ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 10

– ಸಿ. ಪಿ. ನಾಗರಾಜ.

*** ಕೀಚಕನ ಪ್ರಸಂಗ: ನೋಟ – 10 ***

ಇತ್ತಲು ತರಣಿ ತಾವರೆಯ ಬಾಗಿಲಿನ ಬೀಯಗವ ತೆಗೆದನು. ಆ ದಿವಸ ಕೀಚಕನು ಅರಮನೆಗೆ ಬರುತ ವೃಕೋದರನ ವಲ್ಲಭೆಯಕಂಡನು. ಕೈದುಡಕಲು ಅಂಜಿದನು.ಅಂಗನೆಯ ಮಾತಾಡಿಸಿದನು.

ಕೀಚಕ: ಹೋದ ಇರುಳು ಯುಗವಾಗಿ ಸವೆದುದು. ಕುಸುಮಶರ ಯಮನಾದನು. ಅದ ನೀ ಬಲ್ಲೆ.ನೀ ದಯಾಂಬುಧಿ.
(ಎಂದನು ಕೀಚಕನು ನಗುತ.)
ಸೈರಂಧ್ರಿ: ಎಲೆ ಪಾಪಿ ಕೀಚಕ, ಕುಸುಮಶರ ಯಮನಹನು. ಅಮೃತವು ವಿಷವಹುದು. ಬಳಿಕ ಆಲಿಕಲುಗಳು ಬಿಸಿಯಹವು.ಬಾಂಧವರು ವೈರಿಗಳಹರು.ನಿಮಿಷದಲಿ ಒಸೆದರು ಒಲ್ಲದರಹರು. ಲೋಗರ ಶಶಿವದನೆಗೆ ಅಳುಪಿದ ದುರಾತ್ಮನ ವಸುಧೆ ಹೊರದು.
ಕೀಚಕ: ನಿನ್ನ ಪುರಾಣಧರ್ಮವ ಬಳಿಕ ತಿಳಿದುಕೊಂಬೆನು. ಇದು ಒಮ್ಮೆ ನಿನ್ನಯ ಲಲಿತಕರುಣಕಟಾಕ್ಷಕವಚವ ತೊಡಿಸಿ, ತನ್ನಒಡಲ ಅಳುಕದೆ ಎಸುವ ಮನೋಜನ ಅಂಬಿನ ಹಿಳುಕ ಮುರಿ. ಡಿಂಗರಿಗನು ಅಹೆನು.
(ಎಂದು ಅಳಿಮನದಲಿ ಆ ಖೂಳನು ಅಬುಜಾನನೆಗೆಕೈಮುಗಿದ.)
ಸೈರಂಧ್ರಿ: ಎಲವೊ, ಎನ್ನವರು ಅರಿದರಾದಡೆ ನಿನ್ನ ವಂಶವ ತರಿವರು. ಎನ್ನನು ಮರೆದು ನೀ ಬಿಡೆ. ನಿನಗೆ ಆಯುಷ ನೆರೆದುದು. ಕೆಲಬಲನು ಅರಿಯದ ಅಂದದಿ ಬಂದು, ನಾಟ್ಯದ ಗರುಡಿಯೊಳಗೆ ಕತ್ತಲೆ ಮನೆಯೊಳು ಇಹುದು. ಆದುದುದಾಗಲಿ. ಆನು ಐತಹೆನು.
(ಎಂದಳು ಇಂದುಮುಖಿ. ಖಳ ಹಸಾದವ ಹಾಯ್ಕಿ ತನ್ನಯ ನಿಳಯಕೆ ಐದಿದನು.)

ಪದ ವಿಂಗಡಣೆ ಮತ್ತು ತಿರುಳು

ಇತ್ತಲು=ಈ ಕಡೆ; ತರಣಿ=ಸೂರ್‍ಯ;ತಾವರೆಯ ಬಾಗಿಲು=ರಾತ್ರಿಯ ವೇಳೆಯಲ್ಲಿ ಮುಚ್ಚಿಕೊಂಡಿದ್ದ ತಾವರೆಯ ಹೂವಿನದಳಗಳು; ಬೀಯಗ=ಬೀಗ;

ಇತ್ತಲು ತರಣಿ ತಾವರೆಯ ಬಾಗಿಲಿನ ಬೀಯಗವ ತೆಗೆದನು=ಈ ಕಡೆ ಸೂರ್‍ಯನು ತಾವರೆಯ ಬಾಗಿಲಿನ ಬೀಗವನ್ನು ತೆರೆದನು. ಅಂದರೆ ಸೂರ್‍ಯನು ಮೂಡಲ ದಿಕ್ಕಿನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಳೆಬಿಸಿಲಿನ ಕಿರಣಗಳ ತಾಕುವಿಕೆಯಿಂದ ರಾತ್ರಿಯ ವೇಳೆಯಲ್ಲಿ ಮುಚ್ಚಿಕೊಂಡಿದ್ದ ತಾವರೆಯ ಹೂವಿನ ದಳಗಳು ಅರಳಿದವು;

ವೃಕೋದರ=ಬೀಮ; ವೃಕ+ಉದರ; ವೃಕ=ತೋಳ; ಉದರ=ಹೊಟ್ಟೆ; ವೃಕೋದರ=ತೋಳದ ಹೊಟ್ಟೆಯಂತಹವನು ಎಂಬ ನುಡಿಗಟ್ಟು. ಎಶ್ಟುಉಂಡರೂ ತಿಂದರೂ ಸಾಕಾಗದ ‘ಹೊಟ್ಟೆಬಾಕ’ ಎನ್ನುವ ತಿರುಳನ್ನು ಒಳಗೊಂಡಿದೆ; ವಲ್ಲಭೆ=ಹೆಂಡತಿ; ವೃಕೋದರನ ವಲಭೆ=ಸೈರಂದ್ರಿ;

ಆ ದಿವಸ ಕೀಚಕ ಅರಮನೆಗೆ ಬರುತ ವೃಕೋದರನ ವಲ್ಲಭೆಯ ಕಂಡನು=ಮಾರನೆಯ ದಿನ ಬೆಳಗ್ಗೆ ಕೀಚಕನು ಅರಮನೆಗೆ ಬರುತ್ತಿರುವಾಗ ಸೈರಂದ್ರಿಯನ್ನು ಕಂಡನು;

ಕೈದುಡುಕು=ಮುನ್ನುಗ್ಗಿ ತಟ್ಟನೆ ಕಯ್ಯಿಂದ ಹಿಡಿದುಕೊಳ್ಳುವುದು; ಅಂಜು=ಹೆದರು;

ಕೈದುಡಕಲು ಅಂಜಿದನು=ನೆನ್ನೆಯ ದಿನ ತನ್ನ ಕೊಟಡಿಗೆ ಜೇನು ತುಪ್ಪವನ್ನು ತೆಗೆದುಕೊಂಡು ಹೋಗಲೆಂದು ಸೈರಂದ್ರಿಯು ಬಂದಿದ್ದಾಗ ತಟ್ಟನೆ ಅವಳನ್ನು ತಬ್ಬಿ ಹಿಡಿದುಕೊಂಡಿದ್ದಂತೆ ಇಂದು ಅವಳನ್ನು ಹಿಡಿದುಕೊಳ್ಳಲು ಹೆದರಿದನು;

ಅಂಗನೆ=ಹೆಣ್ಣು;

ಅಂಗನೆಯ ಮಾತಾಡಿಸಿದನು=ಸೈರಂದ್ರಿಯನ್ನುತಾನಾಗಿಯೇ ಮಾತನಾಡಿಸಿದನು;

ಇರುಳು=ರಾತ್ರಿ; ಯುಗ=ಅತಿಹೆಚ್ಚಿನಸಮಯ; ಸವೆ=ಕಳೆ/ತೀರು/ಮುಗಿ;

ಹೋದ ಇರುಳು ಯುಗವಾಗಿ ಸವೆದುದು=ಕಳೆದ ರಾತ್ರಿ ನಿದ್ರೆಯಿಲ್ಲದೆ ನನ್ನಪಾಲಿಗೆ ಒಂದು ಯುಗದಂತಾಯಿತು. ಅಂದರೆ ಕಳೆದ ರಾತ್ರಿಯೆಲ್ಲಾ ನಿನ್ನ ನೆನಪಿನಲ್ಲಿಯೇ ನಾನು ಒಂದು ಗಳಿಗೆಯಾದರೂ ಕಣ್ಣು ಮುಚ್ಚಲಿಲ್ಲ;

ನೀ=ನೀನು; ದಯಾ+ಅಂಬುಧಿ; ದಯಾ=ಕರುಣೆ/ಅನುಕಂಪ/ಕನಿಕರ; ಅಂಬುಧಿ=ಸಾಗರ;

ನೀ ದಯಾಂಬುಧಿ=ನೀನು ಕರುಣೆಯುಳ್ಳವಳು. ನನ್ನ ಮನಸ್ಸಿನ ತುಡಿತವೇನೆಂಬುದನ್ನು ಅರಿತುಕೊಂಡು, ಅದನ್ನು ಪರಿಹರಿಸುವಂತಹ ಕರುಣೆಯ ಗುಣವುಳ್ಳವಳು;

ಕುಸುಮ=ಹೂವು; ಶರ=ಬಾಣ; ಕುಸುಮಶರ=ಹೂ ಬಾಣವನ್ನು ತನ್ನ ಹತಾರವನ್ನಾಗಿ ಉಳ್ಳ ಕಾಮದೇವ/ಮನ್ಮತ; ಯಮ=ಸಾವಿನ ದೇವತೆ;

ಕುಸುಮಶರ ಯಮನಾದನು=ನಿನ್ನಿಂದಾಗಿ ಕಾಮದೇವನೇ ನನ್ನ ಪಾಲಿಗೆ ಸಾವಿನ ದೇವನಾಗಿದ್ದಾನೆ. ನಿನ್ನನ್ನುಕೂಡಲಾಗದಿದ್ದರೆ ನಾನು ಸಾಯಲಿದ್ದೇನೆ;

ಅದ ನೀ ಬಲ್ಲೆಎಂದನು ಕೀಚಕನು ನಗುತ=ಕೀಚಕನು ನಗೆಯನ್ನು ಬೀರುತ್ತ ನನ್ನ ಮನಸ್ಸಿನ ಒಳತುಡಿತಗಳೆಲ್ಲವನ್ನೂ ನೀನು ಚೆನ್ನಾಗಿ ತಿಳಿದಿರುವೆ ಎಂದನು;

ಎಲೆ ಪಾಪಿ ಕೀಚಕ=ಹೆಂಗಸರ ಮೇಲೆ ಕಾಮದ ಹಲ್ಲೆಯನ್ನು ಮಾಡುವ ಎಲೆ ಪಾಪಿ ಕೀಚಕನೇ;

ಕುಸುಮಶರ ಯಮನಹನು=ನಿನ್ನಂತಹ ಕಾಮಿಯ ಪಾಲಿಗೆ ಕಾಮದೇವನು ಸಾವಿನ ದೇವನಾಗುತ್ತಾನೆ. ನಿನ್ನ ಕಾಮ ವಿಕಾರ ನಿನ್ನನ್ನೇ ಬಲಿ ತೆಗೆದುಕೊಳ್ಳುತ್ತದೆ;

ಅಮೃತ=ಒಂದು ಬಗೆಯ ಪಾನೀಯ. ಇದನ್ನು ಕುಡಿದರೆ ಸಾವು ಬರುವುದಿಲ್ಲವೆಂಬ ಒಂದು ನಂಬಿಕೆಯು ಜನಮನದಲ್ಲಿ ನೆಲೆಸಿದೆ; ವಿಷ=ನಂಜು/ಸೇವಿಸಿದ ಕೂಡಲೇ ಸಾವನ್ನು ತರುವಂತಹ ವಸ್ತು/ಪಾನೀಯ;

ಅಮೃತವು ವಿಷವಹುದು=ಕಾಮ ವಿಕಾರಿಯಾದ ನಿನ್ನ ಪಾಲಿಗೆ ಅಮ್ರುತವೇ ನಂಜಾಗುತ್ತದೆ;

ಬಳಿಕ=ಅನಂತರ; ಆಲಿಕಲು=ಆಲಿಕಲ್ಲು/ಹನಿಗಳು ಜತೆಗೂಡಿ ಸಣ್ಣಸಣ್ಣ ಹರಳಿನಂತಾಗಿರುವುದು; ಬಿಸಿ+ಅಹವು;

ಬಳಿಕ ಆಲಿಕಲುಗಳು ಬಿಸಿಯಹವು=ಕ್ರೂರವಾದ ನಡೆನುಡಿಯುಳ್ಳ ನಿನ್ನ ಪಾಲಿಗೆ ತಣ್ಣನೆಯ ಆಲಿಕಲ್ಲುಗಳು ಬಿಸಿಯಾಗುತ್ತವೆ. ಅಂದರೆ ನಿನಗೆ ಎಲ್ಲ ರೀತಿಯಿಂದಲೂ ಕೇಡಾಗುತ್ತದೆ;

ಬಾಂಧವ=ನೆಂಟ; ವೈರಿಗಳು+ಅಹರು;

ಬಾಂಧವರು ವೈರಿಗಳಹರು=ನಿನ್ನನ್ನು ಪ್ರೀತಿಸುವ ನೆಂಟರು ಮತ್ತು ಮಿತ್ರರು ನಿನಗೆ ಹಗೆಗಳಾಗುತ್ತಾರೆ. ನಿನ್ನ ಕಾಮುಕತನವು ಎಲ್ಲರಿಂದಲೂ ನಿನ್ನನ್ನು ದೂರ ಮಾಡುತ್ತದೆ;

ನಿಮಿಷ=ಒಂದುಗಳಿಗೆ; ಒಸೆ=ಒಲಿ/ಮೆಚ್ಚು; ಒಸೆದರು=ಒಲಿದವರು/ಮೆಚ್ಚಿಕೊಂಡವರು; ಒಲ್=ಒಪ್ಪು; ಒಲ್ಲದವರು=ಒಪ್ಪದವರು;

ನಿಮಿಷದಲಿ ಒಸೆದರು ಒಲ್ಲದರಹರು=ನೀನು ಇಂತಹ ಕೆಟ್ಟ ನಡೆನುಡಿಯುಳ್ಳವನು ಎಂದು ತಿಳಿದ ಮರುಗಳಿಗೆಯಲ್ಲಿಯೇ ನಿನ್ನನ್ನು ಪ್ರೀತಿಸುತ್ತಿದ್ದವರು ಕೂಡ ನಿನ್ನ ಬಗ್ಗೆ ಅಸಹ್ಯ ಪಟ್ಟುಕೊಂಡು ನಿನ್ನನ್ನು ತಿರಸ್ಕರಿಸುತ್ತಾರೆ;

ಲೋಗರು=ಲೋಕದ ಜನರು; ಶಶಿ=ಚಂದ್ರ; ವದನ=ಮೊಗ; ಶಶಿವದನೆ=ಚಂದ್ರನಂತಹ ಮೊಗವುಳ್ಳವಳು/ಸುಂದರಿ; ಲೋಗರ ಶಶಿವದನೆ=ಲೋಕದಲ್ಲಿನ ಹೆಂಗಸರು ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ಅಳುಪು=ಬಯಸು; ದುರಾತ್ಮ=ನೀಚ/ಕೇಡಿ; ವಸುಧೆ=ಭೂಮಿ; ಹೊರು=ತಾಳು/ಸಹಿಸು/ಕಾಪಾಡು;

ಲೋಗರ ಶಶಿವದನೆಗೆ ಅಳುಪಿದ ದುರಾತ್ಮನ ವಸುಧೆ ಹೊರದು=ನಿನ್ನ ಹಾಗೆ ಲೋಕದಲ್ಲಿ ಹೆಂಗಸನ್ನು ಬಲಾತ್ಕಾರದಿಂದ ಕೂಡಲು ಬಯಸಿ, ಕಾಮದ ಹಲ್ಲೆಯನ್ನು ನಡೆಸುವ ನೀಚನನ್ನು ಈ ಬೂಮಿತಾಯಿಯು ಕಾಪಾಡುವುದಿಲ್ಲ;

ಪುರಾಣ=ಹಳೆಯ ಕಾಲದವಿ ಚಾರಗಳನ್ನು ಒಳಗೊಂಡಿದ್ದು; ಧರ್ಮ=ಸತ್ಯ ನೀತಿ ನ್ಯಾಯದ ನಡೆನುಡಿ;

ನಿನ್ನ ಪುರಾಣಧರ್ಮವ ಬಳಿಕ ತಿಳಿದುಕೊಂಬೆನು=ಈಗ ನೀನು ಹೇಳುತ್ತಿರುವ ಹಳೆಯ ಕಾಲದ ದರ್ಮದ ಸಂಗತಿಗಳನ್ನು ಆಮೇಲೆ ತಿಳಿದುಕೊಳ್ಳುತ್ತೇನೆ. ಈಗ ಅವೆಲ್ಲವನ್ನೂ ಕೇಳುವ ತಾಳ್ಮೆ ನನಗಿಲ್ಲ;

ಲಲಿತ=ಚೆಲುವು/ಸುಂದರವಾದುದು; ಕಟಾಕ್ಷ; ಕಟ+ಅಕ್ಷ; ಕಟ=ಕಡೆ/ಕೊನೆ/ತುದಿ; ಅಕ್ಷ=ಕಣ್ಣು; ಕಟಾಕ್ಷ=ಕುಡಿನೋಟ/ಕಡೆಗಣ್ಣಿನ ನೋಟ; ಕವಚ=ಹೊದಿಕೆ; ಕರುಣ ಕಟಾಕ್ಷ ಕವಚ=ಒಲವು ನಲಿವು ಕರುಣೆಯಿಂದ ಕೂಡಿದ ಕಡೆಗಣ್ಣಿನ ನೋಟ;

ಇದು ಒಮ್ಮೆ ನಿನ್ನಯ ಲಲಿತ ಕರುಣ ಕಟಾಕ್ಷ ಕವಚವ ತೊಡಿಸಿ=ಈಗಒಂದು ಬಾರಿ ನಿನ್ನಒಲವು ನಲಿವಿನಿಂದ ತುಂಬಿದ ಕಡೆಗಣ್ಣಿನ ನೋಟವನ್ನು ನನ್ನತ್ತ ಬೀರಿ;

ಒಡಲು=ದೇಹ; ಅಳುಕು=ಹಿಂಜರಿ/ಹೆದರು; ಎಸು=ಬಾಣಪ್ರಯೋಗ ಮಾಡು; ಮನೋಜ=ಮನ್ಮತ/ಕಾಮದೇವ; ಅಂಬು=ಬಾಣ; ಹಿಳುಕು=ಬಾಣದ ಮುಂದಿನ ತುದಿಯು ಹರಿತವಾದ ಮೊನೆಯಿಂದ ಕೂಡಿದ್ದರೆ,
ಬಾಣದ ಹಿಂದಿನ ತುದಿಯು ಬಾಣವನ್ನು ಬಿಡುವುದಕ್ಕೆ ಅಗತ್ಯವಾದ ಗರಿಗಳಿಂದ ಕೂಡಿರುತ್ತದೆ. ಹಿಂದಿನ ತುದಿಯ ಗರಿಗಳ ಜಾಗವನ್ನು ಹಿಳುಕುಎನ್ನುತ್ತಾರೆ; ಮುರಿ=ಬಗ್ಗಿಸು/ತಿರುಗಿಸು;

ತನ್ನಒಡಲ ಅಳುಕದೆ ಎಸುವ ಮನೋಜನ ಅಂಬಿನ ಹಿಳುಕಮುರಿ=ಯಾವುದೇ ಬಗೆಯ ಹಿಂಜರಿಕೆಯಿಲ್ಲದೆ ನನ್ನ ದೇಹದ ಮೇಲೆ ಹೂಬಾಣಗಳನ್ನು ಪ್ರಯೋಗಿಸುತ್ತಿರುವ ಮನ್ಮತನ ಬಾಣದ ಹಿಳುಕನ್ನು ಮುರಿದು, ಹೂಬಾಣಗಳನ್ನು ತೊಡದಂತೆ ಮಾಡು. ಇದೊಂದು ರೂಪಕ. ಕಾಮದ ಪರಿತಾಪವನ್ನು ತಡೆದುಕೊಳ್ಳಲು ನನ್ನಿಂದ ಆಗುತ್ತಿಲ್ಲ. ನೀನು ನನ್ನನ್ನು ಕೂಡುವುದರಿಂದ ಮಾತ್ರ ಪಾರಾಗಬಲ್ಲೆ;

ಡಿಂಗರಿಗ=ಸೇವಕ/ಅಡಿಯಾಳು/ದಾಸ; ಅಹೆನು=ಆಗುವೆನು; ಅಳಿಮನ=ಕೆಟ್ಟಮನಸ್ಸು; ಖೂಳ=ನೀಚ; ಅಬುಜ+ಆನನೆ; ಅಬುಜ=ತಾವರೆ; ಆನನ=ಮೊಗ; ಅಬುಜಾನನೆ=ತಾವರೆಯ ಮೊಗದವಳು/ಸುಂದರಿ;

ಡಿಂಗರಿಗನು ಅಹೆನುಎಂದು ಅಳಿಮನದಲಿ ಆ ಖೂಳನು ಅಬುಜಾನನೆಗೆ ಕೈಮುಗಿದ=ಕೆಟ್ಟ ಮನಸ್ಸಿನ ಆ ನೀಚ ಕೀಚಕನು ನಿನಗೆ ದಾಸನಾಗುತ್ತೇನೆ ಎಂದು ಸೈರಂದ್ರಿಯನ್ನು ಕಯ್ಮುಗಿದು ಬೇಡಿಕೊಂಡ;

ಎನ್ನವರು=ನನ್ನ ಗಂಡಂದಿರು; ಅರಿದರು+ಆದಡೆ; ಅರಿದರು=ತಿಳಿದವರು; ತರಿ=ಕತ್ತರಿಸು/ತುಂಡುತುಂಡುಮಾಡು;

ಎಲವೊ, ಎನ್ನವರು ಅರಿದರಾದಡೆ ನಿನ್ನ ವಂಶವ ತರಿವರು=ಎಲವೋ ಕೀಚಕ, ನನ್ನ ಗಂಡಂದಿರಿಗೆ ನೀನು ನನ್ನನ್ನು ಕೆಣಕುತ್ತಿರುವ ಸಂಗತಿಯು ಗೊತ್ತಾದರೆ, ನಿನ್ನ ವಂಶವನ್ನೇ ಕಡಿದು ತುಂಡು ತುಂಡು ಮಾಡುವರು. ನಿನ್ನಕುಟುಂಬದವರೆಲ್ಲರನ್ನೂ ನಾಶಮಾಡುತ್ತಾರೆ;

ಎನ್ನನು ಮರೆದು ನೀ ಬಿಡೆ=ನೀನು ನನ್ನನ್ನು ಮರೆತು ಇರಲಾರೆ/ನನ್ನ ಬಗ್ಗೆ ನಿನ್ನ ಮಯ್ಮನದಲ್ಲಿ ತುಂಬಿರುವ ಕೆಟ್ಟ ಬಯಕೆಗಳನ್ನು ಬಿಡಲಾರೆ;

ನೆರೆ=ತುಂಬಿಕೊಳ್ಳು;

ನಿನಗೆ ಆಯುಷ ನೆರೆದುದು=ನಿನಗೆ ಆಯುಸ್ಸು ತುಂಬಿ ಬಂದಿದೆ/ಸಾಯುವ ಕೇಡುಗಾಲ ಬಂದಿದೆ;

ಕೆಲಬಲನು=ಅಕ್ಕಪಕ್ಕದವರು/ಇತರರು; ಅರಿ=ತಿಳಿ; ಅಂದ=ರೀತಿ;

ಕೆಲಬಲನು ಅರಿಯದ ಅಂದದಿ ಬಂದು=ಇತರರು ತಿಳಿಯದಂತೆ ಬಂದು;

ನಾಟ್ಯದ ಗರುಡಿ+ಒಳಗೆ; ಗರುಡಿ=ವ್ಯಾಯಾಮಮಂದಿರ/ಮಲ್ಲವಿದ್ಯೆಯನ್ನು ಕಲಿಸುವ ನೆಲೆ; ನಾಟ್ಯದ ಗರುಡಿ=ಅಂಗಾಗಗಳನ್ನು ಕಲಾತ್ಮಕವಾಗಿ ಆಡಿಸುತ್ತ ಬಾವನೆಗಳನ್ನು ವ್ಯಕ್ತಪಡಿಸುವ ಕುಣಿತ ಮತ್ತು ನಾಟಕದ ತರಬೇತಿಯನ್ನು ನೀಡುವ ಮಂದಿರ/ನಾಟ್ಯಮಂದಿರ; ಇಹುದು=ಇರುವುದು;

ನಾಟ್ಯದ ಗರುಡಿಯೊಳಗೆ ಕತ್ತಲೆ ಮನೆಯೊಳು ಇಹುದು=ನಾಟ್ಯಮಂದಿರದಲ್ಲಿ ಇಂದು ರಾತ್ರಿ ಯಾರೊಬ್ಬರೂ ಇಲ್ಲದ ವೇಳೆಯಲ್ಲಿ ಇರುವುದು;

ಆದುದುದಾಗಲಿ=ನಿನ್ನಕೆಟ್ಟತನದ ಈ ಬಯಕೆಯಿಂದಮುಂದೆಏನಾಗುತ್ತದೆಯೋಆಗಲಿ;

ಆನು=ನಾನು; ಐತರು=ಬರು/ಆಗಮಿಸು; ಇಂದುಮುಖಿ=ಚಂದ್ರನಂತೆ ಮೊಗವುಳ್ಳವಳು/ಸುಂದರಿ;

ಆನು ಐತಹೆನು ಎಂದಳು ಇಂದುಮುಖಿ=ನಾನು ನಾಟ್ಯ ಮಂದಿರಕ್ಕೆ ಬರುತ್ತೇನೆ ಎಂದು ಸೈರಂದ್ರಿಯು ಹೇಳಿದಳು;

ಖಳ=ನೀಚ; ಹಸಾದ=ಪ್ರಸಾದ/ಅನುಗ್ರಹ/ದಯೆ;ಹಾಯ್ಕು=ಉಂಟುಮಾಡು; ಹಸಾದವ ಹಾಯ್ಕಿ=ಅನುಗ್ರಹ ದೊರೆಯಿತು/ಒಪ್ಪಿಗೆ ಸಿಕ್ಕಿತು ಎಂಬ ಆನಂದದಿಂದ;

ಖಳ ಹಸಾದವ ಹಾಯ್ಕಿ ತನ್ನಯ ನಿಳಯಕೆ ಐದಿದನು=ನೀಚನಾದ ಕೀಚಕನು ತನ್ನನ್ನು ಕೂಡಲು ಸೈರಂದ್ರಿಯು ಒಪ್ಪಿಕೊಂಡಳು ಎಂಬ ಆನಂದದಿಂದ ತನ್ನ ಮನೆಯತ್ತ ನಡೆದನು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: