ಚಾಮರಾಜನಗರ ಶೈಲಿಯ ಬಾಡೂಟ

– ಕಿಶೋರ್ ಕುಮಾರ್.

ಏನೇನು ಬೇಕು

  • ಮೇಕೆ ಬಾಡು – 1 ಕಿಲೋ
  • ಈರುಳ್ಳಿ – 5
  • ಕೊತ್ತಂಬರಿ ಪುಡಿ (ದನ್ಯ) – 4 ಚಮಚ
  • ಒಣ ಮೆಣಸಿನಕಾಯಿಪುಡಿ – 4 ಚಮಚ
  • ಅರಿಶಿಣದ ಪುಡಿ – 2 ಚಮಚ
  • ಟೊಮೆಟೊ
  • ತೆಂಗಿನಕಾಯಿ – ¼ ಹೋಳು
  • ಕೊತ್ತಂಬರಿಸೊಪ್ಪು – ಸ್ವಲ್ಪ
  • ಚಕ್ಕೆ – 2 ಚೂರು
  • ಲವಂಗ – 2
  • ಬೆಳ್ಳುಳ್ಳಿ – 4 ಎಸಳು
  • ಶುಂಟಿ – ಸ್ವಲ್ಪ
  • ಅಡುಗೆ ಎಣ್ಣೆ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಒಂದು ಪಾತ್ರೆಗೆ ಸ್ವಲ್ಪ ಅಡುಗೆ ಎಣ್ಣೆ ಸೇರಿಸಿ ಒಲೆ ಹಚ್ಚಿ. ಕಾದ ಎಣ್ಣೆಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ಒಂದು ಜಾರ್ ಗೆ ಕೊತ್ತಂಬರಿ ಪುಡಿ, ಒಣ ಮೆಣಸಿನಕಾಯಿ ಪುಡಿ, ಅರಿಶಿಣದ ಪುಡಿ, ಕತ್ತರಿಸಿದ ಟೊಮೆಟೊ ಹಾಗೂ ಹುರಿದುಕೊಂಡಿದ್ದ ಈರುಳ್ಳಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ಜಾರ್ ಗೆ ತೆಂಗಿನಕಾಯಿ, ಕೊತ್ತಂಬರಿಸೊಪ್ಪು, ಚಕ್ಕೆ, ಲವಂಗ, ಬೆಳ್ಳುಳ್ಳಿ ಹಾಗೂ ಶುಂಟಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಕುಕ್ಕರ್ ಗೆ ಅಡುಗೆ ಎಣ್ಣೆ ಹಾಕಿ, ಕಾದ ಎಣ್ಣೆಗೆ 1 ಕತ್ತರಿಸಿದ ಈರುಳ್ಳಿ, ತೊಳೆದಿಟ್ಟುಕೊಂಡಿದ್ದ ಮೇಕೆ ಬಾಡು, ಸ್ವಲ್ಪ ಅರಿಶಿಣದ ಪುಡಿ ಹಾಗೂ ಉಪ್ಪು ಸೇರಿಸಿ  ಚೆನ್ನಾಗಿ ಹುರಿಯಿರಿ. ಈಗ ಮೊದಲು ರುಬ್ಬಿಟ್ಟುಕೊಂಡಿದ್ದ ಕಾರ ಹಾಕಿ ಸ್ವಲ್ಪ ನೀರು ಸೇರಿಸಿ 10 ನಿಮಿಶ (ಕುದಿಯುವವರೆಗೂ) ಬೇಯಿಸಿ. ನಂತರ ರುಬ್ಬಿಟ್ಟುಕೊಂಡಿದ್ದ ಕಾಯಿ ಮಾಸಾಲೆಯನ್ನು ಸೇರಿಸಿ. ಈಗ ಬೇಕಾದಶ್ಟು ನೀರನ್ನು ಸೇರಿಸಿ 3 ವಿಶಲ್ ಹೊಡೆಸಿ. ಈಗ ಚಾಮರಾಜನಗರ ಶೈಲಿಯ ಬಾಡೂಟ ಸವಿಯಲು ರೆಡಿ. ಇದನ್ನು ರಾಗಿ ಮುದ್ದೆಯೊಡನೆ ಸವಿದರೆ ಇನ್ನೂ ಚೆನ್ನ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: