ಕವಿತೆ: ನಿಲ್ಲಿಸ ಬಲ್ಲೆಯಾ

– .

ನೀಲಿ ಗಗನಕೆ ಕರಿಯ
ಬಣ್ಣ ಬಳಿಯಲು ಏಣಿ
ಹಾಕುವೆಯಾ?

ಬತ್ತಿ ಮಿಡಿವ ಕೆರೆ
ತೊರೆಗಳಿಗೆ ಸಂತೈಸಿ
ಜೀವ ಚಿಲುಮೆ ತುಂಬ ಬಲ್ಲೆಯಾ?

ನಿನ್ನೊಲುಮೆಯ ಪ್ರಾರ‍್ತನೆ
ಆಗಸ ತಲುಪಿ
ಏಣಿ ಬುವಿಗಿಳಿದು
ನೀನೇರಿ ಏಣಿ ಅಮಿತ
ನೀಲ ನಬದಗಲಕೂ
ಕರಿಯ ಬಣ್ಣವ ಬಳಿದಿರಲು
ಆಗಸವ್ಯಾವುದು, ನೆಲವ್ಯಾವುದು?
ಕಾಣದಾಗಿದೆಯಲ್ಲ

ಮಳೆಯ ಆವಾಂತರಕೆ
ಇಳೆ ನಡುಗಿ ಉಸಿರುಗಟ್ಟಿಸುವಶ್ಟು
ಕರಿ ಬಣ್ಣ ಬಳಿದೆ ಯಾಕೆ?

ನೆಲ ಹಾಸಿನ ಹಸಿರು
ಒರತೆಯಾಗಿ ಹರಿದು
ಕೆರೆ ತೊರೆ ನದಿಗಳು
ಉಗ್ರರೂಪ ತಾಳಿ

ಒಂದೊಂದೇ ಆಪೋಶನ
ಗೈಯುತಿರಲು ನಿನ್ನ
ಪ್ರಾರ‍್ತನೆ ವಿನಾಶಕೆ
ಬೈರವಿ ರಾಗ ಹಾಡುತಿದೆಯಾ?

ನೀನೀಗ ಮತ್ತದೆ
ಪ್ರಕ್ರುತಿ ಮಾತೆಗೆ ಹೊರಳಿ
ಪ್ರಾರ‍್ತಿಸಿ ಬಳಿದ ಕರಿಯ
ಬಣ್ಣ ಅಳಿಸಿ ಬಿಳಿ ಬಣ್ಣ
ಬರೆಯ ಬಲ್ಲೆಯಾ?

ನಿನ್ನೊಲುಮೆಯ ಬಾವ
ತುಂಬಿದ ಮಾತುಗಳಿಂದ
ಹಸಿರಮ್ಮನ ಕಿವಿ ಕಚ್ಚಿ
ಉಗ್ರಕೋಪ ಇಳಿಸಿ
ಶಾಂತಗೊಳಿಸಬಲ್ಲೆಯಾ?

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks