ನಾ ನೋಡಿದ ಸಿನೆಮಾ: ಆಚಾರ್ & ಕೋ

– ಕಿಶೋರ್ ಕುಮಾರ್.

ಅರವತ್ತು ಎಪ್ಪತ್ತರ ದಶಕದ ಕತೆ ಇರುವ ಸಿನೆಮಾಗಳನ್ನು ತೆರೆಯ ಮೇಲೆ ತರುವುದು ಇತ್ತೀಚಿನ ಟ್ರೆಂಡ್ ಅನ್ನಬಹುದು. ಈ ವಿಶಯದಲ್ಲಿ ಕನ್ನಡ ಸಿನೆಮಾರಂಗವೂ ಸಹ ಹಿಂದೆ ಬಿದ್ದಿಲ್ಲ. ಚಕ್ರವರ್‍ತಿ (2017), ಕೆ.ಜಿ.ಎಪ್-1 (2018), ಬೆಲ್ ಬಾಟಮ್(2019), ಕೆ.ಜಿ.ಎಪ್-2 (2022) ಹೀಗೆ ಹಲವು ಸಿನೆಮಾಗಳು ಕನ್ನಡಿಗರನ್ನು ರಂಜಿಸಿವೆ. ಈ ಸಾಲಿಗೆ ಸೇರುವ ಮತ್ತೊಂದು ಸಿನೆಮಾ ಆಚಾರ್ & ಕೋ. ಕನ್ನಡಿಗರಿಗೆ ಸದಬಿರುಚಿ ಸಿನೆಮಾಗಳನ್ನು ನೀಡುವಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾ‍ರ್ ಅವರ ಒಡೆತನದ ಪಿ.ಆರ್.ಕೆ ಪ್ರೊಡಕ್ಶನ್ಸ್ ಎಂದಿಗೂ ಮುಂದು. ಈ ಮಾತಿನಂತೆ ಈಗ ಪಿ.ಆ‍ರ್.ಕೆ ಪ್ರೊಡಕ್ಶನ್ ಅಡಿಯಲ್ಲಿ ಮೂಡಿಬಂದಿರುವ ಆಚಾ‍ರ್ & ಕೋ ಕನ್ನಡಿಗರನ್ನು ರಂಜಿಸುವಲ್ಲಿ ಗೆದ್ದಿದೆ.

ಸುಮಾರು 60 ವರುಶ ಹಳೆಯ ಕಾಲಗಟ್ಟವನ್ನು ಹುಟ್ಟುಹಾಕಿ ಸಿನೆಮಾ ಮಾಡುವುದು ಅಶ್ಟು ಸುಲಬದ ಕೆಲಸವಲ್ಲ. ಪ್ರತಿಯೊಂದು ವಸ್ತು, ಕಟ್ಟಡ, ರಸ್ತೆ, ಸುದ್ದಿ ಹಾಳೆ ಹೀಗೆ ಒಂದೊಂದನ್ನೂ ಎಚ್ಚರ ವಹಿಸಿ ಆ ಕಾಲಗಟ್ಟದ್ದೆ ಎನಿಸುವ ಮಟ್ಟಿಗೆ ತೆರೆಯ ಮೇಲೆ ತರಬೇಕಾಗುತ್ತದೆ. ಇದಿಶ್ಟೇ ಅಲ್ಲದೆ, ಆ ಕಾಲಗಟ್ಟದ ದಿನ ನಿತ್ಯದ ಬದುಕಿನ ಚಿತ್ರಣ, ಪದ್ದತಿಗಳು, ಆಗಿನವರ ಉಡುಗೆ ತೊಡುಗೆ ಹೀಗೆ ಎಲ್ಲೆಡೆ ಎಚ್ಚರ ವಹಿಸಬೇಕು. ಇವೆಲ್ಲವನ್ನೂ ಅಚ್ಚುಕಟ್ಟಾಗಿ ಒಳಗೊಂಡ ಅರವತ್ತು ಎಪ್ಪತ್ತರ ದಶಕದ ಬೆಂಗಳೂರಿನ ಒಂದು ದೊಡ್ಡ ಕುಟುಂಬದ ಕತೆಯೇ ಆಚಾರ್ & ಕೋ.

ಎಲ್ಲರ ಕಣ್ಣುಕುಕ್ಕುವಂತೆ ಬಾಳಿದ ಒಂದು ದೊಡ್ಡ ಕುಟುಂಬದ ಹೊಣೆ ಹೊತ್ತ ಅಪ್ಪ ತೀರಿಕೊಂಡರೆ ಆ ಕುಟುಂಬದ ಪ್ರತಿಯೊಬ್ಬರ ಬದುಕು ಹೇಗೆ ಬದಲಾಗುತ್ತವೆ ಎನ್ನುವ ಎಳೆಯನ್ನು ಇಟ್ಟುಕೊಂಡು ಕತೆ ಹೆಣೆಯಲಾಗಿದೆ. ಸಿಂದು ಶ್ರೀನಿವಾಸ ‍ಮೂರ್‍ತಿ ಅವರು ಈ ಸಿನೆಮಾವನ್ನು ನಿರ‍್ದೇಶಿಸಿ, ಮುಕ್ಯ ಪಾತ್ರದಾರಿಯಾಗಿಯೂ ನಟಿಸಿದ್ದು, ನಿರ‍್ದೇಶನ ಹಾಗೂ ನಟನೆ ಎರಡನ್ನೂ ಅಚ್ಚುಕಟ್ಟಾಗಿ ನಿಬಾಯಿಸಿದ್ದಾರೆ. ಅಬಿಮನ್ಯು ಸದಾನಂದನ್ ಅವರ ಸಿನೆಮಾಟೋಗ್ರಪಿ ಚೆನ್ನಾಗಿ ಮೂಡಿಬಂದಿದ್ದು, ಬಿಂದು ಮಾಲಿನಿ ಅವರ ಸಂಗೀತವಿದೆ. ಹೊಂದಿಸಿ ಬರೆಯಿರಿ ಚಿತ್ರದಲ್ಲಿ ನಟಿಸಿ ನೋಡುಗರನ್ನು ನಗಿಸಿದ್ದ ಅನಿರುದ್ ಆಚಾರ‍್ಯ ಅವರು ಇಲ್ಲೂ ಸಹ ನಗಿಸುತ್ತಾರೆ. ಪೋಶಕ ನಟರಾಗಿ ಅಶೋಕ್ ಹಾಗೂ ಸುದಾ ಬೆಳವಾಡಿ ಅವರು ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನುಳಿದ ಸಹ ನಟರೂ ಸಹ ತಮ್ಮ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಬಾಯಿಸಿದ್ದು, ಅಶೋಕ್ ಹಾಗೂ ಸುದಾ ಬೆಳವಾಡಿ ಅವರನ್ನು ಹೊರತು ಪಡಿಸಿ ಉಳಿದವರೆಲ್ಲರಲ್ಲೂ ಹೊಸಬರೇ ಎನ್ನಬಹುದು.

ಆಯ್ದುಕೊಂಡ ಕತೆ, ನಟನೆ, ಚಿತ್ರವನ್ನು ತೆಗೆದುಕೊಂಡು ಹೋಗುವ ರೀತಿ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ನೋಡುಗರನ್ನು ಅರವತ್ತು ಎಪ್ಪತ್ತರ ದಶಕದಲ್ಲೇ ಇದ್ದೀವಿ ಅನ್ನಿಸುವ ರೀತಿ ಚಿತ್ರ ಹಿಡಿದಿಡುತ್ತದೆ. ಇದರೊಟ್ಟಿದೆ ಹಾಡುಗಳು ಇನ್ನು ಸ್ವಲ್ಪ ಚೆನ್ನಾಗಿರಬಹುದಿತ್ತು, ಚಿತ್ರೀಕರಣವೂ ಸಹ ಮನೆ, ಶಾಲೆ, ಆಪೀಸು, ಮದುವೆ ಮನೆ ಹಾಗೂ ಮತ್ತೊಂದೆರಡು ಕಡೆಯಲ್ಲೇ ಮುಗಿಸಿದಂತೆ ಕಾಣುತ್ತದೆ. ಇಂತಹ ಕೆಲವು ಸಣ್ಣ ವಿಶಯಗಳನ್ನು ಹೊರತುಪಡಿಸಿದರೆ, ಒಂದೊಳ್ಳೆ ಸದಬಿರುಚಿಯ ಚಿತ್ರ ಆಚಾ‍ರ್ & ಕೋ.

(ಚಿತ್ರ ಸೆಲೆ: in.bookmyshow.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks