ಪಾತಾಳ ಬುವನೇಶ್ವರ ಎಂಬ ಪಾತಾಳ ಲೋಕ

– .


ಪಾತಾಳ ಬುವನೇಶ್ವರ ಇರುವುದು ಉತ್ತರಾಕಂಡ್ ರಾಜ್ಯದ ಪಿತೋರಗಡ್ ಜಿಲ್ಲೆಯ ಗಂಗೋಲಿಹತ್ ನಿಂದ 14 ಕಿಲೋಮೀಟರ್ ದೂರದಲ್ಲಿನ ಬುವನೇಶ್ವರ ಎಂಬ ಹಳ್ಳಿಯಲ್ಲಿ. ಇದು ಸುಣ್ಣದ ಕಲ್ಲಿನ ಗುಹಾ ದೇವಾಲಯ. ಈ ಗುಹಾ ದೇವಾಲಯದಲ್ಲಿ ಶಿವ ಮತ್ತು ಮೂವತ್ತಮೂರು ಕೋಟಿ ದೇವರುಗಳನ್ನು ಪ್ರತಿಶ್ಟಾಪಿಸಲಾಗಿದೆ ಎಂದು ದಂತಕತೆಗಳು ಹೇಳುತ್ತವೆ.

ಈ ಗುಹೆಯು 160 ಮೀಟರ್ ಉದ್ದ ಮತ್ತು ಒಳಹೋಗುವ ಬಾಗಿಲಿನಿಂದ 90 ಅಡಿ ಆಳದಲ್ಲಿದೆ. ಇದರ ಒಳ ಹೋಗುವ ಬಾಗಿಲು ಸುರಂಗದಂತಿದೆ. ಇಲ್ಲಿಂದ ಹಲವಾರು ಗುಹೆಗಳಿಗೆ ಸಂಪರ‍್ಕವಿದೆ. ನಿರಂತರ ನೀರಿನ ಹರಿವಿನಿಂದ ರೂಪುಗೊಂಡಿರುವ ಈ ಗುಹೆಯು, ಗುಹೆಯೊಳಗಿನ ಗುಹೆಯ ಸರಣಿಯಾಗಿದೆ. ಈ ಅದ್ಬುತ ಗುಹೆ ಬೂಮಿಯಶ್ಟೆ ಹಳೆಯದು ಎಂಬ ನಂಬಿಕೆ ಸ್ತಳೀಯರಲ್ಲಿದೆ. ಸ್ಕಂದ ಪುರಾಣದ ಮಾನಸ ಕಂಡದ 103ನೇ ಅದ್ಯಾಯದಲ್ಲಿ ವಿವರವಾಗಿ ಈ ಬಗ್ಗೆ ಉಲ್ಲೇಕಿಸಲಾಗಿದೆ. ತ್ರೇತಾಯುಗದಲ್ಲಿ, ಸೂರ‍್ಯವಂಶದ ರಾಜ ರುತುಪರ‍್ಣ ಈ ಗುಹೆಯನ್ನು ಒಳಹೊಕ್ಕ ಮೊದಲಿಗ ಎಂಬ ಮಾಹಿತಿ ಸಹ ಆ ಪುಸ್ತಕದಲ್ಲಿ ಲಬ್ಯವಿದೆ. ಈ ಗುಹೆಯನ್ನು ಒಳಹೊಕ್ಕ ಸಮಯದಲ್ಲಿ ಆತ ಅನೇಕ ರಾಕ್ಶಸರನ್ನು ಎದುರಿಸಬೇಕಾಗಿ ಬಂತಂತೆ. ರಾಜಾ ರುತುಪರ‍್ಣನಿಗೆ ಶೇಶನಾಗ ದಾರಿತೋರುಗನಾಗಿದ್ದನಂತೆ. ಇವೆಲ್ಲಾ ಯಾವುದೇ ದಾಕಲೆಗಳಿಲ್ಲದ ದಂತಕತೆಗಳು. ಬಾಯಿಂದ ಬಾಯಿಗೆ ಹರಡಿದ ಜನಪದ ಕತೆಗಳು.

ಪಾತಾಳ ಬುವನೇಶ್ವರದಲ್ಲಿ ನಾಲ್ಕು ಮಹಾದ್ವಾರಗಳಿದ್ದು, ಇವುಗಳನ್ನು ರಂದ್ವಾರ, ಪಾಪದ್ವಾರ, ದರ‍್ಮದ್ವಾರ ಮತ್ತು ಮೋಕ್ಶದ್ವಾರ ಎಂದು ಹೆಸರಿಸಲಾಗಿದೆ. ಇವುಗಳನ್ನು ಮಹಾಯುಗಗಳ ಹೆಬ್ಬಾಗಿಲು ಎನ್ನುತ್ತಾರೆ. ರಾಮಾಯಣದ ರಾವಣನ ಸಾವಿನ ನಂತರ ಪಾಪದ್ವಾರವನ್ನು ಮುಚ್ಚಲಾಯಿತು ಎನ್ನುತ್ತಾರೆ ಸ್ತಳೀಯರು. ಇದರಂತೆ ಮಹಾಬಾರತದ ಯುದ್ದದ ನಂತರ, ಯುದ್ದದ ಹಾದಿಯಾದ ರಂದ್ವಾರವನ್ನು ಮುಚ್ಚಲಾಯಿತಂತೆ. ಹಾಗಾಗಿ ಪ್ರಸ್ತುತ ಎರಡು ದ್ವಾರಗಳು ಮಾತ್ರ ತೆರೆಯಲ್ಪಟ್ಟಿವೆ. ದ್ವಾಪರಯುಗದಲ್ಲಿ ಪಾಂಡವರು ಈ ಗುಹೆಗಳನ್ನು ಮತ್ತೆ ಹುಡುಕಿದರು ಎಂಬ ಪ್ರತೀತಿಯಿದೆ. ಇಲ್ಲಿನ ಪಾತಾಳ ಬುವನೇಶ್ವರ ಗುಹೆಯಲ್ಲಿ ಕಾಲಬೈರವನ ನಾಲಿಗೆ, ಇಂದ್ರನ ಐರಾವತ, ಶಿವನ ಕೂದಲು ಮತ್ತು ಇದೇ ತರಹದ ಹಲವಾರು ಅದ್ಬುತಗಳನ್ನು ಕಾಣಬಹುದು. ಕ್ರಿ.ಶ. 1191ರಲ್ಲಿ ಆದಿ ಶಂಕರಾಚಾರ‍್ಯರು ಇಲ್ಲಿಗೆ ಬೇಟಿ ನೀಡಿ, ದೇವರುಗಳನ್ನು ಪ್ರತಿಶ್ಟಾಪಿಸಿದ ನಂತರ ಇದು ಪೂಜಾ ಸ್ತಳವಾಗಿ ಪ್ರಸಿದ್ದಿಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ವಿದ್ಯುತ್ತಿನಿಂದ ಈ ಗುಹೆಯನ್ನು ಬೆಳಗಿಸಲಾಗಿದೆ. ಆದರೂ ಸಹ ಗುಹೆಯೊಳಗಿನ ಪ್ರಯಾಣ ದುಸ್ತರವೇ. ದುರ‍್ಬಲ ಬೆಳಕಿನಲ್ಲಿ, ರಕ್ಶಣಾತ್ಮಕ ಕಬ್ಬಿಣದ ಸರಪಳಿಯನ್ನು ಹಿಡಿದು ಸಾಗಬೇಕಾದ ಪರಿಸ್ತಿತಿಯಿದೆ. ಹಾದಿಯ ಮದ್ಯದಲ್ಲಿನ ಕಲ್ಲಿನ ಕೆತ್ತನೆಯಲ್ಲಿ ಶೇಶನಾಗ ಬೂಮಿಯನ್ನು ಎತ್ತಿ ಹಿಡಿದುಕೊಂಡಿರುವುದನ್ನು ಕಾಣಬಹುದು. ಮಂದ ಬೆಳಕಿನ ಹೋಮ ಹವನಗಳನ್ನು ಕಾಣಬಹುದು ಹಾಗೂ ನಿಶ್ಯಬ್ದ ವಾತಾವರಣದಲ್ಲಿ ಪವಿತ್ರ ಮಂತ್ರಗಳ ಪಟಣವನ್ನು ಆಲಿಸಬಹುದು. ಗುಹೆಯ ಮತ್ತೊಂದು ವಿಶೇಶವೇನೆಂದರೆ, ಈ ಗುಹೆಯಿಂದ ಕೈಲಾಸ ಪರ‍್ವತಕ್ಕೆ ಬೂಗತ ಮಾರ‍್ಗವಿದೆ ಎಂಬುದು. ಮಹಾಬಾರತದ ಪಾಂಡವರು ಇಲ್ಲಿನ ದೇವಾಲಯದಲ್ಲಿನ ಶಿವನ ಮುಂದೆ ದ್ಯಾನ ಮಾಡಿ ತಮ್ಮ ಅಂತಿಮ ಪಯಣವನ್ನು ಪ್ರಾರಂಬಿಸಿದರು ಎಂದು ನಂಬಲಾಗಿದೆ.

ಸಮುದ್ರ ಮಟ್ಟದಿಂದ 1,350 ಮೀಟರ್ ಎತ್ತರದಲ್ಲಿರುವ ಈ ಗುಪ್ತ ಯಾತ್ರಾಸ್ತಳವು ಶಿವನಿಗೆ ಸಮರ‍್ಪಿತವಾಗಿದೆ. ಮೇಲೆ ತಿಳಿಸಿದಂತೆ ಹಿಂದೂ ದರ‍್ಮದ ಪ್ರಕಾರ ಇರುವ ಮೂವತ್ತಮೂರು ಕೋಟಿ ದೇವರುಗಳೂ ಇಲ್ಲಿ ನೆಲೆಸಿದ್ದಾರಂತೆ. ಇಲ್ಲಿನ ಪಾತಾಳ ಬುವನೇಶ್ವರನನ್ನು ಪೂಜಿಸಿದರೆ, ಅದು ಉತ್ತರಾಕಂಡ್ ನಲ್ಲಿನ ಚಾರ್ ದಾಮ್ ನಲ್ಲಿ ಪೂಜೆಗೆ ಸಮ ಎನ್ನಲಾಗಿದೆ. ಆದಿ ಶಂಕರಾಚಾರ‍್ಯರಿಂದ ಸ್ತಾಪಿತವಾದ ಪಾತಾಳ ಬುವನೇಶ್ವರ ಸ್ವಾಮಿಯ ಪೂಜಾ ಕೈಂಕರ‍್ಯವನ್ನು, ದಾರ‍್ಮಿಕ ವಿದಿವಿದಾನಗಳನ್ನು ಬಂಡಾರಿ ಕುಟುಂಬದವರು 20 ತಲೆಮಾರಿನಿಂದ ನಡೆಯಿಸಿಕೊಂಡು ಬರುತ್ತಿದ್ದಾರೆ. ಇವರ ಬಳಿ ಈ ಸ್ತಳದ ಬಗ್ಗೆ ಎಲ್ಲಾ ಮಾಹಿತಿಗಳು, ದಂತ ಕತೆಗಳು, ಪುರಾಣಗಳು ಲಬ್ಯವಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.com, euttaranchal.com, thedivineindia.com, shrineyatra.com, anamikamishra.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: