ವಚನ: ಒಬ್ಬರ ಮನವ ನೋಯಿಸಿ
ಒಬ್ಬರ ಮನವ ನೋಯಿಸಿ
ಒಬ್ಬರ ಮನವ ಘಾತವ ಮಾಡಿ
ಗಂಗೆಯ ಮುಳುಗಿದಡೇನಾಗುವುದಯ್ಯಾ
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು
ಕಳಂಕ ಬಿಡದಾಯಿತಯ್ಯಾ
ಅದು ಕಾರಣ, ಒಬ್ಬರ ಮನವ ನೋಯಿಸದವನೆ
ಒಬ್ಬರ ಮನವ ಘಾತವ ಮಾಡದವನೆ ಪರಮಪಾವನ ನೋಡಾ ಕಪಿಲ ಸಿದ್ಧಮಲ್ಲಿಕಾರ್‍ಜುನ
ಈ ಮೇಲಿನ ವಚನದ ಬಾವಾರ್‍ತ ಹೀಗಿದೆ.
ಹಾವಿಗೆ ಹಲ್ಲಿನಲ್ಲಿ ವಿಶ, ಚೇಳಿಗೆ ಬಾಲದ ಕೊಂಡಿಯಲ್ಲಿ ವಿಶ, ಮನುಶ್ಯನಿಗೆ ಮೈಯೆಲ್ಲಾ ವಿಶ ಎಂಬಂತೆ, ಸ್ವಾರ‍್ತ ಲಾಲಸೆಯಲ್ಲಿ, ದ್ವೇಶಾಸೂಯೆಯಲ್ಲಿ ಕೊತ ಕೊತ ಬೇಯುವ ಮನುಶ್ಯನ ಮೈಯ ತುಂಬ ವಿಶ ತುಂಬಿಕೊಂಡಿದೆ, ಗಾತಕ ಬುದ್ದಿ ಮನುಶ್ಯರಲ್ಲೆ ಹೆಚ್ಚು. ಹೊಟ್ಟೆ ತುಂಬ ತಿಂದ ಸಿಂಹ ಸುಮ್ಮನೆ ಮಲಗೀತು, ಹೊಟ್ಟೆ ತುಂಬಿದ ಮನುಶ್ಯ ಸುಮ್ಮನೆ ಮಲಗಲಾರ. ಬಹುಶಹ ಮನುಶ್ಯನ ಹೊಟ್ಟೆ ತುಂಬಿದ ಮೇಲೆ ಗಾತಕ ಬುದ್ದಿ ಹೆಚ್ಚು ಜಾಗ್ರುತವಾಗುತ್ತದೆ
12 ನೇ ಶತಮಾನದ ಶರಣ ಪರಂಪರೆಯಲ್ಲಿ ಬೆಳೆದುಬಂದ ಕರ‍್ಮಯೋಗಿ ಸಿದ್ದರಾಮೇಶ್ವರರು ಕಪಿಲ ಸಿದ್ದಮಲ್ಲಿಕಾರ‍್ಜುನನ ಅಂಕಿತ ನಾಮದಲ್ಲಿ ವಚನಗಳನ್ನು ರಚಿಸುತ್ತ, ಮನುಶ್ಯನಾದವನು ತಾನೂ ಬದುಕಿ ಇನ್ನೊಬ್ಬರನ್ನು ಬದುಕಲು ಅನುವು ಮಾಡಿಕೊಡಬೇಕು. ಬದಲಿಗೆ ಒಬ್ಬರ ಮನ ನೋಯಿಸಿ ಮತ್ತೊಬ್ಬರ ಮನಸ್ಸಿಗೆ ಆಗಾತವ ಮಾಡಿ ನಡೆದರೆ ಅದಾವ ಪುರುಶಾರ‍್ತ ಸಾದನೆಯಾಗುತ್ತದೆ? ಅಂತವರು ಗಂಗೆಯಲ್ಲಿ ಮುಳುಗಿ ಎದ್ದರೂ ಕಳಂಕ ರಹಿತರಾಗುವುದಿಲ್ಲ.
ಯಾವ ಮನುಶ್ಯ ಒಬ್ಬರ ಮನವನ್ನು ನೋಯಿಸದೆ, ಇನ್ನೊಬ್ಬರ ಮನಸ್ಸನ್ನು ಗಾತಗೊಳಿಸದೇ ಬದುಕುತ್ತಾನೋ ಅವನು ಪರಮ ಪಾವನನು. ಆದ್ದರಿಂದ ನೀವು ನಿಮ್ಮ ಪಾಡಿಗೆ ಬದುಕಿ, ಇನ್ನೊಬ್ಬರನ್ನು ಅವರ ಪಾಡಿಗೆ ಬದುಕಲು ಬಿಡಿ ಎಂಬ ಸರಳ ಬಾವಾರ‍್ತದ ಮಾನವೀಯ ಕಳಕಳಿಯುಳ್ಳ ವಚನವನ್ನು ರಚಿಸಿ ಕಪಿಲ ಸಿದ್ದಮಲ್ಲಿಕಾರ‍್ಜುನನಿಗೆ ಸಮರ‍್ಪಿಸಿದ್ದಾರೆ. ನಾವಾದರೂ ಹೀಗೆ ಬದುಕಿ ಆದರ‍್ಶರಾಗಬೇಕೆಂಬುದು ಈ ವಚನದ ಬಾವಾರ‍್ತವಾಗಿದೆ.
(ಚಿತ್ರಸೆಲೆ: vijaykarnataka.com)
ಇತ್ತೀಚಿನ ಅನಿಸಿಕೆಗಳು