ಕೊಬ್ಬರಿ ಮಿಟಾಯಿ
ಏನೇನು ಬೇಕು
- ಹಸಿ ತೆಂಗಿನಕಾಯಿತುರಿ – 1 ಲೋಟ
- ಸಕ್ಕರೆ – 3/4 ಲೋಟ
- ಏಲಕ್ಕಿ – 1
ಮಾಡುವ ಬಗೆ
ಮೊದಲಿಗೆ ಹಸಿ ತೆಂಗಿನಕಾಯಿಯನ್ನು ಸಣ್ಣದಾಗಿ ತುರಿಮಾಡಿ ಇಟ್ಟುಕೊಳ್ಳಿ. ಒಂದು ಏಲಕ್ಕಿ ಬಿಡಿಸಿ, ಪುಡಿ ಮಾಡಿ ಇಟ್ಟುಕೊಳ್ಳಿ. ನಂತರ ಒಂದು ಬಾಣೆಲೆಗೆ ಸಕ್ಕರೆ ಹಾಕಿ ನೀರು ಸೇರಿಸಿ, ಸಕ್ಕರೆ ಕರಗುವವರೆಗೂ ತಿರುಗಿಸಿ. (ಸಕ್ಕರೆ ಪಾಕ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ, ಸಕ್ಕರೆ ಕರಗಿಸಿದರೆ ಸಾಕು). ಸಕ್ಕರೆ ಸಂಪೂರ್‍ಣವಾಗಿ ಕರಗಿದ ನಂತರ, ತುರಿದಿಟ್ಟುಕೊಂಡಿದ್ದ ಕಾಯಿ ಹಾಗೂ ಪುಡಿ ಮಾಡಿದ ಏಲಕ್ಕಿಯನ್ನು ಸೇರಿಸಿ ಕಲಸಿ, ಒಲೆ ಹಚ್ಚಿ.
ನೀರು ಕಡಿಮೆಯಾಗಿ, ಗಟ್ಟಿಯಾಗುವವರೆಗೂ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಒಂದು ಪಾನ್ ಇಲ್ಲವೆ ತಟ್ಟೆಗೆ ಹಾಕಿಕೊಂಡು ಬೇಕಾದ ಗಾತ್ರಕ್ಕೆ ಕತ್ತರಿಸಿ. ಬೇಕಿದ್ದರೆ ಕತ್ತರಿಸಿದ ಚೂರುಗಳ ಮೇಲೆ ಬಾದಾಮಿ ಚೂರುಗಳನ್ನು ಹಾಕಬಹುದು. ಈಗ ಸಿಹಿಯಾದ ಕೊಬ್ಬರಿ / ಕಾಯಿ ಮಿಟಾಯಿ ಸವಿಯಲು ರೆಡಿ. ಅತೀ ಕಡಿಮೆ ಪದಾರ್‍ತಗಳು ಹಾಗೂ ಹೆಚ್ಚಿನ ಸಮಯ ಹಿಡಿಯದ ಸಿಹಿಗಳಲ್ಲಿ ಕೊಬ್ಬರಿ/ಕಾಯಿ ಮಿಟಾಯಿಯೂ ಒಂದು.
ಸೂಚನೆ: ಹಸಿ ತೆಂಗಿನಕಾಯಿಯನ್ನು ಬಳಸಿದರೆ ಎರಡುದಿನಗಳ ವರೆಗೆ ಇಟ್ಟು ತಿನ್ನಬಹುದು. ಹಸಿ ತೆಂಗಿನಕಾಯಿಯ ಬದಲು ಕೊಬ್ಬರಿಯನ್ನು ಬಳಸಿದರೆ ಇನ್ನೂ ಹೆಚ್ಚಿನ ದಿನ ಇಟ್ಟು ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು