ಕವಿತೆ: ಮಾಸದಿರಲಿ ಸವಿನೆನಪುಗಳು
ಚುಮು ಚುಮು ಚಳಿಯ
ಕಚಗುಳಿಗೆ ನಡುಗಿದೆ ತನುವು
ಅಂತರಂಗದಿ ಬಾವಗಳು ಅವಿತು
ಮೌನವಾಗಿದೆ ಮನವು
ಮಂಜು ಕವಿದ ಮುಂಜಾವಿನಲಿ
ಇಳೆಯ ತಬ್ಬಿದೆ ರಾಶಿ ಇಬ್ಬನಿ
ಬಳುಕುವ ತೆನೆಪೈರಿಗೆ ಚೆಲ್ಲಿದೆ
ಮುತ್ತಿನಂತ ಹಿಮದ ಹನಿ
ನೇಸರನ ಹೊನ್ನ ಕಿರಣಗಳ ಸ್ಪರ‍್ಶಕೆ
ತುಸು ಬೆಚ್ಚಗಾಯಿತು ಬುವಿಯು
ಮುಸ್ಸಂಜೆಯ ಚಳಿಗಾಳಿಗೆ
ಮತ್ತೆ ಮಂಕಾಯಿತು ದರೆಯು
ಇರುಳಲಿ ಚಂದಿರನ ತಂಪಿನಡಿಯಲಿ
ಗಾಡ ನಿದ್ರೆಗೆ ಇಳಿದಿವೆ ನಯನಗಳು
ಕೊರೆವ ಚಳಿಯಲಿ ಕಂಬಳಿಯ ಕಾವಿನಲಿ
ಕಾಡಿವೆ ಕನವರಿಕೆ ದುಸ್ವಪ್ನಗಳು
ಚುಮು ಚುಮು ಚಳಿಯಲೂ
ಚಿಗುರಲಿ ಹೊಸ ಹೊಸ ಕನಸುಗಳು
ಮಳೆ ಚಳಿ ಬಿರುಬೇಸಿಗೆಯೇ ಬರಲಿ
ಮಾಸದಿರಲಿ ಸವಿನೆನಪುಗಳು
(ಚಿತ್ರ ಸೆಲೆ: pxhere.com)
ಇತ್ತೀಚಿನ ಅನಿಸಿಕೆಗಳು