ಯುವಜನತೆಗೆ ಸ್ಪೂರ‍್ತಿ : ಪುಸ್ತಕ ವಿಮರ‍್ಶೆ

ಕಿರಣ್ ಕುಮಾರ್ ಡಿ ದೊಗ್ಗನಹಳ್ಳಿ

‘ಯುವಜನತೆಗೆ ಸ್ಪೂರ‍್ತಿ’ ಎಂಬ ಪುಸ್ತಕವನ್ನು ಬಾಲಚಂದ್ರ ಎಂ ರವರು ಬರೆದಿದ್ದಾರೆ. ಈ ಪುಸ್ತಕವನ್ನು ಈಗಿನ ಯುವಜನತೆಯಲ್ಲಿ ಕಾಣುತ್ತಿರುವ ಆತ್ಮವಿಶ್ವಾಸದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ. ಯುವಮಂದಿಯಲ್ಲಿ ಆತ್ಮವಿಶ್ವಾಸವನ್ನು ಬಡಿದೆಚ್ಚರಿಸುವುದಕ್ಕೆ ಮತ್ತು ಕುಂದುಗಳನ್ನು ಶಕ್ತಿಯನ್ನಾಗಿ ಪರಿವರ‍್ತಿಸುವುದಕ್ಕೆ, 63 ಲೇಕನಗಳ ಮೂಲಕ ಯುವಮಂದಿಗೆ ಸ್ಪೂರ‍್ತಿ ತುಂಬುವ ಕೆಲಸ ಮಾಡಿದ್ದಾರೆ. ಪ್ರತಿ ವರ‍್ಶ ಸಾವಿರಾರು ಯುವ ಮಂದಿ ಹಲವಾರು ಕಾರಣಗಳಿಗೆ ತಮ್ಮ ಅತ್ಯಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಸಣ್ಣ ಸಣ್ಣ ವಿಶಯಗಳಿಗೆ ತಮ್ಮ ಜೀವವನ್ನು ಕಳೆದುಕೊಳ್ಳುವುದಕ್ಕೆ ತಯಾರಾಗುವ ಯುವ ಮಂದಿ, ಸಾಯುವ ಮುನ್ನ ಈ ಪುಸ್ತಕ ಓದಿದ್ದರೆ ತಮ್ಮ ನಿಲುವನ್ನು ಬದಲಾಯಿಸುತ್ತಾರೆ ಎಂಬ ಬಲವಾದ ನಂಬಿಕೆ ನನಗಿದೆ. ಏಕೆಂದರೆ ಲೇಕಕರು ಸೋತು ಗೆದ್ದವರ ಮತ್ತು ಕಶ್ಟಗಳನ್ನು ಮೆಟ್ಟಿ ಸಾದನೆ ಮಾಡಿದವರ ಜೀವನವನ್ನು ನಮಗೆ ತಮ್ಮ ಲೇಕನಗಳ ಮೂಲಕ ತಿಳಿಸಿದ್ದಾರೆ.

ಪ್ರಸ್ತುತ ಸಮಾಜದಲ್ಲಿ ಬಹಳಶ್ಟು ಯುವಮಂದಿ ಸಾಕಶ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ಉದ್ಯೋಗದ ಸಮಸ್ಯೆ, ಕೆಲವರಿಗೆ ಕಿನ್ನತೆಯ ಸಮಸ್ಯೆ, ಕೆಲವರಿಗೆ ಏನು ಮಾಡಬೇಕು ಎನ್ನುವ ಗುರಿಯೇ ಇಲ್ಲ, ಕೆಲವರಿಗೆ ಬವಿಶ್ಯದ ಚಿಂತನೆ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಯುವಮಂದಿಗೆ ಸ್ಪೂರ‍್ತಿ ತುಂಬುವ ಅನೇಕ ಪುಸ್ತಕಗಳಿವೆ, ಅಂತಹ ಪುಸ್ತಕಗಳಲ್ಲಿ ಈ ಪುಸ್ತಕ ಕೂಡ ಒಂದು. ಯುವ ಮಂದಿ, ಈ ಪುಸ್ತಕ ಓದುವ ಮೂಲಕ ತಮ್ಮ ನ್ಯೂನತೆಗಳಿಗೆ ಒಂದಲ್ಲಾ ಒಂದು ಲೇಕನಗಳಲ್ಲಿ ಪರಿಹಾರ ಕಂಡುಕೊಳ್ಳ ಬಹುದು. ಲೇಕಕರು ತಮ್ಮ ಪುಸ್ತಕದಲ್ಲಿ ಅನೇಕ ಮಹನೀಯರ ಯಶೋಗಾತೆಯ ಬಗ್ಗೆ ಬಹಳ ಸ್ವಾರಸ್ಯವಾಗಿ ಮತ್ತು ವಿವರವಾಗಿ ತಿಳಿಸಿದ್ದಾರೆ. ಲೇಕಕರು ಅನೇಕ ಸಣ್ಣ ಕತೆಗಳ ಮೂಲಕ ಯುವಮಂದಿ ಹೇಗೆ ತಮ್ಮ ಆತ್ಮವಿಶ್ವಾಸವನ್ನು ವ್ರುದ್ದಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಯುವಮಂದಿ ಸಾಮಾನ್ಯವಾಗಿ ತಮ್ಮ ಸುತ್ತಲೂ ಇರುವ ಸಮಸ್ಯೆಗಳ ಕಡೆ ಹೆಚ್ಚು ಗಮನ ಹರಿಸುತ್ತಿರುತ್ತಾರೆ. ಆದರೆ ಅದರ ಬದಲು ತಮ್ಮ ಕರ‍್ತವ್ಯದ ಕಡೆ ಗಮನ ಹರಿಸಬೇಕಾಗಿದೆ ಎಂಬುದು ಲೇಕಕರ ಮೊದಲ ಲೇಕನದ ಆಶಯವಾಗಿದೆ. ಎರಡನೆ ಲೇಕನದಲ್ಲಿ ಅಪ್ಪ ಹೇಗೆಲ್ಲಾ ತಮ್ಮ ಮಕ್ಕಳ ಬವಿಶ್ಯಕ್ಕೆ ದುಡಿಯುತ್ತಾನೆ ಎಂಬುದನ್ನು ತಿಳಿಸಿದ್ದಾರೆ. ತಮ್ಮ ಪೋಶಕರ ಬಳಿ, ಅದು ಬೇಕು ಇದು ಬೇಕು, ಎನ್ನುವವರು ಈ ಕತೆ ಓದಬೇಕು. ಮೂರನೇ ಲೇಕನದಲ್ಲಿ ಬಾರತದ ಯುವ ಜನಸಂಕ್ಯೆ ಮತ್ತು ಆ ಯುವಶಕ್ತಿಯ ಅಸಮರ‍್ಪಕ ಬಳಕೆಯ ಬಗ್ಗೆ ತಿಳಿಸಿದ್ದಾರೆ. ಬಾರತವನ್ನು ಬದಲಾಯಿಸೋಣ ಎಂಬುದು ಈ ಲೇಕನದ ಆಶಯ. ನಾಲ್ಕನೇ ಲೇಕನ ‘ಯಾರೋ ಏನೋ ಅಂದರು ಅಂತ’ ಎಂದು. ಶೀರ‍್ಶಿಕೆಯೇ ಹೇಳುವಂತೆ ಯುವಮಂದಿ ಅನಗತ್ಯ ಮಾತುಗಳಿಗೆ ತಲೆಕೆಡಿಸಿಕೊಳ್ಳಬಾರದು ಅನ್ನೋದು ಇದರ ತಿರುಳು. ಹನ್ನೆರಡನೆ ಲೇಕನದಲ್ಲಿ, ಕಣ್ಣಿಗೆ ಕೆಟ್ಟವರಂತೆ ಕಂಡರೂ ಸಮಾಜಕ್ಕೆ ಒಳಿತನ್ನು ಮಾಡುವವರು ಮತ್ತು ಕಣ್ಣಿಗೆ ಒಳ್ಳೆಯವರಂತೆ ಕಂಡರೂ ಕೆಟ್ಟ ಕೆಲಸ ಮಾಡುವವರಿದ್ದಾರೆ ಎಂದು ತಿಳಿಸಿದ್ದಾರೆ.

ಇವರ ದೇವೋಬವದ ಲೇಕನಗಳು ನಮಗೆ ನಮ್ಮ ತಾಯಿ, ತಂದೆ, ಗುರುಗಳು ಮತ್ತು ರಾಶ್ಟ್ರದ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಈ ಪುಸ್ತಕದಲ್ಲಿ ನನಗೆ ಬಹಳ ಇಶ್ಟವಾದ ಲೇಕನಗಳೊಂದಿಶ್ಟಿವೆ. ಅವುಗಳಲ್ಲಿ ‘ಹುಟ್ಟು ದರಿದ್ರವಾಗಿದ್ದರೇನು? ಸಾವು ಚರಿತ್ರೆಯಾಗಿರಬೇಕು’ ಅನ್ನೋದು. ಈ ಲೇಕನದಲ್ಲಿ ಅಂಬೇಡ್ಕರ‍್, ಅಬ್ದುಲ್ ಕಲಾಂ ಮತ್ತು ಲಾಲ್ ಬಹದ್ದೂರ‍್ ಶಾಸ್ತ್ರೀಯವರು ಹೇಗೆ ಬಡತನದಲ್ಲಿ ಹುಟ್ಟಿ ಅದನ್ನು ಮೆಟ್ಟಿ ನಿಂತರು ಎಂಬುದನ್ನು ಓದಬಹುದು. ‘ನನ್ನ ಪ್ರೀತಿಯ ಯುವಮಿತ್ರರೇ! ನಿಮ್ಮಲ್ಲಿನ ಪ್ರತಿಬೆಯನ್ನು ಈ ಜಗತ್ತಿಗೆ ತೋರಿಸುವುದು ಯಾವಾಗ?’ ಲೇಕನದಲ್ಲಿ, ಒಬ್ಬ ವ್ಯಕ್ತಿಯನ್ನು ಅವಮಾನಿಸಿದ ಕಂಪನಿಯೇ ಆತ ರಚಿಸಿದ ಆಪ್(App) ಅನ್ನು ಕರೀದಿ ಮಾಡಲು ಲಕ್ಶ ಕೋಟಿ ನೀಡಿರುವುದರ ಬಗ್ಗೆ ತಿಳಿಸಿದ್ದಾರೆ. ‘ನೀನು ನಿನ್ನಂತಾಗು’ ಲೇಕನದಲ್ಲಿ, ಅಬ್ದುಲ್ ಕಲಾಂ ಮತ್ತು ಮಗುವಿನ ನಡುವಿನ ಸಂಬಾಶಣೆಯನ್ನು ಮೂಡಿಸಿದ್ದಾರೆ. ‘ಆತ್ಮ ವಿಶ್ವಾಸವಿದ್ದವರಿಗೆ ಈ ಜಗತ್ತೇ ತಲೆಬಾಗುತ್ತದೆ!’ ಲೇಕನದಲ್ಲಿ, ಜಾದವ್ ಮೊಲಾಯ್ ರವರ ಮೂವತ್ತು ವರ‍್ಶಗಳ ಪರಿಶ್ರಮದಿಂದ, ಒಂದು ಪ್ರವಾಹಕ್ಕೆ ನಾಶವಾಗಿದ್ದ ಅರಣ್ಯವನ್ನು ಪುನಹ ಏಕಾಂಗಿಯಾಗಿ ಬೆಳೆಸಿದ ನಿಜ ಕತೆಯನ್ನು ಓದಬಹುದು. ‘ತಪ್ಪುಮಾಡುವುದಾದರೆ ಬೆಲೆಯುಳ್ಳ ತಪ್ಪನ್ನೇ ಮಾಡಿ!’ ಲೇಕನದಲ್ಲಿ, ಗ್ರಹಾಂಬೆಲ್ ಹೇಗೆ ತನ್ನ ತಪ್ಪು ಗ್ರಹಿಕೆಯಿಂದ ಟೆಲಿಪೋನ್ ಅನ್ನು ಕಂಡುಹಿಡಿದದ್ದು ಹೇಗೆ ಅದು ಬೆಲೆಯುಳ್ಳ ತಪ್ಪಾಗಿದೆ ಎಂಬುದನ್ನು ತಿಳಿಯಬಹುದು. ಇಲ್ಲಿ ನಾವು ತಿಳಿಯಬಹುದಾದ ಅಂಶವೆಂದರೆ ಸತತ ಪ್ರಯತ್ನ ಮುಕ್ಯ ಎಂಬುದು.

ಒಟ್ಟಾರೆ ನಾವು ಈ ಪುಸ್ತಕದಿಂದ ಕಲಿಯಬಹುದಾದದ್ದು ತುಂಬಾ ಇದೆ. ನಮಗೆ ಎದುರಾಗುವ ಕಶ್ಟಗಳನ್ನು ನಾವು ಹೇಗೆಲ್ಲಾ ಬಗೆಹರಿಸಿಕೊಳ್ಳಬಹುದು ಎನ್ನುವ ಮತ್ತು ಒಳ್ಳೆ ಬದುಕನ್ನು ನಡೆಸಲು ನೆರವಾಗುವ ಹಲವಾರು ಅಂಶಗಳನ್ನು ಓದಿ ತಿಳಿಯಬಹುದು. ಈ ಪುಸ್ತಕ ಓದಿ ಮುಗಿಸಿದವರಿಗೆ, ಸಾಯುವ ಮುನ್ನ ಏನನ್ನಾದರೂ ಸಾದಿಸಿ ಸಾಯಬೇಕು ಎಂಬುವ ಚಲ ಬಂದೇ ಬರುತ್ತದೆ ಅನ್ನೋದು ನನ್ನ ಅನಿಸಿಕೆ..ಉಪಯೋಗವಾಗುವ ಅಂಶಗಳ ಸರಮಾಲೆಯನ್ನೆ ಈ ಹೊತ್ತಿಗೆಯಲ್ಲಿ ಕಾಣಬಹುದು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: