ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 7

– ಸಿ.ಪಿ.ನಾಗರಾಜ.

*** ಕೀಚಕನ ಪ್ರಸಂಗ: ನೋಟ – 7 ***

ಒಡನೆ ಬೆಂಬತ್ತಿದನು. ತುರುಬನು ಹಿಡಿದು…

ಕೀಚಕ: ತೊತ್ತಿನ ಮಗಳೆ, ಹಾಯ್ದರೆ ಬಿಡುವೆನೆ ಫಡ.

(ಎನುತ ಕಾಲಲಿ ಒಡೆಮೆಟ್ಟಿ ಹೊಯ್ದನು. ಬಿರುಗಾಳಿಯಲಿ ಸೈಗೆಡೆದ ಕದಳಿಯ ಕಂಬದಂತಿರೆ ಕಾಂತೆ ಕೆಡೆದು ರಕುತವ ಕಾರಿ, ಹುಡಿಯಲಿ ಮುಡಿ ಹೊರಳಿ ಒರಲಿದಳು. ಸೂರ್ಯನು ಕೊಟ್ಟ ದಾನವನು “ಕರುಳ ತೆಗೆ… ಅಡಗನು ತಿನ್ನು” ಎನುತ ಅಬ್ಬರಿಸಿ ಉರವಣಿಸಿ ಕೀಚಕನ ಹೊಯ್ದನು. ಹಿಡಿದು ಕುಸುಬಿದನು. ದುರುಳ ನಡೆ ಕೆಡೆದು ಎದ್ದು ನಿಮಿಷದೊಳು ಒರಳುತ ಆಲಯಕೆ ಓಡಿದನು. ಬಳಿಕ ಅರಸ ಮೊದಲಾದ ಅಖಿಳ ಜನ ಭಯ ಹೊಯ್ದು ನಡುಗಿತ್ತು. ಹೊಡೆ ಮರಳಿ ಮುರಿದೆದ್ದು, ತುರುಬಿನ ಹುಡಿಯ ಕೊಡಹುತ, ಮೊಲೆಗೆ ಮೇಲುದ ತೊಡಿಸಿ, ಗಲ್ಲದ ರಕುತವನು ಬೆರಳಿಂದ ಮಿಡಿ ಮಿಡಿದು…)

ಸೈರಂಧ್ರಿ: ಖಳನು ಹೆಂಗುಸ ಬಡಿಯೆ ನೋಡುತ್ತಿಹರೆ ನುಡಿಯಲಾಗದೆ ಹಿರಿಯರು ಹಿಡಿದ ಮೌನದ ಹೊತ್ತು ಲೇಸು.

(ಎಂದು ಅಬಲೆ ಹಲುಬಿದಳು.)

ಶಿವ ಶಿವಾ… ಪಾಪಿಗಳು… ಪತಿಯಾದವರ ಸುಯ್ಲು ತಾಗಲಿ. ಅಕಟ, ನಾಲುವರ ನಡುವಣ ಹಾವು ಸಾಯದು. ನಿರಪರಾಧಿಯನು ಖಳನು ಅವಗಡಿಸಿದನು. ಧರ್ಮದ ವಿವರ ಸುದ್ದಿಯನು ಆಡದ ಈ ಜನನಿವಹ ಘೋರಾರಣ್ಯವಾಯ್ತು.

(ಎಂದು ತರಳೆ ಒರಳಿದಳು.)

ಎಲವೊ ದೇಶಿಗ ಕಂಕಭಟ್ಟನೆ, ಗಡ…ಹಲವು ಧರ್ಮವ ಬಲ್ಲೆ, ನೃಪ ತಿಲಕಗೆ ಅರುಹುದೇನು, ಸಂನ್ಯಾಸಿಗಳಿಗೆ ಉಚಿತವಿದು ತಿಳಿಯೆ. ದೇಶಿಗರಿಂಗೆ ದೇಶಿಗರ ಒಲವು ಸಮನಿಸಬೇಕು. ಸಭೆಯಲಿ ಬಲವಿಹೀನರಿಗೆ ಆಪ್ತರಿಲ್ಲ.

(ಎಂದು ಅಬಲೆ ಒರಲಿದಳು. ಧೈರ್ಯವನು ನೆರೆ ಬಲಿದು, ಮೇಲಣ ಕಾರ್ಯಭಾಗವನು ಅರಿದು, ನೃಪಜನವರ್ಯ ಧರ್ಮನಂದನನು ನೋಡದೆ ನುಡಿಸದೆ ಇದ್ದನು. “ಶೌರ್ಯಕೆ ಅವಸರವಲ್ಲ. ನಮಗೀ ಆರ್ಯನ ಅನುಜ್ಞೆ” ಎನುತ್ತ ಬಳಿಕ ಆ ತುರ್ಯರು ಪಾರ್ಥ ಯಮಳರು ಬಲಿದ ದುಗುಡದಲಿ ಇದ್ದರು. “ಅಕಟಾ, ನೊಂದಳು ಸತಿ” ಎನುತ ಭೀಮ ಮನನೊಂದು ಸೈವೆರಗಾಗಿ ಖತಿಯಲಿ ಕಂದಿ ನಸು ಮೈ ಬಾಗಿ ರೋಷದೊಳು ಔಡನು ಒಡೆ ಅವುಚಿ, ಮಂದಿ ಅರಿಯದವೊಲು ಕುಚೇಷ್ಟೆಯೊಳೊಂದಿ ರಾಜಾಲಯದ ಮುಂದಣ ಮರನನು ಮೆಲ್ಲನೆ ಬಾಗಿ ನೋಡಿದನು. ಅಂದು ಆ ಭೀಮ ಒಳಗೆ ನಿಶ್ಚೈಸಿದನು.)

ಭೀಮ: (ತನ್ನಲ್ಲಿಯೇ) ಮೊದಲಲಿ ಇವಳ ಬಡಿದ ಈ ಖಳನನು ಹಿಳಿದು ಹಿಂಡುವೆನು. ಬಳಿಕ ಇವನ ಒಡಹುಟ್ಟಿದರನು, ಇವನ ಅಖಿಳ ಬಾಂಧವರ, ವಿಗಡ ವಿರಾಟರಾಯನ ಕೊಲುವೆನು. ಅರಿಯದ ಮುನ್ನ ಕೌರವ ಕುಲವ ಸವರುವೆನು.

(ಎಂದು ಆ ಭೀಮ ಕಿಡಿಕಿಡಿಯೋದನು. ಆತನ ಇಂಗಿತದ ಅನುವನು ಅರಿತು ಮಹೀತಳಾಧಿಪ ಧರ್ಮಸುತನು…)

ಧರ್ಮಸುತ: ವಲಲ, ಅತಿ ಕಾತರಿಸದಿರು. ಸೈರಿಸು ಸೈರಿಸು. ಅಕಟ, ಈ ತರುವ ಮುರಿಯದಿರು. ಸುಜನವ್ರಾತಕೆ ಆಶ್ರಯವು. ನಿನ್ನಯನ ಬಾಣಸಿನ ಮನೆಗೆ ಊರ ಹೊರಗೆ ಮಹಾತಿಶಯ ತರುವುಂಟು. ಧರ್ಮಮಯ ತರು ಇದನು ಮುರಿಯದಿರು. ಎಮ್ಮ ಮಾತನು ಕೇಳು.

(ಎನಲು ಸುಮ್ಮನೆ ಭೀಮನು ಓಲಗದಿಂದ ಮಿಗೆ ದುಗುಡದಲಿ ಸರಿದನು.)

ಧರ್ಮಸುತ: (ಸೈರಂಧ್ರಿಯನ್ನು ಕುರಿತು) ಮಾನಿನಿ, ನಿನಗೆ ಕರ್ಮಫಲವಿದು. ನಿಮ್ಮ ಭವನಕೆ ಹೋಗು. ಈ ಸಭೆ ಶಿಕ್ಷಿಸಲು ಅಮ್ಮದು. ಆತನು ಮತ್ಸ್ಯಭೂಪತಿಯ ಬಗೆಯನು. ಕೋಪಕೆ ಅವಸರವಲ್ಲ. ಪತಿಗಳು ನಿನ್ನವರು ಕಾಪುರುಷರೇ. ಪರಿತಾಪವನು ಬೀಳ್ಕೊಡು. ನೀನು ಪತಿವ್ರತೆ ಪುಣ್ಯವಧು. ಕ್ಷಮೆಯು ದೀಪವಲ್ಲಾ ಅಖಿಳ ದೋಷಾಪಹಾರವು. ಆ ಕ್ಷಮೆಯು ಶೌರ್ಯ ಧರ್ಮದ ರೂಪು ನೆಲೆ.

(ಎನಲು ಬಳಿಕ ಇಂದುಮುಖಿ ಎಂದಳು.)

ಸೈರಂಧ್ರಿ: ಮೂರೇ ಬಾರಿ ನೀರು ಹೊರಗಿಕ್ಕುವುದು. ಬಳಿಕ ಅದು ಪಾಪಿ ಜಾಡಿಸೆ ಸೈರಿಸದು. ಅನ್ಯಾಯ ಬಹುಳತೆಗೆ ಏನ ಮಾಡುವೆನು. ಸೈರಣೆಗೆ ತಾನು ಅವಧಿಯಿಲ್ಲಾ. ಪೌರುಷವು ಕಡು ಬಂಜೆಯಾಯಿತು. ಆರಯಿಕೆಯಲಿ ಜುಣುಗಿ ಜಾರುವಿರಿ.

(ಎಂದಳು ಇಂದುಮುಖಿ.)

ಸಭೆಯಲ್ಲಿದ್ದವರು: ಅರರೆ…ಹೆಂಗಸು ದಿಟ್ಟೆ. ಮೋನದೊಳು ಇರಲಿ. ಇದಾವ ಅಂತರವು. ರಾಯನ ಹೊರೆಯಲಿ ಈ ಬಾಯ್ಬಡಿಕತನ ಗರುವಾಯಿಯೇ?

(ಎನಲು ಲಲಿತಾಂಗಿ ಕೆರಳಿದಳು.)

ಇಲ್ಲಿಯ ಹಿರಿಯರಲಿ ಹುರುಳಿಲ್ಲ. ಮಾರುತಿಗೆ ಅರುಹುವೆನು. ಬಳಿಕ ಆದುದಾಗಲಿ.

(ಎನುತ ತಿರುಗಿದಳು.)

ಪದ ವಿಂಗಡಣೆ ಮತ್ತು ತಿರುಳು

ಒಡನೆ=ಕೂಡಲೇ; ಬೆಂಬತ್ತು=ಹಿಂಬಾಲಿಸು;

ಒಡನೆ ಬೆಂಬತ್ತಿದನು=ಕೀಚಕನ ಹಿಡಿತದಿಂದ ತಪ್ಪಿಸಿಕೊಂಡು ವಿರಾಟರಾಯನ ಒಡ್ಡೋಲಗ ನಡೆಯುತ್ತಿದ್ದ ಅರಮನೆಯೊಳಕ್ಕೆ ಸೈರಂದ್ರಿಯು ಅಡಿಯಿಡುತ್ತಿದ್ದಂತೆಯೇ ಕೀಚಕನು ಅವಳನ್ನು ಹಿಂಬಾಲಿಸುತ್ತ ಅಟ್ಟಿಸಿಕೊಂಡು ಅಲ್ಲಿಗೆ ಬಂದನು; ತುರುಬು=ಮುಡಿ/ತಲೆಗೂದಲಿನ ಗಂಟು;

ತುರುಬನು ಹಿಡಿದು=ಅವನ ಕಯ್ಗೆ ಸೈರಂದ್ರಿಯು ಮತ್ತೆ ಸಿಕ್ಕಿಬಿದ್ದಳು. ಆಗ ಕೀಚಕನು ಅವಳ ಮುಡಿಯನ್ನು ಹಿಡಿದುಕೊಂಡು;

ತೊತ್ತು=ದಾಸಿ/ಹಾದರಗಿತ್ತಿ; ತೊತ್ತಿನ ಮಗಳು=ದಾಸಿಯ ಮಗಳು/ಹಾದರಗಿತ್ತಿಯ ಮಗಳು; ಹಾಯ್=ಓಡಿಹೋಗು/ಪಲಾಯನ ಮಾಡು; ಫಡ=ಕೋಪ ಮತ್ತು ತಿರಸ್ಕಾರವನ್ನು ಸೂಚಿಸುವಾಗ ಬಳಸುವ ಪದ;

ತೊತ್ತಿನ ಮಗಳೆ, ಹಾಯ್ದರೆ ಬಿಡುವೆನೆ ಫಡ ಎನುತ=ತೊತ್ತಿನ ಮಗಳೆ, ನನ್ನ ಕಯ್ಗೆ ಸಿಗದಂತೆ ಓಡಿದರೆ ಬಿಟ್ಟುಬಿಡುತ್ತೇನೆಯೇ ಎಂದು ಅಬ್ಬರಿಸಿ ತಿರಸ್ಕಾರದಿಂದ ನುಡಿಯುತ್ತ;

ಒಡೆಮೆಟ್ಟು=ಕೆಳಕ್ಕೆ ಹಾಕಿಕೊಂಡು ತುಳಿದು; ಹೊಯ್=ಹೊಡೆ/ಬಡಿ;

ಕಾಲಲಿ ಒಡೆಮೆಟ್ಟಿ ಹೊಯ್ದನು=ಸೈರಂದ್ರಿಯನ್ನು ಕೆಳಕ್ಕೆ ತಳ್ಳಿ, ತನ್ನ ಕಾಲಿನಿಂದ ತುಳಿದು ಹೊಡೆದನು;

ಸೈಗೆಡೆ=ಅಡ್ಡಡ್ಡ ಬೀಳು/ಕೆಳಕ್ಕೆ ಉರುಳು; ಕದಳಿ=ಬಾಳೆಯ ಗಿಡ; ಕಂಬದ+ಅಂತು+ಇರೆ; ಅಂತು=ಹಾಗೆ; ಇರೆ=ಇರಲು; ಕಾಂತೆ=ಹೆಂಗಸು; ಕೆಡೆ=ಬೀಳು/ಕುಸಿ/ಉರುಳು; ಕಾರು=ಕಕ್ಕು; ಹುಡಿ=ಮಣ್ಣಿನ ಕಣಗಳು/ದೂಳು; ಮುಡಿ=ತಲೆ/ತಲೆಗೂದಲು; ಹೊರಳು=ಉರುಳು; ಒರಲು=ಅರಚು/ಕೂಗಿಕೊಳ್ಳು;

ಬಿರುಗಾಳಿಯಲಿ ಸೈಗೆಡೆದ ಕದಳಿಯ ಕಂಬದಂತಿರೆ= ಬಿರುಗಾಳಿಯ ಬಡಿತಕ್ಕೆ ನೆಲಕ್ಕೆ ಉರುಳುವ ಬಾಳೆಯ ಗಿಡದಂತೆ;

ಕಾಂತೆ ಕೆಡೆದು ರಕುತವ ಕಾರಿ=ಸೈರಂದ್ರಿಯು ಕೀಚಕನ ಕಾಲ್ತುಳಿತ ಮತ್ತು ಹೊಡೆತಕ್ಕೆ ಸಿಲುಕಿ ನೆಲದ ಮೇಲೆ ಬಿದ್ದು, ರಕ್ತವನ್ನು ಕಾರುತ್ತ;

ಹುಡಿಯಲಿ ಮುಡಿ ಹೊರಳಿ ಒರಲಿದಳು=ದೂಳಿನಲ್ಲಿ ಹೊರಳಾಡುತ್ತ ನೋವಿನಿಂದ ಚೀತ್ಕರಿಸತೊಡಗಿದಳು;

ದಾನವ=ರಕ್ಕಸ;

ಸೂರ್ಯನು ಕೊಟ್ಟ ದಾನವನು=ಕೀಚಕನಿಂದ ಸೈರಂದ್ರಿಯನ್ನು ಕಾಪಾಡಲೆಂದು ಸೂರ್‍ಯದೇವನು ನೇಮಿಸಿದ್ದ ರಕ್ಕಸನು;

ತೆಗೆ=ಕೀಳು; ಅಡಗು=ಮಾಂಸ/ಬಾಡು; ಅಬ್ಬರಿಸಿ=ಗರ್‍ಜಿಸುತ್ತ; ಉರವಣಿಸು=ವೇಗ/ರಬಸ;

“ಕರುಳ ತೆಗೆ…ಅಡಗನು ತಿನ್ನು” ಎನುತ ಅಬ್ಬರಿಸಿ ಉರವಣಿಸಿ ಕೀಚಕನ ಹೊಯ್ದನು=“ನಿನ್ನ ಹೊಟ್ಟೆಯ ಕರುಳನ್ನು ಬಗೆದು, ನಿನ್ನ ದೇಹದ ಮಾಂಸವನ್ನು ತಿನ್ನುತ್ತೇನೆ” ಎಂದು ಗರ್‍ಜಿಸಿ ನುಡಿಯುತ್ತ, ಅತಿ ವೇಗದಿಂದ ಮುನ್ನುಗ್ಗಿ ಕೀಚಕನನ್ನು ಸದೆಬಡಿದನು;

ಕುಸುಬು=ಕುಕ್ಕು/ಕುಸುಕು/ಬಟ್ಟೆಯನ್ನು ಒಗೆಯುವಾಗ ಒದ್ದೆಬಟ್ಟೆಯನ್ನು ಮುದ್ದೆಗಟ್ಟಿಕೊಂಡು ಕುಕ್ಕಿ ಕುಕ್ಕಿ ಕೊಳೆಯನ್ನು ತೆಗೆಯುವುದು;

ಹಿಡಿದು ಕುಸುಬಿದನು=ಕೀಚಕನ ಇಡೀ ಮಯ್ಯನ್ನು ನೆಲಕ್ಕೆ ಹಾಕಿ ಬಟ್ಟೆ ಕುಕ್ಕುವಂತೆ ಕುಕ್ಕಿದನು;

ದುರುಳ=ನೀಚ/ಕೇಡಿ; ನಡೆ+ಕೆಡೆದು; ನಡೆ=ನಡಗೆ; ಕೆಡೆ=ಬೀಳು; ನಡೆಗೆಡೆದು=ನಡೆಯಲಾರದೆ ಕುಸಿದು ಬಿದ್ದು; ನಿಮಿಷ=ಕೆಲವೇ ಗಳಿಗೆಯಲ್ಲಿ; ಆಲಯ=ಮನೆ;

ದುರುಳ ನಡೆಗೆಡೆದು ಎದ್ದು ನಿಮಿಷದೊಳು ಒರಳುತ ಆಲಯಕೆ ಓಡಿದನು=ದುರುಳ ಕೀಚಕನು ರಕ್ಕಸನ ಹೊಡೆತಕ್ಕೆ ಕುಸಿದುಬಿದ್ದನು. ಮರುಗಳಿಗೆಯಲ್ಲಿಯೇ ಮತ್ತೆ ಎದ್ದು ಕಿರುಚುತ್ತ ತನ್ನ ಮಂದಿರದತ್ತ ಓಡಿದನು;

ಬಳಿಕ=ಅನಂತರ; ಅಖಿಲ=ಸಮಸ್ತ/ಎಲ್ಲ;

ಬಳಿಕ ಅರಸ ಮೊದಲಾದ ಅಖಿಳ ಜನ ಭಯ ಹೊಯ್ದು ನಡುಗಿತ್ತು= ತಮ್ಮ ಕಣ್ಣಮುಂದೆಯೇ ನಡೆದ ಸೈರಂದ್ರಿಯ ಮೇಲಣ ಕೀಚಕನ ಹಲ್ಲೆ, ಬಳಿಕ ಕೀಚಕನ ಮೇಲೆ ಅಗೋಚರವಾದ ಶಕ್ತಿಯೊಂದರ ಆಕ್ರಮಣ ಮತ್ತು ಹೊಡೆತ ತಿಂದ ಕೀಚಕನು ತತ್ತರಿಸಿ ನಡುಗಿ ಕಿರುಚುತ್ತ ಓಡಿಹೋದ ಗಟನೆಗಳಿಂದ ಒಡ್ಡೋಲಗದಲ್ಲಿದ್ದ ರಾಜ ಮತ್ತು ಸಬಾಸದರೆಲ್ಲರೂ ಹೆದರಿಕೆಯಿಂದ ತತ್ತರಿಸಿ ನಡುಗತೊಡಗಿದರು;

ಹೊಡೆಮರಳು=ಮಗುಚಿಕೊಳ್ಳುವುದು; ಮುರಿದು+ಎದ್ದು; ಮುರಿ=ತಿರುಗು/ಹೊರಳು;

ಹೊಡೆಮರಳಿ ಮುರಿದೆದ್ದು=ಕೀಚಕನ ಹೊಡೆತದಿಂದ ನೆಲದ ಮೇಲೆ ಮಗುಚಿಕೊಂಡು ಬಿದ್ದಿದ್ದ ಸೈರಂದ್ರಿಯು ತಿರುಗಿ ಮೇಲೆದ್ದು;

ಕೊಡಹು=ಒದರು/ಜಾಡಿಸು/ಅಲ್ಲಾಡಿಸು;

ತುರುಬಿನ ಹುಡಿಯ ಕೊಡಹುತ=ತಲೆಗೂದಲಿಗೆ ಮೆತ್ತಿಕೊಂಡಿದ್ದ ದೂಳಿನ ಕಣಗಳನ್ನು ಒದರಿಕೊಂಡು ಕೆಳಕ್ಕೆ ಬೀಳಿಸಿ;

ಮೇಲುದ=ಹೆಂಗಸರು ತಮ್ಮ ಎದೆಯ ಮೇಲೆ ಹಾಕಿಕೊಳ್ಳುವ ಬಟ್ಟೆ;

ಮೊಲೆಗೆ ಮೇಲುದ ತೊಡಿಸಿ=ಸೈರಂದ್ರಿಯು ತನ್ನ ಎದೆಯ ಮೇಲೆ ಸೀರೆಯ ಸೆರಗನ್ನು ಹಾಕಿಕೊಂಡು;

ಮಿಡಿ=ಬೆರಳಿನಿಂದ ಒರೆಸು;

ಗಲ್ಲದ ರಕುತವನು ಬೆರಳಿಂದ ಮಿಡಿ ಮಿಡಿದು=ಕೀಚಕನ ಹೊಡೆತದಿಂದ ಗಾಯಗೊಂಡು ಗಲ್ಲದ ಮೇಲೆ ಹರಿಯುತ್ತಿದ್ದ ರಕ್ತವನ್ನು ಬೆರಳಿನಿಂದ ಮತ್ತೆ ಮತ್ತೆ ಒರೆಸಿಕೊಂಡು;

ಖಳನು ಹೆಂಗುಸ ಬಡಿಯೆ ನೋಡುತ್ತಿಹರೆ=ಕೇಡಿಯು ಹೆಂಗಸನ್ನು ಬಡಿಯುತ್ತಿದ್ದರೆ, ಸುಮ್ಮನೆ ನೋಡುತ್ತ ಕುಳಿತಿದ್ದೀರಲ್ಲ;

ಲೇಸು=ಒಳ್ಳೆಯದು; ಹಿರಿಯರು=ಒಡ್ಡೋಲಗದಲ್ಲಿರುವ ರಾಜ ಮತ್ತು ರಾಜ ಪರಿವಾರದವರು; ಮೌನ=ಮಾತನಾಡದೆ ಸುಮ್ಮನಿರುವುದು; ಹಲುಬು=ರೋದಿಸು/ಪ್ರಲಾಪಿಸು;

ನುಡಿಯಲಾಗದೆ ಹಿರಿಯರು ಹಿಡಿದ ಮೌನದ ಹೊತ್ತು ಲೇಸು. ಎಂದು ಅಬಲೆ ಹಲುಬಿದಳು=ಇಂತಹ ಸಮಯದಲ್ಲಿ ಹಿರಿಯರಾದ ನೀವೆಲ್ಲರೂ ಈ ಹಲ್ಲೆಯನ್ನು ತಡೆಯುವುದಿರಲಿ, “ಈ ರೀತಿ ಮಾಡಬೇಡ” ಎಂದು ಬಾಯನ್ನು ಬಿಡಲಾರದೆ ಮೂಕರಾಗಿದ್ದೀರಲ್ಲಾ… ನಿಮ್ಮ ಈ ವರ್‍ತನೆ ತುಂಬಾ ಒಳ್ಳೆಯದು ಎಂದು ವ್ಯಂಗದ ನುಡಿಯಿಂದ ಒಡ್ಡೋಲಗದಲ್ಲಿದ್ದವರನ್ನು ಹಂಗಿಸುತ್ತ ಸೈರಂದ್ರಿಯು ರೋದಿಸತೊಡಗಿದಳು;

ಶಿವ… ಶಿವಾ=ವ್ಯಕ್ತಿಯು ಅಸಹಾಯಕನಾಗಿ ಸಂಕಟಕ್ಕೆ ಒಳಗಾಗಿ ದೇವರಲ್ಲಿ ಮೊರೆಯಿಡುವಾಗ ಉಚ್ಚರಿಸುವ ಉದ್ಗಾರದ ನುಡಿಗಳು; ಪಾಪಿ=ಕೆಟ್ಟದ್ದನ್ನು ಮಾಡಿದವನು;

ಶಿವ ಶಿವಾ… ಪಾಪಿಗಳು=ಶಿವ… ಶಿವಾ… ನಿಮ್ಮ ಕಣ್ಣ ಮುಂದೆಯೇ ಒಂದು ಹೆಣ್ಣಿಗೆ ಇಂತಹ ಅಪಚಾರವಾಗುತ್ತಿದ್ದರೂ… ಏನೊಂದನ್ನು ಕಾಣದವರಂತೆ ಇಲ್ಲವೇ ತಿಳಿಯದವರಂತೆ ಸುಮ್ಮನಿರುವ ನೀವೆಲ್ಲರೂ ಪಾಪಿಗಳು;

ಪತಿ+ಆದವರ; ಪತಿ=ರಾಜ/ದೊರೆ; ಸುಯ್ಲು=ಸಂಕಟ ಮತ್ತು ಅಪಮಾನದಿಂದ ನರಳುತ್ತಿರುವಾಗ ಬಿಡುವ ನಿಟ್ಟುಸಿರು;

ಪತಿಯಾದವರ ಸುಯ್ಲು ತಾಗಲಿ=ನಾಡನ್ನು ಆಳುತ್ತಿರುವ ದೊರೆಗಳಿಗೆ ಈ ನನ್ನ ಸಂಕಟದ ನಿಟ್ಟುಸಿರು ತಟ್ಟಲಿ;

ಅಕಟ=ಅಯ್ಯೋ;

ನಾಲುವರ ನಡುವಣ ಹಾವು ಸಾಯದು=ಇದೊಂದು ಗಾದೆ ಮಾತು. ನಾಲ್ಕು ಮಂದಿಯ ನಡುವೆ ಹಾವು ಕಂಡುಬಂದಾಗ, “ಉಳಿದವರು ಹೊಡೆಯಲಿ. ಹಾವನ್ನು ಸಾಯಿಸಲು ಹೋದಾಗ ಉಂಟಾಗುವ ಅಪಾಯಕ್ಕೆ ಇಲ್ಲವೇ ಕೊಂದ ನಂತರ ಬರುವ ಪಾಪಕ್ಕೆ ನಾನೇಕೆ ಪಕ್ಕಾಗಬೇಕು” ಎಂದು ನಾಲ್ಕು ಮಂದಿಯಲ್ಲಿ ಪ್ರತಿಯೊಬ್ಬನು ಸುಮ್ಮನಾಗುತ್ತಾನೆ. ಅಂತೆಯೇ ಸಮಾಜದಲ್ಲಿ ಅತ್ಯಾಚಾರ, ಅನಾಚಾರ, ಕೊಲೆ ಸುಲಿಗೆಯಲ್ಲಿ ತೊಡಗಿರುವ ಕೇಡಿಗಳ ಎದುರಾಗಿ ಹೋರಾಡಲು ಯಾರೊಬ್ಬರೂ ಮುಂದೆ ಬರುವುದಿಲ್ಲ. “ನಮಗೇಕೆ ಅದರ ಉಸಾಬರಿ. ನಾವೇಕೆ ತಲೆಕೊಡಬೇಕು” ಎಂದು ಹಿಂಜರಿದು ಸುಮ್ಮನಾಗುತ್ತಾರೆ. ಆದ್ದರಿಂದಲೇ ಕೆಟ್ಟದ್ದು ಸಮಾಜದಲ್ಲಿ ಯಾವಾಗಲೂ ಮೆರೆಯುತ್ತಿರುತ್ತದೆ; ಅಂತೆಯೇ ವಿರಾಟರಾಯನ ಒಡ್ಡೋಲಗದಲ್ಲಿದ್ದವರು ಒಬ್ಬರಾದರೂ ಸೈರಂದ್ರಿಯ ಮೇಲಣ ಹಲ್ಲೆಯ ಬಗ್ಗೆ ತಲೆಹಾಕಲಿಲ್ಲ;

ಅವಗಡಿಸು=ಅಪಮಾನ ಮಾಡು;

ನಿರಪರಾಧಿಯನು ಖಳನು ಅವಗಡಿಸಿದನು=ತಪ್ಪನ್ನೇ ಮಾಡದ ನನ್ನನ್ನು ಆ ನೀಚನಾದ ಕೀಚಕನು ಅಪಮಾನಪಡಿಸಿದನು;

ಧರ್ಮ=ಜನರೆಲ್ಲರಿಗೂ ಒಳಿತನ್ನು ಉಂಟುಮಾಡುವಂತಹ ನಡೆನುಡಿ; ವಿವರ ಸುದ್ದಿ=ನಡೆನುಡಿಗಳು ಹೇಗೆ ಇರಬೇಕು/ಹೇಗೆ ಇರಬಾರದು ಎಂಬುದರ ಬಗ್ಗೆ ಚಿಂತನೆ; ನಿವಹ=ಗುಂಪು; ಜನನಿವಹ=ಜನರ ಗುಂಪು/ರಾಜನ ಒಡ್ಡೋಲಗದಲ್ಲಿದ್ದ ಸಬಿಕರು; ಘೋರ+ಅರಣ್ಯ+ಆಯ್ತು; ಘೋರ=ಬಯಂಕರವಾದ; ಅರಣ್ಯ=ಕಾಡು; ಘೋರಾರಣ್ಯ=ಇದೊಂದು ನುಡಿಗಟ್ಟಾಗಿ ಬಳಕೆಯಾಗಿದೆ. ದೊಡ್ಡ ಕಾಡಿನಲ್ಲಿ ಬಲವುಳ್ಳ ಪ್ರಾಣಿಗಳು ಬಲವಿಲ್ಲದ ಪ್ರಾಣಿಗಳನ್ನು ಯಾವುದೇ ಅಡೆತಡೆಯಿಲ್ಲದೆ ಕೊಂದು ತಿನ್ನುವಂತೆ ನಾಡಿನಲ್ಲಿ ಅದಿಕಾರದ ಬಲ, ಹಣಬಲ ಮತ್ತು ತೋಳ್ಬಲವುಳ್ಳವರು ಬಲಹೀನರ ಮೇಲೆ ಅತ್ಯಾಚಾರ, ಅನಾಚಾರ, ಕೊಲೆ ಸುಲಿಗೆಯನ್ನು ಯಾವ ಹಿಂಜರಿಕೆಯು ಇಲ್ಲದೆ ಮಾಡಿ, ಅಬ್ಬರದಿಂದ ತಲೆಯೆತ್ತಿ ಮೆರೆಯುತ್ತಿರುತ್ತಾರೆ; ತರಳೆ=ತರುಣಿ; ಒರಳು=ನರಳು;

ಧರ್ಮದ ವಿವರ ಸುದ್ದಿಯನು ಆಡದ ಈ ಜನನಿವಹ ಘೋರಾರಣ್ಯವಾಯ್ತು ಎಂದು ತರಳೆ ಒರಳಿದಳು= “ಜೀವನದಲ್ಲಿ ಯಾವುದು ಸರಿ/ಯಾವುದು ತಪ್ಪು; ಯಾವುದು ನ್ಯಾಯ/ಯಾವುದು ಅನ್ಯಾಯ” ಎಂಬುದನ್ನು ಕುರಿತು ಮಾತನಾಡದ ಮತ್ತು ತಪ್ಪನ್ನು ತಡೆಗಟ್ಟಿ ನ್ಯಾಯವನ್ನು ಕಾಪಾಡದ ಜನರಿಂದ ತುಂಬಿದ ಈ ಒಡ್ಡೋಲಗವು ಕ್ರೂರ ಪ್ರಾಣಿಗಳಿಂದ ತುಂಬಿದ ಅರಣ್ಯವಾಗಿದೆ. ಅಂದರೆ ಇಲ್ಲಿ ಸತ್ಯ,ನೀತಿ ಮತ್ತು ನ್ಯಾಯದ ನಡೆನುಡಿಗಳಿಗೆ ಅವಕಾಶವಿಲ್ಲ ಎಂದು ಸೈರಂದ್ರಿಯು ತನ್ನ ಅಳಲನ್ನು ತೋಡಿಕೊಂಡಳು;

ಎಲವೊ=ಗಂಡಸನ್ನು ಉದ್ದೇಶಿಸಿ ಮಾತನಾಡುವಾಗ ಬಳಸುವ ಪದ. ಕೀಚಕನ ಹಲ್ಲೆಯಿಂದ ಸೈರಂದ್ರಿಯ ಮಯ್ ಮನ ಬಹಳ ಗಾಸಿಗೊಂಡಿರುವುದರಿಂದ ಕೋಪ ಮತ್ತು ತಿರಸ್ಕಾರ ಸೂಚಕವಾದ ದನಿಯಲ್ಲಿ ‘ಎಲವೊ’ ಎಂಬ ಪದವನ್ನು ದರ್‍ಮರಾಯನಿಗೆ ಸೈರಂದ್ರಿಯು ಬಳಸುತ್ತಿದ್ದಾಳೆ; ದೇಶಿಗ=ಗುರು/ಪರದೇಶಿ/ದಿಕ್ಕಿಲ್ಲದವನು; ಕಂಕಭಟ್ಟ=ವಿರಾಟರಾಯನ ಆಸ್ತಾನದಲ್ಲಿ ಮಾರುವೇಶದಲ್ಲಿರುವ ದರ್‍ಮರಾಯ. ವಿರಾಟರಾಜನ ಆಪ್ತ ಪರಿಚಾರಕನಾಗಿದ್ದಾನೆ; ಗಡ=ಸಂಗತಿಯನ್ನು ಮನಸ್ಸಿಗೆ ನಾಟುವಂತೆ ಒತ್ತಿ ಹೇಳುವಾಗ ಬಳಸುವ ಪದ;

ಎಲವೊ ದೇಶಿಗ ಕಂಕಭಟ್ಟನೆ… ಗಡ… ಹಲವು ಧರ್ಮವ ಬಲ್ಲೆ=ಎಲವೊ ಕಂಕಭಟ್ಟ… ನೀನು ರಾಜನಿಗೆ ಆಪ್ತಪರಿಚಾರಕನಾಗಿ ಗುರುವಿನ ಸ್ತಾನದಲ್ಲಿರುವೆ. ನನ್ನ ಮಾತನ್ನು ಮನಗೊಟ್ಟು ಕೇಳು. ನೀನು ಹಲವು ದರ್‍ಮಗಳನ್ನು ಚೆನ್ನಾಗಿ ತಿಳಿದಿರುವೆ;

ನೃಪ=ರಾಜ; ತಿಲಕ=ಉತ್ತಮನಾದ ವ್ಯಕ್ತಿ; ಅರುಹು=ತಿಳಿಸು/ಹೇಳು;

ನೃಪ ತಿಲಕಗೆ ಅರುಹುದೇನು=ರಾಜರಲ್ಲಿಯೇ ಉತ್ತಮನೆಂದು ಹೆಸರಾಂತ ವಿರಾಟರಾಯನಿಗೆ ಕೀಚಕನು ಮಾಡಿದ್ದು ತಪ್ಪು ಎಂದು ಹೇಳುವುದಕ್ಕೆ ನಿನ್ನಿಂದ ಆಗಲಿಲ್ಲವೇನು;

ಉಚಿತ=ಸರಿಯಾದ/ಯೋಗ್ಯವಾದ;

ಸಂನ್ಯಾಸಿಗಳಿಗೆ ತಿಳಿಯೆ ಉಚಿತವಿದು=ಸಂನ್ಯಾಸಿಗಳು ಸತ್ಯ ನೀತಿ ನ್ಯಾಯದ ಅರಿವನ್ನು ಸರಿಯಾದ ರೀತಿಯಲ್ಲಿ ತಿಳಿದಿರಬೇಕು;

ಒಲವು=ಪ್ರೀತಿ; ಸಮನಿಸು=ದೊರಕು/ಸಿಕ್ಕು;

ದೇಶಿಗರಿಂಗೆ ದೇಶಿಗರ ಒಲವು ಸಮನಿಸಬೇಕು=ರಾಜನ ಬಳಿ ಆಶ್ರಯವನ್ನು ಪಡೆದಿರುವ ಪರದೇಶಿಗಳಾದ ನಮ್ಮಂತವರಿಗೆ ಪರದೇಶಿಗಳಾದ ನಿಮ್ಮಂತಹವರ ಪ್ರೀತಿ ಕರುಣೆ ಒತ್ತಾಸೆಯು ಇಂತಹ ಸಂಕಟದ ಸಮಯದಲ್ಲಿ ಸಿಗಬೇಕು;

ವಿಹೀನ=ಇಲ್ಲದ; ಬಲವಿಹೀನ=ಬಲವಿಲ್ಲದ; ಆಪ್ತರು=ನೆಂಟರು/ಆತ್ಮೀಯರು/ಬೇಕಾದವರು;

ಸಭೆಯಲಿ ಬಲವಿಹೀನರಿಗೆ ಆಪ್ತರಿಲ್ಲ ಎಂದು ಅಬಲೆ ಒರಲಿದಳು=ಈ ಒಡ್ಡೋಲಗದಲ್ಲಿ ಬಲಹೀನರಾದ ನಮ್ಮಂತವರಿಗೆ ಆತ್ಮೀಯರಾದವರೂ ಒಬ್ಬರೂ ಇಲ್ಲ. ನನ್ನಂತಹ ಅಬಲೆಯನ್ನು ಕಾಪಾಡುವವರು ಯಾರೂ ಇಲ್ಲ ಎಂದು ಸೈರಂದ್ರಿಯು ರೋದಿಸಿದಳು;

ಧೈರ್ಯ=ನಿಶ್ಚಲತೆ/ಸಂಯಮ/ತಾಳ್ಮೆ; ನೆರೆ=ಹೆಚ್ಚಾಗಿ; ಬಲಿದು=ತುಂಬು;

ಧೈರ್ಯವನು ನೆರೆ ಬಲಿದು=ಸಂಯಮವನ್ನು ಹೆಚ್ಚಾಗಿ ತಂದುಕೊಂಡು/ದುಡುಕಿನ ತೀರ್‍ಮಾನವನ್ನು ಕಯ್ಗೊಳ್ಳದೆ; ಮೇಲಣ=ಮುಂದಿನ; ಕಾರ್ಯಭಾಗ=ಮಾಡಬೇಕಾದ ಕೆಲಸ; ಅರಿದು=ಗ್ರಹಿಸಿಕೊಂಡು/ಚಿಂತಿಸಿ;

ಮೇಲಣ ಕಾರ್ಯಭಾಗವನು ಅರಿದು=ಮುಂದೆ ಮಾಡಬೇಕಾದ ಕೆಲಸವನ್ನು ಚಿಂತಿಸುತ್ತ;

ನೃಪ=ರಾಜ; ವರ್ಯ=ಉತ್ತಮನಾದ; ನೃಪಜನವರ್ಯ=ರಾಜರುಗಳಲ್ಲಿಯೇ ಉತ್ತಮನಾದವನೆಂದು ಹೆಸರನ್ನು ಪಡೆದಿದ್ದ; ಧರ್ಮನಂದನ=ದರ್‍ಮರಾಯ;

ನೃಪಜನವರ್ಯ ಧರ್ಮನಂದನನು ನೋಡದೆ ನುಡಿಸದೆ ಇದ್ದನು=ದರ್‍ಮರಾಯನು ಸೈರಂದ್ರಿಯತ್ತ ನೋಡದೆ, ಅವಳ ಮಾತಿಗೆ ಪ್ರತಿಕ್ರಿಯೆಯನ್ನು ತೋರಿಸದೆ ಸುಮ್ಮನಿದ್ದನು;

ಶೌರ್ಯ=ಸಾಹಸ/ಪರಾಕ್ರಮ; ಅವಸರ=ಸಮಯ/ಸನ್ನಿವೇಶ;

ಶೌರ್ಯಕೆ ಅವಸರವಲ್ಲ=ನಮ್ಮ ಪರಾಕ್ರಮವನ್ನು ತೋರಿಸುವುದಕ್ಕೆ ಇದು ಸರಿಯಾದ ಸಮಯವಲ್ಲ. ಏಕೆಂದರೆ ಹಾಗೆ ಮಾಡಿದರೆ ಒಂದು ವರುಶ ತಲೆಮರೆಸಿಕೊಂಡು ನಾವು ಅಜ್ನಾತವಾಸದಲ್ಲಿರುವ ಸಂಗತಿಯು ಬಯಲಾಗುತ್ತದೆ. ಅದು ಬಯಲಾದರೆ ಮತ್ತೆ ನಾವು ಹನ್ನೆರಡು ವರುಶ ವನವಾಸಕ್ಕೆ ಹೋಗಬೇಕಾಗುತ್ತದೆ;

ಆರ್ಯ=ಹಿರಿಯ; ಅನುಜ್ಞೆ=ಅಪ್ಪಣೆ; ಪಾರ್ಥ=ಅರ್‍ಜುನ; ಯಮಳರು=ಅವಳಿಜವಳಿ ಮಕ್ಕಳಾದ ನಕುಲ ಸಹದೇವರು; ಬಲಿದ=ಹೆಚ್ಚಾದ/ಅತಿಯಾದ; ದುಗುಡ=ತಳಮಳ/ಚಿಂತೆ/ಆತಂಕ;

ನಮಗೀ ಆರ್ಯನ ಅನುಜ್ಞೆ ಎನುತ್ತ ಬಳಿಕ ಆ ತುರ್ಯರು ಪಾರ್ಥ ಯಮಳರು ಬಲಿದ ದುಗುಡದಲಿ ಇದ್ದರು=“ಎಂತಹ ಆಪತ್ತಿನ ಸನ್ನಿವೇಶದಲ್ಲಿಯೂ ನಮ್ಮ ಮಾರುವೇಶದ ಬದುಕು ಬಯಲಾಗಬಾರದು” ಎಂಬುದು ನಮ್ಮ ದೊಡ್ಡ ಅಣ್ಣನಾದ ದರ್‍ಮರಾಯನ ಅಪ್ಪಣೆ ಎಂದು ತಮ್ಮಲ್ಲಿಯೇ ಆಲೋಚಿಸುತ್ತ ಅರ್‍ಜುನ, ನಕುಲ ಸಹದೇವರು ಅತಿಹೆಚ್ಚಿನ ಸಂಕಟದಿಂದ ಪರಿತಪಿಸುತ್ತಿದ್ದರು;

ಅಕಟಾ=ಅಯ್ಯೋ; ಸೈವೆರಗು=ಅತಿಯಾದ ತಳಮಳ;

“ಅಕಟಾ, ನೊಂದಳು ಸತಿ” ಎನುತ ಭೀಮ ಮನನೊಂದು=ಅಯ್ಯೋ… ಕೀಚಕನ ಹಲ್ಲೆಯಿಂದ ದ್ರೌಪದಿಯು ನರಳುತ್ತಿದ್ದಾಳೆ ಎಂದು ಮನದಲ್ಲಿ ಪರಿತಪಿಸುತ್ತ;

ಸೈವೆರಗು=ಅತಿಯಾದ ತಳಮಳ/ಸಂಕಟ; ಖತಿ=ಕೋಪ; ಕಂದಿ=ಕಳೆಗುಂದು;

ಸೈವೆರಗಾಗಿ ಖತಿಯಲಿ ಕಂದಿ= ದ್ರೌಪದಿಯು ಪಡುತ್ತಿರುವ ಅಪಮಾನ ಮತ್ತು ಯಾತನೆಯನ್ನು ನೋಡುತ್ತಿದ್ದ ಬೀಮನ ಮಯ್ ಮನದಲ್ಲಿ ತೀವ್ರವಾದ ಕಳವಳವುಂಟಾಗಿ, ಸಂಕಟದಿಂದ ಬೀಮನ ಮೊಗ ಬಾಡಿತು.

ನಸು=ಸ್ವಲ್ಪ/ತುಸು; ರೋಷ=ಕೋಪ/ಸಿಟ್ಟು; ಔಡು=ದವಡೆ; ಅವುಚು=ಕೂಡಿಸು/ಸೇರಿಸು/ಗಟ್ಟಿಯಾಗಿ ಒತ್ತಿಹಿಡಿ;

ನಸು ಮೈ ಬಾಗಿ ರೋಷದೊಳು ಔಡನು ಒಡೆ ಅವುಚಿ=ತುಸು ಬಗ್ಗಿ ಅತ್ತಿತ್ತ ನೋಡುತ್ತ ಆಕ್ರೋಶದಿಂದ ದವಡೆಯ ಹಲ್ಲುಗಳನ್ನು ಕಚ್ಚಿಹಿಡಿದು / ಕೋಪವನ್ನು ಹತ್ತಿಕ್ಕಿಕೊಳ್ಳಲಾರದೆ ಹಲ್ಲುಮುರಿಯನ್ನು ಕಚ್ಚುತ್ತ;

ಮಂದಿ+ಅರಿಯದ+ಒಲು; ಮಂದಿ=ಸಭೆಯಲ್ಲಿದ್ದವರು; ಅರಿಯದ=ತಿಳಿಯದ; ಒಲು=ಅಂತೆ; ಕುಚೇಷ್ಟೆ+ಒಳ್+ಒಂದಿ; ಕುಚೇಷ್ಟೆ=ಕೆಣಕುವುದು; ಒಂದಿ=ಕೂಡಿ; ಮಂದಿ ಅರಿಯದವೊಲು

ಕುಚೇಷ್ಟೆಯೊಳೊಂದಿ=ರಾಜನ ಒಡ್ಡೋಲಗದಲ್ಲಿದ್ದವರಿಗೆ ಗೊತ್ತಾಗದಂತೆ ಕೀಚಕನನ್ನು ಕೆಣಕಿ ಸದೆಬಡಿಯಬೇಕೆಂಬ ಉದ್ದೇಶದಿಂದ;

ಅಂದು=ಆ ಸಮಯದಲ್ಲಿ; ರಾಜ+ಆಲಯ; ರಾಜಾಲಯ=ಅರಮನೆ;

ರಾಜಾಲಯದ ಮುಂದಣ ಮರನನು ಮೆಲ್ಲನೆ ಬಾಗಿ ನೋಡಿದನು=ಆ ಸಮಯದಲ್ಲಿ ಅರಮನೆಯ ಮುಂದುಗಡೆಯಿದ್ದ ಮರವೊಂದನ್ನು ಬಗ್ಗಿ ನೋಡಿದನು;

ಅಂದು ಆ ಭೀಮ ಒಳಗೆ ನಿಶ್ಚೈಸಿದನು=ದ್ರೌಪದಿಗೆ ಆಗಿರುವ ಅಪಮಾನಕ್ಕೆ ತಕ್ಕ ಪ್ರತೀಕಾರವನ್ನು ಮಾಡಲು ಬೀಮಸೇನನು ತನ್ನ ಮನದಲ್ಲಿಯೇ ತೀರ್‍ಮಾನಿಸಿಕೊಂಡನು;

ಬಡಿ=ಹೊಡೆ; ಖಳ=ಕೇಡಿ/ನೀಚ; ಹಿಳಿ=ಹಿಸುಕಿ ರಸವನ್ನು ತೆಗೆ; ಹಿಂಡು=ಅದುಮು/ಬಿಗಿಯಾಗಿ ನುಲಿ;

ಮೊದಲಲಿ ಇವಳ ಬಡಿದ ಈ ಖಳನನು ಹಿಳಿದು ಹಿಂಡುವೆನು=ಪ್ರತೀಕಾರದ ಮೊದಲ ಕೆಲಸವಾಗಿ ದ್ರೌಪದಿಯನ್ನು ಹೊಡೆದ ನೀಚನಾದ ಈ ಕೀಚಕನನ್ನು ಒದ್ದೆಬಟ್ಟೆಯನ್ನು ಹಿಂಡುವಂತೆ ನುಲಿನುಲಿದು ಕೊಲ್ಲುವೆನು;

ಅಖಿಳ=ಸಮಸ್ತ/ಎಲ್ಲ; ಬಾಂಧವ=ನೆಂಟ/ಆಪ್ತ; ವಿಗಡ=ಶೂರ/ಬಲಶಾಲಿ;

ಬಳಿಕ ಇವನ ಒಡಹುಟ್ಟಿದರನು ಇವನ ಅಖಿಳ ಬಾಂಧವರ, ವಿಗಡ ವಿರಾಟರಾಯನ ಕೊಲುವೆನು=ಅನಂತರ ಕೀಚಕನ ತಮ್ಮಂದಿರನ್ನು, ಕೀಚಕನ ನೆಂಟರು ಮತ್ತು ಆಪ್ತರನ್ನು, ಬಲಶಾಲಿಯಾದ ವಿರಾಟರಾಯನ್ನು ಕೊಲ್ಲುವೆನು;

ಅರಿ=ತಿಳಿ; ಮುನ್ನ=ಮೊದಲು; ಅರಿಯುವ ಮುನ್ನ=ನಾವು ಅಜ್ನಾತವಾಸದಲ್ಲಿರುವ ಪಾಂಡವರು ಎಂಬುದನ್ನು ಕುರುಕುಲದವರು ಕಂಡುಹಿಡಿಯುವುದಕ್ಕೆ ಮೊದಲು; ಸವರು=ನಾಶಗೊಳಿಸು; ಕಿಡಿ=ಬೆಂಕಿಯ ಉಂಡೆ; ಕಿಡಿಕಿಡಿಹೋಗು=ಇದೊಂದು ನುಡಿಗಟ್ಟು. ಅತ್ಯಂತ ಹೆಚ್ಚಿನ ಕೋಪತಾಪಗಳಿಂದ ಆಕ್ರೋಶಗೊಳ್ಳುವುದು;

ಅರಿಯದ ಮುನ್ನ ಕೌರವ ಕುಲವ ಸವರುವೆನು ಎಂದು ಆ ಭೀಮ ಕಿಡಿಕಿಡಿಯೋದನು=ನಾವು ಪಾಂಡವರು ಎಂಬುದನ್ನು ದುರ್‍ಯೋದನನು ಗುರುತಿಸುವುದಕ್ಕೆ ಮುನ್ನವೇ ಇಡೀ ಕುರುಕುಲವನ್ನೇ ನಾಶಮಾಡುತ್ತೇನೆ ಎಂದು ಬೀಮನು ಕೋಪೋದ್ರೇಕದಿಂದ ಕುದಿಯತೊಡಗಿದನು;

ಆತನ=ಬೀಮಸೇನನ; ಇಂಗಿತ=ಆಶಯ/ಇಚ್ಚೆ/ಮನದ ಒಳಮಿಡಿತ; ಅನುವು=ರೀತಿ/ಬಗೆ; ಅರಿತು=ಗ್ರಹಿಸಿಕೊಂಡು; ಮಹೀತಳ+ಅಧಿಪ; ಮಹೀತಳ=ಭೂಮಂಡಲ; ಅಧಿಪ=ರಾಜ/ಒಡೆಯ;

ಆತನ ಇಂಗಿತದ ಅನುವನು ಅರಿತು ಮಹೀತಳಾಧಿಪ ಧರ್ಮಸುತನು=ಬೀಮಸೇನನ ಮಯ್ ಮನದ ಕೋಪೋದ್ರೇಕದ ಹಾವಬಾವಗಳ ಉದ್ದೇಶವೇನೆಂಬುದನ್ನು ಗ್ರಹಿಸಿಕೊಂಡ ದರ್‍ಮರಾಯನು;

ವಲಲ=ಅಜ್ನಾತವಾಸದ ಸಮಯದಲ್ಲಿ ವಿರಾಟರಾಯನ ಅರಮನೆಯಲ್ಲಿ ಬಾಣಸಿಗನಾಗಿದ್ದ ಬೀಮಸೇನನ ಹೆಸರು; ಕಾತರ=ಕಳವಳ/ಉದ್ವೇಗ/ಆವೇಶ; ಸೈರಿಸು=ತಾಳು/ಸಹಿಸು;

ವಲಲ, ಅತಿ ಕಾತರಿಸದಿರು. ಸೈರಿಸು ಸೈರಿಸು=ವಲಲನೇ, ಅತಿಯಾದ ಆವೇಶಕ್ಕೆ ಒಳಗಾಗಬೇಡ. ತಾಳ್ಮೆಯಿಂದಿರು. ತಾಳ್ಮೆಯ ನಡೆನುಡಿಯೇ ಒಳ್ಳೆಯದು;

ತರು=ಮರ;

ಅಕಟ, ಈ ತರುವ ಮುರಿಯದಿರು=ಅಯ್ಯೋ…ಈ ಮರವನ್ನು ಮುರಿಯಬೇಡ;

ಸುಜನ=ಒಳ್ಳೆಯ ಜನರು; ವ್ರಾತ=ಗುಂಪು; ಆಶ್ರಯ=ಆಸರೆ/ಅವಲಂಬನ;

ಸುಜನವ್ರಾತಕೆ ಆಶ್ರಯವು=ಒಳ್ಳೆಯ ಜನರಿಗೆ ಆಸರೆಯಾಗಿದೆ. ಅಂದರೆ ಹೂ ಕಾಯಿ ಹಣ್ಣು ಮತ್ತು ನೆರಳನ್ನು ನೀಡುವ ತಾಣವಾಗಿದೆ;

ಬಾಣಸು=ಅಡುಗೆ; ಮಹಾತಿಶಯ=ದೊಡ್ಡದಾಗಿರುವ; ತರು+ಉಂಟು;

ನಿನ್ನಯ ಬಾಣಸಿನ ಮನೆಗೆ ಊರ ಹೊರಗೆ ಮಹಾತಿಶಯ ತರುವುಂಟು=ನಿನ್ನ ಅಡುಗೆಮನೆಗೆ ಸವುದೆಯ ಅಗತ್ಯವಿದ್ದರೆ ಊರಿನ ಹೊರಗೆ ಅತಿದೊಡ್ಡದಾದ ಮರವಿದೆ;

ಧರ್ಮಮಯ=ಜನರಿಗೆ ಉಪಕಾರಿಯಾಗಿರುವ;

ಧರ್ಮಮಯ ತರು ಇದನು ಮುರಿಯದಿರು=ಜನರ ಬದುಕಿಗೆ ಆಸರೆಯಾಗಿರುವ ಮತ್ತು ಉಪಕಾರಿಯಾಗಿರುವ ಈ ಮರವನ್ನು ಮುರಿಯಬೇಡ;

ಎಮ್ಮ ಮಾತನು ಕೇಳು ಎನಲು=ನಮ್ಮ ಮಾತುಗಳಿಗೆ ಬೆಲೆಕೊಡು ಎಂದು ನುಡಿಯಲು; ದರ್‍ಮರಾಯನು ಬೀಮನಿಂದ ಕೀಚಕ ಮತ್ತು ರಾಜವಂಶದವರ ಮೇಲೆ ಆಗಬಹುದಾಗಿದ್ದ ಹಲ್ಲೆಯನ್ನು ತಡೆಗಟ್ಟಲೆಂದು ಮತ್ತು ಅಜ್ನಾತವಾಸದ ಸಮಯದಲ್ಲಿ ತಮಗೆ ಆಶ್ರಯವನ್ನು ನೀಡಿರುವ ವಿರಾಟರಾಯನನ್ನಾಗಲಿ ಇಲ್ಲವೇ ವಿರಾಟರಾಯನ ಕಡೆಯವರನ್ನಾಗಲಿ ಕೊಲ್ಲುವುದು ಸರಿಯಲ್ಲ ಎಂಬುದನ್ನು ಮರದ ನೆಪದಲ್ಲಿ ಸೂಚಿಸುತ್ತಾನೆ;

ಮಿಗೆ=ಹೆಚ್ಚಿನದಾದ; ದುಗುಡ=ಚಿಂತೆ/ತಳಮಳ/ಕಳವಳ; ಸರಿ=ಹೋಗು;

ಸುಮ್ಮನೆ ಭೀಮ ಓಲಗದಿಂದ ಮಿಗೆ ದುಗುಡದಲಿ ಸರಿದನು=ಬೀಮನು ಅಣ್ಣನ ಮಾತಿಗೆ ಎದುರಾಡದೆ ಹೆಚ್ಚಿನ ತಳಮಳದಿಂದ ಕುದಿಯುತ್ತ ಒಡ್ಡೋಲಗದಿಂದ ಹೊರನಡೆದನು; ಸೈರಂಧ್ರಿಯನ್ನು ಕುರಿತು=ರಾಜ, ಸಬಿಕರು ಮತ್ತು ತನ್ನನ್ನು ಆಕ್ರೋಶ ಮತ್ತು ವ್ಯಂಗ್ಯದ ನುಡಿಗಳಿಂದ ಪ್ರಶ್ನಿಸಿದ್ದ ಸೈರಂದ್ರಿಯನ್ನು ಉದ್ದೇಶಿಸಿ;

ಮಾನಿನಿ=ಹೆಂಗಸು; ಕರ್ಮಫಲ+ಇದು; ಕರ್ಮಫಲ=ಇದೊಂದು ನುಡಿಗಟ್ಟು. ಕರ್ಮ=ಕೆಲಸ; ಫಲ=ಉಂಟಾಗಿರುವ ಪರಿಣಾಮ; ಕರ್ಮಫಲ=ಯಾವುದೇ ಮಾನವ ಜೀವಿಯು ತನ್ನ ಹಿಂದಿನ ಜನ್ಮಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ, ಈ ಜನ್ಮದಲ್ಲಿ ಒಳ್ಳೆಯ ಪಲವನ್ನು ಪಡೆದು ಆನಂದ ಹಾಗೂ ನೆಮ್ಮದಿಯಿಂದ ಬಾಳುತ್ತಾನೆ/ಳೆ; ಹಿಂದಿನ ಜನ್ಮದಲ್ಲಿ ಕೆಟ್ಟ ಕೆಲಸಗಳನ್ನು ಮಾಡಿದ್ದರೆ, ಈ ಜನ್ಮದಲ್ಲಿ ಬಡತನ, ಸಂಕಟ ಮತ್ತು ಅಪಮಾನಕ್ಕೆ ಗುರಿಯಾಗಿ ನರಳುತ್ತಾರೆ ಎಂಬ ನಂಬಿಕೆಯು ಜನಸಮುದಾಯದ ಮನದಲ್ಲಿ ತಲೆತಲಾಂತರಗಳಿಂದಲೂ ಹಾಸುಹೊಕ್ಕಾಗಿ ಬಂದಿದೆ;

ಮಾನಿನಿ, ನಿನಗೆ ಕರ್ಮಫಲವಿದು=ಮಾನಿನಿ, ಇಂತಹ ಹಲ್ಲೆ ಮತ್ತು ಅಪಮಾನಕ್ಕೆ ನೀನು ಸಿಲುಕಿ ನರಳುತ್ತಿರುವುದು ನಿನ್ನ ಕರ್‍ಮಪಲ. ಇದಕ್ಕೆ ನಿನ್ನ ಹಿಂದಿನ ಜನ್ಮದ ನಡೆನುಡಿಗಳು ಕಾರಣವೇ ಹೊರತು ಬೇರೆಯವರಲ್ಲ;

ನಿಮ್ಮ ಭವನಕೆ ಹೋಗು=ದಾಸಿಯಾಗಿರುವ ನೀನು ನಿನ್ನ ರಾಣಿವಾಸಕ್ಕೆ ಹಿಂತಿರುಗು;

ಶಿಕ್ಷೆ=ದಂಡನೆ; ಅಮ್ಮದು=ಶಕ್ತವಾಗಿಲ್ಲ;

ಈ ಸಭೆ ಶಿಕ್ಷಿಸಲು ಅಮ್ಮದು=ನಿನ್ನ ಮೇಲೆ ಹಲ್ಲೆ ನಡೆಸಿದ ಕೀಚಕನನ್ನು ದಂಡಿಸಲು ಈ ರಾಜನಾಗಲಿ ಇಲ್ಲವೇ ಸಬಾಸದರಾಗಲಿ ಶಕ್ತರಲ್ಲ. ಏಕೆಂದರೆ ಮಹಾಬಲನಾದ ಕೀಚಕನನ್ನು ಎದುರುಹಾಕಿಕೊಂಡು ಯಾರೂ ಉಳಿಯಲಾರರು;

ಮತ್ಸ್ಯ=ಒಂದು ನಗರದ ಹೆಸರು; ಭೂಪತಿ=ರಾಜ; ಮತ್ಸ್ಯಭೂಪತಿ=ವಿರಾಟರಾಯ; ಬಗೆ=ಗಣಿಸು/ಲೆಕ್ಕಿಸು;

ಆತನು ಮತ್ಸ್ಯಭೂಪತಿಯ ಬಗೆಯನು=ಕೀಚಕನು ರಾಜನಾದ ವಿರಾಟರಾಯನನ್ನು ಲೆಕ್ಕಿಸುವುದಿಲ್ಲ;

ಕೋಪಕೆ ಅವಸರವಲ್ಲ=ಕೋಪವನ್ನು ಮಾಡಿಕೊಳ್ಳುವುದಕ್ಕೆ ಇದು ಸಮಯವಲ್ಲ. ಕೋಪಿಸಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ;

ಕಾಪುರುಷ=ಹೇಡಿ/ಅಂಜುಬುರುಕ;

ಪತಿಗಳು ನಿನ್ನವರು ಕಾಪುರುಷರೇ=ನಿನ್ನ ಗಂಡಂದಿರು ಹೇಡಿಗಳೇ / ನಿನ್ನ ಗಂಡಂದಿರು ಇದಕ್ಕೆ ತಕ್ಕ ಪ್ರತೀಕಾರವನ್ನು ಇಂದಲ್ಲ ನಾಳೆ ಮಾಡಿಯೇ ಮಾಡುತ್ತಾರೆ;

ಪರಿತಾಪ=ಬಹಳ ಹೆಚ್ಚಿನ ಸಂಕಟ;

ಪರಿತಾಪವನು ಬೀಳ್ಕೊಡು=ಅತಿಯಾದ ಸಂಕಟದಿಂದ ನರಳಬೇಡ;

ನೀನು ಪತಿವ್ರತೆ ಪುಣ್ಯವಧು=ನೀನು ಪತಿವ್ರತೆ ಮತ್ತು ಪುಣ್ಯವಂತೆ. ನಿನಗೆ ಒಳ್ಳೆಯದಾಗುತ್ತದೆ;

ಕ್ಷಮೆ=ಬೇರೆಯವರು ಮಾಡಿದ ತಪ್ಪನ್ನು ಮನ್ನಿಸುವುದು; ಅಖಿಲ=ಸಮಸ್ತ/ಎಲ್ಲ; ದೋಷ+ಅಪಹಾರವು; ದೋಷ=ತಪ್ಪು; ಅಪಹಾರ=ಹೋಗಲಾಡಿಸು/ನಿವಾರಿಸು;

ಕ್ಷಮೆಯು ದೀಪವಲ್ಲಾ ಅಖಿಳ ದೋಷಾಪಹಾರವು=ಬೇರೆಯವರು ಮಾಡಿದ ತಪ್ಪನ್ನು ಮನ್ನಿಸುವಿಕೆಯು ದೀಪದ ಬೆಳಕಿನ ಕಿರಣಗಳೇ ಆಗಿವೆ. ಬೆಳಕಿನ ಕಿರಣಗಳು ತನ್ನ ಸುತ್ತಣ ಕತ್ತಲೆಯನ್ನು ಹೋಗಲಾಡಿಸುವಂತೆ ಕ್ಶಮೆ ಎಂಬುದು ತಪ್ಪನ್ನು ಮಾಡಿರುವ ವ್ಯಕ್ತಿಗಳಲ್ಲಿನ ಎಲ್ಲ ಬಗೆಯ ಕೆಟ್ಟಗುಣಗಳನ್ನು ಹೋಗಲಾಡಿಸಿ, ಅವರಲ್ಲಿ ಒಳ್ಳೆಯ ನಡೆನುಡಿಯನ್ನು ರೂಪಿಸುವ ಕಸುವನ್ನು ಹೊಂದಿರುತ್ತವೆ;

ಆ ಕ್ಷಮೆಯು ಶೌರ್ಯ ಧರ್ಮದ ರೂಪು ನೆಲೆ ಎನಲು=ಮನ್ನಿಸುವ ಗುಣವಿದ್ದವರಲ್ಲಿ ಶೂರತನ ಮತ್ತು ಒಳ್ಳೆಯ ನಡೆನುಡಿಗಳು ನೆಲೆಸಿರುತ್ತವೆ ಎಂದು ಕಂಕಭಟ್ಟನು ನುಡಿಯಲು;

ಇಂದು=ಚಂದ್ರ; ಇಂದುಮುಖಿ=ಚಂದ್ರನಂತೆ ಮೊಗವುಳ್ಳವಳು/ಸುಂದರಿ;

ಬಳಿಕ ಇಂದುಮುಖಿ ಎಂದಳು=ಕಂಕಬಟ್ಟನ ಸಾಂತ್ವನದ ನುಡಿಗಳನ್ನು ಕೇಳಿದ ನಂತರ ಸೈರಂದ್ರಿಯು ಈ ರೀತಿ ನುಡಿಯತೊಡಗಿದಳು;

ಮೂರೇ ಬಾರಿ ನೀರು ಹೊರಗಿಕ್ಕುವುದು=ಇದೊಂದು ನುಡಿಗಟ್ಟು. ಈಜು ಬಾರದ ಜೀವಿಯು ನೀರಿನಲ್ಲಿ ಮುಳುಗಿ ಸಾಯುತ್ತಿರುವಾಗ, ಆ ಜೀವಿಯು ಬದುಕಿ ಉಳಿಯಲು ಅವಕಾಶವನ್ನು ನೀಡಲೆಂದು ನೀರು ಮೂರು ಸಾರಿ ಮತ್ತೆ ಮತ್ತೆ ಮೇಲಕ್ಕೆ ತರುವುದು. ಈ ಅವಕಾಶವನ್ನು ಬಳಸಿಕೊಂಡು ಆ ಜೀವಿಯು ಬದುಕಿ ಉಳಿಯಬೇಕು ಎನ್ನುವುದು ಜನಮನದಲ್ಲಿರುವ ಒಂದು ತಿಳುವಳಿಕೆ;

ಜಾಡಿಸು=ಕೊಡಹು/ಒದರು; ಸೈರಿಸದು=ಸುಮ್ಮನಿರುವುದಿಲ್ಲ/ತಾಳಿಕೊಳ್ಳುವುದಿಲ್ಲ; ಬಳಿಕ ಅದು ಪಾಪಿ ಜಾಡಿಸೆ ಸೈರಿಸದು=ಮೂರು ಅವಕಾಶಗಳನ್ನು ಬಳಸಿಕೊಳ್ಳದಿದ್ದರೆ ಅನಂತರ ನೀರು ಆ ಜೀವಿಯು ಎಶ್ಟೇ ಪ್ರಯತ್ನಿಸಿದರೂ ಬಿಡದೆ ತನ್ನಲ್ಲಿ ಮುಳುಗಿಸಿಕೊಳ್ಳುತ್ತದೆ;

ಮೂರೇ ಬಾರಿ ನೀರು ಹೊರಗಿಕ್ಕುವುದು. ಬಳಿಕ ಅದು ಪಾಪಿ ಜಾಡಿಸೆ ಸೈರಿಸದು=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಇದುವರೆಗೆ ಬೇರೆ ಬೇರೆ ಹೆಣ್ಣು ಮಕ್ಕಳ ಮೇಲೆ ಅನೇಕ ಬಾರಿ ಅತ್ಯಾಚಾರ ಮಾಡಿದ್ದ ಕೀಚಕನು ಕೇಡಿನಿಂದ ಪಾರಾಗಿ ಬದುಕಿ ಉಳಿದಿದ್ದಾನೆ. ಈಗ ನನ್ನ ಮೇಲೆ ಹಲ್ಲೆ ಮಾಡಿ, ಅವನ ಪಾಪದ ಕೊಡ ತುಂಬಿ ಬಂದಿದೆ. ಇನ್ನು ಮುಂದೆ ಅವನಿಗೆ ಸಾವು ಬರಲಿದೆ;

ಅನ್ಯಾಯ=ನ್ಯಾಯವಲ್ಲದ್ದು; ಬಹುಳತೆ=ಹೆಚ್ಚಳ;

ಅನ್ಯಾಯ ಬಹುಳತೆಗೆ ಏನ ಮಾಡುವೆನು=ಕೆಟ್ಟ ನಡೆನುಡಿಯೇ ಹೆಚ್ಚಾಗಿರುವ ಎಡೆಯಲ್ಲಿ ನಾನು ಏನು ತಾನೆ ಮಾಡುವೆನು. ಅತ್ತ ಕೀಚಕನು ಕಾಮಿಯಾಗಿ ಹಲ್ಲೆ ಮಾಡಿದ್ದಾನೆ. ಇತ್ತ ರಾಜನನ್ನು ಮೊದಲುಗೊಂಡು ಸಬಾಸದರೆಲ್ಲರೂ ಮೂಕರಾಗಿದ್ದಾರೆ. ಈ ರಾಜಸಬೆಯಲ್ಲಿ ಅನ್ಯಾಯವನ್ನು ತಡೆಗಟ್ಟುವವರು ಯಾರು ಇಲ್ಲ. ಇಂತಹ ಸಮಯದಲ್ಲಿ ನಾನು ಹೇಗೆ ತಾನೆ ನನ್ನ ಮಾನಪ್ರಾಣಗಳನ್ನು ಕಾಪಾಡಿಕೊಳ್ಳಲಿ;

ಸೈರಣೆ=ತಾಳ್ಮೆಯ ನಡೆನುಡಿ; ಅವಧಿ=ಸಮಯದ ಪರಿಮಿತಿ/ಕಾಲದ ಗಡುವು;

ಸೈರಣೆಗೆ ತಾನು ಅವಧಿಯಿಲ್ಲಾ=ತಾಳ್ಮೆಯ ನಡೆನುಡಿಗೂ ಒಂದು ಮಿತಿಯಿದೆ. ಆದರೆ ಈಗ ಇಲ್ಲಿರುವವರು ತಮ್ಮ ಕಣ್ಣಮುಂದೆ ಕೆಟ್ಟದ್ದು ನಡೆಯುತ್ತಿದ್ದರೂ ಕೋಪಿಸಿಕೊಳ್ಳದೆ ಸುಮ್ಮನಾಗಿ ಏನನ್ನು ಮಾಡಲಾರದವರಾಗಿದ್ದಾರೆ;

ಪೌರುಷ=ಪರಾಕ್ರಮ; ಕಡು=ಬಹಳ; ಬಂಜೆ=ಗೊಡ್ಡು;

ಪೌರುಷವು ಕಡು ಬಂಜೆಯಾಯಿತು=ಇದೊಂದು ರೂಪಕ. ಪರಾಕ್ರಮವೆಂಬುದು ಗೊಡ್ಡಾಗಿದೆ. ಅಂದರೆ ಒಡ್ಡೋಲಗದಲ್ಲಿರುವ ಯಾವೊಬ್ಬ ವ್ಯಕ್ತಿಯಲ್ಲಿಯೂ ಕೆಟ್ಟದ್ದನ್ನು ತಡೆಗಟ್ಟಬಲ್ಲ ಕೆಚ್ಚು ಮತ್ತು ಕೇಡಿಯನ್ನು ಸದೆಬಡಿಯಬಲ್ಲ ಶಕ್ತಿಯೇ ಇಲ್ಲವಾಗಿದೆ;

ಆರಯಿಕೆ=ಸೇವೆ; ಜುಣುಗು=ಕುಗ್ಗು; ಜಾರು=ನುಣುಚಿಕೊಳ್ಳು;

ಆರಯಿಕೆಯಲಿ ಜುಣುಗಿ ಜಾರುವಿರಿ=ರಾಜಶಕ್ತಿಗೆ ಎದುರಾಡದೆ ಕುಗ್ಗಿ ಕುಸಿದು, ಕೆಟ್ಟದ್ದನ್ನು ತಡೆಗಟ್ಟಲಾರದೆ ನಿಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಂಡಿರುವಿರಿ ಎಂದು ಸೈರಂದ್ರಿಯು ಸಬಾಸದರೆಲ್ಲರನ್ನೂ ಚುಚ್ಚಿನುಡಿಯುತ್ತಾಳೆ;

ಅರರೆ=ಅಬ್ಬಬ್ಬಾ. ಅಚ್ಚರಿಯನ್ನು ಸೂಚಿಸುವಾಗ ಬಳಸುವ ಪದ; ದಿಟ್ಟೆ=ಎದೆಗಾತಿ;

ಅರರೆ, ಹೆಂಗಸು ದಿಟ್ಟೆ=ಅಬ್ಬಬ್ಬಾ! ಈ ಹೆಂಗಸು ಎದೆಗಾತಿ. ಅಂದರೆ ಯಾರನ್ನೂ ಲೆಕ್ಕಿಸದ ಕೆಚ್ಚಿನ ನಡೆನುಡಿಯವಳು;

ಮೋನ=ಮಾತನಾಡದೆ ಸುಮ್ಮನಿರುವಿಕೆ;

ಮೋನದೊಳು ಇರಲಿ=ಹೆಣ್ಣಾದ ಈಕೆಯು ಈ ರೀತಿ ರಾಜನನ್ನು ಮತ್ತು ಸಬಾಸದರನ್ನು ಲೆಕ್ಕಿಸದೆ ಮಾತನ್ನಾಡಬಾರದು. ಈಕೆಯು ತನ್ನ ಮೇಲಾದ ಹಲ್ಲೆಯನ್ನು ಸಹಿಸಿಕೊಂಡು ಸುಮ್ಮನಿರಬೇಕು;

ಇದು+ಆವ; ಆವ=ಯಾವ; ಅಂತರ=ವ್ಯತ್ಯಾಸ;

ಇದಾವ ಅಂತರವು=ರಾಜನ ಒಡ್ಡೋಲಗದಲ್ಲಿ ಗುರುಹಿರಿಯರ ಮುಂದೆ ಹೇಗೆ ನಡೆದುಕೊಳ್ಳಬೇಕು / ನಡೆದುಕೊಳ್ಳಬಾರದು ಎಂಬ ವ್ಯತ್ಯಾಸವನ್ನೇ ತಿಳಿಯದವಳು;

ಹೊರೆ=ಸಮೀಪ/ಬಳಿ/ಮುಂದೆ; ಬಾಯ್ಬಡಿಕತನ=ಬಾಯಿಗೆ ಬಂದಂತೆ ಮಾತನಾಡುವುದು; ಗರುವಾಯಿ=ದೊಡ್ಡತನ/ಮರ್‍ಯಾ ದೆ;

ರಾಯನ ಹೊರೆಯಲಿ ಈ ಬಾಯ್ಬಡಿಕತನ ಗರುವಾಯಿಯೇ ಎನಲು=ವಿರಾಟರಾಜನ ಒಡ್ಡೋಲಗದಲ್ಲಿ ಎಲ್ಲರ ಮುಂದೆ ಈ ರೀತಿ ಬಾಯಿಗೆ ಬಂದಂತೆ ಮಾತನಾಡುವುದು ಯಾರಿಗೂ ಮರ್‍ಯಾದೆಯನ್ನು ತರುವಂತಹುದಲ್ಲ ಎಂದು ಸೈರಂದ್ರಿಯನ್ನು ಅಲ್ಲಗಳೆಯಲು;

ಲಲಿತ+ಅಂಗಿ; ಲಲಿತ=ಸುಂದರವಾದ; ಅಂಗಿ=ದೇಹವನ್ನು ಉಳ್ಳವಳು; ಲಲಿತಾಂಗಿ=ಸುಂದರಿ;

ಲಲಿತಾಂಗಿ ಕೆರಳಿದಳು=ಸೈರಂದ್ರಿಯು ಸಬಾಸದರ ಮಾತುಗಳನ್ನು ಕೇಳಿ ಕೋಪೋದ್ರೇಕಗೊಂಡಳು;

ಹುರುಳು=ಶಕ್ತಿ; ಮಾರುತಿ=ಭೀಮ; ಅರುಹು=ತಿಳಿಸು/ಹೇಳು;

ಇಲ್ಲಿಯ ಹಿರಿಯರಲಿ ಹುರುಳಿಲ್ಲ. ಮಾರುತಿಗೆ ಅರುಹುವೆನು. ಬಳಿಕ ಆದುದಾಗಲಿ ಎನುತ ತಿರುಗಿದಳು=ಈ ಒಡ್ಡೋಲಗದಲ್ಲಿರುವ ಗುರುಹಿರಿಯರಲ್ಲಿ ಯಾರಿಗೂ ಕೆಟ್ಟದ್ದನ್ನು ತಡೆಗಟ್ಟುವ ಶಕ್ತಿಯಿಲ್ಲ. ಬೀಮನಿಗೆ ಈ ಸುದ್ದಿಯನ್ನು ತಿಳಿಸುತ್ತೇನೆ. ಅನಂತರ ಏನಾಗುತ್ತದೆಯೋ ಆಗಲಿ ಎಂದು ನುಡಿಯುತ್ತ ಸೈರಂದ್ರಿಯು ಒಡ್ಡೋಲಗದಿಂದ ಹೊರನಡೆದಳು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications