ಹುಕರ‍್ಸ್ ಲಿಪ್ಸ್ – ಇದು ತುಟಿಯಲ್ಲ ಗಿಡ

– .

ಈ ಪುಟ್ಟ ಗಿಡವನ್ನು ಸಾಮಾನ್ಯವಾಗಿ ಗುರುತಿಸುವುದು ಹಾಟ್ ಲಿಪ್ಸ್ ಅತವಾ ಹುಕರ‍್ಸ್ ಲಿಪ್ಸ್ ಎಂದು. ಇದನ್ನು ವೈಜ್ನಾನಿಕವಾಗಿ ಸೈಕೋಟ್ರಿಯಾ ಎಲಾಟಾ ಎಂದು ಹೆಸರಿಸಲಾಗಿದೆ. ಈ ಗಿಡ ಅತ್ಯಂತ ವಿಶಿಶ್ಟವಾದದ್ದು. ಈ ಗಿಡವನ್ನು ಗಮನಿಸಿದರೆ, ಅದರಲ್ಲಿ ಕೆಂಪು ತುಟಿಗಳನ್ನು ಹೋಲುವ ಹೂವುಗಳಿವೆ ಎನಿಸುತ್ತದೆ. ವಾಸ್ತವವಾಗಿ ಅವು ಹೂವುಗಳಲ್ಲ. ಎಲೆಯಂತಹ ಪತ್ರಕಗಳು. ಇವು ಕಾಡುಗಳಲ್ಲಿ ಮತ್ತು ಹುಲ್ಲುಗಾವಲಿನಲ್ಲಿ ಕಂಡುಬರುತ್ತವೆ. ಈ ಹುಕರ‍್ಸ್ ಲಿಪ್ಸ್, ಗಿಡದ ಸಣ್ಣ ಬಿಳಿ ಹೂವಿಗೆ ಹೊಳಪಿನ ಹೊದಿಕೆಯಾಗಿದೆ. ಇದರ ರಕ್ಶಣೆಯಲ್ಲಿ ಬೆಳೆಯುವ ಹೂವುಗಳು ಮತ್ತು ಅದರಡಿಯಲ್ಲಿನ ಅಂಡಾಕಾರದ ಹಣ್ಣುಗಳು ಸಂಪೂರ‍್ಣವಾಗಿ ಹಣ್ಣಾದ ನಂತರ ಕಪ್ಪು ಅತವಾ ಕಡು ನೀಲಿ ಬಣ್ಣಕ್ಕೆ ತಿರುಗುತ್ತವೆ.

ಈ ಗಿಡವನ್ನು ವೈಜ್ನಾನಿಕವಾಗಿ ವಿಶ್ಲೇಶಿಸ ಹೊರಟರೆ, ಇದು ರೂಬಿಯೇಸಿ ಕುಟುಂಬದಲ್ಲಿ ಸೈಕೋಟ್ರಿಯಾ ಕುಲದಿಂದ ಬಂದಿದ್ದಾಗಿದೆ. ಇದರಲ್ಲಿ ಸರಿ ಸುಮಾರು 1900 ವಿವಿದ ಜಾತಿಗಳಿವೆ. ಈ ಕೆಂಪು ತುಟಿಯಂತಹ ಎಲೆಗಳು ಮನುಶ್ಯರನ್ನು ಮಾತ್ರವಲ್ಲದೆ, ಚಿಟ್ಟೆಗಳನ್ನೂ ಸಹ ಬಹಳವಾಗಿ ಆಕರ‍್ಶಿಸುತ್ತವೆ. ಹುಕರ‍್ಸ್ ಲಿಪ್ಸ್ ಗಿಡಗಳನ್ನು ದಕ್ಶಿಣ ಮತ್ತು ಮದ್ಯ ಅಮೇರಿಕಾದ ಉಶ್ಣವಲಯದ ಮಳೆ ಕಾಡುಗಳಲ್ಲಿ, ಕೊಲಂಬಿಯಾ, ಕೋಸ್ಟಾರಿಕಾ ಮತ್ತು ಪನಾಮದಂತಹ ದೇಶಗಳಲ್ಲಿ ಕಾಣಬಹುದು.

ಈ ಗಿಡ ಇತ್ತೀಚಿನ ದಿನಗಳಲ್ಲಿ ಬಹಳ ಅಪರೂಪವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಚುಂಬಿಸಿ ವಿದಾಯ ಹೇಳಬೇಕಾದ ಪರಿಸ್ತಿತಿಗೆ ತಲುಪಿದ್ದೇವೆ. ಇದಕ್ಕೆ ಮೂಲ ಕಾರಣ ಕಾಡುನಾಶ. ಹಿಂದಿನ ದಿನಗಳಿಗೆ ಹೋಲಿಸಿದರೆ, ಕಳೆದ ಹಲವು ವರ‍್ಶಗಳಲ್ಲಿ ಕಾಡುನಾಶ ವಿಪರೀತವಾಗಿದೆ. ಅದರೊಂದಿಗೆ ಅನೇಕ ಜಾತಿಯ ಗಿಡಗಳು ಕ್ರಿಮಿ ಕೀಟಗಳೂ ಸಹ ನಾಶವಾಗುತ್ತಿವೆ. ಜಾಗತೀಕರಣ ಮತ್ತು ಕೈಗಾರೀಕರಣ ಬೂಮಿಯನ್ನು ಆವರಿಸುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಸೈಕೋಟ್ರಿಯಾ ಎಲಾಟಾ ಮತ್ತು ಇದರಂತಹ ಅನೇಕ ಸಾವಿರಾರು ಜಾತಿಯ ಗಿಡಗಳು ನಾಶವಾಗುತ್ತವೆ. ನಮ್ಮ ಮುಂದಿನ ಪೀಳಿಗೆಯವರಿಗೆ ಅದರ ಪೋಟೋ ಮಾತ್ರ ಉಳಿಸಬೇಕಾಗುತ್ತದೆ. ವರ‍್ಶದಿಂದ ವರ‍್ಶಕ್ಕೆ ಅನೇಕ ಗಿಡಗಳು, ಕೀಟಗಳು, ನೇಪತ್ಯಕ್ಕೆ ಸರಿಯುತ್ತಿದೆ. ಎಶ್ಟು ಎಂದು ನಿಕರವಾಗಿ ಅಂದಾಜಿಸುವುದು ಕಶ್ಟಕರ. ಮಾನವ ತನ್ನ ಕೆಲವು ಅಬ್ಯಾಸಗಳನ್ನು ಬದಲಿಸದಿದ್ದರೆ, ಸುಸ್ತಿರ ಬವಿಶ್ಯದತ್ತ ಗಮನ ಹರಿಸದಿದ್ದರೆ, ಹುಕರ‍್ಸ್ ಲಿಪ್ಸ್ ನಂತಹ ಅನೇಕ ಸುಂದರವಾದ ಗಿಡಗಳು ಕಮರಿ ಹೋಗುತ್ತವೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, charismaticplanet.com, amusingplanet.com, odditycentral.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: