ಜೇಡರ ದಾಸಿಮಯ್ಯ ವಚನಗಳ ಓದು – 5 ನೆಯ ಕಂತು

– ಸಿ.ಪಿ.ನಾಗರಾಜ.

ಭಕ್ತಿಯ ಬಲ್ಲವರಿಗೆ
ಸತ್ಯ ಸದಾಚಾರವ ಹೇಳಿದಡೆ
ನಂಬುವರು ನಚ್ಚುವರು ಮಚ್ಚುವರು
ಭಕ್ತಿಯ ಹೊಲಬನರಿಯದ ವ್ಯರ್ಥರಿಗೆ
ಸತ್ಯ ಸದಾಚಾರವ ಹೇಳಿದಡೆ
ಕಚ್ಚುವರು ಬಗುಳುವರು
ಕಾಣಾ ರಾಮನಾಥ.

ಒಳ್ಳೆಯ ವ್ಯಕ್ತಿಗಳಿಗೆ ವಿವೇಕದ ನುಡಿಗಳನ್ನು ಹೇಳಬಹುದೇ ಹೊರತು, ಕೆಟ್ಟ ವ್ಯಕ್ತಿಗಳಿಗೆ ಹೇಳುವುದಕ್ಕೆ ಆಗುವುದಿಲ್ಲ – ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಒಳ್ಳೆಯ ವ್ಯಕ್ತಿ=ತಾನು ಆಡುವ ಮಾತಿನಿಂದ, ಮಾಡುವ ಕೆಲಸದಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಒಲವು, ನಲಿವು ಮತ್ತು ನೆಮ್ಮದಿಯನ್ನು ಪಡೆಯುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವ ನಡೆನುಡಿಯುಳ್ಳವನು;

ಕೆಟ್ಟ ವ್ಯಕ್ತಿ=ತಾನು ಆಡುವ ಮಾತಿನಿಂದ ಮತ್ತು ಮಾಡುವ ಕೆಲಸದಿಂದ ತನ್ನನ್ನು ಒಳಗೊಂಡಂತೆ ಎಲ್ಲರಿಗೂ ಕೇಡು/ಹಾನಿ/ದುರಂತವನ್ನು ಉಂಟುಮಾಡುವ ನಡೆನುಡಿಯುಳ್ಳವನು;

ಭಕ್ತಿ=ದೇವರನ್ನು ಪೂಜಿಸಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ; ಬಲ್ಲವರಿಗೆ=ತಿಳಿದವರಿಗೆ/ಅರಿತವರಿಗೆ; ಸತ್ಯ=ನಿಜ/ದಿಟ/ವಾಸ್ತವ; ಸದಾಚಾರ=ಒಳ್ಳೆಯ ನಡೆನುಡಿ; ಹೇಳಿದಡೆ=ಹೇಳಿದರೆ; ನಂಬು=ಒಪ್ಪು/ಸಮ್ಮತಿಸು; ನಚ್ಚು=ನಂಬು; ಮಚ್ಚು=ಮೆಚ್ಚು/ಹೊಗಳು/ಕೊಂಡಾಡು;

ಭಕ್ತಿಯ ಬಲ್ಲವರಿಗೆ ಸತ್ಯ ಸದಾಚಾರವ ಹೇಳಿದಡೆ ನಂಬುವರು ನಚ್ಚುವರು ಮಚ್ಚುವರು=ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳುವುದೇ ದೇವರಿಗೆ ಮಾಡುವ ಪೂಜೆಯೆಂದು ಅರಿತವರಿಗೆ ವಾಸ್ತವದ ಸಂಗತಿಗಳನ್ನು ಹೇಳಿದರೆ ಒಪ್ಪುತ್ತಾರೆ, ಹೊಗಳುತ್ತಾರೆ, ಅದರಂತೆ ನಡೆಯಲು ಬಯಸುತ್ತಾರೆ;

ಹೊಲಬು+ಅನ್+ಅರಿಯದ; ಹೊಲಬು=ದಾರಿ/ಹಾದಿ;

ಭಕ್ತಿಯ ಹೊಲಬು=ದೇವರನ್ನು ಪೂಜಿಸಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿಯ ರೀತಿ ನೀತಿ; ಅರಿ=ತಿಳಿ ; ಅರಿಯದ=ತಿಳಿಯದ; ವ್ಯರ್ಥ=ಪ್ರಯೋಜನವಿಲ್ಲದ ; ವ್ಯರ್ಥರು=ಒಳ್ಳೆಯದನ್ನು ಕಡೆಗಣಿಸುವವರು;

ಭಕ್ತಿಯ ಹೊಲಬನರಿಯದ ವ್ಯರ್ಥರಿಗೆ ಸತ್ಯ ಸದಾಚಾರವ ಹೇಳಿದಡೆ=ಒಳ್ಳೆಯ ನಡೆನುಡಿಯ ರೀತಿ ನೀತಿಯನ್ನು ಅರಿಯದ ಮತ್ತು ಕಡೆಗಣಿಸುವ ವ್ಯಕ್ತಿಗಳಿಗೆ ಸತ್ಯದ ಸಂಗತಿಗಳನ್ನು ಹೇಳಿದರೆ;

ಕಚ್ಚು=ಹಲ್ಲಿನಿಂದ ಕಡಿ ; ಬಗುಳು=ನಾಯಿಯಂತೆ ಕೂಗು/ಬಾಯಿಗೆ ಬಂದಂತೆ ಮಾತನಾಡು/ಕೆಟ್ಟ ಮಾತನ್ನಾಡು; ಕಾಣ್=ನೋಡು; ಕಾಣಾ=ತಿಳಿದು ನೋಡು; ರಾಮನಾಥ=ಶಿವನ ಮತ್ತೊಂದು ಹೆಸರು/ಜೇಡರ ದಾಸಿಮಯ್ಯನ ವಚನಗಳ ಅಂಕಿತನಾಮ;

ಕಚ್ಚುವರು ಬಗುಳುವರು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಗಳಿಗೆ ಸತ್ಯದ ಮತ್ತು ಒಳ್ಳೆಯ ನಡೆನುಡಿಗಳ ರೀತಿ ನೀತಿಯನ್ನು ಹೇಳಲು ತೊಡಗಿದರೆ, ಅವರು ಅದನ್ನು ನಿರಾಕರಿಸುವುದಲ್ಲದೆ, ಹೇಳಿದವರನ್ನೇ ಬಯ್ಯುತ್ತಾರೆ ಮತ್ತು ಹೇಳಿದವರ ಮಯ್ ಮೇಲೆ ಹಲ್ಲೆ ಮಾಡಿ, ಗಾಸಿಗೊಳಿಸುತ್ತಾರೆ.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: