ಟೌಂಗ್ಯಿ ಬಲೂನ್ ಉತ್ಸವ

– .

ಟೌಂಗ್ಯಿ ಬಲೂನ್ ಉತ್ಸವವು ಮ್ಯಾನ್ಮಾರ್ ನ ಶಾನ್ ರಾಜ್ಯದ ರಾಜದಾನಿ ಟೌಂಗ್ಯಿಯಲ್ಲಿ ಪ್ರತಿ ವರ‍್ಶ ನಡೆಯುತ್ತದೆ. ಸಾಂಸ್ಕ್ರುತಿಕವಾಗಿ ತನ್ನದೇ ವೈವಿದ್ಯತೆಯನ್ನು ಹೊಂದಿರುವ ಈ ಉತ್ಸವವನ್ನು ಬೌದ್ದರ ಲೆಂಟ್ (ದ್ಯಾನ, ಪ್ರಾರ‍್ತನೆ, ಉಪವಾಸದ ದಿನಗಳು) ನಂತರದ ಬೆಳಕಿನ ಉತ್ಸವದ ಎರಡನೆಯ ಬಾಗದಲ್ಲಿ ಆಚರಿಸಲಾಗುತ್ತದೆ. ಇದು ಮಳೆಗಾಲದ ಕೊನೆಯನ್ನು ಸೂಚಿಸುವ ಮ್ಯಾನ್ಮಾರ್ ರಾಶ್ಟ್ರೀಯ ರಜಾದಿನವಾದ ತಜಾಂಗ್ಮೋನ್ ಹುಣ್ಣಿಮೆಯ ಆಚೀಚೆ ನಡೆಯುತ್ತದೆ. ಇದನ್ನು ‘ತಜಾಂಗ್ ಡೇಯಿಂಗ್ ಪೆಸ್ಟಿವಲ್ ಆಪ್ ಲೈಟ್ಸ್’ ಎಂದು ಕರೆಯಲಾಗುತ್ತದೆ.

ಟೌಂಗ್ಯಿ ಬಲೂನ್ ಉತ್ಸವವು ಈ ವರ‍್ಶ ನವೆಂಬರ್ 26ರಿಂದ ಪ್ರಾರಂಬವಾಗಲಿದೆ. ಸಾಂಪ್ರದಾಯಿಕವಾಗಿ ಇದು ಬೌದ್ದ ಮತ್ತು ಹಿಂದೂ ಕಗೋಳ ವಿಜ್ನಾನದಲ್ಲಿ ಬೇರೂರಿರುವ ಸಂಗತಿಯಾಗಿದೆ. ಇದರ ಮೂಲ ಉದ್ದೇಶ ದುಶ್ಟ ಶಕ್ತಿಗಳನ್ನು ದೂರವಿಡುವುದು. ಈ ಕಾರಣಕ್ಕಾಗಿ ಸ್ವರ‍್ಗದ ಕಡೆಗೆ ಅಲಂಕಾರಿಕ ಆಕಾಶಬುಟ್ಟಿಗಳನ್ನು ಹಾರಿ ಬಿಡುತ್ತಾರೆ. ಇದು ಸ್ತಳೀಯರ ದೇವರಾದ ಸುಲಾಮಣಿಗೆ ಸಲ್ಲಿಸುವ ಗೌರವ. ಇಲ್ಲಿನ ಜನರು ಇದನ್ನು ಸಂಗೀತ ಉತ್ಸವದ ರೀತಿಯಲ್ಲಿ ಆಚರಿಸಿ ಕುಣಿದು ಕುಪ್ಪಳಿಸಿ ಆನಂದಿಸುತ್ತಾರೆ.

ಈ ಹಾಟ್ ಏರ್ ಬಲೂನ್ ಸ್ಪರ‍್ದೆಯು ಹಗಲಿನಲ್ಲಿ ಮೊದಲಾಗಿ, ತಡರಾತ್ರಿಯವರೆಗೂ ನಡೆಯುತ್ತದೆ. ಈ ಸ್ಪರ‍್ದೆಯಲ್ಲಿ ಸ್ತಳೀಯ ಕುಟುಂಬಗಳಿಗೆ ಹಾಗೂ ಸುತ್ತಮುತ್ತಲಿನ ಹಳ್ಳಿಯವರಿಗೆ ತಮ್ಮ ಕೌಶಲ್ಯವನ್ನು ತೋರಿಸಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಈ ಉತ್ಸವದಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಪ್ರಾಣಿಗಳ ಆಕಾರದಲ್ಲಿ ರಚಿಸಲಾದ ದೊಡ್ಡ ಬಲೂನುಗಳು ಕಾಣ ಸಿಗುತ್ತವೆ. ಅನೇಕ ಪಕ್ಶಿಗಳಿಂದ ಮೊದಲ್ಗೊಂಡು ಹುಲಿ, ಸಿಂಹ, ಆನೆ ಮುಂತಾದ ಪ್ರಾಣಿಗಳ ಬಲೂನುಗಳು ಸೇರಿರುತ್ತವೆ. ರಾತ್ರಿಯ ಕತ್ತಲಿನಲ್ಲಿ ಬಾನಿಗೆ ಹಾರುತ್ತಿರುವ ಬಲೂನುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗಾಗಿ ಅಕ್ಕಪಕ್ಕದ ಹಳ್ಳಿಯ ಜನ ಕತ್ತಲಾಗುತ್ತಿದ್ದಂತೆ ತಮ್ಮ ಸರದಿಗೆ ಮುಗಿಬೀಳುತ್ತಾರೆ.

ಟೌಂಗ್ಯಿ ಬಲೂನ್ ಉತ್ಸವದಲ್ಲಿ ಎರಡು ವಿಬಾಗಗಳಿವೆ. ಮೊದಲನೇ ವಿಬಾಗದಲ್ಲಿ ಸುಂದರವಾಗಿ ಬೆಳಗಿಸಿದ ಬಲೂನುಗಳು, ಅಶ್ಟೇ ಗಂಬೀರವಾಗಿ ಪ್ರಶಾಂತವಾಗಿ ಗಗನಕ್ಕೇರುತ್ತವೆ. ಇವುಗಳಿಗೆ ಪಟಾಕಿಗಳನ್ನು ಲಗತ್ತಿಸಲಾಗಿರುತ್ತದೆ. ಮತ್ತೊಂದು ವಿಬಾಗದಲ್ಲಿನ ಬಲೂನುಗಳು ಕಾಗದದಿಂದ ಮಾಡಲ್ಪಟ್ಟಿರುತ್ತವೆ. ನಾಲ್ಕರಿಂದ ಆರು ಮೀಟರ್ ಎತ್ತರದ ಈ ಬಲೂನುಗಳ ಹೊರ ಬಾಗವನ್ನು ಬಹಳ ಸೊಗಸಾಗಿ ಅಲಂಕರಿಸಲ್ಪಟ್ಟಿರುತ್ತದೆ. ದೀಪಗಳನ್ನು ಇದರ ಹೊರಮೈಗೆ ಸೆಲೋಪೇನ್ ಟೇಪುಗಳಿಂದ ಅಂಟಿಸಲಾಗುತ್ತದೆ. ಇದು ಈ ಬಲೂನುಗಳಿಗೆ ಹೊಸ ಬಗೆಯ ನೋಟವನ್ನು ನೀಡುತ್ತದೆ. ಕತ್ತಲಾದ ನಂತರವಶ್ಟೇ ಇವುಗಳನ್ನು ಬಾನಿಗೇರಿಸಲಾಗುತ್ತದೆ. ಕತ್ತಲಲ್ಲಿ ವಿವಿದ ಬಣ್ಣಗಳಿಂದ ಬೆಳಗುತ್ತಿರುವ ಈ ಬಲೂನುಗಳು ಆಗಸವನ್ನೇ ಸುಂದರಗೊಳಿಸುತ್ತವೆ.

ಒಂದು ಬಲೂನು ಹಾರಿಸಿದ ನಂತರ ಮತ್ತೊಂದು ಬಲೂನು ಹಾರಿಸಲು ಆಗಬಹುದಾದ ಅನಾಹುತಗಳನ್ನು ತಪ್ಪಿಸಲು, ಅರ‍್ದ ಗಂಟೆಯಶ್ಟು ಅಂತರ ಕಾಪಾಡಿಕೊಳ್ಳಲಾಗುತ್ತದೆ. ಬಲೂನಿನ ಒಳ ಬಾಗದಲ್ಲಿ ಬೆಂಕಿಯ ಜ್ವಾಲೆಯನ್ನು ಉರಿಸುವ ಕಾರಣ, ಅದರೊಳಗಿನ ಗಾಳಿ ಬಿಸಿಯಾಗುತ್ತದೆ, ಈ ಬಿಸಿ ಗಾಳಿ ಬಲೂನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಇದರಲ್ಲಿನ ಪಟಾಕಿಗಳು ನೂರು ಮೀಟರ್ ಮೇಲಕ್ಕೆ ಏರುತ್ತಿದ್ದಂತೆ ಬಹು ಬಣ್ಣದೊಂದಿಗೆ ಸಿಡಿಯಲು ಪ್ರಾರಂಬಿಸುತ್ತವೆ. ಹತ್ತರಿಂದ ಹದಿನೈದು ನಿಮಿಶಗಳವರೆಗೆ ನಡೆಯುವ ಈ ವೈವಿದ್ಯಮಯ ಪಟಾಕಿ ಸಿಡಿಯುವ ದ್ರುಶ್ಯ ಅತ್ಯಂತ ರೋಮಾಂಚಕವಾಗಿರುತ್ತದೆ.

ಬೆಂಕಿಯ ಜೊತೆ ಸರಸವಾಡುವಾಗ ಎಚ್ಚರಿಕೆ ಬಹಳ ಅಗತ್ಯ. ಟೌಂಗ್ಯಿ ಬಲೂನ್ ಉತ್ಸವ ಸಹ ಇದಕ್ಕೆ ಹೊರತಾಗಿಲ್ಲ. ಅಸಮರ‍್ಪಕ ಕಾರ‍್ಯದಿಂದ ಕೆಲವೊಮ್ಮೆ ಅನಾಹುತಗಳು ಸಂಬವಿಸಿದ ಉದಾಹರಣೆಗಳಿವೆ. ಬಲೂನು ಮೇಲಕ್ಕೆ ಹಾರುವ ಮುನ್ನವೇ ಪಟಾಕಿ ಸಿಡಿದು, ನೆರೆದಿದ್ದ ನೋಡುಗರ ಗುಂಪಿನ ಮೇಲೆ ಬೀಳುವುದು ಅತವಾ ಆಕಾಶದಲ್ಲೇ ಬಲೂನ್ ಸಿಡಿಯುವುದು ಅನೇಕ ಬಾರಿ ಸಂಬವಿಸಿದೆ. ನೋಡುಗರಿಗೆ ಗಾಯಗಳಾದ ನಿದರ‍್ಶನ ಮಾತ್ರವಲ್ಲದೆ ಕೆಲವೊಮ್ಮೆ ಪ್ರಾಣ ಹಾನಿಯಾದ ದುಕ್ಕಕರ ವರದಿಗಳೂ ಇವೆ. ಇವುಗಳನ್ನು ಮನಗಂಡು ಸೂಕ್ತ ಕಾಳಜಿ ಮತ್ತು ರಕ್ಶಣಾ ವ್ಯವಸ್ತೆಯನ್ನು ಮಾಡಿರುವ ಹಿನ್ನಲೆಯಲ್ಲಿ ಈ ಅತ್ಯಂತ ರೋಮಾಂಚಕ ಬಲೂನಿನ ಉತ್ಸವವನ್ನು ಅನುಬವಿಸಬಹುದು.

ಈ ರೀತಿಯಲ್ಲಿ ಅಲಂಕಾರಿಕ ಆಕಾಶ ಬುಟ್ಟಿಗಳನ್ನು ಹಾರಿ ಬಿಡುವ ಸ್ಪರ‍್ದೆಯನ್ನು ಬ್ರಿಟೀಶರು 19ನೇ ಶತಮಾನದಲ್ಲಿ ಪ್ರಾರಂಬಿಸಿದರು ಎನ್ನಲಾಗುತ್ತದೆ. ಟೌಂಗ್ಯಿ ಬಲೂನಿನ ಉತ್ಸವದ ಸಮಯದಲ್ಲಿ ಶಾನ್ ನಲ್ಲಿನ ವಸತಿ ಗ್ರುಹಗಳ ಬೆಲೆ ತೀವ್ರವಾಗಿ ಹೆಚ್ಚಾಗುತ್ತದೆ. ಹಾಗಾಗಿ ಹತ್ತಿರದ ಪಟ್ಟಣ ನ್ಯಾವುಂಗ್ ಶ್ಯೂ ನಲ್ಲಿ ತಂಗಬಹುದು. ನ್ಯಾವುಂಗ್ ಶ್ಯೂನಿಂದ ಶಾನ್ ಗೆ ಕೇವಲ 45 ನಿಮಿಶಗಳ ಪ್ರಯಾಣ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, go-myanmar.com, asiadmc.com, thediplomat.com, sonasia-holiday.com, rove.me )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಇಂದು ನನ್ನ ಬರಹವನ್ನು ಹೊನಲುವಿನಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಸರ್

ಅನಿಸಿಕೆ ಬರೆಯಿರಿ:

Enable Notifications OK No thanks