ಆಸ್ಟ್ರೇಲಿಯನ್ ಓಪನ್ – ಹ್ಯಾಪಿ ಸ್ಲಾಮ್
ಟೆನ್ನಿಸ್ ನ ನಾಲ್ಕು ಪ್ರಮುಕ ಗ್ರ್ಯಾಂಡ್‌ಸ್ಲಾಮ್ ಗಳ ಪೈಕಿ ಆಸ್ಟ್ರೇಲಿಯಾದ ಮೆಲ್ಬರ‍್ನ್ ನ ರಾಡ್ ಲೆವರ್ ಅರೇನಾ ದಲ್ಲಿ ನಡೆಯುವ ಆಸ್ಟ್ರೇಲಿಯನ್ ಓಪನ್ ವರ‍್ಶದ ಮೊದಲನೆಯ ಗ್ರ್ಯಾಂಡ್‌ಸ್ಲಾಮ್ ಆಗಿದೆ. ಪ್ರತಿ ವರ‍್ಶ ಜನವರಿಯ ಕಡೆಯ ಎರಡು ವಾರಗಳಲ್ಲಿ ನಡೆಯುವ ಈ ಪಂದ್ಯಾವಳಿಗೆ ಒಂದು ಶತಮಾನಕ್ಕೂ ಹೆಚ್ಚಿನ ಹಳಮೆಯಿದೆ. ಆಸ್ಟ್ರೇಲಿಯಾದ ವಿಕ್ಟೊರಿಯಾ ರಾಜ್ಯದ ಆರ‍್ತಿಕತೆಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿರುವ ಈ ಪೋಟಿಗೆ ‘ಹ್ಯಾಪಿ ಸ್ಲಾಮ್’ ಎಂಬ ಅಡ್ಡ ಹೆಸರೂ ಇದೆ. ಮಳೆ ಹಾಗೂ ಇನ್ನಿತರ ಪ್ರಕ್ರುತಿ ವಿಕೋಪಗಳ ನಡುವೆಯೂ ಆಟ ತಡೆಯಿಲ್ಲದೆ ನಡೆಯುವಂತೆ ಮೊದಲಿಗೆ ಒಳಾಂಗಣ ಅಂಗಳಗಳನ್ನು ಅಣಿ ಮಾಡಿದ ಗೌರವ ಕೂಡ ಈ ಮೇರು ಗ್ರ್ಯಾಂಡ್‌ಸ್ಲಾಮ್ ನ ಪಾಲಾಗಿದೆ. ಅದಲ್ಲದೆ ಟೆನ್ನಿಸ್ ಇತಿಹಾಸದಲ್ಲಿ ಹೆಚ್ಚು ಮಂದಿ ನೋಡುಗರನ್ನು ಕೋರ‍್ಟ್ ನತ್ತ ಸೆಳೆದ ಹೆಚ್ಚುಗಾರಿಕೆ ಕೂಡ ಆಸ್ಟ್ರೇಲಿಯನ್ ಓಪನ್ ಗಿದೆ. ಕೋವಿಡ್ ಗೂ ಮುನ್ನ ನಡೆದ 2020 ರ ಪಂದ್ಯಾವಳಿಯಲ್ಲಿ ಒಟ್ಟು 8,12,000 ಮಂದಿ ಅಂಗಳದಲ್ಲಿ ನೆರೆದದ್ದು ಟೆನ್ನಿಸ್ ನ ಅತಿಮುಕ್ಯ ದಾಕಲೆಯಾಗಿದೆ.
ಆಸ್ಟ್ರೇಲಿಯನ್ ಓಪನ್ ಇತಿಹಾಸ
ವಿಂಬಲ್ಡನ್ (1877), ಯು.ಎಸ್ ಓಪನ್ (1881), ಪ್ರೆಂಚ್ ಓಪನ್ (1891) ನಂತರ ಕಟ್ಟ ಕಡೆಯದಾಗಿ ಆಸ್ಟ್ರೇಲಿಯೇಶಿಯನ್ ಚಾಂಪಿಯನ್ಶಿಪ್ಸ್ ಎಂಬ ಹೆಸರಲ್ಲಿ (1905) ರಲ್ಲಿ ಮೊದಲ್ಗೊಂಡ ಈ ಪೋಟಿಯು 1969 ರಲ್ಲಿ ಚೊಚ್ಚಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಎಂದು ಗುರುತಿಸಿಕೊಂಡಿತು. ಬಳಿಕ 1924 ರಲ್ಲಿ ಗ್ರ್ಯಾಂಡ್‌ಸ್ಲಾಮ್ ಮಾನ್ಯತೆ ದಕ್ಕಿಸಿಕೊಂಡಿತು. ಮೊದಲ ಬಾರಿಗೆ ಈ ಪಂದ್ಯಾವಳಿ ಕ್ರಿಕೆಟ್ ಅಂಗಳದಲ್ಲಿ ನಡೆದದ್ದು ಒಂದು ವಿಲಕ್ಶಣ ಸಂಗತಿ. ಜೊತೆಗೆ ಮೆಲ್ಬರ‍್ನ್ ಹೊರತು ಪಡಿಸಿ ಕೆಲವು ಬಾರಿ ಆಸ್ಟ್ರೇಲಿಯಾದ ಬೇರೆಬೇರೆ ಪ್ರಮುಕ ಊರುಗಳಲ್ಲಿಯೂ (ಸಿಡ್ನಿ, ಅಡಿಲೇಡ್, ಬ್ರಿಸ್ಬೇನ್, ಪೆರ‍್ತ್) ಗ್ರ್ಯಾಂಡ್‌ಸ್ಲಾಮ್ ಆಯೋಜಿಸುವುದರ ಜೊತೆಗೆ ನ್ಯೂಜಿಲ್ಯಾನ್ಡ್ ನ ಕ್ರೈಸ್ಟ್ ಚರ‍್ಚ್ ನಲ್ಲಿ (1906) ಮತ್ತು ಹೇಸ್ಟಿಂಗ್ಸ್ (1912) ನಲ್ಲಿಯೂ ಒಂದೊಂದು ಬಾರಿ ಈ ಟೆನ್ನಿಸ್ ಪಂದ್ಯಾವಳಿಯನ್ನು ನಡೆಸಲಾಗಿದೆ. ಇದು ಎರಡೂ ಪ್ರತ್ಯೇಕ ದೇಶಗಳಲ್ಲಿ ನಡೆದಿರುವ ಏಕೈಕ ಗ್ರ್ಯಾಂಡ್‌ಸ್ಲಾಮ್ ಕೂಡ ಹೌದು. 1988 ರ ತನಕ ವಿಂಬಲ್ಡನ್ ನಂತೆ ಹುಲ್ಲುಹಾಸಿನ ಕೋರ‍್ಟ್ ಗಳಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯನ್ ಓಪನ್ ಪಂದ್ಯಗಳು ಆ ನಂತರ ಹಾರ‍್ಡ್ ಕೋರ‍್ಟುಗಳಿಗೆ (ಗಟ್ಟಿ ನೆಲ) ಮಾರ‍್ಪಾಡಾಯಿತು. ಗಂಡಸರ ಮತ್ತು ಹೆಂಗಸರ ಸಿಂಗಲ್ಸ್ ಪಂದ್ಯಗಳ ಜೊತೆಗೆ ಡಬಲ್ಸ್, ಮಿಶ್ರ ಡಬಲ್ಸ್, ಕಿರಿಯರ ಪಂದ್ಯಗಳು ಮತ್ತು ವೀಲ್‌ಚೇರ್ ಮಾದರಿಯ ಪಂದ್ಯಗಳನ್ನೂ ಈ ಗ್ರ್ಯಾಂಡ್‌ಸ್ಲಾಮ್ ನಲ್ಲಿ ಆಡಿಸಲಾಗುತ್ತದೆ.
ಓಪನ್ ಎರಾದಲ್ಲಿ ಗಂಡಸರ ಸಿಂಗಲ್ಸ್ ಪೋಟಿಯಲ್ಲಿ ಅತಿಹೆಚ್ಚು ಒಟ್ಟು 9 ಬಾರಿ ಸೆರ‍್ಬಿಯಾದ ನೋವಾಕ್ ಜೊಕೊವಿಚ್ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರೆ ಅಮೇರಿಕಾದ ಸೆರೆನಾ ವಿಲಿಯಮ್ಸ್ ಅತ್ಯದಿಕ 7 ಬಾರಿ ಹೆಂಗಸರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಓಪನ್ ಎರಾಗೂ ಮುನ್ನ ಗಂಡಸರ ಪೋಟಿಯಲ್ಲಿ ರಾಯ್ ಎಮೆರ‍್ಸನ್ 6 ಬಾರಿ ಮತ್ತು ಹೆಂಗಸರ ಪೋಟಿಯಲ್ಲಿ ದಿಗ್ಗಜೆ ಮಾರ‍್ಗರೇಟ್ ಕೋರ‍್ಟ್ 11 ಸಾರಿ ಗೆದ್ದು ದಾಕಲೆ ಮಾಡಿದ್ದಾರೆ. ಇನ್ನು ಗಂಡಸರ ಡಬಲ್ಸ್ ಪೋಟಿಯಲ್ಲಿ ಬಾಬ್ ಬ್ರೈನ್ ಮತ್ತು ಮೈಕ್ ಬ್ರೈನ್ 6 ಬಾರಿ ಗೆಲ್ಲುಗರಾಗಿದ್ದರೆ ಹೆಂಗಸರ ಡಬಲ್ಸ್ ಪೋಟಿಯಲ್ಲಿ ಮಾರ‍್ಟಿನಾ ನವ್ರಾಟಿಲೋವಾ ಬೇರೆಬೇರೆ ಜೋಡಿಗಳೊಂದಿಗೆ ಒಟ್ಟು 8 ಬಾರಿ ಗೆದ್ದು ಪ್ರಾಬಲ್ಯ ಮೆರೆದಿದ್ದಾರೆ. ಹಾಗೂ ಮಿಶ್ರ ಡಬಲ್ಸ್ ನಲ್ಲಿ ಬಾರತದ ಲಿಯಾಂಡರ್ ಪೇಸ್ ಅತಿಹೆಚ್ಚು 3 ಬಾರಿ ಈ ಗ್ರ್ಯಾಂಡ್‌ಸ್ಲಾಮ್ ಗೆದ್ದಿರುವುದು ಬಾರತಕ್ಕೆ ಹಿರಿಮೆ ತಂದಿದೆ. ಮತ್ತು ಆಸ್ಟ್ರೇಲಿಯಾದ ಕೆನ್ ರೋಸ್ವೆಲ್ ತಮ್ಮ 18 ನೇ ಮತ್ತು 37 ನೇ ವಯಸ್ಸಿನಲ್ಲೂ ಸಿಂಗಲ್ಸ್ ಪೋಟಿ ಗೆದ್ದು ಈ ಗ್ರ್ಯಾಂಡ್‌ಸ್ಲಾಮ್ ಗೆದ್ದ ಅತ್ಯಂತ ಕಿರಿಯ ಹಾಗೂ ಹಿರಿಯ ಎಂಬ ಅಪರೂಪದ ದಾಕಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಳಾಂಗಣ ಅಂಗಳ ಮತ್ತು ಹಾರ‍್ಡ್ ಕೋರ‍್ಟ್ ಮರ‍್ಮ
ಆಸ್ಟ್ರೇಲಿಯಾದ ನಡುಬೇಸಿಗೆಯಲ್ಲಿ (ಸುಮಾರು 45 ಡಿಗ್ರಿ ಸೆಲ್ಸಿಯಸ್ ತಲುಪಬಹುದಾದ) ಪಂದ್ಯಾವಳಿ ನಡೆಯುವುದರಿಂದ ಅಲ್ಲಿನ ವಿಪರೀತ ಬಿಸಿಲಿನಿಂದ ಆಟಗಾರರನ್ನು ಮತ್ತು ನೋಡುಗರನ್ನು ಕಾಪಾಡಲು ಅಂಗಳಕ್ಕೆ ಮೇಲ್ಚಾವಣಿಯನ್ನು ಹೊಂದಿಸಲಾಯಿತು. ಇದರಿಂದ ಸಹಜವಾಗಿ ಇರುವಂತಹ ಆಟದ ವಾತಾವರಣವೂ ಮಾರ‍್ಪಾಡುಗೊಂಡಿದೆ. ಹೆಚ್ಚು ಗಾಳಿ ಆಡದ ಒಂದು ಮುಚ್ಚಿಟ್ಟ ಡಬ್ಬಿಯಂತೆ ಬಾಸಗೊಳ್ಳುವ ಈ ಅಂಗಳದಲ್ಲಿ ಹೆಚ್ಚು ರಬಸದಿಂದ ಆಟಗಾರರು ಹೊಡೆತಗಳನ್ನು ಆಡಬಹುದಾಗಿದೆ. ಹಾಗೇ ಅಲ್ಲಿನ ಹೆಚ್ಚಿನ ನೆನೆಯಳಿತೆ (humidity) ಇಂದ ಕೋರ‍್ಟ್ ನಲ್ಲಿ ಆಟಗಾರರು ಬೇಗ ದಣಿಯುವ ಸಾದ್ಯತೆಯೂ ಹೆಚ್ಚಿದೆ. ಸಿಂತೆಟಿಕ್, ರಬ್ಬರ್ ಮತ್ತು ರೇಸಿನ್ ನ ಬೆರಕೆಯಿಂದ ಮಾಡಲಾಗುವ ಈ ಕ್ರುತಕ ಹಾರ‍್ಡ್ ಕೋರ‍್ಟ್ ಗಳಲ್ಲಿ ಚೆಂಡು ಹುಲ್ಲುಹಾಸಿನ ಕೋರ‍್ಟ್ ಗಳಿಗಿಂತ ಕೊಂಚ ಕಡಿಮೆ ವೇಗದಲ್ಲಿ ಸಂಚರಿಸಿದರೂ ಕ್ಲೇ ಕೋರ‍್ಟ್ ಗಿಂತ ಹೆಚ್ಚು ವೇಗದಲ್ಲಿ ಆಟ ನಡೆಯುತ್ತದೆ. ಜೊತೆಗೆ ಹಾರ‍್ಡ್ ಕೋರ‍್ಟ್ ನಲ್ಲಿ ಏರಿಳಿತವಿಲ್ಲದೆ ಸಮನಾಗಿ ಹೆಚ್ಚು ಎತ್ತರಕ್ಕೆ ಚೆಂಡು ಪುಟಿಯುವುದರಿಂದ ಆಟಗಾರರಿಗೆ ಒಂದು ವಿಶಿಶ್ಟ ಬಗೆಯ ಸವಾಲನ್ನು ಒಡ್ಡಿ ಅವರ ಚಳಕವನ್ನು ಪರೀಕ್ಶಿಸುತ್ತದೆ.
ಆಸ್ಟ್ರೇಲಿಯನ್ ಓಪನ್ ನಲ್ಲಿ ಬಾರತೀಯರ ಸಾದನೆ
ಬಾರತದ ಯಾವ ಆಟಗಾರ/ಆಟಗಾರ‍್ತಿ ಒಮ್ಮೆಯೂ ಇಲ್ಲಿ ಸಿಂಗಲ್ಸ್ ನಲ್ಲಿ ಗ್ರ್ಯಾಂಡ್‌ಸ್ಲಾಮ್ ಗೆಲ್ಲಲಾಗದಿದ್ದರೂ ಆಸ್ಟ್ರೇಲಿಯನ್ ಓಪನ್ ನ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ನಲ್ಲಿ ಕಳೆದೆರಡು ದಶಕಗಳಲ್ಲಿ ಅದ್ಬುತ ಸಾದನೆ ಮಾಡಿದ್ದಾರೆ. ಲಿಯಾಂಡರ್ ಪೇಸ್ ಒಂದು ಡಬಲ್ಸ್ ಮತ್ತು ಮೂರು ಮಿಶ್ರ ಡಬಲ್ಸ್ ಗೆಲುವಿನೊಂದಿಗೆ ಒಟ್ಟು ಅತಿಹೆಚ್ಚು ನಾಲ್ಕು ಗ್ರ್ಯಾಂಡ್‌ಸ್ಲಾಮ್ ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2003 ರಲ್ಲಿ ಮಾರ‍್ಟಿನಾ ನವ್ರಾಟಿಲೋವಾ ಒಟ್ಟಿಗೆ, 2010 ರಲ್ಲಿ ಕಾರಾ ಬ್ಲಾಕ್ ರೊಂದಿಗೆ ಮತ್ತು 2015 ರಲ್ಲಿ ಮಾರ‍್ಟಿನಾ ಹಿಂಗಿಸ್ ಜೋಡಿಯಾಗಿ ಮಿಶ್ರ ಡಬಲ್ಸ್ ಗೆದ್ದ ಪೇಸ್ 2012 ರಲ್ಲಿ ರಾಡೆಕ್ ಸ್ಟೆಪಾನೆಕ್ ರವರೊಂದಿಗೆ ಆಡಿ ಈ ನೆಲದಲ್ಲಿ ತಮ್ಮ ಏಕೈಕ ಗಂಡಸರ ಡಬಲ್ಸ್ ಗ್ರ್ಯಾಂಡ್‌ಸ್ಲಾಮ್ ಗೆದ್ದಿದಾರೆ. ಇನ್ನು ಮಹೇಶ್ ಬೂಪತಿ ಎರಡು ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2006 ರಲ್ಲಿ ಇವರು ಸ್ವಿಟ್ಜರ‍್ರ್ಲ್ಯಾನ್ಡ್ ನ ಮಾರ‍್ಟಿನಾ ಹಿಂಗಿಸ್ ರೊಂದಿಗೆ ಜಯ ಪಡೆದರೆ 2009 ರಲ್ಲಿ ಸಾನಿಯಾ ಮಿರ‍್ಜಾರೊಟ್ಟಿಗೆ ಆಡಿ ಗ್ರ್ಯಾಂಡ್‌ಸ್ಲಾಮ್ ಗೆದ್ದಿದ್ದಾರೆ. ಹಾಗೂ ಸಾನಿಯಾ ಮಿರ‍್ಜಾ ಕೂಡ ಎರಡು ಬಾರಿ ಈ ಪ್ರಶಸ್ತಿಯನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಒಮ್ಮೆ ಮಾರ‍್ಟಿನಾ ಹಿಂಗಿಸ್ ರವರ ಜೋಡಿಯಾಗಿ ಹೆಂಗಸರ ಡಬಲ್ಸ್ ಮತ್ತು ಬೂಪತಿರೊಂದಿಗೆ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಆದರೆ ಕಳೆದ 6 ವರ‍್ಶಗಳಿಂದ ಬಾರತದ ಯಾವುದೇ ಟೆನ್ನಿಸ್ ಪಟು ಆಸ್ಟ್ರೇಲಿಯನ್ ಓಪನ್ ಗೆಲ್ಲಲಾಗಿಲ್ಲ. ಈಗ ಇದು ಸಾಲದೆಂಬಂತೆ ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿಯ 2023 ರ ಆಸ್ಟ್ರೇಲಿಯನ್ ಓಪನ್ ಗೆ ಬಾರತದ ಒಬ್ಬ ಆಟಗಾರ/ಆಟಗಾರ‍್ತಿಯೂ ಆಡಲು ಅರ‍್ಹತೆ ಪಡೆಯುವಲ್ಲಿ ವಿಪಲರಾಗಿ ನಿರಾಸೆ ಮೂಡಿಸಿದ್ದಾರೆ.
ಮೈನವಿರೇಳಿಸಿದ ಪಂದ್ಯಗಳು
ಎಲ್ಲಾ ಬಗೆಯ ಆಟಗಾರರಿಗೂ ಗೆಲ್ಲುವ ಸಮಾನ ಅವಕಾಶ ನೀಡುವ ರಾಡ್ ಲೆವೆರ್ ಅರೆನಾದ ಈ ಗಟ್ಟಿನೆಲದ ಅಂಗಳ ದಶಕಗಳಿಂದಲೂ ಹಲವಾರು ರೋಚಕ ಪಂದ್ಯಗಳಿಗೆ ಸಾಕ್ಶಿಯಾಗಿದೆ. ಅದರಲ್ಲೂ 5 ಸೆಟ್ ಗಳ ಗಂಡಸರ ಸಿಂಗಲ್ಸ್ ಪೋಟಿ ಆ ಉರಿ ಬಿಸಿಲಿನಲ್ಲಿ ಆಟಗಾರರ ಮೈ ಅಳವಿಗೂ ಸವಾಲೊಡ್ಡುತ್ತದೆ. 2012 ರಲ್ಲಿ ಆಗಿನ ವಿಶ್ವ ರಾಂಕಿಂಗ್ ನ ಒಂದನೇ ಮತ್ತು ಎರಡನೇ ಎಡೆ ಪಡೆದಿದ್ದ ನೋವಾಕ್ ಜೊಕೊವಿಚ್ ಮತ್ತು ರಪೇಲ್ ನಡಾಲ್ ರ ಮದ್ಯೆ ನಡೆದ ಅಬ್ಬರದ 5 ಗಂಟೆ 53 ನಿಮಿಶಗಳ ಹಣಾಹಣಿ ಅತಿ ಹೆಚ್ಚು ಹೊತ್ತು ನಡೆದ ಟೆನ್ನಿಸ್ ಪಂದ್ಯ ಎಂಬ ಹೆಗ್ಗಳಿಕೆ ಪಡೆದು ದಾಕಲೆಯ ಪುಟ ಸೇರಿತು. ಕಡೆಗೆ ಜೊಕೊವಿಚ್ 5-7, 6-4, 6-2, 6-7, 7-5 ರಿಂದ ಕೂದಲೆಳೆ ಅಂತರದಲ್ಲಿ ನಡಾಲ್ ರನ್ನು ಮಣಿಸಿ ಗ್ರ್ಯಾಂಡ್‌ಸ್ಲಾಮ್ ವಿಜೇತರಾಗಿದ್ದರು. ಈ ಐತಿಹಾಸಿಕ ಪಂದ್ಯವನ್ನು ಕಣ್ಣಾರೆ ಕಂಡು ಕಣ್ಣು ತುಂಬಿಸಿಕೊಂಡವರೇ ಪುಣ್ಯವಂತರು ಎಂಬುದು ಟೆನ್ನಿಸ್ ಬಲ್ಲವರ ಅಂಬೋಣ. ಆ ಬಳಿಕ 2017 ರಲ್ಲಿ ಆರು ತಿಂಗಳ ನಂತರ ಕೋರ‍್ಟ್ ಗೆ ಮರಳಿದ್ದ ರೋಜರ್ ಪೆಡರರ್ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಮತ್ತೊಂದು 5 ಸೆಟ್ ಗಳ ಪಂದ್ಯದಲ್ಲಿ 6-4, 3-6, 6-1, 3-6, 6-3 ರಿಂದ ನಡಾಲ್ ರನ್ನು ಸೋಲಿಸಿ ತಮ್ಮ 18 ನೇ ಗ್ರ್ಯಾಂಡ್‌ಸ್ಲಾಮ್ ಗೆದ್ದದ್ದು ಪ್ರಪಂಚದಾದ್ಯಂತ ಇರುವ ಅಬಿಮಾನಿಗಳು, ಅದರಲ್ಲೂ ಆಸ್ಟ್ರೇಲಿಯನ್ನರು ಎಂದಿಗೂ ಮರೆಯಲಾದ ಪಂದ್ಯ. ಹಾಗೂ ಕಳೆದ ವರ‍್ಶ 2022 ರಲ್ಲಿ ಡೇನಿಯಲ್ ಮೆಡ್ವಡೇವ್ ಮತ್ತು ನಡಾಲ್ ರ ನಡುವೆ ಜರುಗಿದ ಪೈನಲ್ ಸಹ ಟೆನ್ನಿಸ್ ಇತಿಹಾಸದ ಅತೀ ಪ್ರಮುಕ ಪಂದ್ಯಗಳಲ್ಲೊಂದಾಗಿ ಎಡೆ ಪಡೆದಿದೆ. ಮೊದಲೆರಡು ಸೆಟ್ ಗಳನ್ನು ಸೋತು ಮೂರನೇ ಸೆಟ್ ನಲ್ಲೂ ಹಿನ್ನಡೆ ಅನುಬವಿಸುತ್ತಿದ್ದ ನಡಾಲ್ ಅಂತಹ ಶೋಚನೀಯ ಪರಿಸ್ತಿತಿಯಿಂದ ಪುಟಿದೆದ್ದು ಪಂದ್ಯ ಗೆದ್ದದ್ದು ಮಾತ್ರ ಪವಾಡವೆಂಬಂತೆ ಎಲ್ಲರಿಗೂ ಬಾಸವಾಗಿದ್ದು ಅತಿಶಯವೇನಲ್ಲ. ಕೆಲಕಾಲ ಅಲ್ಲಿ ನೆರೆದಿದ್ದವರು ಮೂಗಿನ ಮೇಲೆ ಬೆರೆಳಿಟ್ಟುಕೊಂಡು ನಾವು ನೋಡುತ್ತಿರುವುದು ದಿಟವೇ? ಎಂದು ಹೌಹಾರುವಂತೆ ನಡಾಲ್ ರ ರಾಕೆಟ್ ಚಳಕ ಮಾಡಿದ್ದು ಸುಳ್ಳಲ್ಲ. 2-6, 6-7, 6-4, 6-4, 7-5 ರಿಂದ ಪಂದ್ಯ ಗೆದ್ದು, ನಡಾಲ್ ತಮ್ಮ ರಾಕೆಟ್ ಕೈಬಿಟ್ಟು ತಾವೇ ಆಶ್ಚರ‍್ಯಗೊಂಡಂತೆ ಕೋರ‍್ಟ್ ನಲ್ಲಿ ಕೆಲಕಾಲ ಸ್ತಬ್ದರಾಗಿ ನಿಂತು ಮುಗ್ದ ಮುಗುಳ್ನಗೆ ಬೀರಿದ್ದು ಟೆನ್ನಿಸ್ ನ ಒಂದು ಅವಿಸ್ಮರಣೀಯ ಕ್ಶಣ. ಇತ್ತೀಚಿನ ದಿನಗಳಲ್ಲಿ ಈ ಪವಾಡಸದ್ರುಶ್ಯ ಪಂದ್ಯ ಚರ‍್ಚೆಯಾದಶ್ಟು ಬೇರೆ ಯಾವ ಟೆನ್ನಿಸ್ ಪಂದ್ಯವೂ ಚರ‍್ಚೆಯಾಗಿಲ್ಲ ಎಂಬುದು ಈ ಪಂದ್ಯದ ಐತಿಹಾಸಿಕ ವಿಶೇಶತೆಗೆ ಎತ್ತುಗೆ ಎಂದೇ ಹೇಳಬೇಕು.
2023 ರ ಆಸ್ಟ್ರೇಲಿಯನ್ ಓಪನ್
ಕಳೆದ ವರ‍್ಶದ ‘ಕೋವಿಡ್ ತಡೆಮದ್ದು’ ಪ್ರಹಸನದ ಬಳಿಕ ದಿಗ್ಗಜ ಜೊಕೊವಿಚ್ ಆಸ್ಟ್ರೇಲಿಯನ್ ಓಪನ್ ಗೆ ಮರಳಿರುವುದು ಈ ಬಾರಿಯ 111ನೇ ಪಂದ್ಯಾವಳಿಗೆ ಕಳೆ ತಂದಿದೆ. ಅತಿಹೆಚ್ಚು (9) ಬಾರಿ ಈ ಗ್ರ್ಯಾಂಡ್‌ಸ್ಲಾಮ್ ಗೆದ್ದಿರುವ ಅವರು ತಮ್ಮ ಆಟದಲ್ಲಿ ಒಳ್ಳೆ ಲಯ ಕಂಡುಕೊಂಡಿರುವುದು ಕೂಡ ಅಬಿಮಾನಿಗಳಲ್ಲಿ ನಿರೀಕ್ಶೆ ಹುಟ್ಟಿಸಿದೆ. ನಡಾಲ್ ರ ಅತ್ಯದಿಕ 22 ಗ್ರ್ಯಾಂಡ್‌ಸ್ಲಾಮ್ ಗಳ ದಾಕಲೆಯನ್ನು ಬೆನ್ನತ್ತಿ ಹೊರಟಿರುವ ಜೊಕೊವಿಚ್ ರಿಗೆ ತಮ್ಮ ನೆಚ್ಚಿನ ಅಂಗಳದಲ್ಲಿ ಗೆಲುವು ಪಡೆಯುವ ಎಲ್ಲಾ ಸಾದ್ಯತೆಗಳು ಇವೆ. ಇನ್ನು ರಪೇಲ್ ನಡಾಲ್ ಕಳೆದ ಬಾರಿ ಗೆದ್ದ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ತವಕದಲ್ಲಿದ್ದರೆ ಮೆಡ್ವಡೇವ್, ಅಲ್ಕರಾಜ್, ಡಾಮಿನಿಕ್ ತೀಮ್, ಪ್ರಾನ್ಸಿಸ್ ಟಿಯಾಪೇ ರಂತಹ ಯುವ ಆಟಗಾರರು ಈ ದಿಗ್ಗಜರಿಗೆ ಸವಾಲೊಡ್ಡಲು ಅಣಿಯಾಗಿದ್ದಾರೆ. ಹಾಗೂ ಕಳೆದ ಬಾರಿ ಹೆಂಗಸರ ಪೋಟಿ ಗೆದ್ದಿದ್ದ ಆಶ್ ಬಾರ‍್ಟಿ ನಿವ್ರುತ್ತಿಗೊಂಡಿರುವುದರಿಂದ ಕಂಡಿತ ಹೊಸ ಆಟಗಾರರಿಗೆ ಗೆಲ್ಲುವ ಒಳ್ಳೆ ಅವಕಾಶ ಹುಟ್ಟುಕೊಂಡಿದೆ. ಇದರೊಟ್ಟಿಗೆ ಡಬಲ್ಸ್, ಮಿಶ್ರ ಡಬಲ್ಸ್ ಸೇರಿ ಎಲ್ಲಾ ಮಾದರಿಯ ಪಂದ್ಯಗಳೂ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಮ್ ಗೆ ಮೆರಗು ತರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇದೇ ಸೋಮವಾರ, ಜನವರಿ 16 ರಂದು ಮೊದಲ್ಗೊಳ್ಳಲಿರುವ ಈ ವರ‍್ಶದ ಪಂದ್ಯಾವಳಿ ಜನವರಿ 29 ರಂದು ಗಂಡಸರ ಪೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. ಟೆನ್ನಿಸ್ ಒಲವಿಗರು ಎದುರು ನೋಡುತ್ತಿರುವ ಈ ಹ್ಯಾಪಿ ಸ್ಲಾಮ್ ನಲ್ಲಿ ಪೈಪೋಟಿಯಿಂದ ಕೂಡಿದ ಹೆಚ್ಚೆಚ್ಚು ಒಳ್ಳೆ ಪಂದ್ಯಗಳು ನೋಡಲು ಸಿಗಲಿ ಹಾಗೂ ಟೆನ್ನಿಸ್ ಇನ್ನಶ್ಟು ಶ್ರೀಮಂತವಾಗಲಿ ಎಂದು ಬಯಸುತ್ತಾ ವರ‍್ಶದ ಮೊದಲ ಗ್ರ್ಯಾಂಡ್‌ಸ್ಲಾಮ್ ಅನ್ನು ಎದುರುನೋಡೋಣ!
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು