ಹಾವ್ ಪಾರ್ ವಿಲ್ಲಾ – ಬೌದ್ದ ದರ‍್ಮದ ನರಕ

– .

ಸಿಂಗಾಪುರದಲ್ಲಿರುವ ಟೈಗರ್ ಬಾಮ್ ಗಾರ‍್ಡನ್ಸ್, ಅದರ ಹೆಸರೇ ಹೇಳುವಂತೆ ಇದೊಂದು ಉದ್ಯಾನವನ. ಹಾವ್ ಪಾರ್ ವಿಲ್ಲಾ ಎಂದೂ ಕರೆಯಲಾಗುವ ಈ ಉದ್ಯಾನವನದಲ್ಲಿ ಬೌದ್ದ ದರ‍್ಮದ ನರಕವನ್ನು ತಮ್ಮ ಕಲ್ಪನೆಗೆ ಮೂಡಿ ಬಂದಂತೆ ಸ್ರುಶ್ಟಿಸಲಾಗಿದೆ. ಈ ಉದ್ಯಾನವನದ ಸಂಸ್ತಾಪಕರು ಅವ್ ಬೂನ್ ಹಾವ್ ಮತ್ತು ಅವ್ ಬೂನ್ ಪರ್ ಎಂಬ ಬರ‍್ಮಾ ಸಹೋದರರು. ಇವರುಗಳು ಪ್ರಸಿದ್ದಿಯಾಗಿರುವುದು ಟೈಗರ್ ಬಾಮ್ ಮುಲಾಮು ತಯಾರಿಕೆಯಲ್ಲಿ. ಟೈಗರ್ ಬಾಮ್ ಮುಲಾಮು ಮಾರಾಟದಿಂದ ಬಂದ ಹಣದಲ್ಲಿ ಒಂದು ಬಾಗವನ್ನು ಅವರುಗಳು ಈ ಉದ್ಯಾನವನದ ನಿರ‍್ಮಾಣಕ್ಕೆ ಉಪಯೋಗಿಸಿದರು. ಇದು ನಿರ‍್ಮಾಣವಾಗಿದ್ದು 1937ರಲ್ಲಿ. ಇಲ್ಲಿ ಮಕ್ಕಳನ್ನು ಹೆದರಿಸಿ ಸರಿದಾರಿಗೆ ತರಲು, ಮಕ್ಕಳು ತಪ್ಪು ದಾರಿಯಲ್ಲೇ ಮುಂದುವರೆದರೆ ಸಾವಿನ ನಂತರ ನರಕದಲ್ಲಿ ಏನೆಲ್ಲಾ ಕಶ್ಟಗಳನ್ನು ಅನುಬವಿಸಬಹುದು ಎಂಬುದನ್ನು ಕಣ್ಣಾರೆ ಕಾಣುವಂತೆ ಈ ಉದ್ಯಾನವನದಲ್ಲಿ ಚಿತ್ರಿಸಲಾಗಿದೆ. ಪಾಶ್ಚಿಮಾತ್ಯರೂ ಸಹ ಬೆಚ್ಚಿಬೀಳಿಸುವಂತಿದೆ ಈ ಉದ್ಯಾನವನ. ಸಿಂಗಾಪೂರಿಗೆ ಬೇಟಿ ನೀಡುವವರು ಈ ಉದ್ಯಾನವನವನ್ನು ನೋಡದೆ ಹಿಂದಿರುಗಿದರೆ ಸಿಂಗಪೂರ್ ಪರಿಪೂರ‍್ಣ ನೋಡಿದಂತೆ ಆಗುವುದಿಲ್ಲ. ಇದರ ಜೊತೆಗೆ ಬೌದ್ದ, ಟಾವೋ ಮತ್ತು ಕನ್ಪ್ಯೂಶಿಯನ್ಸ್ ದಂತಕತೆಗಳು ಮತ್ತು ಆದ್ಯಾತ್ಮಿಕತೆಯನ್ನು ತಿಳಿಸುವ ಶೈಕ್ಶಣಿಕ ಪ್ರವಾಸದಂತಿರುತ್ತದೆ ಇದರ ವೀಕ್ಶಣೆ.

ಈ ಉದ್ಯಾನವನ, 1000ಕ್ಕೂ ಹೆಚ್ಚು ಪ್ರತಿಮೆಗಳು ಮತ್ತು 150ಕ್ಕೂ ಹೆಚ್ಚು ದೊಡ್ಡ ದೊಡ್ಡ ಚಿತ್ರಗಳಿಂದ ಅಲಂಕ್ರುತಗೊಂಡಿದೆ. ಈ ಎಲ್ಲಾ ಪ್ರತಿಮೆಗಳು ಮತ್ತು ಚಿತ್ರಗಳು ಚೀನೀಯರ ಶ್ರೀಮಂತ ಸಂಪ್ರದಾಯಗಳಿಗೆ ಹಿಡಿದ ಕನ್ನಡಿ. ದಂತಕತೆಗಳು, ಇತಿಹಾಸ, ಜಾನಪದ ಮತ್ತು ಕನ್ಪ್ಯೂಶಿಯನಿಸಂನ ಬೋದನೆಗಳು ಇಲ್ಲಿ ಬಿಂಬಿತವಾಗಿದೆ. ಇಲ್ಲಿನ ಪ್ರಮುಕ ವಿಶಯವೆಂದರೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ತೋರಿಸುವುದು. ಇದನ್ನು ಬಿಂಬಿಸುವ ಪ್ಲಾಸ್ಟರ್ ಶಿಲ್ಪಗಳು ಇಲ್ಲಿ ಕಾಣಸಿಗುತ್ತವೆ. ಈ ಉದ್ಯಾನವನವನ್ನು ಪ್ರವೇಶಿಸಿದ ನಂತರ ಎದುರುಗೊಳ್ಳುವುದು ‘ಟೆನ್ ಕೋಟ್ರ‍್ಸ್ ಆಪ್ ಹೆಲ್’. ಇದು ಬಯಂಕರ, ವಿಲಕ್ಶಣ ಹಾಗೂ ಗೊಂದಲದ ಪ್ರದೇಶ. ವಿಲಕ್ಶಣ ದೈತ್ಯ ತಲೆಗಳು, ಬಂದೂಕುಗಳಿಂದ ಬೆದರಿಸುವಂತೆ ಕಾಣುವ ಪ್ರಾಣಿಗಳು, ಮಾನಸಿಕ ಅಸ್ವಸ್ತತೆಯಂತೆ ಕಾಣುವ ಬುದ್ದ ಮತ್ತು ಇತರೆ ಕಲಾಕ್ರುತಿಗಳನ್ನು ಇಲ್ಲಿ ಕಾಣಬಹುದು. ನೀತಿವಂತ ಮಾರ‍್ಗ ಪಾಲಿಸದಿದ್ದರೆ, ಮರುಜನ್ಮದಲ್ಲಿ ಹೊಂದಬಹುದಾದ ವಿಚಿತ್ರ ಜೀವಿಯ ಶಿಲ್ಪ ಇಲ್ಲಿದೆ. ಸಿಂಗಾಪುರದ ಕೆಲವು ಐತಿಹಾಸಿಕ ಕ್ಶಣಗಳು, ಜಾನಪದ ವ್ಯಕ್ತಿಗಳು ಮತ್ತು ಬವ್ಯವಾದ ಡಿಯೋರಾಮಾಗಳನ್ನು ಒಳಗೊಂಡಿದೆ ಈ ಪ್ರದೇಶ.

ಯಮಲೋಕದಲ್ಲಿನ ಚಿತ್ರಹಿಂಸೆಯ ಕೋಣೆ ಎಂದು ಮನದಲ್ಲಿ ಅಚ್ಚಾಗಿರುವ ಪ್ರದೇಶ ಇಲ್ಲೂ ಇದೆ. ಇದರೊಳಗೆ ಬುದ್ದ, ಹುಲಿಗಳು, ಮಂಗಗಳು ಮತ್ತು ನರಕದ ಹತ್ತು ನ್ಯಾಯಾಲಯಗಳ ಬಯಾನಕ ದ್ರುಶ್ಯಗಳನ್ನು ಇಲ್ಲಿ ಕಾಣಬಹುದು. ರಾಜ ಕ್ವಿಂಗ್ವಾಂಗ್‍ನ ನ್ಯಾಯಾಲಯ ಸಹ ಇಲ್ಲಿದೆ. ನರಕವನ್ನು ಹೊಕ್ಕವರು ಇಲ್ಲಿ ಮೊದಲ ವಿಚಾರಣೆಗೆ ಒಳಗಾಗುತ್ತಾರೆ. ದರೋಡೆಕೋರರು, ರೌಡಿಗಳು, ಬೇರೆಯವರ ದೇಹಕ್ಕೆ ಗಾಯವನ್ನು ಉಂಟುಮಾಡಿದವರನ್ನು ಜ್ವಾಲಾಮುಕಿಯಂತಹ ಬೆಂಕಿಯ ಜ್ವಾಲೆಯ ಗುಂಡಿಗೆ ಎಸೆಯಲಾಗುತ್ತದೆ. ಇನ್ನು ಬ್ರಶ್ಟಾಚಾರ, ಕಳ್ಳರು ಮತ್ತು ಜೂಜಾಟದಲ್ಲಿ ನಿರತರಾದವರನ್ನು ಗನೀಕರಿಸಿದ ಪೆಟ್ಟಿಗೆಯಲ್ಲಿ ಹಾಕಿ ಗನೀಕರಿಸಿ ಶಿಕ್ಶಿಸಲಾಗುತ್ತದೆ. ಹಿರಿಯರಿಗೆ ಅಗೌರವ ತೋರಿದವರಿಗೆ, ಕ್ರುತಗ್ನರಿಗೆ, ಅತವಾ ಸೆರೆಮನೆಯಿಂದ ಪರಾರಿಯಾದವರಿಗೆ ಹ್ರುದಯವನ್ನು ಕತ್ತರಿಸಲಾಗುತ್ತದೆ. ಮಾದಕ ವ್ಯಸನಿಗಳು, ಕಳ್ಳ ಸಾಗಾಣೆದಾರರು ಮತ್ತು ಗೋರಿ ಕದಿಯುವ ದರೋಡೆಕೋರರನ್ನು ಕಾದ ತಾಮ್ರದ ಕಂಬಕ್ಕೆ ಬಿಗಿದು ಹಿಂಸಿಸಲಾಗುತ್ತದೆ.

ಸಮಾಜದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಕೊಳ್ಳುವುದು, ಬಾಡಿಗೆ ಪಾವತಿಸಲು ನಿರಾಕರಿಸುವುದು ಅತವ ವ್ಯಾಪಾರದಲ್ಲಿ ವಂಚನೆ ಮಾಡಿದವರನ್ನು ಕಲ್ಲಿನ ಬಡಿಗೆಯಿಂದ ಬಡಿಯಲಾಗುವುದು. ಆಸ್ತಿಯನ್ನು ಲಪಟಾಯಿಸಲು ಮತ್ತೊಬ್ಬರನ್ನು ಕೊಲೆ ಮಾಡುವುದು, ಮತ್ತೊಬ್ಬನ ಸಾವಿಗೆ ಸಂಚು ಮಾಡುವುದು, ಅತಿಯಾದ ಬಡ್ಡಿದರವನ್ನು ಹಾಕಿ ಅಮಾಯಕರನ್ನು ಸುಲಿಗೆ ಮಾಡುವವರನ್ನು ಚಾಕುಗಳಿಂದ ಆವ್ರುತವಾದ ಗುಡ್ಡದ ಮೇಲೆ ಎಸೆಯಲಾಗುತ್ತದೆ. ವಂಚನೆ ಮಾಡುವುದು, ಮತ್ತೊಬ್ಬರನ್ನು ಶಪಿಸುವುದು, ಅಪಹರಿಸುವ ಕೆಲಸ ಮಾಡಿದವರನ್ನು ಚೂರಿಗಳಿಂದ ತುಂಬಿದ ಮರದ ಮೇಲೆ ಎಸೆಯುವುದು, ಪುಸ್ತಕಗಳ ದುರುಪಯೋಗ, ಅಶ್ಲೀಲ ವಸ್ತುಗಳನ್ನು ಹೊಂದಿರುವುದು, ಲಿಕಿತ ನಿಯಮ ಮತ್ತು ನಿಬಂದನೆಗಳನ್ನು ಉಲ್ಲಂಗಿಸುವುದು ಅತವಾ ಆಹಾರ ಪದಾರ‍್ತಗಳನ್ನು ಪೋಲು ಮಾಡುವುವವರ ದೇಹವನ್ನು ಗರಗಸದಿಂದ ಅರ‍್ದಕ್ಕೆ ಕತ್ತರಿಸುವುದು ಇಲ್ಲವಾದಲ್ಲಿ ಚೂರಿಗಳೇ ತುಂಬಿರುವ ಮರಕ್ಕೆ ಎಸೆಯುವ ಶಿಕ್ಶೆ ಜಾರಿ ಮಾಡಲಾಗುತ್ತದೆ.

ಸುಳ್ಳು ವದಂತಿ ಹಬ್ಬಿಸುವವರನ್ನು, ಕುಟುಂಬದ ಸದಸ್ಯರ ನಡುವೆ ವೈಶಮ್ಯ ಬಿತ್ತುವವರ ನಾಲಿಗೆಯನ್ನು ಕತ್ತರಿಸಲಾಗುತ್ತದೆ. ಅತ್ಯಾಚಾರಿಗಳನ್ನು, ಮತ್ತೊಬ್ಬರ ಮರಣಕ್ಕೆ ಕಾರಣರಾದವರನ್ನು ಕುದಿಯುವ ಎಣ್ಣೆಯ ಬಾಣಲೆಯಲ್ಲಿ ಹಾಕುವ ಶಿಕ್ಶೆ ನೀಡಲಾಗುತ್ತದೆ. ಮಕ್ಕಳ ವಿದೇಯತೆಯ ಕೊರತೆಯಿಂದಾಗಿ ಪೋಶಕರು ಅತವ ಕುಟುಂಬ ಸದಸ್ಯರಿಗೆ ತೊಂದರೆ ಉಂಟುಮಾಡುವುದು, ವೈದ್ಯಕೀಯ ತಪಾಸಣೆಯ ಸಮಯದಲ್ಲಿ ಅಂಗಾಂಗಗಳನ್ನು ತೆಗೆದು ಮಾರುವುದು, ತಮ್ಮ ಲಾಬಕ್ಕಾಗಿ ಇತರರಿಗೆ ಹಾನಿ ಮಾಡುವವರ ದೇಹವನ್ನು ಚಿದ್ರಗೊಳಿಸಲಾಗುವುದು.
ಅಂತಿಮವಾಗಿ ಇವೆಲ್ಲವುಗಳಿಂದ ಪಾರಾಗಿ ಉಳಿದುಕೊಂಡರೆ, ಪುನರ‍್ಜನ್ಮದ ಚಕ್ರ ಮತ್ತು ಮರೆವಿನ ಪೆವಿಲಿಯನ್ ನಲ್ಲಿ ಮೆಂಗ್ ಪೋ ಮ್ಯಾಜಿಕ್ ಟಿ ಕುಡಿದು ಹಿಂದಿನ ಜನ್ಮದ ಪಾಪಕಾರ‍್ಯಗಳನ್ನು ಮರೆತು, ನಂತರ ಮಾನವ ಅತವಾ ಪ್ರಾಣಿಯಾಗಿ ಮರುಜನ್ಮ ಪಡೆಯಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: jollygreenp.co.uk, atlasobscura.com, thehoneycombers.com, slate.com, wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: