ಮಾಡಿ ಸವಿಯಿರಿ: ಮಶ್ರೂಮ್ ಕರಿ

– ಕಿಶೋರ್ ಕುಮಾರ್.

 

ಬೇಕಾಗುವ ಸಾಮಾನುಗಳು

  • ಎಣ್ಣೆ – 7 ಚಮಚ
  • ಈರುಳ್ಳಿ – 3
  • ಬ್ಯಾಡಗಿ ಮೆಣಸಿನಕಾಯಿ – 2
  • ಟೊಮ್ಯಾಟೊ – 2
  • ಕೊತ್ತಂಬರಿ ಪುಡಿ – 2 ಚಮಚ
  • ಮೆಣಸಿನಕಾಯಿ ಪುಡಿ – 1
  • ಚಕ್ಕೆ – 1 ಇಂಚು
  • ಲವಂಗ – 4
  • ತೆಂಗಿನಕಾಯಿ – 4 ಚೂರು
  • ಹುರಿಗಡಲೆ – ಸ್ವಲ್ಪ
  • ಬೆಳ್ಳುಳ್ಳಿ – 8
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಶುಂಟಿ – 1 ಇಂಚು
  • ಕತ್ತರಿಸಿದ ಅಣಬೆ (ಮಶ್ರೂಮ್) – 1 ಪೊಟ್ಟಣ
  • ಸಾಸಿವೆ – ಸ್ವಲ್ಪ
  • ಆಲೂಗೆಡ್ಡೆ ಮತ್ತು ಬಟಾಣಿ (ಬೇಕಿದ್ದರೆ)

ಮಾಡುವ ಬಗೆ

ಹಂತ 1: ಒಂದು ಬಾಣಲಿ/ಪಾನ್ ಗೆ 2 ಚಮಚ ಎಣ್ಣೆ ಹಾಕಿ, 1 ಕತ್ತರಿಸಿದ ಈರುಳ್ಳಿ ಮತ್ತು ಬ್ಯಾಡಗಿ ಮೆಣಸಿನಕಾಯಿ ಸೇರಿಸಿ ಹುರಿಯಿರಿ. ನಂತರ 1 ಟೊಮ್ಯಾಟೊ ಕತ್ತರಿಸಿ ಸೇರಿಸಿ ಹುರಿಯಿರಿ. ನಂತರ 2 ಚಮಚ ಕೊತ್ತಂಬರಿ ಪುಡಿ (ದನ್ಯ ಪುಡಿ), 1 ಚಮಚ ಮೆಣಸಿನಕಾಯಿ ಪುಡಿ ಮತ್ತು ಸ್ವಲ್ಪ ನೀರು ಸೇರಿಸಿ ಸ್ಟೊವ್ ಆರಿಸಿ, ತಣ್ಣಗಾಗಲು ಬಿಡಿ. ಈಗ ಜಾರ್ ಗೆ ಚಕ್ಕೆ, ಲವಂಗ, ಕಾಯಿ, ಹುರಿಗಡಲೆ, ಕೊತ್ತಂಬರಿ ಸೊಪ್ಪು ಬೆಳ್ಳುಳ್ಳಿ, ಶುಂಟಿ ಹಾಕಿ. ಬಾಣಲಿಯಲ್ಲಿ ಹುರಿದು, ತಣ್ಣಗಾದ ಮಸಾಲೆಯನ್ನು ಇದೇ ಜಾರ್ ಗೆ ಸೇರಿಸಿ ಮಿಕ್ಸರ್ ನಲ್ಲಿ ಪೇಸ್ಟ್ ನಂತೆ ರುಬ್ಬಿಕೊಳ್ಳಿ.

ಹಂತ 2: ಬಾಣಲಿಗೆ 2 ಚಮಚ ಎಣ್ಣೆ, ½ ಕತ್ತರಿಸಿದ ಈರುಳ್ಳಿ ಮತ್ತು ಕತ್ತರಿಸಿದ ಅಣಬೆಯನ್ನು ಸೇರಿಸಿ 5 ನಿಮಿಶ ಹುರಿಯಿರಿ. ಈಗ ಬಾಣಲಿಯಿಂದ ಅಣಬೆಯನ್ನು ತೆಗೆದಿಡಿ (ಬಿಟ್ಟುಕೊಂಡಿರುವ ನೀರನ್ನು ತೆಗೆಯಿರಿ). ಒಂದು ಕುಕ್ಕರ್ ಗೆ 3 ಚಮಚ ಎಣ್ಣೆ, ಸಾಸಿವೆ, ಕತ್ತರಿಸಿದ 1 ಈರುಳ್ಳಿ, ಕತ್ತರಿಸಿದ ಒಂದು ಸಣ್ಣ ಟೊಮ್ಯಾಟೊ, ರುಬ್ಬಿಕೊಂಡ ಮಸಾಲೆ, ತೆಗೆದಿಟ್ಟ ಅಣಬೆ, ಉಪ್ಪು, ಆಲೂಗೆಡ್ಡೆ ಮತ್ತು ಬಟಾಣಿ ಹಾಕಿ 1 ನಿಮಿಶ ಹುರಿಯಿರಿ. ನಂತರ ಬೇಕಾದಶ್ಟು ನೀರು ಸೇರಿಸಿ ಕುದಿಯಲಿ ಬಿಟ್ಟು, ನಂತರ ಕುಕ್ಕರ್ ಮುಚ್ಚಿ 3 ಕೂಗು ಕೂಗಿಸಿ.

ಈಗ ಅಣಬೆ ಕರಿ ಸವಿಯಲು ರೆಡಿ. (ಗೀ ರೈಸ್ ಜೊತೆ ಸವಿಯಲು, ಹೇಳಿ ಮಾಡಿಸಿದಂತಿರುತ್ತದೆ.)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *