ಏನಿದು ಕೋಲ್ಡ್ ಪ್ಲೇ?

– ಕಿಶೋರ್ ಕುಮಾರ್.

ಕೆಲವು ದಿನಗಳಿಂದ “ಕೋಲ್ಡ್ ಪ್ಲೇ” ಅನ್ನೋ ಹೆಸರು ಹೆಚ್ಚು ಸುದ್ದಿಯಲ್ಲಿದೆ. ಕೆಲವರಂತೂ ಕೋಲ್ಡ್ ಪ್ಲೇ ಟಿಕೆಟ್ ಗಾಗಿ ಎಶ್ಟೊಂದು ಪ್ರಯತ್ನ ಪಟ್ಟೆ ಗೊತ್ತಾ, ಆದ್ರೂ ಸಿಗ್ಲಿಲ್ಲ, ಈಗ ಬ್ಲ್ಯಾಕ್ ಮಾರ‍್ಕೆಟ್ ನಲ್ಲಿ ಒಂದು ಟಿಕೆಟ್ ಬೆಲೆ 4 ಲಕ್ಶ ಅಂತೆ, ಹೀಗೆಲ್ಲಾ ಮಾತಾಡೋದನ್ನ ಕೇಳಿರುತ್ತೇವೆ. ಏನಿದು ಕೋಲ್ಡ್ ಪ್ಲೇ, ಚಳಿಯಲ್ಲಿ ಆಡೋ ಆಟನ? ಒಂದು ಆಟಕ್ಕಾಗಿ ಮಂದಿ ಇಶ್ಟೊಂದು ತಲೆ ಕೆಡುಸ್ಕೊಂಡಿದ್ದಾರ? ಅದಕ್ಕಾಗಿ ಲಕ್ಶ ಕೊಡುವವರೂ ಇದ್ದಾರ ಅನ್ನೋ ಕೇಳ್ವಿಗಳು ತಲೆಯಲ್ಲಿ ಹರಿದಾಡುತ್ತಾ ಇವೆಯ?

ಕೋಲ್ಡ್ ಪ್ಲೇ 1997 ರಲ್ಲಿ ಮೊದಲಾದ ಒಂದು ಬ್ರಿಟೀಶ್ ಸಂಗೀತ ತಂಡ (ಮ್ಯೂಸಿಕ್ ಬ್ಯಾಂಡ್). ಇದು 5 ಸದಸ್ಯರುಗಳ ತಂಡವಾಗಿದೆ. ಈ ತಂಡದಲ್ಲಿ ಗಾಯಕ ಮತ್ತು ಪಿಯಾನೋ ವಾದಕ ಕ್ರಿಸ್ ಮಾರ್‍ಟಿನ್, ಗಿಟಾರ್ ವಾದಕ ಜಾನಿ ಬಕ್ಲಾಂಡ್, ಬಾಸ್ ಗಿಟಾ‍ರ್ ವಾದಕ ಗಾಯ್ ಬೆರಿಮೆನ್, ಡ್ರಮ್ ಮತ್ತು ತಾಳವಾದಕ ವಿಲ್ ಚಾಂಪಿಯನ್, ಹಾಗೂ ವ್ಯವಸ್ತಾಪಕ ಪಿಲ್ ಹಾ‍ರ್‍ವಿ ಇದ್ದಾರೆ.

ಈ ತಂಡದ ಸದಸ್ಯರುಗಳಾದ ಕ್ರಿಸ್ ಮಾರ್‍ಟಿನ್ ಹಾಗೂ ಜಾನಿ ಬಕ್ಲಾಂಡ್ 1997 ರಲ್ಲಿ ಯುನಿವರ್‍ಸಿಟಿ ಕಾಲೇಜ್ ಲಂಡನ್ (UCL) ನಲ್ಲಿ ಬೇಟಿಯಾದರು, ಕೆಲದಿನಗಳ ನಂತರ ಗಾಯ್ ಬೆರಿಮೆನ್ ಬೇಟಿಯಾದಮೇಲೆ ತಮ್ಮ ತಂಡವನ್ನು ಬಿಗ್ ಪ್ಯಾಟ್ ನಾಯ್ಸಸ್ (Big Fat Noises) ಎಂದು ಕರೆದರು. 1998 ರಲ್ಲಿ ವಿಲ್ ಚಾಂಪಿಯನ್ ಅವರು ತಂಡಕ್ಕೆ ಸೇರ್‍ಪಡೆಗೊಂಡರು, ತಮ್ಮ ತಂಡಕ್ಕೆ ಇನ್ನೂ ಸರಿಯಾದ ಹೆಸರಿಡದಿದ್ದ ಕಾರಣ, 16 ಜನವರಿ 1998 ರಂದು ಕ್ಯಾಮ್ಡೆನ್ ನಲ್ಲಿ (camden) ನಡೆದ ತಮ್ಮ ಮೊದಲ ಕಾರ್‍ಯಕ್ರಮಕ್ಕಾಗಿ ತಂಡವನ್ನು ಸ್ಟಾರ್‍ಪಿಶ್ (starfish) ಎಂದು ಕರೆಯಲಾಯಿತು, ಇದಾದ ಕೆಲವು ವಾರಗಳ ನಂತರ ತಂಡದವನ್ನು ಕೋಲ್ಡ್ ಪ್ಲೇ ಎಂದು ಕರೆಯಲಾಯಿತು.

ಮೇ 1998 ರಲ್ಲಿ ತಮ್ಮ ತಂಡದ ಮೊದಲ ಸ್ವಂತ ಆಲ್ಬಮ್ ಸೇಪ್ಟಿ (safety) ಎಕ್ಸ್ಟೆಂಡೆಡ್ ಪ್ಲೇ (EP) ಯನ್ನು ಬಿಡುಗಡೆ ಮಾಡಲಾಯಿತು. ಇದಕ್ಕೆ ಹಣ ಹೂಡಿದವರು ಕ್ರಿಸ್ ಮಾರ್‍ಟಿನ್ ಅವರ ಗೆಳೆಯ ಪಿಲ್ ಹಾ‍ರ್‍ವಿ. ಸೇಪ್ಟಿ ಆಲ್ಬಮ್ ನ ಮೊದಲ ಕಾಪಿಯನ್ನು ಕ್ರಿಸ್ ಮಾರ್‍ಟಿನ್ ಅವರು ತಮ್ಮ ರೂಮ್ ಮೇಟ್ ಗೆ 3 ಯೂರೋಗಳಿಗೆ ಮಾರಾಟ ಮಾಡಿದ್ದರಂತೆ. ಹೀಗೆ ಮೊದಲಾದ ಕೋಲ್ಡ್ ಪ್ಲೇ ಇಂದು ಪ್ರಪಂಚದಾದ್ಯಂತ ಕೋಟ್ಯಾಂತರ ರಸಿಕರನ್ನು ಗಳಿಸಿದೆ.

ಇದುವರೆಗೂ ಹಲವಾರು ಮ್ಯೂಸಿಕ್ ರೆಕಾರ್‍ಡಿಂಗ್ ಗಳು, ವೀಡಿಯೋ ಮ್ಯೂಸಿಕ್ ರೆಕಾರ್‍ಡಿಂಗ್ ಗಳನ್ನು ಮಾಡಿರುವ ಕೋಲ್ಡ್ ಪ್ಲೇ ತಂಡ, 2000 ನೇ ಇಸವಿಯಿಂದ ಇಲ್ಲಿಯವರೆಗೂ ಒಟ್ಟು 8 ಲೈವ್ ಕಾನ್ಸರ್‍ಟ್ ಟೂರ್ ಗಳನ್ನು ಮಾಡಿದೆ. ಈ ತಂಡದ ಮೊದಲ ಲೈವ್ ಕಾನ್ಸರ್‍ಟ್ ಟೂರ್ ಹೆಸರು ‘ಪ್ಯಾರಾಚೂಟ್ ಟೂ‍ರ್’ 2000-2001 ರ ವರೆಗೆ ನಡೆದಿತ್ತು. ಈ ಟೂ‍ರ್ ನಲ್ಲಿ ಒಟ್ಟು 131 ಕಾರ್‍ಯಕ್ರಮಗಳನ್ನು ನೀಡಿದ್ದ ತಂಡವು ಅಂದಾಜು 4.2 ಮಿಲಿಯನ್ ಡಾಲ‍ರ್ ಗಳನ್ನು ಗಳಿಸಿತ್ತು. ತಮ್ಮ 7 ನೇ ಲೈವ್ ಕಾನ್ಸರ್‍ಟ್ ಟೂರ್ ‘ಎ ಹೆಡ್ ಪುಲ್ ಆಪ್ ಡ್ರೀಮ್ಸ್ ಟೂ‍ರ್’ (2016-17) ನಲ್ಲಿ ಮೊದಲ ಬಾರಿಗೆ ಇಂಡಿಯಾಗೆ ಕಾಲಿಟ್ಟ ಕೋಲ್ಡ್ ಪ್ಲೇ, 19 ನವೆಂಬರ್ 2016 ರಲ್ಲಿ ಮುಂಬೈ ನ ಎಮ್.ಎಮ್.ಆರ್.ಡಿ.ಎ ಮೈದಾನದಲ್ಲಿ ತಮ್ಮ ಕಾರ್‍ಯಕ್ರಮವನ್ನು ನಡೆಸಿಕೊಟ್ಟಿತ್ತು.

2022ರಿಂದ ನಡೆಯುತ್ತಿರುವ 8 ನೇ ಲೈವ್ ಕಾನ್ಸರ್‍ಟ್ ಟೂರ್ ‘ಮ್ಯೂಸಿಕ್ ಆಪ್ ದ ಸ್ಪಿಯ‍ರ್‍ಸ್ ವರ್‍ಲ್ಡ್ ಟೂ‍ರ್’ (2022-25) ನಲ್ಲಿ ಮುಂಬೈ ನ ಡಿ. ವೈ. ಪಾಟೀಲ್ ಆಟದ ಮೈದಾನದಲ್ಲಿ ಮುಂಬರುವ 19 ಜನವರಿ 2025 ರಿಂದ 21 ಜನವರಿ 2025 ರ ವರೆಗೆ ಒಟ್ಟು 3 ಕಾರ್‍ಯಕ್ರಮಗಳನ್ನು ನಡೆಸಿಕೊಡಲಿದೆ ಕೋಲ್ಡ್ ಪ್ಲೇ ತಂಡ. ಮೊದಲು 2 ಕಾರ್‍ಯಕ್ರಮಗಳು ಮಾತ್ರ ನಿಗದಿಯಾಗಿದ್ದವು, ಆದರೆ ಸಿಕ್ಕ ಸ್ಪಂದನೆಯಿಂದ ಮತ್ತೊಂದು ಕಾರ್‍ಯಕ್ರಮವನ್ನು ಸೇರಿಸಲಾಗಿದೆ.

22 ಸೆಪ್ಟೆಂಬರ್ 2024 ರಂದು ಮದ್ಯಾಹ್ನ 12 ಕ್ಕೆ ಬುಕ್ ಮೈ ಶೋ ನಲ್ಲಿ ಇದರ ಟಿಕೆಟ್ ಗಳ ಬುಕ್ಕಿಂಗ್ ಮೊದಲಾಗಿ, ಒಮ್ಮೆಲೆ ಹೆಚ್ಚು ಮಂದಿ ಮುಗಿಬಿದ್ದಿದ್ದರ ಪರಿಣಾಮ ಬುಕ್ ಮೈ ಶೋ ವೆಬ್ಸೈಟ್ ಹಾಗೂ ಬಳಕ (app) ಕ್ರ್ಯಾಶ್ ಆಗಿತ್ತು. ಒಂದು ಟಿಕೆಟ್ ಬೆಲೆ 2,500 ರೂಪಾಯಿಯಿಂದ 35,000 ರೂಪಾಯಿಯವರೆಗೆ ಇದ್ದರೂ ಒಂದೇ ನಿಮಿಶದಲ್ಲಿ ಎಲ್ಲಾ ಟಿಕೆಟ್ ಗಳು ಬುಕ್ ಆದವು. ಇನ್ನೂ ಸಹ ಟಿಕೆಟ್ ಗಾಗಿ ಪ್ರಯತ್ನಿಸುತ್ತಿರುವವರ ಪ್ರಕಾರ ಕಾಯುವಿಕೆಯ ಪಟ್ಟಿ (waiting list) ಯಲ್ಲಿ ಅವರ ಮುಂಚೆ 7 ಲಕ್ಶಕ್ಕೂ ಹೆಚ್ಚು ಮಂದಿ ಇದ್ದಾರಂತೆ. ಇದರಿಂದಾಗಿ ಕೋಲ್ಡ್ ಪ್ಲೇ ರಸಿಕರ ಎಣಿಕೆ ಹಾಗೂ ಕಾತುರ ನಿಜಕ್ಕೂ ಆಶ್ಚ‍ರ್‍ಯ ಹುಟ್ಟು ಹಾಕಿದೆ. ನೀವೂ ಸಹ ಕೋಲ್ಡ್ ಪ್ಲೇ ಟಿಕೆಟ್ ಬುಕ್ ಮಾಡಬೇಕೆಂದಿರುವಿರಾ, ಹಾಗಿದ್ದರೆ ಕಾಯುವಿಕೆಯ ಪಟ್ಟಿ (waiting list) ಯಲ್ಲಿ ನಿಮ್ಮ ಸಂಕ್ಯೆ ಎಶ್ಟಿರಬಹುದು ಊಹಿಸಿ.

(ಚಿತ್ರ ಮತ್ತು ಮಾಹಿತಿ ಸೆಲೆ: wikipedia.org, britannica.com, cnn.com, economictimes.indiatimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: