ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 2)

– ಸಿ.ಪಿ.ನಾಗರಾಜ.

 

ನೋಟ – 2

ಮನದ ಅನುತಾಪದಿನ್ ಪ್ರಜೆಯನು ಆರೈವುದನು ಮರೆದು, ಎರಡು ಮೂರು ದಿವಸಮ್ ಇರ್ದು, ಬಳಿಕ “ಜನಮ್ ಅಲಸಿದಪುದು” ಎಂದು ರಾತ್ರಿಯೊಳು ಪೊರಮಟ್ಟು, ದಿನಪ ಕುಲತಿಲಕನು ಏಕಾಂತದೊಳು ನಗರ ಶೋಧನೆಯ ಚಾರರೊಳು ಒರ್ವನನು ಕರೆಸಿ ವಿನಯೋಕ್ತಿಯಿಂದೆ ಇಂತೆಂದು ಕೇಳ್ದನು.

ರಾಮ: ಇನ್ನೆಗಮ್ ಪ್ರಜೆಗಳು ನಿಂದಿಸರಲೇ; ತನ್ನ ಗುಣಕೆ ಪಳಿವನು ಒಂದಿಸರಲೇ…ಅಮಲತರ ಕೀರ್ತಿಯನು ಕಂದಿಸರಲೇ…ಭುಜವಿಜಯ ಪ್ರತಾಪ ತೇಜವನು ಇಳೆಯೊಳು ದೂಸರಿಂದೆ ನಂದಿಸರಲೇ… ನಿಜವಂಶದೇಳ್ಗೆಯನು ಜರೆದು ಕುಂದಿಸರಲೇ… ವಹಮಾನದೊಳು ಕೊಂಕುಕೊರತೆಗಳನು ಖೋಡಿಗಳೆದು ಸಂಧಿಸರಲೇ.
(ಎಂದು ಅವನನು ಅಸುರಾರಿ ಬೆಸಗೊಂಡನು.)
ಚಾರ: ದೇವ ನಿನ್ನನು ಪೆಸರಿಸಿದನ್ ಈಶನ್ ಆದಪನು; ಸೇವಿಸಿದವನು ಚತುರ್ಮುಖನಾಗಲು ಉಳ್ಳವನು; ಕಾವುದು ಎಂದು ಐದೆ ಮರೆವೊಕ್ಕವನು ಜಗದೊಳು ಆಚಂದ್ರಾರ್ಕಮಾಗಿ ಬಾಳ್ವನು; ಶ್ರೀವಿಭವದಿನ್ ಶಕ್ರಪದವಿಯನು ಜರೆದಪನು; ಭೂವಲಯದೊಳು ನಿಂದಿಸುವರುಂಟೆ. ತರಣಿಯನು ಕಾವಳಮ್ ಮುಸುಕಿರ್ದೊಡೆ ಏನಪ್ಪುದು.
(ಎಂದು ಅವನು ಬಿನ್ನೈಸಿ ಕೈಮುಗಿದನು.)
ರಾಮ: ಏನಾದೊಡಮ್ ಈ ಮಾತು ಕಟಕಿಯಾಗಿರ್ಪುದು. “ಭಾನುವಮ್ ಕಾವಳಮ್ ಮುಸುಕಲೇನು” ಎನಲು, ಎನ್ನ ಅಧೀನವಾದ ಅರಸುತನಕೆ ಆವುದು ಊಣೆಯವು ಎಂಬರು.
(ಎಂದು ರಘುಪತಿ ಕೇಳಲು…)
ಚಾರ: ಲೋಕದ ಜನಕೆ ಜಗದೊಳು ನೀನೆ ಪಾವನರೂಪನು ಎಂಬುದನು ಮುನಿಯ ವಧು ತಾನೆ ತೋರಿಸಳೆ. ಅಜ್ಞಾನಿಗಳು ನುಡಿದ ನಿಂದೆಯನು ಉಸಿರಲಮ್ಮೆನು.
(ಎಂದು ಅವನು ಪದದೊಳು ಎರಗಿದನು.)
ರಾಮ: ಏಳು ಅಂಜಬೇಡ. ಇನ್ನು ಮಾಜದಿರು. ಹೇಳು ತನ್ನಾಣೆ.
(ಎಂದು ರಘುಕುಲಲಲಾಮನು ಒತ್ತಾಯದಿನ್ ಕೇಳಲು ಅವನು ಎಂದನು.)
ಚಾರ: ಜೀಯ ಅವಧರಿಸು, ಮಲಿನಮನ್ ತೊಳೆವನಾಗಿ ಒರ್ವ ಮಡಿವಳನು ಸದ್ಗುಣಚರಿತ್ರ ನಾಮಾಳಿಯನು ಕಾಳುಗೆಡೆದನು. ಜಗಮನ್ ಪುನೀತಮಮ್ ಮಾಳ್ಪ ನಿನ್ನ ಏಳಿಗೆಯನು ಅವನೆತ್ತ ಬಲ್ಲನು.
(ಎನಲು…)
ರಾಮ: ಏನ್ ಎಂದನು.
(ಎನಲು, ಆತನು ಇಂತು ಎಂದನು.)
ಚಾರ: ಪೆಂಡತಿ ತವರ್ಮನೆಗೆ ಮುಳಿದು ಪೇಳದೆ ಪೋದ ಚಂಡಿತನಕೆ, ಅವಳ ತಾಯ್ತಂದೆಗಳು ಕಳುಹಬಂದು ಅಂಡಲೆದೊಡೆ, “ಇನ್ನು ಒಲ್ಲೆನು. ಅಗಲಿರ್ದ ಮಡದಿಯನು ಮತ್ತೆ ರಘುನಾಥನಂತೆ ಕೊಂಡು ಆಳುವವನಲ್ಲ ತಾನು” ಎಂದು ರಜಕನು ಉದ್ದಂಡದೊಳು ನುಡಿಯೆ, ಕಿವಿಮುಚ್ಚಿಕೊಳುತ ಎಯ್ದಿದೆನು. ಅಖಂಡಿತದ ಮಂತ್ರಪೂತದ ಹವಿಯನು ಅರಿದು ಎಂಜಲಿಪುದೆ ವಾಯಸಮ್.
(ಎಂದು ಬಿನ್ನೈಸೆ…ಕೇಳ್ದು, ಆತನನು ಕಳುಹಿ ರಘು ನಂದನನು ಬಂಧನಕ್ಕೆ ಒಳಗಾದ ಮತ್ತಗಜದ ಅಂದದಿನ್ ನಿಜಶಿರವನು ಒಲೆದು… ಮೂಗಿನ ಮೇಲೆ ಬೆರಳಿಟ್ಟು… ಮೌನದಿಂದೆ ನಿಂದು… ಸೈವೆರಗಾಗಿ… ನೆನೆ ನೆನೆದು ಚಿತ್ತದೊಳು ನೊಂದು ಬಿಸುಸುಯ್ದು… ಕಡುಪಳಿದು ಕಾತರಿಸಿ ಕಳೆಗುಂದಿ… ದುಮ್ಮಾನದಿನ್ ಪುತ್ತ ಪುಗುವ ಅಹಿಪನಂತೆ ಅಂತಃಪುರಕೆ ಪೊಕ್ಕನು.)

ಪದವಿಂಗಡಣೆ ಮತ್ತು ತಿರುಳು

ಅನುತಾಪ+ಇನ್; ಅನುತಾಪ=ಬೇಗೆ/ಉರಿ; ಮನದ ಅನುತಾಪ=ಮನಸ್ಸಿನ ಸಂಕಟ/ವೇದನೆ; ಆರಯ್=ಕಾಪಾಡು;

ಮನದ  ಅನುತಾಪದಿನ್  ಪ್ರಜೆಯನು  ಆರೈವುದನು  ಮರೆದು ಎರಡು ಮೂರು ದಿವಸಮ್ ಇರ್ದು ಬಳಿಕ=ಕೆಟ್ಟ ಕನಸಿನಿಂದ ಮಾನಸಿಕವಾಗಿ ಗಾಸಿಗೊಂಡಿರುವ ರಾಮನು ಸೀತೆಗೆ ಏನಾಗುವುದೋ ಎಂಬ ಆತಂಕದಿಂದ ಸಂಕಟಪಡುತ್ತ ಪ್ರಜೆಗಳ ಹಿತವನ್ನೇ ಮರೆತಿದ್ದವನು, ಎರಡು ಮೂರು ದಿನಗಳ ನಂತರ;

ಅಲಸು=ಬೇಸರಗೊಳ್ಳು/ಜುಗುಪ್ಸೆ ಹೊಂದು; ಪೊರಮಡು=ತೆರಳು/ಹೊರಡು;

“ಜನಮ್  ಅಲಸಿದಪುದು” ಎಂದು ರಾತ್ರಿಯೊಳು ಪೊರಮಟ್ಟು=ನಾನು ಹೀಗಿದ್ದರೆ ಪ್ರಜೆಗಳು ನನ್ನ ಬಗ್ಗೆ ಬೇಸರಪಟ್ಟುಕೊಳ್ಳುವರು ಎಂಬ ಆತಂಕದಿಂದ ರಾಮನು ಒಂದು ದಿನ ರಾತ್ರಿಯ ಸಮಯದಲ್ಲಿ ಅರಮನೆಯಿಂದ ಹೊರಟು;

ದಿನಪ=ಸೂರ್‍ಯ; ಕುಲ=ವಂಶ; ತಿಲಕ=ಉತ್ತಮನಾದ ವ್ಯಕ್ತಿ;

ದಿನಪಕುಲತಿಲಕ=ರಾಮ. ಇದೊಂದು ಗುಣವಾಚಕ ನುಡಿಗಟ್ಟು. ಸೂರ್‍ಯವಂಶದಲ್ಲಿಯೇ ಉತ್ತಮನೆಂದು ಹೆಸರನ್ನು ಪಡೆದಿರುವ ವ್ಯಕ್ತಿಯಾದ ರಾಮ;

ಏಕಾಂತದೊಳು=ಒಬ್ಬಂಟಿಯಾಗಿ; ಶೋಧನೆ=ಪರಿಶೀಲನೆ; ಚಾರ=ದೂತ; ನಗರ ಶೋಧನೆಯ ಚಾರ=ನಗರದ ಗುಪ್ತಚಾರ. ನಗರದಲ್ಲಿ  ಮಾರುವೇಶದಿಂದ ಸಂಚರಿಸುತ್ತ ಪ್ರಜೆಗಳ ಬಗೆಗಿನ ಮಾಹಿತಿಗಳನ್ನು ರಾಜನಿಗೆ ಗುಟ್ಟಾಗಿ ತಿಳಿಸುವ ದೂತ; ವಿನಯ+ಉಕ್ತಿ+ಇಂದೆ; ವಿನಯ=ಆದರ/ವಿಶ್ವಾಸ; ಉಕ್ತಿ=ಮಾತು/ನುಡಿ;

ದಿನಪ ಕುಲತಿಲಕನು  ಏಕಾಂತದೊಳು  ನಗರ ಶೋಧನೆಯ ಚಾರರೊಳು ಒರ್ವನನು  ಕರೆಸಿ ವಿನಯೋಕ್ತಿಯಿಂದೆ ಇಂತೆಂದು ಕೇಳ್ದನು=ರಾಮನು ಏಕಾಂತದಲ್ಲಿ ಅಯೋದ್ಯಾ ನಗರದ ಗುಪ್ತಚಾರರಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆಯಿಸಿ, ಆತ್ಮೀಯವಾದ ನುಡಿಯಿಂದ ಈ ರೀತಿ ಕೇಳಿದನು;

ಇನ್ನೆಗಮ್=ಇದುವರೆಗೂ/ಇಂದಿನ ತನಕ; ನಿಂದೆ=ತೆಗಳಿಕೆ/ಬಯ್ಯುವಿಕೆ;

ಇನ್ನೆಗಮ್  ಪ್ರಜೆಗಳು ನಿಂದಿಸರಲೇ=ಇದುವರೆಗಿನ ನನ್ನ ಆಡಳಿತದಲ್ಲಿ ಉಂಟಾಗಿರಬಹುದಾದ ಯಾವುದಾದರೂ ತಪ್ಪುಗಳನ್ನು ಕುರಿತು ಪ್ರಜೆಗಳು ನನ್ನನ್ನು ತೆಗಳುತ್ತಿಲ್ಲವೇ?

ಗುಣ=ನಡತೆ; ಪಳಿವು=ಆರೋಪ; ಒಂದಿಸು=ಕೂಡಿಸು/ಸೇರಿಸು;

ತನ್ನ ಗುಣಕೆ ಪಳಿವನು ಒಂದಿಸರಲೇ=ನನ್ನ ನಡೆನುಡಿಯನ್ನು ಕುರಿತು ಯಾವುದೇ ಬಗೆಯ ಆರೋಪವನ್ನು ಮಾಡುತ್ತಿಲ್ಲವೇ?

ಅಮಲ=ಕೊಳೆಯಿಲ್ಲದ; ತರ=ರೀತಿ/ಬಗೆ; ಕೀರ್ತಿ=ಯಶಸ್ಸು; ಕಂದಿಸು=ಕಳಂಕ ಹಚ್ಚು;

ಅಮಲತರ ಕೀರ್ತಿಯನು  ಕಂದಿಸರಲೇ=ನಮ್ಮ ರಾಜ ಮನೆತನಕ್ಕಿರುವ ದೊಡ್ಡ ಹೆಸರಿಗೆ ಕಳಂಕವನ್ನು ಹಚ್ಚುತ್ತಿಲ್ಲವೇ?

ಭುಜ=ತೋಳು; ವಿಜಯ=ಗೆಲುವು; ಪ್ರತಾಪ=ಶಕ್ತಿ/ಪರಾಕ್ರಮ; ತೇಜ=ಹೊಳಪು/ಕಾಂತಿ; ಇಳೆ+ಒಳು; ಇಳೆ=ಭೂಮಿ; ದೂಸರ್+ಇಂದೆ; ದೂಸರು=ಅಪವಾದ; ನಂದಿಸು=ನಾಶಮಾಡು/ಇಲ್ಲದಂತೆ ಮಾಡು;

ಭುಜವಿಜಯ ಪ್ರತಾಪ ತೇಜವನು  ಇಳೆಯೊಳು  ದೂಸರಿಂದೆ ನಂದಿಸರಲೇ=ನಮ್ಮ ತೋಳ್ಬಲದ ಪರಾಕ್ರಮದಿಂದ ಪಡೆದಿರುವ ತೇಜಸ್ಸನ್ನು  ಯಾವುದೇ ಬಗೆಯ ಅಪವಾದದಿಂದ ನಾಶಪಡಿಸುತ್ತಿಲ್ಲವೇ?

ನಿಜ+ವಂಶದ+ಏಳ್ಗೆಯನು; ನಿಜ=ತನ್ನ; ವಂಶ=ಮನೆತನ; ಏಳ್ಗೆ=ಶ್ರೇಯಸ್ಸು/ಬೆಳವಣಿಗೆ; ಜರೆ=ನಿಂದಿಸು/ತೆಗಳು; ಕುಂದಿಸು=ಕುಗ್ಗಿಸು/ತಗ್ಗಿಸು;   

ನಿಜವಂಶದೇಳ್ಗೆಯನು  ಜರೆದು ಕುಂದಿಸರಲೇ=ನಮ್ಮ ಸೂರ್‍ಯವಂಶದ ಬೆಳವಣಿಗೆಯನ್ನು ನಿಂದಿಸಿ, ವಂಶದ ಹೆಸರನ್ನು ಕೆಡಿಸುತ್ತಿಲ್ಲವೇ?

ವಹಮಾನ=ನಡತೆ/ಶೀಲ; ಕೊಂಕು=ವಕ್ರತೆ/ಡೊಂಕು; ಕೊರತೆ=ಕಡಿಮೆ; ಖೋಡಿಗಳೆ=ಅಲ್ಲಗಳೆ/ತಿರಸ್ಕರಿಸು; ಸಂಧಿಸು=ವಿರೋಧಿಸು/ಎದುರಾಡುವದು;

ವಹಮಾನದೊಳು   ಕೊಂಕುಕೊರತೆಗಳನು  ಖೋಡಿಗಳೆದು  ಸಂಧಿಸರಲೇ=ನನ್ನ ನಡೆನುಡಿಯಲ್ಲಿ  ಕಂಡುಬರುವ ಯಾವುದಾದರೂ ಅರೆಕೊರೆಗಳನ್ನು ಅಂದರೆ ಪ್ರಜೆಗಳಿಗೆ ನೋವು ಇಲ್ಲವೇ ಕೇಡನ್ನುಂಟುಮಾಡುವ ವರ್‍ತನಗೆಳನ್ನು ಅಲ್ಲಗಳೆದು, ನಮ್ಮ ಆಡಳಿತಕ್ಕೆ ಎದುರಾಗಿ  ಮಾತನಾಡುತ್ತಿಲ್ಲವೇ?

ಅಸುರ+ಅರಿ; ಅಸುರ=ರಕ್ಕಸ; ಅರಿ=ಹಗೆ/ಶತ್ರು; ಅಸುರಾರಿ=ರಕ್ಕಸರ ಹಗೆಯಾದ ರಾಮ; ಬೆಸಗೊಳ್=ಕೇಳು/ವಿಚಾರಿಸು;

ಎಂದು  ಅವನನು ಅಸುರಾರಿ ಬೆಸಗೊಂಡನು=ರಾಮನು ನಗರದ ಗುಪ್ತಚಾರನನ್ನು ಈ ರೀತಿಯಲ್ಲಿ ವಿಚಾರಿಸಿದನು;

ಪೆಸರ್=ಹೆಸರು; ಈಶ=ಶಿವ;

ನಿನ್ನನು  ಪೆಸರಿಸಿದನ್ ಈಶನ್ ಆದಪನು=’ರಾಮ’ ಎಂಬ ನಿನ್ನ ಹೆಸರನ್ನು ಹೇಳಿದವನು ಶಿವನಾಗುತ್ತಾನೆ; ಅಂದರೆ ಸಾಮಾನ್ಯ ಮಾನವನು ದೇವರೇ ಆಗುತ್ತಾನೆ;

ಸೇವಿಸು=ಸೇವೆ ಮಾಡು/ಉಪಚರಿಸು; ಚತುರ್ಮುಖನ್+ಆಗಲು; ಚತುರ್ಮುಖ=ಬ್ರಹ್ಮ ದೇವ; ಉಳ್=ಇರು;

ಸೇವಿಸಿದವನು  ಚತುರ್ಮುಖನಾಗಲು ಉಳ್ಳವನು=ನಿನ್ನ ಸೇವೆಯನ್ನು ಮಾಡಿದವನು ಬ್ರಹ್ಮನಾಗುತ್ತಾನೆ;

ಕಾ=ಕಾಪಾಡು/ಸಲಹು; ಕಾವುದು=ಕಾಪಾಡುವುದು/ಸಲಹುವುದು; ಐದೆ=ಸಮೀಪಿಸು/ಹತ್ತಿರಕ್ಕೆ ಬರು;ಮರೆಹೊಗು=ಶರಣಾದವನು; ಆಚಂದ್ರ+ಅರ್ಕಮ್+ಆಗಿ; ಅರ್ಕ=ಸೂರ್‍ಯ; ಆಚಂದ್ರಾರ್ಕ=ಚಂದ್ರ ಮತ್ತು ಸೂರ್‍ಯ ಇರುವ ತನಕ. ಅಂದರೆ ಶಾಶ್ವತವಾಗಿ ಬಹುಕಾಲ;

ಕಾವುದು ಎಂದು ಐದೆ ಮರೆವೊಕ್ಕವನು   ಜಗದೊಳು ಆಚಂದ್ರಾರ್ಕಮಾಗಿ ಬಾಳ್ವನು= ನಿನ್ನನ್ನೇ ನಂಬಿಕೊಂಡು ನಿನ್ನ ಬಳಿಬಂದು ಶರಣಾದವನು ಸೂರ್‍ಯಚಂದ್ರರು ಇರುವ ತನಕ ಬಾಳುತ್ತಾನೆ;

ಶ್ರೀ+ವಿಭವ+ಇನ್; ಶ್ರೀ=ಸಿರಿ/ಸಂಪತ್ತು; ವಿಭವ=ಹಿರಿಮೆ; ಇನ್=ಇಂದ; ಶಕ್ರ=ಇಂದ್ರ; ಜರೆ=ತಿರಸ್ಕರಿಸು;

ಶ್ರೀವಿಭವದಿನ್  ಶಕ್ರಪದವಿಯನು  ಜರೆದಪನು=ಸಿರಿಸಂಪತ್ತಿನಲ್ಲಿ ಇಂದ್ರನಿಗಿಂತಲೂ ಮಿಗಿಲಾಗಿರುತ್ತಾನೆ;  ಭೂವಲಯದೊಳು  ನಿಂದಿಸುವರುಂಟೆ=ಬೂಮಂಡಲದಲ್ಲಿ ನಿನ್ನನ್ನು ನಿಂದಿಸುವವರು ಇದ್ದಾರೆಯೆ. ಅಂದರೆ ಯಾರೊಬ್ಬರೂ ನಿನ್ನನ್ನು ನಿಂದಿಸುತ್ತಿಲ್ಲ;

ತರಣಿ+ಅನ್; ತರಣಿ=ಸೂರ್‍ಯ; ಕಾವಳ+ಅಮ್; ಕಾವಳ=ಮಬ್ಬು/ಕತ್ತಲೆ; ಮುಸುಕಿ+ಇರ್ದೊಡೆ; ಮುಸುಕು=ಆವರಿಸು/ಕವಿ/ಮುಚ್ಚು; ಇರ್ದೊಡೆ=ಇದ್ದರೆ; ಏನ್+ಅಪ್ಪುದು;

ತರಣಿಯನು  ಕಾವಳಮ್  ಮುಸುಕಿರ್ದೊಡೆ ಏನಪ್ಪುದು=ಸೂರ್‍ಯನನ್ನು  ತುಸುಸಮಯ ಮಬ್ಬು ಆವರಿಸಿಕೊಂಡರೆ ಏನಾಗುವುದು. ಅಂದರೆ ಅದರಿಂದ ಸೂರ್‍ಯನ ಕಿರಣಗಳ ತೇಜಸ್ಸು ಶಾಶ್ವತವಾಗಿ ಮರೆಯಾಗುವುದಿಲ್ಲ. ಮತ್ತೆ ಕೆಲಸಮಯದ ನಂತರ ಸೂರ್‍ಯ ಕಿರಣಗಳು ಬೆಳಗುತ್ತವೆ;

ಎಂದು ಅವನು ಬಿನ್ನೈಸಿ ಕೈಮುಗಿದನು=ಗುಪ್ತಚಾರನು ಈ ರೀತಿ ಹೇಳಿ ಕಯ್ ಮುಗಿದನು;

ಕಟಕಿ+ಆಗಿ+ಇರ್ಪುದು; ಕಟಕಿ=ಚುಚ್ಚುಮಾತು/ವ್ಯಂಗ್ಯ; ಇರ್ಪುದು=ಇರುವುದು;

 ಏನಾದೊಡಮ್  ಈ ಮಾತು ಕಟಕಿಯಾಗಿರ್ಪುದು=ನನ್ನ ಮನಸ್ಸಿಗೆ ನೋವಾಗುವಂತಹ ಏನೋ ಒಂದು ಸಂಗತಿಯು ನಡೆದಿದೆ ಎಂಬುದನ್ನು ನಿನ್ನ ಮಾತುಗಳು ಸೂಚಿಸುತ್ತಿವೆ; ಭಾನು+ಅಮ್;

ಭಾನು=ಸೂರ್‍ಯ; ಮುಸುಕಲ್+ಏನು;

ಭಾನುವಮ್  ಕಾವಳಮ್   ಮುಸುಕಲೇನು  ಎನಲು=ಸೂರ್ಯನನ್ನು ಮಬ್ಬು ಆವರಿಸಿತು ಎನ್ನುವ ನುಡಿಗಳಲ್ಲಿ;

ಎನ್ನ=ನನ್ನ; ಅಧೀನ+ಆದ; ಅಧೀನ=ಕಯ್ ಕೆಳಗಿನ, ಅಂದರೆ ನನ್ನ ನಡೆನುಡಿಯಲ್ಲಿ; ಅರಸುತನ=ರಾಜ್ಯದ ಆಡಳಿತ; ಆವುದು=ಯಾವುದು; ಊಣೆಯ=ಕುಂದು/ಕೊರತೆ/ತಪ್ಪು;

ಎನ್ನ  ಅಧೀನವಾದ ಅರಸುತನಕೆ ಆವುದು ಊಣೆಯವು   ಎಂಬರು  ಎಂದು ರಘುಪತಿ ಕೇಳಲು=ನನ್ನ ಆಳ್ವಿಕೆಯಲ್ಲಿ ಯಾವ ಬಗೆಯ ಕುಂದುಕೊರತೆಗಳಿವೆಯೆಂದು ಪ್ರಜೆಗಳು ಹೇಳುತ್ತಿದ್ದಾರೆ ಎಂದು ರಾಮನು ಕೇಳಲು;

ಪಾವನ=ಪವಿತ್ರವಾದುದು; ರೂಪ=ಆಕಾರ; ಪಾವನರೂಪ=ಅತ್ಯುತ್ತಮನಾದ ವ್ಯಕ್ತಿ; ವಧು=ಹೆಂಡತಿ; ಮುನಿಯ ವಧು=ಅಹಲ್ಯೆ. ಗವುತಮ ರಿಸಿಯ ಹೆಂಡತಿ.  ತಾನೆ=ಅವಳೇ;

ಲೋಕದ ಜನಕೆ ಜಗದೊಳು ನೀನೆ ಪಾವನರೂಪನು ಎಂಬುದನು  ಮುನಿಯ ವಧು ತಾನೆ ತೋರಿಸಳೆ=ಕಲ್ಲಾಗಿದ್ದ ಅಹಲ್ಯೆಯು ನಿನ್ನ ಪಾದಗಳ ತಾಗುವಿಕೆಯಿಂದ ಜೀವಂತ ಹೆಣ್ಣಾಗಿ ಮಯ್ ತಳೆದ ಪ್ರಸಂಗವು ಲೋಕದ ಜನರ ಕಣ್ಣಿನಲ್ಲಿ ಜಗತ್ತಿನಲ್ಲಿಯೇ ನೀನು ಎಂತಹ ಮಹಿಮಾವಂತನೆಂಬುದನ್ನು ತೋರಿಸಿದೆ;

ಅಜ್ಞಾನಿ=ತಿಳುವಳಿಕೆಯಿಲ್ಲದವನು/ತಿಳಿಗೇಡಿ; ಉಸಿರಲ್+ಅಮ್ಮೆನು; ಉಸಿರು=ಮಾತನಾಡು/ಹೇಳು; ಅಮ್ಮೆನು=ಆಗುತ್ತಿಲ್ಲ;  ಪದ=ಅಡಿ/ಪಾದ; ಎರಗು=ನಮಸ್ಕರಿಸು/ಅಡ್ಡಬೀಳು;

ಅಜ್ಞಾನಿಗಳು  ನುಡಿದ ನಿಂದೆಯನು ಉಸಿರಲಮ್ಮೆನು ಎಂದು ಅವನು ಪದದೊಳು ಎರಗಿದನು=ತಿಳಿಗೇಡಿಯಾದ ಜನರು ಆಡಿದ ನಿಂದನೆಯ ಮಾತುಗಳನ್ನು ಮತ್ತೆ ನಿನ್ನ ಮುಂದೆ ಹೇಳಲು ಆಗುತ್ತಿಲ್ಲವೆಂದು ಗುಪ್ತಚಾರನು ರಾಮನ ಪಾದಗಳಿಗೆ ಅಡ್ಡಬಿದ್ದನು;

ಅಂಜು=ಹೆದರು; ಮಾಜು=ಹಿಂಜರಿ/ಹಿಂದೆಗೆ;  ಲಲಾಮ=ತಿಲಕ; ರಘುಕುಲಲಲಾಮ=ರಗುವಂಶಕ್ಕೆ ತಿಲಕದಂತಿರುವ ರಾಮ;

ಏಳು ಅಂಜಬೇಡ. ಇನ್ನು ಮಾಜದಿರು.  ಹೇಳು ತನ್ನಾಣೆ ಎಂದು ರಘುಕುಲಲಲಾಮನು ಒತ್ತಾಯದಿನ್ ಕೇಳಲು=ತನ್ನ ಪಾದಗಳಿಗೆ ಅಡ್ಡಬಿದ್ದು ನಮಿಸುತ್ತಿರುವ ಗುಪ್ತಚಾರನನ್ನು ರಾಮನು ”ಮೇಲಕ್ಕೆ ಎದ್ದೇಳು,  ಹೆದರಬೇಡ. ನಡೆದ ಸಂಗತಿಯನ್ನು ಹೇಳುವುದಕ್ಕೆ ಇನ್ನು ಹಿಂಜರಿಯಬೇಡ. ನನ್ನಾಣೆಗೂ ಯಾವುದನ್ನೂ ಮುಚ್ಚಿಡಬೇಡ. ಎಲ್ಲವನ್ನೂ ಹೇಳು ಎಂದು ಒತ್ತಾಯಮಾಡಿ ಕೇಳಲು; ಅವನು ಎಂದನು=ಗುಪ್ತಚಾರನು ನಡೆದ ಪ್ರಸಂಗವನ್ನು ವಿವರಿಸತೊಡಗಿದನು;

ಜೀಯ=ಒಡೆಯ; ಅವಧರಿಸು=ಮನಸ್ಸಿಟ್ಟು ಕೇಳು/ಕೇಳುವಂತಹವನಾಗು;

ಜೀಯ ಅವಧರಿಸು=ಒಡೆಯನೇ ಮನಸ್ಸಿಟ್ಟು ಕೇಳು; ಮಲಿನಮ್+ಅನ್; ಮಲಿನ=ಕೊಳೆ; ತೊಳೆವನ್+ಆಗಿ; ತೊಳೆ=ನೀರಿನಿಂದ ಕೊಳೆಯನ್ನು ತೆಗೆದು ಮಡಿ ಮಾಡುವುದು; ಮಡಿವಳ=ಅಗಸ; ಸದ್ಗುಣಚರಿತ್ರ=ಒಳ್ಳೆಯ ನಡೆನುಡಿ; ನಾಮಾಳಿ=ಹೆಸರಿನ ಮಹಿಮೆ; ಕಾಳುಗಡೆ=ಕೀಳುಮಾಡು; ಮಲಿನಮನ್ ತೊಳೆವನಾಗಿ  ಒರ್ವ ಮಡಿವಳನು  ಸದ್ಗುಣಚರಿತ್ರ    ನಾಮಾಳಿಯನು ಕಾಳುಗೆಡೆದನು=ಬಟ್ಟೆಯ ಕೊಳೆಯನ್ನು ನೀರಿನಿಂದ ತೊಳೆದು ಮಡಿಮಾಡುವ ಒಬ್ಬ ಅಗಸನು ನಿನ್ನ ಒಳ್ಳೆಯ ನಡೆನುಡಿಯ ಹೆಸರಿನ ಮಹಿಮೆಗೆ ಕಳಂಕವನ್ನು ತರುವಂತೆ ಕೀಳಾಗಿ ಮಾತನಾಡಿದನು;

ಪುನೀತಮ್+ಅಮ್; ಪುನೀತ=ಪವಿತ್ರವಾದ; ಮಾಳ್ಪ=ಮಾಡುವ; ಏಳಿಗೆ=ಬೆಳವಣಿಗೆ/ಉದ್ಧಾರ; ಅವನ್+ಎತ್ತ; ಎತ್ತ=ಯಾವ ರೀತಿ/ಯಾವ ಕಡೆ;

ಜಗಮನ್  ಪುನೀತಮಮ್   ಮಾಳ್ಪ ನಿನ್ನ ಏಳಿಗೆಯನು  ಅವನೆತ್ತ ಬಲ್ಲನು ಎನಲು=ಜಗತ್ತನ್ನೇ ಉದ್ದಾರ ಮಾಡುವ ನಿನ್ನ ಮಹಿಮೆಯನ್ನು ಅವನು ಹೇಗೆ ತಾನೆ ಬಲ್ಲನು ಎಂದು ನುಡಿಯಲು;

ಏನ್  ಎಂದನು=ಏನೆಂದು ಹೇಳಿದನು ಎಂದು ರಾಮನು ಆತಂಕದಿಂದ ಕೇಳಲು;

ಆತನು ಇಂತು ಎಂದನು=ಗುಪ್ತಚಾರನು ಈ ರೀತಿ ವಿವರಿಸಿದನು;

ಮುಳಿ=ಕೋಪ/ಸಿಟ್ಟು; ಪೇಳದೆ=ಗಂಡನಿಗೆ ತಿಳಿಸದೆ/ಗಂಡನ ಗಮನಕ್ಕೆ ತಾರದೆ; ಚಂಡಿತನ=ಹಟಮಾರಿತನ/ಮೊಂಡುತನ;

ಪೆಂಡತಿ ತವರ್ಮನೆಗೆ ಮುಳಿದು ಪೇಳದೆ ಪೋದ ಚಂಡಿತನಕೆ=ಸಂಸಾರದಲ್ಲಿ ದಿನ ನಿತ್ಯ ನಡೆಯುವ ಆಗುಹೋಗುಗಳಲ್ಲಿ ಒಮ್ಮೆ ಅಗಸನ ಹೆಂಡತಿಯು ಗಂಡನ ಮೇಲೆ ಸಿಟ್ಟುಗೊಂಡು, ಗಂಡನ ಅನುಮತಿಯನ್ನು ಪಡೆಯದೆ, ಮೊಂಡುತನದಿಂದ ತನ್ನ ತವರು ಮನೆಗೆ ಹೋಗಿದ್ದಾಗ; ಅಂಡಲೆ=ಕಾಡು/ಪೀಡಿಸು/ಒತ್ತಾಯಿಸು/ಅಲೆದಾಡು;

ಅವಳ  ತಾಯ್ತಂದೆಗಳು ಕಳುಹಬಂದು  ಅಂಡಲೆದೊಡೆ=ಹಟಮಾರಿತನದಿಂದ ಗಂಡನ ಮನೆಯಿಂದ ತವರಿಗೆ ಬಂದಿರುವ ಮಗಳನ್ನು ಅವಳ ತಾಯಿತಂದೆಯು ಮತ್ತೆ ಗಂಡನ ಮನೆಗೆ ಬಿಡಲೆಂದು ಅಯೋದ್ಯೆಯಲ್ಲಿರುವ ಅಳಿಯನ ಮನೆಗೆ  ಮತ್ತೆ ಮತ್ತೆ ಬಂದು ಪ್ರಯತ್ನಿಸುತ್ತಿದ್ದಾಗ;

ಇನ್ನು ಒಲ್ಲೆನು=ಇನ್ನು ಅವಳ ಸಹವಾಸ ನನಗೆ ಬೇಕಾಗಿಲ್ಲ;

ಅಗಲಿ+ಇರ್ದ; ಅಗಲು=ಬಿಟ್ಟುಹೋಗು/ತೊರೆ; ಮತ್ತೆ=ಪುನಹ; ರಘುನಾಥ=ರಾಮ; ಕೊಂಡು=ಪಡೆದು/ಸ್ವೀಕರಿಸಿ; ಉದ್ದಂಡ=ಸೊಕ್ಕು/ಅಹಂಕಾರ; ಎಯ್ದು=ಬರು;

ಅಗಲಿರ್ದ ಮಡದಿಯನು ಮತ್ತೆ ರಘುನಾಥನಂತೆ ತಾನು  ಕೊಂಡು  ಆಳುವವನಲ್ಲ  ತಾನೆಂದು    ರಜಕನು ಉದ್ದಂಡದೊಳು  ನುಡಿಯೆ, ಕಿವಿಮುಚ್ಚಿಕೊಳುತ ಎಯ್ದಿದೆನು=ಕೆಲಕಾಲ ದೂರವಿದ್ದ ಹೆಂಡತಿಯೊಡನೆ ಮತ್ತೆ  ಸಂಸಾರ ಮಾಡುವ ರಾಮನಂತೆ ಮನೆ ಬಿಟ್ಟು ಹೋಗಿದ್ದ ಹೆಂಡತಿಯನ್ನು ಮತ್ತೆ ಮನೆಗೆ ಸೇರಿಸಿಕೊಂಡು ಸಂಸಾರ ಮಾಡುವ ಗಂಡ ನಾನಲ್ಲ ಎಂದು ಸೊಕ್ಕಿನಿಂದ ನುಡಿದ ಅಗಸನ ಮಾತನ್ನು ಕೇಳಲಾಗದೆ ಹಿಂತಿರುಗಿ ಬಂದೆನು;

ಅಖಂಡಿತ=ಪರಿಪೂರ್‍ಣವಾದ/ಇಡಿಯಾದ; ಮಂತ್ರ=ದೇವರ ಮಹಿಮೆಯನ್ನು ಕೊಂಡಾಡುವ ನುಡಿಗಳು; ಪೂತ=ಪವಿತ್ರವಾದ; ಹವಿ=ಹೋಮದ ಅಗ್ನಿಕುಂಡಕ್ಕೆ ಹಾಕುವ ತುಪ್ಪ,ಹಾಲು,ದವಸಗಳು; ಅರಿದು=ತಿಳಿದು; ವಾಯಸ=ಕಾಗೆ; ಎಂಜಲಿಪುದೆ=ಅಪವಿತ್ರಗೊಳಿಸುವುದೇ;

ಅಖಂಡಿತದ ಮಂತ್ರಪೂತದ ಹವಿಯನು ಅರಿದು ವಾಯಸಮ್ ಎಂಜಲಿಪುದೆ ಎಂದನು=ಪರಿಪೂರ್‍ಣವಾದ ಮಂತ್ರದಿಂದ ಪವಿತ್ರವಾಗಿರುವ ಹವಿಸ್ಸನ್ನು ಕಾಗೆಯು ಎಂಜಲು ಮಾಡಲು ಆಗುತ್ತದೆಯೇ; ಅಂದರೆ ಅಗ್ನಿಕುಂಡದಲ್ಲಿ ಉರಿಯುತ್ತಿರುವ ಹವಿಸ್ಸನ್ನು ಮುಟ್ಟಲು ಹೇಗೆ ಕಾಗೆಗೆ ಆಗುವುದಿಲ್ಲವೋ, ಅಂತೆಯೇ ಅಗಸನು ಆಡಿದ ನುಡಿಗಳು ನಿನ್ನ ವ್ಯಕ್ತಿತ್ವಕ್ಕೆ ಕಳಂಕವನ್ನು ತರಲಾರವು ಎಂದು ಗುಪ್ತಚಾರನು ಸಾಂತ್ವನದ ನುಡಿಗಳನ್ನಾಡಿದನು;

ಎಂದು ಬಿನ್ನೈಸೆ ಕೇಳ್ದು=ಎಂದು ಗುಪ್ತಚಾರನ್ನು ಹೇಳಲು, ಅದೆಲ್ಲವನ್ನೂ ಕೇಳಿ ತಿಳಿದುಕೊಂಡು;

ರಘುನಂದನ=ರಾಮ; ಬಂಧನ=ಸೆರೆ; ಮತ್ತ=ಸೊಕ್ಕಿದ; ಗಜ=ಆನೆ; ಅಂದದಿನ್=ರೀತಿಯಲ್ಲಿ;

ಆತನನು ಕಳುಹಿ ರಘು ನಂದನನು ಬಂಧನಕ್ಕೆ ಒಳಗಾದ  ಮತ್ತಗಜದ ಅಂದದಿನ್=ಗುಪ್ತಚಾರನನ್ನು ಕಳುಹಿಸಿ, ರಾಮನು ಸೆರೆಗೆ ಒಳಗಾದ ಮದಿಸಿದ ಆನೆಯಂತೆ;

ನಿಜ=ತನ್ನ; ಶಿರ=ತಲೆ; ಒಲೆ=ಅತ್ತಿತ್ತ ತೂಗುತ್ತ;

ನಿಜಶಿರವನು ಒಲೆದು=ಮಯ್ ಮನದಲ್ಲಿ ತುಡಿಯುತ್ತಿರುವ ತೀವ್ರವಾದ ಸಂಕಟದಿಂದ ತಲೆಯನ್ನು ಅತ್ತಿತ್ತ ಆಡಿಸುತ್ತ;

ಸೈವೆರಗು=ಅತಿಯಾದ ತಳಮಳ/ಸಂಕಟ;

ಮೂಗಿನ ಮೇಲೆ ಬೆರಳಿಟ್ಟು, ಮೌನದಿಂದೆ  ನಿಂದು ಸೈವೆರಗಾಗಿ=ಮಾನಸಿಕವಾಗಿ ತುಂಬಾ ಸಂಕಟಕ್ಕೊಳಗಾಗಿ;

ಬಿಸುಸುಯ್ದು=ನಿಟ್ಟುಸಿರನ್ನು ಬಿಡುತ್ತ; ಕಡುಪು+ಅಳಿದು; ಕಡುಪು=ಉತ್ಸಾಹ/ಪರಾಕ್ರಮ; ಅಳಿದು=ನಾಶಗೊಂಡು/ಇಲ್ಲವಾಗಿ; ಕಳೆಗುಂದಿ=ಕಾಂತಿಹೀನವಾಗಿ; ದುಮ್ಮಾನ=ಅಳಲು/ದುಗುಡ/ತಳಮಳ;

ನೆನೆ ನೆನೆದು ಚಿತ್ತದೊಳು  ನೊಂದು ಬಿಸುಸುಯ್ದು ಕಡುಪಳಿದು ಕಾತರಿಸಿ ಕಳೆಗುಂದಿ ದುಮ್ಮಾನದಿನ್=ಮತ್ತೆ ಮತ್ತೆ ಅಗಸನಾಡಿದ ನುಡಿಗಳನ್ನು ಮನಸ್ಸಿನಲ್ಲಿ ನೆನೆಪಿಸಿಕೊಳ್ಳುತ್ತ, ನೊಂದು ನಿಟ್ಟುಸಿರನ್ನು ಬಿಡುತ್ತ, ಉತ್ಸಾಹವನ್ನು ಕಳೆದುಕೊಂಡು ಕಾಂತಿಹೀನನಾಗಿ ಅಪಾರವಾದ ಸಂಕಟದಲ್ಲಿ ಬೇಯುತ್ತ;

ಪುತ್ತ=ಹುತ್ತ; ಪುಗು=ಪ್ರವೇಶಿಸು/ಒಳಕ್ಕೆ ಹೋಗು; ಅಹಿಪನ್+ಅಂತೆ; ಅಹಿಪ=ಹಾವುಗಳ ಒಡೆಯನಾದ ಆದಿಶೇಶ; ಅಂತಃಪುರ=ರಾಣಿವಾಸದ ಅರಮನೆ;  ಪೊಕ್ಕನು=ಪ್ರವೇಶಿಸಿದನು;

ಪುತ್ತ ಪುಗುವ ಅಹಿಪನಂತೆ  ಅಂತಃಪುರಕೆ ಪೊಕ್ಕನು=ಹುತ್ತದ ಒಳಕ್ಕೆ ಹೋಗುವ ಆದಿಶೇಶನಂತೆ ಅಂತಃಪುರದೊಳಕ್ಕೆ ಬಂದನು;

(ಚಿತ್ರ ಸೆಲೆ: ವಿಕಿಪೀಡಿಯ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks