ವಚನ: ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ

– .

ಬಸವಣ್ಣ,, Basavanna

“ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ
ಛಲಬೇಕು ಶರಣಂಗೆ ಲಿಂಗ ಜಂಗಮವನೊಂದೆಂಬ
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ”

ಮೂಲತಹ ಮನಸ್ಸು ಚಂಚಲ ಸ್ವಬಾವದಿಂದ ಕೂಡಿದೆ. ಮನಸ್ಸನ್ನು ಒಂದೆಡೆ ಸ್ತಿರವಾಗಿ ನಿಲ್ಲಿಸುವುದು ಎಂದರೆ ಅದೊಂದು ತಪಸ್ಸೇ ಸರಿ. ಸ್ತಿರವಿಲ್ಲದ ಚಿತ್ತ ಎತ್ತೆಂದರತ್ತ ಹರಿದು, ಇಂದ್ರಿಯ ನಿಗ್ರಹವಿಲ್ಲದೆ ಚಪಲತೆಯಿಂದ ಕೂಡಿರುತ್ತದೆ. ಅಂತ‌ಹ ಸ್ತಿರವಿಲ್ಲದ ಚಿತ್ತವನ್ನು ಒಂದೆಡೆ ಹಿಡಿದಿಡಲು ಶರಣನಿಗೆ ಚಲ ಬಹಳ ಮುಕ್ಯ ಎಂದು ಬಸವಣ್ಣನವರು ತಮ್ಮ ವಚನದಲ್ಲಿ ತಿಳಿಸಿದ್ದಾರೆ.

ಶರಣನಾದವನಿಗೆ ಬೇರೆಯವರ ಹಣ, ಬೇರೆಯವರ ಮಡದಿಯನ್ನು ಒಲ್ಲೆನೆಂಬ ಚಲವಿರಬೇಕು. ಅದು ಮನಸ್ಸಿನ ದ್ರುಡತೆ ಎಂದಿದ್ದಾರೆ ಬಸವಣ್ಣನವರು. ಹಾಗೆಯೇ ಇಶ್ಟಲಿಂಗವನ್ನು ಒಪ್ಪಿ ಅಪ್ಪಿಕೊಂಡಾಗ ಅದೇ ಸತ್ಯ ಎಂಬ ದ್ರುಡ ಮನಸ್ಸು ಬೇಕು. ಅದು ಚಲಗಾರ ಶರಣನಿಗೆ ಮಾತ್ರ ಸಾದ್ಯವಿದೆ. ಈ ದೇವರು ದರ‍್ಮ ಎಂಬ ಸೂಕ್ಶ್ಮ ವಿಚಾದರಲ್ಲಿ ಇಶ್ಟಲಿಂಗವನ್ನು ಒಪ್ಪಿಕೊಂಡು ಆರಾದಿಸುತ್ತಿರುವಾಗ ಬೇರೆ ದೈವದ ಕಡೆಗೆ ಮನಸ್ಸು ಹೊರಳದೆ, ಏಕಚಿತ್ತನಾಗಿ ಒಂದೇ ದೇವೋಪಾಸಕನಾಗಿರಲು ಶರಣನಿಗೆ ಚಲಬೇಕು. ಲಿಂಗ ಒಳಗಿನ ಮುಕವಾದರೆ, ಜಂಗಮ ಹೊರಗಿನ ಮುಕ. ಈ ಲಿಂಗ ಜಂಗಮ ಎಂಬ ಎರಡು ತತ್ವಗಳು ಒಂದೇ ಎಂದು ಸಮನಾಗಿ ಕಾಣಲು ಕೂಡ ಶರಣನಿಗೆ ಚಲವಿರಬೇಕಾಗುತ್ತದೆ. ಈ ಮೇಲಿನ ಎಲ್ಲಾ ಚಲಗಳನ್ನು ಸಾದಿಸುವ ಚಲಗಾರ ಶರಣ ಕಂಡಿತ ಪಕ್ವಗೊಳ್ಳುತ್ತಾನೆ. ಈ ಆಕರ‍್ಶಣೆಗಳನ್ನು ದಿಕ್ಕರಿಸಲು ಕೂಡ ಪ್ರಚಂಡ ಮನೋಬಲ ಬೇಕಾಗುತ್ತದೆ. ಈ ಎಲ್ಲಾ ಆಸೆ ಆಮಿಶಗಳನ್ನು ದಿಕ್ಕರಿಸಿ ಒಂದು ವಿಶೇಶ ಶಕ್ತಿಯನ್ನು ಪಡೆದುಕೊಳ್ಳುತ್ತಾನೆ. ಇದರಿಂದಾಗಿ ಬದುಕು ಸಾರ‍್ತಕವೆನಿಸಿ ಬದುಕಿಗೆ ಒಂದು ಹೊಸ ಆಯಾಮ ನೀಡಿದಂತಾಗುವುದೇ ಪ್ರಸಾದ. ಈ ಪ್ರಸಾದವೇ ನಿಜವಾದದ್ದು. ಆಸೆ ಆಮಿಶಗಳನ್ನು, ಅತಿಯಾದ ಪ್ರಾಪಂಚಿಕ ವಿಶಯಗಳನ್ನು ತಿರಸ್ಕರಿಸಲು ಶರಣನಿಗೆ ಚಲ ಬೇಕು. ಅಂತಹ ಚಲವಿಲ್ಲದ ಶರಣನನ್ನು ಕೂಡಲಸಂಗಮದೇವ ಮೆಚ್ಚುವುದಿಲ್ಲ ಎಂಬುದೇ ಬಸವಣ್ಣನವರ ಈ ವಚನದ ಬಾವಾರ‍್ತವಾಗಿದೆ.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: