ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – ವಸಿಶ್ಟ ವಿಶ್ವಾಮಿತ್ರರ ವಿವಾದ

– ಸಿ.ಪಿ.ನಾಗರಾಜ.

ಕವಿ ಪರಿಚಯ

ಕವಿಯ ಹೆಸರು: ರಾಘವಾಂಕ
ಕಾಲ: ಕ್ರಿ.ಶ.1280
ಹುಟ್ಟಿದ ಊರು: ಪಂಪಾಪುರ
ತಾಯಿ: ರುದ್ರಾಣಿ
ತಂದೆ: ಮಹಾದೇವ ಭಟ್ಟ
ಸೋದರ ಮಾವ ಮತ್ತು ಗುರು: ಹರಿಹರ ಕವಿ
ರಚಿಸಿದ ಕಾವ್ಯಗಳು:

  1. ಹರಿಶ್ಚಂದ್ರ ಕಾವ್ಯ
  2. ಸಿದ್ಧರಾಮ ಪುರಾಣ
  3. ಸೋಮನಾಥ ಚರಿತೆ
  4. ವೀರೇಶ ಚರಿತೆ
  5. ಶರಭ ಚಾರಿತ್ರ
  6. ಹರಿಹರ ಮಹತ್ವ

*** ವಸಿಶ್ಟ ವಿಶ್ವಾಮಿತ್ರರ ವಿವಾದ ***

(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ. ಈ ಹೊತ್ತಗೆಯ ‘ವಸಿಷ್ಠ ವಿಶ್ವಾಮಿತ್ರರ ವಿವಾದ’ ಎರಡನೆಯ ಅಧ್ಯಾಯದ 21 ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು

ದೇವೇಂದ್ರ: ದೇವಲೋಕದ ಒಡೆಯ.
ವಸಿಶ್ಟ: ಒಬ್ಬ ರುಶಿ.
ವಿಶ್ವಾಮಿತ್ರ: ಒಬ್ಬ ರುಶಿ.
ದೇವತೆಗಳು ಮತ್ತು ರುಶಿಗಳು

*** ವಸಿಷ್ಠ ವಿಶ್ವಾಮಿತ್ರರ ವಿವಾದ ***

ಪರುಷವು ಅಂಗಣದ ಕಲು; ಸುರಭಿ ಕರಹಮ್; ಕಲ್ಪತರು ವನಮ್; ಸ್ವರ್ಗ ನಿಜದೇಶ; ಅಮರಾವತಿಯೆ ಪುರುದುರ್ಗ; ಅಮರರ್ ಆಳ್; ಮೇರು ಕೇಳೀಶೈಲ; ಅಮೃತವೇ ಮನೆಯ ಬೀಯಮ್; ವರರಂಭೆ ಸೂಳೆ; ಶಚಿ ರಾಣಿ; ಐರಾವತಮ್ ಕರಿ; ವಜ್ರವು ಆಯುಧಮ್; ನವನಿಧಿಯೆ ಭಂಡಾರ; ಹೊರೆವಾಳ್ದನ್ ಅಭವನ್ ಎಂದೆನಿಪ ದೇವೇಂದ್ರನ್ ಒಂದಿರುಳ್ ಓಲಗವನಿತ್ತನು. ಒಡಲನ್ ಆವರಿಸಿದ ಅಂಗೋಪಾಂಗ ಸಂಕುಳದ ನಡುವೆ ನಯನ ದ್ವಯಂಗಳು; ನವಗ್ರಹದ ನಡುವೆ ಚಂದ್ರ ಆದಿತ್ಯರ್; ಉರ್ವಿಯಮ್ ಪರ್ವಿ ಪಸರಿಸಿದ ನಾನಾ ನದಿಗಳ ನಡುವೆ ಸುರುಚಿರ ಗಂಗೆ ತುಂಗಭದ್ರೆಗಳ್ ಸಲೆ ಒಪ್ಪವಡೆದು ಮಹಿಮೆಯೊಳ್ ಎಸೆವ ತೆರದಿ, ಸುರಪನ ಸಭೆಯನ್ ಎಡೆಗೊಂಡ ಮುನಿಕುಲದ ನಡುವೆ ಅಧಿಕ ವಿಶ್ವಾಮಿತ್ರ ವಾಸಿಷ್ಠರು ಇರ್ದರ್.

(ಆಗ ದೇವೇಂದ್ರನು ವಸಿಷ್ಠ ಮುನಿಯನ್ನು ಉದ್ದೇಶಿಸಿ…)

ದೇವೇಂದ್ರ: ಎಲೆ ಮುನಿಪ ಹೇಳ್, ಅಲಸದೆ ಸಮಸ್ತ ಭೂಮಂಡಲವನ್ ಆಳ್ವ ರವಿಕುಲಜರಪ್ಪ ಇಕ್ಷ್ವಾಕುವಂಶದ
ಅರಸುಗಳೊಳ್ ಅತಿಬಲರೆನಿಸಿ ಮನ ವಚನ ಕಾಯದೊಳಗೆ ಒಮ್ಮೆಯುಮ್ ಹುಸಿ ಹೊದ್ದದಂತೆ
ನಡೆವ ಕಲಿಗಳಾರಯ್ಯ ಹೇಳ್. ಅವರ ಪಾರಂಪರೆಗೆ ಸಲೆ ಸಂದ ರಾಜಗುರು ನೀನ್ ಅರಿಯದವರಿಲ್ಲ.

(ಎಂದು ಹಲವು ಕಣ್ಣಾದವನ್ ವಸಿಷ್ಠ ಮುನಿಗೆ ನುಡಿದನು.)

ವಸಿಷ್ಠ : ಬೆಸಗೊಂಡಡೆ, ಇಂದುತನಕ ಆನ್ ಅರಿಯೆ ಇಕ್ಷ್ವಾಕುವಂಶದೊಳಗಣ ಚತುರ್ದಶ ಭುವನಪತಿಗಳೊಳಗೆ ಹುಸಿ ಹೊದ್ದದವರಿಲ್ಲ. ಹಿಂದಣ ಅರಸುಗಳನ್ ಉದ್ಧರಿಸಲೆಂದು ವಸುಧಾಧಿಪತಿ ಹರಿಶ್ಚಂದ್ರನ್ ಅವತರಿಸಿದ. ಆತನ ಸತ್ಯದ ಎಸಕಮನ್ ಪೊಗಳಲ್ ಎನ್ನಳವೆ… ಶಶಿಮೌಳಿಯಾಣೆ…ಫಣಿಪತಿಗೆ ಅರಿದು. 

(ಎನಲ್… ವಿಶ್ವಾಮಿತ್ರನು ಆ ವಸಿಷ್ಠಂಗೆ ಕೋಪಿಸಿದ. ತೀವಿದ ಒಡ್ಡೋಲಗದ ನಡುವೆ ತನ್ನನ್ ಮೊದಲೊಳ್ ಓವಿ ನುಡಿಸದ ಕೋಪವೊಂದು; ಆ ವಸಿಷ್ಠಮುನಿಯು ಆವುದಮ್ ಪೇಳ್ದಡೆ ಅದನ್ “ಅಲ್ಲ” ಎಂಬ ಭಾಷೆ ಎರಡು; ಅಖಿಳ ಜೀವಾವಳಿಯಲಿ ಭಾವಿಪಡೆ ಕುಂದನಲ್ಲದೆ ಲೇಸ ಕಾಣದಿಹ ಭಾವ ಮುಪ್ಪುರಿಗೊಂಡು ಕುಡಿವರಿದು ಕಡುಗೋಪವು ಆವರಿಸಿ ಕೌಶಿಕನ್ ನಿಂದು… )

ವಿಶ್ವಾಮಿತ್ರ: ನಿಲ್… ನುಡಿಯಬೇಡ.

(ಎಂದು ಜರೆದು ಇಂತೆಂದನು.)

ವಿಶ್ವಾಮಿತ್ರ: ವಾಸಿಷ್ಠ, ಬೇಸರದೆ ಕೇಳ್ವ ದೇವೇಂದ್ರನುಂಟೆಂದು, ಅಕಟಕಟ.. ಇಂತು ಹೇಸದೆ ಸೊರಹುವರೆ.

ವಸಿಷ್ಠ: ನಾ ಸೊರಹಿದಾತನೆ… ಅವನ್ ಅಧಿಕನಲ್ಲದನೆ…ಮುನಿದ ಮೋರೆಯೊಳ್ ಎಂದೆನೆ…ಹೇಳ್.

ವಿಶ್ವಾಮಿತ್ರ: ರಾಸಿ ಹೊನ್ನುಂಟು…ಅಧಿಕನಹನ್.

ವಸಿಷ್ಠ: ಈ ಸಭೆಯೊಳೇಕೆ ಹೊನ್ನ ಮಾತು… ಸತ್ಯನೆ ಹೇಳ್.

ವಿಶ್ವಾಮಿತ್ರ: ಅಂತು ಅವನ್ ಆಳ್ವ ದೇಶದೊಳು ಸತ್ಯಲೇಶವ ಕೇಳ್ದರಿಯೆನ್. ಎಸೆವ ಮಗನಿಲ್ಲದಡೆ ನರಕವಹುದೆಂದು ಚಿಂತಿಸಿ, ವರುಣನಲಿ ವರಂಬಡೆಯಲ್ “ಆತನ ಯಾಗ ಪಶುವ ಮಾಡುವೆನ್” ಎಂದು, “ಮರಳಿ ಈವೆಯಾದಡೆ ಈವೆನು ಮಗನ ನಿನಗೆ” ಎಂದೆನೆ “ಶಿಶುವಾದನ್ ಎಂಬುದಾದಡೆ ಸಾಕು” ಎನಲ್…ಕೊಡಲು ಹುಸಿದು ಅಡವಿಗಟ್ಟಿ ಬಯ್ಚಿಟ್ಟನ್ ಎಂಬುದನ್ ಇಂತು ಎಸೆವ ವೇದಂಗಳೊಳು ಕೇಳಿ, ಪೊಗಳುವಡೆ ನಿನ್ನ ಧೀವಶವು ಅರಿದು. ಹಿರಿದು ಹುಸಿಗೆ ಅಬುಧಿಪತಿ ಮುನಿದು ಮಾಡಿದ ಜಳೋದರವ ಭಾವಿಸದೆ ಕಂಗೆಟ್ಟ ಜಾಡ್ಯಮ್, ಮೋಹದಿಂದೆ ಮಹಾಧ್ವರಕೆ ಮಗನ ಪಶುವನ್ ಮಾಡಲಾರದೆ ಅಜೀಗರ್ತಮುನಿಯ ವರಸುತ ಶುನಶ್ಶೇಪನನ್ ತಂದು ಯಾಗವಿಧಿಗೆ ಅರಿದು ಬೇಳಲ್ಕೆ ಮನದಂದ ಪಾತಕನು. ಭೂವರನನ್ ಏತಕ್ಕೆ ಹೇಸದೆ ಹೊಗಳ್ವೆ.

(ಎಂದು ವಾಸಿಷ್ಠನನ್ ಕೆಡೆನುಡಿದನು.)

ವಸಿಷ್ಠ: ಹಲವು ಮಾತೇಕೆ…ಆ ಹರಿಶ್ಚಂದ್ರ ಭೂನಾಥನೊಳಗೆ ಅಸತ್ಯವನು ಕಾಣಿಸಲು ಬಲ್ಲರು ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲ…ಇನ್ನು ಹುಟ್ಟುವರ ಕಾಣೆ. ನಾನ್ ಇದ ಬಲ್ಲೆನು. ಉಳಿದವರ ಹವಣ್ ಆವುದು.

(ಎಂದು ವಾಸಿಷ್ಠ ಮುನಿ ಕುಲತಿಲಕನ್ ಎನಲು, ವಿಶ್ವಾಮಿತ್ರ ಮನದೊಳ್ ಅತಿ ಮುಳಿದು…)

ವಿಶ್ವಾಮಿತ್ರ: ನಿಲ್…ಬಾಯಿ ಹಿರಿದುಂಟೆಂದು ಆಡದಿರು.

(ಎನುತ್ತ ಮತ್ತೆ ಇಂತೆಂದನು.)

ವಿಶ್ವಾಮಿತ್ರ: ಆತನ್ ವನಧಿ ಪರಿಯಂತ ಧರೆಗೆ ಅರಸು. ಅದರೊಳಮ್ ಧನವುಳ್ಳ ಶಿಷ್ಯನಾಗಿಹನು. ನಿನಗೆ ಅತಿವಿಪುಳ ಧನವನ್ ಆರಾಧಿಸುವನ್. ಅಂತಲ್ಲದೆ ನೀನು ಆತನ ಆರಯ್ಕೆಯೊಳಗಿರ್ಪೆ. ಎನಿತನ್ ಅಗ್ಗಳಿಸಿ ಬಣ್ಣಿಸಲೊಪ್ಪದಯ್ಯ ಹೇಳ್.

 ವಸಿಷ್ಠ: ನಾನ್ ರಾಜಪ್ರತಿಗ್ರಹದ ಬಲದವನೆ.

ವಿಶ್ವಾಮಿತ್ರ: ಮುನಿಯಬೇಡ…ಆತ ಹುಸಿದನಾದಡೆ ನಿನ್ನನು ಏಗಯ್ಯಬಹುದು.

ವಸಿಷ್ಠ: ಹರಿಶ್ಚಂದ್ರ ಮರೆದು ಹುಸಿಯಮ್ ನುಡಿದಡೆ… ಶ್ರುತಿ, ಮತ, ಕುಲಾಚಾರ, ಧರ್ಮಮಾರ್ಗಮ್, ಮಹಾವ್ರತ ಅನುಷ್ಠಾನ, ಗುರುವಾಜ್ಞೆ, ಲಿಂಗಾರ್ಚನೆ, ಉನ್ನತ ತಪಮ್, ಬ್ರಹ್ಮಕರ್ಮಮ್ ಬೆಳೆದ ಪುಣ್ಯವೊಳಗಾದವಮ್ ತೊರೆದು ಕಳೆದು, ಸತಿಯನ್ ಉಳಿದು, ಅತಿದಿಗಂಬರನಾಗಿ ಮುಕ್ತಕೇಶಿತನಾಗಿ ನರಕಪಾಲದೊಳು ಸುರೆ ಎರೆದು ಕುಡಿಯುತ ತೆಂಕಮುಖನಾಗಿ ಹೋಹೆನ್.

ಒಡ್ಡೋಲಗದಲ್ಲಿದ್ದವರು: (ತಮ್ಮ ತಮ್ಮಲ್ಲಿಯೇ) ಧರೆ ಗಗನ ಅಡಸಿ ಕಾದುವಡೆ ಎಡೆಯಲಿಹ ಚರಾಚರವೆಲ್ಲಿ ಹೊಗಲಿ; ಮುನಿದು ಅಖಿಳಮಮ್ ಸುಟ್ಟೊಸೆದು ಮರಳಿ ಹುಟ್ಟಿಸಬಲ್ಲ ಮುನಿಗಳಿಬ್ಬರ ಶಾಂತಿ ಸವೆದ ಕದನದ ಮುಖದಲಿ ಇರಬಾರದು…ಏಳಬಾರದು…ನುಡಿಯಬಾರದು…ಅಂತಿರಬಾರದು… “ಅಹುದು” ಎನಲುಬಾರದು… “ಅಲ್ಲ” ಎನಬಾರದು.

(ಎರಡುಮ್ ನಿರೋಧದಿಂದ ಒಡ್ಡೋಲಗಮ್ ಚಿಂತೆ ಮುಸುಕಿ ಸೈವೆರಗಾದುದು.)

ದೇವೇಂದ್ರ: (ತನ್ನ ಮನದಲ್ಲಿ) ಒಂದಕ್ಕೆ ಹಿತನುಡಿಯೆ ಪಕ್ಷವೆಂದು…ಎರಡುವಮ್ ಹಿಂದುಗಳೆದಿರಲ್ ಉಪೇಕ್ಷಿತನೆಂದು …ಜರೆದಡೆ ಎಮ್ಮಿಂದ ಅಧಿಕನೇ ಎಂದು…ಹೊಗಳ್ದಡೆ ಉಪಚಾರವೆಂದು… ಎತ್ತಿದಡೆ ನೊಂದು ಶಾಪವನ್ ಈಯದೆ ಇರರು.

(ಎಂದು ಸುರಪನು ಆನಂದರಸವರತು, ಬೆರಗಿನ ಮೊಗದೊಳಿರಲು… ನಾರದ ಧಟ್ಟಿಸುತ ಎದ್ದು…)

ನಾರದ:ಕೌಶಿಕ, ವಸಿಷ್ಠಂಗೆ ಭಾಷೆಯನು ಕೊಡು.

(ಎಂದನು.)

ವಿಶ್ವಾಮಿತ್ರ:ಹರಿಶ್ಚಂದ್ರ ಹುಸಿಯನ್ ನುಡಿಯದಿರಲ್…ಎನಗೆ ಪ್ರತಿಜ್ಞೆ. ಧರೆಯೊಳು ಚತುರ್ಯುಗಂಗಳು ಮರಳಿ ಮರಳಿ ಸಾವಿರ ಬಾರಿ ಬಂದಡೆ ಅಜಗೆ ಒಂದು ದಿನ…ಆ ದಿನದ ಪರಿ ದಿನಮ್ ಮೂವತ್ತು ಬರಲ್ ಏಕಮಾಸ… ಆ ಮಾಸ ಹನ್ನೆರಡಾಗಲು ವರುಷ…ಆ ವರುಷ ಶತ ಎಂಬುದು ಈ ಸುರಪತಿಗೆ ಪರಮ ಆಯು…ಈತನ್ ಈರೇಳ್ ಭವಮ್ ಬಪ್ಪನ್ನೆವರ ದೇವಲೋಕಕ್ಕೆ ಬಾರೆನ್. ಭಕ್ತಿ, ಶಮೆ, ದಮೆ, ಯೋಗ, ಯಾಗ, ಶ್ರುತಿಮತಮಯ, ವಿರಕ್ತಿ, ಘೋರವ್ರತ, ತಪೋನಿಷ್ಠೆ, ಜಪ, ಗುಣಾಸಕ್ತತೆ, ಸ್ನಾನ, ಮೌನ, ಧ್ಯಾನ, ಆಚಾರ, ಸತ್ಯತಪ, ನಿತ್ಯನೇಮ, ಯುಕ್ತಿ, ವೇದ ಆಗಮ ಅಭ್ಯಾಸ, ಲಿಂಗಾರ್ಚನಾ ಆಸಕ್ತಿಯಿಮ್ ಬೆಳೆದ ಪುಣ್ಯದೊಳು ಅರ್ಧಮಮ್ ಸುಧಾಭುಕ್ತರ್ ಅರಿಯಲು ಕೊಡುವೆನ್.

ವಸಿಷ್ಠ: ಎಂದು ಭೂವರನನ್ ಪರೀಕ್ಷಿಸುವೆ?

ವಿಶ್ವಾಮಿತ್ರ: ಎನ್ನ ಮನ ಬಂದ ದಿನ.

ವಸಿಷ್ಠ: ಎನಿತು ಸೂಳ್?

ವಿಶ್ವಾಮಿತ್ರ: ಆತನ್ ಈ ಧರೆಯೊಳ್ ಇಪ್ಪಂದು ತನಕ.

ವಸಿಷ್ಠ: ಆವಾವ ಪರಿಯೊಳು?

ವಿಶ್ವಾಮಿತ್ರ: ಸಹಸ್ರ ವಿಧದೊಳು.

ವಸಿಷ್ಠ: ದಿಟವೆ?

ವಿಶ್ವಾಮಿತ್ರ: ದಿಟ.

(ಎಂದು ಎನೆ…)

ವಸಿಷ್ಠ: ಹಿಂದುಗಳೆಯಲ್ ಅದೇಕೆ ನಡೆ.

ವಿಶ್ವಾಮಿತ್ರ: ನೀನ್ ಆಡುವ ಅಂದವು ಅನುವಾಗಿರದು.

(ಎನುತ್ತೆ ಕೌಶಿಕನ್ ಅಣಕದಿಂದ ಆಡಲು…)

ವಸಿಷ್ಠ: ಎಮ್ಮ ಕೂಡ ಇನಿತು ಅಣಕವೇಕೆ. ಇನಿತು ಮುಳಿಸು ಆವುದು.

(ಎಂದು ವಾಸಿಷ್ಠ ಮುನಿ ನುಡಿದನು.)

ವಿಶ್ವಾಮಿತ್ರ: ಹರಿಶ್ಚಂದ್ರಭೂಭುಜನ ಮನೆಗೆ ಈಗಳ್ ಇಂತು ನೀ ಹೋಗಿ, ಕೌಶಿಕನು ನೆಟ್ಟನೆ ನಿನ್ನನ್ ಇಂತಿಂತು ಕೆಡಿಸಿದಪ…ನೀನ್ ಆವ ಪರಿಯಲ್ ಎಚ್ಚತ್ತಿರೆಂದು ನೆನಸಿಕೊಡು ಹೋಗು.

ವಸಿಷ್ಠ: ಆನು ಆಡುವವನೆ ಹೇಳ್.

ವಿಶ್ವಾಮಿತ್ರ: ಎನ್ನ ಗಾಸಿಗಾರದೆ ನೃಪನ್ ಹುಸಿನುಡಿಯೆ ಮುನಿತನವನ್ ಈಡಾಡಿ ಹೋಹಂತಿರೆ ಆದಪುದು. ಹೋಗಿ ನೀನ್ ಹೇಳ್.

ವಸಿಷ್ಠ: ತರಣಿ ತೇಜಮ್ ಕಿಡದರ್; ಅಗ್ನಿ ಬಿಸುಪಾರದಿರು; ಸರಸಿರುಹವೈರಿ ತಂಪಮ್ ಬಿಡದಿರ್; ಎಲೆಲೆ, ಮಂದರವೆ ಚಲಿಸದಿರ್ ಎಂದು ಬೋಧಿಸಲದೇಕೆ. ಸುಮ್ಮನಿರಲು ನಿಜವ ಅಳಿವವೇ. ವರಹರಿಶ್ಚಂದ್ರ ಸತ್ಯಮ್ ಕೆಡದಿರ್ ಎಂದು ಬೋಸರಿಸುವಂತಾಗಿ ಹುಸಿಯುಂಟೆ…ಕೊಂಡೆಯವೆ ಎನಗೆ…ಹಿರಿಯತನ ಕೆಟ್ಟಿಂತು ನುಡಿಯಲಹುದೇ .

(ಎಂದು ವಾಸಿಷ್ಠಮುನಿ ನುಡಿದನು.)

ವಿಶ್ವಾಮಿತ್ರ: ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೇ…ಮುನಿದು ಪೊಡವಿ ನುಂಗುವಡೆ ಮನೆ ತಾಂಗುವುದೆ…ಕವಿದು ಹೆಗ್ಗಡಲುಕ್ಕಿ ಜಗವ ಮೊಗೆವಡೆ ಮಳೆಗಳ್ ಅಡ್ಡಬಹವೇ…ಹೇಳು. ಮುನಿಪ…ನಿನ್ನ ಬಡ ಬೋಧೆಗೀಧೆಗಳು ರಕ್ಷಿಸುವುವಲ್ಲ. ನಾನ್ ಕಡುಮುಳಿದ ಬಳಿಕಲ್ ಏಗುವುವು. ನೀ ಹೇಳದಿರ್ದಡೆ ಮದನಹರನಾಣೆ ಹೋಗು.

(ಎಂದು ಕೌಶಿಕನ್ ವಸಿಷ್ಠ ಮುನಿಯ ಜರೆದನು.)

ವಸಿಷ್ಠ: ಕುಲವ ನಾಲಗೆ ಅರುಹಿತು ಎಂಬ ನಾಣ್ಣುಡಿಗೆ ಇಂದು ನೆಲೆಯಾಯ್ತಲಾ. ಬ್ರಹ್ಮ ಋಷಿಯಾದಡೆ ಒಳಗು ನಿರ್ಮಳವಪ್ಪುದಯ್ಯ. ನೀನ್ ರಾಜರ್ಷಿ. ಕೋಪಿಸದೆ ಧಟ್ಟಿಸದೆ ಕೆಡೆನುಡಿಯದೆ ನಿಲಲ್ ಎಂತು ಬಲ್ಲೆ.

ವಿಶ್ವಾಮಿತ್ರ: ಎನ್ನ ನೀನೀಗ ಹೆಪ್ಪಳಿಸದೆ ಆಡಿದೆ.

ವಸಿಷ್ಠ: ಅಹುದಹುದು…ನಿನ್ನಲಿಹ ನೆಲೆಯಾಡಿತು.

(ಎನೆ ಕೌಶಿಕನ್ ಕುಪಿತನಾದನ್. ಅದನ್ ಆವ ಕವಿ ಬಣ್ಣಿಸುವನು.)

ವಿಶ್ವಾಮಿತ್ರ: ನೋಡು ನೋಡು. ಇಂದು ಎನ್ನ ರಾಜ ಋಷಿಯೆಂದು ಕೆಟ್ಟಾಡಿತಕ್ಕೆ, ಆ ಹರಿಶ್ಚಂದ್ರನನ್ ಅಸತ್ಯನನ್ ಮಾಡಿಸುವೆನ್. ಅಧಿಕ ಪ್ರತಿಜ್ಞೆಗಳನ್ ಆಂತ ನಿನ್ನನ್ ವ್ರತಭ್ರಷ್ಟನ್ ಎನಿಸಿ, ರೋಡಾಡಿ ಕಾಡುವೆನ್.

(ಎನುತ್ತ ವಿಶ್ವಾಮಿತ್ರನ್ ಎದ್ದು, ಸಿಡಿಲು ಗಜರಿ ಗರ್ಜಿಸಿ ಮೇಘದಿಂದ ಪೊರಮಡುವ ಅಂದದಿ ಸಾವನ್ ಈಡಾಡಿದವರ ಒಡೆಯನ ಆಡಂಬರದ ಓಲಗದಿಂದ ಹೊರವಂಟನ್.)

ತಿರುಳು: ವಸಿಷ್ಠ ವಿಶ್ವಾಮಿತ್ರರ ವಿವಾದ ಪ್ರಸಂಗ

ದೇವಲೋಕದಲ್ಲಿರುವ ದೇವೇಂದ್ರನ ಅಮರಾವತಿ ಪಟ್ಟಣದ ಸಿರಿಸೊಬಗನ್ನು ಈ ನುಡಿಗಳಲ್ಲಿ ಬಣ್ಣಿಸಲಾಗಿದೆ:

ಪರುಷ ಅಂಗಣದ ಕಲು=ಸ್ಪರ್‍ಶಮಣಿಯು ದೇವೇಂದ್ರನ ಅರಮನೆಯ ಅಂಗಣದ ಹಾಸುಗಲ್ಲು;

ಸುರಭಿ ಕರಹಮ್=ಕಾಮದೇನು ಹಾಲನ್ನು ನೀಡುವ ಹಸು;

ಕಲ್ಪತರು ವನಮ್=ಕಲ್ಪತರು ದೇವೇಂದ್ರನ ಉದ್ಯಾನದಲ್ಲಿದೆ;

ಸ್ವರ್ಗ ನಿಜದೇಶ=ಸ್ವರ್‍ಗವು ದೇವೇಂದ್ರನ ದೇಶ;

ಅಮರಾವತಿಯೆ ಪುರುದುರ್ಗ= ದೊಡ್ಡಕೋಟೆಯಿಂದ ಸುತ್ತುವರಿದ ಅಮರಾವತಿಯೆ ರಾಜದಾನಿ;

ಅಮರರ್ ಆಳ್=ದೇವತೆಗಳು ಆಳುಗಳು;

ಮೇರು ಕೇಳೀಶೈಲ=ಮೇರು ಪರ್‍ವತವು ಕ್ರೀಡಾಂಗಣ;

ಅಮೃತವೇ ಮನೆಯ ಬೀಯಮ್=ಅಮ್ರುತವೇ ಮನೆಯ ಉಣಿಸು;

ವರ ರಂಬೆ ಸೂಳೆ=ಸುಂದರಿಯಾದ ರಂಬೆಯು ವಿಲಾಸವತಿ;

ಶಚಿ ರಾಣಿ=ದೇವೇಂದ್ರನ ಹೆಂಡತಿಯಾದ ಶಚಿಯು ಪಟ್ಟದ ರಾಣಿ;

ಐರಾವತಮ್ ಕರಿ=ಐರಾವತವು ದೇವೇಂದ್ರನ ಪಟ್ಟದ ಆನೆ;

ವಜ್ರವು ಆಯುಧಮ್=ವಜ್ರವು ದೇವೇಂದ್ರನ ಆಯುದ;

ನವನಿಧಿಯೆ ಭಂಡಾರ=ಪದ್ಮ-ಮಹಾಪದ್ಮ-ಶಂಕ-ಮಕರ-ಕಚ್ಚಪ-ಮುಕುಂದ-ಕುಂದ-ನೀಲ-ಕರ‍್ವ ಎಂಬ ಒಂಬತ್ತು ಬಗೆಯ ಸಂಪತ್ತು ದೇವೇಂದ್ರನ ಕಜಾನೆಯಲ್ಲಿದೆ;

ಹೊರೆವಾಳ್ದನ್ ಅಭವನ್ ಎಂದೆನಿಪ=ದೇವಲೋಕವನ್ನು ಕಾಪಾಡುವ ಹೊಣೆಹೊತ್ತ ಶಿವ ಎನ್ನುವಂತಿರುವ ದೇವೇಂದ್ರನು;

ಒಂದಿರುಳ್ ಓಲಗವನಿತ್ತನು=ಒಂದು ದಿನ ರಾತ್ರಿಯ ವೇಳೆಯಲ್ಲಿ ಅಮರಾವತಿ ಪಟ್ಟಣದ ತನ್ನ ಅರಮನೆಯಲ್ಲಿ ದೇವಲೋಕದಲ್ಲಿನ ದೇವತೆಗಳು ಮತ್ತು ಬೂಲೋಕದಲ್ಲಿನ ಮುನಿಗಳೊಡನೆ ಸಬೆಯನ್ನು ನಡೆಸುತ್ತಿದ್ದಾನೆ;

ಒಡಲನ್ ಆವರಿಸಿದ ಅಂಗೋಪಾಂಗ ಸಂಕುಳದ ನಡುವೆ ನಯನ ದ್ವಯಂಗಳು=ದೇಹದಲ್ಲಿರುವ ಅಂಗಾಂಗಳ ನಡುವೆ ಕಣ್ಣುಗಳೆರಡು;

ನವಗ್ರಹದ ನಡುವೆ ಚಂದ್ರ ಆದಿತ್ಯರ್=ಗಗನ ಮಂಡಲದಲ್ಲಿ ಕಾಣಿಸುವ ಒಂಬತ್ತು ಗ್ರಹಗಳ ನಡುವೆ ಚಂದ್ರ ಮತ್ತು ಸೂರ್‍ಯ;

ಉರ್ವಿಯಮ್ ಪರ್ವಿ ಪಸರಿಸಿದ ನಾನಾ ನದಿಗಳ ನಡುವೆ ಸುರುಚಿರ ಗಂಗೆ ತುಂಗಭದ್ರೆಗಳ್=ಬೂಮಂಡಲದ ಉದ್ದಗಲದಲ್ಲಿ ಹರಡಿಕೊಂಡು ಹರಿಯುತ್ತಿರುವ ನಾನಾ ನದಿಗಳ ನಡುವೆ ತೇಜಸ್ಸಿನಿಂದ ಕಂಗೊಳಿಸುತ್ತಿರುವ ಗಂಗೆ ಮತ್ತು ತುಂಗಬದ್ರ ನದಿಗಳು;

ಸಲೆ ಒಪ್ಪವಡೆದು

ಸೂರ್ಯವಂಶದ ರಾಜರೆಲ್ಲರ ನಡೆನುಡಿಗಳನ್ನು ನೀನು ಚೆನ್ನಾಗಿ ಬಲ್ಲೆ ಎಂದು ದೇವೇಂದ್ರನು ವಸಿಶ್ಟ ಮುನಿಗೆ ಹೇಳಿದನು;

ಸೂರ್ಯವಂಶದ ರಾಜರೆಲ್ಲರ ನಡೆನುಡಿಗಳನ್ನು ನೀನು ಚೆನ್ನಾಗಿ ಬಲ್ಲೆ ಎಂದು ದೇವೇಂದ್ರನು ವಸಿಶ್ಟ ಮುನಿಗೆ ಹೇಳಿದನು;

ಮಹಿಮೆಯೊಳ್ ಎಸೆವ ತೆರದಿ=ಸದಾಕಾಲ ಅತಿಶಯವಾದ ಚೆಲುವಿನ ಮಹಿಮೆಯಿಂದ ಕಂಗೊಳಿಸುತ್ತಿರುವ ರೀತಿಯಲ್ಲಿ;

ಸುರಪನ ಸಭೆಯನ್ ಎಡೆಗೊಂಡ ಮುನಿಕುಲದ ನಡುವೆ=ದೇವೇಂದ್ರನ ಒಡ್ಡೋಲಗದಲ್ಲಿ ನೆರೆದಿದ್ದ ಮುನಿಗಳ ಗುಂಪಿನ ನಡುವೆ;

ಅಧಿಕ ವಿಶ್ವಾಮಿತ್ರ ವಾಸಿಷ್ಠರು ಇರ್ದರ್=ಹೆಸರಾಂತ ಮುನಿಗಳಾದ ವಿಶ್ವಾಮಿತ್ರ ಮತ್ತು ವಾಸಿಶ್ಟರು ಇದ್ದರು;

ಎಲೆ ಮುನಿಪ ಹೇಳ್=ವಸಿಶ್ಟ ಮುನಿಗಳೇ ನೀವು ಹೇಳಿ;

ಅಲಸದೆ ಸಮಸ್ತ ಭೂಮಂಡಲವನ್ ಆಳ್ವ=ಎಚ್ಚರದಿಂದ ಸಕಲ ಬೂಮಂಡಲವನ್ನು ಆಳುತ್ತಿರುವ;

ರವಿಕುಲಜರಪ್ಪ ಇಕ್ಷ್ವಾಕುವಂಶದ ಅರಸುಗಳೊಳ್=ಸೂರ್‍ಯವಂಶದ ಇಕ್ಶ್ವಾಕು ವಂಶಕ್ಕೆ ಸೇರಿದ ರಾಜರುಗಳಲ್ಲಿ;

 ಅತಿಬಲರೆನಿಸಿ ಮನ ವಚನ ಕಾಯದೊಳಗೆ ಒಮ್ಮೆಯುಮ್ ಹುಸಿ ಹೊದ್ದದಂತೆ ನಡೆವ ಕಲಿಗಳಾರಯ್ಯ ಹೇಳ್=ಮಹಾಶೂರರೆಂಬ ಹೆಸರನ್ನು ಪಡೆದು ಕಾಯ ವಾಚ ಮನಸಾ ಒಮ್ಮೆಯಾದರೂ ಸುಳ್ಳನ್ನಾಡದೆ ಬಾಳುತ್ತಿರುವ ಕಲಿಗಳು ಯಾರು ಎಂಬುದನ್ನು ಹೇಳು;

ಅವರ ಪಾರಂಪರೆಗೆ ಸಲೆ ಸಂದ ರಾಜಗುರು ನೀನ್ ಅರಿಯದವರಿಲ್ಲ ಎಂದು ಹಲವು ಕಣ್ಣಾದವನ್ ವಸಿಷ್ಠ ಮುನಿಗೆ ನುಡಿದನು=ಸೂರ್‍ಯವಂಶದ ರಾಜಮನೆತನವನ್ನು ಚೆನ್ನಾಗಿ ಬಲ್ಲ ರಾಜಗುರುವಾದ ನಿನಗೆ ಗೊತ್ತಿಲ್ಲದವರಿಲ್ಲ. ಅಂದರೆ ಸೂರ್‍ಯವಂಶದ ರಾಜರೆಲ್ಲರ ನಡೆನುಡಿಗಳನ್ನು ನೀನು ಚೆನ್ನಾಗಿ ಬಲ್ಲೆ ಎಂದು ದೇವೇಂದ್ರನು ವಸಿಶ್ಟ ಮುನಿಗೆ ಹೇಳಿದನು;

ಬೆಸಗೊಂಡಡೆ ಇಂದುತನಕ ಆನ್ ಅರಿಯೆ=ವಿಚಾರಿಸಿ ನೋಡಿದರೆ ಇಂದಿನವರೆಗೆ ನನಗೆ ಗೊತ್ತಿಲ್ಲ;

ಇಕ್ಷ್ವಾಕುವಂಶದೊಳಗಣ ಚತುರ್ದಶ ಭುವನಪತಿಗಳೊಳಗೆ ಹುಸಿ ಹೊದ್ದದವರಿಲ್ಲ=ಸೂರ್‍ಯವಂಶಕ್ಕೆ ಸೇರಿದ ಹದಿನಾಲ್ಕು ಮಂದಿ ರಾಜರಲ್ಲಿ ಸುಳ್ಳನ್ನಾಡದವರೂ ಯಾರೊಬ್ಬರೂ ಇಲ್ಲ. ಅಂದರೆ ಅವರ ಜೀವಮಾನದಲ್ಲಿ ಒಂದಲ್ಲ ಒಂದು ಸಾರಿಯಾದರೂ ಸುಳ್ಳನ್ನಾಡಿದ್ದಾರೆ;

ಹಿಂದಣ ಅರಸುಗಳನ್ ಉದ್ಧರಿಸಲೆಂದು ವಸುಧಾಧಿಪತಿ ಹರಿಶ್ಚಂದ್ರನ್ ಅವತರಿಸಿದ=ಸೂರ್‍ಯವಂಶದ ಹಿಂದಿನ ಅರಸುಗಳೆಲ್ಲರನ್ನೂ ಉದ್ದಾರ ಮಾಡಲೆಂದು ಅಂದರೆ ಅವರಿಗೆ ಒಳ್ಳೆಯ ಹೆಸರನ್ನು ತರಲೆಂದು ಬೂಮಂಡಲದ ಒಡೆಯನಾದ ಹರಿಶ್ಚಂದ್ರನು ಈಗ ಹುಟ್ಟಿ ಬಂದಿದ್ದಾನೆ;

ಆತನ ಸತ್ಯದ ಎಸಕಮನ್ ಪೊಗಳಲ್ ಎನ್ನಳವೆ=ಹರಿಶ್ಚಂದ್ರನ ಸತ್ಯದ ನಡೆನುಡಿಯಿಂದ ಕೂಡಿದ ಕಾರ್‍ಯಗಳನ್ನು ಹೊಗಳಲು ನನ್ನಿಂದ ಆಗುತ್ತದೆಯೇ. ಅಂದರೆ ನನ್ನಲ್ಲಿ ಆ ಶಕ್ತಿಯಿಲ್ಲ;

 ಶಶಿಮೌಳಿಯಾಣೆ, ಫಣಿಪತಿಗೆ ಅರಿದು ಎನಲ್=ಶಿವನಾಣೆ…ನನ್ನಿಂದ ಮಾತ್ರವಲ್ಲ…ಬೂಮಂಡಲವನ್ನು ತಲೆಯಲ್ಲಿ ಹೊತ್ತಿರುವ ಹಾವಿನ ಒಡೆಯನಾದ ಆದಿಶೇಶನಿಗೂ ಆಗುವುದಿಲ್ಲ ಎಂದು ವಸಿಶ್ಟನು ನುಡಿಯಲು:

ವಿಶ್ವಾಮಿತ್ರನು ಆ ವಸಿಷ್ಠಂಗೆ ಕೋಪಿಸಿದ= ವಸಿಶ್ಟ ಮುನಿಯ ಬಗ್ಗೆ ವಿಶ್ವಾಮಿತ್ರ ಮುನಿಯು ಕೋಪಗೊಂಡನು;

ತೀವಿದ ಒಡ್ಡೋಲಗದ ನಡುವೆ ತನ್ನನ್ ಮೊದಲೊಳ್ ಓವಿ ನುಡಿಸದ ಕೋಪವೊಂದು=ದೇವೇಂದ್ರನು ತುಂಬಿದ ಒಡ್ಡೋಲಗದಲ್ಲಿ ತನಗೆ ಮನ್ನಣೆಯನ್ನು ನೀಡಿ, ತನ್ನನ್ನು ಮೊದಲು ಮಾತಾನಾಡಿಸಲಿಲ್ಲವೆಂಬ ಕೋಪವು ಮೊದಲನೆಯ ಕಾರಣವಾದರೆ;

ಆ ವಸಿಷ್ಠಮುನಿ ಆವುದಮ್ ಪೇಳ್ದಡೆ ಅದನ್ ಅಲ್ಲ ಎಂಬ ಭಾಷೆ ಎರಡು=ಯಾವುದೇ ಮಾತಿನ ಸನ್ನಿವೇಶದಲ್ಲಾಗಲಿ ಆ ವಸಿಶ್ಟ ಮುನಿಯು ಯಾವುದನ್ನು ನುಡಿದರೂ, ಅದನ್ನು ತಾನು ಅಲ್ಲಗಳೆದು ಮಾತನಾಡುವ ಚಾಳಿಯು ಎರಡನೆಯ ಕಾರಣವಾಗಿದೆ;

 ಅಖಿಳ ಜೀವಾವಳಿಯಲಿ ಭಾವಿಪಡೆ ಕುಂದನಲ್ಲದೆ ಲೇಸ ಕಾಣದಿಹ ಭಾವ=ಲೋಕದಲ್ಲಿರುವ ಸಮಸ್ತ ಜೀವರಾಶಿಯ ನಡೆನುಡಿಯಲ್ಲಿ ಲೋಪವನ್ನಲ್ಲದೆ ಒಳಿತನ್ನು ಕಾಣದಿರುವ ವಿಶ್ವಾಮಿತ್ರನ ಮನಸ್ಸು ಮೂರನೆಯ ಕಾರಣ;

ಮುಪ್ಪುರಿಗೊಂಡು ಕುಡಿವರಿದು ಕಡುಗೋಪ ಆವರಿಸಿ ಕೌಶಿಕನ್ ನಿಂದು=ಈ ಮೂರು ಸಂಗತಿಗಳು ಪರಸ್ಪರ ಹೆಣೆದುಕೊಂಡು ಬೆಳೆದು ತೀವ್ರವಾದ ಕೋಪದಿಂದ ಕೆರಳಿದ ವಿಶ್ವಾಮಿತ್ರನು ಒಡ್ಡೋಲಗದಲ್ಲಿ ಎದ್ದು ನಿಂತು;

ನಿಲ್ ನುಡಿಯಬೇಡ. ಎಂದು ಜರೆದು ಇಂತೆಂದನು=ಮಾತನ್ನು ಮುಂದುವರಿಸಬೇಡ ಎಂದು ನಿಂದಿಸಿ, ಈ ರೀತಿ ನುಡಿದನು;

ವಾಸಿಷ್ಠ, ಬೇಸಱದೆ ಕೇಳ್ವ ದೇವೇಂದ್ರನುಂಟೆಂದು, ಅಕಟಕಟ.. ಇಂತು ಹೇಸದೆ ಸೊರಹುವರೆ=ವಾಸಿಷ್ಟನೇ, ಏನನ್ನೇ ಹೇಳಿದರೂ ಬೇಸರಪಟ್ಟುಕೊಳ್ಳದೇ ದೇವೇಂದ್ರನು ಕೇಳುತ್ತಾನೆಂದು…ಅಕಟಕಟ…ಈ ರೀತಿ ಹಿಂಜರಿಯದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆಯೇ;

ನಾ ಸೊರಹಿದಾತನೆ=ನಾನು ಬಾಯಿಗೆ ಬಂದಂತೆ ಹರಟುತ್ತಿದ್ದೇನೆಯೆ:

ಅವನ್ ಅಧಿಕನಲ್ಲದನೆ=ಹರಿಶ್ಚಂದ್ರ ಮಹಾರಾಜನು ನಿಜಕ್ಕೂ ದೊಡ್ಡವನಲ್ಲವೇ;

ಮುನಿದ ಮೋರೆಯೊಳ್ ಎಂದೆನೆ. ಹೇಳ್=ನಿನ್ನ ಹಾಗೆ ವಿನಾಕಾರಣ ಕೋಪಗೊಂಡು ಮೊಗವನ್ನು ಗಂಟುಹಾಕಿಕೊಂಡು ಮಾತನಾಡಿದೆನೆ ಹೇಳು;

 ರಾಸಿ ಹೊನ್ನುಂಟು…ಅಧಿಕನಹನ್=ಹರಿಶ್ಚಂದ್ರನಲ್ಲಿ ಅಪಾರವಾದ ಸಿರಿಸಂಪತ್ತಿದೆ. ಆದ್ದರಿಂದ ಆತ ದೊಡ್ಡವನಾಗಿದ್ದಾನೆ;

ಈ ಸಭೆಯೊಳೇಕೆ ಹೊನ್ನ ಮಾತು… ಸತ್ಯನೆ ಹೇಳು=ಈ ಸಬೆಯಲ್ಲಿ ಸಂಪತ್ತಿನ ಮಾತೇಕೆ…ಹರಿಶ್ಚಂದ್ರನು ಸತ್ಯವಂತನಲ್ಲವೇ ಹೇಳು;

ಅಂತು ಅವನ್ ಆಳ್ವ ದೇಶದೊಳು ಸತ್ಯಲೇಶವ ಕೇಳ್ದಱಿಯೆನ್=ನೀನು ಹೇಳುತ್ತಿರುವ ರೀತಿ ಅವನು ಆಳುತ್ತಿರುವ ದೇಶದಲ್ಲಿ ರಾಜ ಹರಿಶ್ಚಂದ್ರನ ಸತ್ಯದ ನಡೆನುಡಿಯನ್ನು ತುಸುವಾದರೂ ನಾನು ಕೇಳಿ ಅರಿತಿಲ್ಲ;

ಎಸೆವ ಮಗನಿಲ್ಲದಡೆ ನರಕವಹುದೆಂದು ಚಿಂತಿಸಿ=ಸತ್ತ ನಂತರ ಮೋಕ್ಶಕ್ಕೆ ಕಾರಣನಾಗುವ ಮಗನಿಲ್ಲದಿದ್ದರೆ ನರಕ ಪ್ರಾಪ್ತಿಯಾಗುವುದೆಂದು ಚಿಂತಿಸಿ;

ವರುಣನಲಿ ವರಂಬಡೆಯಲು=ಮಗನನ್ನು ಪಡೆಯುವ ಅನುಗ್ರಹಕ್ಕಾಗಿ ವರುಣದೇವನನ್ನು ಪೂಜಿಸಿದಾಗ;

ಆತನ ಯಾಗ ಪಶುವ ಮಾಡುವೆನ್ ಎಂದು ಮರಳಿ ಈವೆಯಾದಡೆ ಈವೆನು ಮಗನ ನಿನಗೆ ಎಂದೆನೆ=ಆಗ ವರುಣದೇವನು “ಈಗ ನಾನು ಕರುಣಿಸುವ ವರದಿಂದ ನಿನಗೆ ಹುಟ್ಟುವ ಮಗನನ್ನು ನನ್ನ ಹೆಸರಿನಲ್ಲಿ ಮಾಡುವ ಯಾಗಕ್ಕೆ ಬಲಿಕೊಡುವುದಾದರೆ, ಮಗನನ್ನು ಪಡೆಯುವ ವರವನ್ನು ನಿನಗೆ ನೀಡುತ್ತೇನೆ” ಎಂದು ವರುಣದೇವನು ಕರಾರನ್ನು ಹಾಕಲು;

ಶಿಶುವಾದನ್ ಎಂಬುದಾದಡೆ ಸಾಕು ಎನಲ್= “ಹರಿಶ್ಚಂದ್ರನು ಮಗನನ್ನು ಪಡೆದನು” ಎಂಬುದು ಲೋಕಕ್ಕೆ ತಿಳಿದರೆ ಸಾಕು ಎಂದುಕೊಂಡು, ವರುಣದೇವನ ಕರಾರಿಗೆ ಒಪ್ಪಿ ವರವನ್ನು ಪಡೆದನು;

ಕೊಡಲು ಹುಸಿದು ಅಡವಿಗಟ್ಟಿ ಬಯ್ಚಿಟ್ಟನ್ ಎಂಬುದನ್=ವರುಣನಿಂದ ಪಡೆದ ವರದಿಂದ ಮಗನು ಹುಟ್ಟಿದ ನಂತರ, ವರುಣದೇವನಿಗೆ ಕೊಟ್ಟ ಮಾತಿನಂತೆ ಮಗನನ್ನು ಯಾಗಕ್ಕೆ ಬಲಿಕೊಡಲು ಒಪ್ಪದೆ, ಹರಿಶ್ಚಂದ್ರನು ಸುಳ್ಳನ್ನು ಹೇಳಿ ಮಗನನ್ನು ಕಾಡಿನಲ್ಲಿ ಬಚ್ಚಿಟ್ಟನು;

ಇಂತು ಎಸೆವ ವೇದಂಗಳೊಳು ಕೇಳಿ=ಪ್ರಸಿದ್ದವಾದ ವೇದಗಳಲ್ಲಿ ಹರಿಶ್ಚಂದ್ರನು ಸುಳ್ಳನ್ನಾಡಿದ ಸಂಗತಿಯೆಲ್ಲವೂ ವರದಿಗೊಂಡಿರುವುದನ್ನು ಕೇಳಿಯೂ;

ಪೊಗಳುವಡೆ ನಿನ್ನ ಧೀವಶವು ಅರಿದು=ಹೊಗಳುತ್ತಿರುವುದನ್ನು ನೋಡಿದರೆ ನಿನ್ನ ಉದ್ದಟತನ ಬಲು ದೊಡ್ಡದು;

ಹಿರಿದು ಹುಸಿಗೆ ಅಬುಧಿಪತಿ ಮುನಿದು ಮಾಡಿದ ಜಳೋದರವ=ಕೊಟ್ಟಮಾತಿಗೆ ತಪ್ಪಿನಡೆದು ಸುಳ್ಳನ್ನಾಡಿದ ಹರಿಶ್ಚಂದ್ರನ ಬಗ್ಗೆ ವರುಣದೇವನು ಕೋಪಗೊಂಡು ಹರಿಶ್ಚಂದ್ರನಿಗೆ ಹೊಟ್ಟೆಯಲ್ಲಿ ನೀರುತುಂಬಿಕೊಂಡು ನರಳುವ ರೋಗ ಬರುವಂತೆ ಮಾಡಿದಾಗ;

ಭಾವಿಸದೆ ಕಂಗೆಟ್ಟ ಜಾಡ್ಯಮ್=ಜಾಡ್ಯದಿಂದ ಕಂಗೆಟ್ಟು ಯಾತನೆಯನ್ನು ಸಹಿಸಲಾರದೆ;

ಮೋಹದಿಂದೆ ಮಹಾಧ್ವರಕೆ ಮಗನ ಪಶುವನ್ ಮಾಡಲಾರದೆ=ಮಗನ ಮೇಲಣ ಪ್ರೀತಿಯಿಂದ ಮಹಾಯಾಗಕ್ಕೆ ಮಗನನ್ನು ಬಲಿಕೊಡಲಾರದೆ;

ಅಜೀಗರ್ತಮುನಿಯ ವರಸುತ ಶುನಶ್ಶೇಪನನ್ ತಂದು=ಯಾಗದ ಬಲಿಗೆ ತನ್ನ ಮಗನಿಗೆ ಬದಲಾಗಿ ಅಜೀಗರ್‍ಗ ಎಂಬ ಮುನಿಯ ವರಪುತ್ರನಾದ ಶುನಶ್ಶೇಪ ಎಂಬ ಬಾಲಕನನ್ನು ಹಣಕೊಟ್ಟು ತಂದು;

ಯಾಗವಿಧಿಗೆ ಅರಿದು ಬೇಳಲ್ಕೆ ಮನದಂದ ಪಾತಕನು=ಯಾಗದ ಆಚರಣೆಯಲ್ಲಿ ತನ್ನ ಮಗನಿಗೆ ಬದಲಾಗಿ ಮತ್ತೊಬ್ಬರ ಕಂದನನ್ನು ಕತ್ತರಿಸಿ ಬಲಿಕೊಡುವುದಕ್ಕೆ ಮನಸ್ಸುಮಾಡಿದ ಪಾಪಿ ಆ ಹರಿಶ್ಚಂದ್ರ;

ಭೂವರನನ್ ಏತಕ್ಕೆ ಹೇಸದೆ ಹೊಗಳ್ವೆ ಎಂದು ವಾಸಿಷ್ಠನನ್ ಕೆಡೆನುಡಿದನು=ಅಂತಹ ಪಾಪಿಯಾದ ಹರಿಶ್ಚಂದ್ರನನ್ನು ಏತಕ್ಕೆ ಹಿಂಜರಿಯದೆ ಹೊಗಳುತ್ತಿರುವೆ ಎಂದು ವಸಿಶ್ಟನನ್ನು ವಿಶ್ವಾಮಿತ್ರನು ಹಂಗಿಸಿ ನುಡಿದನು;

ಹಲವು ಮಾತೇಕೆ=ಹರಿಶ್ಚಂದ್ರನ ಬಗ್ಗೆ ನೀನು ಏನೇ ನುಡಿದರು;

ಆ ಹರಿಶ್ಚಂದ್ರ ಭೂನಾಥನೊಳಗೆ ಅಸತ್ಯವನು ಕಾಣಿಸಲು ಬಲ್ಲರು ಧಾತ್ರಿಯೊಳು ಮುನ್ನ ಹುಟ್ಟಿದವರಿಲ್ಲ…ಇನ್ನು ಹುಟ್ಟುವರ ಕಾಣೆ. ನಾನ್ ಇದ ಬಲ್ಲೆನು. ಉಳಿದವರ ಹವಣು ಆವುದು ಎಂದು ವಾಸಿಷ್ಠ ಮುನಿ ಕುಲತಿಲಕನ್ ಎನಲು=ಆ ಹರಿಶ್ಚಂದ್ರನು ಮಹಾರಾಜನ ನಡೆನುಡಿಯಲ್ಲಿ ಅಸತ್ಯವನ್ನು ಕಾಣಿಸಲಬಲ್ಲವರು ಈ ಬೂಮಂಡಲದಲ್ಲಿ ಈ ಮೊದಲು ಹುಟ್ಟಿದವರಿಲ್ಲ, ಇನ್ನು ಮುಂದೆ ಹುಟ್ಟುವವರು ಇಲ್ಲ. ಹರಿಶ್ಚಂದ್ರನು ಯಾವುದೇ ಸನ್ನಿವೇಶದಲ್ಲಿಯೂ ಸುಳ್ಳನ್ನಾಡುವುದಿಲ್ಲವೆಂಬುದು ನನಗೆ ಚೆನ್ನಾಗಿ ಗೊತ್ತು. ಹರಿಶ್ಚಂದ್ರನ ಬಗ್ಗೆ ಕೆಟ್ಟದಾಗಿ ಮಾತನಾಡುವ ಉಳಿದವರ ಯೋಗ್ಯತೆ ಯಾವುದು ಎಂದು ವಸಿಶ್ಟ ಮುನಿಯು ನುಡಿಯಲು;

ವಿಶ್ವಾಮಿತ್ರ ಮನದೊಳ್ ಅತಿ ಮುಳಿದು=ವಿಶ್ವಾಮಿತ್ರನು ಮನದಲ್ಲಿ ಅತಿಯಾಗಿ ಕೋಪಿಸಿಕೊಂಡು;

ನಿಲ್…ಬಾಯಿ ಹಿರಿದುಂಟೆಂದು ಆಡದಿರು ಎನುತ್ತ ಮತ್ತೆ ಇಂತೆಂದನು=ಮಾತನ್ನಾಡದಿರು. ದೇವೇಂದ್ರನ ಮುಂದೆ ನಿನ್ನ ಮಾತು ನಡೆಯುತ್ತದೆ ಎಂಬ ಅಹಂಕಾರದಿಂದ ಬಾಯಿಗೆ ಬಂದಂತೆ ಮಾತನಾಡಬೇಡ ಎಂದು ವಸಿಶ್ಟನನ್ನು ವಿರೋದಿಸುತ್ತ, ಮತ್ತೆ ಈ ರೀತಿ ನುಡಿದನು;

ಆತನ್ ವನಧಿ ಪರಿಯಂತ ಧರೆಗೆ ಅರಸು=ಹರಿಶ್ಚಂದ್ರನು ಸಾಗರ ಸುತ್ತುವರಿದ ದೊಡ್ಡ ಬೂಮಂಡಲಕ್ಕೆ ಒಡೆಯ;

ಅದರೊಳಮ್ ಧನವುಳ್ಳ ಶಿಷ್ಯನಾಗಿಹನು=ಅದರಲ್ಲಿಯೂ ಅಪಾರವಾದ ಸಿರಿಸಂಪದವುಳ್ಳ ರಾಜ ಹರಿಶ್ಚಂದ್ರನು ನಿನ್ನ ಶಿಶ್ಯನಾಗಿದ್ದಾನೆ;

ನಿನಗೆ ಅತಿವಿಪುಳ ಧನವನ್ ಆರಾಧಿಸುವನ್=ನಿನಗೆ ದೊಡ್ಡಪ್ರಮಾಣದಲ್ಲಿ ಸಂಪತ್ತನ್ನು ನೀಡಿ ನಿನ್ನನ್ನು ಪೂಜಿಸುತ್ತಾನೆ;

ಅಂತಲ್ಲದೆ ನೀನ್ ಆತನ ಆರಯ್ಕೆಯೊಳಗಿರ್ಪೆ=ಅದೂ ಅಲ್ಲದೆ ನೀನು ಆತನ ಆಶ್ರಯದಲ್ಲಿ ಉಪಚಾರವನ್ನು ಪಡೆಯುತ್ತಿರುವೆ;

ಎನಿತನ್ ಅಗ್ಗಳಿಸಿ ಬಣ್ಣಿಸಲೊಪ್ಪದಯ್ಯ ಹೇಳು=ಅವನ ಋಣಕ್ಕೆ ಬಿದ್ದಿರುವ ನೀನು ಅವನನ್ನು ಯಾವ ಹೇಗೆ ಬೇಕಾದರೂ ದೊಡ್ಡವನೆಂದು ಬಣ್ಣಿಸಿಬಹುದಲ್ಲವೇ ಎಂದು ಚುಚ್ಚಿ ನುಡಿಯಲು;

ನಾನು ರಾಜಪ್ರತಿಗ್ರಹದ ಬಲದವನೆ=ನಾನು ರಾಜನು ನೀಡುವ ದಾನಕ್ಕೆ ಕಯ್ಯೊಡ್ಡಿ ಬಾಳುವವನೆ;

ಮುನಿಯಬೇಡ. ಆತ ಹುಸಿದನಾದಡೆ ನಿನ್ನನು ಏಗಯ್ಯಬಹುದು=ಕೋಪಿಸಿಕೊಳ್ಳಬೇಡ. ಹರಿಶ್ಚಂದ್ರನು ಸುಳ್ಳನ್ನಾಡಿದರೆ ನಿನ್ನನ್ನು ಏನು ಮಾಡಬಹುದು;

ಹರಿಶ್ಚಂದ್ರ ಮರೆದು ಹುಸಿಯಮ್ ನುಡಿದಡೆ=ಹರಿಶ್ಚಂದ್ರನು ಎಚ್ಚರ ತಪ್ಪಿ ಸುಳ್ಳನ್ನಾಡಿದರೆ;

ಶ್ರುತಿ, ಮತ, ಕುಲಾಚಾರ, ಧರ್ಮಮಾರ್ಗಮ್, ಮಹಾವ್ರತ ಅನುಷ್ಠಾನ, ಗುರುವಾಜ್ಞೆ, ಲಿಂಗಾರ್ಚನೆ, ಉನ್ನತ ತಪಮ್, ಬ್ರಹ್ಮಕರ್ಮಮ್ ಬೆಳೆದ ಪುಣ್ಯವೊಳಗಾದವಮ್ ತೊಱೆದು ಕಳೆದು=ವೇದ, ಮತ, ಕುಲದ ಸಂಪ್ರದಾಯ, ದರ್‍ಮದ ಹಾದಿ, ಮಹಾವ್ರತಗಳ ಆಚರಣೆ, ಗುರುವಿನ ಅಪ್ಪಣೆ, ಲಿಂಗದ ಪೂಜೆ, ಉತ್ತಮವಾದ ತಪಸ್ಸು, ಯಾಗದ ಆಚರಣೆಯಿಂದ ನಾನು ಪಡೆದುಕೊಂಡಿರುವ ಪುಣ್ಯವೆಲ್ಲವನ್ನು ತೊರೆದು ಬಿಸುಟು;

ಸತಿಯನ್ ಉಳಿದು=ಹೆಂಡತಿಯನ್ನು ಬಿಟ್ಟು;

ಅತಿದಿಗಂಬರನಾಗಿ=ಉಡುಗೆ ತೊಡುಗೆಯನ್ನು ಕಳಚಿ ಬರಿ ಮಯ್ಯಲ್ಲಿ;

ಮುಕ್ತಕೇಶಿತನಾಗಿ=ತಲೆಯಲ್ಲಿ ಎತ್ತಿಕಟ್ಟಿರುವ ತಲೆಗೂದಲನ್ನು ಬಿಚ್ಚಿ ಕೆದರಿ;

ನರಕಪಾಲದೊಳು ಸುರೆ ಎಱೆದು ಕುಡಿಯುತ ತೆಂಕಮುಖನಾಗಿ ಹೋಹೆನ್=ಮಾನವನ ತಲೆಬುರುಡೆಯಲ್ಲಿ ಹೆಂಡವನ್ನು ಸುರಿದುಕೊಂಡು ಕುಡಿಯುತ್ತ ತೆಂಕ ದಿಕ್ಕಿನ ಕಡೆಗೆ ಹೋಗುತ್ತೇನೆ;

ಧರೆ ಗಗನ ಅಡಸಿ ಕಾದುವಡೆ ಎಡೆಯಲಿಹ ಚರಾಚರವೆಲ್ಲಿ ಹೊಗಲಿ=ಬೂಮಿ ಮತ್ತು ಆಕಾಶಗಳು ಒಂದಕ್ಕೊಂದು ಒತ್ತಿಕೊಂಡು ಕಾದಾಡಲು ತೊಡಗಿದರೆ, ಇವರೆಡರ ನಡುವೆ ಇರುವ ಜೀವಿಗಳು ಮತ್ತು ವಸ್ತುಗಳು ಎಲ್ಲಿ ಅಡಗಿಕೊಳ್ಳುತ್ತವೆ;

ಮುನಿದು ಅಖಿಳಮಮ್ ಸುಟ್ಟೊಸೆದು ಮರಳಿ ಹುಟ್ಟಿಸಬಲ್ಲ ಮುನಿಗಳಿಬ್ಬರ ಶಾಂತಿ ಸವೆದ ಕದನದ ಮುಖದಲಿ=ಕೋಪೋದ್ರೇಕದಿಂದ ಕೂಡಿ ಸಕಲ ಚರಾಚರಗಳನ್ನು ಸುಟ್ಟು ಬೂದಿ ಮಾಡಿ, ಮತ್ತೆ ಹೊಸದಾಗಿ ಜಗತ್ತನ್ನು ನಿರ್‍ಮಿಸಬಲ್ಲ ಶಕ್ತಿಯುಳ್ಳ ಈ ಇಬ್ಬರು ಮುನಿಗಳು ಸಂಯಮವನ್ನು ಕಳೆದುಕೊಂಡು ಆಕ್ರೋಶಕ್ಕೆ ಬಲಿಯಾಗಿ ಕಾದಾಡುತ್ತಿರುವ ಇಂತಹ ಸನ್ನಿವೇಶದಲ್ಲಿ;

ಇರಬಾರದು…ಏಳಬಾರದು…ನುಡಿಯಬಾರದು…ಅಂತಿರಬಾರದು… “ಅಹುದು” ಎನಲುಬಾರದು… “ಅಲ್ಲ” ಎನಬಾರದು=ವಿಶ್ವಾಮಿತ್ರ-ವಸಿಶ್ಟರ ಮಾತಿನ ಕಾದಾಟವನ್ನು ನೋಡುತ್ತ ಕುಳಿತಿರಲಾಗದು…ಎದ್ದು ಹೋಗಬಾರದು…ಏನನ್ನು ಹೇಳಲಾಗದು…ಸುಮ್ಮನಿರಲಾಗದು…ವಿಶ್ವಾಮಿತ್ರ ಹೇಳುತ್ತಿರುವ ನುಡಿ ಸರಿ ಎಂದಾಗಲಿ ಇಲ್ಲವೇ ವಸಿಶ್ಟನು ಆಡುತ್ತಿರುವ ಮಾತು ಸರಿ ಎಂದು ಒಬ್ಬರ ಪರ ವಹಿಸಿ ಮಾತನಾಡಲಾಗದು…ಇಬ್ಬರಲ್ಲಿ ಒಬ್ಬರದು ತಪ್ಪು ಎಂದು ಹೇಳಲಾಗದು;

ಎರಡುಮ್ ನಿರೋಧದಿಂದ=ಇಬ್ಬರು ಮುನಿಗಳಲ್ಲಿ ಯಾವೊಬ್ಬ ಮುನಿಯನ್ನು ತಡೆಯಲಾಗದೆ/ಯಾವೊಬ್ಬ ಮುನಿಯ ಪರ ಇರಲಾಗದೆ;

ಒಡ್ಡೋಲಗಮ್ ಚಿಂತೆ ಮುಸುಕಿ ಸೈವೆರಗಾದುದು=ಒಡ್ಡೋಲಗದಲ್ಲಿದ್ದ ದೇವತೆಗಳು ಮತ್ತು ಮುನಿಗಳು ಚಿಂತೆಗೆ ಗುರಿಯಾಗಿ ತಳಮಳಿಸತೊಡಗಿದರು;

ಒಂದಕ್ಕೆ ಹಿತನುಡಿಯೆ ಪಕ್ಷವೆಂದು=(ದೇವೇಂದ್ರನ ಉಬಯಸಂಕಟ) ವಸಿಶ್ಟ ಇಲ್ಲವೇ ವಿಶ್ವಾಮಿತ್ರರಲ್ಲಿ ಒಬ್ಬರ ಮಾತು ಸರಿಯಾಗಿದೆ ಎಂದು ಹೇಳಿದರೆ, ಅವರ ಪಕ್ಶಪಾತಿಯಾದೆನು ಎಂಬ ಅಪವಾದ ಬರುತ್ತದೆ;

ಎರಡುವಮ್ ಹಿಂದುಗಳೆದಿರಲು ಉಪೇಕ್ಷಿತನೆಂದು=(ದೇವೇಂದ್ರನ ಉಬಯಸಂಕಟ) ಇಬ್ಬರ ಮಾತನ್ನು ನಿರಾಕರಿಸಿದರೆ ನಮ್ಮನ್ನು ಕಡೆಗಣಿಸುತ್ತಿದ್ದಾನೆ ಎಂದು ಇಬ್ಬರು ಮುನಿಗಳು ನನ್ನ ಬಗ್ಗೆ ಕುಪಿತಗೊಳ್ಳುತ್ತಾರೆ;

ಜರೆದಡೆ ಎಮ್ಮಿಂದ ಅಧಿಕನೇ ಎಂದು=(ದೇವೇಂದ್ರನ ಉಬಯಸಂಕಟ) ನೀವಿಬ್ಬರೂ ಈ ರೀತಿ ಮಾತಿನ ಜಗಳಕ್ಕೆ ನಿಂತಿರುವುದು ಸರಿಯಲ್ಲವೆಂದು ನಿಂದಿಸಿದರೆ ನಮಗಿಂತಲೂ ಈತ ದೊಡ್ಡವನೇ ಎಂದು ಬೇಸರಪಟ್ಟುಕೊಳ್ಳುತ್ತಾರೆ;

ಹೊಗಳ್ದಡೆ ಉಪಚಾರವೆಂದು=(ದೇವೇಂದ್ರನ ಉಬಯಸಂಕಟ) ಇಬ್ಬರನ್ನೂ ಹೊಗಳಿದರೆ, ನಮ್ಮನ್ನು ಸಮಾದಾನಪಡಿಸಲೆಂದು ಬಾಯುಪಚಾರದ ಮಾತನ್ನಾಡುತ್ತಿದ್ದಾನೆ ಎಂದು ತಿಳಿಯುತ್ತಾರೆ.

ಎತ್ತಿದಡೆ ಧೂರ್ತನೆಂದು ನೊಂದು ಶಾಪವನ್ ಈಯದೆ ಇರರು ಎಂದು=(ದೇವೇಂದ್ರನ ಉಬಯಸಂಕಟ) ಇಬ್ಬರಿಗೂ ಈ ನಿಮ್ಮ ವರ್‍ತನೆ ಸರಿಯಲ್ಲವೆಂದು ಎಚ್ಚರಿಸಿದರೆ, ಅದರಿಂದ ನೊಂದು ನನಗೆ ಶಾಪವನ್ನು ಕೊಡದೆ ಸುಮ್ಮನಿರುವುದಿಲ್ಲ;

ಸುರಪನು ಆನಂದರಸವರತು, ಬೆರಗಿನ ಮೊಗದೊಳಿರಲು=ದೇವೇಂದ್ರನು ಯಾರೊಬ್ಬರ ಕಡೆಗೂ ಮಾತನಾಡಲಾಗದೆ ಉಬಯಸಂಕಟದಿಂದ ಪರಿತಪಿಸುತ್ತ, ಆನಂದದ ಒಳಮಿಡಿತಗಳು ಇಲ್ಲವಾಗಿ, ದೇವೇಂದ್ರನ ಮೊಗದಲ್ಲಿ ತಳಮಳ ಎದ್ದು ಕಾಣುತ್ತಿರಲು;

ನಾರದ ಧಟ್ಟಿಸುತ ಎದ್ದು=ನಾರದನು ವಿಶ್ವಾಮಿತ್ರನನ್ನು ವಿರೋದಿಸುತ್ತ ಎದ್ದು ನಿಂತು;

ಕೌಶಿಕ, ವಸಿಷ್ಠಂಗೆ ಭಾಷೆಯನು ಕೊಡು ಎಂದನು=ವಿಶ್ವಾಮಿತ್ರನೇ, ಹರಿಶ್ಚಂದ್ರನ ಬಗ್ಗೆ ನೀನು ಮಾಡಿದ ಆಪಾದನೆಗೆ ಪ್ರತಿಯಾಗಿ ವಸಿಶ್ಟ ಮುನಿಯು ನಿನಗೆ ಸವಾಲನ್ನು ಹಾಕಿದ್ದಾನೆ. ಹರಿಶ್ಚಂದ್ರನು ಸುಳ್ಳನ್ನಾಡಿದರೆ ತನ್ನ ಪುಣ್ಯವನ್ನೆಲ್ಲಾ ತೊರೆದು ಬೆತ್ತಲೆಯಾಗಿ ಹೋಗುವೆನೆಂದು ಪಣಹೂಡಿದ್ದಾನೆ. ಇದಕ್ಕೆ ಪ್ರತಿಯಾಗಿ ಹರಿಶ್ಚಂದ್ರನು ಸುಳ್ಳನ್ನಾಡದಿದ್ದರೆ, ನೀನು ಏನನ್ನೂ ಮಾಡುತ್ತೀಯೆ ಎಂಬುದನ್ನು ತಿಳಿಸು;

ಹರಿಶ್ಚಂದ್ರ ಹುಸಿಯನು ನುಡಿಯದಿರಲ್… ಎನಗೆ ಪ್ರತಿಜ್ಞೆ=ಹರಿಶ್ಚಂದ್ರನು ಸುಳ್ಳನ್ನಾಡದಿದ್ದರೆ…ಇದು ನನ್ನ ಪ್ರತಿಜ್ನೆ ಎಂದು ವಿಶ್ವಾಮಿತ್ರನು ತಾನೇನು ಮಾಡುತ್ತೇನೆ ಎಂಬುದನ್ನು ಹೇಳುತ್ತಾನೆ;

ಧರೆಯೊಳು ಚತುರ್ಯುಗಂಗಳು ಮರಳಿ ಮರಳಿ ಸಾವಿರ ಬಾರಿ ಬಂದಡೆ ಅಜಗೆ ಒಂದು ದಿನ=ಬೂಮಂಡಲದಲ್ಲಿ ಕ್ರುತ ಯುಗ—ತ್ರೇತಾ ಯುಗ—ದ್ವಾಪರ ಯುಗ—ಕಲಿ ಯುಗ ಎಂಬ ನಾಲ್ಕು ಯುಗಗಳು ಮತ್ತೆ ಮತ್ತೆ ಸಾವಿರ ಬಾರಿ ಬಂದರೆ ಬ್ರಹ್ಮನಿಗೆ ಒಂದು ದಿನ;

ಆ ದಿನದ ಪರಿ ದಿನಮ್ ಮೂವತ್ತು ಬರಲ್ ಏಕಮಾಸ=ಆ ದಿನದ ರೀತಿ ಮೂವತ್ತು ದಿನಗಳು ಉರುಳಿದರೆ ಒಂದು ತಿಂಗಳು;

ಆ ಮಾಸ ಹನ್ನೆರಡಾಗಲು ವರುಷ=ಆ ತಿಂಗಳು ಹನ್ನೆರಡಾದರೆ ಒಂದು ವರುಶ;

ಆ ವರುಷ ಶತ ಎಂಬುದು ಈ ಸುರಪತಿಗೆ ಪರಮ ಆಯು=ಅಂತಹ ಒಂದು ನೂರು ವರುಶಗಳು ಈ ದೇವೇಂದ್ರನಿಗೆ ಪರಮ ಆಯುಸ್ಸು;

ಈತನ್ ಈರೇಳ್ ಭವಮ್ ಬಪ್ಪನ್ನೆವರ ದೇವಲೋಕಕ್ಕೆ ಬಾರೆನ್=ದೇವೇಂದ್ರನು ಇಂತಹ ಹದಿನಾಲ್ಕು ಹುಟ್ಟುಗಳನ್ನು ಪಡೆಯುವವರೆಗೂ ನಾನು ದೇವಲೋಕಕ್ಕೆ ಬರುವುದಿಲ್ಲ;

ಭಕ್ತಿ, ಶಮೆ, ದಮೆ, ಯೋಗ, ಯಾಗ, ಶ್ರುತಿಮತಮಯ, ವಿರಕ್ತಿ, ಘೋರವ್ರತ, ತಪೋನಿಷ್ಠೆ, ಜಪ, ಗುಣಾಸಕ್ತತೆ, ಸ್ನಾನ, ಮೌನ, ಧ್ಯಾನ, ಆಚಾರ, ಸತ್ಯತಪ, ನಿತ್ಯನೇಮ, ಯುಕ್ತಿ, ವೇದ ಆಗಮ ಅಭ್ಯಾಸ, ಲಿಂಗಾರ್ಚನಾ ಆಸಕ್ತಿಯಿಮ್ ಬೆಳೆದ ಪುಣ್ಯದೊಳು ಅರ್ಧಮಮ್ ಸುಧಾಭುಕ್ತರ್ ಅರಿಯಲು ಕೊಡುವೆನ್=ತಾನು ಬಹುಬಗೆಯ ಜಪ ತಪ ನೇಮ ಯೋಗ ಯಾಗಗಳಿಂದ ಮತ್ತು ಲಿಂಗದ ಪೂಜೆಯಿಂದ ಗಳಿಸಿಕೊಂಡಿರುವ ಪುಣ್ಯದಲ್ಲಿ ಅರ್‍ದವನ್ನು ಹರಿಶ್ಚಂದ್ರನಿಗೆ ದೇವತೆಗಳ ಮುಂದೆ ನೀಡುತ್ತೇನೆ;

ಎಂದು ಭೂವರನನ್ ಪರೀಕ್ಷಿಸುವೆ=ಯಾವಾಗ ಹರಿಶ್ಚಂದ್ರನ ಸತ್ಯವನ್ನು ಒರೆಹಚ್ಚಿನೋಡುವೆ;

ಎನ್ನ ಮನ ಬಂದ ದಿನ=ನನ್ನ ಮನಸ್ಸಿಗೆ ಬಂದ ದಿನ;

ಎನಿತು ಸೂಳ್=ಎಶ್ಟು ಸಾರಿ/ಸಮಯ;

ಆತನ್ ಈ ಧರೆಯೊಳ್ ಇಪ್ಪಂದು ತನಕ=ಹರಿಶ್ಚಂದ್ರನು ಈ ಬೂಮಂಡಲದಲ್ಲಿ ಬದುಕಿರುವ ತನಕ;

ಆವಾವ ಪರಿಯೊಳು=ಯಾವ ಯಾವ ರೀತಿಗಳಲ್ಲಿ;

ಸಹಸ್ರ ವಿಧದೊಳು=ಸಾವಿರಾರು ಬಗೆಗಳಲ್ಲಿ;

ದಿಟವೆ=ನೀನು ಹೇಳುತ್ತಿರುವುದು ನಿಜವೆ;

ದಿಟ=ನಿಜ;

ಹಿಂದುಗಳೆಯಲು ಅದೇಕೆ ನಡೆ=ತಡವೇಕೆ…ಇಂದಿನಿಂದಲೇ ಹರಿಶ್ಚಂದ್ರನ ಸತ್ಯವನ್ನು ಒರೆಹಚ್ಚಿನೋಡಲು ಹೊರಡು;

ನೀನು ಆಡುವ ಅಂದವು ಅನುವಾಗಿರದು ಎನುತ್ತೆ ಕೌಶಿಕ ಅಣಕದಿಂದ ಆಡಲು=ಈಗಲೇ ಹೋಗಿ ಹರಿಶ್ಚಂದ್ರನನ್ನು ಪರೀಕ್ಶಿಸು ಎಂದು ನೀನು ಆಡುತ್ತಿರುವ ಮಾತಿನ ರೀತಿಯು ಸರಿಯಾಗಿಲ್ಲ ಎನ್ನುತ್ತ ವಿಶ್ವಾಮಿತ್ರ ಮುನಿಯು ವಸಿಶ್ಟನನ್ನು ಅಣಕಿಸಿ ನುಡಿಯಲು;

ಎಮ್ಮ ಕೂಡ ಇನಿತು ಅಣಕವೇಕೆ. ಇನಿತು ಮುಳಿಸು ಆವುದು=ನಮ್ಮ ಜೊತೆಯಲ್ಲಿ ಇಶ್ಟೊಂದು ಅಣಕವೇಕೆ. ನಮ್ಮ ಬಗ್ಗೆ ಇಶ್ಟೊಂದು ಕೋಪಕ್ಕೆ ಕಾರಣ ಯಾವುದು ಎಂದು ವಸಿಶ್ಟ ಮುನಿಯು ವಿಶ್ವಾಮಿತ್ರನನ್ನು ಪ್ರಶ್ನಿಸುತ್ತಾನೆ

ಹರಿಶ್ಚಂದ್ರಭೂಭುಜನ ಮನೆಗೆ ಈಗಳ್ ಇಂತು ನೀ ಹೋಗಿ, ಕೌಶಿಕನು ನೆಟ್ಟನೆ ನಿನ್ನನ್ ಇಂತಿಂತು ಕೆಡಿಸಿದಪ…ನೀನ್ ಆವ ಪರಿಯಲ್ ಎಚ್ಚತ್ತಿರೆಂದು ನೆನಸಿಕೊಡು ಹೋಗು=ಹರಿಶ್ಚಂದ್ರ ಮಹಾರಾಜನ ಮನೆಗೆ ಈಗಲೇ ಹೋಗಿ, ವಿಶ್ವಾಮಿತ್ರ ಮುನಿಯು ನೀನು ಸುಳ್ಳಾಡುವಂತಹ ಸನ್ನಿವೇಶವನ್ನು ತಂದೊಡ್ಡಿ ನಿನ್ನನ್ನು ಕೆಡಿಸುತ್ತಾನೆ. ಆದ್ದರಿಂದ ನೀನು ಎಲ್ಲ ರೀತಿಯಿಂದಲೂ ಎಚ್ಚರದಿಂದಿರು ಎಂದು ತಿಳುವಳಿಕೆಯನ್ನು ಕೊಡಹೋಗು;

ಆನು ಆಡುವವನೆ ಹೇಳು=ನಾನು ಈ ರೀತಿ ನುಡಿಯುತ್ತೇನೆಯೇ ಹೇಳು. ಅಂದರೆ ಹರಿಶ್ಚಂದ್ರನಿಗೆ ನಾನು ಸುಳ್ಳನ್ನಾಡದಿರು ಎಂದು ಹೇಳಬೇಕಾದ ಅಗತ್ಯವಿಲ್ಲ. ಆತನ ನಿಜಜೀವನವೇ ಸತ್ಯದ ನಡೆನುಡಿಯಿಂದ ಕೂಡಿದೆ;

ಎನ್ನ ಗಾಸಿಗಾರದೆ ನೃಪನ್ ಹುಸಿನುಡಿಯೆ ಮುನಿತನವನ್ ಈಡಾಡಿ ಹೋಹಂತಿರೆ ಆದಪುದು. ಹೋಗಿ ನೀನ್ ಹೇಳ್=ನಾನು ಕೊಡುವ ತೊಂದರೆಯನ್ನು ತಾಳಲಾರದೆ ಹರಿಶ್ಚಂದ್ರನು ಸುಳ್ಳನ್ನಾಡಿದರೆ, ನೀನು ಮುನಿತನವನ್ನು ತ್ಯಜಿಸಿ ಬೆತ್ತಲೆಯಾಗಿ ಅಲೆಯಬೇಕಾಗುವುದು. ಆದ್ದರಿಂದ ನಿನ್ನ ಒಳಿತಿಗಾಗಿಯಾದರೂ ಹೋಗಿ ಹೇಳು;

ತರಣಿ ತೇಜಮ್ ಕಿಡದಿರು=ಸೂರ್‍ಯನೇ, ನಿನ್ನ ಕಿರಣಗಳನ್ನು ಹಾಳುಮಾಡಿಕೊಳ್ಳಬೇಡ;

ಅಗ್ನಿ ಬಿಸುಪ ಆರದಿರು=ಅಗ್ನಿಯೇ, ನಿನ್ನ ಬಿಸುಪನ್ನು ತಣ್ಣಗೆ ಮಾಡಿಕೊಳ್ಳಬೇಡ;

ಸರಸಿರುಹವೈರಿ ತಂಪಮ್ ಬಿಡದಿರ್=ಚಂದ್ರನೇ, ನಿನ್ನ ತಂಪನ್ನು ಬಿಡಬೇಡ;

ಎಲೆಲೆ, ಮಂದರವೆ ಚಲಿಸದಿರ್ ಎಂದು ಬೋಧಿಸಲದೇಕೆ=ಎಲೆಲೆ, ಮಂದರ ಪರ್‍ವತವೇ, ಇದ್ದ ಎಡೆಯನ್ನು ಬಿಟ್ಟು ಮುಂದಕ್ಕೆ ಚಲಿಸಬೇಡ ಎಂದು ತಿಳಿಯಹೇಳುವ ಅಗತ್ಯವಿದೆಯೇ;

ಸುಮ್ಮನಿರಲು ನಿಜವ ಅಳಿವವೇ=ಏನನ್ನು ಹೇಳದೆ ನಾವು ಸುಮ್ಮನಿದ್ದರೆ, ಅವು ತಮ್ಮ ನಿಜಗುಣವನ್ನು ಬಿಟ್ಟು ಹಾಳಾಗುತ್ತವೆಯೇ. ಅಂದರೆ ಉರಿಯುವ ಸೂರ್‍ಯನ ಕಿರಣಗಳ ಕಾಂತಿ—ಬೆಂಕಿಯ ಸುಡುವಿಕೆ—ಬೆಳಗುವ ಚಂದ್ರನ ಬೆಳಕು—ಮಂದರ ಪರ್‍ವತದ ಅಚಲತೆಯು ಹೇಗೆ ಅವುಗಳ ಸಹಜಗುಣವೋ ಅಂತೆಯೇ ಹರಿಶ್ಚಂದ್ರನ ನಡೆನುಡಿಯಲ್ಲಿ ಸತ್ಯವೆಂಬುದು ಸಹಜವಾಗಿದೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ;

ವರಹರಿಶ್ಚಂದ್ರ ಸತ್ಯಮ್ ಕೆಡದಿರ್ ಎಂದು ಬೋಸರಿಸುವಂತಾಗಿ ಹುಸಿಯುಂಟೆ=ಉತ್ತಮ ವ್ಯಕ್ತಿಯಾದ ಹರಿಶ್ಚಂದ್ರನಿಗೆ ನೀನು ಸತ್ಯದ ನಡೆನುಡಿಯನ್ನು ಬಿಡಬೇಡ ಎಂದು ಎಚ್ಚರಿಕೆಯನ್ನು ನೀಡುವಶ್ಟು ಅವನಲ್ಲಿ ಸುಳ್ಳಿದೆಯೆ;

ಕೊಂಡೆಯವೆ ಎನಗೆ=ನನಗೆ ಚಾಡಿ ಹೇಳುವ ಗುಣವಿದೆಯೆ. ಅಂದರೆ ನಿನ್ನ ಮೇಲೆ ದೂರನ್ನು ಹೇಳುವಂತಹ ಕೀಳು ಕೆಲಸವನ್ನು ನಾನು ಮಾಡುವುದಿಲ್ಲ;

ಹಿರಿಯತನ ಕೆಟ್ಟಿಂತು ನುಡಿಯಲಹುದೇ ಎಂದು ವಾಸಿಷ್ಠಮುನಿ ನುಡಿದನು=ನೀನು ನಿನ್ನ ಹಿರಿಯತನಕ್ಕೆ ತಕ್ಕುದಲ್ಲದ ಮಾತುಗಳನ್ನು ಈ ರೀತಿ ನುಡಿಯಬಹುದೇ ಎಂದು ವಸಿಶ್ಟನು ವಿಶ್ವಾಮಿತ್ರನನ್ನು ಹಂಗಿಸಿದನು;

ಸಿಡಿಲು ಹೊಡೆವಡೆ ಹಿಡಿದ ಕೊಡೆ ಕಾವುದೇ=ಸಿಡಿಲು ಬಡಿದಾಗ ಹಿಡಿದ ಕೊಡೆಯು ಕಾಪಾಡುವುದೇ;

ಮುನಿದು ಪೊಡವಿ ನುಂಗುವಡೆ ಮನೆ ತಾಂಗುವುದೆ=ಬೂಮಿಯು ಕಂಪಿಸಿತೊಡಗಿದಾಗ ಮನೆಯು ಬೀಳದೆ ಉಳಿಯುವುದೆ;

ಕವಿದು ಹೆಗ್ಗಡಲುಕ್ಕಿ ಜಗವ ಮೊಗೆವಡೆ ಮಳೆಗಳು ಅಡ್ಡಬಹವೇ=ಹೆಗ್ಗಡಲು ದೊಡ್ಡ ದೊಡ್ಡ ಅಲೆಗಳ ಉಬ್ಬರವಿಳಿತದಿಂದ ತೀರವನ್ನು ಅಪ್ಪಳಿಸುತ್ತ ಮುನ್ನುಗ್ಗಿ ಜಗತ್ತನ್ನು ಆಕ್ರಮಿಸಿಕೊಳ್ಳುವಾಗ ಮಳೆಗಳು ಅಡ್ಡಬಂದು, ಕಡಲಿನ ಜಲರಾಶಿಯನ್ನು ಹಿಮ್ಮೆಟ್ಟಿಸಿ ಜಗತ್ತನ್ನು ಕಾಪಾಡಲು ಆಗುತ್ತದೆಯೇ;

ಹೇಳು, ಮುನಿಪ…ನಿನ್ನ ಬಡ ಬೋಧೆಗೀಧೆಗಳು ರಕ್ಷಿಸುವುವಲ್ಲ=ಹೇಳು ವಸಿಶ್ಟನೇ, ನಿನ್ನ ತಿಳುವಳಿಕೆಯ ಮಾತುಗಳು ಹರಿಶ್ಚಂದ್ರನನ್ನು ಕಾಪಾಡುವುದಿಲ್ಲ;

ನಾನ್ ಕಡುಮುಳಿದ ಬಳಿಕಲು ಏಗುವುವು=ನಾನು ತೀವ್ರವಾಗಿ ಕೋಪಿಸಿಕೊಂಡಿರುವುದರಿಂದ ಯಾರೂ ಏನನ್ನು ಮಾಡಲಾಗುವುದಿಲ್ಲ. ಅಂದರೆ ಹರಿಶ್ಚಂದ್ರನು ಸುಳ್ಳನ್ನಾಡದೆ ಸತ್ಯವಂತನಾಗಿ ಉಳಿಯಲು ಆಗುವುದಿಲ್ಲ;

ನೀ ಹೇಳದಿರ್ದಡೆ ಮದನಹರನಾಣೆ ಹೋಗು ಎಂದು ಕೌಶಿಕನ್ ವಸಿಷ್ಠ ಮುನಿಯ ಜಱೆದನು=ನೀನು ಹರಿಶ್ಚಂದ್ರನಿಗೆ ಹೇಳದಿದ್ದರೆ ಶಿವನಾಣೆ. ಹೋಗು ಈ ಕೂಡಲೇ ಅವನಿಗೆ ಎಚ್ಚರಿಕೆಯನ್ನು ನೀಡು ಎಂದು ವಸಿಶ್ಟ ಮುನಿಯನ್ನು ವಿಶ್ವಾಮಿತ್ರನು ಹಂಗಿಸಿದನು;

ಕುಲವ ನಾಲಗೆ ಅರುಹಿತು ಎಂಬ ನಾಣ್ಣುಡಿಗೆ ಇಂದು ನೆಲೆಯಾಯ್ತಲಾ=“ಕುಲವನ್ನು ನಾಲಗೆ ಹೇಳಿತು” ಎಂಬ ಗಾದೆಯಂತೆ ಇಂದು ನಿನ್ನ ಗುಣವೇನೆಂಬುದನ್ನು ನೀನಾಡುವ ಮಾತುಗಳೇ ಸಾಕ್ಶಿಯಾಗಿವೆ ಎಂದು ವಸಿಶ್ಟನು ವಿಶ್ವಾಮಿತ್ರನನ್ನು ಹೀಯಾಳಿಸುತ್ತಾನೆ. ವ್ಯಕ್ತಿಯು ಆಡುವ ಮಾತುಗಳು ಆತನ ಜಾತಿ/ಮತವನ್ನು ಸೂಚಿಸುತ್ತದೆ. ಅಂದರೆ ಸಾಮಾಜಿಕ ಅಂತಸ್ತಿನಲ್ಲಿ ವ್ಯಕ್ತಿಯು ಮೇಲು ಇಲ್ಲವೇ ಕೀಳು ಎಂಬುದನ್ನು ಸೂಚಿಸುತ್ತದೆ ಎಂಬ ತಿರುಳನ್ನು ಈ ಗಾದೆ ಮಾತು ಒಳಗೊಂಡಿದೆ;

 ಬ್ರಹ್ಮ ಋಷಿಯಾದಡೆ ಒಳಗು ನಿರ್ಮಳವಪ್ಪುದಯ್ಯ. ನೀನ್ ರಾಜರ್ಷಿ ಕೋಪಿಸದೆ ಧಟ್ಟಿಸದೆ ಕೆಡೆನುಡಿಯದೆ ನಿಲಲ್ ಎಂತು ಬಲ್ಲೆ=ನೀನು ಬ್ರಹ್ಮ ರಿಸಿಯಾಗಿದ್ದರೆ ನಿನ್ನ ಮನಸ್ಸು ನಿರ್‍ಮಲವಾಗಿರುತ್ತಿತ್ತು. ಅಂದರೆ ನಿನ್ನ ಹತೋಟಿಯಲ್ಲಿರುತ್ತಿತ್ತು. ಆದರೆ ನೀನು ರಾಜ ರಿಸಿಯಾಗಿರುವೆ. ಆದ್ದರಿಂದಲೇ ಕೋಪಿಸಿಕೊಳ್ಳದೆ, ನಿಂದಿಸದೆ, ಕೆಟ್ಟನುಡಿಯನ್ನಾಡದೆ ಇರಲು ನಿನ್ನಿಂದ ಆಗುತ್ತಿಲ್ಲ;

ಬ್ರಹ್ಮ ಋಷಿ=ಜಾತಿಯಲ್ಲಿ ಬ್ರಾಹ್ಮಣನಾಗಿ ಹುಟ್ಟಿ ಬೆಳೆದು ಜಪ ತಪ ವಿದ್ಯೆ ಯೋಗ ಯಾಗಗಳಿಂದ ಅರಿವನ್ನು ಪಡೆದು ರಿಸಿಯಾದವನು;

ರಾಜರ್ಷಿ=ಬ್ರಾಹ್ಮಣ ಜಾತಿಯಲ್ಲದೆ ಬೇರೊಂದು ಜಾತಿಯಲ್ಲಿ ಹುಟ್ಟಿ ಬೆಳೆದು ರಾಜನಾಗಿ ಆಳಿ, ಅನಂತರ ಜಪ ತಪ ವಿದ್ಯೆ ಯೋಗ ಯಾಗಗಳಿಂದ ಅರಿವನ್ನು ಪಡೆದು ರಿಸಿಯಾದವನು;

ಎನ್ನ ನೀನೀಗ ಹೆಪ್ಪಳಿಸದೆ ಆಡಿದೆ=ನೀನು ಈಗ ನನ್ನ ಬಗ್ಗೆ ಯಾವ ಹೆದರಿಕೆಯೂ ಇಲ್ಲದೆ ನನ್ನ ಕುಲದ ಪ್ರಸ್ತಾಪವನ್ನು ಮಾಡಿ ತುಂಬಾ ಕಡೆಗಣಿಸಿ ಮಾತನಾಡಿದೆ;

ಅಹುದಹುದು…ನಿನ್ನಲಿಹ ನೆಲೆಯಾಡಿತು ಎನೆ=ನಿಜ…ನಿನ್ನ ವ್ಯಕ್ತಿತ್ವದಲ್ಲಿನ ಕೆಟ್ಟತನವೇ ಅಂತಹ ಮಾತುಗಳನ್ನು ನಾನು ಆಡಲು ಕಾರಣವಾಯಿತು ಎಂದು ವಸಿಶ್ಟನು ನುಡಿಯಲು;

ಕೌಶಿಕನ್ ಕುಪಿತನಾದನ್=ವಿಶ್ವಾಮಿತ್ರನು ಕೋಪದಿಂದ ಕೆರಳಿದನು;

ಅದನ್ ಆವ ಕವಿ ಬಣ್ಣಿಸುವನು=ವಿಶ್ವಾಮಿತ್ರನ ಕೋಪದ ತೀವ್ರತೆಯನ್ನು ಯಾವ ಕವಿ ತಾನೆ ಬಣ್ಣಿಸಬಲ್ಲ;

 ನೋಡು ನೋಡು. ಇಂದು ಎನ್ನ ರಾಜ ಋಷಿಯೆಂದು ಕೆಟ್ಟಾಡಿತಕ್ಕೆ=ನೋಡು ನೋಡು ವಸಿಶ್ಟ…ಇಂದು ನನ್ನನ್ನು ರಾಜ ರಿಸಿಯೆಂದು ಕರೆದು ಕಡೆಗಣಿಸಿ ನೀನು ನುಡಿದೆಯಾದ ಕಾರಣದಿಂದ;

ಆ ಹರಿಶ್ಚಂದ್ರನನ್ ಅಸತ್ಯನನ್ ಮಾಡಿಸುವೆನ್=ನಿನ್ನ ಶಿಶ್ಯನಾದ ಹರಿಶ್ಚಂದ್ರನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇನೆ;

ಅಧಿಕ ಪ್ರತಿಜ್ಞೆಗಳನ್ ಆಂತ ನಿನ್ನನ್ ವ್ರತಭ್ರಷ್ಟನ್ ಎನಿಸಿ=ದೊಡ್ಡ ದೊಡ್ಡ ಪ್ರತಿಜ್ನೆಗಳನ್ನು ತೊಟ್ಟಿರುವ ನಿನ್ನನ್ನು ವ್ರತ ತಪ್ಪಿದವನನ್ನಾಗಿ ಮಾಡಿ;

ರೋಡಾಡಿ ಕಾಡುವೆನು ಎನುತ್ತ ವಿಶ್ವಾಮಿತ್ರನ್ ಎದ್ದು=ಅಪಮಾನಗೊಳಿಸಿ ಕಾಡುತ್ತೇನೆ ಎನ್ನುತ್ತ ಮೇಲೆದ್ದು;

ಸಿಡಿಲು ಗಜರಿ ಗರ್ಜಿಸಿ ಮೇಘದಿಂದ ಪೊರಮಡುವ ಅಂದದಿ ಸಾವನ್ ಈಡಾಡಿದವರೊಡೆಯನ ಆಡಂಬರದ ಓಲಗದಿಂದ ಹೊರವಂಟನ್=ಮೋಡಗಳ ತಿಕ್ಕಾಟದಿಂದ ಮೊಳಗುತ್ತ ಹೊರಹೊಮ್ಮುವ ಸಿಡಿಲಿನಂತೆ ವಿಶ್ವಾಮಿತ್ರನು ಅಬ್ಬರಿಸುತ್ತ ದೇವೇಂದ್ರನ ಸಿರಿಸಂಪತ್ತಿನಿಂದ ಮೆರೆಯುತ್ತಿರುವ ಒಡ್ಡೋಲಗದಿಂದ ಹೊರನಡೆದನು;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: