ಹಳ್ಳಿ ಸೊಗಡಿನ ಚೆಂದದ ಆಟಗಳು
ಹಳ್ಳಿ ನೋಟ ಚೆಂದ, ಹಳ್ಳಿ ಆಟ ಅಂತೂ ಚೆಂದವೋ ಚೆಂದ. ಹಳ್ಳಿ ಆಟ ಅಂದರೆ ನೆನಪಿಗೆ ಬರುವುದು ಕಣ್ಣಾ ಮುಚ್ಚಾಲೆ ಆಟ, ಲಗೋರಿ, ಕುಂಟಬಿಲ್ಲೆ, ಅಚ್ಚಿನಕಲ್ಲು, ಮರಕೋತಿ, ನದಿ ದಡ, ಅಳಗುಳಿ ಮನೆ, ಚೌಕಾಬಾರ, ಚಿನ್ನಿ ದಾಂಡು, ಗೋಲಿ ಆಡುವಿಕೆ, ಬುಗುರಿ, ಗಾಳಿಪಟ ಇತ್ಯಾದಿ. ಅಶ್ಟು ಸೊಗಸಾಗಿರುತ್ತಿದ್ದವು ಆ ಆಟಗಳು!. ಸುಮಾರು ಇಪ್ಪತ್ತೈದು ವರ‍್ಶಗಳ ಹಿಂದೆ ಅಂದರೆ 90ರ ದಶಕದಲ್ಲಿ ಈ ಆಟಗಳಲ್ಲಿ ಕೆಲವು ಆಟಗಳನ್ನು ನಗರ ಪಟ್ಟಣಗಳಲ್ಲಿಯೂ ಮಕ್ಕಳು ಆಡುತ್ತಿದ್ದರು. ಮೈ ಮರೆಸುವ ಈ ಬಗೆಯ ಸಾಂಪ್ರದಾಯಿಕ ಆಟಗಳು ಈಗೀಗ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ. ಈಗಿನ ಪೀಳಿಗೆಯ ಮಕ್ಕಳಿಗೆ ಹೆಚ್ಚಾಗಿ ಕ್ರಿಕೆಟ್, ಪುಟ್‌ಬಾಲ್, ಟೆನಿಸ್ ತರದ ಆಟಗಳನ್ನು ಹೊರತು ಪಡಿಸಿದರೆ ಬೇರೆ ಆಟಗಳ ಪರಿಚಯ ಇಲ್ಲವೆಂದು ತೋರುತ್ತದೆ. ಇವೆಲ್ಲಕ್ಕಿಂತ ಮಿಗಿಲಾಗಿ ಮೊಬೈಲ್ ಗೇಮ್ ಗಳತ್ತ ಮೊರೆ ಹೋಗಿ ಹೊರಗಡೆ ಆಟ ಆಡುವುದನ್ನೇ ಕೆಲವರು ಮರೆತ್ತಿದ್ದಾರೆ ಎಂದು ಅನ್ನಿಸುತ್ತದೆ. ಈಗೆಲ್ಲ ಮಕ್ಕಳ ಕುಶಿಗಾಗಿ ಕೆಲ ಪೋಶಕರು ಆಟಿಕೆಗಳ ಬದಲಾಗಿ ಮೊಬೈಲ್ ಪೋನ್ ಗಳನ್ನು ಕೊಡಿಸುವವರಿದ್ದಾರೆ. ಮೊಬೈಲ್ ಗೇಮ್ ಗಳು ಕೇವಲ ಕ್ಶಣಿಕ ತ್ರುಪ್ತಿ ನೀಡಿ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುವಂತಹವು. ಆದರೆ ಆಗಿನ ಜನಪದ ಆಟಗಳು ಮನಸ್ಸಿಗೆ ಹಿತ ಮತ್ತು ದೇಹದ ಸ್ವಾಸ್ತ್ಯವನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದವು.
ಹಳ್ಳಿಯ ಸೊಗಡಿನ ಕೆಲವು ಆಟಗಳು ಮತ್ತು ನಿಯಮಗಳು:
ಲಗೋರಿ ಆಟ :
ಇದೊಂದು ಜನಪ್ರಿಯ ಆಟ. ಮೊದಲಿಗೆ 7 ರಿಂದ 9 ಚಪ್ಪಟೆ ಆಕಾರದ ಕಲ್ಲುಗಳನ್ನು ಒಂದರ ಮೇಲೊಂದು ಗೋಪುರದಂತೆ ಜೋಡಿಸಿಡಬೇಕು. ಈ ಆಟದಲ್ಲಿ ಎರಡು ತಂಡಗಳಿರುತ್ತವೆ. ಒಂದೊಂದು ತಂಡದಲ್ಲಿ 4ರಿಂದ 5 ಜನ ಆಟಗಾರರಿರುತ್ತಾರೆ. ಎರಡು ತಂಡದ ನಾಯಕರ ನಡುವೆ ಟಾಸ್ ಹಾಕಲಾಗುತ್ತದೆ. ಟಾಸ್ ಗೆದ್ದ ತಂಡದವರಲ್ಲಿ ಒಬ್ಬರು 3 ರಿಂದ 4 ಮೀಟರ್ ದೂರದಲ್ಲಿ ನಿಂತು ಚೆಂಡನ್ನು ಗೋಪುರದೆಡೆಗೆ ಬೀಸಿ ಉರುಳಿಸಿ ಪಲಾಯನ ಮಾಡಬೇಕು. ಅದೇ ತಂಡದವರು ಉರುಳಿದ ಗೋಪುರವನ್ನು ಮತ್ತೆ ಯತಾಸ್ತಿತಿಗೆ ಕಟ್ಟುವಲ್ಲಿ ಸಪಲರಾದರೆ ಅವರು ಗೆದ್ದಂತೆ. ಹೀಗೆ ಕಟ್ಟುವ ವೇಳೆ ಎದುರಾಳಿ ತಂಡದ ಆಟಗಾರರ ಯಾರಾದರೊಬ್ಬರು ಅವರನ್ನು ಚೆಂಡಿನಿಂದ ತಾಕಿಸಿದರೆ ಅತವಾ ಮುಟ್ಟಿದರೆ ಅವರು ಔಟ್. ಗೋಪುರವನ್ನು ಬೀಳಿಸಿದ ತಂಡ ಮತ್ತೆ ಗೋಪುರವನ್ನು ಕಟ್ಟಿ ಲಗೋರಿ ಎಂದು ಕೂಗುವುದೇ ಆನಂದ.
ಅಳಗುಳಿ ಮನೆ :
ಇದು ಒಂದು ಬಗೆಯ ಒಳಾಂಗಣ ಆಟ. ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಆಡಬಹುದಾದ, ಕುಶಿ ನೀಡುವಂತಹ ಆಟ. ಹಿಂದೆ ಪ್ರತಿ ಮನೆಯಲ್ಲೂ ಈ ಅಳಗುಳಿ ಮನೆ ಆಟಿಕೆ ಇರುತಿತ್ತು. ಇದೊಂದು ಮರದ ಆಟಿಕೆ. ಕಬ್ಬಿಣದಲ್ಲಿ ತಯಾರಿಸಿದ ಈ ಆಟಿಕೆಗಳು ಕೆಲವರ ಬಳಿ ಇರುತಿತ್ತು. ಆದರೆ ಈಗ ಅಳಗುಳಿ ಮನೆ ಆಟ ಸಂಪೂರ‍್ಣವಾಗಿ ನಿಂತಂತೆ ಕಾಣುತ್ತದೆ. ಅಳಗುಳಿ ಮನೆ ಆಟಿಕೆಯಲ್ಲಿ ಎರಡು ಸಾಲುಗಳಿದ್ದು, ಇಬ್ಬರು ಆಟಗಾರರು ಎದುರು ಬದುರಾಗಿ ಕುಳಿತು ಆಡಬಹುದಾಗಿದೆ. ಒಂದೊಂದು ಸಾಲಿನಲ್ಲಿ 7 ಗುಳಿಗಳಿರುತ್ತವೆ. ಹುಣಸೆ ಬೀಜಗಳು ಈ ಆಟಕ್ಕೆ ಬೇಕೇ ಬೇಕು. ಪ್ರತಿ ಗುಳಿಗೆ ಐದೈದು ಹುಣಸೆ ಬೀಜಗಳನ್ನು ಹಾಕಬೇಕು. ಒಬ್ಬ ಆಟಗಾರನಿಗೆ ಒಂದು ಸಾಲು ಸೀಮಿತ. ತಮ್ಮ ಸಾಲಿಗೆ ಸೇರಿದ ಯಾವುದಾದರೊಂದು ಗುಳಿಯಿಂದ ಹುಣಸೆಬೀಜಗಳನ್ನು ಬಾಚಿ ಒಂದೊಂದು ಗುಳಿಗೂ ಒಂದೊಂದು ಹುಣಸೆ ಬೀಜವನ್ನು ಹಾಕಬೇಕು. ಕೈಯಲ್ಲಿದ್ದ ಬೀಜಗಳು ಕಾಲಿಯಾದಂತೆ ತದನಂತರದ ಗುಳಿಯಿಂದ ಬೀಜಗಳನ್ನು ತೆಗೆದು ಒಂದೊಂದಾಗಿ ಮುಂದಿನ ಗುಳಿಗಳಿಗೆ ಹಾಕಬೇಕು. ಒಂದು ವೇಳೆ ಕೊನೆ ಗುಳಿಗೆ ಹಾಕಿದ ನಂತರದ ಗುಳಿ ಏನಾದರೂ ಕಾಲಿ ಇದ್ದ ಪಕ್ಶದಲ್ಲಿ, ಪಕ್ಕದ ಗುಳಿ ಹಾಗೂ ಅದರ ಎದುರಲ್ಲಿರುವ ಬೀಜಗಳನ್ನು ಆಟಗಾರ ಆಕ್ರಮಿಸಿಕೊಳ್ಳುತ್ತಾನೆ. ಹೀಗೆ ಎಲ್ಲಾ ಬೀಜಗಳು ಮುಗಿಯುವ ತನಕ ಸರತಿಯ ಪ್ರಕಾರ ಆಡತಕ್ಕದ್ದು. ಕೊನೆಯಲ್ಲಿ ಯಾರ ಬಳಿ ಹೆಚ್ಚು ಸಂಕ್ಯೆಯ ಹುಣಸೆಬೀಜಗಳು ಉಳಿಯುತ್ತವೆಯೋ ಅವರು ಗೆಲ್ಲುತ್ತಾರೆ.
ಕಣ್ಣು ಮುಚ್ಚಾಲೆ ಆಟ:
ಈ ಆಟ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರು ಬಾಲ್ಯದಲ್ಲಿ ಈ ಆಟವನ್ನು ಆಡಿರುತ್ತಾರೆ. ಒಂದು ಮಗು ಇನ್ನೊಂದು ಮಗುವಿನ ಕಣ್ಣುಗಳನ್ನು ತನ್ನ ಕೈಗಳಿಂದ ಮುಚ್ಚಿ;
‘ಕಣ್ಣ ಮುಚ್ಚೆ ಗಾಡೆ ಗೂಡೆ
ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮಯ ಹಕ್ಕಿ
ನಿಮ್ಮಯ ಹಕ್ಕಿ
ಬಿಟ್ಟೇ ಬಿಟ್ಟೆ
ಕೋ ಕಾ
ಕೋ ಕಾ’
ಎಂಬ ಸಾಲುಗಳನ್ನು ಹಾಡುವ ಮೂಲಕ ಕೈ ಬಿಟ್ಟು, ಕಣ್ಣು ಮುಚ್ಚಿಸಿಕೊಂಡಿದ್ದ ಮಗು ಬಚ್ಚಿಟ್ಟುಕೊಂಡಿರುವವರನ್ನೆಲ್ಲ ಹುಡುಕಿ, ಸಾಕ್ಶಿ ಸಮೇತ ಜಾಗದ ಗುರುತನ್ನು ಹೇಳಿ, ಔಟ್ ಎಂದು ಕೂಗುವ ಆಟ. ಇದೇ ಬಗೆಯಲ್ಲಿ ಆಡುತ್ತಿದ್ದ ಮತ್ತೊಂದು ಆಟ ಐಸ್ ಪೈಸ್.
ಇವೆಲ್ಲಾ ಆಟಗಳ ಜೊತೆಗೆ ಮಿಕ್ಕುಳಿದ ಆಟಗಳು ಆಡಲು ಅಶ್ಟೇ ಮಜ ನೀಡುತ್ತಿದ್ದವು. ಕುಂಟಬಿಲ್ಲೆ, ಅಚ್ಚಿನಕಲ್ಲು ಆಟವನ್ನು ಬಾಲ್ಯದಲ್ಲಿ ಸಾಮಾನ್ಯವಾಗಿ ಎಲ್ಲ ಹೆಣ್ಣುಮಕ್ಕಳು ಆಡಿರುತ್ತಾರೆ. ಬುಗುರಿ ಆಟ ಗಂಡುಮಕ್ಕಳು ಆಡುತ್ತಿದ್ದ ನೆಚ್ಚಿನ ಆಟಗಳಲ್ಲೊಂದು. ಚೌಕಾಬಾರ ಒಂದು ರೀತಿಯಲ್ಲಿ ನಮಗೆಲ್ಲ ಲೆಕ್ಕಾಚಾರ ಕಲಿಸಿದಂತಹ ಆಟ ಎನ್ನಬಹುದು. ಹಳ್ಳಿ ಶೈಲಿಯ ಆಟಗಳಿಂದ ಮನೋರಂಜನೆಯ ಜೊತೆಗೆ ನಮ್ಮ ಸಂಸ್ಕ್ರುತಿಯ ಅರಿವು ಮತ್ತಶ್ಟು ಹೆಚ್ಚಲು ಕಾರಣವಾಗುತ್ತದೆ. ಆರೋಗ್ಯ ವ್ರುದ್ದಿಯಾಗುತ್ತದೆ. ಮನಸ್ಸು ದೀರ‍್ಗ ಕಾಲ ಉಲ್ಲಾಸಬರಿತವಾಗುತ್ತದೆ.ಆದ್ದರಿಂದ ಅಳಿವಿನಂಚಿನಲ್ಲಿರುವ ಈ ಆಟಗಳನ್ನು ಉಳಿಸಬೇಕಾಗಿದೆ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು