗುಹೆಗಳು, ವಿಶಾಕಪಟ್ಟಣಂನಿಂದ ಉತ್ತರಕ್ಕೆ ಕೇವಲ 92 ಕಿಲೋಮೀಟರ್ ದೂರದಲ್ಲಿದೆ. ಈ ಗುಹೆಗಳನ್ನು 1807ರಲ್ಲಿ ವಿಲಿಯಮ್ ಕಿಂಗ್ ಎಂಬ ಬ್ರಿಟೀಶ್ ಬೂ ವಿಜ್ನಾನಿ ಕಂಡು ಹಿಡಿದ. ವಿಶಾಕಪಟ್ಟಣಂ ಪ್ರದೇಶದಲ್ಲಿ ಪ್ರವಾಸ ಮಾಡ ಬಯಸುವವರು ಬೊರ‍್ರಾ ಗುಹೆಗಳನ್ನು ಮರೆಯುವಂತಿಲ್ಲ.

ಕ್ಯಾಲ್ಶಿಯಂ ಬೈ ಕಾರ್‍ಬೊನೇಟ್ ಮತ್ತು ಇತರೆ ಕನಿಜಗಳ ಮೂಲಕ ಮೇಲಿನಿಂದ ನೀರು ಗುಹೆಯ ಮೇಲ್ಚಾವಣಿಯಿಂದ ಹರಿದು ಬರುವ ಕಾರಣ ಅಲ್ಲಿ ಸ್ಟಾಲಕ್ಟೈಟ್ ಮತ್ತು ಸ್ಟಾಲಗ್ಮೈಟ್ಗಳು ರೂಪಗೊಳ್ಳುತ್ತವೆ. ಇದು ವಿವಿದ ರಚನೆಗಳಿಗೆ ಕಾರಣವಾಗಿದೆ. ಬೊರ‍್ರಾ ಗುಹೆಗಳಲ್ಲಿ ಶಿವ-ಪಾರ‍್ವತಿ, ತಾಯಿ-ಮಗು, ಮಾನವನ ಮೆದುಳು, ಹುಲಿ, ಮೊಸಳೆ, ರುಶಿಯ ಗಡ್ಡ, ಹಸುವಿನ ಕೆಚ್ಚಲು ಇದೇ ರೀತಿಯ ಹಲವಾರು ನೈಸರ‍್ಗಿಕವಾಗಿ ಆದ ರಚನೆಗಳನ್ನು ಕಾಣಬಹುದು.

ಬೊರ‍್ರಾ ಗುಹೆಗಳು ಒಂದು ಮಿಲಿಯನ್ ವರ‍್ಶಗಳಶ್ಟು ಹಳೆಯದು ಎನ್ನಲಾಗಿದೆ. ಇದನ್ನು ಸಂಶೋದಿಸಿದವರು ಜಿಯೊಲಾಜಿಕಲ್ ಸರ‍್ವೆ ಆಪ್ ಇಂಡಿಯಾದ ವಿಲಿಯಂ ಕಿಂಗ್ ಜಾರ‍್ಜ್. ಸಮುದ್ರ ಮಟ್ಟದಿಂದ 1,400 ಮೀಟರ್ ಎತ್ತರದಲ್ಲಿರುವ ಸುಂದರ ಗುಹೆಗಳು ಪ್ರವಾಸಿಗರ ಪ್ರಮುಕ ಆಕರ‍್ಶಣಾ ಕೇಂದ್ರ. ಪ್ರತಿ ದಿನ ಸಾವಿರಾರು ಸಂಕ್ಯೆಯಲ್ಲಿ ಪ್ರವಾಸಿಗರು ವಿಕ್ಶಣೆಗಾಗಿ ಇಲ್ಲಿಗೆ ಬರುತ್ತಾರೆ.

ಈ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಲ್ಲಿ ಗುಹೆಗಳ ಪತ್ತೆಗೆ ಸಂಬಂದಿಸಿದಂತೆ ಹಲವಾರು ದಂತ ಕತೆಗಳಿವೆ. ಅತ್ಯಂತ ಜನಪ್ರಿಯ ದಂತ ಕತೆಯಂತೆ, ಹಳ್ಳಿಯ ದನ ಕಾಯುವ ಹುಡುಗನೊಬ್ಬ ತನ್ನ ಕಳೆದು ಹೋದ ದನವನ್ನು ಅರಸುತ್ತಾ ಬಂದಾಗ ಗುಹೆ ಅವನ ಕಣ್ಣಿಗೆ ಬಿದ್ದಿತಂತೆ. ಆ ದನ ಕಾಯುವ ಹುಡುಗ ಗುಹೆಯಲ್ಲಿ ಶಿವಲಿಂಗವನ್ನು ಕಂಡ, ಹಾಗಾಗಿ ತನ್ನ ದನಗಳನ್ನು ‘ಶಿವನೇ ರಕ್ಶಿಸಿದ್ದಾನೆ’ ಎಂದು ನಂಬಿದ. ಇದೇ ಬಕ್ತಿಯ ಆದಾರದ ಮೇಲೆ ಅಲ್ಲೇ ಒಂದು ಸಣ್ಣ ದೇವಾಲಯವನ್ನು ಗ್ರಾಮಸ್ತರ ಸಹಾಯದಿಂದ ನಿರ‍್ಮಿಸಿದ. ಸುತ್ತ ಮುತ್ತಲಿನ ಗ್ರಾಮಸ್ತರು ಈ ದೇವಾಲಯಕ್ಕೆ ಬೇಟಿ ನೀಡುತ್ತಾರೆ. ಇಲ್ಲಿನವರ ಮತ್ತೊಂದು ನಂಬಿಕೆಯೆಂದರೆ, ಈ ದೇವಾಲಯದಲ್ಲಿರುವ ಶಿವಲಿಂಗದ ಮೇಲೆ ಹಸುವಿನ ಕಲ್ಲಿನ ರಚನೆಯೊಂದಿದೆ. ಆ ಹಸುವಿನ ಕೆಚ್ಚಲಿನಿಂದ ಹರಿಯುವ ನೀರು ಗೋಸ್ತಾನಿ ನದಿಯ ಮೂಲವೆಂದು ನಂಬಲಾಗಿದೆ. ಈ ನದಿಯು ವೈಜಾಗ್ ಮೂಲಕ ಹರಿಯುತ್ತದೆ.

ಬೊರ‍್ರಾ ಗುಹೆಗಳು ಆಳವಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರು, ಗುಹೆಯ ತಳ ತಲುಪಲು ಸುಮಾರು ನಾಲ್ಕು ನೂರು ಮೆಟ್ಟಿಲುಗಳನ್ನು ಇಳಿಯಬೇಕಾದ ಅನಿವಾರ‍್ಯತೆಯಿದೆ. ಒಳಗೆ ಇಳಿದ ಮೇಲೆ ಸ್ಟಾಲಕ್ಟೈಟ್ ಮತ್ತು ಸ್ಟಾಲಗ್ಮೈಟ್ಗಳಿಂದಾದ ರಚನೆಗಳು ಗಮನಸೆಳೆಯುತ್ತವೆ. ಅದರಲ್ಲೂ ಇಲ್ಲಿ ಅಳವಡಿಸಿರುವ ಬೆಳಕಿನ ವ್ಯವಸ್ತೆಯಿಂದ ಅದರ ಮೆರುಗು ಇನ್ನೂ ಹೆಚ್ಚಾಗಿ ಹೊಳಪಾಗಿಸಿದೆ.

ಬೊರ‍್ರಾ ಗುಹೆಗಳಿರುವ ಅರುಕು ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸಿದರೆ, ಸುಂದರವಾದ ಬೂ ದ್ರುಶ್ಯಗಳನ್ನು, ಹಸಿರು ವನರಾಶಿಯನ್ನು, ಶಿಕರ ಕಣಿವೆಗಳನ್ನು ಹಾಣುತ್ತೀರಿ. ಬೊರ‍್ರಾ ಗುಹಾಲು ರೈಲ್ವೆ ಸ್ಟೇಶನ್ ತಲುಪುವ ಮೊದಲು 42 ಸುರಂಗಗಳ ಮೂಲಕ ಹಾದು ಹೋಗಿರುತ್ತ್ತೀರಿ. ಅದೊಂದು ಅತ್ಯಾನಂದಕರ ಮೈನವಿರೇಳಿಸುವ ಅನುಬವ. ಮಾರ‍್ಗ ಮದ್ಯೆಯಲ್ಲಿ, ಬೊರ‍್ರಾ ಗುಹೆಗಳ ನಿಲ್ದಾಣ ತಲುಪುವ ಮುನ್ನ ಕಟಕಿ ಜಲಪಾತವನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು. ಬೊರ‍್ರಾ ಗುಹೆಗಳಿಗೆ ಅತ್ಯುತ್ತಮ, ಸಂಪರ‍್ಕ ಕಲ್ಪಿಸುವ ವ್ಯವಸ್ತೆಯಿದೆ. ರಸ್ತೆ, ರೈಲು, ವಿಮಾನದ ಮೂಲಕವು ಇಲ್ಲಿಗೆ ತಲುಪಬಹುದು. ವಿಶಾಕಪಟ್ಟಣ ಇಂಟರ‍್ನ್ಯಾಶನಲ್ ಏರ‍್ಪೋರ‍್ಟ್ ಹತ್ತಿರದ ವಿಮಾನ ನಿಲ್ದಾಣವಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: vizagtourism.org.in, incredibleindia.org, wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಇಂದು ನನ್ನ ಬರಹವನ್ನು ಹೊನಲುವಿನಲ್ಲಿ ಪ್ರಕಟಿಸುವ ಕೃಪೆ ತೋರಿದ ಹೊನಲು ತಂಡಕ್ಕೆ ಅನಂತ ಧನ್ಯವಾದಗಳು

ಅನಿಸಿಕೆ ಬರೆಯಿರಿ: