ಕಿರು ಬರಹ: ಪಟಾಕಿಗಳ ಅವಾಂತರ – ಬಾಗ 2

– .

ಪಟಾಕಿಗಳ ಆವಾಂತರದ ಗಂಬೀರ ಮುಕ

ಪಟಾಕಿ ಸಿಡಿಸುವಾಗ ಹೊರ ಉಗುಳಲ್ಪಡುವ ಕಾರ‍್ಬನ್ ಡೈಆಕ್ಸೈಡಿನಿಂದ ವೀಪರಿತ ಪರಿಸರ ಮಾಲಿನ್ಯವಾಗುತ್ತದೆ ಎಂಬುದು ಮರೆಯಬಾರದು. ಇದರಿಂದ ಹೊರಡುವ ಹೊಗೆ ಅಸ್ತಮದಿಂದ ಬಳಲುವವರಿಗೆ ಬಲು ತ್ರಾಸದಾಯಕ. ಜೋರಾಗಿ ಸದ್ದು ಮಾಡುವ ಪಟಾಕಿಗಳಿಂದಾಗಿ ಶಬ್ದ ಮಾಲಿನ್ಯ ಉಂಟಾಗಿ ನಮ್ಮ ಪರಿಸರದ ಸುತ್ತಲಿನಲ್ಲಿ ವಾಸಿಸುವ ಪ್ರಾಣಿಪಕ್ಶಿಗಳು ಬೆದರುತ್ತವೆ. ಹ್ರುದಯದ ಕಾಯಿಲೆ, ರಕ್ತದ ಒತ್ತಡ ಮುಂತಾದ ಕಾಯಿಲೆಯಿಂದ ಬಳಲುವವರಿಗೆ ಪಟಾಕಿಯ ತೀವ್ರ ಸದ್ದಿನಿಂದ ಅನಾರೋಗ್ಯ ಉಲ್ಬಣಗೊಳ್ಳಬಹುದು. ಪಟಾಕಿ ಸಿಡಿಯುವಾಗ ಬಿಸಿ ಮದ್ದಿನ ಚೂರು ಕಣ್ಣುಗಳಿಗೆ ಬಡಿದು ಕಣ್ಣು ಕಳೆದುಕೊಳ್ಳಬಹುದು. ತೀವ್ರ ಪಟಾಕಿಯ ಸದ್ದಿನಿಂದ ಕಿವಿಯ ತಮಟೆ ಹರಿದು ಕಿವುಡರಾಗಬಹುದು. ಹಾಗಾಗಿ ಪಟಾಕಿ ಹಚ್ಚುವಾಗ ಎಚ್ಚರಿಕೆ ಮತ್ತು ಸುರಕ್ಶತೆ ಬಹಳ ಅಗತ್ಯ ಅಲ್ಲವೆ?

ಇನ್ನೂ ಪಟಾಕಿ ತಯಾರಾಗುವ ಗಟಕಗಳ ಕರ‍್ಮಕಾಂಡ ವಿವರಿಸಲು ಅಸಾದ್ಯ. ಪಟಾಕಿ ಉತ್ಪಾದಕ ಗಟಕಗಳಲ್ಲಿ ಸ್ಪೋಟಕ ಕಚ್ಚಾ ವಸ್ತುಗಳ ಅಸುರಕ್ಶಿತ ನಿರ‍್ವಹಣೆಯೇ ಬೆಂಕಿ ದುರಂತಗಳಿಗೆ ಕಾರಣವಾಗುತ್ತದೆ. ಪ್ರತೀ ವರ‍್ಶ ಪಟಾಕಿ ಉತ್ಪಾದನಾ ಗಟಕಗಳಲ್ಲಿ ನಡೆಯುವ ದುರಂತದಿಂದ ಕನಿಶ್ಟ 25 ಮಂದಿ ಕಾರ‍್ಮಿಕರು ಜೀವ ಕಳೆದು ಕೊಳ್ಳುತ್ತಾರೆ ಎಂದು ಪೆಟ್ರೋಲಿಯಂ ಮತ್ತು ಸ್ಪೋಟಕ ಸುರಕ್ಶಾ ಸಂಸ್ತೆಯ ಮೂಲಗಳು ಹೇಳುತ್ತವೆ. ಗೋರಿಗಳ ಮೇಲೆ ಮಹಲುಗಳು ನಿರ‍್ಮಿಸಿದಂತೆ? ಬಡಪಾಯಿ ಹೊಟ್ಟೆಪಾಡಿನ ಕಾರ‍್ಮಿಕರ ಶವಗಳ ಸೂತಕದ ಚಾಯೆಯ ಮೇಲೆ ನಮ್ಮ ಹಬ್ಬದ ಸಂಬ್ರಮವಡಗಿದೆ ಎಂಬುದು ಅಮಾನವೀಯ! ಹಾಗೆಂದ ಮಾತ್ರಕ್ಕೆ ತಲತಲಾಂತರದಿಂದ ದೀಪಾವಳಿ ಹಬ್ಬದ ಆಚರಣೆಯಲ್ಲಿ ಪಟಾಕಿ ಸಿಡಿಸುವ ಸಂಪ್ರಾದಾಯ ಬಿಟ್ಟು ಬಿಡಬೇಕೇ? ಇದೊಂದು ಜಿಜ್ನಾಸೆ ಎನಿಸಿದರೂ ನಾವು ದೀಪಾವಳಿ ಹಬ್ಬದಲ್ಲಿ ಸುಡುವ ಸುಡು ಮದ್ದಿನ ಸುರಕ್ಶತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿರುವುದು ಅಶ್ಟೆ ಸತ್ಯ. ಸಾದ್ಯವಾದಶ್ಟು ಬಯಲು ಪ್ರದೇಶದಲ್ಲಿ ಪಟಾಕಿ ಸಿಡಿಸುವುದು ಉತ್ತಮ. ಆದಶ್ಟು ಕಡಿಮೆ ಸದ್ದಿನ ಪಟಾಕಿ ಸಿಡಿಸಿ ಶಬ್ದಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು. ಸಾವಿರಾರು ರೂಪಾಯಿಯ ಸುಡು ಮದ್ದು ಸಿಡಿಸಿ ಹಣ ಅಪವ್ಯಯ ಮಾಡುವ ಬದಲು ಕಡಿಮೆ ಪಟಾಕಿ ಸಿಡಿಸಿ ಅದೇ ಹಣವನ್ನು ಸಮಾಜದ ಅತೀ ದುರ‍್ಬಲರಿಗೆ ದಾನ ರೂಪದಲ್ಲಿ ನೀಡಿ ದೀಪಾವಳಿ ಹಬ್ಬವನ್ನು ಮಾನವೀಯ ನೆಲೆಗಟ್ಟಿನಲ್ಲಿ ಹೆಮ್ಮೆಯಿಂದ ಆಚರಿಸಬಹುದು.

ದೀಪದಿಂದ ದೀಪ ಹಚ್ಚಿ ಮನೆಮನದ ಅಂದಕಾರ ತೊಡೆದು, ಪ್ರತಿ ಮನೆ ಮನಗಳು ಬೆಳಗಲಿ. ಮನುಶ್ಯನ ಬಡತನ ನೀಗಿ, ಸಂಪತ್ತು, ಸಂತಸ ವ್ರುದ್ದಿಯಾಗಲಿ. ದೀಪಗಳ ಹಬ್ಬ ಎಲ್ಲರ ಮನದಲ್ಲಿ ಜ್ನಾನದ ದೀಪ ಹಚ್ಚಿ ದಾರಿದ್ರ‍್ಯ ತೊಡೆದು ಸರ‍್ವರ ಕಲ್ಯಾಣದೊಂದಿಗೆ ದೇಶ ಪ್ರಗತಿಯಡೆಗೆ ದಾಪುಗಾಲು ಹಾಕುವಂತಾಗಲಿ ಎಂದು ಈ ದೀಪಾವಳಿಯಲ್ಲಿ ಸಂಕಲ್ಪ ಮಾಡೋಣ. ‘ಜ್ನಾನವಂತರ ದೇಶ ಸಮ್ರುದ್ದ ದೇಶದ ಸಂಕೇತ!’ ಸರ‍್ವರಿಗೂ ದೀಪಾವಳಿಯ ಹಾರ‍್ದಿಕ ಶುಬಾಶಯಗಳು.

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *