ನಾ ನೋಡಿದ ಸಿನೆಮಾ: ಶೆಪ್ ಚಿದಂಬರ
ಕನ್ನಡಕ್ಕೆ ಕಾಮಿಡಿ ಮತ್ತು ಕ್ರೈಮ್ ಕತೆ ಇರುವ ಸಿನೆಮಾಗಳು ಹೊಸತೇನಲ್ಲ. ಆದ್ರೆ ಇತ್ತೀಚೆಗೆ ಈ ರೀತಿಯ ಸಿನೆಮಾಗಳು ಬಂದದ್ದು ಕಡಿಮೆ ಎನ್ನಬಹುದು. ಆದರೆ ಕನ್ನಡಿಗರಿಗೆ ಈ ವರುಶ ರಂಜಿಸಲು ಹಾಸ್ಯಮಯ ಕ್ರೈಮ್ ಸಿನೆಮಾವೊಂದು ತೆರೆಗೆ ಬಂದಿದೆ ಅದೇ “ಶೆಪ್ ಚಿದಂಬರ”.
ಅನಿರುದ್ದ ಜಟ್ಕರ್ ಕನ್ನಡಿಗರಿಗೆ ಪರಿಚಿತ ನಟ. ಇತ್ತೀಚೆಗೆ ಇವರು ಕಿರುತೆರೆಗೂ ಕಾಲಿಟ್ಟು, ಅಲ್ಲಿಯೂ ತಮ್ಮ ಚಾಪನ್ನು ಮೂಡಿಸಿದ್ದಾರೆ. 2018 ರಲ್ಲಿ ತೆರೆಕಂಡ ರಾಜಸಿಂಹ ಸಿನೆಮಾ ನಂತರ ಅನಿರುದ್ದ ಅವರು ಒಂದು ಹಾಸ್ಯಮಯ ಸಿನೆಮಾದೊಂದಿಗೆ ಮುಕ್ಯ ಪಾತ್ರದಲ್ಲಿ ಮತ್ತೆ ಹಿರಿತೆರೆಗೆ ಬಂದಿದ್ದಾರೆ. ಇವರೊಡನೆ ಪಂಚರಂಗಿ ಸಿನೆಮಾ ಕ್ಯಾತಿಯ ನಿದಿ ಸುಬ್ಬಯ್ಯ ಅವರು ಸಹ ಈ ಸಿನೆಮಾ ಮೂಲಕ ಮತ್ತೊಮ್ಮೆ ದೊಡ್ಡಪರದೆಗೆ ಮರಳಿದ್ದಾರೆ.
ಸಾಲ ತೀರಿಸಿ ತನ್ನ ಮನೆಯನ್ನು ಬಿಡಿಸಿಕೊಳ್ಳಬೇಕೆಂಬ ಆಸೆ ಹೊತ್ತು ದುಡಿಯುತ್ತಿರುವ ನಾಯಕ ಶೆಪ್ (ಬಾಣಸಿಗ) ಚಿದಂಬರ (ಅನಿರುದ್ದ). ಈತನ ಸುಕ ಹಾಗೂ ದುಕ್ಕ ಎರಡಲ್ಲೂ ಜೊತೆ ನಿಲ್ಲುವ ಪ್ರೇಯಸಿ ಅನು (ರೆಚೆಲ್ ಡೇವಿಡ್). ತನಗಾಗಿ ಒಂದು ಕೆಲಸ ಮಾಡಿಕೊಟ್ಟರೆ, ಶೆಪ್ ಚಿದಂಬರನ ಮನೆಯನ್ನು ಮತ್ತೆ ಪಡೆಯಲು ಸಹಾಯ ಮಾಡುವೆನೆಂದು ಬರವಸೆ ನೀಡುವ ಮೋನಾ (ನಿದಿ ಸುಬ್ಬಯ್ಯ). ಮನೆಯನ್ನು ಪಡೆಯುವ ಆಸೆಯಿಂದ ಒಪ್ಪಿಕೊಳ್ಳುವ ಚಿದಂಬರ ಮುಂದೆ ಯಾವ ರೀತಿ ಸಮಸ್ಯೆಯ ಸುಳಿಗೆ ಸಿಲುಕುವನು ಎಂಬುದೇ ಸಿನೆಮಾದ ಕತೆ.
ಸಿನೆಮಾದಲ್ಲಿ ನಾಯಕ ಅನಿರುದ್ದ ಹಾಗೂ ಪೊಲೀಸ್ ಪಾತ್ರದಲ್ಲಿ ನಟಿಸಿರುವ ಶರತ್ ಲೋಹಿತಾಶ್ವ ಅವರ ಪಾತ್ರಗಳೇ ಸಿನೆಮಾದ ಹೈಲೆಟ್ ಎನ್ನಬಹುದು. ಅನಿರುದ್ದ ಅವರ ಕಾಮಿಡಿ ಟೈಮಿಂಗ್ ಚೆನ್ನಾಗಿದ್ದು, ಶರತ್ ಲೋಹಿತಾಶ್ವ ಅವರು ರಾಮ್ ಸಿನೆಮಾದ ನಂತರ ಈ ಸಿನಿಮಾದಲ್ಲಿ ಮತ್ತೊಮ್ಮೆ ನೋಡುಗರನ್ನು ನಗಿಸುತ್ತಾರೆ. ಇನ್ನುಳಿದಂತೆ ನಾಯಕಿಯ ಪಾತ್ರದಲ್ಲಿ ರೆಚೆಲ್ ಡೇವಿಡ್ ಹಾಗೂ ಸಹ ನಟರಾಗಿ ನಿದಿ ಸುಬ್ಬಯ್ಯ, ಶಿವಮಣಿ, ಪ್ರೆಂಚ್ ಬಿರಿಯಾನಿ ಕ್ಯಾತಿಯ ಮಹಾಂತೇಶ್ ಹಿರೇಮಟ್, ಕೆ. ಎಸ್. ಶ್ರೀದರ್ ಕಿರಿಕ್ ಪಾರ‍್ಟಿ ಕ್ಯಾತಿಯ ರಗು ರಾಮನಕೊಪ್ಪ ಹಾಗೂ ಇತರರು ನಟಿಸಿದ್ದಾರೆ.
ಎಂ. ಆನಂದ್ ರಾಜ್ ಅವರು ಈ ಸಿನಿಮಾವನ್ನು ನಿರ‍್ದೇಶಿಸಿದ್ದು, ಶ್ರೀ ಗಣೇಶ್ ಪರಶುರಾಮ್ ಅವರ ಚಿತ್ರಕತೆ, ಉದಯ್ ಲೀಲಾ ಅವರ ಸಿನೆಮಾಟೋಗ್ರಾಪಿ, ವಿಜೇತ್ ಚಂದ್ರ ಅವರ ಎಡಿಟಿಂಗ್, ರಿತ್ವಿಕ್ ಮುರಳಿದರ ಅವರ ಸಂಗೀತವಿದ್ದು, ದಮ್ತಿ ಪಿಕ್ಚರ‍್ಸ್ ಅವರು ಈ ಸಿನಿಮಾವನ್ನು ನಿರ‍್ಮಿಸಿದ್ದಾರೆ. ವಿಜೇತ್ ಅವರ ಎಡಿಟಿಂಗ್ ಸಿನೆಮಾದಲ್ಲಿ ಚೆನ್ನಾಗಿ ಕೆಲಸ ಮಾಡಿದೆ.
ಈ ಸಿನೆಮಾ 14 ಜೂನ್ 2024 ರಲ್ಲಿ ಬಿಡುಗಡೆಯಾಗಿದ್ದು, ಮನೆ ಮಂದಿ ಕೂತು ಒಂದು ಹಾಸ್ಯ ಸಿನೆಮಾ ನೋಡಬೇಕೆಂದಿದ್ದರೆ ಈಗ ಅಮೇಜಾನ್ ಪ್ರೈಮ್ ನಲ್ಲಿ ನೋಡಬಹುದು.
(ಚಿತ್ರಸೆಲೆ: in.bookmyshow.com )
ಇತ್ತೀಚಿನ ಅನಿಸಿಕೆಗಳು