ಪ್ರಕಾಶ್ ಪಡುಕೋಣೆ : ಬ್ಯಾಡ್ಮಿಂಟನ್‌ನ ದಂತಕತೆ

– ರಾಮಚಂದ್ರ ಮಹಾರುದ್ರಪ್ಪ.

ಬಾರತದ ಕ್ರೀಡಾ ಇತಿಹಾಸದಲ್ಲಿ ನಾನಾ ಆಟಗಳಲ್ಲಿ ಮೊದಲಿಗರಾಗಿ ಸಾದಿಸಿ, ಮುಂದಿನ ಪೀಳಿಗೆಯ ಆಟಗಾರರ ಬೆಳವಣಿಗೆಗೆ ಒಂದು ಗಟ್ಟಿ ಅಡಿಪಾಯ ಹಾಕಿಕೊಟ್ಟ ಆಟಗಾರರಿಗೆ ಒಂದು ವಿಶೇಶ ಎಡೆ ಇದೆ. ದೇಶ ಸ್ವಾತಂತ್ರ ಗಳಿಸಿ ತನ್ನ ಕಾಲ ಮೇಲೆ ನಿಂತುಕೊಳ್ಳುತ್ತಿದ್ದ ಆರಂಬದ ದಶಕಗಳಲ್ಲಿ ಕ್ರಿಕೆಟ್ ಹಾಗೂ ಹಾಕಿ ಆಟಗಳು ಸಮನಾಗಿ ಜನಪ್ರಿಯಗೊಂಡು ಬಾರತೀಯರಿಗೆ ನಲಿವು ಉಂಟುಮಾಡಿದ್ದವು. ಹಾಗಾಗಿ ಸಹಜವಾಗಿಯೇ ಹಾಕಿ ಮತ್ತು ಕ್ರಿಕೆಟ್ ಆಟಗಾರರನ್ನು ಮಂದಿ ಮೆಚ್ಚಿ ಅವರ ಒಲವಿಗರಾಗಿದ್ದರು. ಆದರೆ 1970 ಹಾಗೂ 80 ರ ದಶಕಗಳಲ್ಲಿ ಬಾರತದಲ್ಲಿ ಹೆಚ್ಚು ಮನ್ನಣೆ ಪಡೆಯದ ಶಟಲ್ ಬ್ಯಾಡ್‌ಮಿಂಟನ್ ನಲ್ಲಿ ತಮ್ಮ ಸೊಗಸಾದ ಶಟಲ್ ಚಳಕದಿಂದ ಒಂದರ ಹಿಂದೊಂದು ವಿಶ್ವದಾಕಲೆ ಮಾಡಿ, ಜನರನ್ನು ಬ್ಯಾಡ್‌ಮಿಂಟನ್ ನತ್ತ ಸೆಳೆದವರೇ ದಿಗ್ಗಜ ಕನ್ನಡಿಗ ಪ್ರಕಾಶ್ ಪಡುಕೋಣೆ. ಅಂದು ಪ್ರಕಾಶ್ ಅವರು ಯಾವೊಬ್ಬ ಬಾರತೀಯನೂ ಸಾಗದ ಹಾದಿಯಲ್ಲಿ ಸಾಗಿ, ಅಡೆತಡೆಗಳನ್ನು ಹಿಮ್ಮೆಟ್ಟಿ ಪಡೆದ ಸಾಲು-ಸಾಲು ಗೆಲುವುಗಳೇ ನಮ್ಮ ದೇಶದಲ್ಲಿ ಬ್ಯಾಡ್ಮಿಂಟನ್ ಬೆಳವಣಿಗೆಗೆ ನೀರೆರದು ಪೋಶಿಸಿದ್ದು ಎಂದು ನಿಸ್ಸಂದೇಹವಾಗಿ ಹೇಳಬಹುದು. ಇಂದು ಎಲ್ಲಾ ಬಗೆಯ ಅಂತರಾಶ್ಟ್ರೀಯ ಪೋಟಿಗಳಲ್ಲಿ ಶಟಲ್ ಬ್ಯಾಡ್‌ಮಿಂಟನ್ ನಲ್ಲಿ ಬಾರತ ತಪ್ಪದೇ ಪದಕ ಗೆಲ್ಲುತ್ತಿರುವುದು ಈ ಆಟದಲ್ಲಿ ನಾವು ದೊಡ್ಡ ಮಟ್ಟಕ್ಕೆ ಬೆಳೆದು ಸಾದಿಸಿರುವ ನೈಪುಣ್ಯತೆಗೆ ಹಿಡಿದ ಕನ್ನಡಿ.

ಹುಟ್ಟು – ಎಳವೆಯ ಬದುಕು

ರಮೇಶ್ ಪಡುಕೋಣೆ ಮತ್ತು ಅಹಲ್ಯ ಪಡುಕೋಣೆರ ಮಗನಾಗಿ ಪ್ರಕಾಶ್ 1955 ರ ಜೂನ್ 10 ರಂದು ಬೆಂಗಳೂರಿನಲ್ಲಿ ಹುಟ್ಟಿದರು. ನಗರದ ಮಲ್ಲೇಶ್ವರ ಬಡಾವಣೆಯಲ್ಲಿ ಬೆಳೆದ ಪುಟ್ಟ ಪ್ರಕಾಶ್ ರಿಗೆ ಅವರ ಅಣ್ಣ-ತಮ್ಮಂದಿರೊಟ್ಟಿಗೆ ತಂದೆ ಹಾಗೂ ಅಜ್ಜ ಅಣ್ಣಾಜಿ ಅವರಿಂದಲೂ ಎಳವೆಯಿಂದಲೇ ಆಟೋಟಗಳ ವಿಶಯದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರಕಿತು. ಗೆಳೆಯರ ಗುಂಪು ಕಟ್ಟಿಕೊಂಡು ಕ್ರಿಕೆಟ್, ಬ್ಯಾಡ್ಮಿಂಟನ್ ಹಾಗೂ ಇನ್ನಿತರ ಆಟಗಳನ್ನು ಆಡುತ್ತಾ ಬೆಳೆದ ಪ್ರಕಾಶ್, ಮೊದಲ ಹಂತದ ಕಲಿಕೆಯನ್ನು ಸರಸ್ವತಿ ಸೇವಾ ಸಮಾಜ ಶಾಲೆಯಲ್ಲಿ ಕಲಿತು ಆ ಬಳಿಕ ಪ್ರೌಡ ಶಿಕ್ಶಣವನ್ನು ಶೇಶಾದ್ರಿಪುರಮ್ ಶಾಲೆಯಲ್ಲಿ ಪಡೆದರು. ಅವರ ಅಜ್ಜ ಅಣ್ಣಾಜಿ ರಾಯರು ಕೆನಾರಾ ಯೂನಿಯನ್ ಕ್ಲಬ್ ನಲ್ಲಿ ಟೆನ್ನಿಸ್ ಆಟಗಾರರಾಗಿದ್ದರಿಂದ ಪ್ರಕಾಶ್ ಕೂಡ ಅವರೊಂದಿಗೆ ಕ್ಲಬ್ ಗೆ ತೆರಳುವುದು ಅವರ ಬಾಲ್ಯದ ರೂಡಿಯಾಗಿತ್ತು. ಅಣ್ಣ ಪ್ರದೀಪ್ ರಿಗಿಂತ ಆಟೋಟಗಳಲ್ಲಿ ವಿಶೇಶ ಚಳಕ ಹೊಂದಿದ್ದ ಪ್ರಕಾಶ್ ಎಂಟರ ಪ್ರಾಯದಲ್ಲೇ ಶಟಲ್ ಬ್ಯಾಡ್ಮಿಂಟನ್ ಬಗ್ಗೆ ವಿಶೇಶ ಒಲವು ಬೆಳೆಸಿಕೊಂಡರು. ಅವರ ತಂದೆ ರಮೇಶ್ ಮೈಸೂರು ಸ್ಟೇಟ್ ಬ್ಯಾಡ್ಮಿಂಟನ್ ಅಸೋಸಿಯೇಶನ್ (MSBA) ವಿನ ಸೆಕ್ರೇಟರಿ ಆಗಿದ್ದರಿಂದ ಎಳೆಯ ಪ್ರಕಾಶ್ ರಿಗೆ ಶಟಲ್ ಬ್ಯಾಡ್ಮಿಂಟನ್ ಆಗಲೇ ಬದುಕಿನ ಅವಿಬಾಜ್ಯವಾಗಿ ಹೋಗಿತ್ತು. ಮನೆಯಲ್ಲಿಯೂ ಕೂಡ ಆಟೋಟಗಳ ಕುರಿತು ಚರ‍್ಚೆ, ವಿಮರ‍್ಶೆ ಸದಾ ನಡೆಯುತ್ತಿದ್ದವು. ಹೀಗೆ ಬ್ಯಾಡ್ಮಿಂಟನ್ ಗೆ ಆಪ್ಯಾಯಮಾನ ವಾತಾವರಣದಂತಿದ್ದ ಮನೆಯಲ್ಲಿ ಬೆಳೆದ ಪ್ರಕಾಶ್ ಅದಿಕ್ರುತ ತರಬೇತಿ ಇಲ್ಲದೆಯೇ ಕ್ರಮೇಣ ಬ್ಯಾಡ್ಮಿಂಟನ್ ನ ರಾಕೆಟ್ ಚಳಕಗಳನ್ನು ಹಂತಹಂತವಾಗಿ ಕರಗತ ಮಾಡಿಕೊಳ್ಳುತ್ತಾ ಹೋದರು.

ವ್ರುತ್ತಿಪರ ಆಟಗಾರನಾಗಿ ಮೊದಲ ಹೆಜ್ಜೆಗಳು

ಪ್ರಕಾಶ್ ತಮ್ಮ ಹನ್ನೆರಡನೇ ವಯಸ್ಸಿನಲ್ಲೇ 1967 ರಲ್ಲಿ ITI ಕಿರಿಯರ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಒಳ್ಳೆ ಪ್ರದರ‍್ಶನದಿಂದ ಮದ್ರಾಸ್ ನ್ಯಾಶನಲ್ ಚಾಂಪಿಯನ್ಶಿಪ್ ಗೆ ಆಯ್ಕೆಯಾದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಆಗಲೇ ಅವರು ತಮ್ಮ ಅಪರೂಪದ ಪ್ರತಿಬೆಯಿಂದ ಬ್ಯಾಡ್ಮಿಂಟನ್ ಅಂಗಳದಲ್ಲಿ ಸಾಕಶ್ಟು ಬರವಸೆ ಮೂಡಿಸಿದ್ದರು. ನಂತರ 1970 ರಲ್ಲಿ FACT ಟೂರ‍್ನಿಯಲ್ಲಿ ಆ ಹೊತ್ತಿನಲ್ಲಿ ದೇಶದ ಶ್ರೇಶ್ಟ ಆಟಗಾರರಲ್ಲಿ ಒಬ್ಬರಾಗಿದ್ದ ಸುರೇಶ್ ಗೋಯಲ್ ರ ಎದುರು ಒಂದು ಸೆಟ್ ಅನ್ನು ಗೆದ್ದು ಪ್ರಕಾಶ್ ಬಾರತದೆಲ್ಲೆಡೆ ಸಂಚಲನ ಮೂಡಿಸಿದರು. ಇನ್ನು ಶಾಲೆಯಲ್ಲಿ ಓದುತ್ತಿದ್ದ ಹದಿನೈದರ ಪೋರನೊಬ್ಬ ಒಬ್ಬ ರಾಶ್ಟ್ರೀಯ ಆಟಗಾರನೆದುರು ಸರಿಯಾದ ಪೈಪೋಟಿ ನೀಡಿದ್ದು ಬ್ಯಾಡ್ಮಿಂಟನ್ ವಲಯವನ್ನು ನಿಬ್ಬೆರಗಾಗಿಸಿತು. ಹಾಗೂ ಡಬಲ್ಸ್ ನಲ್ಲಿ ಅಣ್ಣ ಪ್ರದೀಪ್ ರೊಂದಿಗೆ ಕೂಡಿ ಪ್ರಕಾಶ್ ಕೆಲ ಕಾಲ ಪ್ರಾಬಲ್ಯ ಮೆರೆದರು. ಇದರ ಬೆನ್ನಲ್ಲೇ ಡಿಸೆಂಬರ್ 1970 ರಲ್ಲಿ ಬ್ಯಾಡ್ಮಿಂಟನ್ ನಲ್ಲಿ ಬಾರತದ ಹಿರಿಯರ ಎಲ್ಲಾ ಪಂದ್ಯಾವಳಿಗಳನ್ನು ಗೆದ್ದು ಈ ಸಾದನೆ ಮಾಡಿದ ಮೈಸೂರು ರಾಜ್ಯದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೆ ಪ್ರಕಾಶ್ ಪಾತ್ರರಾಗಿ ಇತಿಹಾಸದ ಪುಟ ಸೇರಿದರು. ಮುಂದಿನ ವರ‍್ಶ 1971 ರಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಿರಿಯರ ಹಾಗೂ ಹಿರಿಯರ ಎರಡೂ ಪಂದ್ಯಾವಳಿಗಳನ್ನು ನಿರಾಯಾಸವಾಗಿ ಗೆದ್ದು ಅವರು BAI ನ ಸ್ಕಾಲರ‍್ಶಿಪ್ ಕೂಡ ಪಡೆದರು. ಆ ಬಳಿಕ ಅವರು ಸತತ ಏಳು ಬಾರಿ ರಾಶ್ಟ್ರೀಯ ಪಂದ್ಯಾವಳಿಯನ್ನು ಗೆದ್ದು ಇತಿಹಾಸ ನಿರ‍್ಮಿಸಿದರು. ಆ ವೇಳೆ ಇನ್ನು ಹದಿಹರೆಯದಲ್ಲೇ ಅಟದಲ್ಲಿ ಪರಿಪಕ್ವಗೊಂಡಿದ್ದ ಪ್ರಕಾಶ್ ರ ಆಟವನ್ನು ಕಂಡು ಇಂಡೋನೇಶಿಯಾದ ಬ್ಯಾಡ್ಮಿಂಟನ್ ದಿಗ್ಗಜ ರೂಡಿ ಹರ‍್ಟಾನೋ ಅವರು ಪ್ರಕಾಶ್ ಪಡುಕೋಣೆ ಮುಂದಿನ ತಾರೆ ಎಂದು ಬವಿಶ್ಯ ನುಡಿಯುತ್ತಾರೆ. ಅವರ ರಾಕೆಟ್ ಚಳಕ ಹಾಗೂ ಅಂಗಳದಲ್ಲಿ ಪಾದರಸದಂತೆ ಸಂಚರಿಸುತ್ತಿದ್ದ ಸೊಗಸಾದ ಪರಿ ಆ ಮಟ್ಟಿಗೆ ದಿಗ್ಗಜನ ಮೇಲೆ ಪ್ರಬಾವ ಬೀರಿರುತ್ತದೆ.

ವ್ರುತ್ತಿಪರರಾಗಿ ಆಟದಲ್ಲಿ ಬೆಳೆದ ಪ್ರಕಾಶ್

ಆಟಗಾರನಾಗಿ ತಮ್ಮ ಮೊದಲ ದಿನಗಳಿಂದಲೇ ಹರ‍್ಟಾನೋ ರವರ ಆಟವನ್ನು ಮೆಚ್ಚಿ, ಪ್ರಬಾವಿತರಾಗಿ ಅವರನ್ನು ನೋಡಿಯೇ ಸಾಕಶ್ಟು ಕಲಿತಿದ್ದ ಪ್ರಕಾಶ್, ಹರ‍್ಟಾನೋರ ತರಬೇತಿಯ ವಿದಾನ, ಮೈ ಅಳವಿನ ಅರಿವು, ಆಕ್ರಮಣಕಾರಿ ಆಟ, ಹಾಪ್ ಸ್ಮಾಶ್, ಡ್ರಿಬಲ್ ನಂತಹ ಉಪಯುಕ್ತ ರಾಕೆಟ್ ಚಳಕಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಹೀಗೆ ವ್ರುತ್ತಿಪರ ಆಟಗಾರನಾಗಿ ಒಂದೊಂದೇ ಹೆಜ್ಜೆ ಇಡುತ್ತಾ ಹಂತಹಂತವಾಗಿ ಬೆಳೆಯುತ್ತಾ ಹೋದ ಪ್ರಕಾಶ್ ಓದಿನಲ್ಲಿಯೂ ರಾಜಿಯಾಗಿದೆ ಅಶ್ಟೇ ಶ್ರದ್ದೆಯಿಂದ ತಮ್ಮನ್ನು ತೊಡಗಿಸಿಕೊಂಡು M.E.S ಕಾಲೇಜ್ ನಿಂದ ಬಿ.ಕಾಮ್. ಪದವಿಯನ್ನು ಮೊದಲ ದರ‍್ಜೆಯಲ್ಲಿ ಪಡೆಯುತ್ತಾರೆ. ಪ್ರತಿಶ್ಟಿತ ತಾಮಸ್ ಕಪ್ ನಲ್ಲಿ ಸೆಣೆಸಲು ಹೋದಾಗಲೂ ಪುಸ್ತಕಗಳನ್ನು ಕೊಂಡೊಯ್ದು ಅಲ್ಲಿ ಬಿಡುವುನ ವೇಳೆಯಲ್ಲಿ ಪರೀಕ್ಶೆಗೆ ಓದಿದ್ದು ಪ್ರಕಾಶ್ ರ ವ್ಯಕ್ತಿತ್ವಕ್ಕೆ ಸಾಕ್ಶಿಯಾಗಿತ್ತು. 1974 ರ ತೆಹ್ರಾನ್ ಏಶಿಯನ್ ಗೇಮ್ಸ್ ನಲ್ಲಿ ಗೆದ್ದ ಕಂಚಿನ ಪದಕ ಅಂತರಾಶ್ಟ್ರೀಯ ಮಟ್ಟದಲ್ಲಿ ಅವರ ಮೊದಲ ಗೆಲುವಾಗುತ್ತದೆ. ನಂತರ 1975 ರಲ್ಲಿ ಯೂನಿಯನ್ ಬ್ಯಾಂಕ್ ನಲ್ಲಿ ಕೆಲಸ ಗಿಟ್ಟಿಸಿಕೊಂಡ ಪ್ರಕಾಶ್ ಮುಂಬೈಗೆ ಹೋಗಿ ನೆಲೆಸುತ್ತಾರೆ. ಅಲ್ಲಿ ಹೊಸಬಗೆಯ ನಿರಂತರ ತರಬೇತಿಯಿಂದ ಅವರು ಆಟದ ಕಲಿಕೆಯನ್ನು ಮುಂದುವರೆಸುತ್ತಾರೆ. ಅಂತರಾಶ್ಟ್ರಿಯ ಮಟ್ಟದಲ್ಲಿ ಪ್ರಾಬಲ್ಯ ಮೆರೆಯಲು ಬೇಕಾದ ಪ್ರತಿಬೆಯಿದ್ದರೂ ಆ ಹಂತಕ್ಕೆ ತಲುಪಲು ಪ್ರಕಾಶ್ ರಿಗೆ ಇನ್ನೆರಡು ವರುಶ ಬೇಕಾಗುತ್ತದೆ. ಅದೇ ಹೊತ್ತಿಗೆ 1977 ರಲ್ಲಿ ಯೂನಿಯನ್ ಬ್ಯಾಂಕ್ ಪ್ರಯೋಜಕತ್ವದಲ್ಲಿ ಪ್ರಕಾಶ್ ರನ್ನು ಹೆಚ್ಚಿನ ತರಬೇತಿಗಾಗಿ ಇಂಡೋನಿಶಿಯಾಗೆ ಕಳಿಸಲಾಗುತ್ತದೆ. ಇದು ಅಕ್ಶರಶಹ ಅವರ ವ್ರುತ್ತಿಬದುಕಿನ ದೊಡ್ಡ ವರವಾಗಿ ಪರಿಣಮಿಸುತ್ತದೆ. ಅಲ್ಲಿನ ಪ್ರತ್ಯೇಕ ಬ್ಯಾಡ್ಮಿಂಟನ್ ಸಂಬಂದಿತ ವ್ರುತ್ತಿಪರ ತರಬೇತಿ, ಹತ್ತಿರದಿಂದ ಕೋಚ್, ಟ್ರೈನರ್ ಒಳಗೊಂಡ ವಿಶೇಶ ಹಾಗೂ ಪರಿಪೂರ‍್ಣ ತರಬೇತಿ ವಿದಾನಗಳು ಮತ್ತು ಊಟದಲ್ಲಿ ಬೇಕು-ಬೇಡಗಳ ಅರಿವು ಪ್ರಕಾಶ್ ರ ಆಟವನ್ನು ಇನ್ನಶ್ಟು ಹಿಗ್ಗಿಸುತ್ತದೆ. ಹಾಗೆ ಇವುಗಳನ್ನೆಲ್ಲಾ ಚಾಚೂ ತಪ್ಪದೆ ಪಾಲಿಸಿ ಡೈರಿಯೊಂದರಲ್ಲಿ ಗುರುತು ಮಾಡಿಕೊಂಡು ಅವರು ಮುಂದಿನ ಪೀಳಿಗೆಯ ಆಟಗಾರರಿಗೆ ಬೇಕಾದ ಎಲ್ಲಾ ಮುಕ್ಯ ಮಾಹಿತಿಗಳನ್ನು ಕಲೆಹಾಕುತ್ತಾರೆ. ಮೊದಲಿಂದಲೂ ಆಟದ ಒಳ್ಳೆ ತಾಂತ್ರಿಕತೆ ಹೊಂದಿದ್ದ ಪ್ರಕಾಶ್ ವೇಗ, ಸರ‍್ವ್ ಮತ್ತು ಮೈ ಅಳವು ಸುದಾರಿಸಿಕೊಳ್ಳುತ್ತಾರೆ. ಇದರೊಟ್ಟಿಗೆ ದೊಡ್ಡ ರಾಲಿಗಳನ್ನು ತುಂಡರಿಸಿ ಬೇಗ ವಿನ್ನರ್ ಗಳನ್ನು ಗಳಿಸಿ ಹೆಚ್ಚು ಬಲ ಉಳಿಸಿಕೊಳ್ಳುವ ಜಾಣ್ಮೆಯನ್ನು ಕಲಿತದ್ದು ಅವರ ಆಟದಲ್ಲಿದ್ದ ಕುಂದುಗಳನ್ನು ಕುಗ್ಗಿಸುತ್ತದೆ. ನೆಟ್ ಡ್ರಿಬಲ್ ನೊಂದಿಗೆ ಎದುರಾಳಿಯ ತಂತ್ರಗಳನ್ನು ಅರಿತು, ತಕ್ಕದಾದ ಪ್ರತಿರೋದ ಒಡ್ಡುವ ಚಳಕಗಳನ್ನೂ ಪ್ರಕಾಶ್ ತಮ್ಮ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಾರೆ. ಇದರ ಪಲವಾಗಿ ಅಲ್ಲಿಂದ ಹೊರಡುವುದಕ್ಕೂ ಮುನ್ನ ದಿಗ್ಗಜ ಹರ‍್ಟಾನೋರನ್ನು ಅಬ್ಯಾಸ ಪಂದ್ಯವೊಂದರಲ್ಲಿ ಸೋಲಿಸಿ ತನ್ನಂಬಿಕೆಯಿಂದ ವಿಶ್ವಮಟ್ಟದಲ್ಲಿ ಮುಂದಿನ ಸವಾಲುಗಳಿಗೆ ಅಣಿಯಾಗುತ್ತಾರೆ.

ಪ್ರಕಾಶ್ ಯುಗ – ಬ್ಯಾಡ್ಮಿಂಟನ್ ಉತ್ತುಂಗ

ಸತತ ತರಬೇತಿ ಹಾಗೂ ಪರಿಶ್ರಮದಿಂದ ಆಟದಲ್ಲಿ ಪರಿಪಕ್ವಗೊಂಡಿದ್ದ ಪ್ರಕಾಶ್ 1978 ರಲ್ಲಿ ಕೆನಡಾದಲ್ಲಿ ಡೆರೆಕ್ ಟಲ್ಬೋಟ್ ರನ್ನು ನೇರ ಸೆಟ್ (15-9, 15-8) ರಿಂದ ಮಣಿಸಿ ಬಾರತಕ್ಕೆ ಕಾಮನ್ ವೆಲ್ತ್ ಪಂದ್ಯಾವಳಿಯಲ್ಲಿ ಬಂಗಾರದ ಪದಕದ ಕಾಣಿಕೆ ಅರ‍್ಪಿಸುತ್ತಾರೆ. ಇನ್ನು ಮುಂದಿನ ರುತುವಿನಲ್ಲೂ ಇವರ ಗೆಲುವಿನ ನಾಗಾಲೋಟ ತಡೆಯಿಲ್ಲದೆ ಸಾಗುತ್ತದೆ. 1980 ರಲ್ಲಿ ಹರ‍್ಟಾನೋರನ್ನು ಪೈನಲ್ ನಲ್ಲಿ ಸೋಲಿಸಿ ಸ್ವೀಡಿಶ್ ಓಪನ್ ಗೆದ್ದು ಒಬ್ಬ ಆಟಗಾರನಾಗಿ ತಾನೆಶ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂಬುದನ್ನು ಅವರು ಮತ್ತೊಮ್ಮೆ ನೆನಪಿಸುತ್ತಾರೆ. ಅದೇ ವರ‍್ಶ ಡಾನಿಶ್ ಓಪನ್ ಕೂಡ ಗೆದ್ದದ್ದು ಪ್ರಕಾಶ್ ರ ಇನ್ನೊಂದು ಗರಿಮೆ. ಇದರ ಬೆನ್ನಲ್ಲೇ 1980 ರ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ನಲ್ಲಿ ಇಂಡೋನೇಶಿಯಾದ ದಿಗ್ಗಜ ಲಿಯಮ್ ಸ್ವೀ ಕಿಂಗ್ ರನ್ನು (15-3, 15-10) ರಿಂದ ಗೆದ್ದು ಪ್ರಕಾಶ್ ತಮ್ಮ ಆಟದ ಉತ್ತುಂಗ ತಲುಪುತ್ತಾರೆ. ಒಂದೇ ಸಾಲಿನಲ್ಲಿ ಸತತ ಮೂರು ಗ್ರಾಂಡ್ಸ್ಲಾಮ್ ಗಳನ್ನು (ಸ್ವೀಡಿಶ್, ಡೇನಿಶ್, ಆಲ್ ಇಂಗ್ಲೆಂಡ್) ಗೆದ್ದ ಮೊದಲ ಹಾಗೂ ಏಕೈಕ ಬಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಅವರು ಗಳಿಸುತ್ತಾರೆ. ಬ್ಯಾಡ್ಮಿಂಟನ್ ನ ಕೀರ‍್ತಿ ಕಳಶ ಎಂದೇ ಗುರುತಿಸಿಕೊಳ್ಳುವ ಆಲ್ ಇಂಗ್ಲೆಂಡ್ ಪಂದ್ಯಾವಳಿಯನ್ನು ಪ್ರಕಾಶ್ ಗೆದ್ದಾಗಲಂತೂ ಅವರ ಹುಟ್ಟೂರು ಬೆಂಗಳೂರಿನೊಂದಿಗೆ ಇಡೀ ದೇಶವೇ ಇನ್ನಿಲ್ಲದಂತೆ ಸಂಬ್ರಮಿಸುತ್ತದೆ. ಪಂದ್ಯಾವಳಿ ಗೆದ್ದು ಲಂಡನ್ ನಿಂದ ಮರಳಿದ ಪ್ರಕಾಶ್ ರನ್ನು ತೆರೆದ ಜೀಪ್ ನಲ್ಲಿ ಮೆರವಣಿಗೆಯ ಮೂಲಕ ವಿಮಾನ ನಿಲ್ದಾಣದಿಂದ ವಿದಾನ ಸೌದಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ನಾಡಿನ ಮುಕ್ಯಮಂತ್ರಿ ಗುಂಡೂರಾಯರು ಈ ದಿಗ್ಗಜ ಕನ್ನಡಿಗನ ಸಾದನೆಯನ್ನು ಕೊಂಡಾಡಿ ಎಲ್ಲರ ಸಮ್ಮುಕದಲ್ಲಿ ಸನ್ಮಾನಿಸುತ್ತಾರೆ. ಪ್ರಕಾಶ್ ರ ಈ ಅಬೂತಪೂರ‍್ವ ಗೆಲುವು ಬಾರತದಾದ್ಯಂತ ಶಟಲ್ ಬ್ಯಾಡ್ಮಿಂಟನ್ ನ ವೇಗದ ಬೆಳವಣಿಗೆಗೆ ನಾಂದಿ ಹಾಡುತ್ತದೆ. ಅಲ್ಲಿಂದ ಹಾಕಿ, ಕ್ರಿಕೆಟ್ ನೊಟ್ಟಿಗೆ ಬ್ಯಾಡ್ಮಿಂಟನ್ ಆಟವನ್ನೂ ಮಂದಿ ಗಂಬೀರವಾಗಿ ಪರಿಗಣಿಸಲು ಮೊದಲು ಮಾಡುತ್ತಾರೆ.

ಡೆನ್ಮಾರ‍್ಕ್ ನಲ್ಲಿ ಬ್ಯಾಡ್ಮಿಂಟನ್ ಒಟ್ಟಿಗೆ ಬದುಕು

1980 ರಲ್ಲಿ ತಮ್ಮ ಆಟದ ಶಿಕರವನ್ನು ಮುಟ್ಟಿ ಬೀಗುತ್ತಿದ್ದ ಪ್ರಕಾಶ್ ಏಕಾಏಕಿ ಹ್ವಿಡೋವ್ರ ಕ್ಲಬ್ ನ ಒಪ್ಪಂದಕ್ಕೆ ಸಹಿ ಹಾಕಿ ಡೆನ್ಮಾರ‍್ಕ್ ನಲ್ಲಿ ಕ್ಲಬ್ ಪರ ವ್ರುತ್ತಿಪರ ಬ್ಯಾಡ್ಮಿಂಟನ್ ಆಡಲು ತೆರಳುತ್ತಾರೆ. ಬ್ಯಾಂಕ್ ಉದ್ಯೋಗ ಹಾಗೂ ತನ್ನವರನ್ನು ತೊರೆದು ಹೋಗಲು ಮುಂದಾದ ಪ್ರಕಾಶ್ ರ ತೀರ‍್ಮಾನ ಹೆತ್ತವರಿಗೆ ಹಿಡಿಸದೆ ಹೋದರೂ ತಮ್ಮ ವ್ರುತ್ತಿಗೆ ಪೂರಕವಾದ ಈ ಅವಕಾಶವನ್ನು ಅವರು ಬಳಸಿಕೊಳ್ಳುತ್ತಾರೆ. 80ರ ದಶಕದಲ್ಲಿ ಬಾರತಕ್ಕಿಂತ ಡೆನ್ಮಾರ‍್ಕ್ ನಲ್ಲಿ ಬ್ಯಾಡ್ಮಿಂಟನ್ ಆಟಗಾರರಿಗೆ ಹೆಚ್ಚು ಗಳಿಸುವ ಹಾಗೂ ಕಲಿಯುವ ಅವಕಾಶಗಳು ಇದ್ದವು ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿರುತ್ತದೆ. ಹೆಂಡತಿ ಉಜ್ಜಾಲರೊಂದಿಗೆ ಡೆನ್ಮಾರ‍್ಕ್ ನಲ್ಲಿ ನೆಲೆಸಿ ಪ್ರಕಾಶ್ ಹ್ವಿಡೋವ್ರ ಕ್ಲಬ್ ಪರ ಆಡುವುದರೊಟ್ಟಿಗೆ ಯೂರೋಪ್ ನ ಹಲವಾರು ಅಂತರಾಶ್ಟ್ರೀಯ ಪಂದ್ಯಾವಳಿಗಳಲ್ಲೂ ಕಣಕ್ಕಿಳಿಯುತ್ತಾರೆ. ಲೈಸೆನ್ಸ್ಡ್ ಆಟಗಾರ ಎಂಬ ಹಣೆಪಟ್ಟಿ ಹೊತ್ತ ಅವರು ಕೆಲಕಾಲ ಬಾರತವನ್ನು ಪ್ರತಿನಿದಿಸುವ ಅವಕಾಶದಿಂದ ವಂಚಿತರಾಗಿದ್ದು ಆಗಿನ ಕಾಲದ ಬಾರೀ ಚರ‍್ಚೆಗೆ ಗ್ರಾಸವಾದ ವಿಶಯವಾಗಿರುತ್ತದೆ. 1980 ರ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಪ್ರಕಾಶ್ 1981 ರಲ್ಲಿ ಮಲೇಶಿಯಾದಲ್ಲಿ ನಡೆದ ವಿಶ್ವಕಪ್ ನಲ್ಲಿ ಚೀನಾದ ಹಾನ್ ಜಿಯಾನ್ ರನ್ನು (15-0, 18-16) ರಿಂದ ಸೋಲಿಸಿ ಬಂಗಾರದ ಪದಕ ಗೆದ್ದು ವಿಶ್ವವಿಜೇತರಾಗಿ ಮೆರೆಯುತ್ತಾರೆ. ಈ ಗೆಲುವುಗಳ ಹೊರತಾಗಿ ಅವರ ಡ್ರಾಪ್ ಹೊಡೆತಗಳು ಬ್ಯಾಡ್ಮಿಂಟನ್ ಜಗತ್ತನ್ನು ಬೆಕ್ಕಸ ಬೆರಗಾಗಿಸಿ ಆಟದ ಒಲಿವರ ಮನ ತಣಿಸುತ್ತವೆ. ಇದರ ನಂತರ 1981 ರ ವರ‍್ಲ್ಡ್ ಗೇಮ್ಸ್ ಕಂಚಿನ ಪದಕ, 1983 ರ ಏಶಿಯನ್ ಚಾಂಪಿಯನ್ಶಿಪ್ಸ್ ನಲ್ಲಿ ಬೆಳ್ಳಿ ಪದಕ ಹಾಗೂ ಅದೇ ಸಾಲಿನಲ್ಲಿ ಕೋಪನ್ಹೇಗನ್ ನಲ್ಲಿ ಜರುಗಿದ ವರ‍್ಲ್ಡ್ ಚಾಂಪಿಯನ್ಶಿಪ್ಸ್ ನ ಕಂಚಿನ ಪದಕ ಪ್ರಕಾಶ್ ರ ವರ‍್ಚಸ್ಸನ್ನು ಅಂತರಾಶ್ಟ್ರೀಯ ಮಟ್ಟದಲ್ಲಿ ಇನ್ನಶ್ಟು ಹೆಚ್ಚಿಸುತ್ತದೆ. 1981 ರಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಗೆಲುವಿನ ಸಂಬಾವನೆಯೊಂದಿಗೆ ಆಯೋಜಿಸಲಾದ ಇಂಡಿಯನ್ ಮಾಸ್ಟರ‍್ಸ್ ನಲ್ಲೂ ಪ್ರಕಾಶ್ ಹಾನ್ ಜಿಯಾನ್ ಎದುರು ಪ್ರಾಬಲ್ಯ ಮೆರೆದು ಪ್ರಶಸ್ತಿ ಗೆಲ್ಲುತ್ತಾರೆ. 1983 ರಲ್ಲಿ ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಆಟದಲ್ಲಿ ಕೊಂಚ ಮೊನಚು ಕಳೆದುಕೊಂಡು ಸೊರಗಿದರೂ ಎಲ್ಲಾ ಪ್ರತಿಶ್ಟಿತ ಟೂರ‍್ನಿಗಳಲ್ಲಿ ಅವರು ಕನಿಶ್ಟ ಸೆಮೀಸ್ ಹಾಗೂ ಪೈನಲ್ಸ್ ತನಕ ತಪ್ಪದೇ ತಲುಪುತ್ತಿದ್ದದ್ದು ವಿಶೇಶ. 1986 ರ ಸಿಯೋಲ್ ಏಶಿಯನ್ ಗೇಮ್ಸ್ ನ ಕಂಚಿನ ಪದಕ ಹಾಗೂ 1988 ರ ಯೂ.ಎಸ್. ಓಪನ್ ನ ಡಬಲ್ಸ್ ಪೋಟಿಯಲ್ಲಿ ಬೆಳ್ಳಿ ಪದಕಗಳ ಬಳಿಕ ಪ್ರಕಾಶ್ ಪಡುಕೋಣೆ ಯಾವುದೇ ಪ್ರಮುಕ ಪಂದ್ಯಾವಳಿ ಗೆಲ್ಲದೇ ಬಾರತಕ್ಕೆ ಮರಳಿ 1991 ರಲ್ಲಿ ನಿವ್ರುತ್ತಿ ಗೋಶಿಸುತ್ತಾರೆ. ಬಾರತದ ಶಟಲ್ ಬ್ಯಾಡ್ಮಿಂಟನ್ ಇತಿಹಾಸದ ಒಂದು ಯುಗಾಂತ್ಯವೆಂಬುದಾಗಿ ಅವರ ನಿವ್ರುತ್ತಿಯನ್ನು ಬಣ್ಣಿಸಲಾಗುತ್ತದೆ.

ನಿವ್ರುತ್ತಿ ನಂತರದ ಬದುಕು

ಆಟಗಾರನಾಗಿ ಅಂಗಳದಿಂದ ದೂರ ಸರಿದು ರಾಕೆಟ್ ಅನ್ನು ಬದಿಗಿಟ್ಟರೂ ಪ್ರಕಾಶ್ ಬ್ಯಾಡ್ಮಿಂಟನ್ ಗೆ ಬೇರೆ ಬಗೆಯಲ್ಲಿ ಕೊಡುಗೆ ನೀಡುತ್ತಾ ಹೋದರು. ಮೊದಲಿಗೆ ಬಾರತದ ಬ್ಯಾಡ್ಮಿಂಟನ್ ಅಸೋಶಿಯೇಶನ್ ನ ಅದ್ಯಕ್ಶರಾಗಿ ಕೆಲ ಹೊತ್ತು ಸೇವೆ ಸಲ್ಲಿಸಿ ಆ ಬಳಿಕ 1993 ರಿಂದ 1996 ರ ತನಕ ಬಾರತದ ಬ್ಯಾಡ್ಮಿಂಟನ್ ತಂಡದ ಕೋಚ್ ಆಗಿ ದುಡಿದರು. ಅದೇ ವೇಳೆ ಬ್ಯಾಡ್ಮಿಂಟನ್ ಒಲವಿಗರಾಗಿದ್ದ ಕರ‍್ನಾಟಕದ ಮುಕ್ಯಮಂತ್ರಿ ಬಂಗಾರಪ್ಪ ನವರ ಕೋರಿಕೆಯ ಮೇರೆಗೆ ಕರ‍್ನಾಟಕದ ಸ್ಪೋರ‍್ಟ್ಸ್ ಕೌನ್ಸಿಲ್ ಅದ್ಯಕ್ಶರಾಗಿ ಕೂಡ ಪ್ರಕಾಶ್ ತಮ್ಮ ಕೊಡುಗೆ ನೀಡಿದರು. ಅವರ ಅವದಿಯಲ್ಲೇ ರಾಜ್ಯದ ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿ ಈ ಕೌನ್ಸಿಲ್ ಗೆ ಪ್ರತ್ಯೇಕವಾಗಿ ದೊರೆಯುವಂತೆ ಬಂಗಾರಪ್ಪನವರ ಮನ ಒಲಿಸಿದರು. ಹಾಗೂ ಕ್ರೀಡಾ ಕ್ಶೇತ್ರದ ಸಾದಕರಿಗೆ ನೀಡಲಾಗುವ ಕರ‍್ನಾಟಕದ ಪ್ರತಿಶ್ಟಿತ ಏಕಲವ್ಯ ಪ್ರಶಸ್ತಿಯನ್ನೂ ಪ್ರಕಾಶ್ ಅವರೇ ತಮ್ಮ ಅವದಿಯಲ್ಲಿ ಹುಟ್ಟುಹಾಕಿದರು. ಬಳಿಕ 1994 ರಲ್ಲಿ ವ್ರುತ್ತಿಪರ ತರಬೇತಿಗಾಗಿ ಸುಸಜ್ಜಿತ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಸೋಶಿಯನ್ ಅನ್ನು ಬೆಂಗಳೂರಿನಲ್ಲಿ ತೆರೆದು ಹಲವಾರು ಯುವಪ್ರತಿಬೆಗಳಿಗೆ ಮಾರ‍್ಗದರ‍್ಶಕರಾದರು. ಅವರ ಗರಡಿಯಲ್ಲಿ ಪಳಗಿದ ಪುಲ್ಲೆಲ್ಲಾ ಗೋಪಿಚಂದ್, ಅಪರ‍್ಣಾ ಪೋಪೆಟ್ ಹಾಗೂ ನಿಕಿಲ್ ಕಾನಿಟ್ಕರ್ ರ ಸಾದನೆಯನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅಲ್ಲಿನ ಹೆಚ್ಚುವರಿ ಬಗೆಬಗೆಯ ಕೋರ‍್ಟ್ ಗಳು, ಪ್ರಾಯೋಜಕರ ನೆರವು ಪಡೆದು ನೀಡಲಾದ ಆಟದ ಸಲಕರಣೆಗಳು ಯುವ ಆಟಗಾರರು ಮುನ್ನೆಲೆಗೆ ಬರಲು ಊರುಗೋಲಾದವು. ಬಳಿಕ 2001 ರಲ್ಲಿ ಅವರು ಗೀತ್ ಸೇಟಿರೊಟ್ಟಿಗೆ ಒಲಂಪಿಕ್ಸ್ ಆಟಗಾರರನ್ನು ಮುನ್ನೆಲೆಗೆ ತಂದು ತರಬೇತಿ ನೀಡಲು ನಿರ‍್ಮಿಸಿದ ‘ಒಲಂಪಿಕ್ ಗೋಲ್ಡ್ ಕ್ವೆಸ್ಟ್’ ತನ್ನ ಕಾರ‍್ಯ ಸಾದಿಸಿ ಬಾರತಕ್ಕೆ ಹಲವಾರು ಪದಕಗಳ ಕಾಣಿಕೆ ನೀಡಿದ್ದು ಈಗ ಇತಿಹಾಸ. 2012 ರ ಲಂಡನ್ ಒಲಂಪಿಕ್ಸ್ ನ ಬಾರತದ 6 ಪದಕ ಗೆಲ್ಲುಗರ ಪೈಕಿ 4 ಮಂದಿ ಪ್ರಕಾಶ್ ರ ಕನಸಿನ ಕೂಸಾದ ಈ ಯೋಜನೆ ಅಡಿ ತರಬೇತಿ ಪಡೆದವರು ಎಂಬುದು ಅವರ ಕನಸು ಸಾಕಾರಗೊಂಡಿದ್ದನ್ನು ಸಾರಿ ಹೇಳಿತು. ಇತ್ತೀಚಿಗೆ ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್ ರೊಂದಿಗೆ ಕೈಜೋಡಿಸಿ ಬೆಂಗಳೂರಿನ ಹೊರವಲಯದಲ್ಲಿ ‘ದಿ ಪಡುಕೋಣೆ-ದ್ರಾವಿಡ್ ಅಕ್ಯಾಡೆಮಿ’ ಯನ್ನು ಪ್ರಕಾಶ್ ಅವರು ಹುಟ್ಟುಹಾಕಿ ಎಲ್ಲಾ ಮಾದರಿಯ ಆಟಗಾರರ ಬೆಳವಣಿಗೆಗೆ ಬೆಂಬಲ ನೀಡುತ್ತಿದ್ದಾರೆ.

ಪ್ರಕಾಶ್ ಪಡುಕೋಣೆ ಎಂಬ ಅಪ್ರತಿಮ ಆಟಗಾರ – ದಂತಕತೆ

ತಮ್ಮ ಆಟದ ದಿನಗಳಿಂದಲೂ ಯಾವುದೇ ವಿವಾದಕ್ಕೆ ಒಳಗಾಗದೆ ತಮ್ಮ ಶಾಂತ ಸ್ವಬಾವ ಹಾಗೂ ಆಟದ ನೇರ‍್ಮೆಯಿಂದ ಹೆಸರುವಾಸಿಯಾಗಿದ್ದ ಪ್ರಕಾಶ್ ಪಡುಕೋಣೆ ಬಾರತ ಕಂಡ ಒಬ್ಬ ಅಪ್ರತಿಮ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಅಂಗಳದ ಒಳಗೂ ಹೊರಗೂ ತಮ್ಮ ಸಂಯಮ ಕಾಯ್ದುಕೊಂಡು ಬ್ಯಾಡ್ಮಿಂಟನ್ ವಲಯದಲ್ಲಿ ಪ್ರಕಾಶ್ ಕಿರಿಯರಿಗೆ ಮಾದರಿಯಾಗಿದ್ದರು. 1982 ರಲ್ಲಿ ದೇಶದ ನಾಲ್ಕನೇ ಪ್ರತಿಶ್ಟಿತ ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಕಾಶ್ ರ ಸಾದನೆಗೆ ತಕ್ಕಂತೆ ಅವರಿಗೆ ಗೌರವ, ಮನ್ನಣೆ ದೊರಕಲಿಲ್ಲ ಎಂಬುದು ಡಾಳಾಗಿ ಕಾಣುತ್ತದೆ. ಅಂತರಾಶ್ಟ್ರೀಯ ಕ್ಯಾತಿ ಗಳಿಸಿದ ಮೇಲೂ ರಾಶ್ಟ್ರೀಯ ಪಂದ್ಯಾವಳಿಗಳಲ್ಲಿ ಅವರು ಕರ‍್ನಾಟಕದ ಪರ ಯಾವುದೇ ಹಮ್ಮುಬಿಮ್ಮು ಇಲ್ಲದೆ ಆಡುತ್ತಿದ್ದದ್ದು, ಕಾಯ್ದಿರಿಸಿದ ಟಿಕೆಟ್ ಸಿಗದಿದ್ದಾಗ ರೈಲಿನ ಎರಡನೇ ದರ‍್ಜೆ ಬೋಗಿಯಲ್ಲಿ ಚಾಪೆ ಹಾಸಿಕೊಂಡು ನೆಲದ ಮೇಲೆ ಮಲಗಿ ಪ್ರಯಾಣಿಸುತ್ತಿದ್ದದ್ದು ನಮ್ಮ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ದಾಕಲಾಗಿದೆ. ಅಶ್ಟು ಸಾದಿಸಿಯೂ ಇಂತಹ ಸರಳ ವ್ಯಕ್ತಿತ್ವ ಹೊಂದಿರಲು ಸಾದ್ಯವೇ ಎಂದು ನಮಗೆ ಇಂದು ಅನಿಸದೇ ಇರದು. ಅವರ ಆಟದ ಉತ್ತುಂಗದ 1980 ರ ದಶಕದ ಕಾಲದಲ್ಲಿ ಶಟಲ್ ಬ್ಯಾಡ್ಮಿಂಟನ್ ಒಲಂಪಿಕ್ಸ್ ನ ಬಾಗವಾಗದೆ ಇದ್ದದ್ದು ಕರ‍್ನಾಟಕ ಹಾಗೂ ಬಾರತದ ದೊಡ್ಡ ದೌರ‍್ಬಾಗ್ಯ. ಇಲ್ಲದಿದ್ದರೆ 2008 ರ ಬಿಂದ್ರಾರ ಬಂಗಾರದ ಪದಕದ ತನಕ ಒಲಂಪಿಕ್ಸ್ ನ ಒಂಟಿ ಪೋಟಿಯ ಮೊದಲ ಪದಕಕ್ಕಾಗಿ ಕಾಯಬೇಕಾದ ಪ್ರಮೇಯ ಬಾರತಕ್ಕೆ ಕಂಡಿತ ಬರುತ್ತಿರಲಿಲ್ಲ. ಪ್ರಕಾಶ್ ನಿರಾಯಾಸವಾಗಿ ಒಲಂಪಿಕ್ಸ್ ಪದಕ ಗಳಿಸುತ್ತಿದ್ದರು ಎಂಬುದನ್ನು ಬ್ಯಾಡ್ಮಿಂಟನ್ ಬಲ್ಲವರೆಲ್ಲರೂ ಈಗಲೂ ಬೇಸರದಿಂದ ನೆನೆಯುತ್ತಾರೆ. ದೇಶದ ನಾನಾ ಕ್ರೀಡಾಪಟುಗಳ ಶ್ರೇಶ್ಟತೆಯ ಚರ‍್ಚೆಯಲ್ಲಿ ಪ್ರಕಾಶ್ ಪಡುಕೋಣೆ ಸದಾ ಏಕೆ ಮುಂಚೂಣಿಯಲ್ಲಿರುತ್ತಾರೆ ಎಂಬುದರ ಅರಿವು ನಮಗಿರಬೇಕು. ಇಂದು ಬ್ಯಾಡ್ಮಿಂಟನ್ ಬಾರತದಲ್ಲಿ ಪ್ರಸಿದ್ದಿಯಾಗಿ, ಇಂತಹ ದೊಡ್ಡ ಮಟ್ಟ ತಲುಪಿ ಹೆಮ್ಮರವಾಗಿರಲು ಅಂದು ನಮ್ಮ ಕನ್ನಡಿಗ ಪ್ರಕಾಶ್ ಪಡುಕೋಣೆ ಬಿತ್ತ ಬೀಜ ಕಾರಣ ಎಂಬುದನ್ನು ಮತ್ತೊಮ್ಮೆ, ಮಗದೊಮ್ಮೆ ನೆನೆಯೋಣ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: