ಕಿರು ಬರಹ: ನಡೆದಶ್ಟೂ ದಾರಿ ಇದೆ ಪಡೆದಶ್ಟೂ ಬಾಗ್ಯವಿದೆ

– .

“ಸಾಮ್ರಾಟನಾಗಲು ನಿನಗೆ ಅದ್ರುಶ್ಟ ರೇಕೆಯೇ ಇಲ್ಲ” ಎಂದ ಜ್ಯೋತಿಶಿಯ ನುಡಿಯ ಬದಲಿಗೆ ನೆಪೋಲಿಯನ್ ಬೋನಾಪಾರ‍್ಟೆ ಆ ಅದ್ರುಶ್ಟ ರೇಕೆ ಎಲ್ಲಿರಬೇಕೆಂದು ಕೇಳಿ ತಿಳಿದು, ಅಂಗೈಯ ಮೇಲೆ ಚೂಪಾದ ಚೂರಿಯಿಂದ ರೇಕೆಯನ್ನು ನಿರ‍್ಮಿಸಿಕೊಂಡವನ ಆತ್ಮಸ್ತೈರ‍್ಯ ನಿಜಕ್ಕೂ ಮೆಚ್ಚಿಕೊಳ್ಳಬೇಕು. ‘ನನ್ನ ಬವಿಶ್ಯದ ಶಿಲ್ಪಿ ನಾನೇ’ ಎನ್ನುವ ದ್ರುಡ ಸಂಕಲ್ಪ ನಿಜಕ್ಕೂ ಮೆಚ್ಚಿಕೊಳ್ಳುವಂತಹದ್ದು. ಚಟುವಟಿಕೆಯುಕ್ತ ಕ್ರಿಯಾಶೀಲ ಮನೋಬಾವದವರಿಗೆ ನಡೆದಶ್ಟೂ ಹೊಸ ಹೊಸ ದಾರಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ, ನಾವು ತೊಡಗಿಕೊಂಡಶ್ಟು ಬಾಗ್ಯ ಬಾಚಿ ಬುಟ್ಟಿಗೆ ತುಂಬಿಕೊಳ್ಳಬಹುದು.

ನಮ್ಮ ಓದಿನಿಂದ ಹಿಡಿದು ಕೆಲಸದವರೆಗೆ, ಮನೆಯ ಮಾಲೀಕನಾಗುವುದರಿಂದ ಹಿಡಿದು ದೇಶವನ್ನು ಆಳುವವನಾಗುವವರೆಗೆ ದ್ರುಡ ಮನಸ್ಸಿನ ಕಟಿಣ ಪ್ರಯತ್ನ ಇದ್ದರೆ ನಾವು ಅದ್ರುಶ್ಟದ ಮೊರೆ ಹೋಗುವ ಅವಕಾಶವೇ ಇರುವುದಿಲ್ಲ. ನಮ್ಮ ಕನಸು, ನಮ್ಮ ಆಲೋಚನೆ, ನಮ್ಮ ಕಟಿಣ ಪರಿಶ್ರಮ ನಮ್ಮನ್ನು ಉತ್ತುಂಗಕ್ಕೆ ಒಯ್ಯುತ್ತದೆ. ಆದರೆ ವಿದ್ಯಾರ‍್ತಿ ದೆಸೆಯಲ್ಲಿ, ನವ ಯೌವ್ವನದ ದಿನಗಳಲ್ಲಿ ಬಹಳಶ್ಟು ಯುವಕರ ಮನಸ್ಸು ಒಂದೆಡೆ ಹಿಡಿದಿಡಲಾರದೆ ಚಂಚಲತೆಯಿಂದ ಕೂಡಿರುತ್ತದೆ. ಸಾಗುವ ದಾರಿ ಕಾಣದೆ ಕತ್ತಲಾವರಿಸುತ್ತದೆ. ನಮ್ಮ ಗುರಿ ಸಾದನೆಯಿಂದ ವಿಮುಕರಾಗಿ ಕ್ಶಣಿಕ ಸಂತಸ ನೀಡುವ ಅನಪೇಕ್ಶಿತ ವಿಚಾರಗಳಲ್ಲಿ ಮನ ಗಹನವಾಗಿ ನೆಟ್ಟು, ಮಾನಸಿಕ ಸಂಗರ‍್ಶಕ್ಕೆ ಸಿಲುಕಿ ಸೋಲನ್ನು ಅನುಬವಿಸುತ್ತೇವೆ. ತಾನು ನಡೆಯಬೇಕಾದ ಸಹಜ ದಾರಿಯನ್ನು ಮರೆತು ಅಬಾಗ್ಯನಾಗುತ್ತಾನೆ. ಇದರಿಂದ ಆತ ಬೇಗ ನಿರಾಶವಾದಿಯಾಗಿ ಬಿಡುತ್ತಾನೆ.

ನಾವು ಮನುಶ್ಯರಾಗಿ ಜನ್ಮ ಪಡೆದಿದ್ದೇವೆ, ನಮಗಾಗಿ ದೇವರು ವಿಶೇಶ ಅಂಗಾಂಗಳಿಂದ ಕೂಡಿದ ದೇಹ ರಚನೆ ನೀಡಿದ್ದಾನೆ. ನಮಗೆ ಆಲೋಚನಾ ಶಕ್ತಿ, ವಿಚಾರ ಶಕ್ತಿ ಕೊಟ್ಟಿದ್ದಾನೆ ಎಂದ ಮೇಲೆ ಅದನ್ನು ನಾವು ಸದ್ಬಳಕೆ ಮಾಡಿಕೊಂಡು ಸರಿ ದಾರಿಯಲ್ಲಿ ನಡೆಯಬೇಕು. ನಮ್ಮ ಗುರಿ ಸಾದನೆಯತ್ತ ದ್ರುಶ್ಟಿ ನೆಟ್ಟು ಕಟಿಣ ಪರಿಶ್ರಮ ಪಟ್ಟು ಸಾದಿಸಿದರೆ ನಾವಂದುಕೊಂಡ ಪಲಿತಾಂಶ ಕಟ್ಟಿಟ್ಟ ಬುತ್ತಿ. ಅದಕ್ಕಾಗಿಯೇ ಹೇಳುವುದು ನಡೆಯುವ ತಾಕತ್ತಿದ್ದವನಿಗೆ ನಡೆದಶ್ಟೂ ದಾರಿಯಿದೆ ಮತ್ತು ನಾವು ಬಯಸಿದಶ್ಟೂ ಬಾಗ್ಯವನ್ನು ನಮ್ಮ ಬತ್ತಳಿಕೆಗೆ ತುಂಬಿಕೊಳ್ಳಬಹುದು. ‘ನನ್ನ ಬವಿಶ್ಯದ ನಿರ‍್ಮಾತ್ರು ನಾನೇ’ ಎಂಬ ಮಾತಿನ ಮೇಲೆ ಬಲವಾದ ನಂಬಿಕೆಯಿಟ್ಟು ಮುಂದೆ ಸಾಗಬೇಕಶ್ಟೇ, ಯಶಸ್ಸು ಕಂಡಿತ ನಮ್ಮದೇ…

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: