ಕವಿತೆ: ಏಕೆ ಹೇಳಿದೆ

– ವೆಂಕಟೇಶ ಚಾಗಿ.

ಮರಕ್ಕೆ ಜೀವವಿದೆ ಎಂದು
ಏಕೆ ಹೇಳಿದೆ
ಮರವನ್ನು ಕತ್ತರಿಸಿದರೂ
ಮರವಿದ್ದ ಜಾಗವನ್ನು ಆಕ್ರಮಿಸಿದರೂ
ನ್ಯಾಯಾಲಯದಲ್ಲಿ ಮೊಕದ್ದಮೆ
ಹೂಡುವವರು ಯಾರೂ ಇಲ್ಲ
ನ್ಯಾಯವನ್ನು ಹೇಳುವವರಿಗೆ
ಮರದ ನ್ಯಾಯ ಗೊತ್ತಿಲ್ಲ
ಆದರೂ ಮರಕ್ಕೆ ಜೀವವಿದೆ
ವಾದಿಸಲಾಗಿದೆ ದ್ರುಡೀಕರಿಸಲಾಗಿದೆ
ನ್ಯಾಯ ನೀಡಲಾಗಿಲ್ಲ ಅಶ್ಟೇ

ದೇವರು ಇರುವನೆಂದು
ಏಕೆ ಹೇಳಿದೆ
ದೇವರ ಹೆಸರಿನಲ್ಲಿ ದರ‍್ಮಗಳು
ಯುದ್ದ ಗೈಯುತ್ತಿವೆ ಸ್ಪರ‍್ದೆಗಿಳಿದಿವೆ
ದೇವರ ತ್ರುಪ್ತಿಗಾಗಿ ದುಡಿಯಲಾಗಿದೆ
ಆದರೆ ದೇವರು ಏನನ್ನೂ ಕೇಳಿಲ್ಲ
ದಾವೆಯನ್ನೂ ಹೂಡಿಲ್ಲ
ಆದರೂ ದೇವರು ಎಲ್ಲೆಡೆ ಇದ್ದಾನೆ

ಬದುಕು ಸುಂದರವಾಗಿದೆ ಎಂದು
ಏಕೆ ಹೇಳಿದೆ
ಬದುಕಿಗಾಗಿ ನಾನಾ ಕಸರತ್ತುಗಳು
ನೂರಾರು ವೇಶಗಳು
ಹಲವಾರು ಪವಾಡಗಳು
ಅನ್ಯಾಯಗಳು ಅನೀತಿಗಳು ಅಮಾನ್ಯಗಳು
ಬಯದ ಕಾರ‍್ಮೋಡ ಹಿಂಸೆಯ ನರ‍್ತನ
ಆದರೂ ಬದುಕು ಸುಂದರವಾಗಿದೆ
ಬದುಕಿಗೆ ಬೆಲೆ ತೆರಲಾಗಿದೆ
ಬದುಕನ್ನು ಬದುಕಿಸಲಾಗಿದೆ

(ಚಿತ್ರ ಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: