ಮಹಿಳೆ: ಅವಳು ಎಲ್ಲಿದ್ದರೂ ಸಾದಕಿಯೇ
‘ಯತ್ರ ನಾರ‍್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ ‘ ಎಂಬ ಮಾತಿನಲ್ಲಿರುವಂತೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬುದು ಅಕ್ಶರಶಹ ನಿಜ. ಹೇಗೆ ಅಂತೀರ? ಮೊದಲನೆಯದಾಗಿ ನಮ್ಮನ್ನು ಹಡೆದ ತಾಯಿ ದೇವತೆಯ ನಿಶ್ಕಲ್ಮಶ ಪ್ರೀತಿ, ಮಮತೆ, ಕರುಣೆ, ಅಂತಹಕರಣಗಳಿಗೆ ಈ ಜಗತ್ತಿನಲ್ಲಿ ಸರಿಸಮವುಂಟೇ? ಮನೆಯ ಎಲ್ಲಾ ಸದಸ್ಯರ ಹಿತ ಕಾಯುವುದು, ಮನೆಯ ಆಗು ಹೋಗುಗಳನ್ನು ಸಂಬಾಳಿಸುವುದು, ಮಕ್ಕಳ ಆರೈಕೆ, ಮಕ್ಕಳಿಗಾಗಿ ಸದಾ ಮಿಡಿಯುವುದು, ಗುರುವಾಗಿ, ಅವರ ಏಳಿಗೆಗೆ ಸಹಕರಿಸುವುದು, ಶ್ರಮಿಸುವುದು ಇವೆಲ್ಲವೂ ಆಕೆಯಲ್ಲಿರುವ ದೈವದತ್ತ ಗುಣಗಳು. ಆದ್ದರಿಂದಲೇ ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂದುವಿಲ್ಲ ಎನ್ನುವ ನಾಣ್ನುಡಿ ಇಂದಿಗೂ ಜೀವಂತವಾಗಿರುವುದು.
ತಾಯಿಯಂತೆ ನಮ್ಮನ್ನು ಅರ‍್ತ ಮಾಡಿಕೊಳ್ಳುವ ನಮ್ಮ ನೋವು ದುಕ್ಕಗಳನ್ನು ಹಂಚಿಕೊಂಡು ವಾತ್ಸಲ್ಯ ತೋರುವ ಸಹೋದರಿಯರ ಪ್ರೀತಿ ಮತ್ತು ಅವರೊಡನೆ ಇರುವ ಬಾಂದವ್ಯ ತುಂಬಾ ಶ್ರೇಶ್ಟವಾದುದು. ಪತಿಗೆ ಗೆಳತಿಯಾಗಿ ಕಶ್ಟ ಸುಕಗಳಲ್ಲಿ ಬಾಗಿಯಾಗಿ ಕೊನೆವರೆಗೂ ಆತನ ಜೊತೆಯಾಗಿ ಕೈ ಹಿಡಿದು ನಡೆಸುವ ಪತ್ನಿಯರ ಪಾತ್ರವೂ ಬಹಳ ಹಿರಿದು. ಇನ್ನೂ ಪ್ರತಿ ತಂದೆಯ ಬದುಕಿನಲ್ಲಿ ಮಗಳು ರಾಜಕುಮಾರಿಯಾಗಿ, ಬೆಳಕಾಗಿ ಅವಳೊಂದಿಗೆ ಬೆಸೆಯುವ ಪ್ರೀತಿ, ಬಾಂದವ್ಯ ತುಂಬಾ ಅಮೂಲ್ಯವಾದುದು. ಈ ರೀತಿ ಜೀವನದ ಹಲವು ಪಾತ್ರಗಳನ್ನು ನಿಬಾಯಿಸುವ ಹೆಣ್ಣು ಪ್ರಕ್ರುತಿಯ ಅದ್ಬುತ ಕೊಡುಗೆ. ಹೆಣ್ಣಿಲ್ಲದ ಮನೆ ಊಹಿಸಲು ಸಾದ್ಯವಿಲ್ಲ. ಸಮಾಜದಲ್ಲಿ ಆಕೆಗೆ ಉತ್ತಮವಾದ ಬೆಂಬಲ ದೊರೆತರೆ ಏನು ಬೇಕಾದರೂ ಸಾದಿಸಬಲ್ಲಳು ಎಂಬುದಕ್ಕೆ ಹಲವು ಕ್ಶೇತ್ರಗಳಲ್ಲಿ ಮಹತ್ತರವಾದ ಸಾದನೆ ಮಾಡಿರುವ ಮಹಿಳಾ ಸಾದಕಿಯರೇ ಉದಾಹರಣೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಆಕೆಗೆ ಗೌರವ ಸಲ್ಲಿಸುವ ನೆಪವಾಗಿ ಪ್ರತಿ ವರ‍್ಶ ಮಾರ‍್ಚ್ 8 ರಂದು ಬಾರತವು ಸೇರಿದಂತೆ ಜಗತ್ತಿನಾದ್ಯಂತ ಹಲವೆಡೆ ಅಂತರಾಶ್ಟ್ರೀಯ ಮಹಿಳಾ ದಿನವಾಗಿ ಗುರುತಿಸಲಾಗಿದೆ.
ಮಹಿಳಾ ದಿನಾಚರಣೆಯ ಹಿನ್ನೆಲೆ
ಮಹಿಳಾ ದಿನಾಚರಣೆಯ ಹಿನ್ನೆಲೆಯತ್ತ ನೋಡಿದರೆ ಅದು ಹಲವು ಹೋರಾಟ, ಚಳುವಳಿಗಳನ್ನು ನೆನಪಿಸುತ್ತದೆ. 20ನೇ ಶತಮಾನದಲ್ಲಿ ಯೂರೋಪ್, ಉತ್ತರ ಅಮೇರಿಕಾಗಳಲ್ಲಿ ಜರುಗಿದ ಕಾರ‍್ಮಿಕ ಚಳವಳಿಗಳು ಇತಿಹಾಸದ ಪುಟಗಳತ್ತ ನಾವು ನೋಡಬಹುದು. 1975 ರಲ್ಲಿ ವಿಶ್ವಸಂಸ್ತೆ ಮಾರ‍್ಚ್ 8 ಅನ್ನು ಅಂತರಾಶ್ಟ್ರೀಯ ಮಹಿಳಾದಿನವೆಂದು ಗೋಶಿಸುವ ಮುನ್ನ ಇದನ್ನು ಸಮಾಜವಾದಿ ಮತ್ತು ಕಮ್ಯುನಿಸ್ಟ್ ರಾಶ್ಟ್ರಗಳಲ್ಲಿ ಆಚರಿಸಲಾಗುತ್ತಿತ್ತು. ಆಗೆಲ್ಲಾ ಇದನ್ನು ಅಂತರಾಶ್ಟ್ರೀಯ ಕಾರ‍್ಯನಿರತ ಮಹಿಳಾದಿನವೆಂದು ಆಚರಿಸಲಾಗುತ್ತಿತ್ತು . 1909ರಲ್ಲಿ ನ್ಯೂಯಾರ‍್ಕ್ ನಲ್ಲಿ ನಡೆದ ಸಮಾಜವಾದಿ ರಾಜಕೀಯ ಕಾರ‍್ಯಕ್ರಮ ಮಹಿಳಾದಿನಕ್ಕೆ ಮುನ್ನುಡಿಯನ್ನು ಬರೆಯಿತು. 1910ರಲ್ಲಿ ನಡೆದ ಎರಡನೇ ಅಂತರಾಶ್ಟ್ರೀಯ ಮಹಿಳಾ ಕಮ್ಯೂನಿಸ್ಟ್ ಸಮ್ಮೇಳನದಲ್ಲಿ ಹಲವಾರು ಮಹಿಳಾ ಹೋರಾಟಗಾರರು ಪಾಲ್ಗೊಂಡಿದ್ದರು. ಈ ಸಬೆಗೆ ಮಹಿಳಾ ಸೆಕ್ರೇಟಿರಿಯನ್ ಮುಕ್ಯಸ್ತೆಯಾಗಿದ್ದ ಕ್ಲಾರಾ ಜೆಟ್ ಕಿನ್ ಅದ್ಯಕ್ಶತೆ ವಹಿಸಿದ್ದರು. 1911ರಲ್ಲಿ ಕ್ಲಾರಾ ಅವರು ಮಾರ‍್ಚ್8ಅನ್ನು ಮಹಿಳಾ ದಿನವಾಗಿ ಆಚರಿಸಬೇಕೆಂದು ನಿರ‍್ಣಯವನ್ನು ಮಂಡಿಸಿದರು. ಇದು ಮುಂದೆ ಹೊಸ ಆಯಾಮಗಳನ್ನು ಪಡೆದುಕೊಂಡು, ಹಲವು ಸಂಗ ಸಂಸ್ತೆಗಳ ಹೋರಾಟದ ಪಲವಾಗಿ 1975ರಲ್ಲಿ ವಿಶ್ವಸಂಸ್ತೆಯ ಸಂಯುಕ್ತ ರಾಶ್ಟ್ರಗಳು ಸೇರಿ ಮಾರ‍್ಚ್ 8 ಅಂತರಾಶ್ಟ್ರೀಯ ಮಹಿಳಾದಿನವಾಗಿ ಗೋಶಿಸಲಾಯಿತು. ಇದರ ಅಂಗವಾಗಿ ಅಂದಿನಿಂದ ಇಂದಿನವರೆಗೂ ಸರ‍್ಕಾರ ಮತ್ತು ಹಲವು ಮಹಿಳಾ ಸಂಗಟನೆಗಳು ಈ ದಿನದಂದು ಹೊಸ ಹೊಸ ರೂಪದೊಂದಿಗೆ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ನೆರವೇರಿಸುವುದರ ಮೂಲಕ ಪ್ರತಿ ವರ‍್ಶವೂ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿವೆ.
ಮಹಿಳೆ ಮನೆಯಲ್ಲೇ ಇರಲಿ ಅತವಾ ಹೊರಗಡೆ ದುಡಿಯಲು ಹೋಗಲಿ, ಆಕೆ ಉದ್ಯೋಗಸ್ತೆಯೇ, ಸಾದಕಿಯೇ. ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಮನೆಯಿಂದ ದೇಶದ ಉನ್ನತಿವರೆಗೂ ಅನೇಕ ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ. ಸ್ತ್ರೀ ತನ್ನ ಅನನ್ಯ ಶಕ್ತಿಯಿಂದ ನಾನಾ ಕ್ಶೇತ್ರಗಳಲ್ಲಿ ಮುನ್ನಡೆಯುತ್ತ ಜಗತ್ತಿನ ಗಮನ ಸೆಳೆದು ಒಂದು ಶಕ್ತಿಯಾಗಿ ಪರಿಣಮಿಸಿದ್ದಾಳೆ. ಈ ಮೂಲಕ ತಾನು ಅಬಲೆ ಎಂಬ ಮಾತನ್ನು ಸುಳ್ಳು ಮಾಡಿದ್ದಾಳೆ. ಅವಳ ಶಕ್ತಿಗೆ ಮತ್ತಶ್ಟು ಬಲವನ್ನು, ಬೆಂಬಲವನ್ನು ನೀಡಿದರೆ ಇನ್ನಶ್ಟು ಬಲಿಶ್ಟ ಸಮಾಜವನ್ನು ಕಟ್ಟುವ ಕನಸು ನನಸಾಗುವ ಸಾದ್ಯತೆಯಿದೆ.
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು