ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 9
– ಸಿ.ಪಿ.ನಾಗರಾಜ.
*** ಕೀಚಕನ ಪ್ರಸಂಗ: ನೋಟ – 9 ***
ಕಂಗಳ ಬೆಳಗು ತಿಮಿರವ ಕೆಡಿಸೆ, ಕಂಕಣ ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ ಒಲಿದು ಮೇಲುದ ನೂಕಿ ನಡುಗುವ ಮೊಲೆಯ ಭರದಲಿ ಅಡಿ ಇಡುತ, ಬಾಣಸಿನ ಮನೆಗೆ ಕಳವಳದ ಕರಣದ ಮುಗುದೆ ಬಂದಳು. ಕೆಲದಲಿ ಒಟ್ಟಿದ ಪತ್ರ ಶಾಕಾವಳಿಯ ಫಲರಾಶಿಗಳ, ಕಳವೆಯ ಹೊಳೆವುತಿಹ ರಾಜಾನ್ನದಕ್ಕಿಯ, ಸಾಲ ಹರಿಯಣದ, ಕೆಲಬಲದ ಸಂಭಾರ ಚೂರ್ಣದ, ವಿವಿಧ ಭಕ್ಷ್ಯಾವಳಿಯ ತಳಿತ ಬೋನದ ಬಾಣಸದೊಳಗೆ ಮತ್ತಗಜಗಮನೆ ಬಂದಳು. ತರಿದ ಕುರಿಗಳ, ಹಂದಿಯ ಅಡಗಿನ ಜುರಿತ ರಕುತದ, ಮೊಲನ ಖಂಡದ, ತಿರಿದ ಗುಬ್ಬಿಯ, ಕೀಸಿ ಸೀಳಿದ ನವಿಲ ಲಾವುಗೆಯ, ತುರುಗಿದ ಎಲುವಿನ ಸಾಲ, ಸುಂಟಿಗೆ ಮೆರೆವ ಮಾಂಸದ ರಾಸಿಗಳ, ಹರಿದ ಎರಕೆಗಳ ಅಡಬಲದ ಮನೆಯ ಕಂಡು ಅಬಲೆ ಹೊಗಳಿದಳು.
ಸೈರಂಧ್ರಿ: (ತನ್ನಲ್ಲಿಯೇ) ಈ ಸೂವಾರ ವಿದ್ಯೆಯ ಭೀಮನು ಆರಲಿ ಅರಿದನೊ. ಭಾಪು, ವಿಧಿ ಮುನಿದು ಆರನು ಆವ ಅಂಗದಲಿ ಬರಿಸದು. ಶಿವ ಶಿವ…
(ಎನುತ ನಾರಿ ನಸುನಗುತ ಒಳಗೆ ಹೊಕ್ಕು, ಬಕಾರಿ ಮಂಚದೊಳು ಇರಲು, ನಿದ್ರಾಭಾರ ವಿಹ್ವಲಕರಣನನು ಲಲಿತಾಂಗಿ ಹೊದ್ದಿದಳು.)
ಎಬ್ಬಿಸಲು ಭುಗಿಲ್ ಎಂಬನೋ… ಮೇಣ್… ಒಬ್ಬಳೇ ಏತಕೆ ಬಂದೆ… ಮೋರೆಯ ಮಬ್ಬು ಇದೇಕೆ ಎಂದು ಎನ್ನ ಸಂತೈಸುವನೊ… ಸಾಮದಲಿ ತುಬ್ಬುವುದೊ. ತಾ ಬಂದ ಬರವು ಇದು ಜನದ ಮನಕೆ ನಿಬ್ಬರವಲಾ. ಇನ್ನು ಎಬ್ಬಿಸಿಯೆ ನೋಡುವೆನು.
(ಎನುತ ವಲ್ಲಭನ ಸಾರಿದಳು. ಮೆಲ್ಲ ಮೆಲ್ಲನೆ ಮುಸುಕ ಸಡಿಲಿಸಿ, ಗಲ್ಲವನು ಹಿಡಿದು ಅಲುಗಲು ಅಪ್ರತಿಮಲ್ಲನು ಎದ್ದನು. ಪಾಂಚಾಲ ನಂದನೆಯ ನೋಡಿದನು.)
ಭೀಮ: ವಲ್ಲಭೆಯೆ ಬರವೇನು. ಮುಖದಲಿ ತಲ್ಲಣವೆ ತಲೆದೋರುತಿದೆ. ತಳುವಿಲ್ಲದೆ ಉಸುರು. ಇರುಳೇಕೆ ಬಂದೆ. ಲತಾಂಗಿ ಹೇಳು. ಬಾಣಸದ ಭವನದ ನಾರಿಯರು ಸೈರಿಸರು. ದುರ್ಜನರು… ಖುಲ್ಲ ಕುಠಾರರು. ಇವರು ಅರಮನೆಯ ನಾಯ್ಗಳು. ನಾವು ದೇಶಿಗರು. ಕೆಲರು ಅರಿಯದಂತಿರೆ ಭಾರವಿದು. ನಾರಿ, ನೀ ಹೇಳು. ಇದು ಆರ ದೆಸೆಯಿಂದ ದುಗುಡವು ಆಯಿತು.
(ಎನಲು ಇಂದುಮುಖಿ ಇಂತು ಎಂದಳು.)
ದ್ರೌಪದಿ: ನಿನ್ನೆ ಹಗಲು ಅರೆಯಟ್ಟಿ ಕೀಚಕ ಕುನ್ನಿ ರಾಜ ಸಭೆಯಲಿ ಒದೆದನು. ನಿನ್ನ ವಂದಿಗರು ಇರಲು ಉಚಿತವೇ ತನಗೆ ಪರಿಭವ. ಎನ್ನನು ಅವ ಬೆಂಬಳಿಯ ಬಿಡ. ಇನ್ನು ನಾನು ಬದುಕುವಳಲ್ಲ. ಪಾತಕ ನಿನ್ನ ತಾಗದೆ ಮಾಣದು.
(ಎನಲು ಭೀಮ ಖತಿಗೊಂಡ.)
ಭೀಮ: ನಿನ್ನ ಹರಿಬಕೆ ಉಸುರಲಾಗದು. ಮಿಸುಕುವವರು ಆವಲ್ಲ. ಹೆಂಡಿರ ಗಸಣಿಗೊಂಬವರಲ್ಲ. ಹುದುವಿನ ಗಂಡತನ. ಇದನು ಶಶಿವದನೆ ಸುಡು. ಈ ಕಷ್ಟ ಅಪದೆಸೆಯವರು ನಾವಲ್ಲ. ನಿನ್ನವರು ಅಸಮ ಸಾಹಸರು. ಉಳಿದ ನಾಲ್ವರಿಗೆ ಅರುಹು ಹೋಗು. ದ್ರೌಪದಿ: ರಮಣ ಕೇಳು, ಉಳಿದವರು ತನ್ನನು ರಮಿಸುವರು. ಮಾನಾರ್ಥವೆನೆ ನಿರ್ಗಮಿಸುವರು. ನೀನಲ್ಲದೆ ಉಳಿದವರು ಉಚಿತ ಬಾಹಿರರು. ಮಮತೆಯಲಿ ನೀ ನೋಡು. ಚಿತ್ತದ ಸಮತೆಯನು ಬೀಳ್ಕೊಡು. ಕುಠಾರನ ಯಮನ ಕಾಣಿಸಿ ಕರುಣಿಸು.
(ಎಂದಳು ಕಾಂತೆ ಕೈಮುಗಿದು.)
ಭೀಮ: ಕಲಹಕಾದೊಡೆ ನಾವು. ರಮಿಸುವರು ಉಳಿದವರು. ಬಳಿಕೇನು ಗಾದೆಯ ಬಳಕೆ. ಕೆಲಬರು ಗಳಿಸಿದೊಡೆ, ಕೆಲರು ಉಂಡು ಜಾರುವರು. ನಿನ್ನಯ ಹಳಿವು ಹರಿಬವ ಹೇಳಿ ಚಿತ್ತವ ತಿಳುಹಿಕೊಂಬುದು. ಧರ್ಮಜನ ಹೊರೆಗೆ ನಾವು ಭೀತರು. ಅಳುಕಿ ನಡೆವವರಲ್ಲ. ದ್ರೌಪದಿ: ಹೆಂಡತಿಯ ಹರಿಬದಲಿ ಒಬ್ಬನೆ ಗಂಡುಗೂಸೇ ವೈರಿಯನು ಕಡಿ ಖಂಡವನು ಮಾಡುವನು ಮೇಣ್ ತನ್ನ ಒಡಲನು ಇಕ್ಕುವನು. ಗಂಡರೈವರು ಮೂರು ಲೋಕದ ಗಂಡರು. ಒಬ್ಬಳನು ಆಳಲಾರಿರಿ. ಗಂಡರೋ ನೀವ್ ಭಂಡರೋ ಹೇಳು. ಅಂದು ಕೌರವ ನಾಯಿ ಸಭೆಯಲಿ ಉನ್ನತಿಯ ತಂದು ತೋರಿದನು. ಬಳಿಕ ಇಂದು ಕೀಚಕ ಕುನ್ನಿ ರಾಜ ಸಭೆಯೊಳಗೆ ಒದೆದನು. ಅಂದು ಮೇಣ್ ಇಂದು ಆದ ಭಂಗಕೆ ಕುಂದು ಅದು ಆವುದು. ನೀವು ಬಲ್ಲಿದರು ಎಂದು ಹೊಕ್ಕರೆ ಹೆಣ್ಣ ಕೊಂದಿರಿ.
( ಎಂದಳು ಇಂದುಮುಖಿ.)
ಭೀಮ: ದಾನವರು ಮಾನವರೊಳು ಎನ್ನ ಅಭಿಮಾನವನು ಕೊಂಬವನ ಹೆಸರನು ಅದು ಏನನೆಂಬೆನು. ನೊಂದು ನುಡಿದೊಡೆ ಎಮಗೆ ಖಾತಿಯಿಲ್ಲ . ಈ ನಪುಂಸಕರೊಡನೆ ಹುಟ್ಟಿದ ನಾನು ಮೂಗುಳ್ಳವನೆ ಮಾನಿನಿ. ನೀನು ತೋರಿದ ಪರಿಯಲಿ ಎಂಬುದು. ಭೀತಿ ಬೇಡ. ಅಂದು ದುಶ್ಶಾಸನನ ಕರುಳನು ತಿಂದಡಲ್ಲದೆ ತಣಿವು ದೊರೆಕೊಳದು ಎಂದು ಹಾಯ್ದೊಡೆ, ಆ ವ್ಯಥೆಯ ಹಲುಗಿರಿದು ಮಾಣಿಸಿದನು. ಇಂದು ಕೀಚಕ ನಾಯನು ಎರಗುವೆನು ಎಂದು ಮರನನು ನೋಡಿದರೆ ಬೇಡ ಎಂದ ಹದನನು ನೀನು ಕಂಡೆ. ಎನಗುಂಟೆ ಅಪರಾಧ. ಹೆಣ್ಣ ಹರಿಬಕ್ಕೊಸುಗವೆ ತಮ್ಮಣ್ಣನ ಆಜ್ಞೆಯ ಮೀರಿ ಕುಂತಿಯ ಚಿಣ್ಣ ಬದುಕಿದನು ಎಂದು ಕುಜನರಾದವರು ನುಡಿವರು. ಅಣ್ಣನವರಿಗೆ ದೂರುವುದು. ಇವು ನಾವು ಉಣ್ಣದುರಿ. ರಾಯನ ಆಜ್ಞೆಯ ಕಣ್ಣಿಯಲಿ ಬಿಗಿವಡೆದು ಕೆಡೆದೆವು. ಕಾಂತೆ ಕೇಳು, ಫಲುಗುಣನ ಹೊದ್ದುವುದು. ಯಮನಂದನನ ಪಾದಕೆ ಬಿದ್ದು ಮನವನು ತಿದ್ದುವುದು. ಸಹದೇವ ನಕುಲರ ಕೈಯಲಿ ಎನಿಸುವುದು. ಗೆದ್ದು ಕೊಡುವರು. ನಿನ್ನ ಪಾಲಿಸದೆ ಇದ್ದರಾದೊಡೆ ದೋಷವು ಅವರನು ಹೊದ್ದುವುದು. ನೀನು ಎನ್ನ ಬರಿದೇ ಕಾಡ ಬೇಡ. ಗಂಡ ಗರ್ವವ ನುಡಿಯೆವು. ಎಮ್ಮಯ ದಂಡಿ ತಾನದು ಬೇರೆ. ನಾವು ಈ ಭಂಡತನದಲಿ ಬದುಕಲು ಅರಿಯೆವು. ಧರ್ಮಗಿರ್ಮವನು ಕೊಂಡು ಕೊನರುವರಲ್ಲ. ರಾಯನನು ಅಂಡಲೆದು ಕೀಚಕನ ತಲೆಯನು ಚೆಂಡನಾಡಿಸು ರಮಣಿ. ಮೇಣ್ ಅರ್ಜುನಗೆ ಹೇಳು. ತರುಣಿ, ದಿಟ ಕೇಳ್ ಇಂದು ಮೊದಲಾಗೆ ನೀ ನಾಲ್ವರಿಗೆ ಅರಸಿ. ನಾವು ಎಡೆಮುರಿದವರು. ನಿನ್ನಯ ಸೂಳು ಪಾಳೆಯವ ಬಿಟ್ಟವರು. ಅರಸನನು ಪ್ರಾರ್ಥಿಸುವುದು. ಅರ್ಜುನ ವರ ನಕುಲ ಸಹದೇವರಿಗೆ ವಿಸ್ತರಿಸಿ ಹೇಳ್ವುದು. ನಮ್ಮೊಡನೆ ಫಲಸಿದ್ಧಿಯಿಲ್ಲ.
(ಕೇಳುತಿದ್ದಳು. ಕೊರಳ ಸೆರೆ ಗೋನಾಳಿಗೆ ಔಕಿತು. ಅಕಟ, ಬಿಕ್ಕಿ ಬಿಕ್ಕಿ ವಿಲೋಲಲೋಚನೆಯು ಬಾಷ್ಪವಾರಿಯಲಿ ನೆನೆದಳು. ಶೂಲ ಮರುಮೊನೆಗೊಂಡವೊಲು… ಸುಳಿವಾಳೆ ಝಳ ತಾಗಿದವೊಲು… ಉದರ ಜ್ವಾಲೆ ನೆತ್ತಿಗೆ ನಿಲುಕೆ, ಅಬಲೆ ಬಿಸುಸುಯ್ದು ಹಲುಬಿದಳು. ಕೆಂದಳದ ಸೆಕೆಯಲಿ ಕಪೋಲವು ಕಂದಿ ಕಸರಿಕೆಯಾಯ್ತು. ನಿಡುಸುಯಿಲಿಂದ ಏಕಾವಳಿಯ ಮುತ್ತುಗಳು ಸೀಕರಿಯೋದವು. ಸಂದಣಿಸಿದ ಎವೆಗಳಲಿ ಬಾಷ್ಪದ ಬಿಂದು ತಳಿತುದು. ನಟ್ಟ ದೃಷ್ಟಿಯೊಳು ಇಂದುಮುಖಿ ಸೈಗರೆದು ಅಡಿಗಡಿಗೆ ಶಿರವ ತೂಗಿದಳು.)
ದ್ರೌಪದಿ: (ತನ್ನಲ್ಲಿಯೇ) ಆವ ಹೆಂಗುಸನು ಅಳಲಿಸಿದೆನು… ಇನ್ನಾವ ಧರ್ಮವನು ಅಳಿದೆನೋ… ತಾನು ಆವ ಪಾಪದ ಫಲಕೆ ಸಂಚಕಾರವನು ಪಿಡಿದೆನೊ… ಎನ್ನವೊಲು ಆವ ಹೆಂಗಸು ನವೆದಳು… ಆವಳ ಅಳಲಿದು… ಲೋಕದಲಿ ಯಾವಳು ಎನ್ನಂದದ ಮಗಳ ಪಡೆದವಳು…(ಎನುತ ತಾ ಮರುಗಿದಳು.)
ಭುವನದೊಳು ನಾರಿಯರು ಎನ್ನವೊಲು ಭಂಗಿತರು ಇನ್ನು ಹುಟ್ಟದೆ ಇರಲಿ. ಗಂಡರು ಭೀಮ ಸನ್ನಿಭರು ಇನ್ನು ಜನಿಸಲು ಬೇಡ. ಮುನ್ನಿನವರೊಳಗೆ ಎನ್ನವೊಲು ಪಾಂಡವರವೊಲು ಸಂಪನ್ನ ದುಃಖಿಗಳಾರು ನವೆದರು.
(ಎಂದು ದ್ರೌಪದಿ ಹಿರಿದು ಹಲುಬಿದಳು.)
ಆವ ಗರಳವ ಕುಡಿವೆನೋ… ಮೇಣ್… ಆವ ಬೆಟ್ಟವನು ಅಡರಿ ಬೀಳ್ವೆನೊ… ಹಾಸರೆಯ ಗುಂಪಿನಲಿ ಯಾವ ಮಡುವನು ಹೊಗುವೆನೋ… ಆವ ಕುಂತವ ಹಾಯ್ವೆನೋ… ಮೇಣ್..ಆವ ಪಾವಕನೊಳಗೆ ಹೊಗುವೆನೊ… ಎನಗೆ ಸಾವು ಸಮನಿಸದೆ. ಅಂದು ಪಾಪಿ ಕೌರವನು ಮಂದಿಗೆ ಎಳೆದನು. ಬಳಿಕ ಅರಣ್ಯವಾಸದೊಳು ಸೈಂಧವ ಬಂದು ಮುಂದಲೆವಿಡಿದು ಎನ್ನನು ಎಳದೊಯ್ದ. ಇಂದು ಕೀಚಕ ನಾಯ ಕಾಲಲಿ ನಾನು ನೊಂದೆ. ಈ ಮೂರು ಬಾರಿಯೆ ಬಂದ ಭಂಗವೆ ಸಾಕು.
( ಎನುತ ನಳಿನಾಕ್ಷಿ ಮರುಗಿದಳು.)
ಜನನವೇ ಪಾಂಚಾಲ ರಾಯನ ಮನೆ. ಮನೋವಲ್ಲಭರು ಅದು ಆರು ಎನೆ ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು. ಎನಗೆ ಬಂದ ಎಡರು ಈ ವಿರಾಟನ ವನಿತೆಯರುಗಳ ಮುಡಿಯ ಕಟ್ಟುವ, ತನುವ ತಿಗುರುವ, ಕಾಲನು ಒತ್ತುವ ಕೆಲಸದ ಉತ್ಸಾಹ. ಹಗೆಗಳಿಗೆ ತಂಪಾಗಿ ಬದುಕುವ ಮುಗುದರು ಇನ್ನು ಆರುಂಟು. ಭಂಗಕೆ ಹೆಗಲ ಕೊಟ್ಟು ಆನುವ ವಿರೋಧಿಗಳು ಲೋಕದಲಿ ಉಂಟೆ. ವಿಗಡ ಬಿರುದನು ಬಿಸುಟ ಬಡಿಹೋರಿಗಳು ಪಾಂಡವರಂತೆ ಮೂಗುರ್ಚಿಗಳು ಅದು ಇನ್ನು ಆರು ಉಂಟು. ಕಾಲನನು ಕೆರಳಿದೊಡೆ ಮುರಿವ ಎಚ್ಚಾಳುತನದವರು ಎನ್ನನೊಬ್ಬಳನು ಆಳಲಾರಿರಿ. ಪಾಪಿಗಳಿರ… ಅಪಕೀರ್ತಿಗೆ ಅಳುಕಿರಲ… ತೋಳ ಹೊರೆ ನಿಮಗೇಕೆ… ಭೂಮೀಪಾಲ ವಂಶದೊಳು ಉದಿಸಲೇತಕೆ… ಕೂಳುಗೇಡಿಂಗೆ ಒಡಲ ಹೊರೆವಿರಿ.
(ಎಂದಳು ಇಂದುಮುಖಿ.)
ಕುರುಕುಲಾಗ್ರಣಿ ನಿಮ್ಮ ಹೊರವಡಿಸಿ ಧರೆಯ ಭಂಡಾರವನು ಪುರವನು ಕರಿ ತುರಗ ರಥ ಪಾಯದಳವನು ಸೆಳೆದುಕೊಂಡನು. ದುರುಳ ಕೀಚಕಗೆ ಎನ್ನ ಕೊಟ್ಟಿರಿ. ನಿಮ್ಮೈವರಿಗೆ ಪರಿಮಿತದಲಿ ಇರವಾಯ್ತು. ಅಕಟ ಲೇಸಾಯ್ತು.
(ಎಂದು ಅಂಬುಜಾಕ್ಷಿ ಹಲುಬಿದಳು.)
ಭಾವ ಕೌರವದೇವನು ಭಾಗ್ಯಾಧಿಕನು. ಕೃಷ್ಣನ ಕೂರ್ಮೆ ಧರ್ಮದಿ ಅರಸುಗಳ ಒಡೆತನವನು ನೀವು ಪಾಲಿಸಿದಿರಿ. ಈಗ ನೀವು ತಟಮಟವಾಗಿ ಲೋಗರ ಸೇವೆಯಲಿ ಬೆಂದೊಡಲ ಹೊರೆವಿರಿ. ಸಾವವಳು ನಿಮಗೆ ಅಂಜಲೇಕೆ.
(ಎಂದು ಅಬಲೆ ಒರಲಿದಳು.)
ಭೀಮ, ತನಗೆ ಸಾವಿನ ನೇಮವನು ಕೊಟ್ಟೈ. ನಿಮ್ಮಣ್ಣನಾಜ್ಞೆ ವಿರಾಮವಾಗದೆ ಧರ್ಮದ ಮೈಸಿರಿಯನು ಅರಿದು ಬದುಕಿ. ಕಾಮಿನಿಯ ಕೇಳಿಯಲಿ ನೆನೆವುದು. ತಾಮಸದಿ ತಾ ಮೀರಿ ನುಡಿದ ಉದ್ದಾಮತೆಯ ಸೈರಿಸುವುದು.
(ಎಂದು ಚರಣದಲಿ ಎರಗಿದಳು. ಕಲಿಭೀಮ ಕಂಬಿನಿ ತುಂಬಿದನು. ಅಂತಃಕರಣ ಕಡು ನೆನೆದುದು. ರೋಷದ ಘನತೆ ಹೆಚ್ಚಿತು. ಹಗೆಗಳನು ಮನದೊಳಗೆ ಹಿಂಡಿದನು. ತನುಪುಳಕ ಉಬ್ಬರಿಸಿ ಮೆಲ್ಲನೆ ವನಿತೆಯನು ತೆಗೆದು ಅಪ್ಪಿದನು. ಸೆರಗಿನಲಿ ಕಂಬನಿಯ ತೊಡೆದನು. ಮಾನಿನಿಯ ಕುರುಳ ನೇವರಿಸಿದನು. ಗಲ್ಲವನು ಒರೆಸಿ ಮುಂಡಾಡಿದನು. ಮಂಚದ ಹೊರೆಯ ಗಿಂಡಿಯ ನೀರಿನಲಿ ಮುಖಾಂಬುಜವ ತೊಳೆದನು.)
ಭೀಮ: ಅರಸಿ, ವಿಸ್ತರಿಸಲೇಕೆ…ಹೋಗು…ಖಾತಿಯನು ಬಿಡು ಬಿಡು. ಎಮ್ಮಣ್ಣನ ಆಜ್ಞೆಯ ಗೆರೆಯ ದಾಂಟಿದೆ ದಾಂಟಿದೆನು. ನಸು ಮಿಸುಕಿದೊಡೆ ಕೀಚಕನ ಬಸುರ ಬಗಿವೆನು. ವೈರಾಟ ವಂಶದ ಹೆಸರ ತೊಡೆವೆನು. ನಮ್ಮನು ಅರಿದೊಡೆ ಕೌರವ ವ್ರಜವ ಕುಸುರಿ ತರಿವೆನು. ಭೀಮ ಕಷ್ಟವನು ಎಸಗಿದನು ಹಾಯ್ ಎಂದರಾದೊಡೆ ದೇವಸಂತತಿಯ ಮುಸುಡನು ಅಮರಾದ್ರಿಯಲಿ ತೇವೆನು. ಮುನಿದನಾದೊಡೆ ಅಣ್ಣತನ ಇಂದಿನಲಿ ಹರಿಯಲಿ. ಪಾರ್ಥ ಸಹದೇವ ನಕುಲರು ಕನಲಿದೊಡೆ ಕೈದೋರುವೆನು. ಇವರುಗಳ ಅನುಜನು ಎಂಬೆನೆ. ಕೃಷ್ಣ ಹಾಯ್ದರೆ ಘನ ಮುರಾರಿಯ ಮೀರುವೆನು. ಬಳಿಕ ಎನಗೆ ಸಮಬಲರು ಆರು. ಕೀಚಕ ಅನ್ವಯವ ತರಿವೆನು. ಈಸು ದಿನ ಎಮ್ಮಣ್ಣನ ಆಜ್ಞೆಯ ಪಾಶದಲಿ ಸಿಕ್ಕಿರ್ದೆ. ಸಿಂಹದ ಕೂಸ ನರಿ ಕೆಣಕುವವೊಲು ಈ ಕುರು ಕೀಚಕಾದಿಗಳು ಕೆಣಕಿ ಗಾಸಿಯಾದರು . ವೀಸ ಬಡ್ಡಿಯಲಿ ನಾಯ್ಗಳ ಅಸುವ ಕೊಂಬೆನು. ವಾಸಿ ಧರ್ಮದ ಮೇರೆ ತಪ್ಪಿತು. ಕಾಂತೆ ಕೇಳು, ಕೀಚಕ ಕೌರವೇಂದ್ರರ ಹರಣಕೆ ಇದಕೋ ಸಂಚಕಾರವ. ಕೆರಳಿದೊಡೆ ನೀತಿಗೀತಿಗಳ ಈ ಭೀಮ ಬಗೆವನೆ. ಕೆರಳಿಚಿದೆ… ಇನ್ನೇನು ನಿನ್ನಯ ಹರಿಬವು ಎನ್ನದು. ನಾಯಿ ಜಾರನ ಕರೆದು ನಾಟ್ಯ ಮಂದಿರವ ಸಂಕೇತದಲಿ ಸೂಚಿಸು. ಅಲ್ಲಿಗೆ ಇರುಳು ಐತಂದು ಮರೆಯಲಿ ಖುಲ್ಲನ ಉದರವ ಬಗಿದು ರಕುತವ ಶಾಕಿನಿಯರಿಗೆ ಚೆಲ್ಲುವೆನು. ಇದಕೆ ಸಂದೇಹ ಬೇಡ. ಅಲ್ಲಿ ಕೆಲಬಲನು ಅರಿದುದುದಾದೊಡೆ ಅದಕೆ ಔಷಧಿಯ ಬಲ್ಲೆನು. ಕರೆಮರೆಯಿಲ್ಲ. ಮಾನಿನಿ ಹೋಗು.
(ಎನುತ ಅಂಗನೆಯ ಬೀಳ್ಕೊಟ್ಟನು. ಹರುಷದಲಿ ಹೆಚ್ಚಿದಳು.)
ದ್ರೌಪದಿ: ಪುರುಷರ ಪುರುಷನಲ್ಲಾ ಭೀಮ. ತನ್ನಯ ಪರಮ ಸುಕೃತ ಉದಯವಲಾ ನೀನೊಬ್ಬನು…
(ಎಂದು ಎನುತ ಅರಸಿ ಕಾಂತನ ಬೀಳುಕೊಂಡಳು. ನಿಜಭವನಕೆ ತಿರುಗಿದಳು.)
ಪದ ವಿಂಗಡಣೆ ಮತ್ತು ತಿರುಳು
ಕಣ್+ಗಳ; ಬೆಳಗು=ಕಾಂತಿ; ತಿಮಿರ=ಕತ್ತಲೆ; ಕೆಡಿಸೆ=ಹೋಗಲಾಡಿಸಲು;
ಕಂಗಳ ಬೆಳಗು ತಿಮಿರವ ಕೆಡಿಸೆ=ಕಣ್ಣುಗಳ ಕಾಂತಿಯು ಕತ್ತಲೆಯನ್ನು ಹೋಗಲಾಡಿಸುತ್ತಿರಲು; ದ್ರೌಪದಿಯು ಕೀಚಕನ ಕಿರುಕುಳದಿಂದ ತನ್ನನ್ನು ಕಾಪಾಡುವಂತೆ ಕೇಳಿಕೊಳ್ಳಲು ಅಡುಗೆಯ ಮನೆಯಲ್ಲಿದ್ದ
ಬೀಮನ ಬಳಿಗೆ ಆ ರಾತ್ರಿಯಲ್ಲಿ ಬರುತ್ತಿದ್ದಾಳೆ. ಆ ಕತ್ತಲಲ್ಲಿ ಅವಳ ಕಣ್ಣುಗಳ ಕಾಂತಿಯೇ ಕವಿದಿರುವ ಕತ್ತಲೆಯನ್ನು ತೊಲಗಿಸಿ, ದಾರಿಯನ್ನು ತೋರುತ್ತಿದೆ;
ಕಂಕಣ=ಬಳೆ; ಲಲಿತ=ಮನೋಹರವಾದ; ಝೇಂಕೃತಿ+ಇಂದ; ಝೇಂಕೃತಿ=ಇಂಪಾದ ದನಿ/ನಾದ; ತೂಗು=ಅಲ್ಲಾಡು/ತೊನೆದಾಡು; ವಾಮ=ಎಡಗಡೆ; ಭುಜ=ತೋಳು; ಲತೆ=ಬಳ್ಳಿ; ಒಲಿ=ಒಪ್ಪು; ಮೇಲುದು= ಸೀರೆಯ ಸೆರಗಿನ ಹೊದಿಕೆ; ನಡುಗು=ಅಲ್ಲಾಡು; ಭರ=ವೇಗ; ಅಡಿ=ಹೆಜ್ಜೆ;
ಕಂಕಣ ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ ಒಲಿದು ಮೇಲುದ ನೂಕಿ ನಡುಗುವ ಮೊಲೆಯ ಭರದಲಿ ಅಡಿ ಇಡುತ=ದ್ರೌಪದಿಯು ಸರಸರನೆ ನಡೆದುಬರುತ್ತಿರುವಾಗ ಆಕೆಯು ಕಯ್ಗಳಲ್ಲಿ ತೊಟ್ಟಿರುವ ಬಳೆಗಳ ಇಂಪಾದ ದನಿಯೊಡನೆ, ಎಡತೋಳಿನ ಮೇಲೆ ಹೊದ್ದಿರುವ ಸೀರೆಯ ಸೆರಗನ್ನು ತಳ್ಳುತ್ತ ಮೊಲೆಗಳು ಅಲುಗಾಡುತ್ತಿರಲು;
ಬಾಣಸಿನ ಮನೆ=ಅಡುಗೆಯ ಮನೆ/ಪಾಕಶಾಲೆ; ಕಳವಳ=ಆತಂಕ/ಏನಾಗುವುದೋ ಎಂಬ ದಿಗಿಲು; ಕರಣ=ದೇಹ; ಮುಗುದೆ=ಸುಂದರಿ;
ಬಾಣಸಿನ ಮನೆಗೆ ಕಳವಳದ ಕರಣದ ಮುಗುದೆ ಬಂದಳು=ಮುಂದೇನಾಗುವುದೋ ಎಂಬ ಆತಂಕದಿಂದ ದ್ರೌಪದಿಯು ಹೆದರುತ್ತ ಅಡುಗೆಯ ಮನೆಯೊಳಕ್ಕೆ ಬಂದಳು;
ಕೆಲ=ಪಕ್ಕ/ಜಾಗ/ಪ್ರದೇಶ; ಒಟ್ಟು=ರಾಶಿ ಮಾಡು/ತುಂಬು/ಅಡಕು; ಪತ್ರ=ಎಲೆ/ಸೊಪ್ಪು; ಶಾಕ+ಆವಳಿ; ಶಾಕ=ತರಕಾರಿ; ಆವಳಿ=ಗುಂಪು/ರಾಶಿ; ಪತ್ರ ಶಾಕಾವಳಿ=ಅಡುಗೆಗೆ ಬಳಸುವ ಬಹುಬಗೆಯ ಸೊಪ್ಪುಗಳ ಮತ್ತು ತರಕಾರಿಗಳ ಗುಡ್ಡೆ; ಫಲ=ಹಣ್ಣು/ಬೆಳೆ;
ಕೆಲದಲಿ ಒಟ್ಟಿದ ಪತ್ರ ಶಾಕಾವಳಿಯ ಫಲರಾಶಿಗಳ=ಅಡುಗೆ ಮನೆಯ ಜಾಗದಲ್ಲಿ ಗುಡ್ಡೆ ಹಾಕಿದ್ದ ಬಹುಬಗೆಯ ಎಲೆಗಳ, ಸೊಪ್ಪುಗಳ, ತರಕಾರಿಗಳ ಮತ್ತು ಹಣ್ಣುಕಾಯಿಗಳ;
ಕಳವೆ=ಬತ್ತ; ಹೊಳೆವುತ+ಇಹ; ಇಹ=ಇರುವ; ರಾಜಾನ್ನದ+ಅಕ್ಕಿ; ರಾಜಾನ್ನದಕ್ಕಿ=ರುಚಿಕರವಾದ ಅನ್ನಕ್ಕಾಗಿ ಬಳಸುವ ಒಂದು ಬಗೆಯ ಅಕ್ಕಿಯ ಹೆಸರು;
ಕಳವೆಯ ಹೊಳೆವುತಿಹ ರಾಜಾನ್ನದಕ್ಕಿಯ=ಬತ್ತದ ಸಿಪ್ಪೆಯನ್ನು ತೆಗೆದು ಸಿದ್ದಪಡಿಸಿರುವ ಹೊಳೆಯುತ್ತಿರುವ ರಾಜಾನ್ನದ ಅಕ್ಕಿಯ;
ಹರಿಯಣ=ತಟ್ಟೆ;
ಸಾಲ ಹರಿಯಣದ=ಸಾಲಾಗಿ ಜೋಡಿಸಿರುವ ತಟ್ಟೆಗಳ;
ಸಂಭಾರ=ರುಚಿಕರವಾದ ಅಡುಗೆಯನ್ನು ಮಾಡಲು ಬಳಸುವ ಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಚೆಕ್ಕೆ, ಲವಂಗ ಮುಂತಾದುವನ್ನು ಹುರಿದು ಅರೆದು ತಯಾರಿಸಿರುವ ವಸ್ತು; ಚೂರ್ಣ=ಪುಡಿ;
ಕೆಲಬಲದ ಸಂಭಾರ ಚೂರ್ಣದ=ಅಕ್ಕಪಕ್ಕದಲ್ಲಿಟ್ಟಿರುವ ಸಂಬಾರದ ಪುಡಿಯ;
ತಳಿತ=ಸೇರು/ಕೂಡು; ಬೋನ=ಅನ್ನ/ಆಹಾರ; ಭಕ್ಷ್ಯ+ಆವಳಿ; ಭಕ್ಷ್ಯ=ಉಣಿಸು ತಿನಸು; ಆವಳಿ=ರಾಶಿ; ಬಾಣಸದ+ಒಳಗೆ; ಬಾಣಸ=ಅಡುಗೆಯ ಮನೆ; ಮತ್ತ=ಮದಿಸಿದ/ಸೊಕ್ಕಿದ; ಮದಗಜ=ಮದಿಸಿದ ಆನೆ; ಗಮನ=ಹೋಗುವುದು; ಮತ್ತಗಜಗಮನ=ಇದೊಂದು ನುಡಿಗಟ್ಟು. ಗಂಬೀರವಾದ ನಡಿಗೆಯ ರೀತಿಯನ್ನು ಸೂಚಿಸುವಾಗ ಈ ಪದವನ್ನು ಬಳಸಲಾಗುತ್ತದೆ;
ವಿವಿಧ ಭಕ್ಷ್ಯಾವಳಿಯ ತಳಿತ ಬೋನದ ಬಾಣಸದೊಳಗೆ ಮತ್ತಗಜಗಮನೆ ಬಂದಳು=ಬಗೆಬಗೆಯ ಉಣಿಸು ತಿನಸುಗಳಿಂದ ಕೂಡಿದ ಆಹಾರವನ್ನು ಅಟ್ಟುವ ಅಡುಗೆಯ ಮನೆಯೊಳಕ್ಕೆ ಸೈರಂದ್ರಿಯು ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುತ್ತ ಮೆಲ್ಲಮೆಲ್ಲನೆ ಬಂದಳು;
ತರಿ=ಕಡಿ/ಕತ್ತರಿಸು;
ತರಿದ ಕುರಿಗಳ=ಕತ್ತರಿಸಿರುವ ಕುರಿಗಳ;
ಅಡಗು=ಮಾಂಸ; ಜುರಿ=ಸೋರು/ತೊಟ್ಟಿಕ್ಕು;
ಹಂದಿಯ ಅಡಗಿನ ಜುರಿತ ರಕುತದ=ಕುಯ್ದಿರುವ ಹಂದಿಯ ಮಾಂಸದಿಂದ ತೊಟ್ಟಿಕ್ಕುತ್ತಿರುವ ರಕ್ತದ;
ಖಂಡ=ತುಂಡು;
ಮೊಲನ ಖಂಡದ=ಮೊಲದ ಮಾಂಸದ ತುಂಡುಗಳ;
ತಿರಿ=ಕೀಳು/ಕೊಯ್ಯು;
ತಿರಿದ ಗುಬ್ಬಿಯ=ಕೊರಳನ್ನು ಕೊಯ್ದಿರುವ ಗುಬ್ಬಿಗಳ;
ಕೀಸು=ಬೋಳಿಸು; ಸೀಳು=ಹೋಳು ಮಾಡು; ಲಾವುಗೆ=ಪುರಲೆ ಎಂಬ ಹಕ್ಕಿ;
ಕೀಸಿ ಸೀಳಿದ ನವಿಲ ಲಾವುಗೆಯ=ರೆಕ್ಕೆಪುಕ್ಕಗಳನ್ನು ಕಿತ್ತು, ಕತ್ತನ್ನು ಕೊಯ್ದು, ತಲೆ ಮತ್ತು ದೇಹವನ್ನು ಬೇರ್‍ಪಡಿಸಿರುವ ನವಿಲು ಮತ್ತು ಪುರಲೆ ಹಕ್ಕಿಗಳ;
ತುರುಗು=ಗುಡ್ಡೆಹಾಕು; ಎಲುವು=ಮೂಳೆ; ಸಾಲು=ಪಂಕ್ತಿ;
ತುರುಗಿದ ಎಲುವಿನ ಸಾಲು=ಬಹು ಬಗೆಯ ಪ್ರಾಣಿಗಳನ್ನು ಕೊಂದು, ಮಾಂಸದಿಂದ ಬೇರ್‍ಪಡಿಸಿ ಗುಡ್ಡೆಹಾಕಿರುವ ಮೂಳೆಯ ಸಾಲುಗಳ;
ಸುಂಟಿಗೆ=ಗುಂಡಿಗೆ; ಮೆರೆ=ಎದ್ದು ಕಾಣುವ;
ಸುಂಟಿಗೆ ಮೆರೆವ ಮಾಂಸದ ರಾಸಿಗಳ=ಸುಂಟಿಗೆಯಿಂದ ಕೂಡಿದ ಮಾಂಸದ ಗುಡ್ಡೆಗಳ;
ಎರಕೆ=ಹಕ್ಕಿಗಳ ರೆಕ್ಕೆ; ಅಡಬಲ=ಮಾಂಸ/ಬಾಡು; ಅಬಲೆ=ಹೆಂಗಸು;
ಹರಿದ ಎರಕೆಗಳ ಅಡಬಲದ ಮನೆಯ ಕಂಡು ಅಬಲೆ ಹೊಗಳಿದಳು=ಕೋಳಿ, ಲಾವುಗೆ, ನವಿಲು ಮುಂತಾದ ಹಕ್ಕಿಗಳ ದೇಹದಿಂದ ಕಿತ್ತ ರೆಕ್ಕೆಗಳಿಂದ ಕಿಕ್ಕಿರಿದು ತುಂಬಿರುವ ಮಾಂಸದ ರಾಶಿಯಿಂದ ಕೂಡಿರುವ ಅಡುಗೆಮನೆಯನ್ನು ನೋಡಿ ಸೈರಂದ್ರಿಯು ತನ್ನ ಮನದಲ್ಲಿಯೇ ಬೀಮನನ್ನು ಹೊಗಳತೊಡಗಿದಳು;
ಸೂವಾರ=ಅಡುಗೆಯವನು/ಬಾಣಸಿಗ; ಸೂವಾರ ವಿದ್ಯೆ=ಅಡುಗೆಯನ್ನು ಮಾಡುವ ಕಲೆ/ಪಾಕ ವಿದ್ಯೆ; ಆರಲಿ=ಯಾರಿಂದ; ಅರಿದನೊ=ತಿಳಿದುಕೊಂಡನೊ/ಕಲಿತುಕೊಂಡನೊ; ಭಾಪು=ಮೆಚ್ಚುಗೆಯನ್ನು ಸೂಚಿಸುವಾಗ ಬಳಸುವ ಪದ;
ಈ ಸೂವಾರ ವಿದ್ಯೆಯ ಭೀಮನು ಆರಲಿ ಅರಿದನೊ. ಭಾಪು=ಅಬ್ಬಬ್ಬಾ! ಕಲಿ ಬೀಮನು ಅಡುಗೆ ಮಾಡುವ ಈ ವಿದ್ಯೆಯನ್ನು ಯಾರಿಂದ ಕಲಿತನೋ ತಿಳಿಯದಲ್ಲ;
ಶಿವ…ಶಿವ=ಜೀವನದಲ್ಲಿ ಸಂಕಟ ಬಂದಾಗ ವ್ಯಕ್ತಿಯು ಆತಂಕದಿಂದ ದೇವರ ನಾಮಸ್ಮರಣೆಯನ್ನು ಮಾಡುವುದು; ವಿಧಿ=ಮಾನವ ಜೀವಿಯ ಬದುಕಿನಲ್ಲಿ ಹುಟ್ಟಿನಿಂದ ಸಾವಿನ ತನಕ ನಡೆಯುವಂತಹ ಎಲ್ಲ ಗಟನೆಗಳನ್ನು ಅಗೋಚರವಾದ ಶಕ್ತಿಯೊಂದು ನಿಯಂತ್ರಿಸುತ್ತದೆ ಮತ್ತು ನಿರ್‍ದೇಶಿಸುತ್ತದೆ ಎಂಬ ನಂಬಿಕೆಯು ಜನಮನದಲ್ಲಿದೆ. ಇದನ್ನು ವಿದಿ/ವಿದಿ ಬರಹ ಎಂದು ಕರೆಯುತ್ತಾರೆ; ಮುನಿ=ಕೋಪಗೊಳ್ಳು; ಆರನು=ಯಾವುದೇ ವ್ಯಕ್ತಿಯನ್ನು; ಆವ=ಯಾವ; ಅಂಗ=ರೀತಿ/ಬಗೆ/ಪ್ರಕಾರ; ಬರಿಸು=ಉಂಟುಮಾಡು;
ಶಿವ ಶಿವ ವಿಧಿ ಮುನಿದು ಆರನು ಆವ ಅಂಗದಲಿ ಬರಿಸದು ಶಿವ ಶಿವ ಎನುತ=ಶಿವ ಶಿವ…ವಿದಿಯು ಕೋಪಿಸಿಕೊಂಡಾಗ ವ್ಯಕ್ತಿಯ ಜೀವನವನ್ನು ಯಾವ ನೆಲೆಗೆ ಬೇಕಾದರೂ ದೂಡಬಲ್ಲುದು ಎಂದು ದ್ರೌಪದಿಯು ಮನದಲ್ಲಿ ಪರಿತಪಿಸುತ್ತಿದ್ದಾಳೆ;
ನಾರಿ=ಹೆಂಗಸು;
ನಾರಿ ನಸುನಗುತ ಒಳಗೆ ಹೊಕ್ಕು=ಸೈರಂದ್ರಿಯು ಅಂತಹ ಸಂಕಟದ ಸನ್ನಿವೇಶದಲ್ಲಿಯೂ ಬೀಮನ ಅಡುಗೆ ಮನೆಯಲ್ಲಿದ್ದ ವಸ್ತುಗಳನ್ನು ಮತ್ತು ಮಾಂಸದ ರಾಶಿಯನ್ನು ನೋಡಿ ನಸುನಗುತ್ತ ಒಳಕ್ಕೆ ಬಂದು;
ಬಕ+ಅರಿ; ಬಕ=ಒಬ್ಬ ರಕ್ಕಸನ ಹೆಸರು/ಬಕಾಸುರ; ಅರಿ=ಹಗೆ; ಬಕಾರಿ=ಬಕಾಸುರನನ್ನು ಕೊಂದ ಬೀಮ;
ಬಕಾರಿ ಮಂಚದೊಳಿರಲು=ಬೀಮನು ಮಂಚದಲ್ಲಿ ಮಲಗಿರಲು;
ನಿದ್ರಾಭಾರ=ಗಾಡವಾದ ನಿದ್ರೆಯಲ್ಲಿರಲು; ವಿಹ್ವಲ=ಚಿಂತಿತನಾದವನು/ಸಂಕಟಕ್ಕೆ ಒಳಗಾದವನು; ಕರಣ=ದೇಹ; ವಿಹ್ವಲಕರಣ=ಆಯಾಸಗೊಂಡವನು ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ; ಲಲಿತ+ಅಂಗಿ; ಲಲಿತ=ಸುಂದರವಾದ; ಅಂಗಿ=ಅಂಗವನ್ನುಳ್ಳವಳು; ಲಲಿತಾಂಗಿ=ಸುಂದರಿ; ಹೊದ್ದು=ಸಮೀಪಿಸು/ಬಳಿಸಾರು; ಹೊದ್ದು=ಸಮೀಪಿಸು/ಬಳಿಸಾರು;
ನಿದ್ರಾಭಾರ ವಿಹ್ವಲಕರಣನನು ಲಲಿತಾಂಗಿ ಹೊದ್ದಿದಳು=ಅಡುಗೆ ಮನೆಯ ಕೆಲಸದಿಂದ ಆಯಾಸಗೊಂಡು ಗಾಡವಾಗಿ ನಿದ್ರಿಸುತ್ತಿದ್ದ ಬೀಮನ ಹತ್ತಿರಕ್ಕೆ ದ್ರೌಪದಿಯು ಬಂದು ನಿಂತಳು;
ಭುಗಿಲ್=ಬೆಂಕಿಯು ಹತ್ತಿಕೊಂಡು ಉರಿಯುತ್ತಿರುವಾಗ ಅದರ ನಡುವೆ ಇದ್ದಕ್ಕಿದ್ದಂತೆ ದೊಡ್ಡ ಜ್ವಾಲೆಗಳು ಉರಿದೇಳುವುದನ್ನು ಸೂಚಿಸುವ ಅನುಕರಣ ಶಬ್ದ;
ಎಬ್ಬಿಸಲು ಭುಗಿಲ್ ಎಂಬನೋ=ನಿದ್ರೆಯಲ್ಲಿ ಮಯ್ ಮರೆತಿರುವ ಬೀಮನನ್ನು ಎಬ್ಬಿಸಿದರೆ, ಬೆಂಕಿಯ ಜ್ವಾಲೆಯು ಉರಿದೆದ್ದಂತೆ ಕಡುಕೋಪವನ್ನು ನನ್ನ ಮೇಲೆ ಕಾರುತ್ತಾನೆಯೋ;
ಮೇಣ್=ಇಲ್ಲವೇ; ಮೋರೆ=ಮೊಗ; ಮಬ್ಬು=ನಸುಗತ್ತಲೆ/ಮಸುಕು. ಈ ಪದ ರೂಪಕವಾಗಿ ಬಂದಿದೆ. ಕಳಾಹೀನತೆಗೆ ಸಂಕೇತವಾಗಿದೆ; ಸಂತೈಸು=ಸಾಂತ್ವನಗೊಳಿಸು/ಸಮಾದಾನ ಮಾಡು;
ಮೇಣ್ ಒಬ್ಬಳೇ ಏತಕೆ ಬಂದೆ…ಮೋರೆಯ ಮಬ್ಬು ಇದೇಕೆ ಎಂದು ಎನ್ನ ಸಂತೈಸುವನೊ=ನನ್ನ ಬಗ್ಗೆ ಕೋಪಗೊಳ್ಳುವ ಬದಲು, ಶಾಂತರೀತಿಯಿಂದ ಮಾತನಾಡಿಸುತ್ತ, ಒಬ್ಬಳೇ ಏತಕ್ಕೆ ಬಂದೆ…ಇದೇನು ಸಪ್ಪಗಿರುವೆಯಲ್ಲ… ಏಕೆ… ಏನಾಯಿತು… ಎಂದು ನನ್ನನ್ನು ಸಮಾದಾನ ಪಡಿಸುವನೋ;
ಸಾಮ=ಶಾಂತರೀತಿಯಲ್ಲಿ; ತುಬ್ಬು=ತಿಳಿಸು;
ಸಾಮದಲಿ ತುಬ್ಬುವುದೊ=ನಾನು ಏತಕ್ಕಾಗಿ ಬಂದಿದ್ದೇನೆ ಎಂಬುದನ್ನು ಯಾವುದೇ ಉದ್ವೇಗವಿಲ್ಲದೆ ಶಾಂತಚಿತ್ತಳಾಗಿ ತಿಳಿಸುವುದೇ ಸರಿ;
ನಿಬ್ಬರ=ಅತಿಶಯ;
ತಾ ಬಂದ ಬರವು ಇದು ಜನದ ಮನಕೆ ನಿಬ್ಬರವಲಾ=ಅಡುಗೆ ಮನೆಯ ಕೆಲಸಗಾರನಾದ ಬೀಮನ ಬಳಿಗೆ ರಾಣಿವಾಸದ ದಾಸಿಯಾದ ನಾನು ಬಂದಿರುವುದನ್ನು ಇತರರು ಕಂಡರೆ ಮನದಲ್ಲಿಯೇ ಅತಿಶಯವಾಗಿ ಸಂಶಯಪಡುತ್ತಾರೆ;
ವಲ್ಲಭ=ಗಂಡ; ಸಾರು=ಸಮೀಪಿಸು;
ಇನ್ನು ಎಬ್ಬಿಸಿಯೆ ನೋಡುವೆನು ಎನುತ ವಲ್ಲಭನ ಸಾರಿದಳು=ಆದುದಾಗಲಿ… ಏಳಿಸಿ ನೋಡುತ್ತೇನೆ ಎನ್ನುತ್ತ, ಬೀಮನ ಬಳಿಸಾರಿ ಮಂಚದ ಹತ್ತಿರಕ್ಕೆ ಬಂದಳು;
ಅಪ್ರತಿ=ಸರಿಸಾಟಿಯಿಲ್ಲದ; ಮಲ್ಲ=ಬಲಶಾಲಿ; ಅಪ್ರತಿಮಲ್ಲ=ಮಹಾಬಲಶಾಲಿ/ಸರಿಸಮಾನವಾದ ಎದುರಾಳಿಗಳೇ ಇಲ್ಲದ ಜಟ್ಟಿ;
ಮೆಲ್ಲ ಮೆಲ್ಲನೆ ಮುಸುಕ ಸಡಿಲಿಸಿ, ಗಲ್ಲವನು ಹಿಡಿದು ಅಲುಗಲು ಅಪ್ರತಿಮಲ್ಲನು ಎದ್ದನು=ಬೀಮನ ಮೊಗದ ಮೇಲಿದ್ದ ಹೊದಿಕೆಯನ್ನು ಮೆಲ್ಲಮೆಲ್ಲನೆ ಕೆಳಕ್ಕೆ ಜರುಗಿಸಿ, ಗಲ್ಲವನ್ನು ಹಿಡಿದು ಅತ್ತಿತ್ತ ಆಡಿಸಲು ಮಹಾಬಲಶಾಲಿಯಾದ ಬೀಮನು ಎಚ್ಚರಗೊಂಡು ಮೇಲೆದ್ದನು;
ಪಾಂಚಾಲ=ಒಂದು ದೇಶದ ಹೆಸರು. ಇದರ ರಾಜ ದ್ರುಪದ. ಈತನ ಮಗಳು ದ್ರೌಪದಿ; ನಂದನೆ=ಮಗಳು;
ಪಾಂಚಾಲ ನಂದನೆಯ ನೋಡಿದನು=ದ್ರೌಪದಿಯನ್ನು ನೋಡಿದನು;
ವಲ್ಲಭೆ=ಹೆಂಡತಿ; ಬರವು+ಏನು; ಬರವು=ಆಗಮನ;
ವಲ್ಲಭೆಯೆ ಬರವೇನು=ದ್ರೌಪದಿಯೇ ಏತಕ್ಕಾಗಿ ನನ್ನ ಬಳಿ ಬಂದೆ;
ತಲ್ಲಣ=ಕಳವಳ/ಸಂಕಟ/ಉದ್ವೇಗ; ತಲೆದೋರು=ಕಾಣಿಸುವುದು/ಕಂಡುಬರುವುದು;
ಮುಖದಲಿ ತಲ್ಲಣವೆ ತಲೆದೋರುತಿದೆ=ನಿನ್ನ ಮೊಗದಲ್ಲಿ ಸಂಕಟ, ಉದ್ವೇಗ ಮತ್ತು ತಳಮಳ ಎದ್ದುಕಾಣುತ್ತಿದೆ;
ತಳುವು+ಇಲ್ಲದೆ; ತಳುವು=ತಡಮಾಡು; ಉಸುರು=ಹೇಳು;
ತಳುವಿಲ್ಲದೆ ಉಸುರು=ತಡಮಾಡದೆ ಬೇಗ ಹೇಳು; ಇರುಳು=ರಾತ್ರಿ;
ಇರುಳೇಕೆ ಬಂದೆ=ರಾತ್ರಿಯ ಸಮಯದಲ್ಲಿ ಏಕೆ ಬಂದೆ;
ಲತಾ+ಅಂಗಿ; ಲತಾ=ಬಳ್ಳಿ; ಅಂಗ=ದೇಹ/ಶರೀರ; ಅಂಗಿ=ದೇಹವನ್ನು ಉಳ್ಳವಳು; ಲತಾಂಗಿ=ಬಳುಕುವ ಬಳ್ಳಿಯಂತಹ ದೇಹವನ್ನುಳ್ಳ ಸುಂದರಿ;
ಲತಾಂಗಿ ಹೇಳು=ದ್ರೌಪದಿಯೇ ಮಾತನಾಡು;
ಬಾಣಸದ ಭವನ=ಅಡುಗೆ ಮನೆ; ಸೈರಿಸು=ತಾಳು/ಸಹಿಸು;
ಬಾಣಸದ ಭವನದ ನಾರಿಯರು ಸೈರಿಸರು=ರಾಣಿವಾಸದ ದಾಸಿಯಾದ ನೀನು ಈ ರೀತಿ ನನ್ನ ಬಳಿ ಬಂದಿರುವುದನ್ನು ಕಂಡರೆ, ಈ ಅಡುಗೆಮನೆಯಲ್ಲಿರುವ ಹೆಂಗಸರು ಸಹಿಸುವುದಿಲ್ಲ. ಅಂದರೆ ನಿನ್ನ ಮತ್ತು ನನ್ನ ಬಗ್ಗೆ ಕೆಟ್ಟನೋಟವನ್ನು ಬೀರುತ್ತಾರೆ;
ದುರ್ಜನ=ಕೆಟ್ಟ ಜನ; ಖುಲ್ಲ=ನೀಚ; ಕುಠಾರ=ಕ್ರೂರಿ;
ದುರ್ಜನರು ಖುಲ್ಲ ಕುಠಾರರು=ಇಲ್ಲಿರುವವರು ನೀಚರು, ಕ್ರೂರಿಗಳು ಮತ್ತು ಕೆಟ್ಟ ನಡೆನುಡಿಯವರು;
ನಾಯಿ=ಈ ಪ್ರಾಣಿಯ ಹೆಸರು ಒಂದು ಬಯ್ಗುಳವಾಗಿ ಕನ್ನಡ ನುಡಿ ಸಮುದಾಯದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ವ್ಯಕ್ತಿಯ ಕೆಟ್ಟ ನಡೆನುಡಿಯನ್ನು ಸೂಚಿಸುವುದಕ್ಕೆ ನಾಯಿ ಎಂಬ ಪದವನ್ನು ಒಂದು ರೂಪಕವಾಗಿ ಬಳಸುತ್ತಾರೆ;
ಇವರು ಅರಮನೆಯ ನಾಯ್ಗಳು=ಇವರು ರಾಜವಂಶದವರ ಗುಲಾಮರು;
ದೇಶಿಗ=ದಿಕ್ಕಿಲ್ಲದವನು/ಗತಿಗೆಟ್ಟವನು/ಪರದೇಶಿ;
ನಾವು ದೇಶಿಗರು=ನಾವು ಗತಿಕೆಟ್ಟವರು;
ಕೆಲರು=ಅಕ್ಕಪಕ್ಕದವರು/ನೆರೆಯವರು/ಇತರರು; ಅರಿಯದ+ಅಂತೆ+ಇರೆ; ಅರಿಯದ=ತಿಳಿಯದ; ಅಂತೆ=ಹಾಗೆ; ಇರೆ=ಇರಲು; ಭಾರ+ಇದು; ಭಾರ=ಹೊಣೆಗಾರಿಕೆ/ಜವಾಬ್ದಾರಿ;
ಕೆಲರು ಅರಿಯದಂತಿರೆ ಭಾರವಿದು=ನಾವು ಮಾರುವೇಶದಲ್ಲಿರುವ ಪಾಂಡವರು ಎಂಬುದು ಇತರರಿಗೆ ಗೊತ್ತಾಗದಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ;
ಆರ=ಯಾರ; ದೆಸೆ+ಇಂದ; ದುಗುಡ=ವ್ಯಸನ/ಚಿಂತೆ;
ನಾರಿ ನೀ ಹೇಳು, ಇದು ಆರ ದೆಸೆಯಿಂದ ದುಗುಡವು ಆಯಿತು=ದ್ರೌಪದಿಯೇ , ಈಗ ಹೇಳು. ನಿನಗೆ ಇಂತಹ ಅಪಮಾನವು ಯಾರ ಕಡೆಯಿಂದ ಆಯಿತು;
ಎನಲು=ಎಂದು ನುಡಿಯಲು; ಇಂದುಮುಖಿ=ಚಂದ್ರನಂತಹ ಮೊಗವುಳ್ಳವಳು/ಸುಂದರಿ; ಇಂತು=ಈ ರೀತಿ;
ಎನಲು ಇಂದುಮುಖಿ ಇಂತು ಎಂದಳು=ಬೀಮನು ಕೇಳಿದ ಪ್ರಶ್ನೆಗಳಿಗೆ ದ್ರೌಪದಿಯು ಈ ರೀತಿ ಹೇಳಿದಳು;
ಅರೆ=ಅಪ್ಪಳಿಸು/ಹೊಡೆ; ಅಟ್ಟು=ಬೆನ್ನುಹತ್ತಿಹೋಗು/ಹಿಂಬಾಲಿಸಿಕೊಂಡು ಬರುವುದು; ಅರೆಯಟ್ಟು=ಬೆನ್ನಟ್ಟಿಕೊಂಡು ಹೊಡೆಯುತ್ತ ಬರುವುದು; ಕುನ್ನಿ=ನಾಯಿ;
ನಿನ್ನೆ ಹಗಲು ಅರೆಯಟ್ಟಿ ಕೀಚಕ ಕುನ್ನಿ ರಾಜ ಸಭೆಯಲಿ ಒದೆದನು=ನಿನ್ನೆಯ ದಿನ ಹಗಲು ಹೊತ್ತಿನಲ್ಲಿಯೇ ಆ ಕೀಚಕನೆಂಬ ನಾಯಿ, ಅವನ ಕಾಮದ ಕಿರುಕುಳದಿಂದ ತಪ್ಪಿಸಿಕೊಂಡು ಬರುತ್ತಿದ್ದ ನನ್ನನ್ನು ಅಟ್ಟಿಸಿಕೊಂಡು ಬಂದು ರಾಜನ ಒಡ್ಡೋಲಗದಲ್ಲಿ ಸಬಾಸದರ ಮುಂದೆಯೇ ನನ್ನನ್ನು ಒದೆದನು;
ವಂದಿಗ=ಜೊತೆಯವನು/ಸಂಗಡಿಗ; ಉಚಿತ=ಯೋಗ್ಯವಾದುದು/ಸರಿಯಾದುದು; ಪರಿಭವ=ಅಪಮಾನ/ತಿರಸ್ಕಾರ;
ನಿನ್ನ ವಂದಿಗರು ಇರಲು ಉಚಿತವೇ ತನಗೆ ಪರಿಭವ=ನಿನ್ನಂತಹ ಗಂಡನಿರುವಾಗ ನನಗೆ ಇಂತಹ ಅಪಮಾನವುಂಟಾದುದು ಸರಿಯೇ;
ಬೆಂಬಳಿ=ಹಿಂಬಾಲಿಸುವುದು/ಬೆನ್ನುಹತ್ತುವುದು;
ಎನ್ನನು ಅವ ಬೆಂಬಳಿಯ ಬಿಡ=ನನ್ನನ್ನು ಅವನು ಹಿಂಬಾಲಿಸುವುದನ್ನು ಬಿಡುವುದಿಲ್ಲ. ಅಂದರೆ ಇನ್ನು ಮುಂದೆಯೂ ನಾನು ಆತನಿಂದ ಕಾಮದ ಹಲ್ಲೆಗೆ ಗುರಿಯಾಗಲಿದ್ದೇನೆ;
ಇನ್ನು ನಾನು ಬದುಕುವಳಲ್ಲ=ಇಂತಹ ಹಲ್ಲೆಗೆ ಗುರಿಯಾಗಿ ನಾನು ಬದುಕುವ ಬದಲು ಸಾಯಲು ಇಚ್ಚಿಸುತ್ತೇನೆ;
ಪಾತಕ=ಪಾಪ; ತಾಗು=ತಟ್ಟು/ಮುಟ್ಟು; ಮಾಣದು=ಬಿಡುವುದಿಲ್ಲ;
ಪಾತಕ ನಿನ್ನ ತಾಗದೆ ಮಾಣದು ಎನಲು=ನನ್ನ ಸಾವಿಗೆ ಕಾರಣವಾಗುವ ಪಾಪ ನಿನ್ನನ್ನು ತಟ್ಟದೆ ಬಿಡುವುದಿಲ್ಲ ಎಂದು ದ್ರೌಪದಿಯು ಸಂಕಟದಿಂದ ನುಡಿಯಲು;
ಖತಿ=ಕೋಪ/ಸಿಟ್ಟು;
ಭೀಮ ಖತಿಗೊಂಡ=ಭೀಮನು ಕೋಪಗೊಂಡನು;
ಹರಿಬ=ತೊಂದರೆ/ಕಶ್ಟ; ಉಸುರಲು+ಆಗದು; ಉಸುರು=ಮಾತು/ನುಡಿ;
ನಿನ್ನ ಹರಿಬಕೆ ಉಸುರಲಾಗದು=ನಿನ್ನ ಕಶ್ಟ ಪರಿಹಾರಕ್ಕೆ ಈ ರೀತಿ ಮಾಡು ಇಲ್ಲವೇ ಮಾಡಬೇಡ ಎಂದು ನಾನು ಏನನ್ನೂ ಹೇಳುವುದಿಲ್ಲ;
ಮಿಸುಕು=ಬಾಯಿಬಿಡು/ಉಸಿರೆತ್ತು; ಆವು+ಅಲ್ಲ; ಆವು=ನಾವು;
ಮಿಸುಕುವವರು ಆವಲ್ಲ=ಈ ಸನ್ನಿವೇಶದಲ್ಲಿ ನಿನ್ನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೀಚಕನ ಎದುರಾಗಿ ನಾನೇನು ಮಾಡಲಾಗುವುದಿಲ್ಲ;
ಗಸಣಿ+ಕೊಂಬವರು+ಅಲ್ಲ; ಗಸಣಿ=ಉಸಾಬರಿ/ತಂಟೆ; ಗಸಣಿಗೊಳ್=ಉಸಾಬರಿಯನ್ನು ತೆಗೆದುಕೊಳ್ಳುವುದು;
ಹೆಂಡಿರ ಗಸಣಿಗೊಂಬವರಲ್ಲ=ಹೆಂಡತಿಗೆ ಬಂದಿರುವ ತೊಂದರೆಯನ್ನು ಪರಿಹರಿಸುವ ಜವಾಬ್ದಾರಿಯನ್ನು ನಾನು ವಹಿಸುಕೊಳ್ಳುವವನಲ್ಲ;
ಹುದುವು=ಗುಂಪು/ಸಾಮೂಹಿಕ ಒಡೆತನಕ್ಕೆ ಸೇರಿದ್ದು; ಗಂಡತನ=ಒಂದು ಹೆಣ್ಣಿನೊಡನೆ ಮದುವೆಯಾಗಿ ಗಂಡನಾಗಿರುವುದು;
ಹುದುವಿನ ಗಂಡತನ=ನೀನು ನನ್ನೊಬ್ಬನ ಹೆಂಡತಿಯಲ್ಲ. ನಿನಗೆ ಅಯ್ದು ಮಂದಿ ಗಂಡಂದಿರಿದ್ದಾರೆ;
ಶಶಿ=ಚಂದ್ರ; ವದನ=ಮೊಗ; ಶಶಿವದನೆ=ಬೆಳಗುತ್ತಿರುವ ಚಂದ್ರನಂತಹ ಮೊಗವನ್ನುಳ್ಳ ಸುಂದರಿ; ಸುಡು=ಬೆಂಕಿಯನ್ನು ಹಾಕು. ಕೋಪ, ಹತಾಶೆ, ಆಕ್ರೋಶವನ್ನು ವ್ಯಕ್ತಪಡಿಸುವಾಗ ಬಳಸುವ ಪದ;
ಇದನು ಶಶಿವದನೆ ಸುಡು=ಅಯ್ದು ಮಂದಿ ಗಂಡಂದಿರನ್ನು ಪಡೆದಿರುವ ಈ ವ್ಯವಸ್ತೆಗೆ ಬೆಂಕಿಹಾಕು;
ಅಪದೆಸೆ=ಹೀನ ಸ್ಥಿತಿ;
ಈ ಕಷ್ಟ ಅಪದೆಸೆಯವರು ನಾವಲ್ಲ=ನಿನಗೆ ಬಂದಿರುವ ಕಶ್ಟಕ್ಕಾಗಲಿ ಇಲ್ಲವೇ ಹೀನ ಸ್ತಿತಿಗಾಗಲಿ ನಾನು ಕಾರಣನಲ್ಲ. ಈಗ ನಿನಗೆ ಬಂದಿರುವ ಆಪತ್ತನ್ನು ಹೋಗಲಾಡಿಸಲು ನಾನು ಮುಂದಾಗುವುದಿಲ್ಲ;
ಅಸಮ=ಸರಿಸಾಟಿಯಿಲ್ಲದ;
ನಿನ್ನವರು ಅಸಮ ಸಾಹಸರು=ನಿನ್ನ ಗಂಡಂದಿರು ಮಹಾ ಪರಾಕ್ರಮಿಗಳು;
ಅರುಹು=ತಿಳಿಸು;
ಉಳಿದ ನಾಲ್ವರಿಗೆ ಅರುಹು ಹೋಗು=ಉಳಿದ ನಾಲ್ಕು ಮಂದಿ ಗಂಡಂದಿರ ಮುಂದೆ ಹೋಗಿ ನಿನಗೆ ಬಂದಿರುವ ಆಪತ್ತನ್ನು ತಿಳಿಸು;
ರಮಣ=ಗಂಡ; ರಮಿಸು=ದೇಹದೊಡನೆ ಕಾಮದ ನಂಟನ್ನು ಪಡೆದು ಆನಂದಿಸುವುದು; ಮಾನ+ಅರ್ಥ+ಎನೆ; ಮಾನ=ಮರ್‍ಯಾದೆ/ಶೀಲ/ಚಾರಿತ್ರ್ಯ; ಅರ್ಥ=ವಿಚಾರ/ಸಂಗತಿ; ಮಾನಾರ್ಥ=ಮರ್‍ಯಾದೆಯನ್ನು ಕಾಪಾಡುವ ವಿಚಾರ; ನಿರ್ಗಮಿಸು=ಹೊರಡುವುದು;
ರಮಣ ಕೇಳು, ಉಳಿದವರು ತನ್ನನು ರಮಿಸುವರು. ಮಾನಾರ್ಥವೆನೆ ನಿರ್ಗಮಿಸುವರು=ರಮಣನೇ ಕೇಳು, ಉಳಿದ ನಾಲ್ವರು ನನ್ನ ದೇಹದೊಡನೆ ಕಾಮದ ನಂಟನ್ನು ಪಡೆದು ಆನಂದಿಸುತ್ತಾರೆಯೇ ಹೊರತು, ನನ್ನ ಮಾನಪ್ರಾಣಕ್ಕೆ ಆಪತ್ತು ಬಂದಾಗ ದೂರಸರಿಯುತ್ತಾರೆ;
ಉಚಿತ=ಯೋಗ್ಯವಾದುದು; ಬಾಹಿರ=ಹೊರತಾದುದು/ಸಂಬಂದವಿಲ್ಲದುದು; ಉಚಿತ ಬಾಹಿರರು=ಜವಾಬ್ದಾರಿಯಿಂದ ದೂರಸರಿಯುವವರು;
ನೀನಲ್ಲದೆ ಉಳಿದವರು ಉಚಿತ ಬಾಹಿರರು=ನೀನಲ್ಲದೆ ಉಳಿದವರು ನನ್ನ ಮಾನಪ್ರಾಣವನ್ನು ಕಾಪಾಡಲು ಮುಂದೆ ಬರುವುದಿಲ್ಲ;
ಮಮತೆಯಲಿ ನೀ ನೋಡು=ಪ್ರೀತಿ ಮತ್ತು ಕರುಣೆಯಿಂದ ನನ್ನನ್ನು ಕಂಡು ಕಾಪಾಡು;
ಚಿತ್ತ=ಮನಸ್ಸು; ಸಮತೆ=ನೆಮ್ಮದಿ; ಚಿತ್ತದ ಸಮತೆ=ಕೋಪೋದ್ರೇಕಗೊಳ್ಳದೆ ಶಾಂತರೀತಿಯಲ್ಲಿರುವುದು;
ಚಿತ್ತದ ಸಮತೆಯನು ಬೀಳ್ಕೊಡು=ಇಂತಹ ಸನ್ನಿವೇಶದಲ್ಲಿ ಪ್ರಶಾಂತನಾಗಿರಬೇಡ. ನನಗೆ ಬಂದಿರುವ ಆಪತ್ತನ್ನು ಪರಿಹರಿಸಲು ಶೂರತನದಿಂದ ಮುಂದೆ ಬಾ;
ಕುಠಾರ=ಕ್ರೂರಿ; ಯಮನ ಕಾಣಿಸು=ಇದೊಂದು ನುಡಿಗಟ್ಟು. ಕೊಲ್ಲು ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;
ಕುಠಾರನ ಯಮನ ಕಾಣಿಸಿ ಕರುಣಿಸು ಎಂದಳು ಕಾಂತೆ ಕೈಮುಗಿದು=ಕ್ರೂರಿಯಾದ ಕೀಚಕನನ್ನು ಕೊಂದು, ನನ್ನ ಮೇಲೆ ಕರುಣೆಯನ್ನು ತೋರಿಸು ಎಂದು ದ್ರೌಪದಿಯು ಬೀಮನಿಗೆ ಕಯ್ ಮುಗಿದು ಬೇಡಿಕೊಂಡಳು;
ಕಲಹಕೆ+ಆದೊಡೆ; ಕಲಹ=ಜಗಳ/ಹೊಡೆದಾಟ/ಕಾಳೆಗ; ಆದೊಡೆ=ಆದರೆ; ರಮಿಸು=ದೇಹದೊಡನೆ ಕಾಮದ ನಂಟನ್ನು ಪಡೆದು ಆನಂದಿಸುವುದು;
ಕಲಹಕಾದೊಡೆ ನಾವು, ರಮಿಸುವರು ಉಳಿದವರು=ಯಾರಿಂದಲಾದರೂ ಆಪತ್ತು ಬಂದಾಗ ನಿಮ್ಮೆಲ್ಲರನ್ನು ಕಾಪಾಡುವುದಕ್ಕಾಗಿ ನಾನೊಬ್ಬನೇ ಹಗೆಯ ಎದುರು ಹೋರಾಡುತ್ತೇನೆ. ಉಳಿದ ನಾಲ್ವರು ನಿನ್ನೊಡನೆ ರಮಿಸುತ್ತಾರೆ;
ಬಳಿಕೇನು ಗಾದೆಯ ಬಳಕೆ=ಇನ್ನೇನು ಹೇಳುವುದು. ಒಂದು ಗಾದೆಯ ಮಾತು ಜನರ ಬಾಯಲ್ಲಿ ಇದೆಯಲ್ಲವೇ;
ಕೆಲಬರು=ಹಲವರು; ಗಳಿಸು=ಶ್ರಮಪಟ್ಟು ದುಡಿದು ಸಂಪಾದಿಸು; ಗಳಿಸಿದೊಡೆ=ಗಳಿಸಿದರೆ; ಉಂಡು=ತಿಂದು; ಜಾರು=ನುಣುಚಿಕೊಳ್ಳು;
ಕೆಲಬರು ಗಳಿಸಿದೊಡೆ ಕೆಲರು ಉಂಡು ಜಾರುವರು=ಹಲವರು ಶ್ರಮಪಟ್ಟು ದುಡಿದು ಸಂಪತ್ತನ್ನು ಗಳಿಸಿದರೆ, ಆ ಸಂಪತ್ತಿನಿಂದ ಇನ್ನಿತರರು ಆನಂದವನ್ನು ಹೊಂದುತ್ತ, ಶ್ರಮಪಟ್ಟು ದುಡಿದವರಿಗೆ ಆಪತ್ತು ಬಂದಾಗ ಯಾವ ಜವಾಬ್ದಾರಿಯನ್ನು ಹೊರದೆ ನುಣುಚಿಕೊಳ್ಳುತ್ತಾರೆ. ಪಾಂಡವರ ಕುಟುಂಬಕ್ಕೆ ಆಪತ್ತು ಬಂದಾಗ ನಾನೊಬ್ಬನೇ ಹೋರಾಡಿ ಕಾಪಾಡುತ್ತೇನೆ. ಉಳಿದವರೆಲ್ಲರೂ ಯಾವುದೇ ತೊಂದರೆಯನ್ನು ತೆಗೆದುಕೊಳ್ಳದೆ ಆರಾಮವಾಗಿರುತ್ತಾರೆ ಎಂಬ ತಿರುಳನ್ನು ಈ ಗಾದೆ ಮಾತು ಸೂಚಿಸುತ್ತಿದೆ;
ಹಳಿವು=ತೊಂದರೆ; ಹರಿಬ=ಸಂಕಟ; ಚಿತ್ತ=ಮನಸ್ಸು; ತಿಳುಹು=ಸಮಾಧಾನ;
ನಿನ್ನಯ ಹಳಿವು ಹರಿಬವ ಹೇಳಿ ಚಿತ್ತವ ತಿಳುಹಿಕೊಂಬುದು=ನಿನ್ನ ನೋವು ಸಂಕಟ ಅಪಮಾನವನ್ನೆಲ್ಲಾ ನನ್ನ ಮುಂದೆ ತೋಡಿಕೊಂಡು, ಮನಸ್ಸಿಗೆ ಸಮಾದಾನವನ್ನು ತಂದುಕೊಳ್ಳುವುದು;
ಧರ್ಮಜ=ದರ್‍ಮರಾಯ; ಹೊರೆ=ಜವಾಬ್ದಾರಿ; ಭೀತ=ಹೆದರುವವನು; ಧರ್ಮಜನ ಹೊರೆ= ಅಜ್ನಾತವಾಸದಲ್ಲಿರುವ ಪಾಂಡವರ ಗುಟ್ಟು ಯಾವುದೇ ಸನ್ನಿವೇಶದಲ್ಲಿಯೂ ಬಯಲಾಗಬಾರದು ಎಂಬ ದರ್‍ಮರಾಯನ ಆದೇಶವನ್ನು ಪಾಲಿಸುವ ಜವಾಬ್ದಾರಿ;
ಧರ್ಮಜನ ಹೊರೆಗೆ ನಾವು ಭೀತರು=ದರ್‍ಮರಾಯನ ಆದೇಶಕ್ಕೆ ನಾವು ಅಂಜುತ್ತೇವೆ;
ಅಳುಕು=ಹೆದರು/ನಡುಗು;
ಅಳುಕಿ ನಡೆವವರಲ್ಲ=ಅಣ್ಣನಿಗೆ ಅಂಜಿಕೊಂಡು ಅವನಿಗೆ ಒಪ್ಪಿಗೆಯಾಗದ ಯಾವುದೇ ಕೆಲಸವನ್ನು ಮಾಡುವವರಲ್ಲ;
ಹರಿಬ=ಸಂಕಟ; ಗಂಡು+ಕೂಸು; ಗಂಡುಗೂಸು=ಒಬ್ಬನೇ ವ್ಯಕ್ತಿ; ವೈರಿ=ಶತ್ರು/ಹಗೆ; ಕಡಿ=ಕತ್ತರಿಸು/ಸೀಳು; ಖಂಡ=ತುಂಡು/ಚೂರು; ಮೇಣ್=ಇಲ್ಲವೇ; ಒಡಲು=ದೇಹ; ಇಕ್ಕು=ಕೊಡು/ನೀಡು;
ಹೆಂಡತಿಯ ಹರಿಬದಲಿ ಒಬ್ಬನೆ ಗಂಡುಗೂಸೇ ವೈರಿಯನು ಕಡಿ ಖಂಡವನು ಮಾಡುವನು ಮೇಣ್ ತನ್ನ ಒಡಲನು ಇಕ್ಕುವನು=ತನ್ನ ಹೆಂಡತಿಯ ಮಾನಪ್ರಾಣಗಳಿಗೆ ಆಪತ್ತು ಬಂದಾಗ ಅವಳ ಗಂಡನೊಬ್ಬನೇ ಶತ್ರುವನ್ನು ಕಡಿದು ತುಂಡುತುಂಡು ಮಾಡುತ್ತಾನೆ ಇಲ್ಲವೇ ಶತ್ರುವಿನ ಎದುರಾಗಿ ಹೋರಾಡುತ್ತ ತನ್ನ ಪ್ರಾಣವನ್ನು ಒಪ್ಪಿಸುತ್ತಾನೆ;
ಗಂಡರ=ಶೂರರು/ಪರಾಕ್ರಮಿಗಳು; ಮೂರು ಲೋಕ=ದೇವಲೋಕ-ಭೂಲೋಕ- ಪಾತಾಳಲೋಕ ಎಂಬ ಮೂರು ಲೋಕಗಳಿವೆ ಎಂಬ ಕಲ್ಪನೆ ಜನಸಮುದಾಯದ ಮನದಲ್ಲಿದೆ; ಆಳು=ಕಾಪಾಡು;
ಗಂಡರು ಐವರು ಮೂರು ಲೋಕದ ಗಂಡರು ಒಬ್ಬಳನು ಆಳಲಾರಿರಿ=ನನ್ನ ಗಂಡಂದಿರಾದ ನೀವು ಅಯ್ವರು ಮೂರು ಲೋಕಗಳಲ್ಲಿಯೇ ಪರಾಕ್ರಮಿಗಳೆಂಬ ಹೆಸರನ್ನು ಪಡೆದಿದ್ದೀರಿ. ಆದರೆ ನಿಮ್ಮೆಲ್ಲರ ಒಬ್ಬಳೇ ಹೆಂಡತಿಯಾದ ನನ್ನನ್ನು ಆಪತ್ತಿನಿಂದ ಕಾಪಾಡಲಾರಿರಿ;
ಭಂಡ=ಮಾನಮರ್‍ಯಾದೆಯಿಲ್ಲದವನು/ಲಜ್ಜೆಗೇಡಿ/ಎಂತಹ ಅವಮಾನವಾದರೂ ಅದನ್ನು ಸಹಿಸಿಕೊಂಡು ತನ್ನ ಹೊಟ್ಟೆಪಾಡಿಗಾಗಿ ಮತ್ತು ಪ್ರಾಣವನ್ನು ಉಳಿಸಿಕೊಳ್ಳವುದಕ್ಕಾಗಿ ಬಾಳುವವನು;
ಗಂಡರೋ ನೀವ್ ಭಂಡರೋ ಹೇಳು=ನೀನೇ ಹೇಳು… ನೀವೇನು ನನ್ನ ಗಂಡಂದಿರೋ ಇಲ್ಲವೇ ಲಜ್ಜೆಗೇಡಿಗಳೋ;
ಅಂದು>ದರ್‍ಮರಾಯ ಮತ್ತು ದುರ್‍ಯೋದನನ ನಡುವೆ ನಡೆದ ಪಗಡೆಯಾಟದ ಜೂಜಿನ ದಿನದಂದು; ಉನ್ನತಿ=ಅಧಿಕಾರ ಮತ್ತು ಸಿರಿವಂತಿಕೆಯ ಸೊಕ್ಕು ಮತ್ತು ಮೇಲುಗಯ್;
ಅಂದು ಕೌರವ ನಾಯಿ ಸಭೆಯಲಿ ಉನ್ನತಿಯ ತಂದು ತೋರಿದನು=ಜೂಜಿನ ದಿನದಂದು ತುಂಬಿದ ಒಡ್ಡೋಲಗದಲ್ಲಿ ಆ ದುರ್‍ಯೋದನನೆಂಬ ನಾಯಿ ಅದಿಕಾರದ ಸೊಕ್ಕಿನಿಂದ ತನ್ನ ತಮ್ಮನಾದ ದುಶ್ಶಾಸನನಿಂದ ಒಡ್ಡೋಲಗಕ್ಕೆ ನನ್ನನ್ನು ಮುಡಿಯೆಳೆದು ಎಳೆತರಿಸಿ, ನನ್ನ ಸೀರೆಯನ್ನು ಸುಲಿಸಿ ಅಪಮಾನ ಮಾಡಿ ಮೆರೆದನು;
ಬಳಿಕ ಇಂದು ಕೀಚಕ ಕುನ್ನಿ ರಾಜ ಸಭೆಯೊಳಗೆ ಒದೆದನು=ಅನಂತರ ಇಂದು ಕೀಚಕನೆಂಬ ನಾಯಿಯು ರಾಜಸಬೆಯೊಳಗೆ ಸಬಾಸದರ ಮುಂದೆ ನನ್ನ ಒದ್ದು ಹಲ್ಲೆ ಮಾಡಿದನು;
ಮೇಣ್=ಮತ್ತು; ಕುಂದು=ಕೀಳಾದುದು/ಹೀನವಾದುದು; ಆವುದು=ಯಾವುದು;
ಅಂದು ಮೇಣ್ ಇಂದು ಆದ ಭಂಗಕೆ ಕುಂದು ಅದು ಆವುದು=ಅಂದು ಮತ್ತು ಇಂದು ಈ ಎರಡು ಸನ್ನಿವೇಶಗಳಲ್ಲಿಯೂ ನನಗೆ ಉಂಟಾದ ಅಪಮಾನಕ್ಕೆ ಕಾರಣವೇನು. ಯಾರ ಹೇಡಿತನದಿಂದ ನನಗೆ ಇಂತಹ ಸ್ತಿತಿಯು ಬಂದೊದಗಿತು;
ಬಲ್ಲಿದರು=ಶಕ್ತರು/ಪರಾಕ್ರಮಿಗಳು; ಹೊಕ್ಕರೆ=ಆಶ್ರಯವನ್ನು ಪಡೆದರೆ;
ನೀವು ಬಲ್ಲಿದರು ಎಂದು ಹೊಕ್ಕರೆ ಹೆಣ್ಣ ಕೊಂದಿರಿ=ನೀವು ಪಾಂಡವರು ಮಹಾಪರಾಕ್ರಮಿಗಳು ಎಂದು ನಿಮ್ಮನ್ನು ನಾನು ವರಿಸಿದರೆ, ಹೆಂಡತಿಯಾದ ನನ್ನ ಮಾನಪ್ರಾಣಗಳನ್ನೇ ನಾಶಪಡಿಸುತ್ತಿರುವಿರಿ;
ದಾನವ=ರಕ್ಕಸ; ಎನ್ನ=ನನ್ನ; ಅಭಿಮಾನ=ಹಿರಿಮೆ/ಅಗ್ಗಳಿಕೆ/ಹೆಮ್ಮೆ; ಕೊಳ್=ಅಪಹರಿಸು/ಕಿತ್ತುಕೊಳ್ಳು; ಏನನು+ಎಂಬೆನು;
ದಾನವರು ಮಾನವರೊಳು ಎನ್ನ ಅಭಿಮಾನವನು ಕೊಂಬವನ ಹೆಸರನು ಅದು ಏನನೆಂಬೆನು=ರಕ್ಕಸರಲ್ಲಿ ಇಲ್ಲವೇ ಮಾನವರಲ್ಲಿ ಮಹಾಬಲಶಾಲಿ ಬೀಮನೆಂಬ ನನ್ನ ಹಿರಿಮೆಗೆ ಸವಾಲನ್ನೊಡ್ಡುವ ವ್ಯಕ್ತಿಯು ಯಾರಿದ್ದಾನೆ. ಅಂತಹ ಹೆಸರಿನವನು ಯಾರೊಬ್ಬನೂ ಇಲ್ಲ;
ಖಾತಿ=ಕೋಪ/ಸಿಟ್ಟು;
ನೊಂದು ನುಡಿದೊಡೆ ಎಮಗೆ ಖಾತಿಯಿಲ್ಲ=ನೀನು ಸಂಕಟದಿಂದ ನನ್ನನ್ನು ಎಶ್ಟೇ ಹಂಗಿಸಿ ನುಡಿದರೂ ನಾನು ಕೋಪಿಸಿಕೊಳ್ಳುವುದಿಲ್ಲ;
ನಪುಂಸಕರ+ಒಡನೆ; ನಪುಂಸಕ=ಗಂಡೂ ಅಲ್ಲದ ಹೆಣ್ಣು ಅಲ್ಲದ ಮಾನವ ಜೀವಿ/ಬಲಹೀನ/ದುರ್ಬಲ; ಮೂಗುಳ್ಳವನು=ಮಾನವಂತ/ಸ್ವಾಬಿಮಾನಿ/ಆತ್ಮಗೌರವವುಳ್ಳವನು; ಮಾನಿನಿ=ಹೆಂಗಸು;
ಈ ನಪುಂಸಕರೊಡನೆ ಹುಟ್ಟಿದ ನಾನು ಮೂಗುಳ್ಳವನೆ ಮಾನಿನಿ=ದ್ರೌಪದಿ, ಇಂತಹ ಬಲಹೀನರಾದ ಸೋದರರೊಡನೆ ಹುಟ್ಟಿರುವ ನಾನು ಮಾನವಂತನೇ. ಇವರ ನಡುವೆ ನಾನು ಅಸಹಾಯಕನಾಗಿದ್ದೇನೆ;
ತೋರು=ಕಾಣು/ಗೋಚರವಾಗು; ಪರಿ=ರೀತಿ; ಎಂಬುದು=ನುಡಿಯುವುದು; ಭೀತ=ಹೆದರಿಕೆ;
ನೀನು ತೋರಿದ ಪರಿಯಲಿ ಎಂಬುದು… ಭೀತಿ ಬೇಡ=ನಿನಗೆ ಏನೇನು ಬಯ್ಯಬೇಕೆಂದು ಅನಿಸುತ್ತದೆಯೋ ಆ ರೀತಿಯಲ್ಲಿ ಮಾತನಾಡು. ನಿನ್ನ ಸಂಕಟವನ್ನು ತೋಡಿಕೊಳ್ಳುವುದಕ್ಕೆ ಹಿಂಜರಿಕೆ ಬೇಡ;
ದುಶ್ಶಾಸನ=ದುರ್‍ಯೋದನನ ತಮ್ಮ. ದ್ಯೂತದ ಪ್ರಸಂಗದಲ್ಲಿ ದ್ರೌಪದಿಯನ್ನು ರಾಣಿವಾಸದಿಂದ ದುರ್‍ಯೋದನನ ರಾಜಸಬೆಗೆ ಎಳೆತಂದು, ಅವಳ ಮುಡಿಗೆ ಕಯ್ ಇಕ್ಕಿ, ಸೀರೆಯನ್ನು ಸುಲಿದು ಅಪಮಾನ ಮಾಡಿದ್ದವನು; ತಿಂದಡಲ್ಲದೆ=ತಿನ್ನದೆ ಹೋದರೆ; ತಣಿವು=ಸಮಾಧಾನ; ದೊರಕೊಳ್=ಸಿಗು; ಹಾಯ್=ಮುಂದೆ ನುಗ್ಗು/ಮೇಲೆ ಬೀಳು; ವ್ಯಥೆ=ನೋವು/ಯಾತನೆ; ಹಲ್ಲು+ಕಿರಿ; ಕಿರಿ=ತೆರೆ; ಹಲುಗಿರಿದು=ಹಲ್ಲುಗಳನ್ನು ತೆರೆದು; ಹಲುಗಿರಿ=ಹಲ್ಲುಗಿರಿ=ನಗು, ಸಂಕಟ, ದೀನತೆ, ನೋವು ಮುಂತಾದ ಒಳಮಿಡಿತಗಳನ್ನು ಸೂಚಿಸುವಾಗ ಹಲ್ಲು ಬಿಡುವುದು;
ಅಂದು ದುಶ್ಶಾಸನನ ಕರುಳನು ತಿಂದಡಲ್ಲದೆ ತಣಿವು ದೊರೆಕೊಳದೆಂದು ಎಂದು ಹಾಯ್ದೊಡೆ, ಆ ವ್ಯಥೆಯ ಹಲುಗಿರಿದು ಮಾಣಿಸಿದನು=ಅಂದು ದುರ್‍ಯೋದನನ ಒಡ್ಡೋಲಗದಲ್ಲಿ ನಿನ್ನನ್ನು ಅಪಮಾನಿಸಿದ ದುಶ್ಶಾಸನನ ಕರುಳನ್ನು ಬಗೆದು ತಿಂದಲ್ಲದೆ ನನಗೆ ಸಮಾದಾನವಾಗದೆಂದು ಕೊಲ್ಲಲು ಮುನ್ನುಗ್ಗುತ್ತಿದ್ದಾಗ, ಅಣ್ಣನಾದ ದರ್‍ಮರಾಯನು ದೀನತೆಯಿಂದ ನನ್ನತ್ತ ನೋಡುತ್ತ ದುಶ್ಶಾಸನನ್ನು ಕೊಲ್ಲದಂತೆ ತಡೆದನು;
ಎರಗು=ಮೇಲೆ ಬೀಳು; ಹದನು=ರೀತಿ/ನಿಲುವು;
ಇಂದು ಕೀಚಕ ನಾಯನು ಎರಗುವೆನು ಎಂದು ಮರನನು ನೋಡಿದರೆ ಬೇಡ ಎಂದ ಹದನನು ನೀನು ಕಂಡೆ=ವಿರಾಟರಾಯನ ಒಡ್ಡೋಲಗದಲ್ಲಿ ನಿನ್ನ ಮೇಲೆ ಹಲ್ಲೆ ಮಾಡಿದ ದುರುಳ ಕೀಚಕನನ್ನು ಮರದ ಕೊಂಬೆರೆಂಬೆಗಳಿಂದಲೇ ಸದೆಬಡಿಯಲೆಂದು ಸಿದ್ದನಾಗುತ್ತಿದ್ದಾಗ, ಆ ರೀತಿ ಮಾಡಬೇಡ ಎಂದು ದರ್‍ಮರಾಯನು ತಡೆದ ರೀತಿಯನ್ನು ನೀನೇ ಕಂಡಿರುವೆ;
ಅಪರಾಧ=ತಪ್ಪು;
ಎನಗುಂಟೆ ಅಪರಾಧ=ನನ್ನಲ್ಲಿ ಏನಾದರೂ ತಪ್ಪಿದೆಯೇ;
ಹರಿಬಕ್ಕೆ+ಓಸುಗವೆ; ಹರಿಬ=ಕಾಪಾಡುವಿಕೆ/ತೊಂದರೆ; ಓಸುಗ=ಸಲುವಾಗಿ/ಕಾರಣಕ್ಕಾಗಿ/ಅದಕ್ಕಾಗಿ; ಚಿಣ್ಣ=ಚಿಕ್ಕ ವಯಸ್ಸಿನವನು; ಕುಂತಿಯ ಚಿಣ್ಣ=ಭೀಮ; ಕುಜನರು+ಆದವರು; ಕುಜನ=ಕೆಟ್ಟ ನಡೆನುಡಿಯ ಜನರು;
ಹೆಣ್ಣ ಹರಿಬಕ್ಕೊಸುಗವೆ ತಮ್ಮಣ್ಣನ ಆಜ್ಞೆಯ ಮೀರಿ ಕುಂತಿಯ ಚಿಣ್ಣ ಬದುಕಿದನು ಎಂದು ಕುಜನರಾದವರು ನುಡಿವರು=ಕೇವಲ ಒಂದು ಹೆಣ್ಣನ್ನು ಕಾಪಾಡುವುದಕ್ಕಾಗಿ ತನ್ನ ಅಣ್ಣನ ಅಪ್ಪಣೆಯನ್ನು ಬೀಮನು ಮೀರಿದನು ಎಂದು ಕೆಟ್ಟಜನರು ಆಡಿಕೊಳ್ಳುತ್ತಾರೆ;
ದೂರು=ಮೊರೆಹೊಗು/ಅಹವಾಲು;
ಅಣ್ಣನವರಿಗೆ ದೂರುವುದು=ದ್ರೌಪದಿಯೇ, ನಿನಗೆ ಬಂದಿರುವ ಸಂಕಟವನ್ನು ಅಣ್ಣನವರ ಮುಂದೆ ಹೇಳಿಕೊಳ್ಳುವುದು;
ಉಣ್ಣದುರಿ+ಇವು; ಉಣ್=ಅನುಬವಿಸು; ಉರಿ=ಸುಡು/ಸುಟ್ಟುಹೋಗು; ಉಣ್ಣದುರಿ=ಇದೊಂದು ನುಡಿಗಟ್ಟು. ಪರಿಹರಿಸಲಾಗದ ಕಶ್ಟದ ಕೆಲಸ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ;
ಇವು ನಾವು ಉಣ್ಣದುರಿ=ಈಗ ನಿನಗೆ ಬಂದಿರುವ ಕಶ್ಟವನ್ನು ನನ್ನಿಂದ ಪರಿಹರಿಸಲು ಆಗುವುದಿಲ್ಲ;
ರಾಯ=ಅಣ್ಣ ದರ್‍ಮರಾಯ; ಆಜ್ಞೆ=ಅಪ್ಪಣೆ; ರಾಯನ ಆಜ್ಞೆ=ಜೂಜಾಟದ ಕಟ್ಟಲೆಯಂತೆ ಅಜ್ನಾತವಾಸದಲ್ಲಿರುವ ಪಾಂಡವರಾದ ನಾವು ಎಂತಹ ಆಪತ್ತು ಬಂದರೂ ಅದನ್ನು ಸಹಿಸಿಕೊಳ್ಳಬೇಕೆ ಹೊರತು, ನಮ್ಮ ಗುಟ್ಟನ್ನು ಹೊರಗೆಡಹುವಂತಹ ಕೆಲಸವನ್ನು ಮಾಡಬಾರದು ಎಂಬ ಮಾತು; ಕಣ್ಣಿ=ಹಗ್ಗ; ಬಿಗಿ+ಪಡೆದು; ಬಿಗಿ=ಕಟ್ಟು/ಬಂಧಿಸು; ಪಡೆದು=ಹೊಂದಿ; ಕೆಡೆ=ಉರುಳು/ಬೀಳು/ಕುಸಿ;
ರಾಯನ ಆಜ್ಞೆಯ ಕಣ್ಣಿಯಲಿ ಬಿಗಿವಡೆದು ಕೆಡೆದೆವು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಅಣ್ಣ ದರ್‍ಮರಾಯನ ಅಪ್ಪಣೆಯೆಂಬ ಕಟ್ಟಲೆಯ ಹಗ್ಗದಲ್ಲಿ ಬಿಗಿಸಿಕೊಂಡು ಕುಸಿದು ಬಿದ್ದಿದ್ದೇನೆ. ಈಗ ನಿನಗಾಗಿ ಏನನ್ನೂ ಮಾಡಲಾರದವನಾಗಿದ್ದೇನೆ. ಈಗ ನಾನು ಬಲಹೀನನೇ ಹೊರತು ಬಲಶಾಲಿಯಲ್ಲ;
ಕಾಂತೆ=ಹೆಂಗಸು; ಫಲುಗುಣ=ಅರ್‍ಜುನ; ಹೊದ್ದು=ಬಳಿಸಾರು/ಹತ್ತಿರ ಹೋಗು;
ಕಾಂತೆ ಕೇಳು, ಫಲುಗುಣನ ಹೊದ್ದುವುದು=ದ್ರೌಪದಿಯೇ ಕೇಳು, ನೀನು ಅರ್‍ಜುನ ಬಳಿಸಾರಿ ನಿನ್ನ ಸಂಕಟವನ್ನು ಹೇಳಿಕೊಳ್ಳುವುದು;
ಯಮನಂದನ=ದರ್‍ಮರಾಯ; ತಿದ್ದು=ಸರಿಪಡಿಸು;
ಯಮನಂದನನ ಪಾದಕೆ ಬಿದ್ದು ಮನವನು ತಿದ್ದುವುದು=ದರ್‍ಮರಾಯನ ಪಾದಕ್ಕೆ ನಮಿಸಿ ಅಂದರೆ ಅವನಲ್ಲಿ ಮೊರೆಯಿಟ್ಟು, ಜೂಜಿನ ಕಟ್ಟಲೆಗಿಂತ ಒಂದು ಹೆಣ್ಣಿನ ಮಾನಪ್ರಾಣವನ್ನು ಕಾಪಾಡುವುದು ದೊಡ್ಡದೆಂದು ಅವನಿಗೆ ಮನವರಿಕೆ ಮಾಡುವುದು;
ಎನಿಸು=ಹೇಳಿಸು;
ಸಹದೇವ ನಕುಲರ ಕೈಯಲಿ ಎನಿಸುವುದು=ಆಪತ್ತಿನಲ್ಲಿ ಸಿಲುಕಿರುವ ನಿನ್ನನ್ನು ಕಾಪಾಡುವುದು ಬಲುದೊಡ್ಡ ಕೆಲಸವೆಂದು ಸಹದೇವ ನಕುಲರಿಂದ ದರ್‍ಮರಾಯನಿಗೆ ಹೇಳಿಸು;
ಗೆದ್ದು ಕೊಡುವರು=ಅವರೆಲ್ಲರೂ ಜತೆಗೂಡಿ ಅಂದರೆ ದರ್‍ಮರಾಯ, ಅರ್‍ಜುನ, ನಕುಲ, ಸಹದೇವರು ಕೀಚಕನನ್ನು ಸದೆಬಡಿದು ನಿನ್ನ ಮಾನಪ್ರಾಣವನ್ನು ಕಾಪಾಡುತ್ತಾರೆ;
ಪಾಲಿಸು=ಕಾಪಾಡು/ಸಲಹು; ಇದ್ದರು+ಆದಡೆ; ಆದಡೆ=ಆದರೆ; ಹೊದ್ದು=ತಟ್ಟು/ತಾಕು/ಹತ್ತು;
ನಿನ್ನ ಪಾಲಿಸದೆ ಇದ್ದರಾದೊಡೆ ದೋಷವು ಅವರನು ಹೊದ್ದುವುದು=ನಿನ್ನನ್ನು ಕಾಪಾಡದೆ ಅವರು ತಮ್ಮ ಪಾಡಿಗೆ ತಾವು ತೆಪ್ಪಗಿದ್ದರೆ, ಆ ನಾಲ್ವರಿಗೆ ಪಾಪ ತಟ್ಟುತ್ತದೆ;
ಎನ್ನ=ನನ್ನನ್ನು; ಬರಿದೇ=ಸುಮ್ಮನೆ; ಕಾಡು=ಪೀಡಿಸು/ಹಿಂಸಿಸು;
ನೀನು ಎನ್ನ ಬರಿದೇ ಕಾಡ ಬೇಡ=ನೀನು ನನ್ನನ್ನು ಸುಮ್ಮನೆ ಪೀಡಿಸಬೇಡ;
ಗಂಡ=ಪರಾಕ್ರಮ/ಶೂರತನ; ಗರ್ವ=ಸೊಕ್ಕು;
ಗಂಡ ಗರ್ವವ ನುಡಿಯೆವು=ನಾನು ಮಹಾಪರಾಕ್ರಮಿ ಎಂಬ ಸೊಕ್ಕಿನ ಮಾತನ್ನಾಡುವುದಿಲ್ಲ;
ಎಮ್ಮಯ=ನಮ್ಮ; ದಂಡಿ=ಶಕ್ತಿ/ಬಲ;
ಎಮ್ಮಯ ದಂಡಿ ತಾನದು ಬೇರೆ=ನನ್ನ ಬಲದ ರೀತಿಯ ಬೇರೆ. ಅಂದರೆ ಉಳಿದ ನಾಲ್ವರಂತಲ್ಲ;
ಭಂಡತನ=ಹೊಟ್ಟೆಪಾಡಿಗಾಗಿ ಮತ್ತು ಪ್ರಾಣದ ಉಳಿವಿಗಾಗಿ ಮಾನ ಮರ್‍ಯಾದೆಯನ್ನು ಕಳೆದುಕೊಂಡು ಬಾಳುವ ಕೀಳು ನಡೆನುಡಿ;
ನಾವು ಈ ಭಂಡತನದಲಿ ಬದುಕಲು ಅರಿಯೆವು=ಈ ರೀತಿ ಮಾನ ಮರ್‍ಯಾದೆಯನ್ನು ಕಳೆದುಕೊಂಡು ಏಕೆ ಬಾಳಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ;
ಧರ್ಮಗಿರ್ಮ=ಕೋಪ, ಬೇಸರ, ಹಾಸ್ಯ ಇಲ್ಲವೇ ಅಸಹ್ಯವಾದ ಬಾವನೆಯನ್ನು ವ್ಯಕ್ತಪಡಿಸುವಾಗ ಈ ರೀತಿ ಮೊದಲು ಉಚ್ಚರಿಸಿದ ಪದದ ಮೊದಲ ಅಕ್ಕರದ ಜಾಗದಲ್ಲಿ ಗಕಾರವನ್ನು ಬಳಸುತ್ತಾರೆ; ಕೊನರು=ಚಿಗುರು/ಏಳಿಗೆಯಾಗು;
ಧರ್ಮಗಿರ್ಮವನು ಕೊಂಡು ಕೊನರುವರಲ್ಲ=ದರ್‍ಮಗಿರ್‍ಮ ಅಂದುಕೊಂಡು ಹೇಡಿಯಂತೆ ಹೇಗೋ ಬದುಕಲು ಇಚ್ಚಿಸುವವನಲ್ಲ;
ರಾಯ=ದರ್‍ಮರಾಯ; ಅಂಡಲೆ=ಹತ್ತಿರಕ್ಕೆ ಹೋಗಿ ಪೀಡಿಸು/ಕಾಡಿಸು; ಚೆಂಡನಾಡು=ಕತ್ತರಿಸಿ ಎಸೆದಾಡು; ರಮಣಿ=ಹೆಂಗಸು; ಮೇಣ್=ಇಲ್ಲವೇ;
ರಾಯನನು ಅಂಡಲೆದು ಕೀಚಕನ ತಲೆಯನು ಚೆಂಡನಾಡಿಸು ರಮಣಿ=ದ್ರೌಪದಿ, ನೀನು ದರ್‍ಮರಾಯನ ಹತ್ತಿರಹೋಗಿ, ಅವನನ್ನು ಕಾಡಿಬೇಡಿ ಕೀಚಕನ ತಲೆಯನ್ನು ಕತ್ತರಿಸು;
ಮೇಣ್=ಇಲ್ಲವೇ;
ಮೇಣ್ ಅರ್ಜುನಗೆ ಹೇಳು=ದರ್‍ಮರಾಯನು ಕೀಚಕನನ್ನು ಕೊಲ್ಲಲು ಒಪ್ಪದಿದ್ದರೆ, ಅರ್‍ಜುನನಿಗೆ ಹೇಳಿ ಕೀಚಕನನ್ನು ಕೊಲ್ಲಿಸು;
ತರುಣಿ, ದಿಟ ಕೇಳ್ ಇಂದು ಮೊದಲಾಗೆ ನೀ ನಾಲ್ವರಿಗೆ ಅರಸಿ=ದ್ರೌಪದಿ, ಒಂದು ಮಾತನ್ನು ನಿಜವಾಗಿ ಹೇಳುತ್ತಿದ್ದೇನೆ, ಕೇಳು. ಇಂದಿನಿಂದ ನೀನು ನಾಲ್ವರಿಗೆ ಮಾತ್ರ ಹೆಂಡತಿ;
ಎಡೆಮುರಿ=ನಡುವೆ ನಿಂತುಹೋಗು/ನಂಟು ಇಲ್ಲವಾಗುವುದು;
ನಾವು ಎಡೆಮುರಿದವರು=ನನಗೂ ನಿನಗೂ ಯಾವ ನಂಟು ಇಲ್ಲ. ಇಂದಿನಿಂದ ನಾನು ನಿನಗೆ ಗಂಡನಲ್ಲ; ನೀನು ನನಗೆ ಹೆಂಡತಿಯಲ್ಲ;
ಸೂಳು=(ರತಿ ಸುಕದ) ಸರದಿ; ಪಾಳೆಯ=ಬೀಡು/ಬಿಡಾರ; ಸೂಳು ಪಾಳೆಯ=ದ್ರೌಪದಿಯು ಅಯ್ದು ಮಂದಿಯ ಹೆಂಡತಿಯಾಗಿದ್ದುದರಿಂದ, ಸರದಿಯ ಪ್ರಕಾರ ಒಬ್ಬೊಬ್ಬ ಗಂಡನ ಬಳಿ ಕೆಲವು ದಿನಗಳ ಕಾಲ ಕಾಮದ ನಂಟನ್ನು ಹೊಂದುತ್ತಿದ್ದಳು ಎಂಬ ಸಂಗತಿ;
ನಿನ್ನಯ ಸೂಳು ಪಾಳೆಯವ ಬಿಟ್ಟವರು=ನಿನ್ನೊಡನೆ ಹೊಂದಿದ್ದ ಸರದಿಯ ಕಾಮದ ನಂಟನ್ನು ಇಂದಿನಿಂದ ತೊರೆದಿದ್ದೇನೆ;
ಅರಸನನು ಪ್ರಾರ್ಥಿಸುವುದು=ದರ್‍ಮರಾಯನಲ್ಲಿ ಮೊರೆಯಿಡುವುದು;
ಅರ್‍ಜುನ ವರ ನಕುಲ ಸಹದೇವರಿಗೆ ವಿಸ್ತರಿಸಿ ಹೇಳ್ವುದು= ಉತ್ತಮರಾದ ನಕುಲ ಸಹದೇವರ ಮುಂದೆ ಮತ್ತು ಅರ್‍ಜುನನ ಮುಂದೆ ನಿನ್ನ ಬವಣೆಯೆಲ್ಲವನ್ನೂ ಸಂಪೂರ್‍ಣವಾಗಿ ತೋಡಿಕೊಳ್ಳುವುದು;
ಫಲಸಿದ್ಧಿ=ಪ್ರಯೋಜನ;
ನಮ್ಮೊಡನೆ ಫಲಸಿದ್ಧಿಯಿಲ್ಲ=ನನ್ನ ಮುಂದೆ ಹೇಳಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ;
ಕೇಳುತಿದ್ದಳು=ಬೀಮನು ಆಡಿದ ನುಡಿಗಳೆಲ್ಲವನ್ನೂ ದ್ರೌಪದಿಯು ಮನವಿಟ್ಟು ಆಲಿಸುತ್ತಿದ್ದಳು;
ಸೆರೆ=ನರ; ಗೋನಾಳಿ=ಗಂಟಲ ಮಣಿ; ಔಕು=ಅದುಮು/ಹಿಸುಕು;
ಕೊರಳ ಸೆರೆ ಗೋನಾಳಿಗೆ ಔಕಿತು=ಬೀಮನ ಮಾತುಗಳನ್ನು ಕೇಳುತ್ತ ದ್ರೌಪದಿಯ ಸಂಕಟ ಉಕ್ಕಿಬಂದು ಅವಳ ಕೊರಳಿನ ನರಗಳು ಬಿಗಿದುಕೊಂಡವು;
ಅಕಟ=ಅಯ್ಯೋ; ಬಿಕ್ಕು=ಸಂಕಟ ಹೆಚ್ಚಾದಾಗ ಕೊರಳು ಬಿಗಿದುಬಂದು ಗದ್ಗದಿಸುತ್ತ ಅಳುವುದು; ವಿಲೋಲ=ಹೊಯ್ದಾಟ/ನಡುಕ; ಲೋಚನ=ಕಣ್ಣು; ವಿಲೋಲಲೋಚನ=ಕಣ್ಣುಗುಡ್ಡೆಗಳು ಅತ್ತಿತ್ತ ಆಡುತ್ತಿರುವುದು; ಬಾಷ್ಪವಾರಿ=ಕಣ್ಣೀರು; ನೆನೆ=ಒದ್ದೆಯಾಗು/ತೊಯ್ದುಹೋಗು;
ಅಕಟ, ಬಿಕ್ಕಿ ಬಿಕ್ಕಿ ವಿಲೋಲಲೋಚನೆಯು ಬಾಷ್ಪವಾರಿಯಲಿ ನೆನೆದಳು=ಅಯ್ಯೋ… ಬಿಕ್ಕಿ ಬಿಕ್ಕಿ ಅಳುತ್ತಿರುವ ದ್ರೌಪದಿಯು ಕಣ್ಣೀರಿನಲ್ಲಿ ತೊಯ್ದುಹೋದಳು;
ಶೂಲ=ಚೂಪದ ಮೊನೆಯುಳ್ಳ ಒಂದು ಬಗೆಯ ಹತಾರ; ಮರು=ಮತ್ತೊಮ್ಮೆ; ಮೊನೆ=ಹರಿತವಾದದು; ಮರುಮೊನೆ=ಮತ್ತೆ ಸಾಣೆ ಹಿಡಿದು ಮೊನೆಯನ್ನು ಇನ್ನು ಚೆನ್ನಾಗಿ ಹರಿತಗೊಳಿಸುವುದು;
ಶೂಲ ಮರುಮೊನೆಗೊಂಡವೊಲು=ಶೂಲವನ್ನು ಮತ್ತೆ ಹರಿತಗೊಳಿಸಿದಂತೆ; ಇದೊಂದು ರೂಪಕ. ಶೂಲದ ಮೊನೆ ಹರಿತವಾದಂತೆಲ್ಲಾ ಅದರಿಂದ ಚುಚ್ಚಿಸಿಕೊಂಡವರು ಹೆಚ್ಚಿನ ನೋವಿಗೆ ಗುರಿಯಾಗಿ ನರಳುತ್ತಾರೆ. ಅಂತೆಯೇ ಬೀಮನ ನುಡಿಗಳು ದ್ರೌಪದಿಯ ಮನಸ್ಸಿಗೆ ಶೂಲದ ಮೊನೆಯಂತೆ ಚುಚ್ಚಿದವು;
ಸುಳಿ+ಬಾಳೆ; ಸುಳಿ=ಆಗ ತಾನೆ ಮೂಡುತ್ತಿರುವ; ಸುಳಿವಾಳೆ=ಸುಳಿಯೊಡೆದ ಬಾಳೆ/ಎಳೆಯ ಬಾಳೆ; ಝಳ=ಬೆಂಕಿಯ ಉರಿ;
ಸುಳಿವಾಳೆ ಝಳ ತಾಗಿದವೊಲು=ಇದೊಂದು ರೂಪಕ. ಕೋಮಲವಾದ ಎಳೆಯ ಬಾಳೆಗಿಡಕ್ಕೆ ಬೆಂಕಿಯ ಉರಿಯು ಹೊಡೆದು ಬಾಡಿಹೋದಂತೆ ಬೀಮನ ಮಾತುಗಳನ್ನು ಕೇಳಿ ದ್ರೌಪದಿಯ ಮಯ್ ಮನವೆಲ್ಲವೂ ಸಂಕಟದ ತಾಪಕ್ಕೆ ಗುರಿಯಾಗಿ ಬೇಯತೊಡಗಿತು;
ಉದರ=ಹೊಟ್ಟೆ; ಜ್ವಾಲೆ=ಉರಿ/ಬೆಂಕಿ; ಉದರಜ್ವಾಲೆ=ಇದೊಂದು ನುಡಿಗಟ್ಟು. ಹೊಟ್ಟೆಯ ಸಂಕಟ ಅಂದರೆ ಮಯ್ ಮನವನ್ನು ಸುಡುತ್ತಿರುವ ಸಂಕಟದ ಬೆಂಕಿ; ನೆತ್ತಿ=ನಡು ತಲೆ; ನಿಲುಕು=ಮುಟ್ಟು/ತಾಗು;
ಉದರ ಜ್ವಾಲೆ ನೆತ್ತಿಗೆ ನಿಲುಕೆ=ದ್ರೌಪದಿಯ ಹೊಟ್ಟೆಯ ಸಂಕಟವು ನೆತ್ತಿಗೆ ಹತ್ತಲು. ಅಂದರೆ ದ್ರೌಪದಿಯ ಮಯ್ ಮನವೆಲ್ಲವೂ ತೀವ್ರತರವಾದ ಸಂಕಟಕ್ಕೆ ಗುರಿಯಾಗಲು;
ಬಿಸುಸುಯ್=ನಿಟ್ಟುಸಿರನ್ನು ಬಿಡು; ಹಲುಬು=ಗೋಳಾಡು/ಪ್ರಲಾಪಿಸು;
ಅಬಲೆ ಬಿಸುಸುಯ್ದು ಹಲುಬಿದಳು=ದ್ರೌಪದಿಯು ನಿಟ್ಟುಸಿರನ್ನು ಬಿಡುತ್ತ ಗೋಳಾಡತೊಡಗಿದಳು;
ಕೆಂದಳ=ಕೆಂಪಾದ ಕಯ್; ಸೆಕೆ=ಕಾವು/ಶಾಖ; ಕಪೋಲ=ಕೆನ್ನೆ; ಕಂದು=ಕಳೆಗುಂದು/ಕಪ್ಪಾಗು; ಕಸರಿಕೆ+ಆಯ್ತು; ಕಸರಿಕೆ=ಸೊರಗುವಿಕೆ/ಬಾಡುವಿಕೆ;
ಕೆಂದಳದ ಸೆಕೆಯಲಿ ಕಪೋಲವು ಕಂದಿ ಕಸರಿಕೆಯಾಯ್ತು=ದ್ರೌಪದಿಯ ದೇಹವೆಲ್ಲವೂ ಸಂಕಟದ ತಾಪದಿಂದ ಬೇಯುತ್ತಿದ್ದುದರಿಂದ ಅವಳ ಅಂಗಯ್ ಬಿಸಿಯಾಗಿತ್ತು. ದ್ರೌಪದಿಯು ತನ್ನ ಅಂಗಯ್ ಮೇಲೆ ಕೆನ್ನೆಯನ್ನಿಟ್ಟುಕೊಂಡು ಸಂಕಟಪಡುತ್ತಿದ್ದಾಗ, ಆಕೆಯ ಕೆಂಪಾದ ಕೆನ್ನೆಯು ಕಳೆಗುಂದಿ ಸೊರಗಿಹೋಯಿತು;
ನಿಡುಸುಯಿಲು+ಇಂದ; ನಿಡಿದು+ಸುಯಿಲು; ನಿಡಿದು=ಉದ್ದನೆಯ; ಸುಯಿಲು=ಉಸಿರು; ನಿಡುಸುಯಿಲು=ನಿಟ್ಟುಸಿರು; ಏಕಾವಳಿ=ಒಂದೆಳೆಯ ಸರ; ಸೀಕರಿ=ಸೀಕಲು/ಕರಿಕು/ಸುಟ್ಟಿ ಕಪ್ಪಾದುದು;
ನಿಡುಸುಯಿಲಿಂದ ಏಕಾವಳಿಯ ಮುತ್ತುಗಳು ಸೀಕರಿಯೋದವು=ನಿಟ್ಟುಸಿರಿನ ತಾಪದಿಂದ ದ್ರೌಪದಿಯು ಕೊರಳಲ್ಲಿ ತೊಟ್ಟಿದ್ದ ಒಂದೆಳೆಯ ಸರದ ಮುತ್ತುಗಳು ನಿಟ್ಟುಸಿರಿನ ತಾಪದಿಂದ ಕಪ್ಪಾದವು;
ಸಂದಣಿಸು=ತುಂಬಿಬರು/ಒಟ್ಟಾಗು; ಎವೆ=ಕಣ್ಣಿನ ರೆಪ್ಪೆ; ಬಾಷ್ಪ=ನೀರು; ಬಿಂದು=ಹನಿ; ತಳಿ=ಚೆಲ್ಲು/ಉದುರಿಸು;
ಸಂದಣಿಸಿದ ಎವೆಗಳಲಿ ಬಾಷ್ಪದ ಬಿಂದು ತಳಿತುದು=ತುಂಬಿಬಂದ ರೆಪ್ಪೆಗಳಲ್ಲಿ ಕಣ್ಣೀರು ತುಂಬಿಬಂದು ಹನಿಹನಿಯಾಗಿ ಉದುರತೊಡಗಿತು;
ನಟ್ಟ=ನೆಲೆ ನಿಂತ; ದೃಷ್ಟಿ=ನೋಟ; ನಟ್ಟದೃಷ್ಟಿ=ಒಂದೇ ಕಡೆ ನೋಡುವುದು; ಇಂದು=ಚಂದ್ರ; ಇಂದುಮುಖಿ=ಚಂದ್ರನಂತೆ ಮೊಗವುಳ್ಳವಳು/ಸುಂದರಿ; ಸೈಗರೆ=ಸತತವಾಗಿ ಸುರಿ; ಅಡಿಗಡಿಗೆ=ಪದೇ ಪದೇ; ಶಿರ=ತಲೆ; ತೂಗು=ಅಲ್ಲಾಡಿಸು;
ನಟ್ಟ ದೃಷ್ಟಿಯೊಳು ಇಂದುಮುಖಿ ಸೈಗರೆದು ಅಡಿಗಡಿಗೆ ಶಿರವ ತೂಗಿದಳು=ದ್ರೌಪದಿಯು ಕಟುವಾಗಿ ಮಾತನಾಡಿದ ಬೀಮನನ್ನೇ ನೆಟ್ಟನೆಯ ನೋಟದಿಂದ ನೋಡುತ್ತ… ಕಣ್ಣೀರು ಕರೆಯುತ್ತ… ಸಂಕಟದ ತೀವ್ರತೆಯನ್ನು ತಾಳಲಾರದೆ ಪದೇಪದೇ ತಲೆಯನ್ನು ಅತ್ತಿತ್ತ ಆಡಿಸುತ್ತಿದ್ದಳು;
ಆವ=ಯಾವ; ಅಳಲು=ಶೋಕ/ಸಂಕಟ;
ಆವ ಹೆಂಗುಸನು ಅಳಲಿಸಿದೆನು=ಯಾವ ಹೆಂಗಸಿಗೆ ಕೇಡನ್ನು ಬಗೆದು ಆಕೆಯ ಸಂಕಟಕ್ಕೆ ಕಾರಣಳಾಗಿದ್ದೆನೊ;
ಅಳಿ=ಕೆಡಿಸು/ಹಾಳುಮಾಡು;
ಇನ್ನಾವ ಧರ್ಮವನು ಅಳಿದೆನೋ=ಯಾವ ದರ್‍ಮವನ್ನು ನಾಶಪಡಿಸಿದ್ದೆನೋ;
ಪಾಪದ ಫಲ=ಕೆಟ್ಟದ್ದನ್ನು ಮಾಡಿದ್ದರ ಕಾರಣಕ್ಕಾಗಿ ಅನುಭವಿಸುವ ಸಾವು ನೋವು; ಸಂಚಕಾರ=ಕೇಡು/ಹಾನಿ; ಸಂಚಕಾರ ತರು=ಹಾನಿಯನ್ನುಂಟುಮಾಡು; ಸಂಚಕಾರ ಬರು=ಕೇಡುಂಟಾಗು/ಹಾನಿಯುಂಟಾಗು;
ತಾನು ಆವ ಪಾಪದ ಫಲಕೆ ಸಂಚಕಾರವನು ಪಿಡಿದೆನೊ=ತಾನು ಮಾಡಿದ ಯಾವ ಪಾಪದ ಪಲಕ್ಕಾಗಿ ಇಂತಹ ಮಾನಹಾನಿಗೆ ಗುರಿಯಾದೆನೋ;
ಎನ್ನವೊಲು=ನನ್ನಂತೆ; ನವೆ=ಕೊರಗು/ನರಳು;
ಎನ್ನವೊಲು ಆವ ಹೆಂಗಸು ನವೆದಳು=ನನ್ನ ರೀತಿಯಲ್ಲಿ ಯಾವ ಹೆಂಗಸು ತಾನೆ ಕೊರಗಿದ್ದಾಳೆ;
ಆವಳ ಅಳಲಿದು=ಯಾವ ಹೆಂಗಸಿನ ಸಂಕಟ ನನಗೆ ತಟ್ಟಿದೆಯೋ;
ಎನ್ನ+ಅಂದದ; ಎನ್ನ=ನನ್ನ; ಅಂದ=ರೀತಿ;
ಲೋಕದಲಿ ಯಾವಳು ಎನ್ನಂದದ ಮಗಳ ಪಡೆದವಳು=ಲೋಕದಲ್ಲಿ ಯಾವ ತಾಯಿ ತಾನೆ ನನ್ನಂತಹ ಹತಬಾಗ್ಯೆಯಾದ ಮಗಳನ್ನು ಪಡೆದಿದ್ದಾಳೆ;
ಎನುತ ತಾ ಮರುಗಿದಳು=ಎಂದು ನುಡಿಯುತ್ತ ದ್ರೌಪದಿಯು ಕೊರಗಿದಳು;
ಭುವನದ+ಒಳು; ಭುವನ=ಜಗತ್ತು/ಪ್ರಪಂಚ; ಒಳು=ಅಲ್ಲಿ; ಭಂಗಿತ=ಅಪಮಾನಗೊಂಡ ವ್ಯಕ್ತಿ;
ಭುವನದೊಳು ನಾರಿಯರು ಎನ್ನವೊಲು ಭಂಗಿತರು ಇನ್ನು ಹುಟ್ಟದೆ ಇರಲಿ=ನನ್ನಂತೆ ಅಪಮಾನಕ್ಕೆ ಬಲಿಯಾದ ಹೆಂಗಸರು ಇನ್ನು ಮುಂದೆ ಈ ಜಗತ್ತಿನಲ್ಲಿ ಹುಟ್ಟದೆ ಇರಲಿ;
ಗಂಡ=ಪತಿ/ಶೂರ; ಸನ್ನಿಭ=ಸಮಾನವಾದ;
ಗಂಡರು ಭೀಮ ಸನ್ನಿಭರು ಇನ್ನು ಜನಿಸಲು ಬೇಡ=ಬೀಮನಂತಹ ಗಂಡ ಈ ಜಗತ್ತಿನಲ್ಲಿ ಹುಟ್ಟವುದು ಬೇಡ. ಹೆಂಡತಿಯ ಮಾನಪ್ರಾಣವನ್ನು ಕಾಪಾಡದ ಬೀಮನಂತಹ ಗಂಡ ಬೇಡ;
ಮುನ್ನಿನವರ+ಒಳಗೆ; ಮುನ್ನಿನವರು=ಈ ಮೊದಲು ಹುಟ್ಟಿದವರು; ಸಂಪನ್ನ=ಪಡೆದ/ಗಳಿಸಿದ; ದುಃಖಿಗಳು+ಆರು; ನವೆ=ಕೊರಗು/ಸಂಕಟಪಡು;
ಮುನ್ನಿನವರೊಳಗೆ ಎನ್ನವೊಲು ಪಾಂಡವರವೊಲು ಸಂಪನ್ನ ದುಃಖಿಗಳಾರು ನವೆದರು=ಜಗತ್ತಿನಲ್ಲಿ ಈ ಮೊದಲು ಹುಟ್ಟಿಬಂದ ವ್ಯಕ್ತಿಗಳಲ್ಲಿ ನನ್ನ ಹಾಗೆ… ಪಾಂಡವರ ಹಾಗೆ ಸಂಕಟವನ್ನು ಹೊಂದಿ ಕೊರಗಿದವರು ಯಾರಿದ್ದಾರೆ;
ಎಂದು ದ್ರೌಪದಿ ಹಿರಿದು ಹಲುಬಿದಳು=ಎಂದು ದ್ರೌಪದಿಯು ಬಹಳವಾಗಿ ಗೋಳಾಡಿದಳು;
ಗರಳ=ನಂಜು/ವಿಶ;
ಆವ ಗರಳವ ಕುಡಿವೆನೋ=ಯಾವ ಬಗೆಯ ನಂಜನ್ನು ಕುಡಿದು ಸಾವನ್ನಪ್ಪಲಿ;
ಮೇಣ್=ಇಲ್ಲವೇ; ಅಡರು=ಮೇಲಕ್ಕೆ ಹತ್ತು/ಏರು;
ಮೇಣ್ ಆವ ಬೆಟ್ಟವನು ಅಡರಿ ಬೀಳ್ವೆನೊ=ಇಲ್ಲವೇ ಯಾವ ಬೆಟ್ಟದ ತುದಿಯನ್ನೇರಿ ಆಳವಾದ ಪ್ರಪಾತಕ್ಕೆ ಬಿದ್ದು ಸಾಯಲಿ;
ಹಾಸರೆ=ಅಗಲವಾದ ಕಲ್ಲು/ಹಾಸುಬಂಡೆ; ಮಡು=ಹೊಳೆ ನದಿಗಳಲ್ಲಿ ಆಳವಾದ ನೀರಿನ ಜಾಗ; ಹೊಗು=ಒಳಸೇರು/ಪ್ರವೇಶಿಸು;
ಹಾಸರೆಯ ಗುಂಪಿನಲಿ ಯಾವ ಮಡುವನು ಹೊಗುವೆನೋ=ಹಾಸುಬಂಡೆಗಳ ಎಡೆಯಲ್ಲಿ ತುಂಬಿ ಹರಿಯುತ್ತಿರುವ ನದಿಯ ಯಾವ ಮಡುವಿನಲ್ಲಿ ಮುಳುಗಿ ಸಾವನ್ನಪ್ಪಲಿ;
ಕುಂತ=ಈಟಿ/ಮೊನೆಯುಳ್ಳ ಹತಾರ; ಹಾಯ್=ಮೇಲೆ ಬೀಳು;
ಆವ ಕುಂತವ ಹಾಯ್ವೆನೋ=ಹರಿತವಾದ ಮೊನೆಯುಳ್ಳ ಯಾವ ಈಟಿಯ ಮೇಲೆ ಬಿದ್ದು ಸಾಯಲಿ;
ಮೇಣ್=ಇಲ್ಲವೇ; ಪಾವಕನ+ಒಳಗೆ; ಪಾವಕ=ಬೆಂಕಿ; ಹೊಗು=ಪ್ರವೇಶಿಸು/ಒಳನುಗ್ಗು;
ಆವ ಪಾವಕನೊಳಗೆ ಹೊಗುವೆನೋ=ಯಾವ ಬೆಂಕಿಯ ಕೊಂಡದೊಳಕ್ಕೆ ದುಮುಕಿ ಸುಟ್ಟುಕರಕಲಾಗಲಿ;
ಸಮನಿಸು=ಒದಗು;
ಎನಗೆ ಸಾವು ಸಮನಿಸದೆ=ನನಗೆ ಸಾವು ಬರಬಾರದೆ;
ಮಂದಿ=ಗುಂಪು; ಎಳೆ=ತನ್ನ ಕಡೆಗೆ ಸೆಳೆದುಕೊಳ್ಳುವುದು;
ಅಂದು ಪಾಪಿ ಕೌರವನು ಮಂದಿಗೆ ಎಳೆದನು=ಅಂದು ಪಾಪಿಯಾದ ದುರ್‍ಯೋದನನು ತನ್ನ ತಮ್ಮನಾದ ದುಶ್ಶಾಸನನಿಂದ ಸಬಾಸದರಿಂದ ತುಂಬಿದ್ದ ಒಡ್ಡೋಲಗಕ್ಕೆ ನನ್ನನ್ನು ಎಳೆದು ತರಿಸಿ ಎಲ್ಲರ ಮುಂದೆ ಅಪಮಾನಿಸಿದನು;
ಬಳಿಕ=ಅನಂತರ; ಅರಣ್ಯವಾಸದೊಳು=ಜೂಜಾಟದ ನಿಯಮದಂತೆ ನಾವೆಲ್ಲ ಹನ್ನೆರಡು ವರುಶಗಳ ಕಾಲ ಕಾಡಿನಲ್ಲಿ ವನವಾಸದಲ್ಲಿದ್ದಾಗ; ಸೈಂಧವ=ದುರ್‍ಯೋದನನ ತಂಗಿ ದುಶ್ಶಲೆಯ ಗಂಡ; ಮುಂದಿನ+ತಲೆ+ಪಿಡಿದು; ಮುಂದಲೆ=ತಲೆಯ ಮೇಲುಗಡೆ ಮುಂದಿನ ಜಾಗದಲ್ಲಿರುವ ತಲೆಕೂದಲು; ಪಿಡಿದು=ಹಿಡಿದು; ಒಯ್=ಹೊತ್ತುಕೊಂಡು ಹೋಗು/ಸಾಗಿಸು;
ಬಳಿಕ ಅರಣ್ಯವಾಸದೊಳು ಸೈಂಧವ ಬಂದು ಮುಂದಲೆವಿಡಿದು ಎನ್ನನು ಎಳೆದು ಒಯ್ದ=ವನವಾಸದಲ್ಲಿದ್ದಾಗ ಪಾಂಡವರಿಲ್ಲದ ಸಮಯವನ್ನು ಕಾದು ನೋಡಿ, ಒಬ್ಬಂಟಿಯಾಗಿದ್ದ ನನ್ನ ಮುಂದಲೆ ಹಿಡಿದು ನನ್ನನ್ನು ತೇರಿನೊಳಕ್ಕೆ ಹಾಕಿಕೊಂಡು ಅಪಹರಿಸಲು ಯತ್ನಿಸಿದ;
ಇಂದು ಕೀಚಕ ನಾಯ ಕಾಲಲಿ ನಾನು ನೊಂದೆ=ಇಂದು ನೀಚ ಕೀಚಕನ ಕಾಲಿನ ಒದೆತದಿಂದ ಕಡುನೊಂದೆನು;
ಈ ಮೂರು ಬಾರಿಯೆ ಬಂದ ಭಂಗವೆ ಸಾಕು=ಈ ರೀತಿ ಮೂರು ಬಾರಿ ಅಪಮಾನಕ್ಕೆ ಗುರಿಯಾಗಿ ನೊಂದಿರುವುದೇ ಸಾಕು. ಇನ್ನು ಮುಂದೆಯೂ ಹೀಗೆಯೇ ಅಪಮಾನಕ್ಕೆ ಗುರಿಯಾಗುವುದರ ಬದಲು ಸಾಯುವುದೇ ಈಗ ನನ್ನ ಪಾಲಿಗೆ ಉಳಿದಿರುವ ಒಂದೇ ದಾರಿ;
ನಳಿನ+ಅಕ್ಷಿ; ನಳಿನ=ತಾವರೆ ಹೂವು; ಅಕ್ಷಿ=ಕಣ್ಣು; ನಳಿನಾಕ್ಷಿ=ತಾವರೆಯ ಕಣ್ಣಿನವಳು/ಸುಂದರರಿ;
ಎನುತ ನಳಿನಾಕ್ಷಿ ಮರುಗಿದಳು=ಎಂದು ನುಡಿಯುತ್ತ ದ್ರೌಪದಿಯು ಮರುಗಿದಳು;
ಜನನ=ಹುಟ್ಟು; ಪಾಂಚಾಲ=ಒಂದು ರಾಜ್ಯದ ಹೆಸರು; ರಾಯ=ರಾಜ; ಪಾಂಚಾಲ ರಾಯ=ಪಾಂಚಾಲ ದೇಶದ ರಾಜನಾದ ದ್ರುಪದ. ಈತನ ಮಗಳು ದ್ರೌಪದಿ;
ಜನನವೇ ಪಾಂಚಾಲ ರಾಯನ ಮನೆ=ನಾನು ಹುಟ್ಟಿದ್ದು ಪಾಂಚಾಲ ರಾಜನ ಮನೆಯಲ್ಲಿ;
ವಲ್ಲಭ=ಗಂಡ; ಮನೋವಲ್ಲಭರು=ಮನಮೆಚ್ಚಿದ ಗಂಡಂದಿರು; ಎನೆ=ಎನ್ನಲು/ಎಂದು ನೋಡಿದರೆ; ಮನುಜ=ಮಾನವ; ಮನುಜಗಿನುಜ=ಕೋಪ, ತಿರಸ್ಕಾರ, ಹಾಸ್ಯ, ಸಂಕಟದ ಒಳಮಿಡಿತಗಳನ್ನು ಹೊರಹಾಕುವಾಗ ಈ ರೀತಿ ಮೊದಲ ಪದದ ಮುಂದೆ ಗಕಾರವನ್ನು ಸೇರಿಸಿ ನುಡಿಯಲಾಗುತ್ತದೆ; ಗಣ್ಯ=ಮಾನ್ಯ; ಗೀರ್ವಾಣ=ದೇವತೆ; ಮಿಗಿಲು=ಹೆಚ್ಚು;
ಮನೋವಲ್ಲಭರು ಅದು ಆರು ಎನೆ ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು=ನನ್ನ ಮೆಚ್ಚಿನ ಗಂಡಂದಿರು ಯಾರೆಂದರೆ ಅವರು ಸಾಮಾನ್ಯ ಮಾನವರಲ್ಲ. ಸುರಲೋಕದ ದೇವತೆಗಳಿಗಿಂತಲೂ ಮಿಗಿಲಾದವರು;
ಎನಗೆ=ನನಗೆ; ಎಡರು=ವಿಪತ್ತು/ಆತಂಕ/ಕಶ್ಟ; ವನಿತೆ=ಹೆಂಗಸು; ವಿರಾಟನ ವನಿತೆಯರು=ವಿರಾಟರಾಜ ಮನೆತನದ ಹೆಂಗಸರು; ಮುಡಿ=ತಲೆಕೂದಲು; ಮುಡಿ ಕಟ್ಟು=ತಲೆಗೂದಲನ್ನು ಬಾಚಿ ಜಡೆಯನ್ನು ಹಾಕುವುದು; ತನು=ದೇಹ/ಮಯ್; ತಿಗುರು=ಮುಕ ಮತ್ತು ದೇಹಕ್ಕೆ ಬಳಿದುಕೊಳ್ಳುವ ಪರಿಮಳಯುಕ್ತವಾದ ವಸ್ತುಗಳು; ತನು ತಿಗುರು=ಸುಗಂಧ ದ್ರವ್ಯವನ್ನು ಲೇಪಿಸುವುದು. ಅರಿಸಿಣ, ಅರೆದ ಗಂದದ ಹಸಿ ಮುಂತಾದ ಮಂಗಳ ಹಾಗೂ ಸುವಾಸನೆಯ ವಸ್ತುಗಳನ್ನು ದೇಹಕ್ಕೆ ಲೇಪಿಸಿವುದು; ಕಾಲು ಒತ್ತು=ಕಾಲನ್ನು ಹಿಸುಕುವುದು; ಉತ್ಸಾಹ=ಹುರುಪು/ಆಸಕ್ತಿ;
ಎನಗೆ ಬಂದ ಎಡರು ಈ ವಿರಾಟನ ವನಿತೆಯರುಗಳ ಮುಡಿಯ ಕಟ್ಟುವ, ತನುವ ತಿರುಗುವ, ಕಾಲನು ಒತ್ತುವ ಕೆಲಸದ ಉತ್ಸಾಹ=ನನಗೆ ಬಂದ ಕಶ್ಟ ಎಂತಹುದೆಂದರೆ ಈ ವಿರಾಟರಾಯನ ರಾಜಮನೆತನದ ಹೆಂಗಸರ ಮುಡಿಯನ್ನು ಕಟ್ಟುವ, ಅವರ ಶರೀರಕ್ಕೆ ಸುಗಂದ ದ್ರವ್ಯಗಳನ್ನು ಲೇಪಿಸುವ, ಅವರ ಕಾಲನ್ನು ಒತ್ತುವ ಕೆಲಸದಲ್ಲಿ ತೊಡಗುವುದು;
ಹಗೆ=ಶತ್ರು; ಹಗೆಗಳಿಗೆ ತಂಪಾಗಿ ಬದುಕುವುದು=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಒಬ್ಬ ವ್ಯಕ್ತಿಗೆ ಬಂದ ಸಾವುನೋವನ್ನು ಕಂಡು ಆತನ/ಆಕೆಯ ಹಗೆಗಳು ಆನಂದಗೊಳ್ಳುವುದು; ಮುಗುದ=ಏನು ತಿಳಿಯದವನು/ಸರಳವಾದ ನಡೆನುಡಿಯುಳ್ಳವನು;
ಹಗೆಗಳಿಗೆ ತಂಪಾಗಿ ಬದುಕುವ ಮುಗುದರು ಇನ್ನು ಆರುಂಟು=ಹಗೆಗಳಿಗೆ ಆನಂದವುಂಟಾಗುವ ಬಗೆಯಲ್ಲಿ ರಾಣಿವಾಸದ ದಾಸಿಯಾಗಿ ದುಡಿಯುತ್ತಿರುವ ನನ್ನಂತಹವರು ಈ ಜಗತ್ತಿನಲ್ಲಿ ಇನ್ನು ಯಾರಿದ್ದಾರೆ;
ಭಂಗ=ಅಪಮಾನ; ಹೆಗಲು ಕೊಡು=ಸಹಾಯ ಮಾಡು/ನೆರವು ನೀಡು; ಆನು=ಹಿಡಿ/ವಹಿಸು/ಕಯ್ಗೊಳ್ಳು; ವಿರೋಧಿ=ಶತ್ರು/ಹಗೆ;
ಭಂಗಕೆ ಹೆಗಲ ಕೊಟ್ಟು ಆನುವ ವಿರೋಧಿಗಳು ಲೋಕದಲಿ ಉಂಟೆ=ನನಗೆ ಈಗ ಆಗುತ್ತಿರುವ ಅಪಮಾನಕ್ಕೆ ಒತ್ತಾಸೆಯಾಗಿ ನಿಲ್ಲುವ ಹಗೆಗಳು ಪಾಂಡವರಾದ ನೀವಲ್ಲದೆ ಇನ್ನು ಯಾರಿದ್ದಾರೆ. ಹೆಂಡತಿಯು ಆಪತ್ತಿನಲ್ಲಿ ಸಿಲುಕಿದ್ದರು ಸುಮ್ಮನಿರುವ ಗಂಡಂದಿರಾದ ನೀವು ನನ್ನ ಪಾಲಿಗೆ ಹಗೆಗಳಾಗಿದ್ದೀರಿ;
ವಿಗಡ=ವೀರ/ಪರಾಕ್ರಮ/ಶೂರ; ಬಿರುದು=ಪ್ರಶಸ್ತಿ; ಬಿಸುಟು=ತ್ಯಜಿಸಿ; ಹೋರಿ=ಗಂಡು ದನ; ಬಡಿಹೋರಿ=ಬೀಜ ಒಡೆದ ಹೋರಿ. ಗಂಡು ದನದ ಬೀಜ ಒಡೆಯುವುದನ್ನು ‘ಹಿಡ ಒಡೆಯುವುದು’ ಎನ್ನುತ್ತಾರೆ. ಬೀಜ ಒಡೆದ ಹೋರಿಯನ್ನು ಕೂಡುವುದರಿಂದ ಹಸುವು ಗರ್‍ಬವನ್ನು ತಳೆಯುವುದಿಲ್ಲ. ಬಡಿಹೋರಿ ಎಂಬ ಪದವು ಒಂದು ಬಯ್ಗುಳವಾಗಿ ಬಳಕೆಗೊಂಡಿದೆ. ಬಲಹೀನ/ದುರ್‍ಬಲ/ನಪುಂಸಕ ಎಂಬ ತಿರುಳನ್ನು ಹೊಂದಿದೆ; ಮೂಗುರ್ಚಿ=ಇದೊಂದು ನುಡಿಗಟ್ಟು. ಮೂಗುದಾರ ಹಾಕಿಸಿಕೊಂಡವನು ಎಂದರೆ ಮತ್ತೊಬ್ಬರ ಹತೋಟಿಗೆ ಒಳಗಾಗಿ ಅಡಿಯಾಳಾಗಿ ಬಾಳುವವನು;
ವಿಗಡ ಬಿರುದನು ಬಿಸುಟ ಬಡಿಹೋರಿಗಳು ಪಾಂಡವರಂತೆ ಮೂಗುರ್ಚಿಗಳು ಅದು ಇನ್ನು ಆರು ಉಂಟು=ಶೂರರೆಂಬ ಬಿರುದನ್ನು ಮರೆತು, ಬಡಿಹೋರಿಗಳಾದ ಪಾಂಡವರ ಹಾಗೆ ಇತರರಿಗೆ ಅಡಿಯಾಳುಗಳಾಗಿ ಬಾಳುತ್ತಿರುವವರು ಈ ಜಗತ್ತಿನಲ್ಲಿ ಇನ್ನು ಯಾರಾದರೂ ಇದ್ದಾರೆಯೇ;
ಕೆರಳು=ಉದ್ರಿಕ್ತವಾಗು/ಕೋಪಗೊಳ್ಳು; ಕಾಲ=ಸಾವಿನ ದೇವತೆಯಾದ ಯಮ; ಮುರಿ=ಹಿಮ್ಮೆಟ್ಟಿಸು/ಬಗ್ಗಿಸು/ಸೋಲಿಸು; ಎಚ್ಚಾಳುತನ=ವೀರತನ/ಪರಾಕ್ರಮ; ಎನ್ನನು+ಒಬ್ಬಳನು; ಆಳಲು+ಆರಿರಿ; ಆಳು=ಕಾಪಾಡು;
ಕೆರಳಿದೊಡೆ ಕಾಲನನು ಮುರಿವ ಎಚ್ಚಾಳುತನದವರು ಎನ್ನನೊಬ್ಬಳನು ಆಳಲಾರಿರಿ=ಕೋಪಗೊಂಡರೆ ಯಮನನ್ನೇ ಸೋಲಿಸುವ ಪರಾಕ್ರಮಶಾಲಿಗಳಾದ ನೀವು ನನ್ನೊಬ್ಬಳ ಮಾನಪ್ರಾಣವನ್ನು ಕಾಪಾಡಲಾರಿರಿ;
ಅಪಕೀರ್ತಿ=ಕೆಟ್ಟ ಹೆಸರು; ಅಳುಕು=ಹಿಂಜರಿ/ಹಿಂದೆಗೆ/ಹೆದರು;
ಪಾಪಿಗಳಿರ… ಅಪಕೀರ್ತಿಗೆ ಅಳುಕಿರಲ=ಪಾಪಿಗಳೇ, ಕಾಮಿ ಕೀಚಕನನ್ನು ಕೊಂದರೆ ಆಶ್ರಯವನ್ನು ಕೊಟ್ಟ ರಾಜಮನೆತನಕ್ಕೆ ಕೇಡನ್ನು ಬಗೆದರು ಎಂಬ ಕೆಟ್ಟ ಹೆಸರು ಬರುತ್ತದೆ ಎಂದು ಹಿಂಜರಿಯುತ್ತಿರುವಿರಾ;
ಹೊರೆ=ತೂಕ/ಬಾರ; ತೋಳ ಹೊರೆ=ಇದೊಂದು ನುಡಿಗಟ್ಟು. ದೊಡ್ಡ ದೊಡ್ಡ ತೋಳುಗಳನ್ನುಳ್ಳ ನೀವು ಅವನ್ನು ಸದುಪಯೋಗ ಮಾಡಿಕೊಳ್ಳದೆ ಹೇಡಿಗಳಾಗಿದ್ದೀರಿ. ಅವು ನಿಮಗೊಂದು ಹೊರೆಯಾಗಿವೆ;
ತೋಳ ಹೊರೆ ನಿಮಗೇಕೆ=ನಿಮಗೇಕೆ ಇಂತಹ ದೊಡ್ಡ ದೇಹ; ಕೆಲಸಗೇಡಿಯಾಗಿ ಇಲ್ಲವೇ ಸೋಂಬೇರಿಯಾಗಿ ಕಾಲಕಳೆಯುತ್ತಿರುವ ವ್ಯಕ್ತಿಯನ್ನು “ಭೂಮಿಗೆ ಭಾರವಾಗಿದ್ದೀಯಲ್ಲ” ಎಂದು ನಿಂದಿಸುವ ನುಡಿಗಟ್ಟು ಕನ್ನಡದಲ್ಲಿ ಬಳಕೆಯಲ್ಲಿದೆ;
ಭೂಮೀಪಾಲ=ರಾಜ; ಉದಿಸಲು+ಏತಕೆ;
ಭೂಮೀಪಾಲ ವಂಶದೊಳು ಉದಿಸಲೇತಕೆ=ನಾಡನ್ನಾಳುವ ರಾಜವಂಶದಲ್ಲೇಕೆ ಹುಟ್ಟಿದ್ದೀರಿ;
ಕೂಳು+ಕೇಡಿಂಗೆ; ಕೂಳು=ಅನ್ನ/ಆಹಾರ; ಕೇಡು=ನಾಶ; ಕೂಳುಗೇಡು=ಇದೊಂದು ನುಡಿಗಟ್ಟು. ತಿನ್ನುವ ಅನ್ನಕ್ಕೆ ತಕ್ಕಂತೆ ದುಡಿಮೆಯನ್ನು ಮಾಡದೆ ಆಲಸಿಯಾಗಿ ಬಾಳುತ್ತಿರುವ ವ್ಯಕ್ತಿಯು ಬದುಕಿದ್ದರೂ ಸತ್ತಂತೆಯೇ ಎಂಬ ತಿರುಳಿನಲ್ಲಿ ಬಳಕೆಗೊಂಡಿದೆ; ಒಡಲು=ದೇಹ; ಹೊರೆ=ಕಾಪಾಡು; ಒಡಲನ್ನು ಹೊರೆದುಕೊಳ್ಳುವುದು=ದೇಹವನ್ನು ಕಾಪಾಡಿಕೊಳ್ಳುವುದು; ಇಂದುಮುಖಿ=ಚಂದ್ರನಂತೆ ಮೊಗವನ್ನುಳ್ಳವಳು/ಸುಂದರಿ;
ಕೂಳುಗೇಡಿಂಗೆ ಒಡಲ ಹೊರೆವಿರಿ ಎಂದಳು ಇಂದುಮುಖಿ=ತಿನ್ನುವ ಅನ್ನಕ್ಕೆ ದಂಡವಾಗಿ ಒಡಲನ್ನು ಸಾಕುತ್ತಿರುವಿರಿ ಎಂದು ದ್ರೌಪದಿಯು ಬೀಮನ ಮುಂದೆ ತನ್ನ ಒಡಲಿನ ಆಕ್ರೋಶವನ್ನು ಕಾರಿದಳು;
ಕುರುಕುಲ+ಅಗ್ರಣಿ; ಅಗ್ರಣಿ=ಮುಂದಾಳು; ಕುರುಕುಲಾಗ್ರಣಿ=ದುರ್‍ಯೋದನ; ಹೊರವಡಿಸು=ತಳ್ಳಿ/ಅಟ್ಟಿ/ಹೊರಕ್ಕೆ ಹಾಕು; ಧರೆ=ಬೂಮಿ/ರಾಜ್ಯ; ಭಂಡಾರ=ಬೆಲೆ ಬಾಳುವ ಚಿನ್ನ ಬೆಳ್ಳಿ ವಜ್ರ ಒಡವೆ ಹಣವನ್ನು ಇಡುವ ಜಾಗ/ಬೊಕ್ಕಸ; ಪುರ=ಪಟ್ಟಣ/ಕೋಟೆ; ಕರಿ=ಆನೆ; ತುರಗ=ಕುದುರೆ; ಪಾಯದಳ=ಕಾಲಾಳುಗಳ ದಂಡು; ಸೆಳೆ=ಕೀಳು;
ಕುರುಕುಲಾಗ್ರಣಿ ನಿಮ್ಮ ಹೊರವಡಿಸಿ ಧರೆಯ ಭಂಡಾರವನು ಪುರವನು ಕರಿ ತುರಗ ರಥ ಪಾಯದಳವನು ಸೆಳೆದುಕೊಂಡನು=ಕುರುವಂಶದ ನೇತಾರನಾದ ದುರ್‍ಯೋದನನು ನಿಮ್ಮನ್ನು ಜೂಜಿನ ಬಲೆಗೆ ಬೀಳಿಸಿಕೊಂಡು ನಿಮ್ಮನ್ನು ಹಸ್ತಿನಾವತಿಯಿಂದ ಹೊರಹಾಕಿ, ರಾಜ್ಯದ ಬೊಕ್ಕಸವನ್ನು, ಹಸ್ತಿನಾವತಿಯನ್ನು, ಆನೆ, ಕುದುರೆ, ರತ ಮತ್ತು ಕಾಲುದಳದ ಸೇನೆಯನ್ನೆಲ್ಲಾ ವಶಮಾಡಿಕೊಂಡನು;
ದುರುಳ-ನೀಚ/ಕೇಡಿ;
ದುರುಳ ಕೀಚಕಗೆ ಎನ್ನ ಕೊಟ್ಟಿರಿ=ಕೇಡಿಯಾದ ಕೀಚಕನು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೀರಿ;
ಪರಿಮಿತ=ಎಲ್ಲೆಯನ್ನು ಹೊಂದಿದ/ಸೀಮಿತವಾದ; ಇರವು+ಆಯ್ತು; ಇರವು=ಜೀವನ/ಬಾಳು;
ನಿಮ್ಮೈವರಿಗೆ ಪರಿಮಿತದಲಿ ಇರವಾಯ್ತು=ಕೆಟ್ಟದ್ದನ್ನು ನಾಶಮಾಡದ, ಒಳ್ಳೆಯದನ್ನು ನೆಲೆಗೊಳಿಸದ ಸೀಮಿತವಾದ ಬದುಕು ನಿಮ್ಮದು;
ಅಕಟ=ಅಯ್ಯೋ; ಲೇಸು+ಆಯ್ತು; ಲೇಸು=ಒಳ್ಳೆಯದು; ಲೇಸಾಯ್ತು=ಈ ಪದ ವ್ಯಂಗ್ಯವನ್ನು ಸೂಚಿಸುತ್ತಿದೆ. ಒಳ್ಳೆಯದಾಯ್ತು ಎಂದರೆ “ಹೆಂಡತಿಯಾದ ನನ್ನ ಮಾನಪ್ರಾಣಕ್ಕೆ ಹಾನಿ ಬಂದರೂ ಚಿಂತೆಯಿಲ್ಲ, ಹೇಗೋ ನಿಮ್ಮ ಅಯ್ದು ಮಂದಿಯ ಮಾನಪ್ರಾಣಗಳಿಗೆ ಕೇಡು ಉಂಟಾಗಲಿಲ್ಲವಲ್ಲ. ಅದೇ ಒಳ್ಳೆಯದು” ; ಅಂಬುಜ+ಅಕ್ಷಿ; ಅಂಬುಜ=ತಾವರೆಯ ಹೂವು; ಅಕ್ಷಿ=ಕಣ್ಣು; ಅಂಬುಜಾಕ್ಷಿ=ತಾವರೆಯ ಹೂವಿನಂತಹ ಕಣ್ಣುಳ್ಳವಳು/ಸುಂದರಿ; ಹಲುಬು=ಸಂಕಟವನ್ನು ತೋಡಿಕೊಳ್ಳುವುದು/ಅಳು;
ಅಕಟ ಲೇಸಾಯ್ತು ಎಂದು ಅಂಬುಜಾಕ್ಷಿ ಹಲುಬಿದಳು=ಅಯ್ಯೋ… ನನಗೆ ಕೇಡಾದರೂ ನಿಮಗೆ ಒಳ್ಳೆಯದಾಯಿತಲ್ಲ…ಅಶ್ಟೇ ಸಾಕು ಎಂದು ಅಣಕದ ನುಡಿಯಿಂದ ಬೀಮನನ್ನು ಚುಚ್ಚುತ್ತ, ದ್ರೌಪದಿಯು ಅಳುತ್ತಿದ್ದಳು;
ಭಾವ=ಪಾಂಡವರಿಗೆ ದುರ್‍ಯೋದನನು ಸೋದರ ಸಂಬಂದಿಯಾದುದರಿಂದ, ದ್ರೌಪದಿಗೆ ಬಾವನಾಗಿದ್ದಾನೆ; ಭಾಗ್ಯ+ಅಧಿಕನು; ಅಧಿಕ=ಹೆಚ್ಚಿಗೆ/ದೊಡ್ಡ ಪ್ರಮಾಣ;
ಭಾವ ಕೌರವದೇವನು ಭಾಗ್ಯಾಧಿಕನು=ಬಾವನಾದ ದುರ್‍ಯೋದನನು ಮಹಾಬಾಗ್ಯಶಾಲಿ;
ಕೂರ್ಮೆ=ಪ್ರೀತಿ; ಧರ್ಮ=ಒಳ್ಳೆಯ ನಡೆನುಡಿ; ಪಾಲಿಸು=ಆಡಳಿತ ನಡೆಸು;
ಕೃಷ್ಣನ ಕೂರ್ಮೆ ಧರ್ಮದಿ ಅರಸುಗಳ ಒಡೆತನವನು ನೀವು ಪಾಲಿಸಿದಿರಿ=ಕ್ರಿಶ್ಣನ ಪ್ರೀತಿ ಮತ್ತು ಒಳ್ಳೆಯ ನಡೆನುಡಿಯ ಮಾರ್‍ಗದರ್‍ಶನದಿಂದ ರಾಜರ ಒಡೆತನದ ಆಡಳಿತವನ್ನು ನೀವು ನಡೆಸಿಕೊಂಡುಬಂದಿರಿ;
ತಟಮಟ+ಆಗಿ; ತಟಮಟ=ತೊಂದರೆ; ಲೋಗರ=ಲೋಕದಲ್ಲಿರುವ ಜನರ; ಸೇವೆ=ಚಾಕರಿ/ಊಳಿಗ; ಬೆಂದ+ಒಡಲು; ಒಡಲು=ಹೊಟ್ಟೆ/ದೇಹ; ಬೆಂದೊಡಲು=ಇದೊಂದು ನುಡಿಗಟ್ಟು. ಸಾಯುವ ತನಕ ಎಶ್ಟು ಸಾರಿ ಉಣಿಸು ತಿನಸುಗಳನ್ನು ಸೇವಿಸುತ್ತಿದ್ದರು, ಎಲ್ಲವನ್ನೂ ಜೀರ್ಣಿಸಿಕೊಳ್ಳುತ್ತ ಮತ್ತೆ ಮತ್ತೆ ಹಸಿವಿನ ಸಂಕಟಕ್ಕೆ ಒಳಗಾಗುವ ಮಾನವ ಶರೀರ;
ಈಗ ನೀವು ತಟಮಟವಾಗಿ ಲೋಗರ ಸೇವೆಯಲಿ ಬೆಂದೊಡಲ ಹೊರೆವಿರಿ=ಈಗ ಆಪತ್ತಿಗೆ ಒಳಗಾಗಿ ತಲೆಮರೆಸಿಕೊಂಡು ಮಾರುವೇಶದಲ್ಲಿ ಜನರ ಊಳಿಗದ ಆಳುಗಳಾಗಿ ಹೊಟ್ಟೆಹೊರೆದುಕೊಳ್ಳುತ್ತಿದ್ದೀರಿ;
ಅಂಜಲು+ಏಕೆ; ಅಂಜು=ಹೆದರು; ಒರಲು=ನರಳು/ಅರಚು;
ಸಾವವಳು ನಿಮಗೆ ಅಂಜಲೇಕೆ ಎಂದು ಅಬಲೆ ಒರಲಿದಳು=ನನಗೆ ಕೀಚಕನ ಹಲ್ಲೆಯಿಂದ ಪಾರಾಗಿ ಬದುಕಿ ಉಳಿಯುವ ಅವಕಾಶವೇ ಇಲ್ಲವಾಗಿದೆ. ನನ್ನನ್ನು ಕಾಪಾಡಲು ಮುಂದೆ ಬರದ ನಿಮಗೆ ಎದುರಾಡಲು ನಾನೇಕೆ ಹೆದರಬೇಕು ಎಂದು ದ್ರೌಪದಿಯು ತೀವ್ರವಾದ ಸಂಕಟದಿಂದ ನುಡಿದಳು;
ನೇಮ=ಅಪ್ಪಣೆ/ಅನುಮತಿ/ಒಪ್ಪಿಗೆ;
ಭೀಮ ತನಗೆ ಸಾವಿನ ನೇಮವನು ಕೊಟ್ಟೈ=ಭೀಮನೇ, ನೀನು ನನಗೆ ಸಾಯಲು ಒಪ್ಪಿಗೆಯನ್ನು ನೀಡಿರುವೆ;
ನಿಮ್ಮಣ್ಣನ+ಆಜ್ಞೆ; ಆಜ್ಞೆ=ಅಪ್ಪಣೆ; ವಿರಾಮ+ಆಗದೆ; ವಿರಾಮ=ಕೊನೆಗಾಣುವುದು/ಅಂತ್ಯ; ಮೈಸಿರಿ=ಸತ್ತ್ವ/ಗುಣ;
ನಿಮ್ಮಣ್ಣನಾಜ್ಞೆ ವಿರಾಮವಾಗದೆ ಧರ್ಮದ ಮೈಸಿರಿಯನು ಅರಿದು ಬದುಕಿ=ನಿಮ್ಮ ಅಣ್ಣನ ಅಪ್ಪಣೆಗೆ ಕುಂದುಬರದಂತೆ ದರ್‍ಮದ ಗುಣವನ್ನು ಅರಿತುಕೊಂಡು ಬಾಳಿರಿ;
ಕಲಿಭೀಮ ಕಂಬಿನಿ ತುಂಬಿದನು=ಕಂಗಾಲಾಗಿರುವ ದ್ರೌಪದಿಯನ್ನು ಕಂಡು ಶೂರನಾದ ಬೀಮನ ಕಣ್ಣುಗಳು ತುಂಬಿಬಂದವು;
ಅಂತಃಕರಣ=ಮನಸ್ಸು; ಕಡು=ಬಹಳ; ನೆನೆ=ಯೋಚನೆ ಮಾಡು/ಆಲೋಚಿಸು;
ಅಂತಃಕರಣ ಕಡು ನೆನೆದುದು=ದ್ರೌಪದಿಗೆ ಬಂದೊದಗಿರುವ ಆಪತ್ತನ್ನು ಕುರಿತು ಬೀಮನು ಬಹಳವಾಗಿ ಆಲೋಚಿಸತೊಡಗಿದನು;
ರೋಷ=ಸಿಟ್ಟು/ಕೋಪ; ಘನತೆ=ದಟ್ಟಣೆ;
ರೋಷದ ಘನತೆ ಹೆಚ್ಚಿತು=ಕೋಪದ ಆವೇಶ ಹೆಚ್ಚಾಯಿತು;
ಹಗೆ=ಶತ್ರು; ಹಿಂಡು=ಹಿಸುಕು/ನುಲಿಚು/ತಿರುಚು;
ಹಗೆಗಳನು ಮನದೊಳಗೆ ಹಿಂಡಿದನು=ದ್ರೌಪದಿಯ ಅಪಮಾನಕ್ಕೆ ಕಾರಣರಾದ ವಿರಾಟರಾಯನ ಕಡೆಯವರಾದ ರಾಣಿ ಸುದೇಶ್ಣೆ ಮತ್ತು ಕೀಚಕನನ್ನು ಮನಸ್ಸಿನಲ್ಲಿಯೇ ಸದೆಬಡಿದನು;
ತನು=ದೇಹ; ಪುಳಕ=ರೋಮಾಂಚನ/ಮಯ್ ನವಿರೇಳುವಿಕೆ; ಉಬ್ಬರಿಸು=ಹೆಚ್ಚಾಗು;
ತನುಪುಳಕ ಉಬ್ಬರಿಸಿ=ಹಗೆಗಳ ಬಗ್ಗೆ ಕೋಪೋದ್ರೇಕ ಮತ್ತು ದ್ರೌಪದಿಯ ಬಗ್ಗೆ ಪ್ರೀತಿಕರುಣೆಯ ಭಾವಗಳು ಒಡನೊಡನೆ ಮೂಡುತ್ತಿದ್ದಂತೆಯೇ ಭೀಮನ ಮಯ್ ಮನದಲ್ಲಿ ರೋಮಾಂಚನ ಹೆಚ್ಚಾಗಿ;
ವನಿತೆ=ಹೆಂಗಸು;
ಮೆಲ್ಲನೆ ವನಿತೆಯನು ತೆಗೆದು ಅಪ್ಪಿದನು=ಹಿತಕರವಾದ ರೀತಿಯಲ್ಲಿ ದ್ರೌಪದಿಯನ್ನು ಅಪ್ಪಿಕೊಂಡನು;
ಸೆರಗು=ಮೇಲುಹೊದಿಕೆ; ತೊಡೆ=ಒರಸು;
ಸೆರಗಿನಲಿ ಕಂಬನಿಯ ತೊಡೆದನು=ತನ್ನ ಹೆಗಲಿನಲ್ಲಿದ್ದ ಹೊದಿಕೆಯ ತುದಿಯಿಂದ ದ್ರೌಪದಿಯ ಕಣ್ಣೀರನ್ನು ಒರೆಸಿದನು;
ಮಾನಿನಿ=ಹೆಂಗಸು; ಕುರುಳು=ತಲೆಗೂದಲು; ನೇವರಿಸು=ಪ್ರೀತಿಯಿಂದ ಪಕ್ಕಕ್ಕೆ ಸರಿಸು;
ಮಾನಿನಿಯ ಕುರುಳ ನೇವರಿಸಿದನು=ದ್ರೌಪದಿಯ ತಲೆಗೂದಲನ್ನು ಒಲವಿನಿಂದ ಸವರಿದನು;
ಗಲ್ಲ=ತುಟಿಯ ಕೆಳಭಾಗ; ಮುಂಡಾಡು=ಮುತ್ತಿಡು/ಚುಂಬಿಸು;
ಗಲ್ಲವನು ಒರೆಸಿ ಮುಂಡಾಡಿದನು=ಕಣ್ಣೀರ ಹನಿಗಳ ಕರೆಯಿಂದ ಕೂಡಿದ್ದ ದ್ರೌಪದಿಯ ಗಲ್ಲವನ್ನು ಒರೆಸಿ ಮುತ್ತಿಟ್ಟನು;
ಹೊರೆ=ಹತ್ತಿರ; ಗಿಂಡಿ=ಕಿರಿದಾದ ಬಾಯುಳ್ಳ ಪಾತ್ರೆ; ಮುಖ+ಅಂಬುಜ; ಅಂಬುಜ=ತಾವರೆಯ ಹೂವು; ಮುಖಾಂಬುಜ=ತಾವರೆಯ ಹೂವಿನಂತಹ ಕೋಮಲವಾದ ಮೊಗ;
ಮಂಚದ ಹೊರೆಯ ಗಿಂಡಿಯ ನೀರಿನಲಿ ಮುಖಾಂಬುಜವ ತೊಳೆದನು=ಮಂಚದ ಹತ್ತಿರದಲ್ಲಿದ್ದ ಗಿಂಡಿಯ ನೀರಿನಿಂದ ದ್ರೌಪದಿಯ ಮೊಗವನ್ನು ತೊಳೆದನು;
ಅರಸಿ=ರಾಣಿ; ವಿಸ್ತರಿಸು=ದೊಡ್ಡದಾಗಿಸು/ಬೆಳೆಸು;
ಅರಸಿ, ವಿಸ್ತರಿಸಲೇಕೆ… ಹೋಗು=ರಾಣಿಯೇ, ಇನ್ನು ಹೆಚ್ಚಿನದೇನನ್ನೂ ಹೇಳಬೇಡ ನನಗೆಲ್ಲವೂ ತಿಳಿದಿದೆ… ಸುಮ್ಮನಿರು;
ಖಾತಿ=ಕೋಪ/ರೇಗುವಿಕೆ;
ಖಾತಿಯನು ಬಿಡು ಬಿಡು=ನನ್ನ ಮೇಲಿನ ಕೋಪವನ್ನು ಬಿಟ್ಟುಬಿಡು;
ಆಜ್ಞೆ=ಅಪ್ಪಣೆ; ಗೆರೆ=ಗೀಟು; ದಾಂಟು=ಹಾರು/ನೆಗೆ/ಮೀರು;
ಎಮ್ಮಣ್ಣನ ಆಜ್ಞೆಯ ಗೆರೆಯ ದಾಂಟಿದೆ ದಾಂಟಿದೆನು=ನಮ್ಮಣ್ಣನ ಆಜ್ನೆಯ ಗೆರೆಯನ್ನು ದಾಂಟಿದೆನು… ದಾಂಟಿದೆನು. ಯಾವುದೇ ಕಾರಣದಿಂದಲೂ ಇನ್ನು ಮುಂದೆ ನಮ್ಮಣ್ಣನ ಆಜ್ನೆಯನ್ನು ಲೆಕ್ಕಿಸದೆ ಮುನ್ನುಗ್ಗುತ್ತೇನೆ;
ನಸು=ಕೊಂಚ/ತುಸು/ಸ್ವಲ್ಪ; ಮಿಸುಕು=ಕದಲು/ಅಲ್ಲಾಡು; ಬಸುರು=ಹೊಟ್ಟೆ; ಬಗಿ=ಸೀಳು;
ನಸು ಮಿಸುಕಿದೊಡೆ ಕೀಚಕನ ಬಸುರ ಬಗಿವೆನು=ನಿನ್ನನ್ನು ಮತ್ತೆ ಕೆಣಕಲು ಕೀಚಕನು ಬಂದರೆ ಅವನ ಹೊಟ್ಟೆಯನ್ನು ಬಗಿಯುತ್ತೇನೆ;
ವೈರಾಟ=ವಿರಾಟರಾಜನ; ತೊಡೆ=ಅಳಿಸು/ನಾಶಮಾಡು;
ವೈರಾಟ ವಂಶದ ಹೆಸರ ತೊಡೆವೆನು=ವಿರಾಟರಾಜನ ವಂಶವನ್ನೇ ಬುಡಸಮೇತ ಕಿತ್ತುಹಾಕುತ್ತೇನೆ;
ಅರಿ=ತಿಳಿ; ವ್ರಜ=ಗುಂಪು/ಸಮೂಹ; ಕುಸುರಿ=ತುಂಡು/ಚೂರು; ತರಿ=ಕತ್ತರಿಸು; ಕುಸುರಿ ತರಿ=ಇದೊಂದು ನುಡಿಗಟ್ಟು. ಸಣ್ಣ ಸಣ್ಣದಾಗಿ ಕತ್ತರಿಸು/ತುಂಡುಮಾಡು;
ನಮ್ಮ ಅರಿದೊಡೆ ಕೌರವವ್ರಜವ ಕುಸುರಿ ತರಿವೆನು=ವಿರಾಟನಗರಿಯಲ್ಲಿ ಅಜ್ನಾತವಾಸದಲ್ಲಿರುವ ನಮ್ಮ ಬಗ್ಗೆ ದುರ್‍ಯೋದನಾದಿಗಳಿಗೆ ತಿಳಿದರೆ, ಕುರುಕುಲದ ಸಮೂಹವನ್ನು ಕಡಿದು ಕತ್ತರಿಸಿ ತುಂಡುತುಂಡು ಮಾಡುತ್ತೇನೆ;
ಕಷ್ಟ=ತೊಂದರೆ/ಸಂಕಟ; ಎಸಗು=ಮಾಡು; ಹಾಯ್=ತುಡಿ/ಮಿಡುಕು/ತವಕಿಸು/ತಳಮಳಿಸು; ಎಂದರ್+ಆದೊಡೆ; ಅಮರ+ಅದ್ರಿಯಲಿ; ಸಂತತಿ=ವಂಶ/ಗುಂಪು; ಮುಸುಡು=ಮೊಗ; ಅಮರ=ದೇವತೆ; ಅದ್ರಿ=ಬೆಟ್ಟ/ಪರ್ವತ; ಅಮರಾದ್ರಿ=ದೇವತೆಗಳು ನೆಲೆಸಿರುವ ಮೇರು ಪರ್ವತ; ತೇಯ್=ಉಜ್ಜು;
ಭೀಮ ಕಷ್ಟವನು ಎಸಗಿದನು ಹಾಯ್ ಎಂದರಾದೊಡೆ ದೇವಸಂತತಿಯ ಮುಸುಡನು ಅಮರಾದ್ರಿಯಲಿ ತೇವೆನು=ಬೀಮನು ಕೊಲೆಗೆಲಸಕ್ಕೆ ಮುಂದಾಗಿದ್ದಾನೆ ಎಂದು ದೇವತೆಗಳು ತಳಮಳಿಸಿದರೆ, ಅಮರಾದ್ರಿಯಲ್ಲಿರುವ ಕೋಡುಗಲ್ಲಿನ ಮೇಲೆ ದೇವತೆಗಳ ಮುಸುಡಿಯನ್ನು ಉಜ್ಜುತ್ತೇನೆ. ಅಂದರೆ ಅವರೆಲ್ಲರನ್ನೂ ಸದೆಬಡಿಯುತ್ತೇನೆ;
ಮುನಿದನ್+ಆದೊಡೆ; ಮುನಿ=ಸಿಟ್ಟಾಗು/ಕೋಪಗೊಳ್ಳು; ಹರಿ=ಕಡಿ/ಕತ್ತರಿಸು;
ಮುನಿದನಾದೊಡೆ ಅಣ್ಣತನ ಇಂದಿನಲಿ ಹರಿಯಲಿ=ದರ್‍ಮರಾಯನು ತನ್ನ ಆಜ್ನೆಯನ್ನು ಮೀರಿದ್ದಕ್ಕಾಗಿ ಕೋಪಿಸಿಕೊಂಡರೆ, ಇಂದಿನಿಂದ ಅವನು ನನಗೆ ಅಣ್ಣನಲ್ಲ, ನಾನು ಅವನಿಗೆ ತಮ್ಮನಲ್ಲ. ನಮ್ಮಿಬ್ಬರ ಅಣ್ಣ-ತಮ್ಮನೆಂಬ ನಂಟು ಇಂದಿಗೆ ಕಿತ್ತುಹೋಗಲಿ;
ಕನಲು=ಸಿಟ್ಟು/ಕೋಪ; ಕೈದೋರು=ತೋಳ್ಬಲವನ್ನು ತೋರಿಸು;
ಪಾರ್ಥ ಸಹದೇವ ನಕುಲರು ಕನಲಿದೊಡೆ ಕೈದೋರುವೆನು=ಅರ್‍ಜುನ ಸಹದೇವ ನಕಲರು ನನ್ನ ಬಗ್ಗೆ ಕೋಪಿಸಿಕೊಂಡರೆ ಅವರಿಗೂ ನನ್ನ ತೋಳ್ಬಲವನ್ನು ತೋರಿಸುತ್ತೇನೆ;
ಅನುಜ=ತಮ್ಮ;
ಇವರುಗಳ ಅನುಜನು ಎಂಬೆನೆ=ನಿನ್ನ ಮಾನಪ್ರಾಣವನ್ನು ಕಾಪಾಡಲು ಮನಸ್ಸು ಮಾಡದ, ಮುಂದೆ ಬರದ ಆ ಅರ್‍ಜುನ ಸಹದೇವ ನಕುಲರನ್ನು ತಮ್ಮಂದಿರೆಂದು ಹೇಳಲು ನಾಚಿಕೆಯಾಗುತ್ತದೆ;
ಹಾಯ್=ಮೇಲೆ ಬೀಳು; ಘನ=ದೊಡ್ಡದಾದುದು/ಅತಿಶಯವಾದುದು; ಮುರಾರಿ=ಮುರನೆಂಬ ರಕ್ಕಸನನ್ನು ಕೊಂದವನು/ಕ್ರಿಶ್ಣ; ಮೀರು=ವಿರೋದಿಸು/ಪ್ರತಿಬಟಿಸು;
ಕೃಷ್ಣ ಹಾಯ್ದರೆ ಘನ ಮುರಾರಿಯ ಮೀರುವೆನು=ಕೃಷ್ಣನು ನನ್ನನ್ನು ವಿರೋದಿಸಿದರೆ ದೊಡ್ಡವನಾದ ಆ ಮುರಾರಿಯನ್ನು ಲೆಕ್ಕಿಸುವುದಿಲ್ಲ;
ಬಳಿಕ ಎನಗೆ ಸಮಬಲರು ಆರು=ಈ ರೀತಿ ಯಾರನ್ನೂ ನಾನು ಲೆಕ್ಕಿಸದೇ ಇರುವಾಗ ನನಗೆ ಸಮಬಲರು ಯಾರಿದ್ದಾರೆ;
ಅನ್ವಯ=ವಂಶ; ತರಿ=ಕಡಿ/ಕತ್ತರಿಸು;
ಕೀಚಕ ಅನ್ವಯವ ತರಿವೆನು=ಕೀಚಕನ ವಂಶವನ್ನೇ ನಾಶಮಾಡುತ್ತೇನೆ;
ಈಸು=ಇಶ್ಟು; ಪಾಶ=ಹಗ್ಗ;
ಈಸು ದಿನವು ಎಮ್ಮಣ್ಣನ ಆಜ್ಞೆಯ ಪಾಶದಲಿ ಸಿಕ್ಕಿರ್ದೆ=ಇಶ್ಟು ದಿನ ನಮ್ಮಣ್ಣನ ಆಜ್ನೆಯೆಂಬ ಹಗ್ಗದಿಂದ ಕಟ್ಟಲ್ಪಟ್ಟಿದ್ದೆನು;
ಕೂಸು=ಮರಿ; ಕೆಣಕು=ರೇಗಿಸು/ಕೆರಳಿಸು; ವೊಲು=ಅಂತೆ/ಹಾಗೆ; ಕುರು=ಕುರುವಂಶಕ್ಕೆ ಸೇರಿದ ದುರ್‍ಯೋದನ ಮತ್ತು ಅವನ ತಮ್ಮಂದಿರು; ಕೀಚಕ+ಆದಿಗಳು; ಆದಿಗಳು=ಮೊದಲಾದವರು; ಗಾಸಿ=ತೊಂದರೆ;
ಸಿಂಹದ ಕೂಸ ನರಿ ಕೆಣಕುವವೊಲು ಈ ಕುರು ಕೀಚಕಾದಿಗಳು ಕೆಣಕಿ ಗಾಸಿಯಾದರು=ಕಾಡಿನ ರಾಜನಾದ ಸಿಂಹದ ಮರಿಯನ್ನು ಕುತಂತ್ರದ ನರಿಯು ಕೆಣಕುವಂತೆ ಈ ಕುರುವಂಶದ ದುರ್‍ಯೋದನ, ದುಶ್ಶಾಸನ ಮತ್ತು ವಿರಾಟರಾಜನ ಸೇನಾನಿಯಾದ ಕೀಚಕ ಮುಂತಾದವರು ನಿನಗೆ ಅಪಮಾನ ಮಾಡುವುದರ ಮೂಲಕ ನನ್ನನ್ನು ಕೆಣಕಿ ದುರಂತಕ್ಕೆ ಒಳಗಾದರು;
ವೀಸ=ಈಗ ಇಂಡಿಯಾ ದೇಶದಲ್ಲಿ ಚಲಾವಣೆಯಲ್ಲಿರುವ ನೂರು ಪೈಸೆಗಳಿಗೆ ಒಂದು ರೂಪಾಯಿ ಎಂಬ ಹಣಕಾಸಿನ ವ್ಯವಸ್ತೆಯು ಬರುವುದಕ್ಕೆ ಮೊದಲು ಹದಿನಾರು ಆಣೆಗಳಿಗೆ ಒಂದು ರೂಪಾಯಿ ಎಂಬ ವ್ಯವಸ್ತೆಯಿತ್ತು. ರೂಪಾಯಿಯ ಈ ಹದಿನಾರು ಆಣೆಗಳ ಮೊತ್ತದಲ್ಲಿ ಒಂದು ಆಣೆಯ ಬಾಗವನ್ನು ‘ವೀಸ’ ಎಂದು ಕರೆಯುತ್ತಿದ್ದರು; ಬಡ್ಡಿ=ಸಾಲವಾಗಿ ತೆಗೆದುಕೊಂಡ ಹಣಕ್ಕೆ ದಿನ/ವಾರ/ತಿಂಗಳು/ವರುಶದ ಲೆಕ್ಕದಲ್ಲಿ ಕೊಡುವ ಹೆಚ್ಚಿನ ಹಣ; ವೀಸಬಡ್ಡಿ=ಸಾಲವಾಗಿ ತೆಗೆದುಕೊಂಡಾಗ ಪಡೆಯುವ ಮೂಲ ಹಣವಾದ ಅಸಲು ಮತ್ತು ಅದಕ್ಕೆ ಕಾಲಕಾಲದಲ್ಲಿ ಕಟ್ಟುವ ಬಡ್ಡಿ.
ವೀಸಬಡ್ಡಿಯಲಿ=ಅಸಲು ಬಡ್ಡಿ ಸಮೇತ; ಇಲ್ಲಿ ‘ವೀಸಬಡ್ಡಿಯಲಿ’ ಎಂಬುದು ಒಂದು ರೂಪಕವಾಗಿ ಬಳಕೆಗೊಂಡಿದೆ. ಇದುವರೆಗೆ ಪಾಂಡವರಿಗೆ ಹಗೆಗಳು ಯಾವಾವ ಕೇಡುಗಳನ್ನು ಬಗೆದಿದ್ದಾರೆಯೋ, ಅವೆಲ್ಲಕ್ಕೂ ಇಮ್ಮಡಿ/ಮುಮ್ಮಡಿ/ನಾಲ್ವಡಿಯಾಗಿ/ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಗೆಗಳಿಗೆ ಸಾವುನೋವನ್ನುಂಟುಮಾಡುವುದು;
ನಾಯ್ಗಳ=ನಾಯಿಗಳ. ಬಯ್ಗುಳದ ಪದ; ಅಸು=ಪ್ರಾಣ/ಜೀವ;
ವೀಸ ಬಡ್ಡಿಯಲಿ ನಾಯ್ಗಳ ಅಸುವ ಕೊಂಬೆನು=ನಮಗೆ ಕೇಡನ್ನು ಬಗೆದಿರುವ ನಾಯಿಗಳನ್ನು ಚೆನ್ನಾಗಿ ಸದೆಬಡಿದು, ಅವರ ಜೀವವನ್ನೇ ತೆಗೆದುಕೊಳ್ಳುತ್ತೇನೆ;
ವಾಸಿ=ಹಿರಿಮೆ; ಮೇರೆ=ಎಲ್ಲೆ/ಸೀಮೆ;
ವಾಸಿ ಧರ್ಮದ ಮೇರೆ ತಪ್ಪಿತು=ದೊಡ್ಡದಾಗಿ ಹೇಳಿಕೊಳ್ಳುವ ದರ್‍ಮದ ಹಿರಿಮೆಯು ತನ್ನ ಎಲ್ಲೆಯನ್ನು ಮೀರಿದೆ. ಅಂದರೆ ಇನ್ನು ಮುಂದೆ ದರ್‍ಮದ ಹೆಸರನ್ನು ಹೇಳಿಕೊಂಡು ತಾಳ್ಮೆಯಿಂದ ಸುಮ್ಮನಿರಲಾಗದು;
ಹರಣ=ಜೀವ/ಪ್ರಾಣ; ಇದಕೋ=ಇದೋ ನೋಡು; ಸಂಚಕಾರ=ಕೇಡು/ಹಾನಿ;
ಕಾಂತೆ ಕೇಳು, ಕೀಚಕ ಕೌರವೇಂದ್ರರ ಹರಣಕೆ ಇದಕೋ ಸಂಚಕಾರವ=ದ್ರೌಪದಿಯೇ ಕೇಳು… ಕೀಚಕ, ದುರ್‍ಯೋದನಾದಿಗಳ ಜೀವಕ್ಕೆ ಇದೋ ನೋಡು… ಇನ್ನು ಮುಂದೆ ಕೇಡಾಗುವ ಕಾಲ ಬಂದಿದೆ;
ಬಗೆ=ಆಲೋಚನೆ/ಯೋಚನ; ಬಗೆವನೆ=ಲೆಕ್ಕಿಸುತ್ತಾನೆಯೇ; ಬಗೆ=ಗಣಿಸು/ಲೆಕ್ಕಿಸು;
ಕೆರಳಿದೊಡೆ ನೀತಿಗೀತಿಗಳ ಈ ಭೀಮ ಬಗೆವನೆ=ಅಪಮಾನ ಮತ್ತು ಸಂಕಟದಿಂದ ನೊಂದಿರುವ ಬೀಮನಾದ ನಾನು ಕೋಪೋದ್ರೇಕದಿಂದ ಕೆರಳಿದರೆ, ಲೋಕದ ನೀತಿಗೀತಿಗಳನ್ನು ಲೆಕ್ಕಿಸುವುದಿಲ್ಲ;
ಕೆರಳಿಚು=ಉದ್ರೇಕಿಸು; ಹರಿಬ=ಸಂಕಟ; ಎನ್ನದು=ನನ್ನದು;
ಕೆರಳಿಚಿದೆ…ಇನ್ನೇನು ನಿನ್ನಯ ಹರಿಬವು ಎನ್ನದು=ನಿನ್ನ ಮಾನಪ್ರಾಣಕ್ಕೆ ಬಂದಿರುವ ಆಪತ್ತನ್ನು ನನಗೆ ತಿಳಿಸಿ ನನ್ನನ್ನು ಹೋರಾಟಕ್ಕೆ ಅಣಿಗೊಳಿಸಿರುವೆ. ಇನ್ನು ಮುಂದೆ ನಿನ್ನ ಸಂಕಟವೇ ನನ್ನ ಸಂಕಟ;
ಜಾರ=ವಿಟ/ಹಾದರಿಗ; ಸಂಕೇತ=ಗುರುತು;
ನಾಯಿ ಜಾರನ ಕರೆದು ನಾಟ್ಯ ಮಂದಿರವ ಸಂಕೇತದಲಿ ಸೂಚಿಸು=ಹಾದರಿಗನಾದ ಆ ನಾಯಿ ಕೀಚಕನನ್ನು ಕರೆದು ನಾಟ್ಯಮಂದಿರದ ಬಳಿಗೆ ಬರಲು ಸೂಚಿಸು;
ಇರುಳು=ರಾತ್ರಿ; ಐತಂದು=ಬಂದು/ಆಗಮಿಸಿ; ಖುಲ್ಲ=ನೀಚ/ಕೇಡಿ; ಉದರ=ಹೊಟ್ಟೆ; ಬಗಿದು=ಸೀಳಿ; ಶಾಕಿನಿ=ದುರ್‍ಗಾದೇವಿಯ ಪರಿಚಾರಿಕೆಯರಲ್ಲಿ ಒಬ್ಬಳು;
ಅಲ್ಲಿಗೆ ಇರುಳು ಐತಂದು ಮರೆಯಲಿ ಖುಲ್ಲನ ಉದರವ ಬಗಿದು ರಕುತವ ಶಾಕಿನಿಯರಿಗೆ ಚೆಲ್ಲುವೆನು=ನಾಟ್ಯಮಂದಿರಕ್ಕೆ ಇಂದಿನ ರಾತ್ರಿ ಬಂದು, ಮರೆಯಲ್ಲಿದ್ದುಕೊಂಡು ಕಾದು ಕುಳಿತು, ಆ ನೀಚನ ಹೊಟ್ಟೆಯನ್ನು ಬಗಿದು, ಅವನ ನೆತ್ತರನ್ನು ಶಾಕಿನಿಯರಿಗೆ ಕುಡಿಯುವಂತೆ ಮಾಡುತ್ತೇನೆ;
ಇದಕೆ ಸಂದೇಹ ಬೇಡ=ಇದರಲ್ಲಿ ಯಾವ ಅನುಮಾನವನ್ನು ಪಡಬೇಡ. ನಾನು ಹೇಳಿದಂತೆಯೇ ಆ ಕೇಡಿಯನ್ನು ಕೊಲ್ಲುತ್ತೇನೆ;
ಕೆಲಬಲನು=ಅಕ್ಕಪಕ್ಕದವರು; ಅರಿದುದು+ಆದೊಡೆ; ಅರಿ=ತಿಳಿ; ಆದೊಡೆ=ಆದರೆ; ಔಷಧಿ=ಮದ್ದು; ಔಷಧಿಯ ಬಲ್ಲೆನು=ಇದೊಂದು ನುಡಿಗಟ್ಟು. ಯಾವುದೇ ಸಮಸ್ಯೆ ಬಂದಾಗ ಯುಕ್ತಿಯಿಂದ ಮತ್ತು ಶಕ್ತಿಯಿಂದ ಅದನ್ನು ಪರಿಹರಿಸುವ ಬಗೆಯನ್ನು ತಿಳಿದಿರುವುದು;
ಅಲ್ಲಿ ಕೆಲಬಲನು ಅರಿದುದಾದೊಡೆ ಅದಕೆ ಔಷಧಿಯ ಬಲ್ಲೆನು=ನಾಟ್ಯಮಂದಿರದ ಅಕ್ಕಪಕ್ಕದಲ್ಲಿರುವ ಇತರರಿಗೆ ನಾನು ಕೀಚಕನನ್ನು ಕೊಂದ ವಿಚಾರ ತಿಳಿದರೆ, ಅದಕ್ಕೆ ಏನು ಮಾಡಬೇಕೆಂಬುದು ನನಗೆ ಗೊತ್ತಿದೆ;
ಕರೆಮರೆ=ಮುಚ್ಚುಮರೆ;
ಕರೆಮರೆಯಿಲ್ಲ=ನಾನು ಹೇಳುತ್ತಿರುವ ಮಾತುಗಳಲ್ಲಿ ಯಾವ ಮುಚ್ಚುಮರೆಯಿಲ್ಲ. ಅಂದರೆ ನಾನು ಹೇಳಿದಂತೆಯೇ ಮಾಡುತ್ತೇನೆ;
ಮಾನಿನಿ=ಹೆಂಗಸು; ಅಂಗನೆ=ಹೆಂಗಸು; ಬೀಳ್ಕೊಡು=ಕಳುಹಿಸುವುದು;
ಮಾನಿನಿ ಹೋಗು ಎನುತ ಅಂಗನೆಯ ಬೀಳ್ಕೊಟ್ಟನು=ದ್ರೌಪದಿಯೇ ಹೋಗು ಎಂದು ಹೇಳಿ, ಅವಳನ್ನು ಕಳುಹಿಸಿಕೊಟ್ಟನು;
ಹರುಷದಲಿ ಹೆಚ್ಚಿದಳು=ಆನಂದದಿಂದ ಉಬ್ಬಿಹೋದಳು;
ಪುರುಷ=ಗಂಡಸು/ಪರಾಕ್ರಮಿ/ಗಂಡುಗಲಿ;
ಪುರುಷರ ಪುರುಷನಲ್ಲಾ ಭೀಮ=ಗಂಡುಗಲಿಗಳ ಗುಂಪಿನಲ್ಲಿ ಈ ನನ್ನ ಭೀಮ ಮಹಾಗಂಡುಗಲಿ ಆಗಿದ್ದಾನೆ ;
ತನ್ನಯ=ನನ್ನ ಪಾಲಿನ; ಪರಮ=ಅತಿಶಯವಾದ/ಅತ್ಯುತ್ತಮವಾದ; ಸುಕೃತ=ಪುಣ್ಯ/ಬಾಗ್ಯ; ಉದಯ=ಹುಟ್ಟು/ಕಾಂತಿ;
ತನ್ನಯ ಪರಮ ಸುಕೃತ ಉದಯವಲಾ ನೀನೊಬ್ಬನು ಎಂದು ಎನುತ ಅರಸಿ ಕಾಂತನ ಬೀಳುಕೊಂಡಳು=ತನ್ನ ಪರಮ ಪುಣ್ಯವೇ ನಿನ್ನ ರೂಪಿನಲ್ಲಿ ಹುಟ್ಟಿಬಂದಿದೆ ಎಂದು ದ್ರೌಪದಿಯು ಬೀಮನನ್ನು ಹಾಡಿಹೊಗಳುತ್ತ, ಅವನಿಂದ ಬೀಳ್ಕೊಂಡಳು;
ನಿಜಭವನಕೆ ತಿರುಗಿದಳು=ತನ್ನ ರಾಣಿವಾಸಕ್ಕೆ ಹಿಂತಿರುಗಿದಳು.
(ಚಿತ್ರ ಸೆಲೆ: quoracdn.net)
ಇತ್ತೀಚಿನ ಅನಿಸಿಕೆಗಳು