ಕಿರು ಬರಹ: ಪಟಾಕಿಗಳ ಅವಾಂತರ – ಬಾಗ 1

– .

ಪಟಾಕಿಗಳ ಆವಾಂತರದ ವಿನೋದದ ಮುಕ
————————————————————

ಸಾಮಾನ್ಯವಾಗಿ ಬಡಾಯಿ ಕೊಚ್ಚುವವರಿಗೆ ಒಂದು ಗಾದೆ ಮಾತಿದೆ “ಉತ್ತರನ ಪೌರುಶ ಒಲೆ ಮುಂದೆ” ಅಂತ. ಅದನ್ನೆ ಬಡಾಯಿ ಕೊಚ್ಚಿಕೊಂಡು ಕೈಯಲ್ಲಿ ಏನೂ ಮಾಡಲಾಗದವರನ್ನು ಕಂಡು ‘ಟುಸ್ ಪಟಾಕಿ’ ಎಂದು ಲೇವಡಿ ಮಾಡುವುದಿದೆ. ಕೆಲವು ಪಟಾಕಿಗಳು ನೋಡುವವರ ಗುಂಡಿಗೆ ಡವಗುಟ್ಟಿಸುವಂತಿರುತ್ತವೆ. ಆದರೆ ಅದರ ಬತ್ತಿಗೆ ಬೆಂಕಿ ಹಚ್ಚಿದಾಗ ಸುರ್ ಸುರ್ ಎಂದು ತಣ್ಣಗಾಗಿ ಬಿಡುತ್ತವೆ. ಅದು ಈಗ ಡಮ್ ಎನ್ನುತ್ತೆ, ಆಗ ಡಮ್ ಎನ್ನುತ್ತೆ ಎಂದು ನೋಡುವವರ ಎದೆ ಡವಗುಟ್ಟಿಸಿ ಕಿವಿ ಮುಚ್ಚಿಕೊಳ್ಳುವಂತೆ ಮಾಡುತ್ತವೆ. ಎಶ್ಟೋ ಸಮಯದ ನಂತರ ಅದು ಡಂ ಎನ್ನದೆ ಟುಸ್ಸಾಗಿ ಬಿಡುವುದೂ ಉಂಟು. “ಅಯ್ಯೋ ಇದರ ಮನೆ ಹಾಳಾಗ್ ಹೋಗ, ಎಂತ ಟುಸ್ ಪಟಾಕಿಯೋ ಮಾರಾಯ” ಎಂದು ಪಕ ಪಕ ನಗವುದೂ ಇದೆ.

ಸಣಕಲ ದೇಹದ ಅತಿ ಮಾತುಗಾರ ಬಂದಾಗ “ಸುರ್ ಸುರ್ ಕಡ್ಡಿ ಬಂದ ನೋಡು” ಎನ್ನುತ್ತಾರೆ. ಸು‍ರ್ ಸುರ್ ಕಡ್ಡಿಯೂ ಹಾಗೆ ತೆಳ್ಳಗೆ ಉದ್ದ ಇರುವುದರಿಂದ ಇದನ್ನು ಸಣಕಲರಿಗೆ ಹೋಲಿಸಿ ಹಾಸ್ಯ ಚಟಾಕಿ ಹಾರಿಸುತ್ತಾರೆ. ಇನ್ನು ದಪ್ಪಗೆ, ದುಂಡಗೆ ಮರದ ದಿಮ್ಮಿಯಂತಹ ದೇಹ ಹೊತ್ತು ತಿರುಗುವವರ ಕಂಡು “ಆಟಂ ಬಾಂಬ್ ನೋಡು, ಯಾವಾಗ ಡಂ ಅನ್ನುತ್ತೋ ಗೊತ್ತಿಲ್ಲ” ಎಂಬ ನಗೆ ಚಟಾಕಿ ಹಾರಿಸುವವರಿಗೇನು ಕಮ್ಮಿಯಿಲ್ಲ. ಬಹುಶಹ ಅವರ ಸ್ತೂಲಕಾಯ ನೋಡಿ ತೂಕ ಇಳಿಸಿಕೊಳ್ಳದೆ ಹೀಗೆ ಬಾಯಿ ಚಪಲಕ್ಕೆ ಹೆಚ್ಚು ತಿನ್ನುತ್ತಾ ಹೋಗಿ, ಬೇಗನೆ ಆರೋಗ್ಯ ಕೈಕೊಟ್ಟು ಎಲ್ಲಿ ‘ಡಂ’ (ಮೇಲಕ್ಕೆ ಟೀಕೆಟು) ಅನ್ನುತ್ತಾರೋ ಎನ್ನುವುದು ಹಾಸ್ಯವೋ, ಕಾಳಜಿಯೋ ಅತವಾ ಅತಿರೇಕವೋ ಒಂದೂ ತಿಳಿಯದು. ಅತ್ಯಂತ ಗಡಿಬಿಡಿಯ, ತುಂ‍ಬಾ ವೇಗದ, ಕುಳಿತಲ್ಲಿ ಕೂರಲಾರದ, ನಿಂತಲ್ಲಿ ನಿಲ್ಲಲಾರದವರನ್ನು ನೋಡಿ “ರಾಕೆಟ್ ಬಂತು ನೋಡೋ, ಸುಯ್ ಅಂತ ಆಕಾಶಕ್ಕೆಗರಿ ಆಮೇಲೆ ಡಂ ಅನ್ನುತ್ತೆ ಎನ್ನುವುದು ವಕ್ರೋಕ್ತಿಯ ಪರಿಬಾವವೆ ಆಗಿರಬಹುದು. ಡಾ. ರಾಜಕುಮಾರ್ ಅಬಿನಯದ ‘ನಾನಿನ್ನ ಮರೆಯಲಾರೆ’ ಸಿನೆಮಾದ ಹಾಡಿನ ಸಾಲು

“ಚಿನಕುರಳಿ ಮಾತಿನಲ್ಲಿ
ಹೂ ಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ”

ಎಂಬುದು ಮಾತಿನಲ್ಲಿ ಚಟಪಟ ಅಂತ ಸಿಡಿಯುವವರು ಚಿನಕುರುಳಿಯಾದರೆ, ನೋಟದಲ್ಲಿ ಹೂ ಬಾಣವನೆ ಬಿಡುವವರು ಪ್ರೀತಿಯ ಮಳೆಗರೆಯುವವರಾಗಿದ್ದಾರೆ, ಕೋಪದಿ ಸಿಡುಕಿದರೆ ಆನೆ ಪಟಾಕಿಯಂತೆ ಡಮಾರ್ ಎನ್ನುವವರು ಎಂಬ ಪಟಾಕಿಯ ಉಪಮೆ ವ್ಯಕ್ತಿಯ ವ್ಯಕ್ತಿತ್ವದ ಸಂಕೇತವಾಗಿದೆ. ಒಟ್ಟಾರೆ ದೀಪಗಳ ಹಬ್ಬವನ್ನು ಪಟಾಕಿ ಸಿಡಿಸಿ ಸಡಗರ ಸಂಬ್ರಮದಲಿ ಆಚರಿಸುವಾಗ, ಎಚ್ಚರಿಕೆ ಅತ್ಯಗತ್ಯ ಎಂಬುದನ್ನು ಮರೆಯದಿರೋಣ. ಇನ್ನೊಬ್ಬರಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸೋಣ.

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *