ನೆಲೆಸಿಗರ ಹಿತ ಕಾಯುವ ನಿಯಮ ನಾಡಿಗೆ ಬೇಕಿದೆ

ರತೀಶ ರತ್ನಾಕರ.

Migration-Rural

ಬೆಳೆಯುತ್ತಿರುವ ನಗರಗಳಿಗೆ ಕೆಲಸ ಹಾಗೂ ಕಲಿಕೆಗಾಗಿ ಹೆರನಾಡಿನಿಂದ ವಲಸೆ ಬಂದಿರುವ ಮತ್ತು ಬರುತ್ತಿರುವ ಎಣಿಕೆಯು ಕಡಿಮೆಯೇನಿಲ್ಲ. ಹೀಗೆ ಹೆಚ್ಚುತ್ತಿರುವ ವಲಸೆಯಿಂದ ನಾಡಿನ ನೆಲೆಸಿಗರಿಗೆ ಕೆಲಸ ಹಾಗೂ ಕಲಿಕೆಯ ಅವಕಾಶಗಳಲ್ಲಿ ಮನ್ನಣೆ ಸಿಗದಿರುವುದು ಗೊತ್ತಿರುವ ಸಂಗತಿ. ಈ ವಲಸೆಯ ಬಿಸಿ ಈಗ ದೆಹಲಿಗೂ ತಟ್ಟಿದೆ. ದೆಹಲಿಯ ನೆಲೆಸಿಗರಿಗೆ ದೆಹಲಿಯ ಕಲಿಕೆವೀಡಿನಲ್ಲಿ ಕಲಿಯಲು ಅವಕಾಶಗಳು ಕಡಿಮೆಯಾಗುತ್ತಿದ್ದವು. ಇದನ್ನು ಮನಗಂಡ ಅಲ್ಲಿನ ಸರಕಾರ ದೆಹಲಿ ಕಲಿಕೆವೀಡಿನಲ್ಲಿ 90% ಸೀಟುಗಳನ್ನು ನೆಲೆಸಿಗರಿಗೆ ಮೀಸಲಿಡುವಂತಹ ಯೋಜನೆಯನ್ನು ಹಾಕಿಕೊಂಡಿದೆ. 12ನೇ ತರಗತಿಯವರೆಗೆ ದೆಹಲಿಯಲ್ಲೇ ಓದಿರುವ ಮಕ್ಕಳು ಈ ಮೀಸಲಾತಿ ಅಡಿಯಲ್ಲಿ ಮುಂದಿನ ಕಲಿಕೆಗೆ ಕಲಿಕೆವೀಡಿನಲ್ಲಿ ಸೀಟನ್ನು ಪಡೆದುಕೊಳ್ಳಬಹುದಾಗಿದೆ. ಕಲಿಕೆಯಲ್ಲಿ ನೆಲೆಸಿಗರಿಗೆ ಮನ್ನಣೆ ನೀಡುವ ಈ ಯೋಜನೆಗೆ ರಾಜಕೀಯ ಪಕ್ಶಗಳಾದ ಬಿಜೆಪಿ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಶಗಳು ಕೂಡ ಬೆಂಬಲ ಸೂಚಿಸಿವೆ.

ತಡೆಯಿಲ್ಲದ ವಲಸೆಯಿಂದಾಗಿ ಬೆಂಗಳೂರು, ಮುಂಬಯಿ ಮತ್ತು ದೆಹಲಿಯಂತಹ ನಗರಗಳಲ್ಲಿ ಆಯಾ ನಾಡಿನ ಮಂದಿಗೆ ಹೆರನಾಡಿನ ವಲಸಿಗರ ಜೊತೆ ಸ್ಪರ‍್ದೆಗೆ ಬೀಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾಡಿನ ಮಂದಿಯ ಹಿತ ಕಾಪಾಡಲು ಇಂತಹ ಯೋಜನೆಗಳು ದಿಟವಾಗಿಯೂ ಬೇಕಾಗಿವೆ. ಎತ್ತುಗೆಗೆ, ಬೆಂಗಳೂರಿನಲ್ಲಿ ಹುಟ್ಟುವ ಕೆಲಸಗಳಿಗೆ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು, ಇಲ್ಲಿರುವ ಕಲಿಕೆವೀಡಿನಲ್ಲಿ ಕನ್ನಡಿಗ ಮಕ್ಕಳಿಗೆ ಹೆಚ್ಚಿನ ಸೀಟು ಸಿಗುವಂತಿರಬೇಕು. ಆದರೆ ಈಗ, ಕೆಲಸಕ್ಕೆಂದು ಹೆರನಾಡಿನ ಹೆಚ್ಚು ಮಂದಿಯ ಜೊತೆ ಮತ್ತು ಕಲೆಕೆವೀಡಿನ ಸೀಟಿಗಾಗಿ ಹೆರನಾಡಿನ ಮಕ್ಕಳ ಜೊತೆ ದೊಡ್ಡ ಸ್ಪರ‍್ದೆ ನಡೆಸಬೇಕಿದೆ. ಕೆಲಸ ಹಾಗೂ ಕಲಿಕೆಯಲ್ಲಿ ನಾಡಿನ ಮಂದಿಗೆ ಮನ್ನಣೆ ಸಿಗುವಂತೆ ಸರಕಾರದ ಕಾನೂನು ಕಾಯ್ದೆಗಳ ಕೊರತೆಯಿದೆ, ಹಾಗಾಗಿ ಇಂತಹ ಹೊಸ ಯೋಜನೆಗಳು ಬರಬೇಕಿದೆ.

ದೆಹಲಿ ಸರಕಾರದ ಈ ಯೋಜನೆಯನ್ನು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಶಗಳು ಬೆಂಬಲಿಸಿರುವುದು ಒಳ್ಳೆಯ ಕೆಲಸವಾಗಿದೆ. ನೆಲೆಸಿಗರಿಗೆ ಸಿಗಬೇಕಾದ ಮನ್ನಣೆ ಕುರಿತು ಈಗಲಾದರು ಈ ಪಕ್ಶಗಳು ಚಿಂತಿಸುತ್ತಿವೆ. ಆದರೆ ಕರ‍್ನಾಟಕದಲ್ಲಿ ಕೂಡ ನಾಡಿನ ಮಂದಿಗೆ, ನಾಡಿನಲ್ಲಿರುವ ಕಂಪನಿಯ ಕೆಲಸಗಳಲ್ಲಿ ಅವಕಾಶ ಹೆಚ್ಚಿಸಲು ಸರೋಜಿನಿ ಮಹಿಶಿ ವರದಿಯಂತಹ ಯೋಜನೆಗಳು ಅನುಶ್ಟಾನಗೊಳ್ಳದೆ ಕೂತಿವೆ. ಇಲ್ಲವೇ, ಕನ್ನಡಿಗರಿಗೆ ಕರ‍್ನಾಟಕದಲ್ಲಿರುವ ಕೆಲಸ ಮತ್ತು ಕಲಿಕೆಯಲ್ಲಿ ಮನ್ನಣೆ ಸಿಗುವಂತೆ ಯಾವ ಹೊಸ ಯೋಜನೆಗಳ ಚಂತನೆಯನ್ನು ಸರಕಾರವಾಗಲೀ ಇನ್ನಾವುದೇ ರಾಜಕೀಯ ಪಕ್ಶಗಳಾಗಲೀ ಮಾಡುತ್ತಿಲ್ಲ. ಸರಕಾರಕ್ಕೆ ಹಾಗೂ ರಾಜಕೀಯ ಪಕ್ಶಗಳು ನಾಡಿನ ಮಂದಿಯ ಹಿತ ಕಾಯುವ ಯೋಜನೆಗಳತ್ತ ಮುಕ ಮಾಡಬೇಕಿದೆ. ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಶಗಳು ದೆಹಲಿಗರಿಗೆ ಮನ್ನಣೆ ಯೋಜನೆಗೆ ಬೆಂಬಲಿಸಿದಂತೆ, ಕರ‍್ನಾಟಕದಲ್ಲಿಯೂ ಕೂಡ ನಾಡಿನವರ ಹಿತ ಕಾಯುವ ಯೋಜನೆಗಳಿಗೆ ಬೆಂಬಲ ಸೂಚಿಸಬೇಕಿದೆ. ಇಲ್ಲವೇ ಇಂತಹ ಹೊಸ ಯೋಜನೆಗಳತ್ತ ಚಿಂತನೆ ನಡೆಸಬೇಕಿದೆ.

ನೆಲೆಸಿಗರ ಹಿತ ಕಾಯಲು ಬೇಕಿರುವ ನೀತಿ ನಿಯಮಗಳನ್ನು ಎಲ್ಲ ನಾಡುಗಳೂ ಮಾಡಿಕೊಳ್ಳುತ್ತವೆ. ಜರ‍್ಮನಿ ಮತ್ತು ಪ್ರಾನ್ಸ್‍ನಂತಹ ನಾಡುಗಳಲ್ಲಿ ನೆಲೆಸಿಗರಿಗೆ ತೊಂದರೆಯಾಗುತ್ತಿದೆ ಎಂದು ಕಂಡುಬಂದಾಗ ಅದನ್ನು ನಿವಾರಿಸಲು ಬೇಕಿರುವ ಕ್ರಮ ಕಯ್ಗೊಳ್ಳುವ ಅದಿಕಾರ ಅವರ ಬಳಿಯಿದೆ. ಅಂತಹ ಅದಿಕಾರವು ಕರ‍್ನಾಟಕದವರಿಗೂ ಬೇಕು, ದೆಹಲಿಯವರಿಗೂ ಬೇಕು, ಮಹಾರಾಶ್ಟ್ರದವರಿಗೂ ಬೇಕು. ಅಂತಹ ಅದಿಕಾರ ಇಲ್ಲದೇ ಹೋದಲ್ಲಿ, ವಲಸೆಯನ್ನು ತಡೆಯುವ ಕೆಲಸಗಳು ಬೇರೆ ಬೇರೆ ರೂಪಗಳನ್ನು ಪಡೆದುಕೊಳ್ಳಲು ತೊಡಗುತ್ತದೆ. ವಲಸೆಯನ್ನು ತಡೆಯುವುದೆಂದರೆ, ವಲಸೆ ಆಗದೇ ಇರದಂತೆ ನೋಡಿಕೊಳ್ಳುವುದಲ್ಲ. ವಲಸೆಯನ್ನು ಎಶ್ಟು ಬೇಕು, ಎಶ್ಟು ಬೇಡ ಎಂಬುದನ್ನು ಆಗಾಗ ತೂಗಿ ನೋಡಿ, ಆಯಾ ಹೊತ್ತಿಗೆ ತಕ್ಕಂತೆ ನೀತಿ-ನಿಯಮಗಳನ್ನು ಸಡಿಲಗೊಳಿಸುವುದು ಇಲ್ಲವೇ ಬಿಗಿಗೊಳಿಸುವ ಅದಿಕಾರ. ಇವತ್ತಿನ ದಿನ ನ್ಯೂಜಿಲ್ಯಾಂಡ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ವಲಸೆ ಹೆಚ್ಚಿಸಬೇಕು ಎಂಬ ಒತ್ತಡವಿದೆ. ಹಾಗಾಗಿ, ವಲಸೆ ನೀತಿಯನ್ನು ಸಡಿಲಗೊಳಿಸಿಕೊಂಡಿದ್ದಾರೆ. ಯು.ಕೆ.ಯಲ್ಲಿ ವಲಸೆ ಕಡಿಮೆಗೊಳಿಸಬೇಕು ಎಂಬ ಒತ್ತಡವಿದೆ. ಹಾಗಾಗಿ, ವಲಸೆನೀತಿಯನ್ನು ಬಿಗಿಗೊಳಿಸುತ್ತಿದ್ದಾರೆ. ದೆಹಲಿಯೂ ಅಶ್ಟೇ. ಹೀಗಾಗಿ, ಕರ‍್ನಾಟಕದಲ್ಲಿನ ವಲಸೆಯನ್ನು ತಡೆಹಿಡಿಯುವ ಇಲ್ಲವೇ ಬಿಡುವ ಅದಿಕಾರ ಕನ್ನಡಿಗರ ಕಯ್ಯಲ್ಲೇ ಇರಬೇಕಿದೆ.

(ಮಾಹಿತಿ ಸೆಲೆ: zeenews.india.com)
(ಚಿತ್ರ ಸೆಲೆ: futurechallenges.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications