ಕಿರುಗತೆ: ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?
ಶಿವಸಾಗರ ಜೋಡೆತ್ತಿನ ಗಾಡಿ ಹೂಡಿ ಹೊಲಕ್ಕೆ ಚೆರಗ ಚೆಲ್ಲಲು ಹೊರಟಾಗ ಮನೆಯ ಹೆಂಗಳೆಯರು ಸೀರೆಯುಟ್ಟು, ತಲೆ ತುಂಬ ಮಲ್ಲಿಗೆ ಮುಡಿದು, ಕೈತುಂಬ ಗಾಜಿನ ಬಳೆ ತೊಟ್ಟು, ಕಾಲಂದುಗೆಯ ಗಲ್ ಗಲ್ ನಾದದೊಂದಿಗೆ ದೊಡ್ಡ ಮಲ್ಲಾರದಲ್ಲಿ ಸಜ್ಜೆರೊಟ್ಟಿ, ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಶೇಂಗಾ ಹಿಂಡಿ, ಗುರೆಳ್ಳು ಚಟ್ನಿ ಪುಡಿ, ಅಗಸಿ ಚಟ್ನಿ, ಉಪ್ಪಿನಕಾಯಿ, ಉದುರು ಬೇಳೆ ಪಲ್ಯ, ಕಾರದ ಬೇಳೆ ಸಾರು, ಅನ್ನ, ಚಿತ್ರಾನ್ನ, ಮೊಸರನ್ನ, ಕರಿದ ಮಜ್ಜಿಗೆ ಮೆಣಸಿನ ಕಾಯಿ, ಸಂಡಿಗೆ ಹಪ್ಪಳ, ಶೇಂಗಾ ಹೋಳಿಗೆ, ಗೋದಿ ಹುಗ್ಗಿ, ಗಟ್ಟಿ ಮೊಸರು, ಗಮ ಗಮದ ದೇಸಿ ತುಪ್ಪ ಎಲ್ಲವೂ ತುಂಬಿಕೊಂಡು ಹೊತ್ತು ನಡೆದರು ಹೊಲದ ಕಡೆಗೆ ಎಳ್ಳು ಅಮವಾಸ್ಯೆಯಂದು ಬೂತಾಯಿಗೆ ಪೂಜೆ ನೆರವೇರಿಸಲು. ಆ ಸೀರೆಯುಟ್ಟ ಹೆಂಗೆಳೆಯರ ಮದ್ಯೆ ಬಿಗಿ ಜಿನ್ಸ್ ಪ್ಯಾಂಟ್, ಸ್ಲಿಮ್ ಟಾಪ್ ತೊಟ್ಟ ಮಲ್ಟಿ ನ್ಯಾಶನಲ್ ಕಂಪೆನಿಯ ಉದ್ಯೋಗಿ ಹದಿಹರೆಯದ ಪೋರಿ ನಿಶ್ಚಿತ ಕಾಲಿಗೆ ತೊಟ್ಟ ಹೈ ಹೀಲ್ಡ್ ಚಪ್ಪಲಿಯ ನಡಿಗೆ ಹೊಲದಲ್ಲಿ ಕೈ ಕೊಡುತ್ತ ಕಾಲು ಹೊರಳುವುದನು ಕಂಡು ಸೋದರ ಮಾವ ಶಿವಸಾಗರ ನಸು ನಕ್ಕು “ನಿನಗೆ ನಡೆಯಲಾಗುವುದಿಲ್ಲ ಬಂಡಿಯೇರು” ಎಂದ ಸೊಸೆಗೆ. ಬಂಡಿ ಏರುವುದಾದರೂ ಸಲಿಸೇ? ಊ…ಹ್ನುಂ….! ಬಂಡಿ ಏರುವ ಆಟದಲಿ ಸೋತ ನಿಶ್ಚಿತಳನ್ನು ಅನಾಮತ್ತಾಗಿ ದಶ್ಟ ಬಾಹುಬಲದ ಶಿವಸಾಗರ ಹೂವಿನಂತೆ ಎತ್ತಿ ಬಂಡಿಯಲ್ಲಿ ಕೂರಿಸಿದಾಗ ನಿಶ್ಚಿತಳಿಗೆ ಮೈಯಲ್ಲಿ ಆದ ಪುಳಕ ಹಿಂದೆಂದೂ ಆಗಿರಲಿಲ್ಲ. ಆತನ ವಿಶಾಲ ಹರವಿನ ಎದೆಯು ಮೈಗೆ ಸೋಕಿ ಆದ ರೋಮಾಂಚನ ತನ್ನ ಮನದ ಆಲೋಚನಾ ಲಹರಿಗೆ ಹೊಸ ಬಾಶ್ಯ ಬರೆದಂತೆ.. ತನ್ನ ಪ್ರೀತಿಪ್ರೇಮದ ಹಸಿಬಿಸಿ ಚಿಂತನೆಗೆ ಹೊಸ ದಾರಿ ತೆರೆದುಕೊಳ್ಳುವಂತಿತ್ತು…!
ಶಿವಸಾಗರ ಹೊಲಮನೆ, ಎತ್ತು, ಹಸುಕರು, ಕರಾವು, ಕೊಟ್ಟಿಗೆ, ಹಟ್ಟಿ, ಗಂಜಲ ಮೇವು ಎಂಬ ಕಡು ಕೆಲಸಕೆ ಕಾಯ ಬಗ್ಗಿಸಿದ್ದ ಮಹಾನ್ ಕ್ರುಶಿಕ…! ಅಪ್ಪಟ ಹಳ್ಳಿಗಾಡಿನ ಕಟ್ಟುಮಸ್ತಿನ ಯುವ ಆರಂಬಗಾರ… ಈ ಸೋಜಿಗದ ಡಿಜಿಟಲ್ ಯುಗದ ಅಪಾವಾದವೆಂಬಂತೆ ತೋರುತಿದ್ದ. “ಶಿವು ಅದೇನು….? ಶಿವು ಇದೇನು…? ಶಿವು ಕಬ್ಬು ಸಿಹಿಯಾಗಿರಲು ಅದೊರಳಗೆ ಅಶ್ಟು ಸವಿ ತುಂಬಿದವರು ಯಾರು…?” ಎಂಬೆಲ್ಲ ನಿಶಿಯ ಮುಗ್ದ ಪ್ರಶ್ನೆಗೆ ಶಿವುನದು ಒಂದೇ ಉತ್ತರ “ನಿಶಿ ಪ್ರಕ್ರುತಿ ಮಾತೆಯನ್ನು ಒಳಗಣ್ಣಿನಿಂದ ಸೂಕ್ಶ್ಮವಾಗಿ ಗಮನಿಸು ಆಗಾ ಬೂತಾಯಿ ನಿನಗೆ ಸ್ವಲ್ಪ ಸ್ವಲ್ಪವೇ ಅರ‍್ತವಾಗುತ್ತ ಹೋಗುತ್ತಾಳೆ. ಬೂಮಿ ತಾಯಿ ಜಗದ ವಿಸ್ಮಯದಲಿ ಒಬ್ಬಳು, ಆಕೆ ಮಹಾ ತಾಯಿ, ತನ್ನೊಡಲಲ್ಲಿ ಕೊಟ್ಯಾನುಕೋಟಿ ಜೀವಿಗಳನು ಇಟ್ಟುಕೊಂಡು ಯಾವ ಬೇದಬಾವವಿಲ್ಲದೆ ಸಮನಾಗಿ ಪೊರೆಯುತಿದ್ದಾಳೆ…! ಆಕೆ ನಮ್ಮೆಲ್ಲ ಆದುನಿಕ ತಂತ್ರಜ್ನಾನದ, ನೂತನ ಆವಿಶ್ಕಾರದ ಹೊಸ ಹೊಸ ದಾರಿಗಳಿಗೆ ದಾರಿ ದೀಪವಾಗಿದ್ದಾಳೆ, ಆಕೆಯೇ ಎಲ್ಲದ್ದಕ್ಕೂ ಮೂಲ ಶಕ್ತಿಯಾಗಿದ್ದಾಳೆ. ಅರೆಕ್ಶಣ ಬೂತಾಯಿ ಅನ್ನ ನೀಡುವುದನು ನಿಲ್ಲಿಸಿದರೆ ನಮ್ಮ ಆದುನಿಕ ತಂತ್ರಜ್ನಾನವೆಲ್ಲ ಅಯೋಮಯವಾಗುತ್ತದೆ. ಆಕೆ ಸಕಲ ಪ್ರಾಣಿಗಳ ಜೀವ ಸಂಜೀವಿನಿ, ಕರುಣೆಯಿಂದ ಪೊರೆವ ಮಹಾ ಮಾತೆ” ಎಂಬ ಮಾತುಗಳು ನಿಶಿಯ ಕಿವಿಯಲ್ಲಿ ಜೋಗುಳದಂತೆ ಪ್ರತಿದ್ವನಿಸತೊಡಗಿದವು.
ಬೆಂಗಳೂರು, ಅಲ್ಲಿನ ಬ್ರುಹತ್ ಕಟ್ಟಡಗಳು, ಸದಾ ವಾಹನಗಳಿಂದ, ಜನರಿಂದ ಗಿಜುಗುಡುವ ದಾರಿಗಳು, ತನ್ನ ವರ‍್ಕಿಂಗ್ ಕ್ಯಾಂಪಾಸ್, ಅದರೊಳಗೆ ಬಣ್ಣಬಣ್ಣದ ಬಟ್ಟೆತೊಟ್ಟು ಒಡಾಡುವ ಟೆಕ್ಕಿಗಳು, ಕಂಪನಿಯ ಕ್ಯಾಂಟೀನ್, ಸಹೊದ್ಯೋಗಿಗಳು ಕೂಡಿ ಕುಡಿಯುವ ಕಾಪಿ, ಅವರೊಡನೆಯ ಮಾತು, ನಗು ಎಲ್ಲವೂ ಈ ಮಾವನ ಹೊಲದಲ್ಲಿ ಕ್ರುತಕವೆನಿಸಿ ತನ್ನನ್ನೇ ನೋಡಿ ಗಹಗಹಿಸಿ ನಗುವಂತೆ ತೋರಿತು. ಹೆಂಗೆಳೆಯರೆಲ್ಲರೂ ಬೂತಾಯಿಗೆ ವಂದಿಸಿ ಸುತ್ತಲು ಕುಳಿತು ಮಾಡಿದ ಅಡುಗೆ ಪರಸ್ಪರ ಬಡಿಸಿ ಮಾತಿನ ಹೂರಣ, ನಗೆಯ ಸವಿಯೊಂದಿಗೆ ಮೆಲ್ಲುವ ಬೋಜನ ಪಂಚತಾರ ಹೋಟೆಲನ್ನೂ ಮೀರಿಸುವಂತಿತ್ತು. ಆಗಾಗ ಮಾವ “ಅಲ್ಲಿ ನೋಡು… ನಿಶಿಯ ಎಡೆಯಲ್ಲಿ ಗಟ್ಟಿ ಮೊಸರು ಕಾಲಿಯಾಯ್ತು, ಸುರಿರಿ ನಾವೇನು ಮೊಸರನ್ನು ದುಡ್ಡುಕೊಟ್ಟು ತರಬೇಕಿಲ್ಲ” ಎಂಬ ಮಾತು ಪ್ರಕ್ರುತಿ ಮಾತೆ ನಮಗೆ ದಾರಳವಾಗಿದ್ದಾಳೆ ಎಂಬುದು ಸೂಚಿಸುತಿತ್ತು. ನಿಶಿ ಪ್ರತ್ಯುತ್ತರವಾಗಿ “ಸುಮ್ಮನಿರು ಮಾವ ನಂದೇನು ಹೊಟ್ಟೆನೋ ಕನ್ನಂಬಾಡಿ ಕಟ್ಟೇನೋ” ಎಂದರೆ “ಏ ಹುಚ್ಚಿ ಮೊಸರು ತಿಂದ್ರೆ ಹೊಟ್ಟೆ ತಂಪಾಗಿ ಸೊಂಪಾಗಿ ಇರುತ್ತೆ, ಯಾವತ್ತೂ ನೆತ್ತಿ, ಹೊಟ್ಟೆ, ಪಾದ ತಂಪಾಗಿರಿಸಿಕೊಂಡರೆ ಆರೋಗ್ಯ, ಆಯಸ್ಸು, ಹೆಚ್ಚು. ಇದು ನಿಮ್ಮ ಬಿಸಿ ಬಿಸಿ ಬೆಂಗಳೂರು ಹೇಳಲ್ಲ ತಿಳಿ” ಎಂದು ನಗುನಗುತ್ತ ಮಾತಿನ ಚಾಟಿ ಬೀಸಿದ.
ಕಂಪೆನಗೆ ವರಾಂತ್ಯದ ರಜೆ ಹಾಕಿ ಮಾವನ ಹಳ್ಳಿಗೆ ಬಂದವಳು, ಸದಾ ಹಸನ್ಮುಕಿ, ಚಿಗುರು ಮೀಸೆಯ ಚುರುಕು ವ್ಯಕ್ತಿಯ ಶಿವಸಾಗರನನ್ನು ಕಂಡು ಮೂಕವಿಸ್ಮಿತಳಾಗಿದ್ದಳು. ಅದೇನೋ ಗೊತ್ತಿಲ್ಲ ಅವಳಿಗೆ ಮಾವ ಪ್ರಬಲ ಆಕರ‍್ಶಣೆಯಾಗತೊಡಗಿದ!
ಬೆಳಿಗ್ಗೆ ಐದು ಗಂಟೆಗೆ ಎದ್ದು ಶಿವು ಸೈಕಲ್ ಏರಿ ಹೊಲಕ್ಕೆ ನೀರು ಹಾಯಿಸಲು ಹೊರಟರೆ, ನಿಶಿ ಆಗಲೆ ಎದ್ದು ಅವನನ್ನೆ ಹಿಂಬಾಲಿಸುತ್ತ ಸೈಕಲನ್ನು ಹಿಂದಿನಿಂದ ಎಳೆದು ಹಿಡಿದು “ಮಾವ ನಾನು ಹೊಲಕ್ಕೆ ಬರ‍್ತೀನಿ” ಎಂದಾಗ “ಏ ನಿಶಿ ಈ ಚಳಿಯಲ್ಲಿ ಹೊಲಕ್ಕೆ ಬಂದು ಏನ್ಮಾಡ್ತೀಯ…? ಹೊದ್ದು ಮಲ್ಕೊ ಹೋಗು” ಎಂದರೆ “ಏ ಮಾವ ಮಲಗೋದು ಇದ್ದದ್ದೆ… ಬೆಂಗಳೂರಿಗೆ ಹೋದ್ಮೇಲೆ ಈ ಹೊಲ, ಮನೆ, ಈ ದನಕರು, ಈ ಮರಗಿಡ, ಈ ಗಟ್ಟಿ ಮೊಸರು, ಈ ನಿನ್ನ ವಿಶಾಲ ಎದೆ, ಈ ನಿನ್ನ ಬಲಿಶ್ಟ ಬಾಹು, ಈ ನಿನ್ನ ಕಪಟವಿಲ್ಲದ ಮದುರ ಮಾತು ಸಿ..ಗು..ತ್ತ..?” ಎಂದು ನಾಲಿಗೆ ಕಚ್ಚಿದಳು. “ಏಯ್…ಏಯ್… ನಿಶಿ ಮಾತು ಯಾಕೋ ದಾರಿ ಬಿಟ್ಟು ಹಳ್ಳಕೊಳ್ಳ ತಿಟ್ಟುತಿರುವು, ಏರು ಇಳಿಜಾರಿನತ್ತ ನುಗ್ತಾ ಇದೆ…! ಸರಿ ನಡಿ ನೀನಾದರೂ ನಮ್ಮ ಮನೆಗೆ ಎರಡು ದಿನದ ಅತಿತಿ” ಎಂದು ನಿಶಿಯನ್ನು ಮುಂದಿನ ಸೈಕಲ್ ಬಾರ್ ಮೇಲೆ ಕೂರಿಸಿಕೊಂಡು “ತಗೋ ಈ ಟಾರ್‍ಚ್, ಕತ್ತಲಲ್ಲಿ ದಾರಿ ಸರಿಯಾಗಿ ಕಾಣೋದಿಲ್ಲ, ಮುಂದೆ ಟಾರ್‍ಚ್ ಬೆಳಕು ಬಿಡು” ಎಂದು ಸೈಕಲ್ ಏರಿ ಅನಾಯಾಸವಾಗಿ ಸೈಕಲ್ ಪೆಡಲ್ ತುಳಿಯುತ್ತ ಮುಂದೆ ಸಾಗಿದ. ಸೈಕಲ್ ಮುಂದೆ ಮುಂದೆ ಸಾಗಿದಂತೆ ಮಾವನ ಏದುಸಿರು ನಿಶಿಯ ಕೊರಳಿಗೆ ತಾಕಿ ಕಚಗುಳಿಯಿಡತೊಡಗಿತು. ಆತನ ವಿಶಾಲ ಎದೆ ಬೆನ್ನಿಗೆ ಸೋಕುತ್ತ ಮೈ ಪುಳಕಗೊಳ್ಳುತಿತ್ತು, ನಿಶಿಯ ಎದೆಯಲ್ಲಿ ಹೊಸತೊಂದು ರಾಗ ಹುಟ್ಟತೊಡಗಿತು.
ಇನ್ನೂ ರಜೆ ಮುಗಿಯಲು ಒಂದು ವಾರವಿದೆ. ನಿಶಿ ಮಾತ್ರ ಇಲ್ಲಿ ಕ್ಶಣಕ್ಶಣವೂ ಜೀವಿಸತೊಡಗಿದಳು. ಮಾವನೊಡನೆ ಹರಟೆ, ಆತನೊಡನೆ ಹೊಲದಲ್ಲಿನ ಓಡಾಟ, ತಾನೂ ಅವನೊಡನೆ ಸೇರಿ ಹೊಲಕ್ಕೆ ನೀರು ಹಾಯಿಸುವ ಕೆಲಸ, ಮಾವ ಮುರಿದು ಕೊಟ್ಟ ಕಬ್ಬನ್ನು ಜಗಿದು ರಸ ಹೀರುವ ಸಂಬ್ರಮ, ದನಕರುಗಳಿಗೆ ಮೇವು ಹಾಕಿ ಮೈದಡವುವ, ಅವುಗಳಿಗೆ ಮೈತೊಳೆಸುವ, ಹಾಲು ಕರೆಯುವ ಹೊಸ ಕಾಯಕ, ಆಗಾಗ್ಗೆ ಮಾವನ ಚೇಡಿಸುವ ಮಾತು, ಆತನ ಬಿಸಿಯುಸಿರು, ಆತನ ವಿಶಾಲ ಎದೆಯ ಸ್ಪರ‍್ಶ, ಆತನ ಬಲಿಶ್ಟ ಬಾಹು, ಆತನ ಕಪಟವಿಲ್ಲದ ಮಾತು, ಆತ ತನ್ನ ಮೇಲೆ ತೋರುವ ಅಕ್ಕರೆ, ಕಾಳಜಿ ಆಕೆಯ ಪುಟ್ಟ ಹ್ರುದಯದಲಿ ಆಕೆಗೆ ಗೊತ್ತಿಲ್ಲದಂತೆ ಮಾವನಿಗೆ ಜಾಗ ನೀಡುತ್ತ ನಡೆದಳು.
ಈಜು ಬಾರದ ನಿಶಿಗೆ ಮಾವ ತನ್ನ ಹಳ್ಳಿಯ ಹೊಳೆಯಲ್ಲಿ ಈಜು ಕಲಿಸುವಾಗ ಪರಸ್ಪರ ಮೈಗೆ ಮೈ ಸೋಕಿ ಅನುರಾಗದ ಹೊಸ ರಾಗ ಹುಟ್ಟಿಕೊಳ್ಳತೊಡಗಿತು. ಬಹುಶಹ ಇಬ್ಬರೂ ಪ್ರೀತಿಗೊಂದು ಹೊಸ ವ್ಯಾಕ್ಯ ಬರೆಯಲು ಹೊರಟಂತೆ ಕಾಣುತಿತ್ತು?
ನಿಶಿ ಮತ್ತು ಶಿವು ಇಬ್ಬರ ಮನಸ್ಸಿನಲ್ಲಿ ಅನುರಾಗ ಮೊಳೆತು ಪರಸ್ಪರ ಹತ್ತಿರವಾಗುತಿದ್ದಂತೆ, ಮಾವನ ಮನಸ್ಸು ಜಾಗ್ರುತವಾಗತೊಡಗಿತು. “ಅರೇ… ನಾನೇನು ಮಾಡುತಿದ್ದೇನೆ, ಅವಳೆಲ್ಲಿ, ನಾನೆಲ್ಲಿ? ನಮ್ಮಿಬ್ಬರಲ್ಲಿ ಆಕಾಶ ಬೂಮಿಯಶ್ಟು ಅಂತರವಿದೆ. ಅವಳು ಹೆಚ್ಚು ಓದಿ ನಗರದಲ್ಲಿ ಉದ್ಯೋಗ ಮಾಡುವವಳು ನಾನು ಈ ಕ್ರುಶಿಯನ್ನು ನಂಬಿಕೊಂಡವನು. ಈ ಪ್ರೀತಿ ಪ್ರೇಮದ ಹುಚ್ಚಾಟ ಹರೆಯದ ಹುಮ್ಮಸ್ಸಿನ ಕೆಲವು ದಿನಗಳದ್ದು ಮಾತ್ರ. ವಾಸ್ತವ ಬದುಕಿನಲ್ಲಿ ಇವೆಲ್ಲ ಸಾದ್ಯವಿಲ್ಲ! ಕಲ್ಪನೆಯ ಜೀವನ ಕಲ್ಪನೆಗಶ್ಟೆ ಸೀಮಿತ, ಇಲ್ಲ... ಈ ಹುಚ್ಚಾಟ ಬೆಳೆಯಗೊಡಬಾರದು. ನಾಳೆ ನನ್ನನ್ನೆ ಎಲ್ಲರೂ ಬೈದಾರೂ…!” ಎಂದು ನಿಶಿಯೊಡನೆ ಪ್ರಜ್ನಾಪೂರ‍್ವಕವಾಗಿ ಅಂತರ ಕಾಯ್ದುಕೊಳ್ಳಲು ಪ್ರಾರಂಬಿಸಿದ. ನಿಶಿಗೆ ಒಂದೆರಡು ದಿನ ಅರ‍್ತವಾಗದಿದ್ದರೂ… ನನ್ನೊಡನೆ ಮಾವ ಅಂತರ ಕಾಯ್ದುಕೊಳ್ಳುತಿದ್ದಾನೆ ಎಂಬುದು ಅರ‍್ತವಾಗತೊಡಗಿತು.
ಅಂದು ಮಟಮಟ ಮದ್ಯಾಹ್ನ, ಬಿಸಿಲಿನ ಬೇಗೆ, ನಿಶಿಗೆ ಬಾಯಾರಿದೆ ಮಾವ ತೋಟದ ಎಳನೀರು ಕೊಚ್ಚಿಕೊಡುವಾಗ ಆತನ ಮುಂಗೈ ಹಿಡಿದು “ಹೇಳು ಮಾವ ನಾನು ನಿನಗೆ, ಈ ನಿನ್ನ ಹಳ್ಳಿಯ ಜೀವನಕ್ಕೆ ಮನಸೋತಿದ್ದೇನೆ. ನಾನು ಗಟ್ಟಿಯಾಗಿ ನಿರ‍್ದರಿಸಿದ್ದೇನೆ… ನೀನು ನನ್ನ ಬಾಳೆಲ್ಲ ಕೈ ಹಿಡಿದು ನಡೆಸುತ್ತೀಯಾ?” ಎಂದಾಗ ಗಟ್ಟಿಗುಂಡಿಗೆಯ ಮಾವ ಕೊಂಚ ಅದುರಿದ. “ನಿಶಿ… ಇದು ನಿನ್ನ ಹುಚ್ಚಾಟ, ಪ್ರೀತಿ, ಪ್ರೇಮದ ತಾತ್ಕಾಲಿಕ ಬಾವನೆಯ ಪ್ರವಾಹದಲ್ಲಿ ವಾಸ್ತವ ಬದುಕನ್ನು ಮರೆಯಬೇಡ. ನನ್ನ ನಿನ್ನ ನಡುವೆ ಬಹಳ ಅಂತರವಿದೆ. ನಮ್ಮಿಬ್ಬರ ಸಂಬಂದ ಯಾರೂ ಒಪ್ಪುವುದಿಲ್ಲ. ಮತ್ತು ಕನಸಿನ ಪೊರೆ ಒಡೆದ ಮೇಲೆ ಪಶ್ಚಾತ್ತಾಪ ಪಡುತ್ತಿ” ಎಂದರೆ… ನಿಶಿ ಪ್ರತ್ಯುತ್ತರವಾಗಿ ಮಾವ ನಾನೇನು ಅರಿಯದ ಎಳೆ ಹುಡುಗಿಯೇ..? ಈ ಹಳ್ಳಿಗೆ ಬಂದ ಮೇಲೆ ನಿಜ ಜೀವನದ ಸಾಕ್ಶತ್ಕಾರವಾಗಿದೆ. ಬಣ್ಣದ ಲೇಪವಿಲ್ಲದ ಸರಳ ಹಳ್ಳಿಯ ಬದುಕು ಸತ್ಯವೆನಿಸಿದೆ. ಅತೀ ನಿರಿಕ್ಶೆಯಿಲ್ಲದ ಕಪಟರಹಿತ ಮಾವನ ವಿಶಾಲ ಮನಸ್ಸು ನನಗೆ ಜೀವನ ಪೂರ‍್ತಿ ಬೇಕೆಂದು ಮನ ಹೇಳುತಿದೆ. ನಾನು ಯಾರ ವಿರೋದಕ್ಕೂ ಅಂಜುವವಳಲ್ಲ, ನನ್ನ ನಿರ‍್ದಾರ ಅಚಲವಾಗಿದೆ ಮತ್ತು ನಾನು ನಿರ‍್ದರಿಸಿಯಾಗಿದೆ. ಓರ‍್ವ ಹೆಣ್ಣು ಸುಮ್ಮನೆ ಯಾರಿಗೂ ಮನಸ್ಸು ಕೊಡುವುದಿಲ್ಲ, ನಾನು ನಿನಗೆ ಮನಸ್ಸು ಕೊಟ್ಟಿದ್ದೇನೆ ಮತ್ತು ಗಟ್ಟಿಯಾಗಿ ನಿರ‍್ದರಿಸಿದ್ದೇನೆ ನನ್ನ ಮುಂದಿನ ಇಡೀ ಜೀವನ ನಿನ್ನೊಂದಿಗೆ ಎಂದು. ನಾನು ಚಲಗಾತಿ ನಾನು ಬಯಸಿದ್ದನ್ನು ಪಡೆದೇ ಪಡೆಯುತ್ತೇನೆ ಹಾಗೆ ನಿನ್ನನ್ನು ಕೂಡಾ…! ಎಂದು ಹಿಡಿದ ಮುಂಗೈಯ ಹಿಡಿತ ಮತ್ತಶ್ಟು ಬಿಗಿಗೊಳಿಸಿದಳು. ಈಗ ಮೂಕವಿಸ್ಮಿತನಾಗುವ ಗಳಿಗೆ ಮಾವನದ್ದು. ಗಟ್ಟಿಗಿತ್ತಿ ನಿಶಿ ಬಯಸಿದ್ದನ್ನು ಪಡೆದೆ ಬಿಟ್ಟಳು ಇಲ್ಲಿ ಪ್ರೀತಿ ಗೆದ್ದಿತ್ತು. ಇವರಿಬ್ಬರ ದಾಂಪತ್ಯ ಜೀವನ ಇನ್ನೊಬ್ಬರಿಗೆ ಹೊಟ್ಟೆಕಿಚ್ಚು ತರಿಸುವಂತಿತ್ತು..! ಇವರಿಬ್ಬರ ದಾಂಪತ್ಯದ ಮದುರ ಕಲರವ ಹೊಲದ ತುಂಬೆಲ್ಲ ನಗೆಯ ಸದ್ದಿನಲಿ ಪರ‍್ಯಾವಸನಗೊಳ್ಳುತಿತ್ತು.
( ಚಿತ್ರಸೆಲೆ: microsoft.com )
ಇತ್ತೀಚಿನ ಅನಿಸಿಕೆಗಳು