ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 8

– ಸಿ.ಪಿ.ನಾಗರಾಜ.

*** ಕೀಚಕನ ಪ್ರಸಂಗ: ನೋಟ – 8 ***

ಆ ಸುದೇಷ್ಣೆಯ ಮನೆಗೆ ಬರಲು, ಅವಳು ಈ ಸತಿಯ ನುಡಿಸಿದಳು.

ಸುದೇಷ್ಣೆ: ತಂಗಿ, ವಿಳಾಸವು ಅಳಿದಿದೆ… ಮುಖದ ದುಗುಡವು… ಇದೇನು ಹದನ?

ಸೈರಂಧ್ರಿ: ಈಸು ಮರವೆಯೆ. ಇದು ಅರಸುತನದ ಮಹಾ ಸಗಾಢಿಕೆ. ಎಮ್ಮ ನೀವು ಅಪಹಾಸ ಮಾಡುವಿರಿ. ನಿಮ್ಮ ಒಡಹುಟ್ಟಿದನು ದುರುಳ. ನೀವು ಅರಸುಗಳು ತಿರುಕುಳಿಗಳು. ಆವು ಇನ್ನು ಇರಲು ಬಾರದು. ನೃಪತಿ ತಪ್ಪಿದೊಡೆ ಆರು ಕಾವವರು. ಕರೆಸಿ ಬುದ್ಧಿಯ ಹೇಳಿ. ಎನ್ನನು ಹೊರೆಯಲಾಪರೆ ಹೊರೆಯಿರಿ. ಅಲ್ಲದಡೆ… ಅರಸಿ, ಎನ್ನನು ಕಳುಹುವುದು.

ಸುದೇಷ್ಣೆ: ಲಲನೆ ಕೇಳು, ಅನ್ಯಾಯದವರನು ಕೊಲಿಸುವೆನು. ಭಯ ಬೇಡ. ಪರಸತಿಗೆ ಅಳುಪಿದವನು ಒಡಹುಟ್ಟಿದನೆ… ಕಡುಪಾಪಿ ಹಗೆ.

ಸೈರಂಧ್ರಿ: ಕೊಲಿಸುವಡೆ ನೀವೇಕೆ. ತಪ್ಪಿನ ಬಳಿಯಲಿ ಎನ್ನಾತಗಳು ಕೀಚಕ ಕುಲವ ಸವರುವರು. ಎನಗೆ ಕಾರಣವಿಲ್ಲ ಸಾರಿದೆನು.

(ಎಂದು ಬೀಳ್ಕೊಂಡು ಅಬಲೆ ತನ್ನಯ ಮಂದಿರಕೆ ಬಂದು ಒಳಗೊಳಗೆ ಮನನೊಂದು ಸೈವೆರೆಗಾಗಿ ಚಿಂತಿಸಿ ಹಗಲ ನೂಕಿದಳು.)

ಸೈರಂಧ್ರಿ: (ತನ್ನಲ್ಲಿಯೇ) ಕೊಂದುಕೊಂಬೆನೆ ಆತ್ಮಘಾತಕ ಹಿಂದೆ ಹತ್ತದೆ ಮಾಣದು… ಏಗುವೆನು.

(ಎಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು. ಅಪಮಾನ ಮತ್ತು ಸಂಕಟದಿಂದ ನರಳುತ್ತ…)

ಆರಿಗೆ ಉಸುರುವೆನು… ಆರ ಸಾರುವೆನು… ಆರಿಗೆ ಒರಲುವೆನು… ಆರಿಗೆ ಅರುಹುವೆನು… ಆರ ಬೇಡುವೆನು… ಅಕಟ, ಹೆಂಗಸು ಜನ್ಮವನು ಸುಡಲಿ… ಘೋರ ಪಾತಕಿ ಎನ್ನವೊಲು ಮುನ್ನ ಆರು ನವೆದವರುಂಟು. ಮರಣವು ಬಾರದೆ.

(ಎಂದು ಶಶಿವದನೆ ಬಸುರನು ಹೊಯ್ದು ಒರಲಿದಳು.)

ಯಮಸುತಂಗೆ ಅರುಹುವೆನೆ ಧರ್ಮಕ್ಷಮೆಯ ಗರ ಹೊಡೆದಿಹುದು. ಪಾರ್ಥನು ಮಮತೆಯುಳ್ಳವನು ಎಂಬೆನೇ… ತಮ್ಮಣ್ಣನ ಆಜ್ಞೆಯಲಿ ಭ್ರಮಿತನಾಗಿಹನು. ಉಳಿದರಿಬ್ಬರು ರಮಣರು ಇವರು ಈ ನಾಯ ಕೊಲಲು ಅಕ್ಷಮರು.

ಎಲ್ಲರೊಳು ಕಲಿಭೀಮನೇ ಮಿಡುಕುಳ್ಳ ಗಂಡನು, ನಿಸ್ಸಂದೇಹ. ಹಾನಿ ಹರಿಬಕೆ ನಿಲ್ಲದೆ ಅಂಗೈಸುವನು. ಕಡು ಹೀಹಾಳಿಯುಳ್ಳವನು. ಖುಲ್ಲನಿವನ ಉಪಟಳವನು ಆತಂಗೆ ಎಲ್ಲವನು ಹೇಳುವೆನು. ಬಳಿಕ ಅವನಲ್ಲಿ ಹುರುಳು ಇಲ್ಲದೊಡೆ ಘೋರತರ ವಿಷವ ಕುಡಿವೆನು.

(ಎಂದು ನಿಲಯವನು ಹೊರವಂಟು)

ಪದ ವಿಂಗಡಣೆ ಮತ್ತು ತಿರುಳು

ಆ ಸುದೇಷ್ಣೆಯ ಮನೆಗೆ ಬರಲು, ಅವಳು ಈ ಸತಿಯ ನುಡಿಸಿದಳು=ವಿರಾಟರಾಯನ ಒಡ್ಡೋಲಗದಲ್ಲಿ ಯಾರೊಬ್ಬರಿಂದಲೂ ನ್ಯಾಯ ದೊರಕದೆ ಕಂಗಾಲಾದ ಸೈರಂದ್ರಿಯು ಸುದೇಶ್ಣೆಯ ರಾಣಿವಾಸಕ್ಕೆ ಬರುತ್ತಾಳೆ. ಆಗ ರಾಣಿ ಸುದೇಶ್ಣೆಯು ಸೈರಂದ್ರಿಯ ಉಡುಗೆ ತೊಡುಗೆಯಲ್ಲಾಗಿದ್ದ ಅಸ್ತವ್ಯಸ್ತತೆಯನ್ನು ಮತ್ತು ಅವಳ ಮೊಗದಲ್ಲಿ ಕಂಡು ಬರುತ್ತಿರುವ ದುಗುಡವನ್ನು ಗಮನಿಸಿ ಸೈರಂದ್ರಿಯನ್ನು ಪ್ರಶ್ನಿಸುತ್ತಾಳೆ;

ವಿಳಾಸ=ಅಂದ/ಸೊಬಗು; ಅಳಿ=ನಾಶವಾಗು/ಇಲ್ಲವಾಗು;

ತಂಗಿ, ವಿಳಾಸವು ಅಳಿದಿದೆ=ತಂಗಿ, ನಿನ್ನ ಅಂದಚಂದದ ರೂಪದ ಸೊಬಗು ಇಲ್ಲವಾಗಿದೆ;

ದುಗುಡ=ಚಿಂತೆ/ಆತಂಕ;

ಮುಖದ ದುಗುಡವು=ನಿನ್ನ ಮೊಗದಲ್ಲಿ ಆತಂಕ ಎದ್ದುಕಾಣುತ್ತಿದೆ;

ಹದನು=ಅವಸ್ತೆ/ಸ್ತಿತಿ;

ಇದೇನು ಹದನ=ನಿನ್ನ ಈ ಅವಸ್ತೆಗೆ ಕಾರಣವೇನು?

ಈಸು=ಇಶ್ಟು; ಮರವೆ=ನೆನಪಿಲ್ಲದಿರುವುದು;

ಈಸು ಮರವೆಯೆ=ನಿಮಗೆ ಇಶ್ಟೊಂದು ಮರವೆಯೆ. ಈಗ ಕೆಲವು ಸಮಯದ ಹಿಂದೆ ನೀವೇ ನನ್ನನ್ನು ಆ ಕೀಚಕನ ಮನೆಗೆ ಜೇನುತುಪ್ಪವನ್ನು ತರಲೆಂದು ಕಳುಹಿಸಿದ್ದನ್ನು ಮರೆತಿರುವಿರಾ;

ಅರಸುತನ=ಅದಿಕಾರ ಮತ್ತು ಸಿರಿವಂತಿಕೆಯ ಆಡಳಿತ; ಮಹಾ=ಹೆಚ್ಚಿನ; ಸಗಾಢಿಕೆ=ದೊಡ್ಡಸ್ತಿಕೆ;

ಇದು ಅರಸುತನದ ಮಹಾ ಸಗಾಢಿಕೆ=ಇದು ಮರೆವೆಯಲ್ಲ. ಅರಸುತನದ ದೊಡ್ಡಸ್ತಿಕೆ. ಅದಿಕಾರ ಮತ್ತು ಸಿರಿವಂತಿಕೆಯಿಂದ ಬಂದಿರುವ ಸೊಕ್ಕಿನ ನಡೆನುಡಿ;

ಎಮ್ಮ=ನಮ್ಮನ್ನು; ಅಪಹಾಸ=ಅಣಕದ ನುಡಿಯಿಂದ ಚುಚ್ಚಿ ಮನಸ್ಸನ್ನು ಗಾಸಿಗೊಳಿಸುವುದು;

ಎಮ್ಮ ನೀವು ಅಪಹಾಸ ಮಾಡುವಿರಿ=ನೀವು ನಮ್ಮ ಜೀವನದ ಜತೆ ಚೆಲ್ಲಾಟವಾಡುತ್ತಿರುವಿರಿ;

ನಿಮ್ಮ ಒಡಹುಟ್ಟಿದನು ದುರುಳ=ನಿಮ್ಮ ತಮ್ಮನು ನೀಚ;

ತಿರುಕುಳಿ=ಹೀನ ವ್ಯಕ್ತಿ/ನೀಚ ವ್ಯಕ್ತಿ;

ನೀವು ಅರಸುಗಳು ತಿರುಕುಳಿಗಳು=ರಾಜ ಮನೆತನದ ನೀವೆಲ್ಲರೂ ಹೀನ ವ್ಯಕ್ತಿಗಳಾಗಿದ್ದೀರಿ. ನಿಮ್ಮ ತಮ್ಮನಾದ ಕೀಚಕನು ನನ್ನ ಮೇಲೆ ಹಲ್ಲೆ ಮಾಡಿದ. ನಿಮ್ಮ ಗಂಡನಾದ ರಾಜ ವಿರಾಟರಾಯನು ಹಲ್ಲೆಯನ್ನು ನೋಡಿಕೊಂಡು ಸುಮ್ಮನಾದ. ಇಲ್ಲಿ ನೀವು ಏನೂ ಗೊತ್ತಿಲ್ಲದವರಂತೆ ಮಾತನಾಡುತ್ತಿರುವಿರಿ;

ಆವು=ನಾವು;

ಆವು ಇನ್ನು ಇರಲು ಬಾರದು=ಇಶ್ಟೆಲ್ಲಾ ನಡೆಯುತ್ತಿರುವಾಗ, ಇನ್ನು ಮುಂದೆ ನಾನು ಇಲ್ಲಿರಬಾರದು;

ನೃಪತಿ=ರಾಜ; ತಪ್ಪು=ಕ್ರಮ ಬಿಟ್ಟು ನಡೆಯುವುದು; ಆರು=ಯಾರು; ಕಾಯ್=ಕಾಪಾಡು;

ನೃಪತಿ ತಪ್ಪಿದೊಡೆ ಆರು ಕಾವವರು=ಜನರ ಮಾನಪ್ರಾಣಗಳನ್ನು ಕಾಪಾಡಬೇಕಾದ ರಾಜನೇ ತನ್ನ ಕರ್‍ತ ವ್ಯವನ್ನು ಮಾಡದೆ ಸುಮ್ಮನಾದರೆ, ಕೇಡಿಗಳ ಹಲ್ಲೆಯಿಂದ ಹೆಂಗಸರನ್ನು ಮತ್ತು ಬಲಹೀನರನ್ನು ಇನ್ನಾರು ತಾನೆ ಕಾಪಾಡುತ್ತಾರೆ;

ಕರೆಸಿ ಬುದ್ಧಿಯ ಹೇಳಿ=ನಿಮ್ಮ ತಮ್ಮನನ್ನು ಇಲ್ಲಿಗೆ ಕರೆಸಿಕೊಂಡು ಅವನಿಗೆ ಈ ರೀತಿ ಹೆಂಗಸರ ಬಗ್ಗೆ ನಡೆದುಕೊಳ್ಳುವುದು ಸರಿಯಲ್ಲವೆಂದು ಬುದ್ದಿಯನ್ನು ಹೇಳಿ ಎಚ್ಚರಿಕೆಯನ್ನು ನೀಡಿ;

ಹೊರೆ=ಕಾಪಾಡು; ಹೊರೆಯಲಾಪರೆ=ಕಾಪಾಡುವ ಶಕ್ತಿಯಿದ್ದರೆ;

ಎನ್ನನು ಹೊರೆಯಲಾಪರೆ ಹೊರೆಯಿರಿ=ನಿಮ್ಮ ದಾಸಿಯಾದ ನನ್ನ ಮಾನಪ್ರಾಣಗಳನ್ನು ಕಾಪಾಡುವ ಶಕ್ತಿ ಮತ್ತು ಮನಸ್ಸು ನಿಮ್ಮಲ್ಲಿದ್ದರೆ, ಇನ್ನು ಮುಂದೆ ಇಂತಹ ಹಲ್ಲೆಯು ನಡೆಯದಂತೆ ತಡೆದು ನನ್ನನ್ನು ಕಾಪಾಡಿ;

ಅರಸಿ=ರಾಣಿ;

ಅಲ್ಲದಡೆ ಅರಸಿ ಎನ್ನನು ಕಳುಹುವುದು=ನಿಮ್ಮಿಂದ ಆಗದಿದ್ದರೆ, ರಾಣಿಯೇ ನನ್ನನ್ನು ರಾಣಿವಾಸದಿಂದ ಹೊರಕ್ಕೆ ಕಳುಹಿಸುವುದು. ಅಂದರೆ ನಾನು ದಾಸಿ ಕೆಲಸವನ್ನು ಬಿಟ್ಟು ಹೊರಡುತ್ತೇನೆ;

ಲಲನೆ=ಹೆಂಗಸು;

ಲಲನೆ ಕೇಳು, ಅನ್ಯಾಯದವರನು ಕೊಲಿಸುವೆನು ಭಯ ಬೇಡ=ಸೈರಂದ್ರಿಯೇ ಕೇಳು, ಅನ್ಯಾಯ ಮಾಡಿದವರನ್ನು ಕೊಲ್ಲಿಸುತ್ತೇನೆ. ಹೆದರದಿರು;

ಅಳುಪು=ಬಯಸು/ಇಚ್ಚಿಸು;

ಪರಸತಿಗೆ ಅಳುಪಿದವನು ಒಡಹುಟ್ಟಿದನೆ=ಬೇರೆಯವರ ಹೆಂಡತಿಯೊಡನೆ ಕಾಮದ ನಂಟನ್ನು ಪಡೆಯಲು ಹಂಬಲಿಸಿದ ಆ ಕೀಚಕನು ಇಂದಿನಿಂದ ನನ್ನ ತಮ್ಮನಲ್ಲ;

ಕಡುಪಾಪಿ ಹಗೆ=ಅಂತಹ ಕೆಡುಕನು ದೊಡ್ಡ ಪಾಪಿ ಮತ್ತು ನನ್ನ ಪಾಲಿಗೆ ಶತ್ರುವಾಗಿದ್ದಾನೆ;

ಕೊಲಿಸುವಡೆ ನೀವೇಕೆ=ನನ್ನ ಮೇಲೆ ಕಾಮದ ಹಲ್ಲೆಯನ್ನು ನಡೆಸಿದ ಕೀಚಕನನ್ನು ಕೊಲ್ಲಿಸುವುದಕ್ಕೆ ನೀವೇಕೆ ಶ್ರಮ ತೆಗೆದುಕೊಳ್ಳುತ್ತೀರಿ;

ಬಳಿಯಲಿ=ಅನಂತರ;

ತಪ್ಪಿನ ಬಳಿಯಲಿ=ಇಂತಹ ತಪ್ಪನ್ನು ಮಾಡಿರುವಾಗ;

ಎನ್ನಾತಗಳು=ನನ್ನ ಗಂಡಂದಿರು; ಕುಲ=ವಂಶ; ಸವರು=ನಾಶಗೊಳಿಸು;

ತಪ್ಪಿನ ಬಳಿಯಲಿ ಎನ್ನಾತಗಳು ಕೀಚಕ ಕುಲವ ಸವರುವರು=ನನ್ನ ಮೇಲೆ ಕಾಮದ ಉದ್ದೇಶದಿಂದ ಹಲ್ಲೆ ಮಾಡಿ, ದೊಡ್ಡ ತಪ್ಪನ್ನು ಎಸಗಿರುವ ಕೀಚಕನ ವಂಶವನ್ನೇ ನನ್ನ ಗಂಡಂದಿರು ನಾಶಗೊಳಿಸುತ್ತಾರೆ;

ಕಾರಣ+ಇಲ್ಲ; ಕಾರಣ=ನಿಮಿತ್ತ/ಸಲುವಾಗಿ; ಸಾರು=ಒತ್ತಿ ಹೇಳು;

ಎನಗೆ ಕಾರಣವಿಲ್ಲ ಸಾರಿದೆನು ಎಂದು ಬೀಳ್ಕೊಂಡು=ನಿಮ್ಮ ತಮ್ಮನ ಸಾವಿಗೆ ನಾನು ಕಾರಣಳು ಎಂಬ ಆರೋಪವನ್ನು ನನ್ನ ಮೇಲೆ ಹೊರಿಸಬೇಡಿ ಎಂದು ಸೈರಂದ್ರಿಯು ಸುದೇಶ್ಣೆಗೆ ನೇರವಾದ ನುಡಿಗಳಿಂದ ಹೇಳಿ, ಅಲ್ಲಿಂದ ಹೊರ ನಡೆದಳು;

ಅಬಲೆ=ಹೆಂಗಸು;

ಅಬಲೆ ತನ್ನಯ ಮಂದಿರಕೆ ಬಂದು=ಸೈರಂದ್ರಿಯು ರಾಣಿವಾಸದಲ್ಲಿದ್ದ ತನ್ನ ಕೊಟಡಿಗೆ ಬಂದು;

ಸೈವೆರಗು=ಅತಿಯಾದ ತಳಮಳ/ಸಂಕಟ;

ಒಳಗೊಳಗೆ ಮನನೊಂದು ಸೈವೆರೆಗಾಗಿ ಚಿಂತಿಸಿ ಹಗಲ ನೂಕಿದಳು=ಕೀಚಕನ ಹಲ್ಲೆಯಿಂದ ಮಯ್ ಮನ ಗಾಸಿಗೊಂಡಿರುವ ಸೈರಂದ್ರಿಯು ತನ್ನೊಳಗೆ ನೋವನ್ನು ತಿನ್ನುತ್ತ, ಕೀಚಕನ ಕಾಮದ ಕಿರುಕುಳದಿಂದ ಪಾರಾಗುವ ಬಗೆಯನ್ನು ಚಿಂತಿಸುತ್ತ ಹೆಚ್ಚಿನ ತಳಮಳದಿಂದ ಅಂದಿನ ಹಗಲನ್ನು ಕಳೆದಳು;

ಕೊಂದುಕೊಂಬೆನೆ=ಸಾಯೋಣವೆಂದರೆ; ಆತ್ಮ=ಜೀವ; ಘಾತಕ=ಕೊಲ್ಲುವ; ಮಾಣ್=ಬಿಡು;

ಕೊಂದುಕೊಂಬೆನೆ ಆತ್ಮಘಾತಕ ಹಿಂದೆ ಹತ್ತದೆ ಮಾಣದು=ಸಾಯೋಣವೆಂದರೆ ಆತ್ಮಹತ್ಯೆಯನ್ನು ಮಾಡಿಕೊಂಡ ಕೆಟ್ಟ ಹೆಸರು ಬರದೆ ಇರದು;

ಏಗು=ನಿಬಾಯಿಸು/ಜಯಿಸು/ಏನನ್ನು ಮಾಡು;

ಏಗುವೆನು=ಇತ್ತ ಕೀಚಕನ ಕಿರುಕುಳ… ಅತ್ತ ಯಾರೊಬ್ಬರ ನೆರವು ಇಲ್ಲದೆ ಒಬ್ಬಂಟಿಯಾಗಿರುವ ನಾನು ಈಗ ಯಾವ ಬಗೆಯಲ್ಲಿ ಹೋರಾಡಲಿ;

ಎಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು=ಹೀಗೆ ಸೈರಂದ್ರಿಯು ತನ್ನ ಮನದಲ್ಲಿ ಅಪಾರವಾದ ಸಂಕಟಕ್ಕೆ ಒಳಗಾದಳು;

ಆರಿಗೆ=ಯಾರಿಗೆ; ಉಸುರು=ಹೇಳು;

ಆರಿಗೆ ಉಸುರುವೆನು=ಯಾರೊಡನೆ ನನಗೆ ಬಂದಿರುವ ಆಪತ್ತನ್ನು ಹೇಳಿಕೊಳ್ಳಲಿ;

ಸಾರು=ಸಮೀಪಿಸು/ಹತ್ತಿರಕ್ಕೆ ಬರು;

ಆರ ಸಾರುವೆನು=ನನ್ನನ್ನು ಕಾಪಾಡಿರೆಂದು ಯಾರ ಬಳಿಗೆ ಹೋಗಲಿ;

ಒರಲು=ಅರಚು/ಕೂಗಿಕೊಳ್ಳು/ನರಳು;

ಆರಿಗೆ ಒರಲುವೆನು=ಯಾರ ಮುಂದೆ ನನ್ನ ಈ ಸಂಕಟವನ್ನು ತೋಡಿಕೊಳ್ಳಲಿ;

ಅರುಹು=ತಿಳಿಸು;

ಆರಿಗೆ ಅರುಹುವೆನು=ಯಾರಿಗೆ ಈ ನನ್ನ ಸಂಕಟವನ್ನು ತಿಳಿಸಲಿ;

ಆರ ಬೇಡುವೆನು=ನನ್ನನ್ನು ಕೀಚಕನಿಂದ ಕಾಪಾಡಿ ಎಂದು ಯಾರಲ್ಲಿ ಮೊರೆಯಿಡಲಿ;

ಅಕಟ=ಅಯ್ಯೋ; ವ್ಯಕ್ತಿಯು ಆಪತ್ತಿಗೆ ಸಿಲುಕಿ, ಸಂಕಟದಲ್ಲಿ ಬೇಯುತ್ತ, ಯಾರ ನೆರವೂ ಇಲ್ಲದೆ ತೊಳಲಾಡುತ್ತಿರುವಾಗ ಹೊರಹೊಮ್ಮುವ ಪದ; ಜನ್ಮ=ಹುಟ್ಟು; ಸುಡು=ಬೆಂಕಿಯಲ್ಲಿ ಬೇಯಿಸು;

ಅಕಟ, ಹೆಂಗಸು ಜನ್ಮವನು ಸುಡಲಿ=ಅಯ್ಯೋ… ಹೆಂಗಸಿನ ಜನ್ಮವನ್ನೇ ಸುಡಲಿ. ಅಂದರೆ ಹೆಂಗಸರು ಎಂಬ ಜೀವಿಗಳೇ ಈ ಜಗತ್ತಿನಲ್ಲಿ ಇಲ್ಲದಂತಾಗಲಿ. ಇದೊಂದು ನುಡಿಗಟ್ಟಾಗಿ ಬಳಕೆಗೊಂಡಿದೆ. ಸಮಾಜದಲ್ಲಿ ಗಂಡಸಿಗೆ ಇರುವ ದೊಡ್ಡ ಸ್ಥಾನಮಾನಗಳು ಹೆಂಗಸಿನ ಪಾಲಿಗೆ ಇಲ್ಲದಿರುವುದನ್ನು ಸೂಚಿಸುವುದರ ಜತೆಗೆ, ಸದಾಕಾಲ ಹೆಂಗಸರು ಗಂಡಸರ ಅತ್ಯಾಚಾರ, ಅನಾಚಾರ ಮತ್ತು ದಬ್ಬಾಳಿಕೆ ಒಳಗಾಗಿ ನರಳುತ್ತ, ತಮ್ಮ ಮಾನಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ತೊಳಲಾಡುತ್ತಿರುವುದನ್ನು ಹೇಳುತ್ತಿದೆ;

ಘೋರ=ಉಗ್ರವಾದುದು/ಪ್ರಚಂಡವಾದುದು; ಪಾತಕಿ=ಪಾಪವನ್ನು ಮಾಡಿದ ಹೆಣ್ಣು; ಎನ್ನ+ಒಲು; ಎನ್ನ=ನನ್ನ; ಒಲು=ಅಂತೆ; ಮುನ್ನ=ಮೊದಲು; ನವೆ=ಕೊರಗು;

ಘೋರ ಪಾತಕಿ ಎನ್ನವೊಲು ಮುನ್ನ ಆರು ನವೆದವರುಂಟು=ಮಹಾಪಾಪಿಯಾದ ನನ್ನ ರೀತಿಯಲ್ಲಿ ಈ ಮೊದಲು ಯಾರಾದರೂ ಇಂತಹ ಸಂಕಟದಿಂದ ಕೊರಗಿದ್ದಾರೆಯೇ; ಹತಾಶಳಾಗಿರುವ ಸೈರಂದ್ರಿಯು ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಿದ್ದಾಳೆ;

ಶಶಿ=ಚಂದ್ರ; ವದನ=ಮೊಗ; ಶಶಿವದನೆ=ಚಂದ್ರನ ಕಾಂತಿಯಂತೆ ಬೆಳಗುತ್ತಿರುವ ಮೊಗವುಳ್ಳವಳು/ಸುಂದರಿ; ಬಸುರು=ಹೊಟ್ಟೆ; ಹೊಯ್=ಹೊಡೆತ/ಬಡಿತ; ಬಸುರನು ಹೊಯ್ದು=ಇದೊಂದು ನುಡಿಗಟ್ಟು.ಅತಿಯಾದ ಸಂಕಟದಿಂದ ಹೊಟ್ಟೆಯೊಳಗಿನ ಉರಿಯನ್ನು ತಡೆಯಲಾರದೆ ಹೊಟ್ಟೆಯ ಮೇಲೆ ಕಯ್ಯನ್ನು ಆಡಿಸುತ್ತ ನರಳುವುದು; ಒರಲು=ಅರಚು/ಕೂಗಿಕೊಳ್ಳು;

ಮರಣವು ಬಾರದೆ ಎಂದು ಶಶಿವದನೆ ಬಸುರನು ಹೊಯ್ದು ಒರಲಿದಳು=ನನಗೆ ಸಾವಾದರೂ ಬರಬಾರದೆ ಎಂದು ಸೈರಂದ್ರಿಯು ಸಂಕಟವನ್ನು ತಡೆಯಲಾರದೆ ತನ್ನ ಹೊಟ್ಟೆಯ ಮೇಲೆ ಕಯ್ಯನ್ನಿಟ್ಟುಕೊಂಡು ಹೊರಳಾಡುತ್ತ ನರಳತೊಡಗಿದಳು;

ಯಮಸುತ=ದರ್‍ಮರಾಯ; ಅರುಹು=ಹೇಳು/ತಿಳಿಸು; ಕ್ಷಮೆ=ಇತರರ ತಪ್ಪನ್ನು ಮನ್ನಿಸುವ ಗುಣ; ಗರ=ದೆವ್ವ; ಗರ ಹೊಡೆಯುವುದು=ದೆವ್ವ ಹಿಡಿದುಕೊಳ್ಳುವುದು. ಇದೊಂದು ನುಡಿಗಟ್ಟು. ಯಾವುದಾದರೊಂದು ಸಂಗತಿಯಲ್ಲಿಯೇ ಸಂಪೂರ್‍ಣವಾಗಿ ತೊಡಗಿಕೊಳ್ಳುವುದು ಎಂಬ ತಿರುಳಿನಲ್ಲಿ ಬಳಕೆಯಾಗುತ್ತದೆ;

ಯಮಸುತಂಗೆ ಅರುಹುವೆನೆ ಧರ್ಮಕ್ಷಮೆಯ ಗರ ಹೊಡೆದಿಹುದು=ದರ್‍ಮರಾಯನೊಡನೆ ಈ ಸಂಕಟದಿಂದ ನನ್ನನ್ನು ಪಾರುಮಾಡು ಎಂದು ಹೇಳಿಕೊಳ್ಳೋಣವೆಂದರೆ ಆತನಿಗೆ ಎಲ್ಲರ ತಪ್ಪನ್ನು ಮನ್ನಿಸುವಂತಹ ದರ್‍ಮದ ದೆವ್ವ ಹಿಡಿದಿದೆ;

ಪಾರ್ಥ=ಅರ್‍ಜುನ; ಮಮತೆ+ಉಳ್ಳವನು; ಮಮತೆ=ಮೋಹ/ಪ್ರೀತಿ; ಎಂಬೆನೇ=ಎನ್ನೋಣವೇ; ಭ್ರಮಿತನು+ಆಗಿಹನು; ಭ್ರಮಿತ=ಹುಚ್ಚು/ಉನ್ಮಾದ;

ಪಾರ್ಥನು ಮಮತೆಯುಳ್ಳವನು ಎಂಬೆನೇ ತಮ್ಮಣ್ಣನ ಆಜ್ಞೆಯಲಿ ಭ್ರಮಿತನಾಗಿಹನು=ಅರ್‍ಜುನನು ನನ್ನ ಬಗ್ಗೆ ಮೋಹವುಳ್ಳವನು, ಅವನು ನನ್ನನ್ನು ಕಾಪಾಡುತ್ತಾನೆ ಎಂದು ನಂಬೋಣವೆಂದರೆ, ಅವನಿಗೆ ಅಣ್ಣನಾದ ದರ್‍ಮರಾಯನ ಅಪ್ಪಣೆಯೆಂಬ ದೆವ್ವ ಹಿಡಿದಿದೆ. ಅಂದರೆ ಅರ್‍ಜುನನು ಯಾವುದೇ ಸನ್ನಿವೇಶದಲ್ಲಿಯೂ ದರ್‍ಮರಾಯನು ಹಾಕಿದ ಗೆರೆಯನ್ನು ದಾಟುವುದಿಲ್ಲ. ಆದ್ದರಿಂದ ಈ ಅಜ್ನಾತವಾಸದ ಕಾಲದಲ್ಲಿ ಅರ್‍ಜುನನು ನನ್ನನ್ನು ಕಾಪಾಡಲು ಮುಂದೆ ಬರುವುದಿಲ್ಲ;

ಉಳಿದರು+ಇಬ್ಬರು; ರಮಣ=ಗಂಡ; ಕ್ಷಮ=ಶಕ್ತಿಯುಳ್ಳವನು; ಅಕ್ಷಮ=ಶಕ್ತಿಯಿಲ್ಲದವನು;

ಉಳಿದರಿಬ್ಬರು ರಮಣರು ಇವರು ಈ ನಾಯ ಕೊಲಲು ಅಕ್ಷಮರು=ಇನ್ನುಳಿದ ಇಬ್ಬರು ಗಂಡಂದಿರಾದ ನಕುಲ-ಸಹದೇವರಿಗೆ ಈ ನಾಯಿ ಕೀಚಕನನ್ನು ಕೊಲ್ಲುವ ಶಕ್ತಿಯಿಲ್ಲ;

ಮಿಡುಕು+ಉಳ್ಳ; ಮಿಡುಕು=ಕನಿಕರ/ಅನುಕಂಪ/ತುಡಿತ; ನಿಸ್ಸಂದೇಹ=ಸಂದೇಹವೇ ಇಲ್ಲ/ಅನುಮಾನವಿಲ್ಲ;

ಎಲ್ಲರೊಳು ಕಲಿಭೀಮನೇ ಮಿಡುಕುಳ್ಳ ಗಂಡನು, ನಿಸ್ಸಂದೇಹ=ನನ್ನ ಗಂಡಂದಿರಾದ ಅಯ್ದು ಮಂದಿ ಪಾಂಡವರಲ್ಲಿ ಕಲಿಬೀಮನೇ ನಿಜವಾಗಿ ನನ್ನ ಬಗ್ಗೆ ಕರುಣೆಯುಳ್ಳವನು. ಇದರಲ್ಲಿ ಸಂದೇಹವೇ ಇಲ್ಲ. ನನ್ನನ್ನು ಒಳಗೊಂಡಂತೆ ತಾಯಿ ಕುಂತಿ, ಅಣ್ಣನಾದ ದರ್‍ಮರಾಯ ಮತ್ತು ತಮ್ಮಂದಿರಾದ ಅರ್‍ಜುನ,  ನಕುಲ-ಸಹದೇವರ ಮಾನಪ್ರಾಣಗಳನ್ನು ಕಾಪಾಡುವುದರಲ್ಲಿ ಬೀಮನು ಸದಾಕಾಲ ಎಚ್ಚರದಿಂದಿರುತ್ತಾನೆ ಮತ್ತು ಹೋರಾಡುತ್ತಾನೆ;

ಹಾನಿ=ಕೇಡು; ಹರಿಬ=ತೊಂದರೆ/ಆಪತ್ತು; ನಿಲ್ಲದೆ=ಸುಮ್ಮನಾಗದೆ; ಅಂಗೈಸು=ಪ್ರಯತ್ನಿಸು/ಉದ್ಯೋಗಿಸು;

ಹಾನಿ ಹರಿಬಕೆ ನಿಲ್ಲದೆ ಅಂಗೈಸುವನು=ಯಾವುದೇ ಬಗೆಯ ಕೇಡಾಗಲಿ ಇಲ್ಲವೇ ಆಪತ್ತಾಗಲಿ ಉಂಟಾದಾಗ ಅಂಜದೆ ಹಿಂಜರಿಯದೆ ಸುಮ್ಮನಿರದೆ ಮುನ್ನುಗ್ಗಿ ಕಾಪಾಡಬಲ್ಲವನು;

ಕಡು=ಬಹಳ/ಹೆಚ್ಚಿನ; ಹೀಹಾಳಿ=ಹುರುಡು/ಹಟ/ಚಲ;

ಕಡು ಹೀಹಾಳಿಯುಳ್ಳವನು=ಹೆಚ್ಚಿನ ಚಲವುಳ್ಳವನು. ಕೇಡು ಬಗೆದವರನ್ನು ನಾಶ ಮಾಡುವ ಚಲವುಳ್ಳವನು;

ಖುಲ್ಲನು+ಇವನ; ಖುಲ್ಲ=ನೀಚ/ಕೇಡಿ; ಇವನ=ಈ ಕೀಚಕನ; ಉಪಟಳ=ಹಿಂಸೆ/ಪೀಡೆ; ಆತಂಗೆ=ಅವನಿಗೆ/ಬೀಮನಿಗೆ;

ಖುಲ್ಲನಿವನ ಉಪಟಳವನು ಆತಂಗೆ ಎಲ್ಲವನು ಹೇಳುವೆನು=ಕೇಡಿ ಕೀಚಕನಿಂದ ನನಗೆ ಆಗುತ್ತಿರುವ ಹಿಂಸೆಯನ್ನೆಲ್ಲಾ ಬೀಮನೊಡನೆ ಹೇಳಿಕೊಳ್ಳುತ್ತೇನೆ;

ಹುರುಳು=ಕೆಚ್ಚು/ಶಕ್ತಿ;

ಬಳಿಕ ಅವನಲ್ಲಿ ಹುರುಳು ಇಲ್ಲದೊಡೆ=ಬೀಮನೊಡನೆ ಹೇಳಿಕೊಂಡ ನಂತರ, ಅವನು ನನ್ನನ್ನು ಕಾಪಾಡುವ ಕೆಚ್ಚನ್ನು ತೋರಿಸದಿದ್ದರೆ/ಕೀಚಕನನ್ನು ಸದೆಬಡೆಯಲು ಒಪ್ಪದಿದ್ದರೆ;

ಘೋರತರ=ಅತಿ ಉಗ್ರವಾದ; ವಿಷ=ನಂಜು/ಸೇವಿಸಿದ ಕೂಡಲೇ ಸಾವನ್ನು ತರುವ ವಸ್ತು;

ಘೋರತರ ವಿಷವ ಕುಡಿವೆನು ಎಂದು ನಿಲಯವನು ಹೊರವಂಟು=ಅತಿ ಉಗ್ರವಾದ ನಂಜನ್ನು ಕುಡಿದು ಸಾವನ್ನಪ್ಪುತ್ತೇನೆ ಎಂಬ ಸಂಕಲ್ಪವನ್ನು ತಳೆದು, ರಾಣಿವಾಸದ ತನ್ನ ಕೊಟಡಿಯಿಂದ ಬೀಮನು ಇರುವ ಅಡುಗೆಯ ಮನೆಯ ಕಡೆಗೆ ಸೈರಂದ್ರಿಯು ನಡೆದಳು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications