ಕವಿತೆ: ಓ ನೆನಪೇ

– ವೆಂಕಟೇಶ ಚಾಗಿ.

memories, ನೆನಪು, ಮರೆವು,

ಈ ನೆನಪುಗಳು ಅದೆಶ್ಟು ಆಳ
ಎಂದಿಗೂ ನಿಲುಕುತ್ತಿಲ್ಲ
ಎಂದೆಂದಿಗೂ ಮರೆಯಾಗುತ್ತಿಲ್ಲ
ನೆನಪುಗಳು ಮತ್ತೆ ಮತ್ತೆ ನೆನಪಾಗಿವೆ
ನೆನಪಿನಿಂದಲೇ ನೆನಪುಗಳ
ಪುನರ್ ಜನನವಾಗುತಿದೆ
ನೆನಪೇ ನೀನೆಂದಿಗೂ ನೆನಪಾಗು

ಅದೆಶ್ಟೇ ದಿನಗಳು ಬರಲಿ ಬಿಡು
ಅದೆಶ್ಟೋ ನೋವುಗಳು ಬರಲಿ
ನೆನಪುಗಳು ಮತ್ತೆ ನೆನಪುಗಳು
ತುಂಬುತಿವೆ ಸಾಕಾಗುವಶ್ಟು
ಪ್ರತಿ ನೆನಪಿನಲ್ಲೂ ಮತ್ತೊಂದು ನೆನಪು
ನೆನಪಿನಿಂದಲೇ ಮತ್ತೊಂದು ನೆನಪು
ನೆನಪೇ ನೀನೆಂದಿಗೂ ನೆನಪಾಗು

ಕದಿಯಲು ಯಾರಿಗೂ ಬಾರದು
ಮರೆಯಲು ಎಂದಿಗೂ ಆಗದು
ಹಂಚಿಕೊಳ್ಳಲು ಅದು ವಸ್ತುವೇ
ಕಳೆದುಕೊಳ್ಳಲು ಅದು ದ್ರವ್ಯವೇ
ಮಾರಲಾಗದು ಕೊಳ್ಳಲೂ ಆಗದು
ಅದು ನನ್ನದೇ ಆಸ್ತಿ ಮರೆಯದ ಆಸ್ತಿ
ನೆನಪೇ ನೀನೆಂದಿಗೂ ನೆನಪಾಗು

ಆತ್ಮಕ್ಕೆ ಅಂಟಿದ ನೂರು ನೆನಪುಗಳು
ದೇಹದೊಳಗೆ ಎಲ್ಲಿಯೂ ಕಾಣವು
ಈ ಬದುಕೇ ನಶ್ವರ ಎಂದೆನಿಸಿದರು
ನೆನಪು ನೀನೆಂದಿಗೂ ಶಾಶ್ವತ ಶಾಶ್ವತ
ಮತ್ತೆ ಮತ್ತೆ ಮನಸ್ಸನು ಅರಳಿಸು
ಮತ್ತೆ ಮತ್ತೆ ಬದುಕನೂ ಕೆರಳಿಸು
ನೆನಪೇ ನೀನೆಂದಿಗೂ ನೆನಪಾಗು
ನೆನಪೇ ನೀನೆಂದಿಗೂ ಬದುಕಾಗು

(ಚಿತ್ರ ಸೆಲೆ: healthtap.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: